ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಸಂಗತಿ.

ಭಾರತೀಯ ತತ್ವಶಾಸ್ತ್ರದಲ್ಲಿ ಆಸಕ್ತಿ ಇದ್ದವರು, ಅದನ್ನು ತಕ್ಕಷ್ಟು ಓದಿಕೊಂಡಿದ್ದವರು ಒಬ್ಬರು ಅದನ್ನು ಕುರಿತು ಒಂದು ಲೇಖನ ಬರೆದರು. ಅದನ್ನು ಪ್ರಕಟಿಸಬೇಕೆಂದು ಅವರಿಗೆ ಲೇಖನ ಬರೆದರು. ಅದನ್ನು ಪ್ರಕಟಿಸಬೇಕೆಂದು ಅವರಿಗೆ ಆಸೆ. ಆದರೆ ಅದು ಪ್ರಕಟವಾಗುವ ಮೊದಲು ಆ ವಿಷಯ ಚೆನ್ನಾಗಿ ತಿಳಿದಿದ್ದ ವಿದ್ವಾಂಸರೊಬ್ಬರು ಅದನ್ನು ಓದಿ ಅಭಿಪ್ರಾಯಕೊಟ್ಟರೆ ಒಳ್ಳೆಯದು ಎನ್ನಿಸಿತು ಅವರಿಗೆ.

ಅವರ ಸ್ನೇಹಿತರಲ್ಲಿ ಈ ಸಂಗತಿ ಪ್ರಸ್ತಾಪ ಮಾಡಿದಾಗ ಪ್ರತಿಯೊಬ್ಬರೂ “ಪ್ರೊಫೆಸರ್ ಹಿರಿಯಣ್ಣನವರು ಒಂದು ಸಲ ನೋಡಿದರೆ ನಿನ್ನ ಪುಣ್ಯ’ ಎಂದರು.

ಮನೆಗೆ ಬನ್ನಿ

ಲೇಖನ ಬರೆದವರೆಗೂ ಹಿರಿಯಣ್ಣನವರು ಲೇಖನ ಓದಿ ಅಭಿಪ್ರಾಯ ಕೊಟ್ಟರೆ ಎಷ್ಟು ಒಳ್ಳೆಯದು ಎನ್ನಿಸುತ್ತಿತ್ತು. ಹಿರಿಯಣ್ಣನವರು ಭಾರತೀಯ ತತ್ವಶಾಸ್ತ್ರದಲ್ಲಿ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು ಎಂದು ಹೆಸರು ಪಡೆದಿದ್ದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದ ಪ್ರೊಫೆಸರರಾಗಿ ನಿವೃತ್ತರಾಗಿದ್ದರು. ಅವರು ತುಂಬ ಗಂಭೀರ ಸ್ವಭಾವದವರು, ಜನರ ಜೊತೆಗೆ ಹೆಚ್ಚು ಬೆರೆಯುವವರಲ್ಲ. ಮಾತು ಬಹಳ ಕಡಿಮೆ ಅವರ ಹತ್ತಿರ ಹೋಗುವುದು ಕಷ್ಟ ಎಂದು ಬಹು ಮಂದಿಯ ಭಾವನೆ. ಹೀಗಾಗಿ ಲೇಖಕರು ಅವರ ಬಳಿ ಹೋಗಲು ಹಿಂದೆಗೆದರು. ’ಅವರಿಗೆ ನನ್ನ ಪರಿಚಯವೇ ಇಲ್ಲ, ನನ್ನ ಲೇಖನ ಓದಿ ಸಹಾಯ ಮಾಡಿ ಎಂದು ಕೇಳಿದರೆ ಅವರು ಇವನು ಎಂತಹ ಮರ್ಯಾದೆ ತಿಳಿಯದ ಮನುಷ್ಯ ಎಂದುಕೊಂಡಾರು’ ಎಂದು ಹೆದರಿಕೆ.

ಕಡೆಗೆ ಧೈರ್ಯಮಾಡಿ ಪತ್ರ ಬರೆದರು; ತಾವು ಲೇಖನ ಬರೆದಿರುವ ವಿಷಯ ತಿಳಿಸಿ, ’ತಾವು ಲೇಖನ ಬರೆದಿರುವ ವಿಷಯ ತಿಳಿಸಿ, ’ತಾವು ಒಮ್ಮೆ ಓದಿನೋಡಿ ಪ್ರಕಟಿಸಬಹುದೇ ಎಂದು ತಿಳಿಸಿದರೆ ಉಪಕಾರವಾಗುತ್ತದೆ. ಅದು ನನ್ನ ಭಾಗ್ಯ’ ಎಂದು ಬರೆದರು.

ಎರಡೇ ದಿನಗಳಲ್ಲಿ ಉತ್ತರ ಬಂದಿತು.; ’ನಿಮ್ಮ ಲೇಖನ ಕಳುಹಿಸಿ’ ಎಂದು.

ಲೇಖಕರು ಲೇಖನವನ್ನು ಕಳುಹಿಸಿದರು. ಕೆಲವು ದಿನಗಳ ನಂತರ ಒಂದು ಕಾಗದ ಬಂದಿತು; ’ ಇಂತಹ ದಿನ ಇಷ್ಟು ಹೊತ್ತಿಗೆ ನಮ್ಮ ಮನೆಗೆ ಬನ್ನಿ’ ಎಂದು.

ಸೌಜನ್ಯದ ಗಣಿ

ಲೇಖಕರಿಗೆ ಒಂದು ಕಡೆ ತುಂಬಾ ಸಂತೋಷ – ಇಂತಹ ಹಿರಿಯ ವಿದ್ವಾಂಸರು ನನ್ನ ಲೇಖನ ಓದಿದ್ದಾರೆ, ಅವರನ್ನು ಕಂಡು ಮಾತನಾಡುವ ಪುಣ್ಯ ನನ್ನದು ಎಂದು. ಮತ್ತೊಂದು ಕಡೆ ತುಂಬಾ ಹೆದರಿಕೆ. ಲೇಖನದಲ್ಲಿ ಏನು ತಪ್ಪುಗಳಿವಯೊ, ಅಂತಹ ಮಹಾ ವಿದ್ವಾಂಸರು ಏನೆನ್ನುತ್ತಾರೊ, ಏನು ಪ್ರಶ್ನೆ ಕೇಳುತ್ತಾರೊ ಎಂದು.

ಧೈರ್ಯಮಾಡಿ ಪ್ರೊಫೆಸರ್ ಹಿರಿಯಣ್ಣನವರ ಮನೆಗೆ  ಹೋದರು.

ಹಿರಿಯಣ್ಣನವರು ಬಹು ಗಂಭೀರವಾದ ವ್ಯಕ್ತಿತ್ವ. ಶುಭ್ರ ಬಿಳಿಪು ಪಂಚೆ, ಸ್ವಲ್ಪವೂ ಕೊಳೆ ಇಲ್ಲದ ಉಡುಪು. ಅವರೇ ಬಾಗಿಲಿನಲ್ಲಿ ನಿಂತಿದ್ದರು. ಕಾಣಲು ಹೋದ ಲೇಖಕರು ಕೈಮುಗಿದು ತಮ್ಮ ಪರಿಚಯ ಹೇಳಿಕೊಳ್ಳುತ್ತಲೇ ಅವರನ್ನು ಕೊಠಡಿಗೆ ಕರೆದುಕೊಂಡು ಹೋದರು. ನೆಲದ ಮೇಲೆ ಒಂದು ಸೊಗಸಾದ ಚಾಪೆ, ಒಂದು ಇಳಿಜಾರು ಡೆಸ್ಕು, ಜೊತೆಗೆ ಒಂದು ಬೆಂಚು, ಒಂದು ಸ್ಟೂಲು, ಒಂದು ಅರ್ಧ ಆರಾಮ ಕುರ್ಚಿ, ಕೊಠಡಿ ಎಲ್ಲ ಬಹು ಚೊಕ್ಕಟ. ಅವರ ಹಿಂದುಗಡೆ ಇದ್ದ ಕಪಾಟಿನಲ್ಲಿ ಪುಸ್ತಕಗಳನ್ನೂ, ಕಾಗದಗಳನ್ನೂ, ಫೈಲುಗಳನ್ನೂ ಸುಂದರವಾಗಿ ಜೋಡಿಸಿತ್ತು.

ಹಿರಿಯಣ್ಣನವರು ಲೇಖಕರನ್ನು ಅರ್ಧ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಭಕ್ತಿ – ಗೌರವಗಳು ಮನಸ್ಸಿನಲ್ಲಿ ತುಳುಕಾಡುತ್ತಿದ್ದ ಲೇಖಕರಿಗೆ ಏನು ಹೇಳಬೇಕೆಂದು ತೋರಲಿಲ್ಲ.

ಹಿರಿಯಣ್ಣನವರು ಬೇರೆ ಯಾವ ಮಾತನ್ನೂ ಆಡಲಿಲ್ಲ. ಲೇಖಕರು ಕಳುಹಿಸಿದ್ದ ಲೇಖನವನ್ನು ಕಪಾಟಿನಿಂದ ತೆಗೆದು “ಇದನ್ನು ಪ್ರಕಟಿಸಬಹುದು, ಆದರೆ ಕೆಲವು ಭಾಗಗಳನ್ನು ನೀವು ಮತ್ತೆ ಯೋಚಿಸಿ ನೋಡೋಣವಾಗಲಿ” ಎಂದರು. ಅಲ್ಲಲ್ಲಿ ಲೇಖನದ ಕೆಲವು ಭಾಗಗಳನ್ನು ಗುರುತುಮಾಡಿದ್ದರು. ಅವನ್ನು ಓದಿ ತಮ್ಮ ಅಭಿಪ್ರಾಯಗಳನ್ನು ವಿವರಿಸಿದರು. ” ಇದನ್ನು ಯೋಚಿಸಿ ನೋಡೋಣವಾಗಲಿ,” “ಇದನ್ನು ಪರಿಶೀಲಿಸೋಣವಾಗಲಿ” ಎಂದು ಬಹು ಮೃದುವಾಗಿ ಸಲಹೆ ಮಾಡಿದರು. ಹೇಳುವುದೆಲ್ಲ ಆದಮೇಲೆ, ” ಮತ್ತೆ ಏನಾದರೂ ಸಂದೇಹಗಳಿದ್ದರೆ ಕಾಗದ ಬರೆಯಿರಿ” ಎಂದರು.

ಲೇಖಕರ ಹೃದಯ ಕೃತಜ್ಞತೆಯಿಂದ ತುಂಬಿಹೋಯಿತು. ಪರಿಚಯವೇ ಇಲ್ಲದ ತನಗಾಗಿ ಈ ಘನ ವಿದ್ವಾಂಸರು ಎಷ್ಟು ಶ್ರಮ ವಹಿಸಿದ್ದಾರೆ, ಎಷ್ಟು ಸೌಜನ್ಯದಿಂದ  ಕಾಣುತ್ತಿದ್ದಾರೆ! ತಮ್ಮ ಕೃತಜ್ಞತೆಯನ್ನು ನಾಲ್ಕು ಮಾತುಗಳಲ್ಲಿ ಹೇಳಿದರು.

ಹಿರಿಯಣ್ಣನವರು ಮಾತನಾಡದೆ ಕೇಳಿದರು, ಲೇಖಕರು ಮಾತು ನಿಲ್ಲಿ ಸುತ್ತಲೇ ಕೈಮುಗಿದರು – ಭೇಟಿ ಮುಗಿಯಿತು ಎಂದು ಸೂಚಿಸಲು.

ಆಧಾರವಾಗುವ ಕೃತಿ

ಡಾಕ್ಟರ್ ಡಿ.ವಿ. ಗುಂಡಪ್ಪನವರು ತಮ್ಮ ನಾಡಿನ ಬಹು ದೊಡ್ಡ ವಿದ್ವಾಂಸರಲ್ಲಿ ಒಬ್ಬರು. ಅವರ ಮಾತು ತೂಕವಾದದ್ದು. ಯಾರನ್ನು  ಹೊಗಳುವಾಗಲೂ ತೂಕ ಮಾಡಿ ಮಾತನ್ನು ಬಳಸುವವರು. ಅವರು ಒಂದು ಅನುಭವವನ್ನು ವಿವರಿಸಿದ್ದಾರೆ.

ಹಿರಿಯಣ್ಣನವರು ’ಔಟ್ ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ’ (ಭಾರತೀಯ ತತ್ವಶಾಸ್ತ್ರದ ರೂಪರೇಖೆ ) ಎಂಬ ಪುಸ್ತಕವನ್ನು ಬರೆದರು. ಅದು ಪ್ರಕಟವಾದ ಎರಡು ಮೂರು ತಿಂಗಳಲ್ಲಿ ಡಿ.ವಿ.ಜಿ. ಒಬ್ಬ ಪ್ರಸಿದ್ಧ ತತ್ವಶಾಸ್ತ್ರ ವಿದ್ವಾಂಸರನ್ನು ಕಂಡರಂತೆ. ಆತ ಭಾರತದ ಮತ್ತು ಪಶ್ಚಿಮ ದೇಶಗಳ ತತ್ವಶಾಸ್ತ್ರಗಳನ್ನು ಚಿನ್ನಾಗಿ ಅಭ್ಯಾಸ ಮಾಡಿದರು. ಮಾತುಕತೆಯ ಮಧ್ಯದಲ್ಲಿ ಗುಂಡಪ್ಪನವರು ಅವರನ್ನು ಕೇಳಿದರಂತೆ: “ತಾವು ಹಿರಿಯಣ್ಣನವರ ಪುಸ್ತಕವನ್ನು ನೋಡೋಣವಾಯಿತೆ?” ಎಂದ. ಆ ತತ್ವಶಾಸ್ತ್ರ ವಿದ್ವಾಂಸರು ಉತ್ತರ ಹೇಳಿದರಂತೆ: ” ಅದು ಅಚ್ಚಾಗುವುದಕ್ಕೆ ಮೊದಲೇ ಅದು ಬರಹದಲ್ಲಿದ್ದಾಗಲೇ ನಾನು ಓದಿದ್ದೆ. ಅವರ ಬರವಣಿಗೆ ಇತರರಿಗೆ ಆಧಾರವಾಗುವಂತಹುದು. ಇತರರು ಅದು ಸರಿಯಾಗಿಯೇ ಇರುತ್ತದೆ ಎಂಬ ನೆಚ್ಚಿಕೆಯಿಂದ ಓದಬಹುದು. ಅವರ ರೀತಿಯಲ್ಲಿ ನಾನು ಒಂದು ಗ್ರಂಥ ಬರೆಯಬೇಕಾದರೆ ಹನ್ನೆರಡು – ಹದಿನೈದು ವರ್ಷ ಹಿಡಿದೀತು”.

ಹಿರಿಯಣ್ಣನವರು ವಿದ್ವತ್ತು ಘನವಾದದ್ದು. ಸೌಜನ್ಯ ಹಿರಿದಾದದ್ದು. ಅವರ ಯೋಗ್ಯತೆ ಅಸಾಧಾರಣವಾದದ್ದು.

ಇದನ್ನು ಪ್ರಕಟಿಸಬಹುದು. ಆದರೆ ಕೆಲವು ಭಾಗಗಳನ್ನು ನೀವು ಮತ್ತೆ ಯೋಚಿಸಿ ನೋಡೋಣವಾಗಲಿ

ಮನೆತನ

 

ಹಿರಿಯಣ್ಣನವರು ಹುಟ್ಟಿದ್ದು ಸುಮಾರು ಒಂದು ನೂರು ವರ್ಷಗಳ ಹಿಂದೆ (೧೮೭೧ರ ಮೇ ಏಳರಂದು). ಆದರೂ ಅವರ ಜೀವನದ ವಿಷಯ ಖಚಿತವಾಗಿ ತಿಳಿದಿರುವ ವಿವರಗಳು ಹೆಚ್ಚಿಲ್ಲ. ತಮ್ಮ ವಿಷಯ ಮಾತನಾಡುವ ಸ್ವಭಾವವಲ್ಲ ಅವರದು.

ಅವರ ತಂದೆಯವರ ಹೆಸರು ನಂಜುಂಡಯ್ಯನವರು. ಅವರಿಗೆ ಮೂರು ಜನ ಗಂಡು ಮಕ್ಕಳು. ಹಿರಿಯಣ್ಣನವರು ಎರಡನೇಯವರು. ಮತ್ತೊಬ್ಬ ಮಗ ಎಂ.ಎನ್.ಕೃಷ್ಣರಾವ್. ಇವರು ಬಹು ಪ್ರಸಿದ್ಧಿಗೆ ಬಂದರು. ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ದೊಡ್ಡ ಕೆಲಸಗಳಲ್ಲಿದ್ದು ಸ್ವಲ್ಪ ಕಾಲ ದಿವಾನರು – ಎಂದರೆ ಮುಖ್ಯಮಂತ್ರಿ – ಆಗಿದ್ದರು. ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ ಎಂ.ಎನ್.ಕೃಷ್ಣರಾವ್ ಪಾರ್ಕ್ ಎಂಬ ಉದ್ಯಾನವಿದೆ. ಇದು ಈ ಎಂ.ಎನ್.ಕೃಷ್ಣರಾಯರ ನೆನಪಿಗಾಗಿ ಇಟ್ಟ ಹೆಸರು.

ಹಿರಿಯಣ್ಣನವರ ಹಿರಿಯರು ಮೈಸೂರು ನಗರದಲ್ಲಿ ವಾಸವಾಗಿದ್ದರು. ಹಿರಿಯಣ್ಣನವರು ಹುಟ್ಟಿದುದೂ ಅಲ್ಲೆ. ಅವರು ಬೆಳೆದದ್ದು, ಅವರ ವಿದ್ಯಾಭ್ಯಾಸ ಪ್ರಾರಂಭ, ಅವರು ಕೆಲಸ ಮಾಡಿದ್ದು ಎಲ್ಲ ಮೈಸೂರಿನಲ್ಲೆ, ಕಾಲೇಜು ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಕಾಲ ಮದರಾಸಿನಲ್ಲಿದ್ದರು. ಇದನ್ನು ಬಿಟ್ಟರೆ ಅವರು ಹೊರಗೆ ಪ್ರವಾಸ ಮಾಡಿದುದೇ ಕಡಿಮೆ.

ವಿದ್ಯಾಭ್ಯಾಸ

ಹಿರಿಯಣ್ಣನವರ ತಂದೆ ಇದ್ದುದರಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದರು. ಸಂಪ್ರದಾಯಸ್ಥರು. ಮೂರು ಮಕ್ಕಳಿಗೂ ಪ್ರಾರಂಭದಲ್ಲಿ ಸಂಸ್ಕೃತದಲ್ಲಿ ವಿದ್ಯಾಭ್ಯಾಸ ಮಾಡಿಸಿದರು. ಆಗಿನ ಕಾಲದಲ್ಲಿ ’ಸದ್ವಿದ್ಯಾ ಪಾಠಶಾಲೆ’ ಎಂಬುದು ಬಹು ಪ್ರಸಿದ್ಧವಾದ ಶಾಲೆ. ಅದನ್ನು ನಡೆಸುತ್ತಿದ್ದವರು ಪೆರಿಯಸ್ವಾಮಿ ತಿರುಮಲಾಚಾರ್ಯರೆಂಬುವರು. ಅವರು ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳಲ್ಲಿಯೂ ವಿದ್ವಾಂಸರು. ಒಳ್ಳೆಯ ಉಪಾಧ್ಯಾಯರು. ನಂಜುಂಡಯ್ಯನವರು ತಮ್ಮ ಮೂವರು ಮಕ್ಕಳನ್ನೂ ಈ ಶಾಲೆಗೆ ಸೇರಿಸಿದರು.

ಹೀಗೆ ಎಳೆಯ ವಯಸ್ಸಿನಲ್ಲೇ ಹಿರಿಯಣ್ಣನವರಿಗೆ ಸಂಸ್ಕೃತದ ಅಭ್ಯಾಸಕ್ಕೆ ಒಳ್ಳೆಯ ತಳಹದಿ ಸಿಕ್ಕಿತು. ಅವರಿಗೆ ದೊರೆತ ಮತ್ತೊಬ್ಬ  ಗುರುಗಳು ಕಾಶೀ ಶೇಷರಾಮ ಸಾಸ್ತ್ರಿಗಳು. ಇವರೂ ಉದ್ದಾಮ ಪಂಡಿತರು.

ಸಂಸ್ಕೃತ ಅಭ್ಯಸದ ಜೊತೆಗೆ  ಹಿರಿಯಣ್ಣನವರು ಶಾಲೆ ಸೇರಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದರು. ಬಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಎಂ.ಎ. ಪದವಿಯನ್ನೂ ಪಡೆದರು. ೧೮೯೦ರ ಹೊತ್ತಿಗೆ ಈ ಎಲ್ಲ ವಿದ್ಯಾಭ್ಯಾಸ ಮುಗಿಯಿತು.

ಗ್ರಂಥಪಾಲಕರಾಗಿ ಗುಮಾಸ್ತರಾಗಿ

ಹಿರಿಯಣ್ಣನವರು ಕೆಲಸ ಹುಡುಕಲು ಪ್ರಾರಂಭಿಸಿದರು. ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿ ಎಂಬ ಸಂಸ್ಥೆ ಇದೆ. ಹಿಂದಿನ ಕಾಲದ ಗ್ರಂಥಗಳು ದೇಶದಲ್ಲಿ ಹಂಚಿ ಹೋಗಿರುತ್ತವೆ. ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ಹಲವಾರು ಜನರ ಮನೆಗಳಲ್ಲಿರುತ್ತವೆ. ದೇವಾಲಯಗಳಲ್ಲಿ, ಮಠಗಳಲ್ಲಿ ಇರುತ್ತವೆ. ಇವುಗಳಲ್ಲಿ ಹಲವು ಒಳ್ಳೆಯ ಗ್ರಂಥಗಳು ಸಾಹಿತ್ಯ ಕೃತಿಗಳು. ಹಲವು ದೇಶದ ಚರಿತ್ರೆಯನ್ನು ಅಭ್ಯಾಸ ಮಾಡುವವರಿಗೆ ಉಪಯುಕ್ತವಾದವು. ಕೆಲವು ಬೇರೆ ಬೇರೆ ಶಾಸ್ತ್ರಗಳಿಗೆ ಸಂಬಂಧಿಸಿದವು. ಇವೆಲ್ಲ ತುಂಬಾ ಬೆಲೆಬಾಳುವ ಕೃತಿಗಳು.

ಇವನ್ನು ಓದುವುದು ಕಷ್ಟ, ಇದಕ್ಕೆ ವಿಶೇಷ ಅಭ್ಯಾಸ ಬೇಕು. ಏಕೆಂದರೆ ಲಿಪಿ ಹಿಂದಿನಕಾಲದ್ದು. ಓಲೆಗರಿಯ ಮೇಲೆ ಬರೆದಿರುತ್ತಾರೆ. ಅಥವಾ ಕಲ್ಲಚ್ಚಿನ ಪುಸ್ತಕಗಳಿರುತ್ತವೆ. ಇವನ್ನೆಲ್ಲ ಸಂಗ್ರಹಿಸಬೇಕು. ಕೆಡದಂತೆ, ಹರಿಯದಂತೆ ನೋಡಿಕೊಳ್ಳಬೇಕು. ಓದಿ ಪಟ್ಟಿಮಾಡಿಡಬೇಕು. ಯಾರಾದರೂ ಇವನ್ನು ಓದಬೇಕೆಂದರೆ ಸುಲಭವಾಗಿ ಸಿಕ್ಕುವಂತಿರಬೇಕು. ಈ ಕೆಲಸವನ್ನು ಓರಿಯೆಂಟಲ್ ಲೈಬ್ರರಿಯಲ್ಲಿ ಮಾಡುತ್ತಾರೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಹಿರಿಯಣ್ಣನವರು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಪುಸ್ತಕಗಳೆಂದರೆ ಅವರಿಗೆ ಪ್ರಾಣ. ೧೮೯೧ರಲ್ಲಿ (ಗ್ರಂಥಪಾಲಕ) ಆಗಿ ಕೆಲಸಕ್ಕೆ ಸೇರಿದರು.ಪುಸ್ತಕ ಭಂಡಾರವನ್ನು ನೋಡಿಕೊಳ್ಳುವುದು ಅವರ ಹೊಣೆ. ಅವರು ಕೆಲಸಕ್ಕೆ ಸೇರಿದಾಗ ಓರಿಯಂಟಲ್ ಲೈಬ್ರೆರಿಯಲ್ಲಿ ಒಂದು ಸಾವಿರದ ಆರುನೂರ ಐವತ್ತು ಮೂರು ಅಚ್ಚಾದ ಪುಸ್ತಕಗಳೂ ಒಂದು ಸಾವಿರದ ಮುನ್ನೂರ ಐವತ್ತೆಂಟು ಕೈಬರಹದ ಪುಸ್ತಕಗಳೂ ಸೇರಿ ಒಟ್ಟು ಸುಮಾರು ಮೂರು ಸಾವಿರ ಪುಸ್ತಕಗಳು ಇದ್ದವಂತೆ.

ಇಲ್ಲಿನ ಕೆಲಸ ಪುಸ್ತಕಪ್ರಿಯರಾದ ಹಿರಿಯಣ್ಣನವರಿಗೆ ಸಂತೋಷಕರವಾಗಿಯೇ ಇತ್ತು. ಆದರೆ ಬರುತ್ತಿದ್ದ ಸಂಬಳ ಕಡಿಮೆ. ಇದರಿಂದ ಬೇರೆ ಕೆಲಸವನ್ನು ಹುಡುಕ ಬೇಕಾಯಿತು. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಕಚೇರಿಯಲ್ಲಿ ಗುಮಾಸ್ತೆಯ ಕೆಲಸ ಸಿಕ್ಕಿತು. ಮೂರು ವರ್ಷಗಳ ಕಾಲ ಇಲ್ಲಿದ್ದರು.

ಸ್ವತಃ ವಿದ್ವಾಂಸರಾದ ಹಿರಯಣ್ಣನವರಿಗೆ ಈ ಕೆಲಸ ತೃಪ್ತಿಯನ್ನು ಕೊಡಲಿಲ್ಲ. ತಮಗೆ ತಿಳಿದುದನ್ನು ಇತರರಿಗೆ ಹೇಳಿಕೊಡಬೇಕು. ತಾವು ಇನ್ನೂ ಆಳವಾಗಿ ಅಭ್ಯಾಸಮಾಡಬೇಕು ಎಂದು ಅವರ ಆಸೆ. ಇದಕ್ಕೆ ಉಪಾಧ್ಯಾಯರಾಗಲು ಅಗತ್ಯವಾಗಿತ್ತು. ಆದರೆ ಉಪಾಧ್ಯಾಯರಾಗಲು ಮತ್ತಿಷ್ಟು ಓದಿ ಎಲ್.ಟಿ. ಎಂಬ ಪದವಿ ಪಡೆಯಬೇಕಾಗಿತ್ತು. ಇದಕ್ಕೆ ಮದರಾಸಿಗೆ ಹೋಗಿ ಒಂದು ವರ್ಷ ಓದಬೇಕಾಗಿತ್ತು. ಆದರೆ ಹಿರಿಯಣ್ಣನವರಿಗೆ ಹಣಕಾಸಿನ ಅನುಕೂಲ ಸಾಕಷ್ಟು ಇರಲಿಲ್ಲ.

ಆದರೆ ಅವರು ಶಿಕ್ಷಣ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದರಲ್ಲವೆ? ಅವರ ಅಚ್ಚುಕಟ್ಟು ಕೆಲಸ, ಶಿಸ್ತು ಗಾಂಭೀರ್ಯ ಇವನ್ನು ಅವರ ಮೇಲಿನ ಅಧಿಕಾರಿಗಳು ಮೆಚ್ಚಿದ್ದರು. ಹಿರಿಯಣ್ಣನವರಿಗೆ ಉಪಾಧ್ಯಾಯರಾಗ ಬೇಕೆಂಬ ಆಸೆ ಇದೆ ಎಂದು ತಿಳಿದಾಗ, ಇಂತಹವರು ಉಪಾಧ್ಯಾಯರಾದರೆ ವಿದ್ಯಾರ್ಥಿಗಳಿಗೂ ಅಪಾರ ಲಾಭ ಎಂದು ಭಾವಿಸಿದರು. ಹಿರಿಯಣ್ಣನವರು ಒಂದು ವರ್ಷ ಮದರಾಸಿನಲ್ಲಿದ್ದು ಓದಲು ಸ್ಲಾಲರ್ಷಿಪ್ ಕೊಡಬೇಕೆಂದು ಸರ್ಕಾರಕ್ಕೆ ಬರೆದರು. ಹಿರಿಯಣ್ಣನವರಿಗೆ ಸ್ಕಾಲರ್ಷಿಪ್ ಸಿಕ್ಕಿತು. ಮದರಾಸಿನಲ್ಲಿ ಸೈದಾಪೆಟ್ನ ಉಪಾಧ್ಯಾಯರ ಶಿಕ್ಷಣದ ಕಾಲೇಜಿನಲ್ಲಿ ಓದಿ ಎಲ್.ಟಿ.ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಉಪಾಧ್ಯಾಯರು

ಅವರಿಗೆ ೧೮೯೬ರಲ್ಲಿ ಮೈಸೂರಿನ ನಾರ್ಮಲ್ ಸ್ಕೂಲಿನಲ್ಲಿ ಉಪಾಧ್ಯಾಯರಾಗಿ ಕೆಲಸ ದೊರೆಯಿತು. ಕನ್ನಡದಲ್ಲಿ ಪಾಠ ಹೇಳುವ ಉಪಾಧ್ಯಾಯರಿಗೆ ಶಿಕ್ಷಣ ಕೊಡುವ ಸಂಸ್ಥೆ ಇದು. ಇಲ್ಲಿ ಹಿರಿಯಣ್ಣನವರು ಹನ್ನೊಂದು ವರ್ಷಗಳ ಕಾಲ ಉಪಾಧ್ಯಾಯರಾಗಿದ್ದರು. ೧೯೦೭ರಲ್ಲಿ ಮುಖ್ಯೋಪಾಧ್ಯಾಯರಾದರು. ಕನ್ನಡ ಪಾಠ ಹೇಳುವ ವಿಧಾನವನ್ನು ಕುರಿತು ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಆಗಿನ ಕಾಲದಲ್ಲಿ ಇಂತಹ ಪುಸ್ತಕಗಳಿದ್ದುದು ಕೆಲವೇ. ಹಿರಿಯಣ್ಣನವರ ಪುಸ್ತಕಗಳಿಂದ ಉಪಾಧ್ಯಾಯರಿಗೆ ತುಂಬಾ ಪ್ರಯೋಜನವಾಯಿತು. ಏಕೆಂದರೆ ಅವರು ಏನನ್ನೇ ಬರೆಯಲಿ, ವಿಷಯವನ್ನು ಸ್ವತಃ ಮೊದಲಿನಿಂದ ಕೊನೆಯವರೆಗೆ ತಿಳಿದುಕೊಂಡ ನಂತರವೇ ಬರೆಯುವರು, ಅಲ್ಲದೆ ಹೇಳುವುದನ್ನು ಸ್ಪಷ್ಟವಾಗಿ, ಹೆಚ್ಚು ಮಾತುಗಳನ್ನು ಬಳಸದೆ ಆದರೆ ಸರಳವಾದ ಶೈಲಿಯಲ್ಲಿ ಹೇಳುವರು.

ಕನ್ನಡ ನಾಡಿನಲ್ಲಿ ಮಹಾರಾಜ ಕಾಲೇಜು ಬಹು ಪ್ರಸಿದ್ಧವಾದದ್ದು. ೧೮೯೯ರಲ್ಲಿ ಇದು ಮೊದಲನೆಯ ದರ್ಜೆಯ ಕಾಲೇಜಾಯಿತು- ಎಂದರೆ ಬಿ.ಎ. ತರಗತಿಗಳು ಪ್ರಾರಂಭವಾದವು. ಆಗ ಅದು ಮದರಾಸ್ ವಿಶ್ವವಿದ್ಯಾನಿಲಯ ಜನ್ಮ ತಾಳಿರಲಿಲ್ಲ.

ಮೈಸೂರಿನಲ್ಲಿ ಹಿರಿಯಣ್ಣನವರ ಕೀರ್ತಿ ಹಬ್ಬಿತ್ತು. ಶ್ರೇಷ್ಠ ವಿದ್ವಾಂಸರು, ಒಳ್ಳೆಯ ಅಧ್ಯಾಪಕರು, ದೊಡ್ಡ ಯೋಗ್ಯತೆಯ ವ್ಯಕ್ತಿ ಎಂದು ಹೆಸರು ಪಡೆದಿದ್ದರು. ೧೯೧೨ರಲ್ಲಿ ಅವರಿಗೆ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗುವಂತೆ ಆಹ್ವಾನ ಬಂದಿತು. ತಾನಾಗಿಯೇ ಹುಡಿಕಿಕೊಂಡು ಬಂದ ಈ ಸ್ಥಾನವನ್ನು ಅವರು ಒಪ್ಪಿಕೊಂಡರು. ಎರಡು ವರ್ಷಗಳ ನಂತರ ಅವರು ಅಸಿಸ್ಟೆಂಟ್ ಪ್ರೊಫೆಸರ್ ಆದರು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಜನ್ಮ ತಾಳಿತು.

ತತ್ವಶಾಸ್ತ್ರದ ಪ್ರಾಧ್ಯಾಪಕರು

ಆಗ ತತ್ವಶಾಸ್ತ್ರದ ವಿಭಾಗ  ಒಂದಿತ್ತು.

ತತ್ವಶಾಸ್ತ್ರ ಎಂದರೇನು? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಸ್ಥೂಲವಾಗಿ ಹೀಗೆ ಹೇಳಬಹುದು. ವಿಜ್ಞಾನಿ ’ಹೇಗೆ’ ಎಂಬ ಪ್ರಶ್ನೆಯನ್ನೇ ಸದಾ ಹಾಕಿಕೊಳ್ಳುತ್ತಾನೆ. ರಾತ್ರಿ ಹೇಗೆ ಆಗುತ್ತದೆ, ಮಿಂಚು ಹೇಗೆ ಹೊಳೆಯುತ್ತದೆ, ಮಳೆ ಹೇಗೆ ಬರುತ್ತದೆ, ನೀರು ಮೇಲಿಂದ ಕೆಳಕ್ಕೆ ಹೇಗೆ ಹರಿಯುತ್ತದೆ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಗಳನ್ನು ಹುಡುಕುತ್ತಾನೆ. ಈತ ಜ್ಞಾನದಲ್ಲಿ ಆಸಕ್ತಿ ಇರುವ ಒಂದು ಬಗೆಯ ಮನುಷ್ಯ. ಮತ್ತೊಂದು ಬಗೆಯ ಮನುಷ್ಯ ಇರುತ್ತಾನೆ. ಅವನು ’ಏಕೆ’? ಎಂಬ ಪ್ರಶ್ನೆ ಕೇಳಿಕೊಳ್ಳುತ್ತಾನೆ. ಮನುಷ್ಯನಿಗೆ ಆತ್ಮ ಇದೆಯೇ, ಪ್ರಪಂಚದಲ್ಲಿ ನಮಗೆ ಕಾಣುವುದು ನಿಜವಾಗಿ ಇದೆಯೆ, ಅಥವಾ ಕನಸಿನಲ್ಲಿ ಕಂಡದ್ದು ನಿಜ ಎಂದುಕೊಂಡ ಹಾಗೆ ಸುತ್ತ ಕಾಣುವುದು ನಿಜ ಎಂದು ನಂಬಿದ್ದೇವೆಯೇ, ಸತ್ಯ ಎಂದರೇನು ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾನೆ. ಇವನ ವಿಭಾಗ ತತ್ವಶಾಸ್ತ್ರ. ಒಂದೊಂದು ದೇಶದಲ್ಲಿ ತತ್ವಶಾಸ್ತ್ರ ಸಾವಿರಾರು ವರ್ಷಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಬೆಳೆದುಕೊಂಡು ಬಂದಿರುತ್ತದೆ.

ಭಾರತದಲ್ಲಿಯೂ ತತ್ವಶಾಸ್ತ್ರ ಸಾವಿರಾರು ವರ್ಷಗಳಿಂದ ಬೆಳೆದಿದೆ. ಇಲ್ಲಿನ ಹಿರಿಯ ಚಿಂತನಕಾರರನ್ನು ಪಾಶ್ಚಾತ್ಯರೂ  ಮೆಚ್ಚಿದ್ದಾರೆ. ಭಗವದ್ಗೀತೆ ಪ್ರಪಂಚದಲ್ಲೆಲ್ಲ ಪ್ರಸಿದ್ಧವಾದ ಗ್ರಂಥ. ಇದಲ್ಲದೆ ವೇದ, ಉಪನಿಷತ್ತುಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ.

ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದಾಗ ತತ್ವಶಾಸ್ತ್ರ ವಿಭಾಗದಲ್ಲಿ ಪಶ್ಚಿಮ ದೇಶಗಳ ತತ್ವಶಾಸ್ತ್ರವನ್ನು ಪಾಠ ಹೇಳಲು ಸಮರ್ಥರಾದವರು ಇದ್ದರು. ಆದರೆ ಭಾರತೀಯ ತತ್ವಶಾಸ್ತ್ರದ ಪಾಠ ಹೇಳುವ ಅಧ್ಯಾಪಕರು ಇರಲಿಲ್ಲ. (ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಇನ್ನೂ ಮಹಾರಾಜ ಕಾಲೇಜಿಗೆ ಬಂದಿರಲಿಲ್ಲ.) ಸಂಸ್ಕೃತ ಪಾಠ ಹೇಳುತ್ತಿದ್ದ ಹಿರುಯಣ್ಣನವರನ್ನೇ ಭಾರತೀಯ ತತ್ವಶಾಸ್ತ್ರವನ್ನು ಪಾಠ ಹೇಳುವಂತೆ ಕಾಲೇಜಿನವರು ಪ್ರಾರ್ಥಿಸಿದರು. ಅವರು ಒಪ್ಪಿಕೊಂಡರು.

೧೯೧೭ರಲ್ಲಿ ವಿಶ್ವವಿದ್ಯಾನಿಲಯ ಎ.ಆರ್.ವಾಡಿಯಾ ಎನ್ನುವವರನ್ನು ತತ್ವಶಾಸ್ತ್ರದ ಪ್ರೊಫೆಸರ್ ಆಗಿ ನೇಮಕ ಮಾಡಿತು. ಇವರಿಗೆ ಭಾರತೀಯ ತತ್ವಶಾಸ್ತ್ರದ  ಪರಿಚಯ ಇರಲಿಲ್ಲ. ಆದುದರಿಂದ ಹಿರಿಯಣ್ಣನವರೇ ಆ ವಿಷಯ ಪಾಠ ಹೇಳುವುದನ್ನು ಮುಂದುವರಿಸಿದರು. ೧೯೧೮ರಲ್ಲಿ ವಿಶ್ವವಿದ್ಯಾನಿಲಯ ಮತ್ತೊಬ್ಬ ಪ್ರೊಫೆಸೆರರನ್ನು ನೇಮಕಮಾಡಲು ತೀರ್ಮಾನಿಸಿತು. (೧೯೧೭ರಲ್ಲಿ ಹಿರಿಯಣ್ಣನವರು ಸಂಸ್ಕೃತ ಪ್ರೊಫೆಸರರಾದರು). ಆಗ ವಿಶ್ವವಿದ್ಯಾನಿಲಯ ಆರಿಸಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು.

ಮುಂದೆ ಎಸ್. ರಾಧಾಕೃಷ್ಣನ್ ಅವರು ಪ್ರಪಂಚದಲ್ಲಿಯೇ ತತ್ವಶಾಸ್ತ್ರದಲ್ಲಿ ಕೀರ್ತಿಗಳಿಸಿದರು. ಇಂಗ್ಲೆಂಡಿನ ಪ್ರಖ್ಯಾತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರರಾದರು. ಸ್ವತಂತ್ರ ಭಾರತದ ಮೊದಲನೆಯ ಉಪರಾಷ್ಟ್ರಪತಿಗಳಾಗಿ ಅನಂತರ ರಾಷ್ಟ್ರಪತಿಗಳಾದರು. 

ನನಗೆ ಬೇಕಾದುದು ತತ್ವಶಾಸ್ತ್ರದಿಂದ ತಿಳಿದುಕೊಂಡದ್ದನ್ನು ಆಚರಿಸಿ ಅರಗಿಸಿಕೊಂಡವರು

ರಾಧಾಕೃಷ್ಣನ್ ಅವರ ನೇಮಕವಾದಾಗ, ಹಿರಿಯಣ್ಣನವರು ವಾಡಿಯಾ ಅವರನ್ನು ತಾವು ಇನ್ನೂ ಭಾರತೀಯ ತತ್ವಶಾಸ್ತ್ರ ಪಾಠ ಹೇಳಬೇಕೇ ಎಂದು ಕೇಳಿದರು. ರಾಧಾಕೃಷ್ಣನ್ ಅವರಿಗೂ ಆಗ ಆ ವಿಷಯ ಹೊಸದು. ಆದುದರಿಂದ ವಾಡಿಯಾರವರು ಹಿರಿಯಣ್ಣನವರೇ ಪಾಠ ಮುಂದುವರಿಸುವಂತೆ ಸೂಚಿಸಿದರು. ರಾಧಾಕೃಷ್ಣನ್ ಅವರೂ ಈ ತೀರ್ಮಾನವನ್ನು ಸಂತೋಷದಿಂದ ಒಪ್ಪಿದರು. ಸ್ವಲ್ಪ ಕಾಲದಲ್ಲಿಯೇ ರಾಧಾಕೃಷ್ಣನ್ ಅವರು ಹಿರಿಯಣ್ಣನವರ ಗೆಳೆಯರಾದರು.

೧೯೨೭ರಲ್ಲಿ ಹಿರಿಯಣ್ಣನವರಿಗೆ ವಿಶ್ವವಿದ್ಯಾನಿಲಯದ ವಿಷಯದಲ್ಲಿ ಸ್ವಲ್ಪ ಅಸಮಾಧಾನವಾಯಿತು ಎಂದು ಕಾಣುತ್ತದೆ. ವಿಶ್ವವಿದ್ಯಾನಿಲಯ ತಮ್ಮನ್ನು ಸರಿಯಾಗಿ ಕಾಣಲಿಲ್ಲ, ಅನ್ಯಾಯ ಮಾಡಿತು ಎಂದು ಅವರಿಗೆ ತೋರಿತು.

ತತ್ವಶಾಸ್ತ್ರ ಮನುಷ್ಯನಿಗೆ ಜೀವನದಲ್ಲಿ ಯಾವುದು ನಿಜವಾಗಿ ಮುಖ್ಯ ಯಾವುದು ಮುಖ್ಯವಲ್ಲ ಎಂಬುದನ್ನು ಕಲಿಸಿಕೊಡಬೇಕು. ಅಧಿಕಾರ, ಪದವಿ, ಹಣ ಇವು ಮುಖ್ಯವಲ್ಲ, ಇವಕ್ಕೆ ಅಂಟಿಕೊಂಡಿರಬಾರದು ಎಂದು ಕಲಿಸಿಕೊಡಬೇಕು. ಹಿರಿಯಣ್ಣನವರು ತತ್ವಶಾಸ್ತ್ರ ಪಾಠ ಹೇಳುತ್ತಿದ್ದರು ಮಾತ್ರವಲ್ಲ, ಅದನ್ನು ರಕ್ತಗತ ಮಾಡಿಕೊಂಡಿದ್ದರು. ಪದವಿ, ಅಧಿಕಾರ ಇವಕ್ಕೆ ಆಸೆಪಟ್ಟವರಲ್ಲ (೧೯೩೮ರಲ್ಲಿ ಮದರಾಸಿನ ಸಂಸ್ಕೃತ ಅಕಾಡಮಿ ಎಂಬ ವಿದ್ವತ್ಸಂಸ್ಥೆ ಅವರಿಗೆ ’ಸಂಸ್ಕೃತ ಸೇವಾ-ಧುರೀಣ’ ಎಂಬ ಪ್ರಶಸ್ತಿ ನೀಡಲು ತೀರ್ಮಾನಿಸಿತು. ಹಾಗೆಂದು ಅಕಾಡೆಮಿಯ ಕಾರ್ಯದರ್ಶಿ ಅವರಿಗೆ ಕಾಗದ ಬರೆದರು. ಹಿರಿಯಣ್ಣನವರು ಕೂಡಲೇ ಒಂದು ತಂತಿ ಕಳುಹಿಸಿದರು, ಕಾಗದ ಬರೆದರು-ತಮಗೆ ಆ ಪ್ರಶಸ್ತಿ ಬೇಡ ಎಂದು. ಅಲ್ಲಿಗೂ ಅವರಿಗೆ ಭಯ ಅಕಾಡೆಮಿ ತನ್ನ ತೀರ್ಮಾನವನ್ನು ಬದಲಾಯಿಸುವುದಿಲ್ಲ ಎಂದು. ತಾವೇ ಮದರಾಸಿಗೆ ಹೋದರು, ಸಂಸ್ಥೆಯ ಅಧ್ಯಕ್ಷರನ್ನು ಕಂಡು ತಮಗೆ ಆ ಪ್ರಶಸ್ತಿ ಬೇಡ ಎಂದು ಹೇಳಿದರು. ಆದರೆ ಸಂಸ್ಥೆಯವರಿಗೆ ಹಿರಿಯಣ್ಣನವರಿಗೆ ಗೌರವ ಮಾಡಲೇಬೇಕೆಂದು ಆಸೆ. ಕಡೆಗೆ ಸಂಸ್ಥೆ ಅವರಿಗೆ ಆ ಪ್ರಶಸ್ತಿಯನ್ನು ನೀಡಿತು. ಆದರೆ ಆ ಸಮಾರಂಭಕ್ಕೆ ಹಿರಿಯಣ್ಣನವರು ಹೋಗಲಿಲ್ಲ). ತಮ್ಮನ್ನು ವಿಶ್ವವಿದ್ಯಾನಿಲಯ ಸರಿಯಾಗಿ ಕಾಣುತ್ತಿಲ್ಲ ಎನ್ನಿಸಿದಾಗ ತಾವಾಗಿಯೇ ಕೆಲಸದಿಂದ ನಿವೃತ್ತರಾಗುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ೧೯೨೭ರಲ್ಲಿ ತಾವಾಗಿಯೇ ಕೆಲಸಬಿಟ್ಟುಕೊಟ್ಟರು.

ಅಧ್ಯಾಪಕರಾಗಿ, ಮಾರ್ಗದರ್ಶಕ ವಿದ್ವಾಂಸರಾಗಿ ಹಿರಿಯಣ್ಣನವರು ನೂರಾರು ಮಂದಿಗೆ ನೆರವಾದರು, ಆದರ್ಶವಾದರು, ಅವರು ಎದುರಿಗೆ ತಿಳಿಸಿ ಹೇಳುವಾಗ ಅಥವಾ ಪ್ರಬಂಧದ ಮೇಲೆ ಅಭಿಪ್ರಾಯ ಬರೆಯುವಾಗ ಬಳಸುತ್ತಿದ್ದ ಮಾತುಗಳು ಕಡಿಮೆ. ಮಾತು ಸ್ಫುಟ, ನಿಧಾನ, ಒಂದೊಂದು ಶಬ್ದವೂ ಸ್ಪಷ್ಟವಾಗಿ ಕೇಳುವಂತೆ ಮಾತನಾಡುತ್ತಿದ್ದರು. ಧ್ವನಿಯನ್ನು ಎತ್ತರಿಸಿ ಮಾತನಾಡಿದ್ದೆ ಇಲ್ಲ ಎನ್ನಬಹುದು. ಅವರು ಮಾತನಾಡುವಾಗ ವಿದ್ಯಾರ್ಥಿಗಳು ಗಮನವಿಟ್ಟು ಕೇಳಬೇಕು. ಒಂದು ವಾಕ್ಯ ತಪ್ಪಿದರೆ ಎಷ್ಟೋ ನಷ್ಟವಾಗುತ್ತಿತ್ತು. – ಅಷ್ಟು ಅಡಕವಾದ ಶೈಲಿ ಅವರದು. ತಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದೆಂದರೆ ಅವರಿಗೆ ಸಂತೋಷ. ನಮ್ಮ ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ಯರು ಕಾಲೇಜು ಬಿಟ್ಟು ಹೊಸದರಲ್ಲಿ, ಅವರ ಕವನಗಳನ್ನು ಓದಿದ ಸ್ನೇಹಿತರು ಅವನ್ನು ಹಿರಿಯಣ್ಣನವರಿಗೆ ತೋರಿಸಿದರಂತೆ. ಹಿರಿಯಣ್ಣನವರು ಅವನ್ನು ಮೆಚ್ಚಿಕೊಂಡರು. ನರಸಿಂಹಾಚಾರ್ಯರು ಅವರ ಮನೆಗೆ ಹೋದಾಗ ಕವನಗಳನ್ನು ಅವರಿಂದ ಓದಿಸಿ ಕೇಳಿ ಸಂತೋಷಪಟ್ಟರು. ಅವರ ಎರಡನೆಯ ಕವನ ಸಂಗ್ರಹ ’ಮಾಂದಳಿರಿ’ಗೆ ತಾವೇ ಮುನ್ನುಡಿ ಬರೆದು ಹರಸಿದರು. ನರಸಿಂಹಾಚಾರ್ಯರು ಹೇಳುತ್ತಾರೆ: “ಅವರ ಬಳಿ ಇದ್ದಾಗ ನನಗೆ ದೇವಸ್ಥಾನದಲ್ಲಿದ್ದಂತೆ ಭಾಸವಾಗುತ್ತಿತ್ತು.”

ವಿದ್ಯೆಯನ್ನು ಹೇಗೆ ಗಳಿಸಬೇಕು ಎಂಬುದರಲ್ಲಿ ಮಾತ್ರವಲ್ಲ, ಹೇಗೆ ಬಾಳಬೇಕು, ಹೇಗೆ ಕೆಲಸ ಮಾಡಬೇಕು ಎಂಬುದರಲ್ಲಿಯೂ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಿದ್ದರು. ಅವರು ಸಂಸ್ಕೃತ ಸಂಘ, ಕರ್ನಾಟಕ ಸಂಘ ಇಂತಹ ಸಂಘಗಳಿಗೆ ಅಧ್ಯಕ್ಷರಾಗಿದ್ದರು. ಸಂಘಗಳ ಸಭೆಗಳು ನಡೆದಾಗ ಕಾರ್ಯವಿವರಗಳನ್ನೂ ಭಾಷಣಗಳ ಸಾರಾಂಶಗಳನ್ನೂ ಪುಸ್ತಕದಲ್ಲಿ ಬರೆದಿಡುವ ರೂಢಿ ಆಗ ಇತ್ತು. ಇದನ್ನು ಸಾಮಾನ್ಯವಾಗಿ ವಿದ್ಯಾರ್ಥಿ ಕಾರ್ಯದರ್ಶಿ ಬರೆಯುತ್ತಿದ್ದ. ಹಿರಿಯಣ್ಣನವರು ತಾವು ಮಾಡಿದ ಅಧ್ಯಕ್ಷ ಭಾಷಣದ ಸಾರಾಂಶವನ್ನು ತಾವೇ ಬರೆದು ಕೊಡುತ್ತಿದ್ದರು. ಇದರಿಂದ ಕಾರ್ಯದರ್ಶಿಯ ಕೆಲಸವೂ ಸುಲಭವಾಗುತ್ತಿತ್ತು. ಹಿರಿಯಣ್ಣನವರ ಭಾಷಣವೂ ತಪ್ಪಿಲ್ಲದೆ ವರದಿಯಾಗುತ್ತಿತ್ತು.

ಆಗಿನ ಕಾಲದಲ್ಲಿ ಬಹುಮಂದಿ ವಿದ್ಯಾವಂತರಿಗೆ ಇಂಗ್ಲಿಷರ ಉಡುಪು, ರೀತಿನೀತಿಗಳು ಬಹು ಮೆಚ್ಚುಗೆ. ಅವರನ್ನು ಎಲ್ಲ ರೀತಿಗಳಲ್ಲಿ ಅನುಕರಿಸುತ್ತಿದ್ದರು. ಪಂಚೆಯುಟ್ಟುಕೊಂಡು ಕಾಲೇಜಿಗೆ ಬರುತ್ತಿದ್ದ ಪ್ರೊಫೆಸರುಗಳು ಅತಿ ವಿರಳ, ಹಿರಿಯಣ್ಣನವರ ಕಚ್ಚೆಪಂಚೆ, ಕೆನೆಬಣ್ಣದ ನಿಲುವಂಗಿ, ಸರಿಗೆ ಇಲ್ಲದೆ ರುಮಾಲು – ಈ ಉಡುಪಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಕಾಲಿಗೆ ಪೂನಾ ಜೋಡು. ಬಿಳುಬಿಳುಪಿನ ಪಂದೆ, ಸ್ವಲ್ಪವೂ ಕರೆ ಇಲ್ಲದ ಉಡುಪು.

ಕೆಲಸ ಮಾಡದಿರುವುದು ಶಾಪ

ಸಾಮಾನ್ಯವಾಗಿ ಯಾರಾದರೂ ಕೆಲಸದಿಂದ ನಿವೃತ್ತರಾದರೆ ಇನ್ನು ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂದು ಜನರ ನಿರೀಕ್ಷಣೆ. ಬಹುಮಂದಿ ಮಾಡುವುದೂ ಹಾಗೆಯೇ. ಆದರೆ ಹಿರಿಯಣ್ಣನವರ ಭಾವನೆ ಅದಲ್ಲವೇ ಅಲ್ಲ. ಅವರೇ ತಮ್ಮ ‘ಭಾರತೀಯ ತತ್ವಶಾಸ್ತ್ರದ ರೂಪ ರೇಖೆ’ ಎಂಬ ಪುಸ್ತಕದಲ್ಲಿ ಭಗವದ್ಗೀತೆ ಉಪದೇಶವನ್ನು ಹೀಗೆ ವಿವರಿಸಿದ್ದಾರೆ.

‘ನಾವು ವಿಶೇಷವಾಗಿ ಗಮನಿಸಬೇಕಾದದ್ದು ಈ ಅಂಶವನ್ನು. ಮನುಷ್ಯ ಪರಿಪೂರ್ಣ ಸ್ಥಿತಿಯನ್ನು ಮುಟ್ಟಿದಾಗಲೂ ಕೆಲಸ ಮಾಡಲೇಬೇಕು. ಮನಶ್ಯಾಂತಿಗೆ ಕೆಲಸದಿಂದ ಭಂಗ ಬರುವುದಿಲ್ಲ. ಗೀತೆ ಕರ್ಮಕ್ಕೆ, ಕೆಲಸಕ್ಕೆ ಎಷ್ಟು ಉನ್ನತ ಸ್ಥಾನ ಕೊಡುತ್ತದೆ ಎಂಬುದನ್ನು ಇಲ್ಲಿ ಕಾಣುತ್ತೇವೆ. ಗೀತೆಯ ಉಪದೇಶದ ಪ್ರಕಾರ ಕೆಲಸ ಮಾಡದೆ ಜಡವಾಗಿರುವುದು ಕೆಟ್ಟ ಕೆಲಸ ಮಾಡಿದಷ್ಟೇ ಪಾಪಕರ.’

ಅಮೂಲ್ಯ ಬರಹ

ಕೆಲಸದಿಂದ ನಿವೃತ್ತರಾದ ಮೇಲೆ ಹಿರಿಯಣ್ಣನವರು ಓದುವುದನ್ನು ಕಡಿಮೆ ಮಾಡಲಿಲ್ಲ, ಬರೆಯುವುದನ್ನು ಹೆಚ್ಚು ಮಾಡಿದರು. ’ಭಾರತೀಯ ತತ್ವಶಾಸ್ತ್ರದ ರೂಪರೇಖೆ’ ಎಂಬ ಗ್ರಂಥ ೧೯೩೨ರಲ್ಲಿ ’ಭಾರತೀಯ ತತ್ವಶಾಸ್ತ್ರದ ಸಾರ’ (ಎಸೆನ್ಷಿಯಲ್ಸ್ ಆಫ್ ಇಂಡಿಯಾನ್ ಫಿಲಾಸಫಿ) ಎಂಬ ಗ್ರಂಥ ೧೯೪೯ರಲ್ಲಿ ಪ್ರಕಟವಾದವು. ಇವನ್ನು ಇಂಗ್ಲೆಂಡಿನ ಪ್ರಕಟಣ ಸಂಸ್ಥೆಯೊಂದು ಪ್ರಕಟಿಸಿತು. ಪ್ರಕಟವಾದ ಕೆಲವೇ ದಿನಗಳಲ್ಲಿ ಇವು ಬಹು ಶ್ರೇಷ್ಠ ಪುಸ್ತಕಗಳು ಎಂದು ನಮ್ಮ ದೇಶದ ವಿದ್ವಾಂಸರಿಂದ ಮಾತ್ರವಲ್ಲ, ಯುರೋಪ್-ಅಮೆರಿಕಗಳ ವಿದ್ವಾಂಸರಿಂದ ಮೆಚ್ಚಿಗೆ ಪಡೆದವು.’ ಅವರು ಬರೆದ ಅನೇಕ ಪುಸ್ತಕಗಳು ಮೆಚ್ಚಿಗೆ ಪಡೆದವು.’ ಅವರು ಬರೆದ ಅನೇಕ ಪುಸ್ತಕಗಳು ಅವರು ತೀರಿಕೊಂಡಮೇಲೆ ಪ್ರಕಟವಾದವು. ನಮ್ಮ ದೇಶದ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಓದಲೇಬೇಕಾದವು ಎನ್ನುವಂತಹ ಪುಸ್ತಕಗಳು ಅವು. ಜೊತೆಗೆ ’ಕಲೆಯ ಅನುಭವ’ (ಆರ್ಟ್ ಎಕ್ಸ್ ಪೀರಿಯನ್ಸ್) ಎಂಬ ಪುಸ್ತಕವನ್ನೂ ಬರೆದರು. ಸೌಂದರ್ಯ ಎಂದರೇನು, ಸೌಂದರ್ಯವನ್ನು ಕಂಡಾಗ ನಮಗೆ ಆಗುವ ಆನಂದ ಎಂತಹುದು, ಕಲೆ ಏನು ಮಾಡುತ್ತದೆ, ಈ ವಿಷಯವಾಗಿ ನಮ್ಮ ಹಿಂದಿನವರು ಯಾವ ಅಭಿಪ್ರಾಯಗಳನ್ನು ಹೊಂದಿದ್ದರು – ಇವನ್ನೆಲ್ಲ ವಿವರಿಸುವ ಹತ್ತು ಪ್ರಬಂಧಗಳು ಈ ಪುಸ್ತಕದಲ್ಲಿವೆ.

ಹಿರಿಯಣ್ಣನವರು ಮೈಸೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದರೆಂದು ತಿಳಿಯುತ್ತಲೇ ಅನೇಕ ವಿಶ್ವವಿದ್ಯಾನಿಲಯಗಳು ಅವರನ್ನು ಆಹ್ವಾನಿಸಿದರು. ಆದರೆ ಅವರು ಮತ್ತೆ ಕೆಲಸಕ್ಕೆ ಸೇರುವ ಯೋಚನೆ ಮಾಡಲಿಲ್ಲ. ನಿರಾಡಮಬರವಾದ ಜೀವನ ಅವರದು. ಹಣ ಪದವಿಗಳ ಮೋಹ ಇರಲಿಲ್ಲ. ಓದು-ಚಿಂತನೆ-ಬರಹ ಇವುಗಳಲ್ಲಿ ತಮ್ಮ ಕಾಲವನ್ನು ಕಳೆಯಲು ತೀರ್ಮಾನಿಸಿದರು. ಅವರಿಗೆ ಒಬ್ಬಳೇ ಮಗಳು, ಆಕೆಗೂ ಮದುವೆಯಾಗಿ ಮೈಸೂರಿನಲ್ಲಿದ್ದರು. ಹಿರಿಯಣ್ಣವರು ಮೈಸೂರಿನಲ್ಲೇ ನಿಂತರು.

ಇನ್ನೂ ವಿದ್ಯಾರ್ಥಿಯೇ

ಹಿರಿಯಣ್ಣನವರು ಸ್ವತಃ ಅಸಾಧಾರಣ ವಿದ್ವಾಂಸರು. ಅವರಿಂದ ವಿಷಯಗಳನ್ನು ತಿಳಿದಿಕೊಳ್ಳುವ ಎಷ್ಟೋ ಜನ ವಿದ್ವಾಂಸರು ಬರುತ್ತಿದ್ದರು. ಡಾಕ್ಟರ್ ರಾಧಾಕೃಷ್ಣನ್ ಅವರಂತಹವರೂ ಹಿರಿಯಣ್ಣನವರ ಮನೆಗೆ ಬಂದು ತತ್ವಶಾಸ್ತ್ರದ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಆದರೆ ಹಿರಿಯಣ್ಣನವರಿಗೆ ತಾವು ತಿಳಿದಿಕೊಳ್ಳಬೇಕಾದದ್ದು ಇನ್ನೂ ಇದೆ ಎಂಬ ಭಾವನೆ. ಸಂಸ್ಕೃತ ಮತ್ತು ತತ್ವಶಾಸ್ತ್ರಗಳ ಪಾಠ ಹೇಳಿ ನಿವೃತ್ತರಾದ ಪ್ರೊಫೆಸರರು ಒಬ್ಬ ಗುರುಗಳನ್ನು ಹುಡುಕಿಕೊಂಡರು. ಇವರು ಮಹಾ ವಿದ್ವಾನ್ ಪಾಲಘಾಟ್ ನಾರಾಯಣಶಾಸ್ತ್ರಿಗಳು ಎಂಬ ಬಹುದೊಡ್ಡ ವಿದ್ವಾಂಸರು. ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಹಿರಿಯಣ್ಣನವರು ತತ್ವಶಾಸ್ತ್ರದಲ್ಲಿ ಚರ್ಚೆಮಾಡಬೇಕೆನಿಸಿದ ಅಂಶಗಳನ್ನು ಅವರ ಮುಂದೆ ಇಡುವರು. ಇಬ್ಬರೂ ಮಹಾವಿದ್ವಾಂಸರು ಒಟ್ಟಿಗೆ ಕುಳಿತು ಚರ್ಚೆಮಾಡಿ ವಿಷಯ ಸ್ಪಷ್ಟಮಾಡಿಕೊಳ್ಳುವರು. ಹಿರಿಯಣ್ಣನವರೇ ನಾರಾಯಣಶಾಸ್ತ್ರಿಗಳ ಮನೆಗೆ ಹೋಗುವರು. ಏಕೆಂದರೆ ಶಿಷ್ಯರು ಗುರುಗಳ ಬಳಿಗೆ ಹೋಗಬೇಕಾದದ್ದು ಗೌರವ ವಿನಯ.

ಮಾರ್ಗದರ್ಶಕರು

ನಿವೃತ್ತರಾದ ನಂತರ ಹಿರಿಯಣ್ಣನವರು ತಾವೇ ಒಂದು ಗ್ರಂಥಭಂಡಾರದಂತಾದರು. ಅವರಿಂದ ವಿಷಯಗಳನ್ನು ತಿಳಿದುಕೊಳ್ಳಲು ಬರುವವರು ಎಷ್ಟು ಮಂದಿಯೋ! ಸಂತೋಷವಾಗಿ ಜ್ಞಾನದಾನ ಮಾಡುವರು ಹಿರಿಯಣ್ಣನವರು. ಆದರೆ ಎಲ್ಲದರಲ್ಲಿಯೂ ಅವರದು ಶಿಸ್ತು, ಅಚ್ಚುಕಟ್ಟು. ಅವರ ಕೊಠಡಿಯನ್ನು ನೋಡುವುದೇ ಒಂದು ಸಂತೋಷ ಎನ್ನುತ್ತಾರೆ ಅವರನ್ನು ಕಂಡಿದ್ದವರು. ಅವರ ಕೊಠಡಿ, ಮೇಜು, ನೆಲ ಎಲ್ಲ ಚೊಕ್ಕಟವಾಗಿರಬೇಕು. ಅವರು ಸಾಮಾನ್ಯವಾಗಿ ಮನೆಯ ಮುಂದುಗಡೆಯ ಕೊಠಡಿಯಲ್ಲಿರುತ್ತಿದ್ದರು. ನೆಲದ ಮೇಲೆ ಒಂದು ಸೊಗಸಾದ ಚಾಪೆ, ಒಂದು ಸಣ್ಣ ಇಳಿಜಾರು ಡೆಸ್ಕು, ಒಂದು ಅರ್ಧ ಆರಾಮ ಕುರ್ಚಿ, ಹಿರಿಯಣ್ಣನವರು ಸಾಮಾನ್ಯವಾಗಿ ಚಾಪೆಯಮೇಲೆ ಕುಳಿತು, ಡೆಸ್ಕಿನ ಮೇಲೆ ಪುಸ್ತಕಗಳನ್ನಿಟ್ಟುಕೊಂಡು ಓದುವರು-ಬರೆಯುವರು. ಅವರ ಹಿಂದುಗಡೆ ಒಂದು ಕಪಾಟು. ಪುಸ್ತಕಗಳು, ಫೈಲುಗಳೂ ಎಲ್ಲವನ್ನೂ ಅದರಲ್ಲಿ ಓರಣವಾಗಿ ಜೋಡಿಸಿಟ್ಟರುವರು. ಬಂದ ಅತಿಥಿಯನ್ನು ಅರ್ಧ ಆರಾಮಕುರ್ಚಿಯಲ್ಲಿ ಕೂಡಿಸುವರು. ಕೊಠಡಿಯಲ್ಲಿ ಒಂದು ಬೆಂಚು, ಹೆಚ್ಚು ಜನ ಬಂದರೆ ಅದರ ಮೇಲೆ ಕೊಡುವರು.

ಸಾಮಾನ್ಯವಾಗಿ ಅವರನ್ನು ಕಾಣಲು ಬರುವವರು ಮೊದಲೇ ತಿಳಿಸಿ ಬರುವರು. ಬರುವವರು ಯಾರೇ ಆಗಲಿ, ಹಿರಿಯಣ್ಣನವರು ಆ ಹೊತ್ತಿಗೆ ಸರಿಯಾಗಿ ಗೇಟಿನ ಬಳಿ ನಿಂತಿರುವರು. ಕೈಯಲ್ಲಿ ಒಂದು ಪುಸ್ತಕ, ಪೆನ್ಸಿಲ್-ಬಂದವರನ್ನು ಕೊಠಡಿಗೆ ಕರೆದುಕೊಂಡು ಹೋಗುವರು. ಸಾಮಾನ್ಯವಾಗಿ ಬಂದವರನ್ನು ಅರ್ಧ ಆರಾಮಕುರ್ಚಿಯಲ್ಲಿ ಕೂಡಿಸಿ ತಾವು ಚಾಪೆಯ ಮೇಲೆ ಕುಳಿತುಕೊಳ್ಳಲು ಅಪೇಕ್ಷೆ ಪಟ್ಟರೆ ಇಬ್ಬರೂ ಚಾಪೆಯ ಮೇಲೆ ಕುಳಿತುಕೊಳ್ಳಲು ಅಪೇಕ್ಷೆ ಪಟ್ಟರೆ ಇಬ್ಬರೂ ಚಾಪೆಯ ಮೇಲೆ ಕುಳಿತುಕೊಳ್ಳಲು ಅಪೇಕ್ಷೆ ಪಟ್ಟರೆ ಇಬ್ಬರೂ ಚಾಪೆಯ ಮೇಲೆ ಕೂಡುವರು. ಬಂದವರು ತಾವು ಯಾವ ವಿಷಯ ಕೇಳಬೇಕೆಂದಿದ್ದಾರೆ ಎಂದು ಮೊದಲೇ ತಿಳಿಸಿರುವರು. ಕುಳಿತುಕೊಂಡ ನಂತರ ಹಿರಿಯಣ್ಣನವರು ಕುಶಲಪ್ರಶ್ನೆ, ಬೇರೆ ಮಾತುಗಳು ಇವಕ್ಕೆ ಅವಕಾಶ ಕೊಡುತ್ತಿರಲಿಲ್ಲ. ನೇರವಾಗಿ ಭೇಟಿಯ ವಿಷಯಕ್ಕೆ ಬರುವರು. ’ ಇಂತಹ ಪುಸ್ತಕದ ಇಂತಹ ಪುಟದಲ್ಲಿ  ಈ ರೀತಿ ಹೇಳಿದೆ, ಇಂತಹ ಕಡೆ ಈ ಪದವನ್ನು ಈ ಅರ್ಥದಲ್ಲಿ ಬಳಸಿದೆ’ ಎಂದು ನಿಖರವಾಗಿ ಹೇಳುವರು. ವಿಷಯವನ್ನು ತಿಳಿಸುವುದರಲ್ಲಿಯೂ ಅವರದು ವಿಶೇಷ ನಯ. “ನೀವು ಹೇಳುವುದು ತಪ್ಪು” ಎಂದು ಅವರು ಹೇಳುವವರೇ ಅಲ್ಲ. ” ಈ ಅಂಶವನ್ನು ನೀವು ಪರಿಶೀಲಿಸಬೇಕು ಎಂದು ಕಾಣುತ್ತದೆ”, ಈ ಪುಸ್ತಕ ಈ ಪುಟದಲ್ಲಿ ಹೀಗೆ ಹೇಳಿರುವುದನ್ನು ತಾವು ಯೋಚನೆ ಮಾಡಿ ನೋಡಬೇಕು ಎಂದು ತೋರುತ್ತದೆ’ ಹೀಗೆ ಸೂಚನೆ ಕೊಡುವರು. ಭೇಟಿಯ ಕೆಲಸ ಮುಗಿದ ಮೇಲೆ  ಉಳಿದ ಮಾತುಕತೆ.

ಹಿರಿಯಣ್ಣನವರಿಗೆ  ಆಡಂಬರ, ಹೊಗಳಿಕೆ ಎಂದರಾಗದು . ತಮ್ಮ ವಿಷಯ ಹೆಚ್ಚು ಮಾತನಾಡುವವರೇ ಅಲ್ಲ. ಪುಸ್ತಕವನ್ನು ಬರೆದರೆ ಮತ್ತೆ – ಮತ್ತೆ , ಮತ್ತೆ – ಮತ್ತೆ ಓದಿ ತಿದ್ದಿ ಸರಿಪಡಿಸುವರು ಹೀಗಾಗಿ ಒಂದು ಪುಸ್ತಕವನ್ನು ಮೊದಲ ಸಲ ಬರೆದು ಮುಗಿಸಿ ವರ್ಷಗಟ್ಟಲೆ ಕಳೆದರೂ , ಅದನ್ನು ಓದಿ ನೋಡಿದ ವಿದ್ವಾಂಸರು ಚೆನ್ನಾಗಿದೆ ಎಂದರೂ ಅದು ಪ್ರಕಟವಾಗಲು ವರ್ಷಗಳೇ ಹಿಡಿಯುತ್ತಿತ್ತು. ಆಗಲೇ ಹೇಳೀದಂತೆ ಎಷ್ಟೋ ಪುಸ್ತಕಗಳನ್ನು ಅವರು ತಿರಿಕೊಂಡ ಮೇಲೆ ಇತರರು ಪ್ರಕಟಿಸಿದರು. ತಾನು ಬರೆದದ್ದು ಕೂಡಲೇ ಅಚ್ಚಾಗಬೇಕು, ತಾನು ಇಷ್ಟು ಪುಸ್ತಕಗಳನ್ನು ಬರೆದೆ ಎಂಬ ಸಂಖ್ಯೆ ಏರಬೇಕು ಎಂಬ ತವಕ ಅವರಿಗಿರಲಿಲ್ಲ. ಬರೆದದ್ದು ತಪ್ಪಿಲ್ಲದೆ ಇರಬೇಕು ಎಂಬುದೇ ಅವರ ಅಪೇಕ್ಷೆ.

ತತ್ವಶಾಸ್ತ್ರ ಅನುಭವಕ್ಕೆ ಬಂದಿರಬೇಕು

ಡಿ.ವಿ. ಗುಂಡಪ್ಪನವರು ಒಂದು ಸ್ವಾರಸ್ಯವಾದ ಪ್ರಸಂಗವನ್ನು ವಿವರಿಸಿದ್ದಾರೆ.

ವಿದ್ದಾಂಸರೊಬ್ಬರು ಹಿರಿಯಣ್ಣನವರನ್ನು ಕಾಣಲು ಬಂದರು. ಹಿರಿಯಣ್ಣನವರು ಅವರನ್ನು ಬರಮಾಡಿಕೊಂಡು ಕೂರಿಸಿದರು. ಬಂದ ವಿದ್ವಾಂಸರು ತಾವು ಬರೆದ ಪುಸ್ತಕ ಒಂದನ್ನು ಹಿರಿಯಣ್ಣನವರ ಕೈಗೆ ಕೊಟ್ಟರು. ಅನಂತರ ತಮ್ಮ ಪಾಂಡಿತ್ಯ, ಪುಸ್ತಕವನ್ನು ಬರೆಯಲು ತಾವು ಪಟ್ಟ ಶ್ರಮ, ಓದಿದ ಪುಸ್ತಕಗಳು, ಆ ಪುಸ್ತಕಗಳನ್ನು ಬರೆದವರ ಅಭಿಪ್ರಾಯಗಳು ತಪ್ಪು ಎಂದು ತಾವು ತೋರಿಸಿಕೊಟ್ಟದ್ದು, ತಮ್ಮ ಪುಸ್ತಕಗಳನ್ನು ಓದಿದ ವಿದ್ವಾಂಸರು ಅದನ್ನು ಹೊಗಳಿದ್ದು ಎಲ್ಲವನ್ನೂ ಹೇಳಿಕೊಂಡರು. ಹಿರಿಯಣ್ಣನವರು ಅವರು ಹೇಳಿದುದೆಲ್ಲವನ್ನೂ ಕೇಳಿದರು. ವಿದ್ವಾಂಸರು ಮಾತು ಮುಗಿಸಿ ಒಂದೆರಡು ನಿಮಿಷ ಸುಮ್ಮನಿದ್ದರು. ಹಿರಿಯಣ್ಣನವರೂ ಸುಮ್ಮನಿದ್ದರು. ವಿದ್ವಾಂಸರು ಎದ್ದುನಿಂತರು. ಹಿರಿಯಣ್ಣನವರು ಎದ್ದು ನಿಂತು ಅವರು ಕೊಟ್ಟಿದ್ದ ಪುಸ್ತಕವನ್ನು ಹಿಂದಕ್ಕೆ ಕೊಟ್ಟರು. ವಿದ್ವಾಂಸರು ಅದನ್ನು ತೆಗೆದುಕೊಂಡರು. ಹಿರಿಯಣ್ಣನವರು ನಮಸ್ಕಾರ ಹೇಳಿ ಬೀಳ್ಕೋಟ್ಟರು.

ತತ್ವಶಾಸ್ತ್ರ ಬರಿಯ ಅಭ್ಯಾಸಕ್ಕಲ್ಲ, ಪಾಠ ಹೇಳುವುದಕ್ಕಲ್ಲ, ಅದು ಹೇಳಿಕೊಡುವುದನ್ನು ಜೀವನದಲ್ಲಿ ಆಚರಣೆಗೆ ತರಬೇಕು, ಇಲ್ಲವಾದರೆ ವಿದ್ವಾಂಸ ನಿಜವಾಗಿ ತತ್ವಶಾಸ್ತ್ರಜ್ಞನಾಗುವುದಿಲ್ಲ ಎಂದು ಹಿರಿಯಣ್ಣನವರ ಅಭಿಪ್ರಾಯ. ಅದರಿಂದಲೇ ಅವರಿಗೆ ಆ ವಿದ್ವಾಂಸರ ಮಾತು-ರೀತಿ ಒಪ್ಪಿಗೆಯಾಗದೆ ಹೋಯಿತು. ಅವರು ಬರೆದ ಪುಸ್ತಕವನ್ನೂ ಹಿಂದಿರಿಗಿಸಿದರು. ಅವರು ದ್ವೈತ ಸಿದ್ದಾಂತವನ್ನು ಅಧ್ಯಯನ ಮಾಡಬೇಕೆಂದು ಆಪೇಕ್ಷಿಸಿದರು. ಅದ್ವೈತ ಸಿದ್ಧಾಂತದ ಅಭ್ಯಾಸ ಮಾಡಿದ್ದರು, ಅದನ್ನು ಅನುಭವಕ್ಕೆ ತಂದುಕೊಂಡಿದ್ದರು, ದ್ವೈತ ಸಿದ್ಧಾಂತವನ್ನು ಸರಿಯಾದ ವಿದ್ವಾಂಸರ ಬಳಿ ಅಧ್ಯಯನ ಮಾಡಬೇಕು ಎಂಬ ಅಪೇಕ್ಷೆಯಿಂದ ಡಾಕ್ಟರ್ ಡಿ.ವಿ. ಗುಂಡಪ್ಪನವರನ್ನು ಕೇಳಿದರಂತೆ : ” ನನಗೆ ದ್ವೈತ ಸಿದ್ಧಾಂತರದ ಸ್ವಾನುಭವ ಸಾಲದು. ಅದನ್ನು ನಾನು ಅನುಭವಕ್ಕೆ ತಂದುಕೊಳ್ಳಬೇಕಾಗಿದೆ. ಅನುಭವ ಮಾಡಿಕೊಡಬಲ್ಲವರನ್ನು ಹುಡುಕುತ್ತಿದ್ದೇನೆ. ನಿಮಗೆ ಅಂತಹ ವಿದ್ವಾಂಸರ ಪರಿಚಯವಿದ್ದರೆ ಹೇಳಿ.” ಡಿ.ವಿ.ಜಿ. ಒಬ್ಬಿಬ್ಬರು ವಿದ್ವಾಂಸರ ಹೆಸರು ಹೇಳಿದರು.

ಹಿರಿಯಣ್ಣನವರು ಕೇಳಿದರು: ‘ಅವರು ಪುಸ್ತಕದಿಂದ ಪಾಠ ಹೇಳುವವರೋ ಅನುಭವದಿಂದ ಹೇಳುವವರೋ?’

ಗುಂಡಪ್ಪನವರನ್ನು ಉತ್ತರ ಕೊಡುವಂತಿರಲಿಲ್ಲ. ಏಕೆಂದರೆ ಬಹು ಮಂದಿ ತತ್ವಶಾಸ್ತ್ರದ ಪುಸ್ತಕಗಳನ್ನೆಲ್ಲ ಓದಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಆದರೆ ತಾವು ಓದಿದುದನ್ನು ಸ್ವಂತ ಜೀವನದಲ್ಲಿ ಪರೀಕ್ಷಿಸಿ ಅನುಭವಕ್ಕೆ ತಂದುಕೊಂಡಿರುವುದಿಲ್ಲ. ಹಿರಿಯಣ್ಣನವರು ಹೇಳಿದರು: ’ಪುಸ್ತಕದಿಂದ ತಿಳಿದುಕೊಳ್ಳಬಹುದಾದದ್ದನ್ನು ನಾನೂ ಓದಿ ತಿಳಿದುಕೊಂಡಿದ್ದೇನೆ. ನನಗೆ ಬೇಕಾದದ್ದು ತತ್ವಶಾಸ್ತ್ರದಿಂದ ತಿಳಿದುಕೊಂಡದ್ದನ್ನು ಆಚರಿಸಿ ಅರಗಿಸಿಕೊಂಡಿರುವವರು.’

ನಿಜವಾದ ವಿದ್ವತ್ತು ಜೀವನಕ್ಕೆ ಬೆಳಕಾಗಬೇಕು ಎಂದು ಅವರ ಅಭಿಪ್ರಾಯ. ಅವರ ವಿದ್ವತ್ತು ಅಂತಹುದೇ.

ವಿದ್ಯಾರ್ಥಿಗಳಿಗೆ ಆಶ್ರಯ

ಹಿರಿಯಣ್ಣನವರು ಬಹು ದೊಡ್ಡ ವಿದ್ವಾಂಸರು. ತುಂಬಾ ಶಿಸ್ತಿನವರು, ಹೆಚ್ಚು ಮಾತನಾಡುತ್ತಿರಲಿಲ್ಲ. ಅವರ ಮಾತು-ರೀತಿ ಬಹು ಗಂಭೀರ ಎಂದೆಲ್ಲ ಹೇಳಿದಾಗ ಅವರು ಇರತರೊಂದಿಗೆ ಆತ್ಮೀಯರಾಗಿರುತ್ತಿದ್ದರೆ, ಸ್ನೇಹ-ಅಭಿಮಾನ-ವಿಶ್ವಾಸಗಳಿಂದ ನಡೆದುಕೊಳ್ಳಬಲ್ಲವರಾಗಿದ್ದರೆ, ಅಥವಾ ಹಿಮದ ಗಡ್ಡೆಯಂತೆ ಇರುತ್ತಿದ್ದರೆ ಎಂಬ ಪ್ರಶ್ನೆ ಮೂಡಬಹುದು. ಅವರಲ್ಲಿ ಮಾತು ಕಡಿಮೆ. ಪ್ರೀತಿ ವಿಶ್ವಾಸಗಳನ್ನು ಪ್ರದರ್ಶಿಸುತ್ತಿರಲಿಲ್ಲ. ಆದರೆ ಅವರದು ಮೃದು ಮನಸ್ಸು. ಕಷ್ಟದಲ್ಲಿರುವವರಿಗೆ  ಧಾರಾಳವಾಗಿ ಸಹಾಯ ಮಾಡುವ ಸ್ವಭಾವ. ಆದರೆ ಸಹಾಯ ಮಾಡುವುದರಲ್ಲಿಯೂ ಅವರದು ವೈಶಿಷ್ಟ್ಯ.

ಒಬ್ಬ ವಿದ್ಯಾರ್ಥಿಶ್ರದ್ಧಾವಂತ.ಆದರೆ ಬಡವ ಎಂದು ಅವರಿಗೆ ತಿಳಿದರೆ ಅಂತಹ ವಿದ್ಯಾರ್ಥಿಗೆ ಪ್ರತಿ ತಿಂಗಳೂ ಹಣ ಕೊಡುತ್ತಿದ್ದರು. ಆದರೆ ಒಂದು ಷರತ್ತು – ತನಗೆ ಹಿರಿಯಣ್ಣನವರು ಸಹಾಯ ಮಾಡುತ್ತಿದ್ದಾರೆ ಎಂದು ಆತ ಯಾರಿಗೂ ಹೇಳಕೂಡದು. 

ನಿಮಗೆ ನಾನು ಹಣಕೊಡುವ ಸಂಗತಿಯನ್ನು ಯಾರಗೂ ತಿಳಿಸಬಾರದು ಅಂತ ಹೇಳಿದ್ದೆ

ಒಮ್ಮೆ ಒಂದು ಸಂಗತಿ ನಡೆಯಿತು. ಇದು ಹಿರಿಯಣ್ಣನವರ ಸ್ವಭಾವವನ್ನು ಬಹು ಚೆನ್ನಾಗಿ ತೋರಿಸುತ್ತದೆ.

ಸಂಸ್ಕೃತ ಎಂ.ಎ. ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಓದುತ್ತಿದ್ದ. ಹಿರಿಯಣ್ಣನವರು ಅವನಿಗೆ ಪ್ರತಿ ತಿಂಗಳೂ ಇಷ್ಟು ಹಣ ಎಂದು ಕೊಡುತ್ತಿದ್ದರು. ಅವನ ಶಿಕ್ಷಣ ಮುಗಿಯಲು ಇನ್ನು ಮೂರು ತಿಂಗಳಿತ್ತು.

ಅವನ ಸ್ನೇಹಿತನೊಬ್ಬ, ಅವನೂ ವಿದ್ಯಾರ್ಥಿಯೆ. ಕಷ್ಟದಲ್ಲಿದ್ದ, ಮೊದಲನೆಯ ವಿದ್ಯಾರ್ಥಿಗೆ ತನ್ನ ಕಷ್ಟವನ್ನು ಹೇಳಿಕೊಂಡ.ಅವನು, ಹಿರಿಯಣ್ಣನವರು ತನಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿ, ’ನೀನು ಹೋಗಿ ಅವರಿಗೆ ತನ್ನ ಕಷ್ಟ ಹೇಳಿಕೋ, ಅವರದು ಒಳ್ಳೆಯ ಮನಸ್ಸು. ನಿನಗೆ ಸಹಾಯ ಮಾಡುತ್ತಾರೆ’ ಎಂದ.

ಎರಡನೆಯ ವಿದ್ಯಾರ್ಥಿ ಹಿರಿಯಣ್ಣನವರ ಬಳಿ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡ. ತನ್ನ ಸ್ನೇಹಿತನ ಹೆಸರು ಹೇಳಿ, ” ಆತನಿಗೆ ತಾವು ಸಹಾಯ ಮಾಡುತ್ತಿದ್ದೀರಂತೆ, ಆತ ಹೇಳಿದ. ನನಗೂ ತಾವು ಸಹಾಯ ಮಾಡಿ ಕಾಪಾಡಬೇಕು” ಎಂದು ಬೇಡಿದ.

“ಆಗಲಿ” ಎಂದರು ಹಿರಿಯಣ್ಣ. ಅವನಿಗೆ ಬೇಕಾದ ಹಣಕೊಟ್ಟು ಸಹಾಯ ಮಾಡಿದರು. ಮೊದಲನೆಯ ವಿದ್ಯಾರ್ಥಿ ಅವರ ಮುಂದಿನ ತಿಂಗಳು ಸಹಾಯ ಪಡೆಯಲು ಹೋದ. ಪ್ರತಿ ತಿಂಗಳೂ ಕೊಡುವಂತೆ ಹಿರಿಯಣ್ಣ ಅವನ ಕೈಗೆ ಒಂದು ಪೊಟ್ಟಣ ಕೊಟ್ಟರು.

ಹುಡುಗ ಪೊಟ್ಟಣ ಬಿಚ್ಚಿ ನೋಡಿದ. ಆಶ್ವರ್ಯವಾಯಿತು, ಅವನಿಗೆ ಮೂತು ತಿಂಗಳ ಹಣವನ್ನೂ ಹಿರಿಯಣ್ಣ ಕೊಟ್ಟಿದ್ದರು.

’ಮೂರು ತಿಂಗಳ ಹಣ ಇದೆಯಲ್ಲ!’ ಅವನು ಆಶ್ಚರ್ಯದಿಂದ ಕೇಳಿದ.

’ಹೌದು. ನಿಮಗೆ ನಾನು ಹಣಕೊಡುವ ಸಂಗತಿಯನ್ನು ಯಾರಿಗೂ ತಿಳಿಸಬಾರದು ಅಂತ ಹೇಳಿದ್ದೆ. ನೀವು ನಿಮ್ಮ ಸ್ನೇಹಿತನಿಗೆ ಹೇಳಿಬಿಟ್ಟರಿ. ಒಳ್ಳೆಯದು. ನಾನು ಮಾತುಕೊಟ್ಟಿದ್ದಂತೂ ನಡೆದಿದೆಯಲ್ಲ!’

ಡಾಕ್ಟರ್ ಜಿ.ಮರುಳಸಿದ್ಧಯ್ಯ ಎನ್ನುವವರು  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಧ್ಯಾಪಕರಾಗಿದ್ದರು ಅವರು ತಮ್ಮ ಅನುಭವವನ್ನು ಹೇಳಿದ್ದಾರೆ.

ಮರುಳಸಿದ್ಧಯ್ಯನವರು ಸಂಶೋಧನೆಯಲ್ಲಿ ನಿರತರಾಗಿದ್ದಾಗ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಯಿತು. ಅವರು ಹಿರಿಯಣ್ಣನವರ ಮಾರ್ಗದರ್ಶನ ಪಡೆಯಬೇಕು ಎಂದು ಅನೇಕರು ಸಲಹೆ ಮಾಡಿದರು. ಮರುಳಸಿದ್ದಯ್ಯನವರು ಅವರನ್ನು ದೂರದಿಂದ ಕಂಡಿದ್ದರು. ತುಂಬಾ ಶಿಸ್ತಿನ ಮನುಷ್ಯ. ಆತ್ಮೀಯತೆ ಇಲ್ಲ ಎಂದೆಲ್ಲ ಕೇಳಿದ್ದರು. ಆದರೂ ಧೈರ್ಯಮಾಡಿ ಅವರ ಮನೆಗೆ ಹೋಗಿ ಅವರನ್ನು ಕಂಡರು. ತಮಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿದರು. ಮೊದಲು ಹಿರಿಯಣ್ಣನವರು ಒಪ್ಪಲಿಲ್ಲ. ’ ನಿಮ್ಮ ಇಲಾಖೆಯಲ್ಲಿ ವಿದ್ವಾಂಸರಿದ್ದಾರೆ. ನಾನು ಮುದುಕ, ನನಗೇಕೆ ತೊಂದರೆ ಕೊಡುತ್ತೀರಿ?’ ಎಂದು ಕೇಳಿದರು. ಆದರೆ ಮರುಳಿಸಿದ್ಧಯ್ಯನವರ ಕಣ್ಣುಗಳಲ್ಲಿ ನೀರು ಕಾಣುತ್ತಲೇ ಒಪ್ಪಿಕೊಂಡರು. ಮರುಳಸಿದ್ಧಯ್ಯನವರು ತಾವು ಬರೆದಿದ್ದ ಮುನ್ನೂರು ಪುಟಗಳ ಪ್ರಬಂಧವನ್ನು ತೆಗೆದುಕೊಂಡು ಹೋಗಿ ಕೊಟ್ಟರು. ಹಿರಿಯಣ್ಣನವರು ಪ್ರತಿ ಪಂಕ್ತಿಯನ್ನೂ ಓದಿದರು. ಎಲ್ಲೆಲ್ಲಿ ಬದಲಾವಣೆ ಆಗಬೇಕು ಎಂದು ಸೂಚಿಸಿದರು. ಪ್ರಬಂಧ ಟೈಪ್ ಆದ ಮೇಲೆ ಮರುಳಸಿದ್ಧಯ್ಯನವರು ಅದನ್ನು ತೋರಿಸಿ ಹಿರಿಯಣ್ಣನವರ ಆಶೀರ್ವಾದ ಪಡೆಯಲು ಹೋದರು. ಹಿರಿಯಣ್ಣನರು ಮತ್ತೆ ಪ್ರಬಂಧವನ್ನೆಲ್ಲ ಓದಿ ಟೈಪ್ ಆಗುವಾಗ ನುಸುಳಿದ್ದ ತಪ್ಪುಗಳನ್ನು ಸಹ ತಿದ್ದಿದರು. ಮರುಳಸಿದ್ಧಯ್ಯನವರಿಗೆ ಆಶೀರ್ವಾದ ಮಾಡಿದರು.

ಇದಾದ ಕೆಲವು ವಾರಗಳ ನಂತರ ಮರುಳಸಿದ್ಧಯ್ಯನವರು ತಮ್ಮ ತಾಯಿಯನ್ನು ನೋಡಲು ಹಳ್ಳಿಗೆ ಹೋದರು. ಅಲ್ಲಿಗೇ ಅವರಿಗೆ ಹಿರಿಯಣ್ಣನವರಿಂದ ಕಾಗದ ಬಂದಿತು – ಬಂದು ನೋಡಿ ಎಂದು. ಮರುಳಸಿದ್ಧಯ್ಯನವರು ಅವರನ್ನು ಭೇಟಿ ಮಾಡಿದರು. ಹಿರಿಯಣ್ಣನವರು, ಮರುಳಸಿದ್ಧಯ್ಯನವರು ಕೊಟ್ಟಿದ್ಧ ಟಿಪ್ಪಣಿಗಳನ್ನೆಲ್ಲ ಹಿಂದಕ್ಕೆ ಕೊಟ್ಟರು;”ನನ್ನ ಆರೋಗ್ಯ ಚೆನ್ನಾಗಿಲ್ಲ. ಇದರಿಂದ ನಿಮಗೆ ಅನಾನುಕೂಲ ಆಗಬಾರದು. ನಾನು ಈಗ ಇವೆಲ್ಲವನ್ನು ಓದಿ ತಿದ್ದುವ ಸ್ಥಿತಿಯಲ್ಲಿಲ್ಲ. ನಾನು ನಿಮಗೆ ಹೇಳಿದಂತೆ ಪರಷ್ಕರಿಸಿ. ನೀವು ಕೊಟ್ಟ ಹಾಳೆಗಳೆಲ್ಲ ಸರಿಯಾಗಿವೆಯೋ ನೋಡಿಕೊಳ್ಳಿ” ಎಂದರು.

ಕೆಲವು ದಿನಗಳ ನಂತರ ಒಂದು ದಿನ ಬೆಳಗ್ಗೆ ಮರುಳಿಸಿದ್ಧಯ್ಯನವರು ಹಿರಿಯಣ್ಣನವರನ್ನು ಕಾಣಲು ಅವರ ಮನೆಗೆ ಹೋದರು. ಅವರ ಮಗಳು, “ತಂದೆಯವರಿಗೆ ಆರೋಗ್ಯ ಚೆನ್ನಾಗಿಲ್ಲ. ಮತ್ತೆಂದಾದರೂ ಬನ್ನಿ” ಎಂದರು. ಮರುಳಸಿದ್ಧಯ್ಯನವರು “ಹಾಗೆಯೇ ಆಗಲಿ” ಎಂದು ಹಿಂದಿರುಗಿದರು. ಅವರು ಗೇಟನ್ನು ಮುಚ್ಚುವಾಗ ಶಬ್ಧವಾಯಿತು. ಹಿತಿಯಣ್ಣನವರು ಕಿಟಕಿಯಿಂದ ಯಾರು ಹೋದವರು ಎಂದು ನೋಡಿದರು.

ಆರ್ಧ ಗಂಟೆಯಲ್ಲಿ ಮರುಳಸಿದ್ಧಯ್ಯನವರಿಗೆ ಸುದ್ಧಿ ಬಂದಿತು. ಹಿರಿಯಣ್ಣನವರು ನಿಧನರಾದರು ಎಂದು. ಅವರು ಹಿರಿಯಣ್ಣನವರ ಮನೆಗೆ ಓಡಿದರು. ಅವರ ಮಗಳು ಹೇಳಿದಂತೆ; “ನೀವು ಹೊರಟುಹೋದಿರಿ ಎಂದು ತಂದೆಯವರಿಗೆ ನನ್ನ ಮೇಲೆ ತುಂಬಾ ಕೋಪ ಬಂತು ’ಪಾಪ ಮರುಳಿಸಿದ್ಧಯ್ಯ ನೋಡಬೇಕು ಎಂದು ಎಷ್ಟು ಕಾತರನಾಗಿ ಬಂದಿದ್ದರೋ! ಅವರನ್ನು ನೀನು ಒಳಕ್ಕೆ ಬಿಡಬೇಕಾಗಿತ್ತು. ಅವರು ನನ್ನನ್ನು ನೋಡಲು ಬಿಟ್ಟಿದ್ದರೆ ನಿನ್ನ ಆಸ್ತಿ ಏನು ನಷ್ಟವಾಗುತ್ತಿತ್ತು?’ ಎಂದು ರೇಗಿದರು” ಎನ್ನುತ ಕಣ್ಣಿನಲ್ಲಿ ನೀರು ಹಾಕಿಕೊಂಡರಂತೆ.

ಸಂಸ್ಕೃತಿಯ ಪ್ರತೀಕ

ಹಿರಿಯಣ್ಣನವರು ಜೀವನದಲ್ಲಿ ಆರಿಸಿಕೊಂಡದ್ದು ಬಹಳ ಕಷ್ಟವಾದ ಕ್ಷೇತ್ರಗಳನ್ನು – ಸಂಸ್ಕೃತ ಮತ್ತು ಭಾರತೀಯ ತತ್ವಶಾಸ್ತ್ರವನ್ನು, ತಮ್ಮ ಬಾಳನ್ನೇ ಇವುಗಳ ಅಧ್ಯಯನಕ್ಕೆ ಮುಡಿಪು ಮಾಡಿದರು. ಅಸಮಾನವಾದ, ಖಚಿತವಾದ ವಿದ್ವತ್ತನ್ನು ಪಡೆದರು. ತನ್ನ ವಿದ್ವತ್ತಿನ ಸಿರಿಯನ್ನು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ, ಪುಸ್ತಕಗಳಲ್ಲಿ ಇತರರಿಗೆ ಲಭ್ಯ ಮಾಡಿಕೊಟ್ಟರು. ಕಥೆ, ಕಾದಂಬರಿ, ಕವನ ಬರೆದರೆ ಬಹುಜನ ಓದುತ್ತಾರೆ. ಬರೆದವರಿಗೆ ಜನಪ್ರಿಯತೆ ಬರುತ್ತದೆ, ವಿದ್ವತ್ತಿನ ಕ್ಷೇತ್ರ, ಇಂತಹುದಲ್ಲ. ಇದಕ್ಕೆ ತಪಸ್ಸು ಬೇಕು, ಆದರೆ ಇದರ ಹಿರಿಮೆಯನ್ನು ಗುರುತಿಸುವವರು ಕೆಲವರೇ. ಆದರೆ ಯಾವ ದೇಶಕ್ಕೆ ಆಗಲಿ ಕವನ ಕಥೆ, ಕಾದಂಬರಿ ರಚಿಸುವವರೂ ಬೇಕು, ಇಂತಹ ವಿದ್ವಾಂಸರೂ ಬೇಕು. ಹಿರಿಯಣ್ಣನವರು ವಿದ್ವತ್ತನ್ನು ಗಳಿಸಿದರು, ಅದು ರಕ್ತಗತವಾದಾಗ ಸ್ವಭಾವಕ್ಕೆ ಬರುವ ನಯ, ಬಾಳಿಗೆ ಬರುವ ಕಾಂತಿ ಇವನ್ನು ಪಡೆದುಕೊಂಡರು.ವಿದ್ವತ್ತಿಗೆ ಸೌಜನ್ಯಕ್ಕೆ, ಸಂಸ್ಕೃತಿಗೆ ಮಾದರಿಯಾದರು.