ಅಕ್ಕಮ್ಮನೆಂದೇ ಪರಿಚಿತರಾದ ಎಂ. ಸುಬ್ಬಮ್ಮನವರಿಗೆ ಸಂಗೀತ-ನೃತ್ಯ ರಕ್ತಗತವಾಗಿ ಬಂದ ವಿದ್ಯೆಗಳು. ತಮ್ಮ ೭೫ನೆ ವಯಸ್ಸಿನಲ್ಲಿ (೧೯೬೫) ಸುಬ್ಬಮ್ಮನವರು ಶಿಷ್ಯವೃಂದದ ನಡುವೆ ಕುಳಿತು ಪಾಠ ಮಾಡುತ್ತಿದ್ದುದನ್ನು ನೋಡುತ್ತಿದ್ದವರಿಗೆ ಕಲೆಗೆ ವಯಸ್ಸಿನ ಬಂಧನವಿಲ್ಲ ಎಂಬ ನಿತ್ಯ ಸತ್ಯದ ಅರಿವಾಗದಿರದು.

ಸುಬ್ಬಮ್ಮನವರ ಪೂರ್ವಜರು ತಲೆಮಾರುಗಳಿಂದ ಸಂಗೀತ-ನೃತ್ಯ ಕಲೆಗಳಲ್ಲಿಯೇ ಹುಟ್ಟಿ ಬೆಳೆದವರು. ಇವರ ವೀಣಾ ಗುರು ಭಕ್ಷಿ ಸುಬ್ಬಣ್ಣನವರು. ಅವರಲ್ಲಿ ಮೂವತ್ತು ವರುಷಗಳ ಕಾಲ ನಿರಂತವಾಗಿ ಅಭ್ಯಾಸ ಮಾಡಿ ವೀಣಾ ವಾದನ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಹಾಗೆಯೇ ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮನವರಲ್ಲಿ ನೃತ್ಯ ಕಲೆಯ ಅಭ್ಯಾಸವಾಗಿತ್ತು.

ಪರಂಪರೆ, ಪರಿಣತರಿಂದ ಶಿಕ್ಷಣ, ಸತತವಾದ ಅಭ್ಯಾಸಗಳ ತ್ರಿವೇಣಿ ಸಂಗಮದಿಂದ ಪರಿಪಕ್ವ ಕಲಾವಿದೆಯಾದ ಸುಬ್ಬಮ್ಮನವರು ನಲವತ್ತು ವರುಷಗಳ ಪರ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದುಷಿಯಾಗಿ ಮೆರೆದಿದ್ದರು. ಮದರಾಸಿನ ಸಂಗೀತ ಅಕಾಡೆಮಿ ೧೯೩ ರಲ್ಲಿ ಇವರಿಗೆ ಸ್ವರ್ಣ ಪದಕವನ್ನಿತ್ತು ಗೌರವಿಸಿತ್ತು. ಅಂತೆಯೇ ಮೈಸೂರರಸರಿಂದ ಅನೇಕಾನೇಕ ಖಿಲ್ಲತ್ತುಗಳನ್ನು ಬಹುಮಾನಗಳನ್ನೂ ಸಹ ಪಡೆದಿದ್ದರು.

ಇವರ ವೀಣಾ ವಾದನವನ್ನು ಮದರಾಸು, ತಿರುಚಿನಾಪಳ್ಳಿ ಆಕಾಶವಾಣಿ ನಿಲಯಗಳು ಪ್ರಸಾರ ಮಾಡಿದ್ದವು. ಮುಪ್ಪು ಇವರ ಕಲಾ ಉತ್ಸಾಹ, ಜ್ಞಾಪಕಶಕ್ತಿ ಮತ್ತು ದೇಹಾರೋಗ್ಯಕ್ಕೆ ಧಕ್ಕೆ ತಂದಿರಲಿಲ್ಲ. ತಾರುಣ್ಯದ ಉತ್ಸಾಹದಿಂದಲೇ ಕೊನೆಯವರೆಗೂ ಶಿಷ್ಯರಿಗೆ ವೀಣಾ ವಾದನ ಮತ್ತು ನೃತ್ಯಕಲೆಯ ಪಾಠ ನಡೆಸುತ್ತಾ, ಆ ಕಲೆಗಳ ಪುರೋಭಿವೃದ್ಧಿಗಾಗಿ ಸತತವಾಗಿ ದುಡಿದು ಯುವಜನಕ್ಕೆ ಆದರ್ಶಪ್ರಾಯರಾಗಿದ್ದರು ಸುಬ್ಬಮ್ಮನವರು.