ವಾಣಿಜ್ಯ ವಿಷಯದಲ್ಲಿ ಪದವೀಧರರೂ, ಕೆನ್‌ ಸ್ಕೂಲ್‌ ಆಫ್‌ ಆರ್ಟ್ ನಲ್ಲಿ ಕಲಾಧ್ಯಯನ ಮಾಡಿರುವವರೂ ಆದ ಸುರೇಶ್‌ ಅವರು ಜನಿಸಿದ್ದು ೧೯೫೦ ರಲ್ಲಿ, ಚಿತ್ರಕಲೆ ಸಂಗೀತ ನಾಟಕ ನೃತ್ಯಗಳಲ್ಲೂ ವಿಶೇಷ ಆಸಕ್ತಿ ಇರುವ ಸುರೇಶ ಅವರು ಕಲಾ ವಿಮರ್ಶಕರಾಗಿ ಖ್ಯಾತರಾಗಿದ್ದಾರೆ.

ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯಲ್ಲಿ ಪ್ರಸುಕ್ತ ಕಾರ್ಯಕ್ರಮಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೆ ಬೆಂಗಳೂರು ಆರ್ಟ್ ಸರ್ಕಲ್‌ನ ಉಪಾಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಕಟನೆಗಳ ಸಲಹೆಗಾರರಾಗಿ, ನೂಪುರ ನೃತ್ಯ ಶಾಲೆಯ ಸದಸ್ಯರಾಗಿ ಹಲವಾರು ಬಗೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೆಹಲಿ, ಮುಂಬೈ, ಬೆಂಗಳೂರು, ಗೋವಾ ಮುಂತಾದೆಡೆಗಳಲ್ಲಿ ಇವರ ವೈಯುಕ್ತಿಕ ಹಾಗೂ ಸಮೂಹ ಚಿತ್ರ ಕಲಾ ಪ್ರದರ್ಶನಗಳು ಏರ್ಪಟ್ಟಿವೆ. ೧೯೭೫ ರಿಂದ ಕನ್ನಡ ಪ್ರಭ ಮತ್ತು ಇಂಡಿಯನ್‌ ಎಕ್ಸ್ ಪ್ರೆಸ್‌ ವೃತ್ತ ಪತ್ರಿಕೆಗಳಲ್ಲಿ ಕಲಾ ವಿಮರ್ಶಕರಾಗಿ ಜನ ಪ್ರಿಯತೆಗಳಿಸಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಸ್ಥಳೀಯ ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ. ಕಲೆಗೆ ಸಂಬಂಧಿಸಿದಂತೆ ಇವರು ಮಾಡಿರುವ ಚರ್ಚೆ ಹಾಗೂ ಭಾಷಣಗಳು ಆಕಾಶವಾಣಿಯ ಮೂಲಕ ಪ್ರಸಾರವಾಗಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಲಲಿತ ಕಲಾ ಅಕಾಡೆಮಿಗಳ ಸದಸ್ಯರಾಗಿ ಹಲವು ಅವಧಿಗಳು ಸೇವೆ ಸಲ್ಲಿಸಿರುವ ಇವರು ಈ ಅಕಾಡೆಮಿಗಳ ಆಶ್ರಯದಲ್ಲಿ ಹಲವಾರು ಸಂಚಿಕೆಗಳ ಸಂಪಾದಕರಾಗಿಯೂ ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಪಕ- ನಿರ್ದೇಶಕರಾಗಿಯೂ, ದೂರದರ್ಶನದ ಮಾಧ್ಯಮದಲ್ಲಿಯೂ ಕಲಾ ರಸಿಕರಿಗೆ ಚಿರಪರಿಚಿತರಾಗಿದ್ದಾರೆ. ಇವರ ಕಲ್ಪನೆಯ ಸಾಕಾರವಾದ ಯುವ ಬರಹಗಾರರ ಮತ್ತು ಕಲಾವಿದರ ಬಳಗ ದಶಕಗಳಿಂದಲೂ ಯಶಸ್ವಿಯಾಗಿ ನಡೆಯುತ್ತ ಬಂದಿದೆ.

ಇಂತಹ ಬಹುಮುಖ ಪ್ರತಿಭೆಯ ಶ್ರೀಯುತರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೧೯೯೮-೯೯ರ ಸಾಲಿನ ‘ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಪಡೆದಿದ್ದಾರೆ.