೫-೫-೧೯೨೨ ರಂದು ಬಾಗಲೂರಿನಲ್ಲಿ ಜನಿಸಿದ ವೆಂಕಟಗಿರಿಯಪ್ಪನವರ ತಂದೆ ಸಿ. ಮುನಿಯಪ್ಪ ಹಾಗೂ ಸೋದರಮಾವ ನಂಜುಂಡಯ್ಯ ಇಬ್ಬರೂ ಗಾಯಕರು. ಸೋದರಮಾವನಿಂದಲೇ ಹಾಡುಗಾರಿಕೆಯಲ್ಲಿ ಶಿಕ್ಷಣ ಆರಂಭಿಸಿ ಮುಂದೆ ಪಿ. ಭುವನೇಶ್ವರಯ್ಯನವರ ಶಿಸ್ತಾದ ಮಾರ್ಗದರ್ಶನದಲ್ಲಿ ಪಿಟೀಲು ವಾದನವನ್ನು ಅಭ್ಯಾಸ ಮಾಡಿ, ಪರಿಶ್ರಮದಿಂದ ಉತ್ತಮ ವಾದಕರಾದರು.

ಗುರುಗಳೊಡನೆಯೂ, ತನಿಯಾಗಿಯೂ ಇವರು ನೀಡಿರುವ ಕಛೇರಿಗಳು ಅಸಂಖ್ಯಾತ. ಸುವಿಖ್ಯಾತ ಸಂಸ್ಥೆ-ಸಭೆಗಳಲ್ಲೆಡೆಯೂ, ನಾನಾ ಉತ್ಸವಗಳಲ್ಲಿಯೂ ಇವರ ವಾದನಗಳು ನಡೆದಿವೆ. ಪಕ್ಕವಾದ್ಯಗಾರರಾಗಿಯೂ, ತನಿ ವಾದಕರಾಗಿಯೂ ಇವರ ಪ್ರತಿಭೆ ಪ್ರಶಂಸನೀಯ. ಗುರುಗಳೊಡನೆ ಮಲೇಷಿಯಾ, ಸಿಂಗಪುರ್ ಮುಂತಾದ ಹೊರ ದೇಶಗಳಲ್ಲಿ ಸಂಚರಿಸಿ ಕಛೇರಿ ಮಾಡಿರುತ್ತಾರೆ. ಆಕಾಶವಾಣಿಯ ಮೂಲಕವೂ ಇವರ ವಾದನ ಪ್ರಸಾರವಾಗಿದೆ.

ಬೆಂಗಳೂರಿನ ರಮ್ಯ ಲಲಿತಾ ಕಲಾ ವಿದ್ಯಾಲಯದಲ್ಲಿ ಪಿಟೀಲು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.

‘ವಾದನ ಕಲಾ ನಿಪುಣ’, ‘ನಾದ ಚಿಂತಾಮಣಿ’, ‘ಪಿಟೀಲು ವಾದನ ವಿಶಾರದ’ ಇತ್ಯಾದಿ ಗೌರವಗಳಿಗೆ ಪಾತ್ರರಾದ ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಲಭಿಸಿದೆ. ವಯೋವೃದ್ಧರಾಗಿರುವ ಇವರು ನಿರ್ಲಿಪ್ತ ವಿಶ್ರಾಂತ ಜೀವನವನ್ನು ಅನುಸರಿಸುತ್ತಿದ್ದಾರೆ.