ಜನನ : ೨೦-೮-೧೯೩೮ ರಂದು ಮೈಸೂರಿನಲ್ಲಿ

ಮನೆತನ : ಸುಸಂಸ್ಕೃತ ಹಾಗೂ ಹರಿಕಥಾ ವಿದ್ವಾಂಸರ ಮನೆತನ. ತಂದೆ ಎಸ್. ರಂಗಾಚಾರ್ಯರು ಹರಿಕಥಾ ವಿದ್ವಾಂಸರಾಗಿದ್ದವರು. ತಂಗಿ ರುಕ್ಮಿಣಿ ಸಂಪತ್ತೈಂಗಾರ್ ಸಹ ಕೀರ್ತನ ಹಾಗೂ ಗಮಕ ವಿದುಷಿಯಾಗಿದ್ದವರು.

ಶಿಕ್ಷಣ : ಪ್ರಾರಂಭಿಕ ಶಿಕ್ಷಣ ತಂದೆಯವರಿಂದಲೇ ಅನಂತರ ಶ್ರೀನಿವಾಸರಂಗಾಚಾರ್ ಮತ್ತು ಗಮಕಿ ರಾಮಕೃಷ್ಣ ಶಾಸ್ತ್ರಿಗಳಲ್ಲಿ ಉನ್ನತ ಶಿಕ್ಷಣ ಮಾರ್ಗದರ್ಶನ. ಸಂಸ್ಕೃತ ಭಾಷಾ ಪರಿಚಯ.

ಕ್ಷೇತ್ರ ಸಾಧನೆ : ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಭಕ್ತ ಅಂಬರೀಷನ ಕಥೆಯ ಮೂಲಕ ಹರಿಕಥಾ ರಂಗ ಪ್ರವೇಶ ಪ್ರಥಮ ಕಾರ್ಯಕ್ರಮದಲ್ಲೇ ಅಪಾರ ಯಶಸ್ಸು. ಎಳೆ ವಯಸ್ಸಿನ ಈ ಕಿಶೋರಿಯ ಕಂಠ ಮಾಧುರ್ಯಕ್ಕೆ ಮನಸೋತ ಶ್ರೀರಂಗಪಟ್ಟಣದ ಶಶಿಕಲಾ ಸಂಘದವರು ಆಹ್ವಾನಿ ಕಥೆ ಮಾಡಿಸಿದಾಗ ಮೆಚ್ಚಿದ ಶ್ರೋತೃಗಳು ಚಿನ್ನದ ಪದಕ ನೀಡಿ ಬಾಲಿಕಿ ಸುಭದ್ರಾರನ್ನು ಉತ್ತೇಜಿಸಿದರು. ಅಲ್ಲಿಂದ ಮುಂದೆ ಸುಭದ್ರಾ ಯಶಸ್ಸಿನ ಸೋಪಾನವನ್ನು ಏರುತ್ತಲೇ ಹೋದರು. ಮುಂದೆ ಮಂಡ್ಯ, ಭದ್ರಾವತಿ, ಹರಿಹರ, ಉತ್ತರ ಕರ್ನಾಟಕದ ಪ್ರದೇಶಗಳು, ಮುಂಬಯಿ, ಪುಣೆ, ಉಡುಪಿ, ಹಂಪಿ, ಮುಳಬಾಗಿಲು ಮುಂತಾದೆಡೆ ಕಾರ್ಯಕ್ರಮ ನೀಡಿ ಕಳೆದ ೫೦ ವರ್ಷಗಳಿಂದಲೂ ಕೀರ್ತನ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬಯಿ ಆಕಾಶವಾಣಿ ಕೇಂದ್ರಗಳಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಪ್ರಶಸ್ತಿ – ಪುರಸ್ಕಾರಗಳು : ಗದುಗಿನ ಶ್ರೀ ಪ್ರಸನ್ನ ವೆಂಕಟೇಶ ದೇವಾಲಯದವರು ಬೆಳ್ಳಿ ಪದಕಗಳೊಂದಿಗೆ “ಹರಿಕಥಾ ಕೇಸರಿ” ಎಂಬ ಬಿರುದಿನೊಂದಿಗೆ ಗೌರವಿಸಿದ್ದಾರೆ. ಬೆಂಗಳೂರು ಶ್ರೀ ರಾಮಭಜನ ಸಭಾದಿಂದ ’ಭಾಗವತ ಶಿರೋಮಣಿ’, ಕರ್ನಾಟಕ ಕೀರ್ತನ ಕಲಾ ಪರಿಷತ್ತು ಸಹ ಇವರನ್ನು ಗೌರವಿಸಿ ಸನ್ಮಾನಿಸಿದೆ. ಸರ್ಕಾರದಿಂದ ಗೌರವ ಮಾಸಾಶನವೂ ದೊರೆಯುತ್ತಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೨-೦೩ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.