೧೯೨೬ರಲ್ಲಿ ಜನಿಸಿದ ಕೃಷ್ಣಮೂರ್ತಿಯವರು ಎಂ.ಎಸ್‌.ಸಿ. ಪದವೀಧರರಾಗಿದ್ದು ಮೊದಲು ಮೈಸೂರಿನಲ್ಲಿ. ನಂತರ ಬೆಂಗಳೂರಿನಲ್ಲಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪ್ರೊಫೆಸರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ಸೋದರ ಮಾವಂದಿರಾದ ಎಲ್‌.ಎಸ್‌. ನಾರಾಯಣಸ್ವಾಮಿ ಭಾಗವತರು ಹಾಗೂ ಎಲ್‌.ಎಸ್‌. ಶೇಷಗಿರಿರಾವ್‌ ಅವರಲ್ಲಿ ಸಂಗೀತ ಶಿಕ್ಷಣ ಪಡೆದು ನಾಡಿನ ಸುಪ್ರಸಿದ್ಧ ವಯೋಲಿನ್‌ ವಾದಕರಲ್ಲಿ ಅಗ್ರ ಪಂಕ್ತಿಗೆ ಸೇರಿದವರಾಗಿದ್ದಾರೆ. ಎ. ವೀರಭದ್ರಯ್ಯ ಮತ್ತು ಆನೂರು ಎಸ್‌. ರಾಮಕೃಷ್ಣ ಇವರೊಡನೆ ಕೃಷ್ಣಮೂರ್ತಿಯವರೂ ಸೇರಿ ನೀಡುತ್ತಿದ್ದ ಪಿಟೀಲುತ್ರಯ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದುವು.

ನಾಡಿನ ಹಾಗೂ ಹೊರ ನಾಡುಗಳ ಮುಂಚೂಣಿಯ ಕಲಾವಿದರಿಗೆ ಪಕ್ಕವಾದ್ಯ ನುಡಿಸಿ ಒಳ್ಳೆಯ ಕೀರ್ತಿಯನ್ನು ಪಡೆದಿದ್ದಾರೆ. ವಿಜಯ ಕಾಲೇಜ್‌ ಆಫ್‌ ಮ್ಯೂಸಿಕ್‌ ಶಾಲೆಯ ಪ್ರಾಂಶುಪಾಲರಾಗಿ ಅನೇಕಾನೇಕ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಗಾಯನ-ವಾದ್ಯಗಳ ವಾದನ ಕಲೆಯಲ್ಲಿ ತರಬೇತಿ ನೀಡಿದ್ದಾರೆ ಮತ್ತು ಇತರ ವಿದ್ವಾಂಸರುಗಳ ನೆರವಿನಿಂದ ತರಬೇತಿ ಕೊಡಿಸುತ್ತಿದ್ದಾರೆ.

ಮಲೇಶಿಯಾ, ಅಮೇರಿಕಾ ಮುಂತಾದ ಹೊರ ದೇಶಗಳಲ್ಲಿಯೂ ಸಂಗೀತ ಶಿಕ್ಷಣ ಶಿಬಿರ ಹಾಗೂ ಕಛೇರಿಗಳನ್ನು ನಡೆಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಆದರಿಸಿ ಸನ್ಮಾನಿಸಿವೆ. ‘ಸಂಗೀತ ಕಲಾ ರತ್ನ’ ‘ಕಲಾ ಭೂಷಣ’ ಮುಂತಾದವು ಇವುಗಳಲ್ಲಿ ಉಲ್ಲೇಖಾರ್ಹವಾದುವು. ೧೯೯೦-೯೧ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯನ್ನು ಗಳಿಸಿರುವ ಶ್ರೀಯುತರು ಅವರ ಬಾಳಸಂಧ್ಯೆಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲದ ನಿರಾಡಂಬರ ಜೀವನ ನಡೆಸುತ್ತಿದ್ದಾರೆ.