ಕ್ರಿ.ಶ. ೧೫೬೫ ರಲ್ಲಿ ನಡೆದ ತಾಳೀಕೋಟೆ ಯುದ್ಧವು ವಿಜಯನಗರ ಸಾಮ್ರಾಜ್ಯದ ವೈಭವವನ್ನೆಲ್ಲ ಮಣ್ಣು ಗೂಡಿಸಿತು. ರಾಜವಂಶದವರು ಹಂಪೆಯಿಂದ ಪಲಾಯನ ಮಾಡಿ ಪೆನುಗೊಂಡೆಯನ್ನು ಸೇರಿದರು. ಅದನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು, ಅವರು ಮತ್ತೊಮ್ಮೆ ವಿಜಯನಗರವನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನ ಪಡತೊಡಗಿದರು. ಸುತ್ತ ಸುಲ್ತಾನರುಗಳ ಶತ್ರುತ್ವವಂತೂ ಇದ್ದೇ ಇತ್ತು. ಅದರ ಜೊತೆಗೆ, ವಿಜಯನಗರದ ಸಾಮಂತರುಗಳಲ್ಲಿ ಒಳಜಗಳಗಳು ಹುಟ್ಟುಕೊಂಡವು. ಸಾಮ್ರಾಜ್ಯವು ಉಳಿಯಬೇಕಾದಲ್ಲಿ ನಿಷ್ಠೆಯುಳ್ಳ ದೇಶಭಕ್ತರ ಅಗತ್ಯವಿತ್ತು.

೧೫೭೨ ರಲ್ಲಿ ಶ್ರೀರಂಗರಾಯನು ರಾಜನಾದನು. ಇವನ ಕಾಲದಲ್ಲಿಯೇ ಸುಲ್ತಾನರ ಹಾವಳಿ ವಿಪರೀತವಾಗಿತ್ತು. ಆಗ ಜಗರಾಯ ಮತ್ತು ಕಸ್ತೂರಿ ರಂಗನಾಯಕ ಎಂಬ ಇಬ್ಬರು ಸರದಾರರು ಈ ಕೋಟಲೆಯನ್ನು ಪರಿಹರಿಸಿ ರಾಜನ ನೆಚ್ಚಿನ ಬಂಟರಾದರು. ಶ್ರೀರಂಗರಾನ ತಮ್ಮ ವೆಂಕಟಪತಿ ರಾಯನು ಪಟ್ಟಕ್ಕೆ ಬಂದಮೇಲೂ ಈ ಇಬ್ಬರು ಸರದಾರರು ರಾಜನಿಷ್ಠರಾಗಿದ್ದರು.

ಆದರೆ ಕೆಲವು ದಿನಗಳ ನಂತರ ಜಗರಾಯನಿಗೆ ದುರ್ಬುದ್ಧಿಯುಂಟಾಯಿತು. ತಾನು ಪ್ರಬಲನಾಗಬೇಕು ಎಂಬ ಆಸೆ ಮೊಳೆಯಿತು.

ಕಸ್ತೂರಿ ರಂಗನಿಗೆ ಇದು ಸರಿದೋರಲಿಲ್ಲ. ಜಗರಾಯನಿಗೆ ವಿವೇಕ ಹೇಳಿದರೂ ಪ್ರಯೋಜನವಾಗಲಿಲ್ಲ. ಜಗರಾಯ ರಾಜನನ್ನೇ ಅಳಿಯನನ್ನಾಗಿ ಮಾಡಿಕೊಂಡಿದ್ದ. ಇದರಿಂದ ಕಸ್ತೂರಿ ರಂಗನನ್ನು ರಾಜನಿಂದ ದೂರವಿಡುವುದು ಜಗರಾಯನಿಗೆ ಸುಲಭವಾಯಿತು.

ಆದರೂ ಕಸ್ತೂರಿ ರಂಗನು ರಾಜನಿಷ್ಠೆಯನ್ನು ಬಿಡದೆ ತನ್ನ ಕೊನೆಯುಸಿರು ಇರುವವರೆಗೂ ವಿಜಯನಗರಕ್ಕಾಗಿ ದುಡಿಯುವ ಪಣ ತೊಟ್ಟನು.

ರಾಜನಿಷ್ಠ ಪರಿಹಾರ

ಕಸ್ತೂರಿ ರಂಗನಿಗೆ ಮೂರು ಜನ ಗಂಡುಮಕ್ಕಳು: ವೆಂಕಟಗಿರಿನಾಯಕ, ರಂಗನಾಯಕ ಮತ್ತು ಸಿಂಗನಾಯಕ. ಅಕ್ಕಮ್ಮನೆಂಬ ಒಬ್ಬಳೇ ಮಗಳು.

ಕಸ್ತೂರಿ ರಂಗನ ಹಿರಿಯ ಮಗ ವೆಂಕಟಗಿರಿ ಕೆಚ್ಚೆದೆಯ ಕಟ್ಟಾಳು. ಗರಡಿ ಸಾಧನೆ, ಯುದ್ಧ ವಿದ್ಯೆಗಳಲ್ಲಿ ಚಿಕ್ಕಂದಿನಿಂದಲೂ ಆಸಕ್ತಿ. ಕ್ರಮಬದ್ಧ ಅಂಗಸಾಧನೆಯಿಂದ ಅವನ ದೇಹ ಉಕ್ಕಿನಂತಿತ್ತು. ತಂದೆಯ ಎಲ್ಲಾ ಗುಣಗಳೂ ಅವನಲ್ಲಿ ಮೂಡಿದ್ದವು. ಅವನು ಪರೋಪಕರಿ ಮತ್ತು ಪ್ರಾಮಾಣಿಕರನಾಗಿದ್ದ. ತನ್ನ ಸುಖವನ್ನು ಬಯಸಿದವನೇ ಅಲ್ಲ. ತಂದೆಯ ಸಂಪರ್ಕ ಸಹವಾಸಗಳಿಂದ ಅವನಲ್ಲಿಯೂ ವಿಜಯನಗರದ ಬಗ್ಗೆ ಎಲ್ಲಿಲ್ಲದ ನಿಷ್ಠೆ, ಅಭಿಮಾನಗಳು. ಕಸ್ತೂರಿ ರಂಗನಿಗೆ ವೆಂಕಟಗಿರಿಯೆಂದರೆ ಪ್ರಾಣ. ಅವನು ಪ್ರೀತಿಯಿಂದ ವೆಂಕಟಗಿರಿಯನ್ನು ’ಎಚ್ಚಮಾ’ ಎಂಬುದಾಗಿ ಕರೆಯುತ್ತಿದ್ದ. ಇದರಿಂದಾಗಿಯೇ ಆ ವೀರಾಗ್ರಣಿ ’ಎಚ್ಚಮನಾಯಕ’ ಎಂದೇ ಪ್ರಸಿದ್ಧನಾದ.

ಎಚ್ಚಮನು ಪ್ರಾಯಕ್ಕೆ ಬರುವ ವೇಳೆಗೆ ವಿಜಯ ನಗರದ ಪರಿಸ್ಥಿತಿ ಕೆಟ್ಟುಹೋಗಿತ್ತು. ಹೊರಗಿನ ಶತ್ರುಗಳ ಅಪಾಯ ಇದ್ದೇ ಇತ್ತು; ಜೊತೆಗೆ ರಾಜ್ಯದೊಳಗೆ ತಮ್ಮ ತಮ್ಮ ಅಧಿಕಾರ, ಪ್ರಭಾವಗಳಿಗೆ ಆಸೆಪಟ್ಟ ಪ್ರಮುಖರು ಬೇರೆ. ತಂದೆಯಿಂದ ಈ ವಿಚಾರವನ್ನು ತಿಳಿದು, ಎಚ್ಚಮನಾಯಕನು ಹೇಗಾದರೂ ಮಾಡಿ ಮತ್ತೊಮ್ಮೆ ವಿಜಯನಗರವನ್ನು ತಲೆ ಎತ್ತುಂತೆ ಮಾಡಬೇಕೆಂದು ಕೊಂಡನು. ತನ್ನಪ್ರಾಣವನ್ನೇ ಈ ಉದ್ದೇಶಕ್ಕೆ ಮೀಸಲಾಗಿಟ್ಟನು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯೊಡನೆ ರಣಾಂಗಣಕ್ಕೆ ನುಗ್ಗಿ ಸುಲ್ತಾನರುಗಳ ಸೈನ್ಯಗಳನ್ನು ಎದುರಿಸಿದ್ದನು. ಅತ್ಯಂತ ಎತ್ತರವಾದ ಬೆಟ್ಟದ ತುದಿಯಲ್ಲಿ ಬಲವಾದ ಕೋಟೆಯೊಂದನ್ನು ನಿರ್ಮಿಸಿ, ಸೈನ್ಯವನ್ನು ಸಂಗ್ರಹ ಮಾಡಿದ್ದನು. ಆ ದುರ್ಗಮ ದುರ್ಗಕ್ಕೆ  ’ಪ್ರತಾಪದುರ್ಗ’ ಎಂದು ಹೆಸರು.

ಕಾಳಹಸ್ತಿಯ ವೆಂಗಲನಾಯಕ ಎಚ್ಚಮನನ್ನು ತುಂಬ ಮೆಚ್ಚಿ, ತನ್ನ ಮಗಳು ವೆಂಕಟಮ್ಮನನ್ನು ಅವನಿಗೆ ಕೊಟ್ಟು ಮದುವೆ ಮಾಡಿದ. ಎಚ್ಚಮನು ಹೆಂಡತಿಯಿಂದ ನೀರಿಕ್ಷಿಸಿದುದು ರಾಜನಿಷ್ಠೆ ಮತ್ತು ತ್ಯಾಗವನ್ನು. ಆ ವೀರ ವನಿತೆ ಅದಕ್ಕೆ ಸಿದ್ಧವಾಗಿಯೆ ಬಂದಿದ್ದಳು.

ಧೀರ ಯೋಧ

ಜಗರಾಯನ ದುಷ್ಟ ಸ್ವಭಾವ ಅರಿತಿದ್ದ ಕಸ್ತೂರಿ ರಂಗನಿಗೆ ಯಾವಾಗಲೂ ದೊರೆ ವೆಂಕಟಪತಿರಾಯನ ಚಿಂತೆ. ಅವನ ಆರೋಗ್ಯವೂತೃಪ್ತಿಕರವಾಗಿರಲಿಲ್ಲ. ಆಗ ಮಧುರೆ, ಜಿಂಜಿ, ವೆಲ್ಲೂರು ಮುಂತಾದ ಕಡೆಗಳಲ್ಲಿ ರಾಜನ ವಿರುದ್ಧ ದಂಗೆ ಎಳುತ್ತಿದ್ದ ನಾಯಕರುಗಳ ಸುದ್ದಿ ಅವನನ್ನು ಮುಟ್ಟಿತು. ಕಸ್ತೂರಿ ರಂಗನು ಇದನ್ನು ಸಹಿಸಲಾರದೇ ಹೋದನು. ಎಚ್ಚಮನನ್ನು ತನ್ನ ಹತ್ತಿರ ಕರೆದು, “ಎಚ್ಚಮಾ, ಚಕ್ರವರ್ತಿಗಳ ವಿರುದ್ಧ ದಂಗೆ ಎದ್ದ ನೀಚರನ್ನು ಮಟ್ಟ ಹಾಕುವ ಹೊಣೆ ನಿನ್ನದು. ಆ ಜಗರಾಯನಂತೂ ಅವರನ್ನು ಪೂರ್ತಿ ಮರೆತ. ಈಗ ಈ ದೊಡ್ಡ ಹೊಣೆ ನಿನ್ನದೇ” ಎಂದು ಹೇಳಿದ. ತಾನು ತಿಳಿದ ವಿವರಗಳನ್ನೆಲ್ಲ ಮಗನಿಗೆ ತಿಳಿಸಿದ.

ಎಚ್ಚಮನಿಗೆ ಅಪಾರ ಸಂತೋಷವಾಯಿತು. ಯಾವ ಶುಭ ಗಳಿಗೆಯನ್ನು ಅದುವರೆಗೂ ನಿರೀಕ್ಷಿಸಿಕೊಂಡಿದ್ದನೋ ಅದು ಬಂದಿತ್ತು. “ಅಪ್ಪಾಜೀ, ನಿಮ್ಮ ಅಪ್ಪಣೆಯನ್ನು ಶಿರಸಾವಹಿಸುತ್ತೇನೆ. ಆ ದಂಗೆಕೋರರ ಹುಟ್ಟಡಗಿಸಿ ನಿಮ್ಮನ್ನು ನೋಡುತ್ತೇನೆ. ನನ್ನನ್ನು ಹರಸಿ ಅಪ್ಪಾಜೀ” ಎನ್ನುವ ತಂದೆಯ ಪಾದಗಳಿಗೆ ಮಣಿದನು.

ತಂದೆಯ ಅಪ್ಪನೆ ಪಡೆದು ಎಚ್ಚಮನಾಯಕನು ದೊಡ್ಡ ಸೈನ್ಯದೊಡನೆ ಹೊರಟನು. ತನ್ನ ಸೈನ್ಯವನ್ನು ಪ್ರತಾಪದುರ್ಗದ ಸುತ್ತಲಿದ್ದ ಅಡವಿಯ ಅಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿ, ನೇರವಾಗಿ ಚಂದ್ರಗಿರಿಗೆ ಬಂದನು. ವೆಂಕಟಪತಿರಾಯನು ಇತ್ತೀಚಿಗೆ ಸುಲ್ತಾನರ ಹೆದರಿಕೆಯಿಂದ ಪೆನುಗೊಂಡೆಯನ್ನು ಬಿಟ್ಟು ಚಂದ್ರಗಿರಿಯಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದನು. ಎಚ್ಚಮನನ್ನು ಕಂಡ ರಾಜನು ಅವನನ್ನು ಆದರದಿಂದ ಬರಮಾಡಿಕೊಂಡು ಕುಶಲ ಪ್ರಶ್ನೆ ಮಾಡಿದನು. ಎಚ್ಚಮನು ತಾನು ಬಂದ ಕಾರ್ಯವನ್ನು ನಿವೇದಿಸಿಕೊಂಡನು: “ಪ್ರಭುಗಳಿಗೆ ಸುತ್ತಣ ಶತ್ರುಗಳ ಕೋಟಲೆ ವಿಪರೀತವಾಗಿದೆ. ತಮ್ಮ ಅನುಗ್ರಹವನ್ನು ಬಯಸಿ ನಾನೀಗ ಬಂದಿದ್ದೇನೆ. ಅಪ್ಪಣೆಯಾದರೆ ಶತ್ರುಗಳ ವಂಶವನ್ನೇ ತೊಡೆದುಹಾಕಲು ಸಿದ್ಧನಾಗಿದ್ದೇನೆ.”

ವೆಂಕಟಪತಿರಾಯನಿಗೆ ಅಚ್ಚರಿಯಾಯಿತು. ರಾಜ ಕಾರ್ಯದಲ್ಲಿ ತಾನಾಗಿ ಆಸ್ಥೆವಹಿಸಿ, ಕಷ್ಟಸ್ಥಿತಿಯಲ್ಲಿದ್ದ ರಾಜನಿಗೆ ಸಹಾಯ ಮಾಡಲು ಬಂದ ಈ ಧೀರ ಯೋಧನ ನಿಷ್ಠೆಯನ್ನು ಕಂಡು ಸಂತೋಷವೂ ಆಯಿತು. ಆದರೆ ಶತ್ರುಗಳ ಪ್ರಾಬಲ್ಯದ ಮುಂದೆ ಇವನಾಟವೇನು ನಡೆದೀತು. ಎಂಬ ಅನುಮಾನ ಉಂಟಾಯಿತು. “ಎಚ್ಚಮಾ, ನೀನು ಕೆಚ್ಚೆದೆಯ ವೀರ ಎಂದು ಬಲ್ಲೆ. ಆದರೆ ಆ ವೆಲ್ಲೂರಿನ ಲಿಂಗಮ, ದಾವರ್ಲು ಪಾಪನಾಯಕ ಇವರೆಲ್ಲ ತುಂಬ ಬಲಿಷ್ಠರು. ಹೆಚ್ಚೇನು? ಜಗರಾಯನೇ ಏನೂ ಮಾಡಲಾರದೆ ಕೈಕಟ್ಟಿ ಕುಳಿತಿರುವಾಗ ನೀನು ಏನು ಮಾಡಲು ಸಾಧ್ಯ, ಯೋಚಿಸು” ಎಂದನು.

ಎಚ್ಚಮನಾಯಕನ ಮನಸ್ಸು ಕ್ಷಣಹೊತ್ತು ಕಲಕಿದಂತಾಯಿತು. ರಾಜ್ಯಕ್ಕೆ ವಿಪತ್ತು ಒದಗಿರುವಾಗ ರಣ ಹೇಡಯು ಕೈಕಟ್ಟಿ ಕೂಡಬಾರದು. ತನ್ನ ದೇಹದಲ್ಲಿನ ರಕ್ತದ ಕೊನೆಯ ಹನಿ ಇರುವವರೆಗೂ ಹೆಣಗಾಡಬೇಕು. ಎಚ್ಚಮನ ಆತ್ಮವಿಶ್ವಾಸ ಅಪಾರವಾಗಿತ್ತು. ಖಚಿತವಾದ ಸ್ವರದಲ್ಲಿ ಹೇಳಿದನು:

“ಪ್ರಭೂ, ತಮ್ಮ ಆಜ್ಞೆಯೊಂದಕ್ಕಾಗಿಯೇ ಈ ಸೇವಕ ಇಲ್ಲಿಯವರೆಗೂ ಬರಬೇಕಾಯಿತು. ತಮ್ಮ ಅನುಗ್ರಹವೊಂದಿರಲಿ. ಇಷ್ಟಕ್ಕೂ ಈ ಅಲ್ಪನ ಪ್ರಾಣ ಸ್ವಾಮಿಕಾರ್ಯದಲ್ಲಿ ವಿನಿಯೋಗವಾದರೇ ನಾನೇ ಧನ್ಯ.”

ಎಚ್ಚಮನ ಸ್ವಾಮಿನಿಷ್ಠೆಯ ಆಳವನ್ನು ತಿಳಿದ ವೆಂಕಟ ಪತಿರಾಯ ಅವನಿಗೆ ಅನುಮತಿಯನ್ನಿತ್ತು ಕಳುಹಿಸಿದ.

ವಿಜಯ ಯಾತ್ರೆ

ಎಚ್ಚಮನಾಯಕನ ಜೀವನದಲ್ಲಿ ಆಲಸ್ಯಕ್ಕೆ ಎಡೆ ಇರಲಿಲ್ಲ. ಅವನ ಎಲ್ಲ ಕಾರ್ಯಗಳೂ ಚುರುಕಿನಿಂದ ನಡೆಯಬೇಕು. ಅಲ್ಲದೆ ಅವನು ತನ್ನ ಸ್ವಂತ ಕ್ಷೇಮ, ಸುಖಗಳ ಯೋಚನೆಗಳಿಗೆ ಅವಕಾಶವನ್ನೇ ಕೊಡುವವನಲ್ಲ. ಮೊದಲು ರಾಜಕಾರ್ಯ, ಆಮೇಲೆ ಮಿಕ್ಕಿದ್ದು ಎನ್ನುವಾತ ಅವನು. ರಾಜನಿಂದ ಅಪ್ಪಣೆ ದೊರೆತ ಕುಡಲೇ ಕ್ಷಣಹೊತ್ತನ್ನೂ ವ್ಯರ್ಥ ಮಾಡದೆ ನೇರವಾಗಿ ವೆಲ್ಲೂರಿನತ್ತ ಧಾವಿಸಿದನು. ಪ್ರತಾಪದುರ್ಗದ ಕಾಡುಗಳಲ್ಲಿ ನಿಲ್ಲಿಸಿದ್ದ ಆತನ ಸೈನ್ಯಕ್ಕೆ ಸಂಕೇತ ಸಿಕ್ಕ ತಕ್ಷಣವೇ ಅದು ದಾರಿಯಲ್ಲೇ ಎಚ್ಚಮನನ್ನು ಕೂಡಿಕೊಂಡಿತು.

ವೆಲ್ಲೂರಿನ ಪಾಳೆಯಗಾರನ ಲಿಂಗಮನಾಯಕ ಎಂಬಾತ. ಎಚ್ಚಮನ ದಾಳಿಯಿಂದ ಮೊದಲು ಅವನಿಗೆ ಗಾಬರಿಯಾಯಿತು. ಎಚ್ಚಮನ ದಾಳಿಯಿಂದ ಮೊದಲು ಅವನಿಗೆ ಗಾಬರಿಯಾಯಿತು. ಆದರೆ ತಕ್ಷಣವೇ ಕೋಟೆ ಬಾಗಿಲುಗಳನ್ನು ಮುಚ್ಚಿಸಿದನು. ನಾಲ್ಕಾರು ದಿನಗಳು ಕಳೆದರೂ ಸೇನೆಗೆ ಕೋಟೆ ಮಣಿಯಲಿಲ್ಲ.  ಎಚ್ಚಮನಾಯಕನು ಕೋಟೆಯ ಬಾಗಿಲಿನತ್ತ ನುಗ್ಗಿದ. ಸೇನೆಯೆಲ್ಲ ಅವನ ಜೊತೆಗೇ ನುಗ್ಗಿತು. ಮಹಾದ್ವಾರ ಭಯಂಕರ ಶಬ್ದದೊಡನೆ ಕೆಳಗುರುಳಿತು. ಎಚ್ಚಮನ ಇಡೀ ಸೈನ್ಯ ಒಳನುಗ್ಗಿತು. ಕೆಲವು ಗಂಟೆಗಳಲ್ಲೇ ಲಿಂಗಮನ ಸೈನ್ಯ ದಿಕ್ಕಾಪಾಲಾಯಿತ. ಲಿಂಗಮನಂತೂ ಯಾರ ಕೈಗೂ ಸಿಕ್ಕದೆ ತಲೆ ತಪ್ಪಿಸಿ ಕೊಂಡು.

ತನ್ನ ಪ್ರಯತ್ನದಲ್ಲಿ ಸಿಕ್ಕ ಮೊದಲ ವಿಜಯದಿಂದ ಎಚ್ಚಮನ ಉತ್ಸಾಹ ಇಮ್ಮಡಿಸಿತು. ವೆಲ್ಲೂರಿನ ಕೋಟೆಯ ರಕ್ಷಣೆಗೆ ಭಾವಮೈದುನ ಚೆನ್ನನನ್ನು ಅಲ್ಲಿ ಬಿಟ್ಟು ಮಧುರೆಯ ಕಡೆ ತಿರುಗಿದನು. ವೆಲ್ಲೂರಿನಿಂದ ಮಧುರೆ ತುಂಬಾ ದೂರದಲ್ಲಿತ್ತು. ಎಚ್ಚಮನು ದಾರಿಯಲ್ಲಿ ಸಾಗುತ್ತಿದ್ದಾಗ ಭಾರಿ ಸೈನ್ಯವೊಂದು ಅವನ ಸೇನೆಯನ್ನು ಸುತ್ತುವರಿಯಿತು. ಆ ಸೇನೆ ಜಿಂಜಿಕೋಟೆಯ ಕೃಷ್ಣಪ್ಪನಾಯಕನದು. ಲಿಂಗಮನು ವೆಲ್ಲೂರಿನಿಂದ ಜಿಂಜಿಗೆ ಓಡಿಬಂದು ಕೃಷ್ಣಪ್ಪ ನಾಯಕನ ನೆರವಿನಿಂದ ಮತ್ತೆ ವೆಲ್ಲೂರನ್ನುಜಯಿಸಲು ಹೊರಟಿದ್ದನು. ಆದರೆ ಎಚ್ಚಮನನ್ನು ದಾರಿಯಲ್ಲೇ ಎದುರಿಸಬೇಕಾಯಿತು.  ಆ ಸೇನೆಯನ್ನೆಲ್ಲ ಎಚ್ಚಮ ಧೂಳೀ ಪಟಮಾಡಿ, ಲಿಂಗಮ ಹಾಗೂ ಕೃಷ್ಣಪ್ಪನಾಯಕರಿಬ್ಬರನ್ನೂ ಸೆರೆಹಿಡಿದನು.

ಎಚ್ಚಮನಿಗೆ ಮಹದಾನಂದವಾಯಿತು. ತಂದೆಗೂ ಪ್ರಭುವಿಗೂ ತಾನು ನೀಡಿದ ಭಾಷೆ ಸಾರ್ಥಕವಾಗುತ್ತಿದೆ. ನಾಡಿನ ಈ ಅಲ್ಪ ಸೇವೆ ಮಾಡುವ ಭಾಗ್ಯ ದೊರೆತು ತಾನು ಧನ್ಯನಾದೆ ಎಂದುಕೊಂಡನು. ಆದರೆ ಮುಂದಿನ ಕಾರ್ಯವಿನ್ನೂ ಇತ್ತು. ಕಾವೇರಿ ನದಿಯನ್ನು ದಾಟಿಕೊಂಡು, ಎಚ್ಚಮನು ಮಧುರೆಯ ಕೋಟೆಯನ್ನು ಮುತ್ತಿದನು. ಆದರೆ ಅಲ್ಲಿನ ನಾಯಕನು ಎಚ್ಚಮನನ್ನು ಎದುರಿಸುವ ಸಾಹಸಕ್ಕೆ ಹೋಗಲಿಲ್ಲ. ಎಚ್ಚಮನ ಮುಖವನ್ನು ಕಂಡ ಅವನು ಮಂತ್ರಮುಗ್ಧನಾದವನಂತೆ, ತಾನೂ ಯಾವಾಗಲೂ ವಿಜಯನಗರದ ಸಿಂಹಾಸನಕ್ಕೆ ನಿಷ್ಠನಾಗಿರುವೆನೆಂದು ಮಾತು ಕೊಟ್ಟನು.

ಎಚ್ಚಮನಾಯಕ ಹಾಳು ಹಂಪೆಯ ದರ್ಶನ ಮಾಡಿದನು

ಅಲ್ಲಿಂದ ಮುಂದೆ ಎಚ್ಚಮನಾಯಕನು ತನ್ನ ಸೇನೆಯನ್ನು ತಿರುಮಲೆ ಬೆಟ್ಟಗಳ ಬಳಿಗೆ ಸಾಗಿಸಿದನು. ಅಲ್ಲಿದ್ದ ಕೆಲವು ಗುಡ್ಡಗಾಡಿನ ನಾಯಕರು ದಾವರ‍್ಲು ಪಾಪ ನಾಯಕನೆಂಬುವನ ಮುಖಂಡತ್ವದಲ್ಲಿ ದಂಗೆ ಎದ್ದಿದ್ದರು. ಎಚ್ಚಮನಿಗೆ ಗುಡ್ಡಗಾಡುಗಳಲ್ಲಿ ತಿರುಗಾಡಿದ ಅನುಭವ ಚೆನ್ನಾಗಿತ್ತು. ತಂತ್ರದಿಂದ ಸೇನೆಯನ್ನು ಅಲ್ಲಲ್ಲಿ ಅಡಗಿಸಿ, ಗುಡ್ಡಗಾಡಿನ ನಾಯಕರನ್ನೆಲ್ಲ ತೀರಿಸಿದ. ದಾವರ‍್ಲು ಪಾಪನಾಯಕ ತಪ್ಪಿಸಿಕೊಳ್ಳಲು ಹೆಣಗಾಡಿ ಎಚ್ಚಮನು ಕತ್ತಿಗೆ ಬಲಿಯಾದನು. ಆ ನಾಯಕನ ವಶದಲ್ಲಿ ಚಿಂಗಲ್‌ಪೇಟೆ ಮತ್ತು ಉತ್ತರ ಮಲ್ಲೂರು ಎಂಬ ಎರಡು ಬಲವಾದ ಕೋಟೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ಎಚ್ಚಮ ತನ್ನ ಖಾಸಾ ಸೇನೆಯನ್ನು ಪ್ರತಾಪದುರ್ಗಕ್ಕೆ ಹಿಂದಿರುಗಿಸಿ, ಏಕಾಂಗಿಯಾಗಿ ಚಂದ್ರಗಿರಿಗೆ ಬಂದು ವೆಂಕಟಪತಿರಾಯನನ್ನು ಕಂಡನು.

ಎಚ್ಚಮನ ವಿಜಯಯಾತ್ರೆಯ ವರ್ತಮಾನ ರಾಜನಿಗೆ ಆಗಲೇ ತಲಪಿತ್ತು. ಈ ಯುವಕನ ಸಾಹಸ, ರಾಜನಿಷ್ಠೆ ಇವನ್ನು ಕಂಡು ಅವನ ಹೃದಯ ಅಭಿಮಾನದಿಂದ, ಸಂತೋಷದಿಂದ ತುಂಬಿಹೋಗಿತ್ತು. ರಾಜನು ಎಚ್ಚಮನಾಯಕನನ್ನು ಸಂತೋಷದಿಂದ ಇದಿರುಗೊಂಡು ಸನ್ಮಾನಿಸಿದನು. “ಎಚ್ಚಮಾ, ವಿಜಯನಗರದ ರತ್ನಸಿಂಹಾಸನಕ್ಕೆ ನಿಷ್ಠಾನಾದ ಧೀರ ಯೋಧನೊಬ್ಬ ಇಂದು ದೊರೆತಂತಾಯಿತು. ಇನ್ನು ನಾವು ಯಾರಿಗು ಹೆದರಬೇಕಾಗಿಲ್ಲ. ಇಂದಿನಿಂದ ನೀನು ನಮ್ಮ ಸೇನೆಯ ಪ್ರಧಾನ ದಂಡನಾಯಕ” ಎಂದನು. ಅಷ್ಟರಲ್ಲಿ ಎಚ್ಚಮನು ಅವನನ್ನು ತಡೆದು, “ಪ್ರಭೂ, ಈ ದೇಹ ತಮ್ಮ ಸೇವೆಯಲ್ಲಿ ಬಿದ್ದುಹೋಗಲಿ. ಆದರೆ ತಾವು ನೀಡಿರುವ ಈ ಪ್ರಧಾನ ದಂಡನಾಯಕನ ಪಟ್ಟ ನನಗೆ ಬೇಡ. ಪ್ರಭುಗಳು ಕ್ಷಮಿಸಬೇಕು. ಆದರೆ ಈ ಸಿಂಹಾಸನಕ್ಕೆ ತಲೆಕೊಡುವ ಪ್ರಸಂಗ ಬಂದರೆ, ಈ ಸೇವಕನ ತಲೆಯೇ ಮೊದಲಿನದು” ಎಂದು ಹೇಳಿ, ಅರಸರಿಗೆ ವಂದಿಸಿ ಪ್ರತಾಪದುರ್ಗದ ಕಡೆ ಹೊರಟನು.

ಪಿತೃವಿಯೋಗ

ಕಸ್ತೂರಿರಂಗನು ಎಚ್ಚಮನು ಸಾಹಸದ ಕತೆಯೆಲ್ಲವನ್ನೂ ಕೇಳಿ ತುಂಬ ಸಂತೋಷಪಟ್ಟನು. ಸುತ್ತಮುತ್ತಣ ದಂಗೆಕೋರರೆಲ್ಲ ನಾಶವಾದಂತಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ಶಾಂತಿ ನೆಲೆಸಿದಂತೆ ಕಂಡಿತು. ಎಚ್ಚಮನಂತೂ ಈ ಅಂತಃಕಲಹಗಳ ಸುಳಿವು ಸಿಕ್ಕರೆ ಸಾಕು, ವಿಜಯನಗರದ ವಿರೋಧಿಗಳನ್ನು ಮಟ್ಟಹಾಕಲು ಕಾಯುತ್ತಿದ್ದನು.

ಕಸ್ತೂರಿರಂಗನಿಗೆ ವಯಸ್ಸಾಗುತ್ತ ಬಂದಿತ್ತು. ದೇಹಾರೋಗ್ಯವು ದಿನೇ ದಿನೇ ಕುಂದುತ್ತಾ ಹೋಯಿತು. ಹಗಲಿರುಳೂ ಎಚ್ಚಮನು ತಂದೆಯ ಸೇವೆಯಲ್ಲಿ ಮೈಮರೆತನು.

ಹದಿನಾಲ್ಕು ವರ್ಷಗಳು ಉರುಳಿಹೋದವು. ಒಂದು ಸಂಜೆ ಕಸ್ತೂರಿರಂಗನು ತನ್ನ ಮೂವರು ಮಕ್ಕಳನ್ನೂ ಹತ್ತಿರ ಕರೆದು, “ಮಕ್ಕಳೇ, ನನ್ನ ಕೆಲಸ ಮುಗಿಯಿತು. ನಾನಿನ್ನು ಹೊರಡಬೇಕು. ವಿಜಯನಗರದ ರತ್ನಸಿಂಹಾಸನಕ್ಕೆ ಕೈಲಾದ ಸೇವೆ ಮಾಡಿದೆ. ಇನ್ನು ಮುಂದಿನ ಹೊಣೆಯೆಲ್ಲ ನಿಮ್ಮದೇ. ಎಚಮ್ಮ ವಿವೇಕಶಾಲಿ, ಶೂರ. ಆತನ ಹೊಣೆಗೇ ರಂಗ, ಸಿಂಗರನು ಒಪ್ಪಿಸುತ್ತೇನೆ” ಎನ್ನುತ್ತ ಉಸಿರು ಹತ್ತಿಬರಲು ಕ್ಷಣಹೊತ್ತು ಸುಮ್ಮನಾದನು.

“ಅಪ್ಪಾಜಿ, ಮಾತನಾಡಿ ಆಯಾಸ ಮಾಡಿಕೊಳ್ಳಬೇಡಿ” – ತಂದೆಗೆ ಎರಡು ಗುಟುಕು ನೀರು ಕುಡಿಸುತ್ತಾ ಎಚ್ಚಮ ಹೇಳಿದನು.

“ಇಲ್ಲ ಎಚ್ಚಮಾ, ಇನ್ನು ಮಾತನಾಡುವುದಿಲ್ಲ. ನನ್ನ ಮಾತನ್ನು ಆ ಸ್ವಾಮಿ ಕಿತ್ತುಕೊಳ್ಳುವ ಮುನ್ನ ನಿನಗೆ ಎರಡು ಕೆಲಸಗಳನ್ನು ಹೇಳುತ್ತೇನೆ. ಅದನ್ನು ನಡೆಸಿಕೊಡುವ ಭಾರ ನಿನ್ನದು.”

“ಎಚ್ಚಮಾ, ಆ ತಿರುಪತಿಯ ಸ್ವಾಮಿಯ ಭಕ್ತರ ಸೇವೆ ಮಾಡುವುದೂ ಒಂದು ಭಾಗ್ಯ. ಸ್ವಾಮಿಯ ದರ್ಶನಕ್ಕೆ ದಿನವೂ ನೂರಾರು ಭಕ್ತರು ಕಾಲುನಡಿಗೆಯಲ್ಲಿ ಸಂಚರಿಸುತ್ತಾರೆ. ಅವರಿಗೆ ಮಾರ್ಗದಲ್ಲಿ ಊಟೋಪಚಾರಕ್ಕಾಗಿ ನೀನು ಒಂದು ಧರ್ಮಛತ್ರವನ್ನು ನಿರ್ಮಿಸಿ, ನಿತ್ಯವೂ ಮುನ್ನೂರು ಜನ ಭಕ್ತರಿಗೆ ಆತಿಥ್ಯ ಸಲ್ಲಿಸು.”

“ಅಗತ್ಯವಾಗಿ ಆಗಲಿ ಅಪ್ಪಾಜಿ.”

“ಇನ್ನೊಂದು ಕೆಲಸವಿದೆ. ಸಾಯುವವರೆಗೂ ವಿಜಯನಗರದ ಒಡೆಯರಿಗೆ ನಿಷ್ಠನಾಗಿರು. ಅವರ ಮಿತ್ರರೇ ನಿನ್ನ ಮಿತ್ರರು. ಅವರ ಶತ್ರುಗಳೇ ನಿನ್ನ ಶತ್ರುಗಳು. ನೀನರಿಯೆ ಎಚ್ಚಮಾ, ಆ ವಂಶದ ಒಡೆಯರು ತಮ್ಮ ರಕ್ತ ಚೆಲ್ಲಿ ಕಟ್ಟಿದ ನಾಡಿನ ವೈಭವವನ್ನು… ನೀನು ಒಂದು ಸಾರಿ ಆ ಹಾಳು ಹಂಪೆಯನ್ನು ಹೋಗಿ ನೋಡಿ ಬಾ… ನಿನ್ನ ಕಣಲ್ಲಿ ರಕ್ತ ಚಿಮ್ಮೀತು…”

ಮಾತನಾಡುತ್ತಿರುವಾಗಲೇ ಕಸ್ತೂರಿರಂಗನ ಪ್ರಾಣ ಹಾರಿಹೋಯಿತು.

ಕೆಲವೇ ತಿಂಗಳುಗಳಲ್ಲಿ ಎಚ್ಚಮನು ತಂದೆಯ ಆಜ್ಞೆಯಂತೆಯೇ ತಿರುಪತಿಯ ಯತ್ರಾರ್ಥಿಗಳಾಗಿ ದಾರಿಯಲ್ಲಿ ಒಂದು ದೊಡ್ಡ ಧರ್ಮಛತ್ರವನ್ನು ನಿರ್ಮಿಸಿದನು. ಪ್ರತಿನಿತ್ಯವು ಮುನ್ನೂರು ಜನ ಯಾತ್ರಿಕನು ಅಲ್ಲಿ ತಂಗಿದ್ದು, ಉಪಚಾರವನ್ನು ಪಡೆದು, ಎಚ್ಚಮನನ್ನು ಹಾಡಿ ಹರಸಿದರು.

ರಾಜನ ಕರೆ

ಮುಂದೆ ಕೆಲವು ದಿನಗಳಲ್ಲಿಯೇ ಎಚ್ಚಮನಾಯಕನು ಏಕಾಂಗಿಯಾಗಿ ಹಾಳು ಹಂಪೆಯ ಸಂದರ್ಶನ ಮಾಡಿದನು. ಹಂಪೆಯ ವೈಭವ ವಿಸ್ತಾರವನ್ನು ಸಾರುತ್ತಿದ್ದ ಆ ಭಗ್ನಾವಶೇಷಗಳನ್ನು ಕಂಡು ದುಃಖ ಒತ್ತರಿಸಿಕೊಂಡು ಬಂದಿತು. ಅಲ್ಲಿಯ ಪ್ರತಿಯೊಂದು ಕಲ್ಲೂ ತನ್ನ ಕರುಣ ಕಥೆಯನ್ನು ಹೇಳುತ್ತಿರುವಂತೆ ಭಾಸವಾಗಿ, ತಾನೂ ಕಲ್ಲುಬಂಡೆಯೊಂದರ ಮೇಲೆ ಕುಳಿತು ಮನಸಾರೆ ಅತ್ತನು – ಎಚ್ಚಮ.

ಮರುಗಳಿಗೆಯೇ ಅವನ ಮನಸ್ಸು ಹೇಳಿತು: ’ಎದ್ದೇಳು ಎಚ್ಚಮಾ. ನಿನ್ನಿಂದ ಅತಿ ಮುಖ್ಯವಾದ ಸ್ವಾಮಿಕಾರ್ಯ ನೆರವೇರಬೇಕಾಗಿದೆ.’

ಅವನಿನ್ನೂ ತನ್ನ ಬಿಡಾರವನ್ನು ತಲುಪುವ ಮೊದಲೇ ಚಂದ್ರಗಿರಿಯಿಂದ ಬಂದ ರಾಜದೂತರು ಅವನಿಗೆ ಮುಜುರೆ ಮಾಡಿ ರಾಜಮುದ್ರೆಯಿದ್ದ ಪತ್ರವನ್ನು ನೀಡಿದರು. ಎಚ್ಚಮನು ಅವರನ್ನು ಆದರಿಸಿ, ಪತ್ರವನ್ನೋದಿಕೊಂಡ. ರಾಜಕಾರ್ಯದ ನಿಮಿತ್ತ ತಕ್ಷಣವೇ ಚಂದ್ರಗಿರಿಗೆ ಹೊರಟುಬರಬೇಕೆಂದು ಚಕ್ರವರ್ತಿಯು ಸೂಚಿಸಿದ್ದನು. ಒಂದು ಘಳಿಗೆಯೂ ತಡಮಾಡದೆ ಎಚ್ಚಮನು ಚಂದ್ರಗಿರಿಯ ಕಡೆ ಪ್ರಯಾಣ ಮಾಡಿದನು.

ಎಚ್ಚಮನು ಅರಮನೆಯನ್ನು ಪ್ರವೇಶಿಸಿ, ಆಸ್ಥಾನಕ್ಕೆ ಬಂದಾಗ ಅಲ್ಲಿ ಗಂಭೀರ ಮೌನ ನೆಲೆಸಿತ್ತು. ಶ್ರೀರಂಗ ಪಟ್ಟಣದ ರಾಜ ಒಡೆಯರು, ಯಲಹಂಕದಿಂದ ಕೆಂಪನಂಜೇಗೌಡರು, ಇಕ್ಕೇರಿಯ ವೆಂಕಟಪ್ಪನಾಯಕ, ಕುಣಿಗಲ್ಲಿನಲ್ಲಿದ್ದ ಯುವರಾಜ ಶ್ರೀರಂಗರಾಯ, ಜಗರಾಯ, ತಿಮ್ಮನಾಯಕ, ಮಕರನಾಯಕ, ಓಬಲ ಮುಂತಾದವರೆಲ್ಲ ಅಲ್ಲಿದ್ದರು. ಚಕ್ರವರ್ತಿ ವೆಂಕಟಪತಿರಾಯ ಹಾಸಿಗೆಯ ಮೇಲೆ ಮಲಗಿದ್ದರು.

ಹೀಗೇಕೆ?

ಎಚ್ಚಮನು ಬಂದುದನ್ನು ಕಂಡು ಚಕ್ರವರ್ತಿಗೆ ಸಮಾಧಾನವಾಯಿತು. ಕೈಸನ್ನೆಯಿಂದ ಎಚ್ಚಮನನ್ನು ಹತ್ತಿರ ಬರಮಾಡಿಕೊಂಡನು. ವಿನಯದಿಂದ ಎಚ್ಚಮನು ಚಕ್ರವರ್ತಿಯ ಬಳಿ ಸಾರಿದನು. ಅರವತ್ತೇಳು ವರ್ಷದ ವೆಂಕಟಪತಿರಾರನಿಗೆ ಮಾತನಾಡಲೂ ಚೈತನ್ಯವಿರಲಿಲ್ಲ

“ಎಚ್ಚಮಾ, ಈ ದಿನ ಅತಿ ಮುಖ್ಯ ರಾಜಕಾರ್ಯ ನಡೆಯಬೇಕಾಗಿದೆ. ನಾನು ಗಟ್ಟಿಯಾಗಿ ಮಾತನಾಡಲಾರೆ. ದೇಹಾರೋಗ್ಯ ತೀರಾ ಹದಗೆಟ್ಟಿದೆ. ನಾನು ಹೇಳುವುದನ್ನು ನೀನು ಇಲ್ಲಿ ನೆರೆದ ರಾಜನಿಷ್ಠ ಮಾಂಡಲಿಕರಿಗೆ ಗಟ್ಟಿಯಾಗಿ ತಿಳಿಸುವೆಯಾ?”

ಎಚ್ಚಮನು ಅಲ್ಲಿ ನೆರೆದ ಸಭೆಗೆ ಈ ವಿಷಯವನ್ನು ತಿಳಿಸಿದ. ಜಗರಾಯನು ಥಟ್ಟನೆ ಎದ್ದು ನಿಂತ. “ಅದು ಸಾಧ್ಯವಿಲ್ಲ. ಚಕ್ರವರ್ತಿಗಳು ಹೇಳುವುದನ್ನೇ ನಾವು ಕೇಳುವೆವು. ಇದು ರಾಜಕಾರ್ಯ, ಬಯಲಾಟವಲ್ಲ” ಎಂದು ಅಸಹನೆಯಿಂದ ನುಡಿ. ವಿಧಿಯಿಲ್ಲದೆ ಚಕ್ರವರ್ತಿಯೇ ಮೇಲೆದ್ದು ದಿಂಬಿಗೊರಗಿ ಕುಳಿತನು. ಎಚ್ಚಮನು ಅವನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು.

“ಮಹಾಮಾಂಡಲಿಕರೇ, ನಮ್ಮ ಕಾಲ ಮುಗಿಯಿತು. ಈ ಸಿಂಹಾಸನವನ್ನು ಮುಂದಿನ ನ್ಯಾಯವಾದ ಉತ್ತರಾಧಿಕಾರಿಗೆ ನೀಡುವುದು ನನ್ನ ಕರ್ತವ್ಯ”. ಇಷ್ಟು ಹೇಳಿ, ಶ್ರೀರಂಗರಾಯನನ್ನು ಹತ್ತಿರ ಬರುವಂತೆ ಸಂಜ್ಞೆ ಮಾಡಿದನು. ಎಚ್ಚಮನು ಮೂಲಕ ಅರಮನೆಯ ಆಪ್ತ ಕಾರ್ಯಭಾರಿಗಳಿಂದ ರಾಜಮುದ್ರೆಯ ಉಂಗುರವನ್ನು ತರಿಸಿದನು.

ಶ್ರೀರಂಗನು ಅಳುಕುತ್ತ ಚಕ್ರವರ್ತಿಯ ಬಳಿ ಬರುತ್ತಲೇ, “ಶ್ರೀರಂಗನೇ ವಿಜಯನಗರದ ನ್ಯಾಯವಾದ ಉತ್ತರಾಧಿಕಾರಿ. ಎಚ್ಚಮಾ, ಅವನ ಬೆರಳಿಗೆ ಈ ಮುದ್ರೆ ಯುಂಗುರ…” ಎನ್ನುತ್ತಾ ವೆಂಕಟಪತಿರಾಯನು ಮುಂದೆ ಮಾತನಾಡಲಾರದೇ ಪಕ್ಕಕ್ಕೆ ಹೊರಳಿದನು.

ಈ ಅಲ್ಪನ ಪ್ರಾಣ ಸ್ವಾಮಿಕಾರ್ಯದಲ್ಲಿ ವಿನಿಯೋಗವಾದರೆ ನಾನೇ ಧನ್ಯ’

ಎಲ್ಲರೂ ದಿಗ್ಭ್ರಾಂತರಾದರು. ಚಕ್ರವರ್ತಿಯ ಸ್ವಂತ ಮಗ ಚಿಕ್ಕರಾಯ ಇದೀಗ ಹದಿನೆಂಟು ವರ್ಷದ ತರುಣ. ಅವನಲ್ಲವೆ ಉತ್ತರಾಧಿಕಾರಿ?

ಎಚ್ಚಮನೂ ಹಿಂದೆಮುಂದೆ ನೋಡತೊಡಗಿದನು. ಹೌದು… ಪ್ರಭುಗಳಿಗೆ ಸ್ವಂತ ಮಗನೇ ಇರುವಾಗ, ಅಣ್ಣನ ಮಗ ಶ್ರೀರಂಗರಾಯನಿಗೆ ಪಟ್ಟದ ಅಧಿಕಾರ ಹೇಗೆ ಬಂದೀತು? ಚಿಕ್ಕರಾಯ ಹುಟ್ಟಿದಾಗ ತಾನೂ ಚಂದ್ರಗಿರಿಗೆ ಬಂದಿದ್ದನಲ್ಲ! ಅಲ್ಲದೆ ಜಗರಾಯನ ತಮ್ಮನ ಮಗಳೊಡನೆ ಚಿಕ್ಕರಾಯನ ವಿವಾಹವೂ ಆಗಿದೆ.

ವೆಂಕಟಪತಿರಾಯನ ಮಾತುಗಳನ್ನು ಕೇಳಿ ಎಚ್ಚಮ ಏನು ಮಾಡಬೇಕೆಂದು ಹೊಳೆಯದೆ ಸುಮ್ಮನೆ ನಿಂತನು.

ರಾಜನಿಷ್ಠೆ

“ಎಚ್ಚಮಾ, ನೀನು ರಾಜಾಜ್ಞೆಯನ್ನು ಮೀರುವೆಯಾ?” ವೆಂಕಟಪತಿರಾಯ ತನ್ನ ಶಕ್ತಿಯನ್ನೆಲ್ಲ ಬಳಸಿ ಕೇಳಿದ. ಎಚ್ಚಮನಾಯಕನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ಶ್ರೀರಂಗರಾಯನಾದರೋ ’ಬೇಡ, ಬೇಡ’ ಎಂದು ಹಿಂದೆ ಹೆಜ್ಜೆ ಇಟ್ಟ. ಆದರೆ ಎಚ್ಚಮನಾಯಕನು ವೆಂಕಟಪತಿರಾಯನ ಅಪೇಕ್ಷಿಯಂತೆ ಶ್ರೀರಂಗರಾಯನಿಗೆ ಆ ರಾಜಮುದ್ರೆಯನ್ನು ತೊಡಿಸಿದನು. ಎಚ್ಚಮನಿಗೆ ತನ್ನ ಕಾರ್ಯದ ತಪ್ಪು ಒಪ್ಪುಗಳು ಬೇಕಿರಲಿಲ್ಲ. ಅದು ತನ್ನ ಸ್ವಾಮಿಯ ಆಜ್ಞೆ. ಅದನ್ನು ಪಾಲಿಸಬೇಕಾದುದು ತನ್ನ ಧರ್ಮ.

ಜಗದೇವರಾಯ ಉರಿದೆದ್ದ. “ಪ್ರಭುಗಳು ತಪ್ಪು ಮಾಡುತ್ತಿದ್ದಾರೆ. ಸಿಂಹಾಸನಕ್ಕೆ ಚಿಕ್ಕರಾಯನೇ ನ್ಯಾಯವಾದ ಉತ್ತರಾಧಿಕಾರಿ. ಮಾಂಡಲಿಕರೇ, ಇದನ್ನು ನೀವೆಲ್ಲರೂ ಒಪ್ಪುತ್ತೀರಾ? ಶ್ರೀರಂಗನಿಗೆ ಈ ಸಿಂಹಾಸನದ ಹಕ್ಕಿಲ್ಲ” ಎಂದು ಗುಡುಗಿದ.

ಆದರೆ ಎಚ್ಚಮನಾಯಕ ಆ ಮಾತುಗಳನ್ನು ಲೆಕ್ಕಿಸಲಿಲ್ಲ. ಜಗರಾಯನೆಂದೂ, ಸಮಸ್ತ ಮಾಂಡಲಿಕರೆಲ್ಲರೂ ಎದುರು ಬಿದ್ದರೂ ರಾಜಾಜ್ಞೆಯೇ ತನಗೆ ಮುಖ್ಯ ಎಂದು ನಿರ್ಧರಿಸಿದರು.

ವೆಂಕಟಪತಿರಾಯನು, “ಇದು ರಾಜಾಜ್ಞೆ! ಇದನ್ನು ಮೀರುವ ಅಧಿಕಾರ ಯಾರಿಗೂ ಇಲ್ಲ!” ಎಂದು ಅಬ್ಬರಿಸಿದ. ಅಷ್ಟರಲ್ಲಿ ಆಯಾಸ ಹೆಚ್ಚಾಗಿ ಬವಳಿ ಬಂದು ಬಿದ್ದುಬಿಟ್ಟನು. ಎಲ್ಲರೂ ಗಾಬರಿಯಿಂದ ರಾಜನ ಬಳಿ ಬಂದರು. ರಾಜವೈದ್ಯರ ಉಪಚಾರದಿಂದ ರಾಜನು ಎಚ್ಚೆತ್ತು, “ಮುಂದಿನ ಕಾರ್ಯ ನೆರವೇರಲಿ” ಎಂದನು. ರಾಜಗುರುಗಳಾದ ತಾತಾಚಾರ್ಯರೂ ರಾಜನ ಅಭಿಪ್ರಾಯ ಸರಿ ಎಂದರು.

ಇದರಿಂದ ಅಸಂತುಷ್ಟನಾದ ಜಗರಾಯ ಮತ್ತು ಅವನ ಅನುಯಾಯಿಗಳಾದ ಓಬಲ, ತಿಮ್ಮನಾಯಕ, ಮಕರ ನಾಯಕ, ಯತಿರಾಜ ಮುಂತಾದವರೆಲ್ಲ ಚಿಕ್ಕರಯ ನೊಡನೆ ಸಭೆಯಿಂದ ಹೊರಬಿದ್ದರು.

ಉಳಿದ ಮಾಂಡಲಿಕರೆಲ್ಲರೂ ಹೊಸ ರಾಜ ಶ್ರೀರಂಗರಾಯನಿಗೆ ತಾವು ನಿಷ್ಠರಾಗಿರುವುದಾಗಿ ವಾಗ್ದಾನ ಮಾಡಿ, ಗೌರವ ಸಲ್ಲಿಸಿ ಅಲ್ಲಿಂದ ಹೊರಟರು. ಎಚ್ಚಮನನ್ನು ಮಾತ್ರ ವೆಂಕಟಪತಿರಾಯನು ಹೋಗಗೊಡಲಿಲ್ಲ. ಎಲ್ಲರೂ ಅಲ್ಲಿಂದ ಹೊರಟು ಹೋದಮೇಲೆ, ವೆಂಕಟಪತಿರಾಯನೂ ಎಚ್ಚಮನನ್ನು ಇನ್ನೂ ಹತ್ತಿರ ಕರೆದು, “ಎಚ್ಚಮಾ, ಶ್ರೀರಂಗನನ್ನು ನಿನಗೊಪ್ಪಿಸಿದ್ದೇನೆ. ಅವನನ್ನು ಕಾಪಾಡುವ ಭಾರ ನಿನ್ನದು. ಈ ದುಷ್ಟ ಜಗರಾಯನು ಅವನ ಪ್ರಾಣವನ್ನು ತೆಗೆಯಲೂ ಹಿಂದೆಮುಂದೆ ನೋಡುವವನಲ್ಲ” ಎಂದನು.

“ಪ್ರಭುಗಳು ಮನ್ನಿಸಬೇಕು. ಶ್ರೀರಂಗರಾಯರ ರಕ್ಷಣೆಗೆ ಈ ಸೇವನಕ ತಲೆ ಸದಾ ಸಿದ್ಧವಿದೆ. ಆದರೆ… ಪ್ರಭುಗಳ ಕುಮಾರ ಚಿಕ್ಕರಾಯರಿಗೇ ಈ ಸಿಂಹಾಸನ…” ಎಚ್ಚಮನು ಇನ್ನೂ ಮಾತು ಮುಗಿಸಿರಲಿಲ್ಲ. ವೆಂಕಟಪತಿರಾಯನು ಅವನನ್ನು ತಡೆದು, “ಎಚ್ಚಮಾ! ಅದೊಂದು ವಿಚಾರ ಕೆದಕಬೇಡ. ಇದೆಲ್ಲ ಆ ದುಷ್ಟ ಜಗರಾಯನ ತಂತ್ರ. ಅದರ ವಿವರ ನಿನಗೆ ಬೇಡ” ಎಂದನು. ಎಚ್ಚಮನು ಸುಮ್ಮನಾದನು.

ಅದಾದ ಮೂರು ದಿನಗಳ ನಂತರ ವೆಂಕಟಪತಿರಾಯನು ಸ್ವರ್ಗವಾಸಿಯಾದನು. ಎಚ್ಚಮನು ಒಂದು ವಾರದ ನಂತರ ಶ್ರೀರಂಗರಾಯನ ಪಟ್ಟಾಭಿಷೇಕವನ್ನು ನೆರವೇರಿಸಿದನು. ಜಗರಾಯ, ಅವನ ತಮ್ಮಂದಿರುಗಳಾದ ಓಬಲ ಮತ್ತು ಯತಿರಾಜ, ತಿಮ್ಮನಾಯಕ, ಮಕರನಾಯಕ – ಇವರುಗಳಾರೂ ಉತ್ಸವದಲ್ಲಿ ಭಾಗಿಗಳಾಗಲಿಲ್ಲ. ಚಂದ್ರಗಿರಿಯನ್ನೇ ಬಿಟ್ಟು ಅವರೆಲ್ಲರೂ ಪೆನುಗೊಂಡೆಯಲ್ಲಿ ಸೇರಿದರು. ನಿಷ್ಕಂಟಕವಾಗಿ ಪಟ್ಟಾಭಿಷೇಕ ನೆರವೇರಿತೆಂದು ಎಚ್ಚಮನು ಸಮಾಧಾನ ಹೊಂದಿದನು.

ಎರಡು ವಾರ ಕಳೆದರೂ ಜಗರಾಯನಾಗಲೀ ಅವನ ಜೊತೆಯ ಸರದಾರರುಗಳಾಗಲೀ ಚಂದ್ರಗಿರಿಗೆ ಬರಲಿಲ್ಲ. ಅಷ್ಟರಲ್ಲಿ ಪ್ರತಾಪದುರ್ಗದಿಂದ ಎಚ್ಚಮನ ಹೆಂಡತಿಗೆ ದೇಹಾಲಸ್ಯವೆಂದು ವಾರ್ತೆ ಬಂದಿತು. ಎಚ್ಚಮನೂ ಪ್ರತಾಪದುರ್ಗವನ್ನು ಬಿಟ್ಟು ತಿಂಗಳ ಮೇಲಾಗಿತ್ತು. ಆದರೆ ಶ್ರೀರಂಗರಾಯನನ್ನು ಬಿಟ್ಟು ಹೋಗುವುದು ಹೇಗೆ? ಜಗರಾಯನಂತೂ ಚಂದ್ರಗಿರಿಯಲ್ಲಿಲ್ಲ. ಹೇಗಾದರೂ ಆಗಲೆಂದು, ತನ್ನ ನೆಚ್ಚಿನ ಸರದಾರ ನರಸಿಂಗನಾಯಕನನ್ನು ಶ್ರೀರಂಗರಾಯನ ರಕ್ಷಣೆಗೆ ನೇಮಿಸಿ, ಎಚ್ಚಮ ಪ್ರತಾಪ ದುರ್ಗಕ್ಕೆ ಹೊರಟನು.

ಮಸೆದ ಕತ್ತಿ

ಪ್ರತಾಪದುರ್ಗವನ್ನು ತಲುಪಿದ ಮೇಲೆ ಎಚ್ಚಮನಿಗೆ ಶ್ರೀರಂಗರಾಯನದೇ ಚಿಂತೆ ಹತ್ತಿತು. ಜಗರಾಯನ ಕುಟಿಲ ತಂತ್ರಗಳನ್ನು ಚೆನ್ನಾಗಿ ಅರಿತಿದ್ದ ಅವನಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಪತ್ನಿಯ ದೇಹಾಲಸ್ಯವೊಂದು ಕಡೆ. ಸ್ವಲ್ಪಮಟ್ಟಿಗೆ ಆಕೆಯ ಆರೋಗ್ಯ ಸುಧಾರಿಸಿದರೂ ತಾನು ಚಂದ್ರಗಿರಿಗೆ ಹೋಗಬಹುದು. ಆಕೆಯ ತ್ಯಾಗ ಎಚ್ಚಮನಿಗೆ ತುಂಬ ಮೆಚ್ಚುಗೆಯಾಗಿತ್ತು. ಇವನ ಆತಂಕವನ್ನು ಕಂಡು, “ನೀವು ನಿಶ್ಚಿಂತೆಯಿಂದ ಚಂದ್ರಗಿರಿಗೆ ಹೋಗಿಬನ್ನಿ. ನನ್ನ ಆರೋಗ್ಯ ನಾಡಿನ ಭವಿಷ್ಯದ ಮುಂದೆ ಯಾವ ಲೆಕ್ಕ?” ಎಂದು ಆಕೆಯೇ ಹೇಳಿದಲು.

ಎಚ್ಚಮನೂ ಆಕೆಯ ಮಾತಿನಂತೆ ಚಂದ್ರಗಿರಿಗೆ ಹೊರಡುವ ಸಿದ್ಧತೆಯಲ್ಲಿ ತೊಡಗಿದನು. ಅಷ್ಟರಲ್ಲಿ ತನ್ನ ನೆಚ್ಚಿನ ಸರದಾರ ನರಸಿಂಗರಾಯನೇ ಪ್ರತಾಪದುರ್ಗಕ್ಕೆ ಓಡೋಡಿ ಬಂದನು. ಎಚ್ಚಮನಿಗೆ ಗಾಬರಿಯಾಯಿತು.

“ನಾಯಕರೇ, ಸರ್ವನಾಶವಾಯಿತು. ಜಗರಾಯನ ಸಂಚಿನಿಂದ ಸೇನಾ ನಾಯಕರೆಲ್ಲ ಅವನ ಕಡೆಗೇ ಸೇರಿ, ಪ್ರಭುಗಳ ಸಮಸ್ತ ಪರಿವಾರವನ್ನೂ ಸೆರೆಮನೆಗೆ ತಳ್ಳಿದ್ದಾರೆ. ಚಿಕ್ಕರಾಯರನ್ನೇ ಸಿಂಹಾಸನದ ಮೇಲೇರಿಸಿದ್ದಾರೆ” ಎಂದ. ನರಸಿಂಗನಾಯಕನ ಮಾತುಗಳನ್ನು ಕೇಳುತ್ತಲೇ ಎಚ್ಚಮನಿಗೆ ಆಕಾಶವೇ ಕಳಚಿಬಿದ್ದಹಾಗಾಯಿತು. ಮರುಗಳಿಗೆಯೇ ಕೋಪ ಪ್ರಜ್ವಲಿಸಿತು. ’ಈ ದಿನ ಆ ಜಗರಾಯನನ್ನು ಸಂಹರಿಸದೇ ಹಿಂತಿರುಗುವುದಿಲ್ಲ’ ಎಂದುಕೊಂಡು ಕುದುರೆ ಯೇರಿದನು. ಸಂಕೇತವನ್ನು ಪಡೆದ ಅವನ ಖಾಸಾ ಸೇನೆ ಜೊತೆಯಾಯಿತು.

ಆದರೆ ಎಚ್ಚಮನಿನ್ನೂ ಅರ್ಧ ದಾರಿಯಲ್ಲಿದ್ದಾಗಲೇ ದೊಡಡ ಸೇನೆ ಇದಿರಾಯಿತು. ಅದು ಜಗರಾಯನ ಸೇನೆ ಎಂದು ತಿಳಿದ ಎಚ್ಚಮನಿಗೆ ಸಿಟ್ಟು ಮೇರೆ ಮೀರಿತು. ಆದರೆ ಸೇನೆ ಬಲವಾಗಿದೆ. ತನ್ನ ಸೇನೆಯು ಅದನ್ನು ಎದುರಿಸಲು ಸಾಧ್ಯವಿಲ್ಲವೆಂಬುದನ್ನು ಮನಗಂಡ ಎಚ್ಚಮ, ’ಸದ್ಯಕ್ಕೆ ಹಿಂತಿರುಗುವುದೇ ಸರಿ. ನನ್ನ ಸೇನಾಬಲವನ್ನು ಇನ್ನೂ ಹೆಚ್ಚಿಸಿಕೊಂಡು ಬೇಗ ಹೋಗಿ ಪ್ರಭುವನ್ನು ಸೆರೆಯಿಂದ ಬಿಡಿಸಬೇಕು’ ಎಂದುಕೊಂಡ.

ಅಷ್ಟರಲ್ಲಿ ದೂತನೊಬ್ಬ ಎಚ್ಚಮನ ಬಳಿ ಬಂದು ಒಂದು ಪತ್ರವನ್ನು ಕೊಟ್ಟನು. ಎಚ್ಚಮ ಅದನ್ನು ಬಿಡಿಸಿ ನೋಡಿದ. ಜಗರಾಯ ಬರೆದ ಪತ್ರವದು. ’ಶ್ರೀರಂಗರಾಯನ ಪರಿವಾರವೆಲ್ಲ ಸೆರೆಮನೆಯಲ್ಲಿ ಕೊಳೆಯುತ್ತಿದೆ. ಈಗ ಚಿಕ್ಕರಾಯರೇ ಚಕ್ರವರ್ತಿಗಳು. ನೀನು ಅವರಿಗೆ ಗೌರವ ಸಲ್ಲಿಸಿ ನಿಷ್ಠೆಯಿಂದ ನಮ್ಮ ಕಡೆ ಸೇರು. ಇದರಿಂದ ನಿನಗೆ ಮುಂದೆ ಪ್ರಯೋಜನವಿದೆ’ ಎಂದಿದ್ದ ಜಗರಾಯ.

ಎಚ್ಚಮನು ಕೋಪದಿಂದ ತುಟಿ ಕಚ್ಚಿದನು. ಜಗರಾನ ಪತ್ರವನ್ನು ಚೂರುಚೂರು ಮಾಡಿ ಕಾಲಿಂದ ಹೊಸೆದು ಹಾಕಿದನು. “ಥೂ ನಾಯಿ, ಎಂಜಲಿಗೆ ಸೋತು ಪ್ರಭುವಿಗೆ ದ್ರೋಹ ಬಗೆವನಲ್ಲ ಈ ಎಚ್ಚಮ; ನಿನ್ನನ್ನು ನಾನು ಸೇರುವುದು ಯುದ್ಧರಂಗದಲ್ಲೇ – ಹಾಗೆಂದು ಆ ನೀಚನಿಗೆ ಹೇಳು” ಎಂದು ದೂತನನ್ನು ಹಿಂದಕ್ಕೆ ಕಳಿಸಿದನು. ಅನಂತರ ತನ್ನ ಸೈನ್ಯಕ್ಕೆ ಪ್ರತಾಪದುರ್ಗಕ್ಕೆ ಹಿಂದಿರುಗಲು ಆಜ್ಞಾಪಿಸಿ, ಮುಂದಿನ ಕಾರ್ಯಕ್ರಮವನ್ನು ಯೋಚಿಸುತ್ತ ಹೊರಟನು.

ಬಯಲಾದ ರಹಸ್ಯ

ಎಚ್ಚಮನಾಯಕ ಮೂರು ದಿನ ನಿದ್ರೆ ಮಾಡಲಿಲ್ಲ. ಹೇಡಿಯಂತೆ ಹಿಂತಿರುಗಬೇಕಾಯಿತಲ್ಲ ಎಂದುಕೊಂಡರೂ ಮರುಗಳಿಗೆಯೇ, ’ಹೌದು, ಇದು ಅವಸರಪಡಬೇಕಾದ ವಿಚಾರವಲ್ಲ. ಇಡೀ ರಾಜವಂಶವೇ ಈಗ ಅಪಾಯದಲ್ಲಿದೆ. ಆ ನೀಚ ಅವರನ್ನೆಲ್ಲ ಕೊಲ್ಲಿಸಿದರೆ?’ ಎಂದು ಸಮಾಧಾನ ಮಾಡಿಕೊಳ್ಳುವನು.

ನಾಲ್ಕನೆಯ ದಿನ ಒಬ್ಬ ಹೆಣ್ಣು ಮಗು ಎಚ್ಚಮನನ್ನು ಕಾಣಲು ಬಂದಳು. ಆಕೆ ಅವನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, “ನಾಯಕರೇ, ನನ್ನನ್ನು ನೀವೇ ಕಾಪಾಡಬೇಕು. ಆ ಜಗರಾಯ ನನ್ನ ತಲೆ ತೆಗೆಯುತ್ತಾನೆ” ಎಂದು ಗೋಳಾಡಿದಳು.

ಎಚ್ಚಮನಿಗೆ ಅಚ್ಚರಿಯಾಯಿತು. ’ಪಾಪ ಈ ಬಡಪಾಯಿ ಹೆಂಗಸು ಯಾವ ಅಪರಾಧ ಮಾಡಿದ್ದಾಳೆ?’ ಆಕೆಗೆ ಅಭಯವನ್ನು ನೀಡಿ ವಿಷಯವೇನೆಂದು ವಿಚಾರಿಸಿದನು.

“ನಾಯಕರೇ, ಚಿಕ್ಕರಾಯ ನನ್ನ ಮಗ. ಚಕ್ರವರ್ತಿಗಳ ಮಗನಲ್ಲ” ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಎಚ್ಚಮನಿಗೆ ದಿಗ್ಭ್ರಮೆಯಾಯಿತು. ’ಹೌದೇ? ಹಾಗೆಂದೇ ಪ್ರಭುಗಳು ಚಿಕ್ಕರಾಯನನ್ನು ರಾಜನನ್ನಾಗಿ ಮಾಡಲಿಲ್ಲ ನಿಜ. ಹಾಗಾದರೆ ಈಕೆ ಯಾರು?’ ಎಚ್ಚಮನು ಅವಳ ಪೂವೋತ್ತರಗಳನ್ನು ವಿಚಾರಿಸಿದನು.

ಆಕೆ ಅರಮನೆಯ ದಾಸಿ – ಅವಳ ಹೆಸರು ಗಂಗಮ್ಮ. ಜಗರಾಯನು ತಂತ್ರ ಮಾಡಿದ್ದ. ಆದರಿಂದ ಅವಳು ತನ್ನ ಮಗುವನ್ನು ರಾಣಿಗೆ ಕೊಟ್ಟು ಹಣವನ್ನು ಪಡೆದು ಸುಮ್ಮನಾಗಿದ್ದಳು. ಜಗರಾಯ ಆ ಮಗುವನ್ನು ತನ್ನ ಮಗಳು ವೆಂಕಟಾಂಬೆಯ ಮಗುವೆಂದೇ ಪ್ರಚಾರ ಮಾಡಿದ. ನಿಜಸ್ಥಿತಿ ವೆಂಕಟಪತಿರಾಯನಿಗೆ ತಿಳಿದಿದ್ದರೂ ಮರ್ಯಾದೆಗೆ ಹೆದರಿ ಸುಮ್ಮನಾಗಿದ್ದ.

ವೆಂಕಟಪತಿರಾಯ ಶ್ರೀರಂಗರಾಯನಿಗೆ ಪಟ್ಟವಾಗಬೇಕು ಎಂದು ಏಕೆ ಹೇಳಿದ ಎಂಬುದು ಈಗ ಅರ್ಥವಾಯಿತು. ಆದರೆ ಈ ದಾಸಿಗೆ ಈಗ ವಿಪತ್ತೇಕೆ ಬಂದು ಎಂಬುದು ತಿಳಿಯಲಿಲ್ಲ. ಗಂಗಮ್ಮನೇ ಹೇಳಿದು, “ಈ ಗುಟ್ಟು ನನಗೊಬ್ಬಳಿಗೇ ತಿಳಿದಿದೆ ನಾನು ಎಲ್ಲಿಯಾದರೂ ಬಾಯಿಬಿಟ್ಟೇನೆಂಬ ಭಯ ಆ ಜಗರಾಯನಿಗೆ. ಅದಕ್ಕಾಗಿ ನನ್ನನ್ನು ಕೊಲ್ಲಿಸುವ ಹಂಚಿಕೆ ಹೂಡಿದ. ನಾನು ಅಲ್ಲಿಂದ ತಪ್ಪಿಸಿಕೊಂಡೆ. ಆದರೆ ದೂತರು ಬೆನ್ನಟ್ಟಿದರು. ಕೊನೆಗೆ ನಿಮ್ಮನ್ನೇ ಮೊರೆಹೋಗಲು ಬಂದೆ. ನೀವು ಎಂದರೆ ಆ ನೀಚನಿಗೆ ಸಿಂಹಸ್ವಪ್ನ.”

ಎಚ್ಚಮನಾಯಕನಿಗೆ ಚಿಂತೆ ಒತ್ತರಿಸಿ ಬಂತು. ಹಾಗಾದರೆ ತನ್ನ ಪ್ರಭುವಿನ ವಂಶದ ಕೊನೆಯ ಕುಡಿಗಳೆಲ್ಲ ಈಗ ಸೆರೆಯಲ್ಲಿವೆ. ತಾನೀಗ ಆತುರಪಟ್ಟು ಯುದ್ಧಕ್ಕೆ ಹೊರಡುವುದು ಸರಿಯಲ್ಲ. ಆ ರಕ್ಕಸ ಜಗರಾಯ ರಾಜಪರಿವಾರದವರನ್ನೆಲ್ಲ ಸೆರೆಮನೆಯಲ್ಲಿಯೇ ಕೊಲ್ಲಿಸಿದರೆ? ತನ್ನ ತಮ್ಮಂದಿರು ಹಾಗೂ ಭಾವಮೈದುನ ಚಿನ್ನ – ಇವರೊಡನೆ ಪರ್ಯಾಲೋಚಿಸಿದನು. ಕೊನೆಯ ಪಕ್ಷ ಶ್ರೀರಂಗರಾಯ ಮಕ್ಕಳಲ್ಲಿ ಒಬ್ಬರನ್ನಾದರೂ ಬಿಡಿಸಿ ಅವರ ಹೆಸರಿನಲ್ಲಿ ಯುದ್ದ ಹೂಡಬೇಕು ಎಂದು ನಿಶ್ಚಯಿಸಿದನು.

ಆದರೆ ಸೆರೆಮನೆಯಲ್ಲಿರುವ ಅವರನ್ನು ಬಿಡಿಸುವುದು ಹೇಗೆ? ಎಚ್ಚಮನು ಚಿಂತೆಗೊಳಗಾದನು. ಆಗ ಗಂಗಮ್ಮನೇ ಒಂದು ಉಪಾಯ ಸೂಚಿಸಿದಳು. ಅರಮನೆಯ ಮಡಿವಾಳರಿಂದ ಈ ಕೆಲಸ ಸಾಧ್ಯವೆಂದೂ ಹಿರಿಯ ಮಡಿವಾಳನ ಹೆಸರು ಗಂಗಪ್ಪವೆಂದು ತಿಳಿಸಿದಳು. “ನಾಯಕರೇ, ನನ್ನ ಮಗು ಎಲ್ಲಾದರೂ ಸುಖವಾಗಿರಲಿ. ಆದರೆ ಆ ರಾಜವಂಶ ಹತ್ತಿದ ಸಿಂಹಾಸನ ಏರಿ ಪಾಪ ಕಟ್ಟಿಕೊಳ್ಳುವುದು ಬೇಡ” ಎಂದಳು.

ರಾಜವಂಶದ ರಕ್ಷಣೆ

ಎಚ್ಚಮನು ಸ್ವಲ್ಪವೂ ವಿಳಂಬ ಮಾಡದೆ, ವೇಷ ಮರೆಸಿಕೊಂಡು ಚಂದ್ರಗಿರಿಯ ಮಡಿವಾಳ ಬೀದಿಯನ್ನು ತಲುಪಿದನು. ಗಂಗಪ್ಪನನ್ನು ಕಂಡು, ತನ್ನ ಯೋಜನೆಯನ್ನು ತಿಳಿಸಿದ. ಗಂಗಪ್ಪ ಕೂಡಲೇ ಒಪ್ಪಲಿಲ್ಲ. ಎಚ್ಚಮನು ಅವನಿಗೆ ಹಣ ಕೊಟ್ಟು, ಸವಿ ಮಾತುಗಳನ್ನಾಡಿ ಒಪ್ಪಿಸಿದ. ಗಂಗಪ್ಪನು ಒಪ್ಪಿಕೊಳ್ಳಲು, ತಾಳೇಗರಿಯ ಮೇಲೆ ಶ್ರೀರಂಗರಾಯನಿಗೊಂದು ಪತ್ರವನ್ನು ಬರೆದುಕೊಟ್ಟ. ಅದರಲ್ಲಿ ’ಮಡಿವಾಳನ ವಶಕ್ಕೆ ತಮ್ಮ ಕುಮಾರರಲ್ಲಿ ಒಬ್ಬರನ್ನು ಒಪ್ಪಿಸಿ, ತಾವು ಸಂಶಯಪಡಬೇಕಾಗಿಲ್ಲ. ತಮ್ಮ ಬಿಡುಗಡೆಯ ದಿನಗಳು ಹತ್ತಿರ ಇವೆ’ ಎಂದು ತಿಳಿಯಪಡಿಸಿದನು. ಗಂಗಪ್ಪನೇ ಆ ಪತ್ರವನ್ನು ಶ್ರೀರಂಗರಾಯನಿಗೆ ತಲುಪಿಸಿದ. ಪಾಪ, ಶ್ರೀರಂಗರಾಯ ಸೆರೆಮನೆಯಲ್ಲಿ ಕೊಳೆಯುತ್ತಿದ್ದ. ಕಾಗದ ಕಂಡಾಗ ಆತನ ಆನಂದಕ್ಕೆ ಪಾರವೇ ಇಲ್ಲವಾಯಿತು. ತನ್ನ ಎರಡನೆ ಮಗ, ಹತ್ತು ವರ್ಷದ ಚಿನ್ನ ವೆಂಕಟನನ್ನು ಗಂಗಪ್ಪನ ವಶಕ್ಕೆ ಸಂತೋಷದಿಂದ ಒಪ್ಪಿಸಿದನು. ಮಡಿವಾಳನು ತನ್ನ ಕೊಳಕು ಬಟ್ಟೆಯ ಗಂಟಿನಲ್ಲಿ ಅವನನ್ನು ಮುಚ್ಚಿಟ್ಟು ತನ್ನ ಮನೆಗೆ ಸಾಗಿಸಿದನು. ಮೂರು ದಿನ ತನ್ನ ಮನೆಯಲ್ಲೇ ಚಿನ್ನವೆಂಕಟನನ್ನಿಟ್ಟುಕೊಂಡು ಎಚ್ಚಮನಿಗೆ ವರ್ತಮಾನ ಕಳುಹಿಸಿದನು.

ಎಚ್ಚಮನಿಗೆ ಬಹಳ ಸಂತೋಷವಾಯಿತು. ಮಡಿವಾಳನ ಮನೆಯಿಂದ ರಾಜಕುಮಾರನನ್ನು ಕರೆದುಕೊಂಡು ಹೋಗಿ ತಂಜಾವೂರಿನ ರಘುನಾಥನಾಯಕನಲ್ಲಿ ಬಿಟ್ಟು ಬಂದನು. ಚಿನ್ನವೆಂಕಟರಾಯನ ಹೆಸರಿನಲ್ಲಿ ಜಗರಾಯನ ಮೇಲೆ ಯುದ್ಧವನ್ನು ಘೋಷಿಸುವುದಕ್ಕಾಗಿ ಜನರನ್ನು ತನ್ನ ಕಡೆಗೆ ಒಲಿಸಿಕೊಳ್ಳತೊಡಗಿದನು.

ಚಿನ್ನವೆಂಕಟನು ತಪ್ಪಿಸಿಕೊಂಡ ಸುದ್ದಿ ಜಗರಾಯನಿಗೆ ತಿಳಿಯಿತು. ಅವನಿಗೆ ಗಾಬರಿಯಾಯಿತು. ಆದರೆ ಅದರ ಹಿನ್ನೆಲೆಯನ್ನು ಪತ್ತೆಮಾಡಲು ಆಗಿಲ್ಲ. ಅವನು ಸೆರೆಮನೆಗೆ ಇನ್ನೂ ಬಲವಾದ ಕಾವಲು ಹಾಕಿದನು.

ಸೇಡಿನ ಕಿಡಿ

ಚಿನ್ನವೆಂಕಟನನ್ನು ತಂದಿಟ್ಟುಕೊಂಡ ಎಚ್ಚಮನು ಮುಂದಿನ ಕಾರ್ಯಗಳ ಬಗ್ಗೆ ಚುರುಕಾಗಿ ಯೋಚಿಸುತ್ತಿದ್ದನು. ದಿನದಿನಕ್ಕೂ ಅವನ ಪಕ್ಷ ಬೆಳೆದು ದೊಡ್ಡದಾಗುತ್ತಿತ್ತು. ಬಲವಾದ ಸೇನೆಯೂ ಸಿದ್ಧವಾಯಿತು. ಅಷ್ಟರಲ್ಲಿ ಒಂದು ದಿನ ಚಂದ್ರಗಿರಿಯಿಂದ ಏಳೆಂಟು ಜನ ಸರದಾರರು ಎಚ್ಚಮನು ಬಳಿ ಬಂದರು. ಅವರೆಲ್ಲರೂ ಜಗರಾಯನ ಪರಿವಾರದವರೆಂದು ಚೆನ್ನಾಗಿ ಬಲ್ಲ ಎಚ್ಚಮ ತಕ್ಕಷ್ಟು ಮುಂಜಾಗ್ರತೆ ವಹಿಸಿ, ಅವರನ್ನು ಒಳಕ್ಕೆ ಬರಮಾಡಿಕೊಂಡ. ಅವರೆಲ್ಲರ ಮುಖಗಳೂ ಬಾಡಿಹೋಗಿದ್ದವು.

“ನಾಯಕರೆ, ಇನ್ನು ಆ ಚಂಡಾಲನ ಸಹವಾಸ ಸಾಕು. ತಾವು ಒಬ್ಬರೇ ಪ್ರಾಮಾಣಿಕರು. ತಮ್ಮನ್ನು ಕೂಡಿಕೊಂಡರೆ ಭಯವಿಲ್ಲ. ಒಂದು ವೇಳೆ ತಮ್ಮೊಡನಿದ್ದು ಹೋರಾಡಿ ಮಡಿದರೂ ಪುಣ್ಯ ಲಭ್ಯವಾದೀತು. ಇನ್ನು ನಾವೆಲ್ಲ ತಮ್ಮ ಅಡಿಯಾಳುಗಳು” ಎಂದು ಬಿನ್ನವಿಸಿದರು.

ಎಚ್ಚಮ ಅವರ ಮಾತುಗಳನ್ನು ಕೇಳಿದ. ಅವರನ್ನು ನಂಬಬೇಕೆ ಬೇಡವೇ ಎಂದು ಅವನಿಗೆ ಯೋಚನೆ.

“ನಿಜ. ನಾಯಕರೇ, ತಾವು ನಮ್ಮನ್ನು ನಂಬುವುದು ಕಷ್ಟ. ಇಡೀ ರಾಜಪರಿವಾರದವರನ್ನೆಲ್ಲ ಕೊಲೆ ಮಾಡಿಸಿದ ಆ ಪಾತಕಿ ನಮ್ಮನ್ನೂ ಒಂದು ದಿನ…”

ಅವರ ಮಾತು ಮುಗಿಯುವುದರೊಳಗೇ ಎಚ್ಚಮನು ಬೆಚ್ಚಿದನು. ಅವನಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಕ್ರಮೇಣ ಸಾವರಿಸಿಕೊಂಡು “ಇದು ನಿಜವೇ?” ಎನ್ನಲು ಅವರು ವಿವರವಾಗಿ ಎಲ್ಲವನ್ನೂ ಹೇಳಿದರು. ಶ್ರೀರಂಗ ರಾಯನ ಪರಿವಾರದಲ್ಲಿ ಒಬ್ಬರೂ ಉಳಿದಿಲ್ಲ ಎಂದರು.

ಎಚ್ಚಮನಿಗೆ ದುಃಖ, ಕೋಪಗಳನ್ನು ತಡೆದುಕೊಳ್ಳಲಾಗಲಿಲ್ಲ, ’ಅಯ್ಯೋ, ಚಕ್ರವರ್ತಿಗಳಿಗೆ ನಾನು ನೀಡಿದ ಭಾಷೆ ತಪ್ಪಿತೆ? ನಾನಿನ್ನು ಬದುಕಿದ್ದು ಏನು ಪ್ರಯೋಜನ?’ ಎಂದು ಹಲುಬಿದನು.

ಸರದಾರರು ಒಕ್ಕೊರಲಿನಿಂದ, “ಸೇಡು ತೀರಿಸಲೇಬೇಕು ನಾಯಕರೇ, ಜಗರಾಯ ಇನ್ನೂ ಬದುಕಿದ್ದಾನೆ. ಅವನಿಗೆ ಶಿಕ್ಷೆಯಾಗಬೇಕು” ಎಂದರು.

ಹೌದು, ಶಿಕ್ಷೆ! ’ಶ್ರೀರಂಗರಾಯನ ಪರಿವಾರದ ಒಂದು ಕುಡಿಯನ್ನು ತಾನು ಉಳಿಸಿದ್ದೇನೆ. ಅದನ್ನು ಪಾಲಿಸಬೇಕು. ಜಗರಾಯನ ತಲೆ ಅದಕ್ಕೆ ಬಲಿಯಾಗಬೇಕು. ರಾಜವಂಶಕ್ಕೆ ನ್ಯಾಯ ದೊರಕಬೇಕು’ ಎಂದು ಎಚ್ಚಮ ನಿರ್ಧರಿಸಿದನು.

ಎಚ್ಚಮನು ತಕ್ಷಣವೇ ತಂಜಾವೂರಿಗೆ ಹೊರಟನು. ಚಿನ್ನವೆಂಕಟನನ್ನು ಕರೆದುಕೊಂಡು, ರಘುನಾಥನೊಡನೆ ಪ್ರತಾಪದುರ್ಗವನ್ನು ತಲುಪಿದನು. ರಘುನಾಥನ ದೊಡ್ಡ ಸೇನೆಯೂ ಜೊತೆಗಿತ್ತು. ಪ್ರತಾಪದುರ್ಗದಲ್ಲಂತೂ ಸೇನಾ ಸಮುದ್ರವೇ ನೆರೆದಿತ್ತು. ರಾಜಪರಿವಾರದ ಕಗ್ಗೊಲೆಯಿಂದ ಪ್ರಜೆಗಳೆಲ್ಲರೂ ಕೆರಳಿದ್ದರು. ಎಚ್ಚಮನ ಸಾಹಸದಿಂದ ಚಿನ್ನವೆಂಕಟನೊಬ್ಬ ಉಳಿದಿದ್ದಾನೆಂಬ ಸುದ್ದಿ ತಿಳಿದೊಡನೆಯೇ ಜನಸಮೂಹವೆಲ್ಲ ಎಚ್ಚಮನನ್ನು ಕೂಡಿಕೊಂಡಿತು.

ಪ್ರಬಲ ಸೇನೆಯೊಡನೆ ಎಚ್ಚಮನು ಚಂದ್ರಗಿರಿಯನ್ನು ಮುತ್ತಿದನು. ಜಗರಾಯನು ತನ್ನ ಸೇನೆಯನ್ನು ಸಿದ್ಧಗೊಳಿಸಿ ಕೋಟೆಯ ಬಾಗಿಲಗಳನ್ನು ಮುಚ್ಚಿಸುವಷ್ಟರಲ್ಲಯೇ ಎಚ್ಚಮನ ಸೇನೆ ಒಳನುಗ್ಗಿತು. ಎಚ್ಚಮನಿಗೆ ವೀರಾವೇಶ ಬಂದಿತು. ವಿಜಯನಗರದ ರತ್ನ ಸಿಂಹಾಸನದ ಪ್ರಬಲ ವೈರಿಯನ್ನು ಎದುರಿಸುವ ಸೌಭಾಗ್ಯ ಒದಗಿತೆಂದು ಹಿಗ್ಗಿದನು. ಹಿರಿದ ಕತ್ತಿಯನ್ನು ಝಳಪಿಸುತ್ತಾ ಎದುರಿಗೆ ಸಿಕ್ಕ ಶತ್ರುಸೇನೆಯನ್ನು ತುಂಡರಿಸುತ್ತಾ ತನ್ನ ಬೇಟೆ ಜಗರಾಯನನ್ನು ಹುಡುಕಾಡಿದನು. ಇಡೀ ಕೋಟೆ ನಿರಾಯಾಸವಾಗಿ ಕೈಸೇರಿದರೂ ಜಗರಾಯ ಸಿಕ್ಕಲಿಲ್ಲ. ಚಿಕ್ಕರಾಯನೊಡನೆ ಅವನು ತಪ್ಪಿಸಿಕೊಂಡನು. ಎಚ್ಚಮನಿಗೆ ನಿರಾಶೆಯಾಯಿತು.

ಚಿನ್ನವೆಂಕಟನನ್ನು ದೊರೆಯೆಂದು ಸಾರಲಾಯಿತು. ಸಿಂಹಾಸನದಲ್ಲಿ ನ್ಯಾಯವಾದ ಉತ್ತರಾಧಿಕಾರಿ ಕುಳಿತಿದನ್ನು ಕಂಡ ಎಚ್ಚಮನ ಹೃದಯ ತುಂಬಿ ಬಂತು. ಆದರೂ ಆ ನೀಚ ಜಗರಾಯ ಬದುಕಿರುವವರೆಗೂ ಆತಂಕ ತಪ್ಪಿದ್ದಲ್ಲ ಎಂದುಕೊಂಡನು.

ಮುಂದೆ ಕೆಲವು ದಿನಗಳಲ್ಲಿ ಎಚ್ಚಮನ ಹೆಂಡತಿ ವೆಂಕಟಮ್ಮ ತೀರಿಹೋದಳೆಂಬ ಘೋರ ವಾರ್ತೆ ತಲುಪಿತು. ವಿಧಿಯಿಲ್ಲದೆ ಅವನು ರಾಜಧಾನಿಯಿಂದ ಪ್ರತಾಪದುರ್ಗಕ್ಕೆ ಹೊರಡಬೇಕಾಯಿತು.

ಪ್ರತಾಪದುರ್ಗದಲ್ಲಿ ಎಚ್ಚಮ ಪತ್ನಿಯ ಅಂತ್ಯಕ್ರಿಯೆಯನ್ನು ಮಾಡಿದ. ವಿಜಯನಗರದ ಸಿಂಹಾಸನವನ್ನು ಚಿನ್ನವೆಂಕಟನು ಏರುವುದನ್ನೇ ಕಾದಿದ್ದು ಆಕೆ ಮರಣ ಹೊಂದಿದಂತಿತ್ತು. ಬಾಳಿನ ಯಾವ ಸುಖವನ್ನೂ ಕಾಣದೆ, ಪ್ರಭುವಿನ ಸೇವೆಗಾಗಿ ಎಚ್ಚಮನನ್ನು ಉತ್ತೇಜಿಸಿದ ಆ ವೀರ ವನಿತೆಯನ್ನು ಎಚ್ಚಮ ಸ್ಮರಿಸಿ ಕಣ್ಣೀರು ಹಾಕಿದನು.

ಅಷ್ಟರಲ್ಲಿ ತಂಜಾವೂರಿನ ಎಚ್ಚಮನಿಗೆ ಕರೆಬಂತು. ರಘುನಾಥನು ಎಚ್ಚಮನನ್ನು ಸೈನ್ಯಸಮೇತ ಕೂಡಲೇ ಹೊರಟುಬರಲು  ತಿಳಿಸಿದ್ದನು. ಆಗ ’ಇದು ಜಗರಾಯನ ಪ್ರಭಾವವೇ ಇರಬೇಕು’ ಎಂದುಕೊಂಡ ಎಚ್ಚಮ. ತಕ್ಷಣ ಸೈನ್ಯ ಸಮೇತ ತಂಜಾವೂರಿಗೆ ಧಾವಿಸಿದ. ರಘುನಾಥನೂ ಸೇನಾ ಸಮೇತನಾಗಿ ಅವನನ್ನು ಕೂಡಿಕೊಂಡ. ಎದುರಿಗೆ ಜಗರಾಯನ ಭಾರೀ ಸೈನ್ಯ! ಜಿಂಜಿ ಮತ್ತು ಮಧುರೆಯ ನಾಯಕರೂ ಅವನೊಡನೆ ಸೇರಿದ್ದರು.

ಎಚ್ಚಮನ ರೋಷ ಉಕ್ಕಿಬಂತು. “ತಲೆಮರೆಸಿ ಕೊಂಡವನು ಮತ್ತೆ ಸಿಕ್ಕೆಯಾ ದ್ರೋಹಿ!” ಎಂದು ಗರ್ಜಿಸಿ ಕುದುರೆಯನ್ನು ನೇರವಾಗಿ ಜಗರಾಯನ ಸಮ್ಮುಖದಲ್ಲಿ ತಂದು ನಿಲ್ಲಿಸಿ ಕತ್ತಿಯನ್ನು ಝಳಪಿಸಿದನು. ಜಗರಾಯನ ಕೈ ಒರೆಯನ್ನು ಸೇರುವಷ್ಟರಲ್ಲೇ ಅವನ ರುಂಡ ಕೆಳಗೆ ಉರುಳಿಬಿತ್ತು. ಮುಂದಿನ ಯುದ್ಧ ಸುಲಭವಾಗಿ ಮುಗಿಯಿತು. ಈ ಘಟನೆ ನಡೆದದ್ದು ೧೬೧೭ ರಲ್ಲಿ; ತಂಜಾವೂರು ಜಿಲ್ಲೆಯ ತೋಹುರ‍್ ಎಂಬ ಹಳ್ಳಿಯ ಬಳಿ.

ರಾಜಪ್ರತಿನಿಧಿ

ರಾಮದೇವನೆಂಬ ಹೆಸರಿನಲ್ಲಿ ಚಿನ್ನವೆಂಕಟನಿಗೆ ಕುಂಭಕೋಣಂ ಎಂಬಲ್ಲಿ ಎಚ್ಚಮನು ವಿಧ್ಯುಕ್ತನಾಗಿ ಪಟ್ಟಾಭಿಷೇಕ ಮಾಡಿದನು. ಅವನು ಚಿಕ್ಕವನಾದುದರಿಂದ ರಾಜಪ್ರತಿನಿಧಿಯಾಗಿ ಕಾರ್ಯವನ್ನು ವಹಿಸಿಕೊಂಡನು. ಹಳೆಯ ರಾಜಧಾನಿ ಚಂದ್ರಗಿರಿಯ ಲಕ್ಷ ಏಕೋ ಸರಿಯಿಲ್ಲವೆನಿಸಿತು. ಎಚ್ಚಮನು ವೆಲ್ಲೂರನ್ನು ಹೊಸ ರಾಜಧಾನಿಯಾಗಿ ಮಾಡಿದನು.

ಸ್ವಾಮಿನಿಷ್ಠ ಎಚ್ಚಮನಾಯಕನು ತನ್ನ ಒಡೆಯನ ಕಾರ್ಯಕ್ಕಾಗಿ ತನ್ನ ಎಲ್ಲ ಸುಖಗಳನ್ನೂ ಕಡೆಗಣಿಸಿದರು. ರಾಮದೇವನಿಗೆ ರಾಜಕಾರ್ಯದ ಪರಿಚಯ ಮಾಡಿಸತೊಡಗಿದನು. ಆದರೆ, ವಿಜಯನಗರದ ದುರ್ದೈವ ಅಲ್ಲಿಗೇ ಮುಗಿಯಲಿಲ್ಲ. ಮಾಂಡಲಿಕರು, ಸರದಾರರುಗಳು ಪರಸ್ಪರ ಕಚ್ಚಾಡುತ್ತೇ ಇದ್ದರು. ಎಚ್ಚಮನು ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದರೂ ಅದು ಸಫಲವಾಗಲಿಲ್ಲ. ಮೈಸೂರಿನ ಒಡೆಯರು ಸ್ವತಂತ್ರರಾಗಿದ್ದರು. ಇಕ್ಕೇರಿಯ ವೆಂಕಟಪ್ಪನಾಯಕನೂ ವಿಜಯ ನಗರದಿಂದ ಬಿಡುಗಡೆ ಹೊಂದಿದನು. ಅತ್ಯಂತ ದೊಡ್ಡ ಸಾಮ್ರಾಜ್ಯವಾಗಿದ್ದ ವಿಜಯನಗರ ಇದೀಗ ಕೆಲವೇ ಪಾಳಯಗಳ ಚಿಕ್ಕ ರಾಜ್ಯವಾಗತೊಡಗಿತು. ಎಚ್ಚಮ ನಾಯಕನು ಒಂದು ಭಾಗದಲ್ಲೆದ್ದ ದಂಗೆಯನ್ನಡಗಿಸುವ ಹೊತ್ತಿಗೆ ಮತ್ತೊಂದು ಕಡೆ ದಂಗೆ ಏಳುತ್ತಿದ್ದರು.

ಜಗರಾಯನ ರುಂಡ ಕೆಳಗೆ ಉರುಳಿಬಿತ್ತು

೧೬೨೨ ರಲ್ಲಿ ಪುಲಿಕಟ್‌ನಲ್ಲಿ ಮಾಂಡಲಿಕನಾಗಿದ್ದ ಯತಿರಾಜ ಸ್ವತಂತ್ರನಾಗಲು ಹವಣಿಸಿದನು. ಆಗ ನಮ್ಮ ದೇಶಕ್ಕೆ ಯುರೋಪ್‌ನಿಂದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಇಂಗ್ಲಿಷರು ವ್ಯಾಪಾರಕ್ಕೆ ಬರತೊಡಗಿದ್ದರು. ಇವರ ಪೈಕಿ ಡಚ್ಚರು ಯತಿರಾಜನಿಗೆ ಸಹಾಯ ಮಾಡಲು ಮುಂದೆ ಬಂದರು. ವಿಷಯವನ್ನು ತಿಳಿದ ಎಚ್ಚಮನು ಸೇನೆಯೊಡನೆ ಪುಲಿಕಟ್ ತಲುಪಿದನು. ಕೆಲವು ದಿನ ಯುದ್ಧ ನಡೆದರೂ ಸೋಲು-ಗೆಲುವುಗಳು ತೀರ್ಮಾನವಾಗಲಿಲ್ಲ. ಕಡೆಗೆ ಯತಿರಾಜನೇ ಸಂಧಿ ಮಾಡಿಕೊಳ್ಳುವೆನೆಂದು ಪತ್ರವನ್ನು ಬರೆದು ಕಳುಹಿಸಿದನು. ಎಚ್ಚಮನಿಗೆ ಆನಂದವಾಯಿತು. ಯತಿರಾಜನ ಮಗಳು ಕೊಂಡಾಂಬೆಯನ್ನು ರಾಮದೇವನಿಗೆ ಕೊಟ್ಟು ಮದುವೆಯೂ ನಡೆದುಹೋಯಿತು.

ಆದರೂ ಜಿಂಜಿ, ಮಧುರೆಗಳ ನಾಯಕರು ಸ್ವತಂತ್ರರಾಗುವ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ತಂಜಾ …………….. ಸರದಾರರು ತಮ್ಮದೇ ಸ್ವತಂತ್ರ ಪಾಳಯಪಟ್ಟುಗಳನ್ನು ನಿರ್ಮಿಸಿಕೊಂಡರು. ದೇಶದ ಶಾಂತಿ ಅಲ್ಲೋಲಕಲ್ಲೋಲವಾಯಿತು. ಇದೂ ಸಾಲದೆಂಬಂತೆ ಕ್ಷಾಮಭೀತಿ ತಲೆದೋರಿತು. ಮಕ್ಕಳುಗಳನ್ನೇ ಮಾರಿಕೊಳ್ಳುವ ಸ್ಥಿತಿ ಬಂತು.

ಎಚ್ಚಮನಾಯಕನು ಜನರ ಹಸಿವಿನ ಕೂಗನ್ನು ನಿವಾರಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಇಪ್ಪತ್ತೈದು ನೀರಾವರಿ ಕೆಲಸಗಳನ್ನು ಆರಂಭಿಸಿದನು. ಬಡಜನರಿಗೆ ಆಹಾರವನ್ನು ಒದಗಿಸುವ ಏರ್ಪಾಟನ್ನು ಮಾಡಿದನು.

ದುಃಖದ ಮುಪ್ಪು

ಆದರೆ ಕನ್ನಡಿಗರ ದುರ್ದೈವ; ಅಧಿಕಾರಿಗಳ ವಂಚನೆಯಿಂದ ಎಚ್ಚಮನ ಸಹಾಯಗಳು ಜನರನ್ನು ತಲುಪಲಿಲ್ಲ. ಸರದಾರರುಗಳೆಲ್ಲರೂ ಸ್ವಾರ್ಥವಶರಾಗಿ ಎಚ್ಚಮನನ್ನು ಕಡೆಗಣಿಸತೊಡಗಿದರು. ಅನ್ಯಾಯಗಳನ್ನು ದ್ವೇಷಿಸುತ್ತಿದ್ದ ಆ ಪುಣ್ಯಜೀವಿಯನ್ನು ಈ ಪಾಪಿಗಳೆಲ್ಲ ದ್ವೇಷಿಸುತ್ತಿದ್ದರು. ರಾಮದೇವನೂ ಇದೇ ಚಿಂತೆಯಲ್ಲೇ ರೋಗಿಯಾಗಿ ಹಾಸಿಗೆ ಹಿಡಿದನು. ಕೊನೆಗೆ ೧೬೩೦ ರಲ್ಲಿ ಆತನು ತೀರಿಕೊಂಡನು.

ರಾಮದೇವನಿಗೆ ಮಕ್ಕಳಿರಲಿಲ್ಲ. ರಾಮದೇವನ ವಂಶದವನೇ ಆದ ವೆಂಕಟಪತಿರಾಯ ಎಂಬಾತನು ಉತ್ತರಾಧಿಕಾರಿಯಾಗಿ ಬಂದನು.ಆತನೂ ಈ ಹಿಂದೆ ಈ ಸಿಂಹಾಸನಕ್ಕಾಗಿ ದಂಗೆ ಎದ್ದವನೇ. ಇದರಿಂದ ಎಚ್ಚಮನನ್ನು ಅವನು ಅಷ್ಟಾಗಿ ಇಷ್ಟಪಡಲಿಲ್ಲ.

ಎಚ್ಚಮನು ತನ್ನ ಕೆಲಸ ಮುಗಿಯಿತೆಂದುಕೊಂಡನು. ವೆಲ್ಲೂರಿನಿಂದ ಪ್ರತಾಪದುರ್ಗಕ್ಕೆ ಮರಳಿದನು. ವೆಂಕಟಪತಿಯು ತನ್ನನ್ನು ಇಷ್ಟಪಡದಿದ್ದರೂ ಎಚ್ಚಮನು ತನ್ನ ರಾಜನಿಷ್ಠೆಯನ್ನು ಬಿಡಲಲ್ಲ. ವಿಜಯನಗರ ಸಾಮ್ರಾಜ್ಯವನ್ನು ಧಿಕ್ಕರಿಸಿ, ತಾನೇ ಸ್ವತಂತ್ರನಾಗಲು ಎಂದೂ ಬಯಸಲಿಲ್ಲ. ಆದರೆ ಈ ಜನರ ರೀತಿನೀತಿ, ಸ್ವಾರ್ಥ, ವಂಚನೆ-ಇವುಗಳನ್ನು ಕಂಡು ವ್ಯಥೆಪಟ್ಟನು. ಅಂತಹ ಭವ್ಯ ಸಾಮ್ರಾಜ್ಯ ನಾಶವಾಗಲು ಈ ನಿರ್ಭಾಗ್ಯ ಜನಗಳ ಕಚ್ಚಾಟವೇ ಕಾರಣ ಎಂದುಕೊಂಡನು.

ಈ ಸ್ವಾಮಿನಿಷ್ಠೆ, ಕೆಚ್ಚೆದೆಯ ಕಡುಗಲಿ ೧೬೩೯ ರಲ್ಲಿ ಅಮರನಾದನು. ಈ ವೀರ ಕನ್ನಡಿಗರ ಕತೆ ನಮಗೊಂದು ಪುಣ್ಯಕಥೆ