ಜಾನಪದ ಕಲಾವಿದರ ಕುಟುಂಬದಲ್ಲಿ ಜನಿಸಿದ ಶ್ರೀ ಎಂ. ವೆಂಕಟೇಶಕುಮಾರ್, ಶಾಸ್ತ್ರೀಯ ಸಂಗೀತದ ಕಡೆ ತಮ್ಮ ಒಲವನ್ನು ಬೆಳೆಸಿಕೊಂಡು ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದಲ್ಲಿ ಗುರುಕುಲ ಪದ್ಧತಿಯಲ್ಲಿ ಗ್ವಾಲಿಯರ್ ಘರಾಣಾದಲ್ಲಿ ಪ್ರಬುದ್ಧತೆಯನ್ನು ಸಾಧಿಸಿಕೊಂಡರು. ನಂತರ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದ ಸ್ನಾತಕೋತ್ತರ ಪದವಿಯನ್ನು ತಮ್ಮದಾಗಿಸಿಕೊಂಡರು. ತಮ್ಮಭಾವುಕ ಗಾಯನಕ್ಕೆ ಹೆಸರಾದ ವೆಂಕಟೇಶಕುಮಾರ್ ಅವರು ಶರಣರ ವಚನಗಳನ್ನು ಮತ್ತು ಹರಿದಾಸರ ಕೀರ್ತನೆಗಳನ್ನು ಹಾಡುತ್ತಿದ್ದರೆ ಅಲ್ಲಿ ದೈವಸಾಕ್ಷಾತ್ಕಾರವಾಗುತ್ತದೆಂಬ ಅಭಿಪ್ರಾಯವನ್ನು ಹಲವು ರಸಿಕರು ವ್ಯಕ್ತಪಡಿಸುತ್ತಾರೆ.

ದೇಶದ ಉದ್ದಗಲಕ್ಕೂ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿರುವ ವೆಂಕಟೇಶಕುಮಾರ್ ಅವರನ್ನು ನಾಡಿನ ಬಹುತೇಕ ಎಲ್ಲ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳ ವ್ಯವಸ್ಥಾಪಕರು ಆಹ್ವಾನಿಸಿದ್ದಾರೆ. ಪ್ರಸಾರಭಾರತೀಯ ’ಎ’ ಶ್ರೇಣಿ ಕಲಾವಿದರಾಗಿರುವ ವೆಂಕಟೇಶಕುಮಾರ್ ಅವರು ಆಕಾಶವಾಣಿ ಮತ್ತು ದೂರದರ್ಶನಗಳ ರಾಷ್ಟ್ರೀಯ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಅಮೆರಿಕಾದ ಪ್ಲೋರಿಡಾದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನ ಪಡೆದದ್ದು ಅವರ ಅಖಂಡ ಪ್ರತಿಭೆಗೆ ಸಾಕ್ಷಿ. ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತದ ಹಲವಾರು ಧ್ವನಿಸುರುಳಿ ಮತ್ತು ಸಿ.ಡಿಗಳನ್ನು ಶ್ರೀಯುತರು ಈಗಾಗಲೇ ಹೊರತಂದಿದ್ದಾರೆ. ಜೊತೆಗೆ ಹಿಂದೂಸ್ತಾನಿ ಸಂಗೀತ ಪರೀಕ್ಷೆಯ ಪಠ್ಯಪುಸ್ತಕ ರಚನೆಯಲ್ಲೂ ತಮ್ಮ ಅನುಭವವನ್ನು ಧಾರೆಯೆರೆದಿದ್ದಾರೆ.

’ಸ್ವರಶ್ರೀ’, ’ಸಂಗೀತ ಸುಧಾಕರ’, ’ಸಂಗೀತ ರತ್ನ’ ಮುಂತಾದ ಬಿರುದುಗಳೊಂದಿಗೆ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕರಿಸಲ್ಪಟ್ಟಿರುವ ಶ್ರೀ ಎಂ. ವೆಂಕಟೇಶಕುಮಾರ್ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತರು. ಶ್ರೀಯುತರಿಗೆ ಅವರ ಸಂಗೀತ ಸೇವೆಯನ್ನು ಗುರುತಿಸಿ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.