ಗಾಯಕಿ ಎಸ್‌. ಸುಬ್ಬಲಕ್ಷ್ಮಮ್ಮ ಸಂಗೀತ ಶಾಸ್ತ್ರಜ್ಞ ಎಸ್‌.ಎನ್‌. ಅಶ್ವತ್ಥ ನಾರಾಯಣಶಾಸ್ತ್ರಿ ದಂಪತಿಗಳ ಸುಪುತ್ರರಾಗಿ ೨೩-೪-೧೯೫೫ ರಂದು ಬೆಂಗಳೂರಿನಲ್ಲಿ ಜನಿಸಿದ ಸೂರ್ಯಪ್ರಸಾದ್‌ ಹಿಂದಿ, ಕನ್ನಡ, ಇಂಗ್ಲೀಷ್‌ ಭಾಷೆಗಳಲ್ಲಿ ಪರಿಣತರು. ಬಿ.ಕಾಂ., ಎಂ.ಎ., ಡಾಕ್ಟರೇಟ್‌ ಪದವೀಧರರು. ಎಂ. ಶಂಕರಪ್ಪನವರಲ್ಲಿ ಪಿಟೀಲು ಶಿಕ್ಷಣ ಆರಂಭಿಸಿ ಆನೂರು ಎಸ್‌. ರಾಮಕೃಷ್ಣ ಮತ್ತು ಬೆಳಕವಾಡಿ ವರದರಾಜಯ್ಯಂಗಾರರಲ್ಲಿ ಉನ್ನತಾಭ್ಯಾಸ ಮಾಡಿ ಪಿಟೀಲು ಮತ್ತು ಗಾಯನಗಳೆರಡರಲ್ಲೂ ಸಾಧನೆ ಮಾಡಿರುವವರು. ಚಂದ್ರಸಿಂಗ್‌ ಮತ್ತು ಡಿ.ಬಿ. ಹರೀಂದ್ರ ಅವರುಗಳ ಮಾರ್ಗದರ್ಶನವನ್ನೂ ಹೊಂದಿದ್ದಾರೆ.

ವೃತ್ತಿಯಿಂದ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಹಿಂದಿ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರ ಪ್ರವೃತ್ತಿ ಸಂಗೀತ-ನೃತ್ಯ ಇತ್ಯಾದಿ ಕಲೆಗಳ ವಿಮರ್ಶಕರಾಗಿ. ದಿ ಹಿಂದೂ,  ದಿ ಟೈಮ್ಸ್ ಆಫ್‌ ಇಂಡಿಯಾ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಈವನಿಂಗ್‌ ಹೆರಾಲ್ಡ್ ಮುಂತಾದ ದಿನಪತ್ರಿಕೆಗಳಲ್ಲಿ ಲೇಖನ ಪ್ರಕಟಿಸುವುದು. ಭಾರತೀಯ ನೃತ್ಯ ಪ್ರಕಾರಗಳ ಸಂಗೀತದ ಒಳ ಹೊರಗುಗಳನ್ನು ಅಧ್ಯಯನ ಮಾಡಿರುವ ಇವರು ಹಲವಾರು ಬೋಧಪ್ರದ ಲೇಖನಗಳನ್ನು ಬರೆದಿದ್ದಾರೆ. ಇವು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ.

ಟೈಮ್ಸ್‌ ಆಫ್‌ ಇಂಡಿಯಾ ಮತ್ತು ಸುಧಾ ಪತ್ರಿಕೆಗಳಲ್ಲಿ ಇವರು ನೀಡಿದ ಕಲಾ ರಸಪ್ರಶ್ನೆ ಧಾರಾವಾಹಿಯಾಗಿ ಪ್ರಕಟವಾಗಿದೆ. ಇವರು ರಚಿಸಿರುವ ಕೆಲವು ಸಂಗೀತ ರೂಪಕಗಳು ಆಕಾಶವಾಣಿಯಿಂದ ಪ್ರಸಾರವಾಗಿವೆ.

ಗುರುಗಳಾದ ಬೆಳಕವಾಡಿ ವರದರಾಜ ಅಯ್ಯಂಗಾರರೊಡನೆ ಸಹ ಗಾಯನ ನೀಡಿರುವ ಅನುಭವವೂ ಬೆರೆತಿರುವ ಶ್ರೀಯುತರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ನಾಗಪುರದ ದಕ್ಷಿಣ-ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಆಕಾಶವಾಣಿ-ದೂರದರ್ಶನಗಳ ಆಡಿಷನ್‌ ಕಮಿಟಿಯ ಸದಸ್ಯರಾಗಿ. ಬೆಂಗಳೂರು ಗಾಯನ ಸಮಾಜದ ಜಂಟಿ ಕಾರ್ಯದರ್ಶಿಯಾಗಿ ವಿವಿಧ ಪ್ರಶಸ್ತಿ-ಪುರಸ್ಕಾರ ವಿತರಣಾ ಸಮಿತಿಗಳಲ್ಲಿ ಆಯ್ಕೆದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರಿಗೆ ಪ್ರಾಪ್ತವಾಗಿರುವ ಸನ್ಮಾನ ಪುರಸ್ಕಾರಗಳೂ ಲೆಕ್ಕವಿಲ್ಲದಷ್ಟು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಗಳಿಸಿರುವ ಶ್ರೀಯುತರ ಸೇವೆ ಅನನ್ಯವಾದುದು.