ಸಂಗೀತ ಮನೆತನದ ಒಂದರಲ್ಲಿ ಮೈಸೂರಿನಲ್ಲಿ ಜನಿಸಿದ ಸುಂದರಮ್ಮನವರಿಗೆ ಬಾಲ್ಯದಿಂದಲೂ ನೃತ್ಯದಲ್ಲಿ ಆಸಕ್ತಿ. ಅದಕ್ಕನುಸಾರವಾಗಿ ತಮ್ಮ ಏಳನೆಯವಯಸ್ಸಿನಿಂದಲೇ ” ನಾಟ್ಯ ಸರಸ್ವತಿ” ಜಟ್ಟಿ ತಾಯಮ್ಮನವರಿಂದ ನೃತ್ಯ ಶಿಕ್ಷಣ. ಜೊತೆಗೆ ವಿದ್ವಾಂಸರಾದ ಲಕ್ಷ್ಮೀದಾಸರಿಂದಲೂ, ಎಂ.ಎಲ್. ಶಿವರಾಮಯ್ಯನವರಿಂದಲೂ ಸಂಗೀತ ಪಾಠ.

ಸಂಪ್ರದಾಯಬದ್ಧವಾಗಿ ಪ್ರಪ್ರಥಮವಾಗಿ ಸುಂದರಮ್ಮನವರ ರಂಗ ಪ್ರವೇಶ ನಂಜನಗೂಡಿನಲ್ಲಿ ಅಲ್ಲಿ ನಡೆದ ಲಲಿತ ಕಲಾ ಮಹಾ ಸಮ್ಮೇಳನದಲ್ಲಿ ಈಕೆಗೆ ರಜತ ಪಕದವೂ, ಯೋಗ್ಯತಾ ನಿರ್ಣಯ ಪತ್ರವೂ ಲಭ್ಯ. ಆಗ ಆಕೆಗೆ ಹನ್ನೊಂದು ವರ್ಷ. ಅಂದಿನಿಂದ ಇವರಿಗೆ ಪ್ರಶಸ್ತಿಗಳ ಸುರಿಮಳೆಯೇ ಹರಿಯಿತು.

ಮೈಸೂರಿನಲ್ಲಿ ೧೯೪೮ರಲ್ಲಿ ನಡೆದ ಅಖಿಲ ಭಾರತ ವಿದ್ಯಾ ಸಮ್ಮೇಳನದಲ್ಲಿ ಸುಂದರಮ್ಮನವರಿಗೆ ಸುವರ್ಣ ಪದಕ ಹಾಗೂ ಯೋಗ್ಯತಾ ನಿರ್ಣಯ ಪತ್ರಗಳು ದೊರೆತವು. ಧರ್ಮಸ್ಥಳದಲ್ಲಿ ೧೯೫೧ರಲ್ಲಿ ಜರುಗಿನ ಮಹಾ ನಡಾವಳಿಯಲ್ಲಿ ಅವರಿಗೆ ಮನ್ನಣೆಯನ್ನೂ ಖಿಲ್ಲತ್‌ಗಳನ್ನು ನೀಡಿಕೆ. ಅದರ ಮಾರನೆಯ ವರುಷ ಮೈಸೂರು ಅರಸರಿಂದ ಮನ್ನಣೆ, ಆಸ್ಥಾನ ವಿದುಷಿ.

ತಾವೇ ಮೈಸೂರಿನಲ್ಲಿ ಸ್ಥಾಪಿಸಿದ “ಮಧುರ ಕಲಾ ಶಾಲೆ” ಯ ಮೂಲಕ ಸುಂದರಮ್ಮನವರು ಅನೇಕ ಶಿಷ್ಯೆಯರನ್ನು ತಯಾರು ಮಾಡಿದ್ದಾರೆ. ಅಲ್ಲಿನ ಸರಸ್ವತಿ ಶಿಶು ವಿದ್ಯಾಲಯದಲ್ಲಿಯೂ, ಕಸ್ತೂರಿಬಾ ಕನ್ಯಾ ವಿದ್ಯಾಲಯಗಳಲ್ಲಿಯೂ ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಇವರಿಗೆ ರಾಜ್ಯ ಸಂಗೀತ-ನಾಟಕ ಅಕೆಡೆಮಿ ತನ್ನ ೧೯೬೨-೬೩ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ