ಧಾರ್ಮಿಕ  ವ್ಯವಸ್ಥೆ : ಕರ್ನಾಟಕದಲ್ಲಿ ಬಹಳ ಪ್ರಾಚೀನ ಕಾಲದಿಂದಲೇ ಚತುಸ್ಸಮಯಗಳಾದ ಬೌದ್ಧ, ಜ್ಯೆನ, ವ್ಯೆಷ್ಣವ, ಮತ್ತು ಶೈವ ಧರ್ಮಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಯಾವುದು ಮೊದಲು ಎಂದು ಖಚಿತವಾಗಿ ಹೇಳುವುದು ಕಷ್ಟ. ವೈದಿಕ ಸಂಸ್ಕೃತಿಯ ಚಾತರ್ವರ್ಣ ಪದ್ಧತಿಯು ಕ್ರಮೇಣ ಜಾತಿಗಳಾಗಿ ಪರಿಣಮಿಸಿ ಶೋಷಣೆ ಹೆಚ್ಚಿತು. ಆಗ ಬೌದ್ಧ, ಜೈನ ಧರ್ಮಗಳು ಜನ್ಮತಾಳಿ ತಮ್ಮ ಪ್ರಭಾವವನ್ನು ಬೆಳಸಿಕೊಂಡವು. ಮುಂದೆ ಇವೂ ಸ್ಥಳೀಯ ಮತಭೇದಗಳೊಂದಿಗೆ ಕೂಡಿ ಶೋಷಣೆಗಿಳಿದವು. ಇವೆಲ್ಲವುಗಳಿಂದ ಬೇಸತ್ತ ಜನತೆ ಹೊಸ ಸಿದ್ದಾಂತ, ಸಾಮಾಜಿಕ, ಧಾರ್ಮಿಕ ಸುಧಾರಣೆಗಾಗಿ ಕಾತರರಾದರು. ಜನತೆಯ ನೋವುಗಳಿಗೆ ಸ್ಪಂದಿಸಿದ  ೧೨ನೆಯ ಶತಮಾನದ ಶಿವಶರಣರು ವೀರಶೈವ ಸಿದ್ಧಾಂತವನ್ನು ಮುಂದಿಟ್ಟರು. ಕರ್ನಾಟಕದ ಈ ಎಲ್ಲ ಛಾಯೆಯನ್ನು ಎಡೆದೊರೆ ನಾಡಿನಲ್ಲಿಯೂ ಕಾಣಬಹುದು.

ಬೌದ್ಧ ಧರ್ಮ : ಕ್ರಿ. ಪೂ. ೩ನೇ ಶತಮಾನದ ಅಶೋಕನ ಶಾಸನಗಳೇ ಈ ಧರ್ಮದ ಅತ್ಯಂತ ಪ್ರಾಚೀನ ದಾಖಲೆಗಳಾಗಿವೆ. ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಕೊಪ್ಪಳಗಳಲ್ಲಿ ಇವನ ಮೂರು ಶಾಸನಗಳು ಲಭ್ಯವಾಗಿವೆ. ಆದರೆ ಇವು ಬೌದ್ದಮತವು ಇಲ್ಲಿ ಪ್ರಚಾರದಲ್ಲಿದ್ದಿತೆಂದು ಹೇಳುವುದಕ್ಕಿಂತ ಅಶೋಕನ ಸಾಮ್ರಾಜ್ಯ ಇಲ್ಲಿಯವರೆಗೆ ವ್ಯಾಪಿಸಿತ್ತೆಂಬುದಕ್ಕೆ ನಿದರ್ಶನಗಳಾಗಿವೆ. ಮಸ್ಕಿಯ ಶಾಸನದಲ್ಲಿ ಅಶೋಕನು ಈ ಧರ್ಮದ ಸಂದೇಶವನ್ನು ಹೀಗೆ ಹೇಳಿದ್ದಾನೆ.

“ಈಗ ಎರಡೂವರೆ ವರ್ಷಗಳಿಗಿಂತಲೂ ಹೆಚ್ಚುಕಾಲ ನಾನು ಬುದ್ದನ ಉಪಾಸಕನಾಗಿದ್ದೇನೆ. ಈಚೆಗೆ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ (ಬೌದ್ದ) ಸಂಘಕ್ಕೆ ಸೇರಿ ಧರ್ಮೋದ್ಯೋಗದಲ್ಲಿ ತೊಡಗಿದ್ದೇನೆ. ಮೊದಲು ಜಂಬೂದ್ವೀಪದಲ್ಲಿ ಮಾನವರ ಹಾಗೂ ದೇವತೆಗಳ ಸಂಗಮ ಸಾದ್ಯವಾಗುತ್ತಿರಲ್ಲಿಲ್ಲ. ಈಗ ಅದು ಸಾಧ್ಯವಾಗಿದೆ.ಈ ಗುರಿಯನ್ನು ಶ್ರೀಮಂತ ಮಾತ್ರ ಸಾಧಿಸುತ್ತಾನೆ ಎಂದಲ್ಲ; ಬಡವನಾಗಲಿ, ಬಲ್ಲಿದನಾಗಲಿ ಧರ್ಮದಲ್ಲಿ ನಿರತನಾದರೆ ಇದನ್ನು ಪಡೆಯಬಹುದು.”

ಇದಲ್ಲದೆ ಮಸ್ಕಿಯಲ್ಲಿ ಪದ್ಮಾಸನದಲ್ಲಿ ಧ್ಯಾನಾಸಕ್ತನಾಗಿ ಕುಳಿತ ವ್ಯಕ್ತಿಯ ಶಿಲ್ಪವೊಂದು ದೊರೆತಿದೆ. ಇದು ಬಹುಶಃ  ಬುದ್ಧನದಾಗಿರಬೇಕೆಂದು ಡಾ|| ಅ. ಸುಂದರ ಅವರು (ಕ್ರಿ.ಶ. ೧ನೆಯ ಶತಮಾನ) ಊಹಿಸಿದ್ದಾರೆ. ಗ್ರೀಕ್ ದೇಶದ ಪ್ರವಾಸಿ ಹುಯೆನ್‌ತ್ಸಾಂಗ್‌ನು ಕ್ರಿ.ಶ ೭ನೆಯ ಶತಮಾನದಲ್ಲಿ ಕೊಪ್ಪಳವು ಬೌದ್ದ ಧರ್ಮದ ಕೇಂದ್ರವಾಗಿತ್ತೆಂದು ಹೇಳಿದ್ದಾನೆ. ಎಡೆದೊರೆ ನಾಡಿಗೆ ಹೊಂದಿಕೊಂಡಿರುವ ಡಂಬಳ, ಐಹೊಳೆ, ಸನ್ನತಿ ಮೊದಲಾದ ಸ್ಥಳಗಳು ಪ್ರಸಿದ್ಧ ನಿಲಯಗಳಾಗಿದ್ಧವು.

ಜೈನಧರ್ಮ : ಕರ್ನಾಟಕದ ಪ್ರಬಲ ಧರ್ಮಗಳಲ್ಲಿ ಜೈನಧರ್ಮವೂ ಒಂದು. ಅದು ಕ್ರಿ.ಶ. ೩ನೇ ಶತಮಾನಕ್ಕೂ ಮೊದಲಿನಿಂದಲೇ ಇಲ್ಲಿ ನೆಲೆಗೊಂಡಿದೆ. ಆರಂಭದಲ್ಲಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶಗಳನ್ನೇ  ಇವರು ತಮ್ಮ ನೆಲೆಗಳನ್ನಾಗಿ ಮಾಡಿಕೊಂಡರು. ಕರ್ನಾಟಕದಲ್ಲಿ ಅವರು ಆರಿಸಿಕೊಂಡ ಎರಡು ಮುಖ್ಯ ಸ್ಥಳಗಳೆಂದರೆ ಶ್ರವಣಬೆಳಗೊಳ ಮತ್ತು ಕೊಪ್ಪಳ.

ಆದಿತೀರ್ಥ, ಮಹಾತೀರ್ಥ ಎಂಬ ಕೀರ್ತಿಗೆ ಭಾಜನವಾದ ಕೊಪ್ಪಳವು ನೂರಾರು ಜೈನ ಶಾಸನ, ಶಿಲ್ಪ, ನಿಸಿದಿ ಮತ್ತು ಬಸದಿಗಳಿಂದ ಸಮೃದ್ಧವಾಗಿದೆ. ಸಲ್ಲೇಖನ ವ್ರತಕ್ಕಾಗಿ ಬೇರೆ ಬೇರೆ ಸ್ಥಳಗಳಿಂದ ಜೈನ ಮುನಿಗಳು ಇಲ್ಲಿಗೆ ಬರುತ್ತಿದ್ದರು. ಇಂತಹ ಪವಿತ್ರ ಕ್ಷೇತ್ರದಲ್ಲಿ ಜನಾಲಯಗಳನ್ನು ನಿರ್ಮಿಸಲು ನೂರಾರು ಜನ ದಾನಿಗಳು ಮುಂದೆ ಬಂದರು. ಇದರ ಪರಿಣಾಮವಾಗಿ ಹರಸಿಯ ಬಸದಿ, ಚಂದ್ರನಾಥ ಬಸದಿ, ಜಯಧೀರ ಜಿನಾಲಯ, ಶಾಂತಲಾದೇವಿ ಬಸದಿ, ನೇಮಿನಾಥ ಬಸದಿ ಮೊದಲಾದ ೭೭೨ ಬಸದಿಗಳು ನಿರ್ಮಾಣವಾದವು.

ಕೊಪ್ಪಳದಲ್ಲಿ ಲಭ್ಯವಾದ ಶಾಸನೋಕ್ಕ ನಿಸಿದಿಗಳೆಂದರೆ ಜಟಾಸಿಂಹನಂದಿ ಆಚಾರ್ಯರ ನಿಸಿದಿ, ಸರ್ವನಂದಿ ಭಟಾರರ ನಿಸಿದಿ, ದೇವೇಂದ್ರ ಕೀರ್ತಿ ಮುನಿಗಳ ನಿಸಿದಿ ಮೊದಲಾದವು ಪ್ರಮುಖವಾಗಿವೆ. ಜೀವನವನ್ನು ಇನ್ನು ಮುಂದುವರೆಸಲಾಗದು ಎನ್ನುವ ಪ್ರಸಂಗಗಳಲ್ಲಿ  ಆಮರಣ ಪರ್ಯಂತ ಉಪವಾಸವಿದ್ದು, ಸ್ವಯಂ ಮರಣಹೊಂದುವ ಸಂಪ್ರದಾವನ್ನು ಸಮಾಧಿ ಮರಣವೆಂದು ಕರೆಯುತ್ತಾರೆ ಇದರಲ್ಲಿ ಇಂಗಿಣಿ, ಸನ್ಯಸನ ಸಲ್ಲೇಖನ ಮುಂತಾದ ವಿಧಿ-ವಿಧಾನಗಳಿದ್ದವು.

ಮಸ್ಕಿಯು ೧೧ನೇ ಶತಮಾನದಲ್ಲಿ ಜೈನಧರ್ಮದ ನೆಲೆಯಾಗಿತ್ತು. ಬೆಸವೋಜನು ಅಲ್ಲಿ ಬಸದಿಯನ್ನು ಮಾಡಿಸಿದನೆಂದು ಕ್ರಿ.ಶ. ೧೦೨೭ರ ಶಾಸನ ಹೇಳಿದೆ. ಅಷ್ಟೋಪವಾಸಿ ಕನಕಣಂದಿ ಭಟಾರರ ಪ್ರಾರ್ಥನೆಯ ಮೇರೆಗೆ ಜಗದೇಕಮಲ್ಲ ಜಿನಾಲಯಕ್ಕೆ ದತ್ತಿ ನೀಡಿರುವುದು ಅಲ್ಲಿಯ ಮತ್ತೊಂದು ಶಾಸನ (೧೦೩೨)ದಲ್ಲಿದೆ. ಇದಲ್ಲದೆ ಬಲ್ಲಟಗಿ (೧೦೨೯), ಹೆಬ್ಬಾಳ (೧೦೪೦), ಗೊಬ್ಬೂರು (೧೦೮೫), ದದ್ದಲ (೧೦೬೯)ಗಳಲ್ಲಿಯೂ ಬಸದಿಗಳಿಗೆ ದಾನ ಬಿಟ್ಟ ಉಲ್ಲೇಖಗಳಿವೆ. ಚಾಲುಕ್ಯ ಆರನೆ ವಿಕ್ರಮಾದಿತ್ಯನ ರಾಣಿ ಧಾರಲದೇವಿಯನ್ನು ಬೊಮ್ಮನಹಳ್ಳಿ ಶಾಸನ (೧೧೦೬) ವು ‘ಜಿನಾಪೂಜಾಲತೆ’ ಎಂದು ಹೇಳಿದೆ.

ಹೀಗೆ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವೈಭವದ ಶಿಖರಕ್ಕೇರಿದ್ದ ಜೈನ ಧರ್ಮವು ೧೧ನೇ ಶತಮಾನದ ಮಧ್ಯಭಾಗದಿಂದ ಶೈವ ಮತ್ತು ವೀರಶೈವ ಧರ್ಮಗಳ ಹೊಸ ನೀತಿಯಿಂದಾಗಿ ನೆಲಹಿಡಿಯಿತು. ಸ್ವಮತ ರಕ್ಷಣೆ, ಪ್ರಸಾರದ ಭರದಲ್ಲಿ  ಅನೇಕ ಜೈನ ಕವಿಗಳು ಪರಮತ ಅದರಲ್ಲೂ ಶೈವವನ್ನು ಟೀಕಿಸಲು ಮೊದಲು ಮಾಡಿದರು.

ವೈಷ್ಣವ ಧರ್ಮ : ಪ್ರಾಚೀನ ಕರ್ನಾಟಕದ ಚಾತುರ್ವರ್ಣ್ಯ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಬ್ರಾಹ್ಮಣರದಾಗಿದ್ದಿತು. ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹಗಳಲ್ಲಿ ನಿರತರಾಗಿದ್ದ ಅವರ ಉಪಜೀವನಕ್ಕೆ ನೀಡುತ್ತಿದ್ದ ತೆರಿಗೆರಹಿತ ಊರುಗಳೇ ಅಗ್ರಹಾರಗಳು.

ಎಡೆದೊರೆ ನಾಡಿನಲ್ಲಿ ಮಾದಿನೂರು, ಅಳವಂಡಿ, ಹುಲಿಗಿ, ಏವೂರು, ಮುದನೂರು, ತಿಂಥಿಣಿ, ಸಿರಿವಾಳ, ಕಲ್ಮಲ, ಗೊಬ್ಬೂರು, ಪಿರಿಯ ಬೆಳ್ಳಿಹಾರ (ಒಳ ಬಳ್ಳಾರಿ), ಕಲ್ಲೂರು, ಕುರಡಿ, ಕೊಟ್ನೆಕಲ್ಲು, ಹಾವಿನಹಾಳು, ಬಳಗಾನೂರು, ಸಾಲಗುಂದಿ, ಮುಕ್ಕುಂದಿ, ಅಣಬಿ ಮೊದಲಾದ ಅಗ್ರಹಾರಗಳಿದ್ದವು. ಇವುಗಳಲ್ಲಿ ಮಾದಿನೂರು (೯೭೩), ಗೊಬ್ಬೂರುಗಳನ್ನು ಚಾಲುಕ್ಯ ಎರಡನೆ ತೈಲಪನು ಅಗ್ರಹಾರಗಳನ್ನಾಗಿ ಮಾಡಿದರೆ; ಕುರಡಿ, ಕೊಟ್ನಿಕಲ್ಲು, ಕಲ್ಲೂರು, ಬಳಗಾನೂರುಗಳನ್ನು ಆರನೆ ವಿಕ್ರಮಾದಿತ್ಯನು ತನ್ನ ನಿತ್ಯ ಭೂಮಿದಾನ ಸಂದರ್ಭಗಳಲ್ಲಿ ಅಗ್ರಹಾರವನ್ನಾಗಿ ಮಾಡಿದ್ದಾನೆ.

ಅಗ್ರಹಾರಗಳ ಎಲ್ಲ ಚಟುವಟಿಕೆಗಳು ಸಾಮಾನ್ಯವಾಗಿ ಮಹಾಜನರ ಸಮ್ಮುಖದಲ್ಲಿ ನಡೆಯುತ್ತಿದ್ದವು. ಅಗ್ರಹಾರಗಳಲ್ಲಿ ದಾನ ಧರ್ಮಗಳನ್ನು ಇತರ ಜನರು ಬಿಡಬೇಕಾದಾಗ ಮಹಾಜನರ ಅನುಮತಿಯನ್ನು ಪಡೆಯಬೇಕಾಗಿದ್ದಿತು. ಬ್ರಾಹ್ಮಣರು ಸಾಮಾನ್ಯವಾಗಿ ವಿದ್ಯಾವಂತರಾಗಿದ್ದುದರಿಂದ ಅಗ್ರಹಾರಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು.

ಬ್ರಾಹ್ಮಣರು ವಿಶಿಷ್ಟ ಕುಲಗೋತ್ರಗಳನ್ನು ಧರಿಸಿದ್ದರು. ವರ್ಣಾಶ್ರಮ ಧರ್ಮವನ್ನು ಚಾಚುತಪ್ಪದೆ ಅನುಸರಿಸಿಕೊಂಡು ಬಂದ ಇವರು ರಾಜಕೀಯದಲ್ಲಿಯೂ ಪ್ರಮುಖ ಸ್ಥಾನವಹಿಸಿದ್ದಾರೆ. ಮಂತ್ರಿ, ದಂಡನಾಯಕ ಮತ್ತು ವಿವಿಧ ಅಧಿಕಾರಿ ವರ್ಗದವರು ವಿಪ್ರಕುಳ ತಿಲಕರಾಗಿದ್ದಾರೆ.

ಬ್ರಾಹ್ಮಣರು ಶೈವ ದೇವಸ್ಥಾನ-ಮಠಗಳ ಸ್ಥಾನಾಚಾರ್ಯರಿಗೆ ಮತ್ತು ಜೈನ ಬಸದಿಗಳಿಗೆ ದಾನ ಬಿಟ್ಟಿರುವುದು ತುಂಬಾ ಕುತೂಹಲಕಾರಿಯಾಗಿದೆ. ನಿಂಬಣ ದಂಡನಾಯಕ ಮತ್ತು ಮಧುಸೂದನರು ಕುರಡಿಯ ಶೈವ ದೇವಾಲಯಗಳಿಗೆ ದಾನ ಬಿಟ್ಟಿದ್ದಾರೆ. ರವಿಯಣ ದಂಡಾಯಕನು ಏವೂರಿನಲ್ಲಿ  (೧೦೭೭) ಸ್ವಯಂಭು ಶಿವ ದೇವಾಲಯವನ್ನು ನಿರ್ಮಿಸಿದ್ದಾನೆ. ಇದರಂತೆ ಬ್ರಾಹ್ಮಣರು ತಮ್ಮ ದೇವಾಲಯಗಳಿಗೂ ದತ್ತಿ ಬಿಟ್ಟ ನಿದರ್ಶನಗಳಿವೆ. ಸೋಮಯಭಟ್ಟೋಪಾಧ್ಯಾಯನು ಗೊಬ್ಬೂರಿನ (೧೦೯೬) ವಿಷ್ಣು ಮತ್ತು ರಾಮೇಶ್ವರ ದೇವಾಲಯಗಳಿಗೆ; ಸತ್ಯ ಪ್ರಚಾರ ಭಟಾರಕರು ಏವೂರಿನ (೧೧೦೫) ಕೇಶವ ದೇವಾಲಯಕ್ಕೆ ದಾನ ನೀಡಿದ್ದಾರೆ. ದುಗ್ಗಣಾರ್ಯ ಭಟ್ಟನು ತಿಂಥಿಣಿಯಲ್ಲಿ ತ್ರೈಪುರುಷ ಶಾಲೆಯನ್ನು ನಿರ್ಮಿಸಿ ಅಲ್ಲಿ ಯಜುಶ್ಯಾಖೆಗೆ ಸೇರಿದ ನೂರು ಜನ ವಿದ್ಯಾರ್ಥಿಗಳ ಆಹಾರಕ್ಕೆ ಭೂಮಿಯನ್ನು ನೀಡಿದ್ದಾನೆ. ಇದು ಬ್ರಾಹ್ಮಣರ ವಿದ್ಯಾ ಪ್ರೇಮಕ್ಕೆ ಸಾಕ್ಷಿಯಾಗಿದೆ

ಹೀಗೆ ಸಮನ್ವಯದ ಮೂಲಕ ಶೈವ-ವೈಷ್ಣವರು ಅನ್ಯೋನ್ಯವಾಗಿದ್ದರಿಂದ ಶಿವ-ವಿಷ್ಣು ಪೂಜೆಗಳು ಪ್ರಾಮುಖ್ಯವನ್ನು ಪಡೆದಿದ್ದವು.

ಶೈವವೀರಶೈವ : ಕನ್ನಡ ನಾಡಿನಲ್ಲಿ ಜೈನರನ್ನು ಬಿಟ್ಟರೆ ಶೈವರೇ ಅತ್ಯಂತ ಪ್ರಬಲರಾಗಿದ್ದರು. ಶೈವರಲ್ಲಿ  ಅತ್ಯಂತ ಪ್ರಬಲರೂ, ಪ್ರಭಾವಶಾಲಿಗಳೂ ಆದವರು ಲಕುಲೀಶ ಪಾಶುಪತರು. ಇವರು ಅನೇಕ ಅರಸು ಮನೆತನಗಳ ಆಶ್ರಯ-ಗೌರವ ಪಡೆದಿದ್ದರು. ಮಠ-ದೇವಸ್ಥಾನಗಳನ್ನು ಕಟ್ಟುವ-ಕಟ್ಟಿಸುವ, ದಾನ-ದತ್ತಿಗಳನ್ನು ನೀಡುವ-ಪಡೆಯುವ ಪ್ರೇರಕ ಶಕ್ತಿಗಳಾಗಿದ್ದರು. ಈ ಮಠಗಳು ವಿದ್ಯಾಕೇಂದ್ರಗಳೂ ಆಗಿದ್ದರಿಂದ ಅಲ್ಲಿ – ನಡೆಯುವ ಅಧ್ಯಯನ-ಅಧ್ಯಾಪನಗಳಿಗೆ, ದೇವಾಲಯಗಳ ಪೂಜೆ-ಪುರಸ್ಕಾರಗಳ ಜೊತೆ ಜೊತೆಗೆ ದಾನ ನೀಡುವ ಪರಿಪಾಠ ಬೆಳೆದು ಬಂದಿತು.

ಬನ್ನಿಗೋಳ (೧೦೪೬)ದ ಭೋಗೇಶ್ವರ ದೇವಾಲಯ, ದೇವಸೂಗೂರಿ (೧೦೨೨)ನ ಸಂಕೇಶ್ವರ ದೇವಾಲಯ, ಏವೂರಿನ ಸ್ವಯಂಭು ಸೋಮೇಶ್ವರ ದೇವಾಲಯ, ದೇವರಗುಡಿ (೧೧೦೧)ಯ ಹುಳಿಯಮೇಶ್ವರ ದೇವಾಲಯ, ನವಿಲೆ (೧೦೧೪)ಯ ಜಡೆಯಶಂಕರ ದೇವಾಲಯ ಕರಡಕಲ್ಲಿನ (೧೦೭೭) ಸೋಮೇಶ್ವರ ದೇವಾಲಯ ಮೊದಲಾದವುಗಳನ್ನು ಹೆಸರಿಸಬಹುದು.

ದೇವಾಲಯಗಳ ಸ್ಥಾನಾಚಾರ್ಯರು ವಿದ್ಯಾಪ್ರೇಮಿಗಳಾಗಿದ್ದು ಅಲ್ಲಿನ ತಪೋಧನರು ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಏರ್ಪಾಟು ಮಾಡಿದ್ದಾರೆ. ಮಠ ಮತ್ತು ದೇವಾಲಯಗಳು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಒಂದು ನಾಡಿನ ಸಂಸ್ಕೃತಿ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿವೆ. ಈ ಕಾರಣದಿಂದಾಗಿ ಸ್ಥಾನಾಚಾರ್ಯರು ಅರಸರು ಮತ್ತು ಜನಸಾಮಾನ್ಯರಿಂದ ಗೌರವ ಪಡೆದಿದ್ದಾರೆ.

ಎಡೆದೊರೆ ನಾಡಿನಲ್ಲಿ ಶಂಕರ ದಾಸಿಮಯ್ಯ, ಜೇಡರ ದಾಸಿಮಯ್ಯ, ಕೆಂಭಾವಿ, ಬೋಗಣ್ಣ, ಹುಳಿಯಮೇಶ್ವರ ಚಿಕ್ಕಯ್ಯ, ರೇವಣಸಿದ್ದ ಮೊದಲಾದ ವಚನಕಾರರು ಕಾಣಿಸಿಕೊಡಿದ್ದಾರೆ. ಇವರಲ್ಲಿ ಕೆಲವರು ದೇವಾಲಯಗಳ ಸ್ಥಾನಾಚಾರ್ಯರಾಗಿಯೂ ಮುಂದುವರೆದಿದ್ದಾರೆ. ಆದ್ದರಿಂದ ಲಕುಲೀಶ ಪಾಶುಪತ ಮತ್ತು ವೀರಶೈವಗಳು ಪ್ರತ್ಯೇಕ ಸ್ವತಂತ್ರ ಧರ್ಮಗಳಾಗಿರದೆ ಒಂದರ ಮುಂದುವರೆದ ರೂಪ ಇನ್ನೊಂದು ಎಂಬ ಡಾ|| ಎಂ. ಎಂ.ಕಲುಬುರ್ಗಿಯವರ ಮಾತು ಸತ್ಯವಾಗಿದೆ.

ಸಾಮಾಜಿಕಆರ್ಥಿಕ ವ್ಯವಸ್ಥೆ

ಚಾತುರ್ವರ್ಣ ಪದ್ಧತಿಯಲ್ಲಿ ಬ್ರಾಹ್ಮಣರಿಗೆ ಉಚ್ಛ ಸ್ಥಾನವಿತ್ತು, ಕ್ಷತ್ರಿಯ ಮತ್ತು ವೈಶ್ಯರಿಗೆ ನಂತರದ ಸ್ಥಾನಗಳಿದ್ದವು. ಇವರು ಕ್ರಮವಾಗಿ ಶಿಕ್ಷಣ, ಆಡಳಿತ ಮತ್ತು ವ್ಯಾಪಾರಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ಮೂರು ವರ್ಗದವರ ಸೇವೆ ಮಾಡುತ್ತ ಜೀವನ ನಿರ್ವಹಿಸಬೇಕಾದುದು ಶೂದ್ರರ ಕೆಲಸವಾಗಿತ್ತು. ಇಲ್ಲಿಯ ಶಾಸನಗಳು ಬೇಡ, ಕುಂಬಾರ, ಅಗಸ, ಗಾಣಿಗ, ತಂಬುಲಿಗ, ಕಂಚಗಾರ, ಬಡಿಗ, ಕಮ್ಮಾರ, ಅಕ್ಕಸಾಲಿ, ವಡ್ಡರು, ನಾವಿಂದ, ಕೋಲ್ಕಾರ, ಮಾಲೆಗಾರ, ಕಲ್ಲುಕುಟಿಗ ಮೊದಲಾದವರನ್ನು ಉಲ್ಲೇಖಿಸಿವೆ.

ಹಳ್ಳಿಗಳಲ್ಲಿ ಒಂದೊಂದು ವೃತ್ತಿಯವರು ಪ್ರತ್ಯೇಕವಾದ ಕೇರಿಗಳಲ್ಲಿ ವಾಸಿಸುತ್ತಿದ್ದುದು ತಿಳಿದುಬರುತ್ತದೆ. ಅಲ್ಲದೆ ಇವರು ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿದ್ದರು. ಏವೂರು ಶಾಸನವು ಕಂಚಗಾರಗೊತ್ತಳಿ, ಕಲ್ಕುಟಿಗಗೊತ್ತಳಿ, ಕಮ್ಮಾರ, ಬಡಿಗ, ಅಕ್ಕಸಾಲೆಯರನ್ನು ಹೆಸರಿಸುತ್ತದೆ ‘ಎಂಟುಹಿಟ್ಟು’ ಇಂಥ ಕಸಬುದಾರರನ್ನು ಕುರಿತು ಹೇಳಿದ ಪದವಾಗಿದೆ.

ದಾನ-ದತ್ತಿಗಳಲ್ಲಿ ಭೂಮಿಯನ್ನೇ ಹೆಚ್ಚಾಗಿ ಬಿಟ್ಟ ಉಲ್ಲೇಖಗಳಿವೆ. ಆದ್ದರಿಂದ ವ್ಯವಸಾಯವು ಇಲ್ಲಿಯ ಜನಗಳ ಪ್ರಮುಖ ಉದ್ಯೋಗವಾಗಿತ್ತೆಂದು ಹೇಳಬಹುದು. ಇವರು ಸರ್ಕಾರಕ್ಕೆ ನಿರ್ದಿಷ್ಟವಾದ ತೆರಿಗೆಯನ್ನು ಕೊಡುತ್ತಿದ್ದರು. ಏವೂರು ಶಾಸನಗಳಲ್ಲಿ(೧೧೦೧-೧೧೧೦)ಒಕ್ಕಲುಸುಂಕ ಮತ್ತು ಒಕ್ಕಲು ಅಡ್ಡಗಳ ಉಲ್ಲೇಖವಿದೆ ಹೆಮ್ಮಡಗಿ ಶಾಸನ (೧೧೮೨) ಒಕ್ಕಲುದೆರೆಯನ್ನು ಹೇಳಿದೆ. ಇದಲ್ಲದೆ ಬಿಲ್ಲೊಡೆ, ಪೆಜರ್ಯಂಕ, ವಡ್ಡರಾವುಳ, ಹೊಸಂತಿಲ ಹಾಗಗಳ ಪ್ರಸ್ತಾಪ ಇಲ್ಲಿನ ಶಾಸನಗಳಲ್ಲಿದೆ.

ಅರ್ಥದ ಮೇಲ್ವಿಚಾರಣೆ ರಾಜನದಾದರೂ ಅರ್ಥಮೂಲವಾದ ವಾಣಿಜ್ಯ ವ್ಯಾಪಾರಿಗಳ ಕೈಯಲ್ಲಿದ್ದಿತು. ಇಲ್ಲಿಯ ಶಾಸನಗಳಲ್ಲಿ ಸೆಟ್ಟಿ, ಸೆಟ್ಟಿಗುತ್ತ, ಗವರೆ-ಗಾತ್ರಿಗ ಬೀರವಣಿಗ, ಹನ್ನವಣಿಗ, ನಕರ, ಮುಮ್ಮರಿದಂಡ, ಬಾರಿಕರು, ನಾನಾದೇಶಿ, ಉಭಯ ನಾನಾದೇಶಿ, ಗೌಡಸ್ವಾಮಿ ಮೊದಲಾದ ವ್ಯಾಪಾರಿಗಳ ಉಲ್ಲೇಖವಿದೆ. ಇವರು ಅಯ್ಯಾವೊಳೆ ಐನೂರ್ವರು, ಭಲ್ಲುಂಕೆ ದಂಡಹಸ್ತರು, ಬಣಂಜಿಗಯ್ನೂರ್ಬ್ಬರು, ಬಿಲ್ಲ ಮುನ್ನೂರ್ವರು ಮೊದಲಾದ ಸಂಘಗಳನ್ನು ಕಟ್ಟಿಕೊಂಡಿದ್ದರು.

ಇಲ್ಲಿಯ ವರ್ತಕರು ನಿರ್ದಿಷ್ಟವಾಗಿ ಯಾವ ವ್ಯಾಪಾರವನ್ನು ಮಾಡುತ್ತಿದ್ದರೆಂಬುದು ಶಾಸನಗಳಿಂದ ತಿಳಿಯುವುದಿಲ್ಲ. ಆದರೆ ದೇವಾಲಯಗಳಿಗೆ ದಾನ ಬಿಡುವಾಗ ಸಕ್ಕರೆ, ಬೆಲ್ಲ, ಅಡಕೆ, ಎಣ್ಣೆ, ಜೀರಿಗೆ, ಎಣ್ಣೆ, ತುಪ್ಪ, ಅಲ್ಲ, ಭತ್ತ, ಎಲೆ, ಅರಿಶಿಣ, ಇಂಗು, ಮೆಣಸು ಮೊದಲಾದ ದಿನಿಸಿಗಳಲ್ಲಿ ಕೆಲವು ಭಾಗವನ್ನು ಅವುಗಳಿಗೆ ನೀಡಿರುವುದು ತಿಳಿಯುತ್ತದೆ. ಆದ್ದರಿಂದ ಇವರು ಎತ್ತು, ಕತ್ತೆ, ಕೋಣಗಳ ಮೇಲೆ ಸಾಮಾನು ಹೇರಿಕೊಂಡು ಸಂತೆಗೆ ಬರುತ್ತಿದ್ದರೆಂದು ಹೇಳಬಹುದು. ಇದಲ್ಲದೆ ಕೆಲವರು ನಿರ್ದಿಷ್ಟವಾದ ಸ್ಥಳಗಳಲ್ಲಿ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಧಾನ್ಯಗಳನ್ನು ಬಳ್ಳ, ಖಂಡುಗ, ಕೊಳಗ, ಹೇರುಗಳ ರೂಪದಲ್ಲಿ ಅಳತೆ ಮಾಡುತ್ತಿದ್ದರು. ವ್ಯಾಪಾರ-ವ್ಯವಹಾರಕ್ಕೆ ಪೊನ್ ಅಥವಾ ಗದ್ಯಾಣ, ಪಣ, ಕಾಣೆ, ಬೇಳೆ, ವೀಸ, ಹಾಗು ಮೊದಲಾದ ನಾಣ್ಯಗಳನ್ನು ಬಳಸುತ್ತಿದ್ದರು.

ರಾಜ್ಯದ ಆದಾಯವು ಭೂಕಂದಾಯವನ್ನು ಬಿಟ್ಟರೆ ವ್ಯಾಪಾರದಿಂದಲೆ ಹೆಚ್ಚು ಸಂಗ್ರಹವಾಗುತ್ತಿದ್ದಿತು. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವ್ಯಾಪಾರಿಗಳ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸುತ್ತಿದ್ದರು. ಇದಲ್ಲದೆ ಕುಂಬಾರ, ಕಂಬಾರ, ಅಗಸ, ಮೊದಲಾದ ಸೇವೆಗಳ ಮೇಲೂ ತೆರಿಗೆ ಆಕರಿಸಲಾಗುತ್ತಿದ್ದಿತು. ಶಾಸನಗಳಲ್ಲಿ ಬರುವ ದಸವಂದ, ಆರುವಣ, ಮೂರಲೊಂದು ಪಣ ಮೊದಲಾದವು ಭೂಕಂದಾಯವನ್ನು ಸೂಚಿಸುತ್ತವೆ.

ಮನ್ನೆಯರ, ಮಾಂಡಲಿಕರು ಚಕ್ರವರ್ತಿಗಳಿಗೆ; ಗಾವುಂಡ ಮೊದಲಾದವರು ಮಾಂಡಲಿಕರಿಗೆ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು. ಇಂಥ ಆದಾಯಗಳಲ್ಲಿಯ ಕೆಲವು ಭಾಗಗಳನ್ನು ಅವರು ದೇವಾಲಯ-ಮಠಗಳಿಗೆ ಬಿಟ್ಟುಕೊಡುತ್ತಿದ್ದರು. ಶಾಸನಗಳಲ್ಲಿ ಬರುವ ‘ಉಭಯಸ್ವಾಮ್ಯ’ವೆಂಬುದು ಎರಡು ಅಧಿಕಾರಗಳನ್ನು ಹೇಳುತ್ತದೆ. ದಂಡನಾಯಕ-ತಳವಾರ ಮೊದಲಾದ ಅಧಿಕಾರಿಗಳಿಗೆ ವೇತನವನ್ನು ಧಾನ್ಯ-ಹಣದ ಮೂಲಕ ನೀಡಲಾಗುತ್ತಿದ್ದಿತು. ಅವರು ಸಂಗ್ರಹಿಸುತ್ತಿದ್ದ ಹಣದ ಮೇಲೆ ಅದು ನಿರ್ಧಾರವಾಗುತ್ತಿದ್ದಿತು. ಕೆಲವೊಮ್ಮೆ ಹೀಗೆ ಅವರು ತಮ್ಮ ಮೇಲಾಧಿಕಾರಿಗಳಿಗೆ ನೀಡಬೇಕಾಗಿದ್ದ ತೆರಿಗೆಯನ್ನು ಮಾನ್ಯಮಾಡುತ್ತಿದ್ದರು.

ಹೀಗೆ ಪ್ರಾಚೀನ ಕಾಲದಲ್ಲಿ ತೆರಿಗೆ ಸಂಗ್ರಹಿಸುವ ಮತ್ತು ಅದನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸುವ  (ಉದಾ: ವಿದ್ಯಾಭ್ಯಾಸ, ಅರವಟ್ಟಿಗೆ, ಊಟ-ವಸತಿ ಇತ್ಯಾದಿ) ವ್ಯಾಪಕ ವ್ಯವಸ್ಥೆ ಚಲಾವಣೆಯಲ್ಲಿದ್ದಿತು.