ಜನನ: ೧೪-೫-೧೯೩೪ ಹಾಸನ ಜಿಲ್ಲೆ ಹೊಳೆನರಸೀಪುರ.

ಮನೆತನ: ಕಲಾವಿದರ ಮನೆತನ. ತಂದೆ ಕೇಶವಯ್ಯನವರು ಸಂಗೀತ ವಿದ್ವಾಂಸರು.

ಗುರುಪರಂಪರೆ: ಪ್ರಾರಂಭಿಕ ಶಿಕ್ಷಣ ತಂದೆಯವರಲ್ಲೇ. ಮುಂದೆ ಸಂಗೀತ ಕಲಾನಿಧಿ ಡಾ|| ಆರ್.ಕೆ. ಶ್ರೀಕಂಠನ್ ಅವರಲ್ಲಿ ಶಿಕ್ಷಣ ಮುಂದುವರಿಕೆ. ವಿದ್ವತ್ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಗಳಿಸಿ ತೇರ್ಗಡೆ.

ಸಾಧನೆ: ಮೈಸೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಸೇರ್ಪಡೆ. ಮುಂದೆ ಆಕಾಶವಾಣಿ ಬೆಂಗಳೂರಿಗೆ ಸ್ಥಳಾಂತರವಾದ ಮೇಲೆ ಅಲ್ಲಿ ಹಿರಿಯ ಸಂಗೀತ ಸಂಯೋಜಕರಾಗಿ ಮುಂದೆ ನಿರ್ಮಾಪಕರಾಗಿ ಸೇವೆ ಸಲ್ಲಿಸಿ, ಆ ಅವಧಿ ಯಲ್ಲಿ ಅನೇಕ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸ್ತುತ ಪಡಿಸಿದ್ದಾರೆ. ಅನೇಕ ಧ್ವನಿ ಸುರುಳಿಗಳು ಇವರ ಕಂಠದಿಂದ ಹೊರ ಹೊಮ್ಮಿವೆ. ನಟರಾಜನ್ ಅವರ ರಮಣಾಂಜಲಿ ತಂಡದ ಪ್ರಧಾನ ಗಾಯಕರಾಗಿ ವಿಶ್ವ ಪರ್ಯಟನೆ ಮಾಡಿದ್ದಾರೆ. ಭರತನಾಟ್ಯಗಳಿಗೂ ಹಿನ್ನೆಲೆ ಗಾಯಕರಾಗಿ ನೂಪುರ ತಂಡದ ಹಿರಿಯ ಗಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ವಿದ್ಯಾಭವನದಲ್ಲೂ ಸುಗಮ ಸಂಗೀತ ವಿಭಾಗದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಳೆರಡರಲ್ಲೂ ಸಾಕಷ್ಟು ಪರಿಶ್ರಮವಿದ್ದು ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅನೇಕ ನೃತ್ಯ ಗೀತೆಗಳಿಗೂ ರಾಗ ಸಂಯೋಜನೆ ಮಾಡಿ ಹಾಡಿರುತ್ತಾರೆ. ಪು.ತಿ.ನ. ಕುವೆಂಪು ಅವರ ಗೀತೆಗಳಿಗೆ ಶಾಸ್ತ್ರೀಯ ಸಂಗೀತದ ಮೆರುಗಿನೊಂದಿಗೆ ರಾಗ ಅಳವಡಿಸಿ ಹಾಡುವುದರಲ್ಲಿ ಸಿದ್ಧ ಹಸ್ತರೆನಿಸಿದ್ದರು. ರೇಡಿಯೋ ಸಂಗೀತ ಸಮ್ಮೇಳನಗಳಲ್ಲೂ ಹಾಡಿದ್ದಾರೆ.

ಪ್ರಶಸ್ತಿ-ಸನ್ಮಾನ: ೧೯೮೪-೮೫ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ೧೯೮೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೦ರಲ್ಲಿ ಸಂತ ಶಿಶುನಾಳ ಪ್ರಶಸ್ತಿಗಳೇ ಅಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.