ಏನು ಕವಿತೆ ಬರೆಯುವಿರೋ
ಸಾಕಪ್ಪಾ ದೇವರೆ
ಎಲ್ಲ ಮನೆಯ ಗಂಡಸರೂ
ನಿಮ್ಮಂತೆಯೆ ಇರುವರೆ !

ಸಾಕು ಸಾಕು ನಿಮ್ಮ ಕವಿತೆ,
ಕರೆದುಕೊಳ್ಳಿ ಮಕ್ಕಳ
ಹೊತ್ತಿಗೆ ಸರಿಯಾಗಿ ಬೇಕು
ನಿಮಗೆ ಊಟ ಪುಷ್ಕಳ.

ನನ್ನಡಿಗೆಯ ರುಚಿ ಇರುವುದೆ
ನೀವು ಬರೆದ ಕವಿತೆಗೆ ?
ಉಣ್ಣಬಹುದೆ ತಿನ್ನಬಹುದೆ
ತಣಿವುಂಟೇ ಹೊಟ್ಟೆಗೆ ?

ಒಂದು ಗಂಡು ಒಂದು ಹೆಣ್ಣು
ನಾನು ಹಡೆದ ಕವಿತೆಯು,
ಒಂದು ರನ್ನ ಒಂದು ಚಿನ್ನ
ಸಂತೋಷದ ಬುಗ್ಗೆಯು !

ನಗುವ ಅಳುವ ಕವಿತೆಗಿಂತ
ಬರೆವ ಕವಿತೆ ದೊಡ್ಡದೆ ?
ಆ ಕವಿತೆಗೆ ಭ್ರಾಂತರಾಗಿ
ಈ ಕವಿತೆಯ ಮರೆವರೆ ?

ಒಲೆಯ ಮುಂದೆ ಬಂದಾದರು
ನನ್ನ ಪಾಡ ನೋಡದೆ,
ಕೋಣೆಯ ಕದವಿಕ್ಕಿ ಕುಳಿತು
ಒಳಗಿರುವಿರೆ ಸುಮ್ಮನೆ !

ಬಂದರೆ ಸರಿ ಹೊರಗೆ ಈಗ
ಇಲ್ಲದಿರಲು ನೋಡಿರಿ
ಇದೋ ನಿಮಗೆ ಒಂದು ಸುದ್ದಿ
ನನ್ನ ದೂರಬೇಡಿರಿ-

ಒಲೆಯ ಬದಿಗೆ ನಿಮ್ಮ ಕುವರ
ನೀವು ಬರೆದ ಕಂತೆಯ
ತಂದಿರುವನು, ನಿಮಿಷದಲ್ಲಿ
ಮಾಡಬಹುದು ಬೂದಿಯ.