ರಾಜಕೀಯ ವ್ಯವಸ್ಥೆ : ಎಡದೊರೆ ನಾಡಿನ ವ್ಯಾಪ್ತಿಯಲ್ಲಿ ರಾಷ್ಟ್ರಕೂಟರು, ಕಲ್ಯಾಣಚಾಲುಕ್ಯರು, ಕಲಚೂರಿಗಳು ಮತ್ತು ಸೇವುಣರು ಕ್ರಮವಾಗಿ ರಾಜ್ಯಭಾರ ಮಾಡಿದ್ದಾರೆ. ಐದನೇ ಭಿಲ್ಲಮನ ಕಾಲದಲ್ಲಿ (೧೧೭೩-೧೧೯೨) ಸೇವುಣರು ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು. ಇದೇ ಅವಧಿಯಲ್ಲಿ ಚಾಲುಕ್ಯ ನಾಲ್ಕನೇ ಸೋಮೇಶ್ವರನ ಅಸಮರ್ಥತೆಯನ್ನು ಬಳಸಿಕೊಂಡು, ಹೊಯ್ಸಳರು ಈ ಭಾಗದ ಮೇಲೆ ದಾಳಿ ನಡೆಸಿದರು. ಆದರೆ ಭಿಲ್ಲಮನು ಅವರನ್ನು ತುಂಗಭದ್ರಾ ನದಿ ಮೇರೆಯಾಗಿ ನಿಯಂತ್ರಿಸಿದನು. ಹೊಯ್ಸಳರ ಶಾಸನಗಳು ಅವರು ಕೃಷ್ಣವೇಣಿ ನದಿ (ಹೆದ್ದೊರೆ) ಮೇರೆಯಾಗಿ ಆಳುತ್ತಿದ್ದರೆಂದು ಹೇಳಿವೆ. ಬೆಳ್ವೊಲ ನಾಡಿನ ಕುಕನೂರು ಕಿಸುಕಾಡು ಮತ್ತು ಹುನಗುಂದ ಉಪವಿಭಾಗಗಳನ್ನು ಅವರು ವಶಪಡಿಸಿಕೊಂಡಿರುವುದು ಶಾಸನಗಳಿಂದ ತಿಳಿಯುತ್ತದೆ. ಇದರಲ್ಲಿ ಹುನಗುಂದ ಉಪವಿಭಾಗವು ಕೃಷ್ಣಾನದಿಗೆ ಹೊಂದಿಕೊಂಡಿತ್ತೆಂಬುದನ್ನು ಗಮನಿಸಬೇಕು. ಮುಂದೆ ೧೩ನೆಯ ಶತಮಾನದ ಕೊನೆಯ ದಶಕದ ವೇಳೆಗೆ ಸೇವುಣರ ಬಲ ಕುಗ್ಗಿ ದೆಹಲಿ ಸುಲ್ತಾನರ ಪ್ರಾಬಲ್ಯ ಹೆಚ್ಚಾಯಿತು. ಈ ಅವಧಿಯಲ್ಲಿ ಕಾಕತೀಯರು ಆದವಾನಿ, ತುಂಬಳ, ಹಾಲ್ವಿ ಮತ್ತು ಮಾನ್ವಿ ಕೋಟೆಗಳನ್ನು ಗೆದ್ದು ರಾಯಚೂರು ಪಟ್ಟಣವನ್ನು ಪ್ರವೇಶಿಸಿದರು. ಕಾಕತೀಯ ರುದ್ರದೇವನ ಸಾಮಂತನಾದ ಗೋನಗನ್ನಯ್ಯ ರೆಡ್ಡಿಯು ವಿಠಲನಾಥನ ಸಹಾಯದಿಂದ ಈ ಭಾಗವನ್ನು ವಶಪಡಿಸಿಕೊಂಡನಲ್ಲದೆ ರಾಯಚೂರಿನಲ್ಲಿ ಸುಭದ್ರವಾದ ಕೋಟೆಯನ್ನು (೧೨೯೪) ನಿರ್ಮಿಸಿದನು.

ರಾಜಕುಮಾರರು : ಚಕ್ರವರ್ತಿಗಳು ಬಹುವಲ್ಲಭರಾಗಿದ್ದರಿಂದ ಅನೇಕ ಪುತ್ರರನ್ನು ಪಡೆದಿರುತ್ತಿದ್ದರು. ಪಟ್ಟದರಾಣಿಯ ಹಿರಿಯ ಮಗ ಅಥವಾ ಚಕ್ರವರ್ತಿಯ ಹಿರಿಯ ತಮ್ಮನು ಯುವರಾಜನೆನಸಿದರೆ ಉಳಿದವರು ಕೇವಲ ಕುಮಾರರಾಗಿ ರಾಜ್ಯದ ಆಡಳಿತದಲ್ಲಿ ಭಾಗವಹಿಸುತ್ತಿದ್ದರು. ರಾಜ್ಯದ ಆಡಳಿತದಲ್ಲಿ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದರೆ, ಯುವರಾಜನದು ಎರಡನೆಯದಾಗಿತ್ತು. ಇವರ ನಂತರದಲ್ಲಿ ಉಳಿದ ರಾಜಕುಮಾರರು ಕುಮಾರವೃತ್ತಿಯಿಂದ ಆಳುತ್ತಿದ್ದರು.

ರಾಷ್ಟ್ರಕೂಟ ಎರಡನೆಯ ಕೃಷ್ಣನ ಆಳ್ವಿಕೆಯಲ್ಲಿ ಆತನ ಮಗ ಜಗತ್ತುಂಗನು ಎಡೆದೊರೆ-೨೦೦೦ ವಿಭಾಗವನ್ನು ‘ಅಣುಗ ಜೀವಿತ’ವಾಗಿ ಆಳುತ್ತಿದ್ದನೆಂದು ಭೋಗಾವತಿ ಶಾಸನ  (೮೯೧-೯೨) ಹೇಳಿದೆ. ಎರಡೋಣಿ ಶಾಸನವು (೯೨೭) ಮೂರನೆಯ ಇಂದ್ರನ ಮಗನಾದ ನಾಲ್ಕನೆಯ ಗೋವಿಂದನು ಸಗರ-೩೦೦ ಮತ್ತು ಕರಡಿಕಲ್ಲು-೩೦೦ರಲ್ಲಿಯ ಎರಡೋಣಿಯನ್ನು ಆಳುತ್ತಿದ್ದನೆಂದು ಹೇಳಿದೆ.

ಚಾಲುಕ್ಯ ಐದನೆಯ ವಿಕ್ರಮಾದಿತ್ಯನ ಆಳ್ವಿಯಲ್ಲಿ ಆತನ ತಮ್ಮ ಎರಡನೆಯ ಜಯಸಿಂಹನು ಎಡೆದೊರೆ-೨೦೦೦ವನ್ನು ಕುಮಾರ ವೃತ್ತಿಯಿಂದ ಆಳುತ್ತಿದ್ದನು. ಕುಮಾರ ಗಜಕೇಸರಿ, ಕೀರ್ತಿವಿದ್ಯಾಧರ, ಸತ್ಯರತ್ನಾಕರ ಮೊದಲಾದ ಬಿರುದುಗಳನ್ನು ಧರಿಸಿದ್ದ ಇವನ ಉಲ್ಲೇಖ ಮಸ್ಕಿ ಮತ್ತು ನವಿಲೆ (೧೦೧೪) ಶಾಸನಗಳಲ್ಲಿದೆ. ಬನ್ನಿಗೋಳ ಶಾಸನವು ತ್ತ್ಯೆಳೋಕ್ಯಮಲ್ಲ ವಿಜಯಾದಿತ್ಯನು ಮೊರಗನೂರು ನೆಲೆವೀಡಿನಿಂದ ಆಳುತ್ತಿದ್ದನೆಂದು ಹೇಳಿದೆ. ಇವನು ವೆಂಗಿ ಚಾಳುಕ್ಯ ಮನೆತನದವನೆಂದು ಗುರುತಿಸಲಾಗಿದೆ.

ಒಂದನೆಯ ಸೋಮೇಶ್ವರನ ತಮ್ಮ ಮೂರನೆಯ ಜಯಸಿಂಹನು ಕರಡಿಕಲ್ಲು-೩೦೦ರಲ್ಲಿಯ ಬನ್ನಿಗೋಳ ಅಗ್ರಹಾರವನ್ನು ಪನ್ನಾಳೆ ಕೋಟೆಯ ನೆಲೆವೀಡಿನಿಂದ ಆಳುತ್ತಿದ್ದನೆಂದು ಕೀಲಾರಟ್ಟಿ ಶಾಸನ (೧೦೪೬) ಹೇಳಿದೆ. ಚೋಳರೊಂದಿಗೆ ನಡೆದ ಯುದ್ಧದಲ್ಲಿ ಜೀವತೆತ್ತ ಇವನ ಉಲ್ಲೇಖ ಚಾಲುಕ್ಯ ವಂಶಾವಳಿಯಲ್ಲಿ ಕ್ವಚಿತ್ತಾಗಿ ಬಂದರೆ, ತಮಿಳು ಶಾಸನಗಳಲ್ಲಿ ಹೆಚ್ಚಿನ ವಿವರಗಳು ಸಿಗುತ್ತವೆ.

ಆರನೆಯ ವಿಕ್ರಮಾದಿತ್ಯನು ಆಳ್ವಿಕೆಯಲ್ಲಿ ಆತನ ತಮ್ಮ ನಾಲ್ಕನೆಯ ಜಯಸಿಂಹನು ಯುವರಾಜನಾಗಿ ಕರಡಕಲ್ಲು-೩೦೦ನ್ನು ಆಳುತ್ತಿದ್ದನೆಂದು ಲಿಂಗಸೂಗೂರು ಶಾಸನ (೧೦೭೭) ಹೇಳಿದೆ. ಇದೇ ಅವಧಿಯಲ್ಲಿ ಅವನು ಇತರ ವಿಭಾಗಗಳನ್ನು ಆಳುತ್ತಿದ್ದನು.

ಆರನೆಯ ವಿಕ್ರಮಾದಿತ್ಯನ ಮತ್ತೊಬ್ಬ ಮಗ ಎರಡನೆಯ ತೈಲಪನ ಉಲ್ಲೇಖ ಕುರಿಡಿ ಶಾಸನ (೧೧೨೩ ಮತ್ತು ೧೧೩೮) ದಲ್ಲಿದೆ. ಬಹುಶಃ ಇವನು ಕುಮಾರ ವೃತ್ತಿಯಿಂದ ಎಡೆದೊರೆನಾಡನ್ನು ಆಳುತ್ತಿರಬೇಕು. ಮೂರನೆಯ ಸೋಮೇಶ್ವರನ ಮಗ ಮೂರನೆಯ ತೈಲಪನ ಉಲ್ಲೇಖ ಕುರಡಿಯ ಮತೋಂದು ಶಾಸನ (೧೧೩೮)ದಲ್ಲಿದೆ.

ರಾಣಿಯರು : ರಾಜನು ಬಹುಪತ್ನಿಯರನ್ನು ಹೊಂದಿರುವುದು ವ್ಯೆಭವದ ಸಂಕೇತವಾಗಿತ್ತು. ರಾಣಿಯರು ಪ್ರಭುವರ್ಗದ ಪ್ರಮುಖ ವ್ಯಕ್ತಿಗಳಾಗಿದ್ದರೂ ಯುವರಾಜ ಮತ್ತು ಇತರೆ ರಾಜಕುಮಾರರಂತೆ ರಾಜ್ಯದ ಬೇರೆ ಬೇರೆ ವಿಭಾಗಗಳನ್ನು ಆಳುತ್ತಿರಲ್ಲಿಲ್ಲ. ಬದಲಾಗಿ ಕೆಲವು ಬಿಡಿ ಬಿಡಿಯಾದ ಅಗ್ರಹಾರ ಇಲವೆ ಭತ್ತಗ್ರಾಮಗಳನ್ನು ಆಳುತ್ತಿದ್ದರು.

ಎಡೆದೊರೆನಾಡಿನ ಶಾಸನಗಳಲ್ಲಿ ಕೆಲವರು ಅಗ್ರಹಾರ ಇಲ್ಲವೆ ಭತ್ತಗ್ರಾಮಗಳನ್ನು ಆಳುತ್ತಿದ್ದರು. ಉಳಿದವರು ಕೇವಲ ದಾನದತ್ತಿಗಳನ್ನು ಬಿಡುವಾಗ ಉಲ್ಲೇಖಗೊಂಡಿದ್ದಾರೆ. ಎರಡನೆಯ ಜಯಸಿಂಹನ ರಾಣಿ ಮಹಾದೇವಿಯ ಉಲ್ಲೇಖ ಬಲ್ಲಟಗಿ (೧೦೨೨) ಶಾಸನದಲ್ಲಿದೆ. ಅವಳು ಅಯ್ಯಣವಾಡಿ-೩೦೦ರ ಮನ್ನೆಯ ಲೋಕಾದಿತ್ಯನಿಂದ ತ್ರಿಭೋಗಾಭ್ಯಂತರ ಸಿದ್ಧಿಯಾಗಿ ಭೂಮಿಯನ್ನು ಪಡೆದು ಅಲ್ಲಿ ತ್ರೈಪುರುಷ ದೇವಾಲಯವನ್ನು ಪ್ರತಿಷ್ಠಾಪಿಸಿ ಅದಕ್ಕೆ ಭೂಮಿಯನ್ನು ದಾನ ಬಿಟ್ಟಿದ್ದಾಳೆ. ಈತನ ಮತ್ತೊಬ್ಬರಾಣಿ ಬಿಜ್ಜಲದೇವಿಯ ಉಲ್ಲೇಖ ಕರಡಕಲ್ಲು ಶಾಸನದಲ್ಲಿದೆ. ಎರಡನೆಯ ಜಯಸಿಂಹನಿಗೆ ಸೋಮಲದೇವಿ ಎಂಬ ಮಗಳಿದ್ದುದು ಮಸ್ಕಿಯ ಶಾಸನ (೧೦೨೭)ದಿಂದ ತಿಳಿಯುತ್ತದೆ. ಬಲ್ಲಟಗಿಯ ಶಾಸನದಲ್ಲಿ (೧೦೨೯)ಯೂ ಇವಳ ಉಲ್ಲೇಖವಿದೆ.

ಒಂದನೆಯ ಸೋಮೇಶ್ವರನ ರಾಣಿ ಚಾಮಲದೇವಿಯ ಉಲ್ಲೇಖ ಬಲ್ಲಟಗಿ (೧೦೫೮) ಶಾಸನದಲ್ಲಿದೆ. ಇವನ ಮತ್ತೊಬ್ಬರಾಣಿ ಕೇತಲದೇವಿಯು ಕರಡಿಕಲ್ಲು-೩೦೦ರಲ್ಲಿಯ ಅಗ್ರಹಾರ ಬನ್ನಿಗೋಳ (೧೦೫೫)ವನ್ನು ಆಳುತ್ತಿದ್ದಳು. ಬಾಗಲವಾಡ ಶಾಸನದಲ್ಲಿಯೂ ಇವಳ ಉಲ್ಲೇಖವಿದೆ. ಹರವಿಯ ಶಾಸನ (೧೦೭೬)ದಲ್ಲಿ ಎರಡನೆಯ ಸೋಮೇಶ್ವರನ ರಾಣಿಯ ಅಸ್ಪಷ್ಟ ಉಲ್ಲೇಖವಿದೆ. ಕಪಗಲ್ಲು ಶಾಸನವು (೧೦೬೯) ಈತನ ಮತ್ತೊಬ್ಬರಾಣಿ ಪಂಪಾದೇವಿಯನ್ನು ಉಲ್ಲೇಖಿಸದೆ. ಸಗರ ಶಾಸನದಲ್ಲಿ (೧೦೭೧) ಅವನ ಇನ್ನೊಬ್ಬರಾಣಿ ದೇವಲದೇವಿಯ ಉಲ್ಲೇಖವಿದೆ.

ಆರನೆಯ ವಿಕ್ರಮಾದಿತ್ಯನ ರಾಣಿಯರಲ್ಲಿ ಮೈಳಲದೇವಿಯು ಮೊದಲನೆಯ ಪಟ್ಟದ ರಾಣಿಯಾದರೆ, ಮಲೆಯಮತಿದೇವಿಯು ಎರಡನೆಯ ಪಟ್ಟದರಾಣಿಯಾಗಿದ್ದಾಳೆ. ಬಾಗಲವಾಡ (೧೦೯೬) ಮತ್ತು ಹುಣಸಗಿ (೧೧೨೦) ಶಾಸನಗಳು ಪಿರಿಯರಸಿ ಪಟ್ಟಮಹಾದೇವಿ ಮೆಲೆಯಮತಿಯನ್ನು ಉಲ್ಲೇಖಿಸಿವೆ. ಹೈಹಯ ವಂಶದ ಮಹಾಮಂಡಳೇಶ್ವರ ಅಯ್ಯಣ ದೇವನು ಇವಳ ಅಂಕಕಾರನಾಗಿದ್ದನೆಂದು ಬಾಗಲವಾಡಿ ಶಾಸನ ಹೇಳಿದೆ. ಇವನ ಮತ್ತೊಬ್ಬರಾಣಿ ಚಂದಲದೇವಿಯ ಉಲ್ಲೇಖ ಬಲ್ಲಟಗಿ (೧೧೦೬) ಶಾಸನದಲ್ಲಿದೆ. ಶಿಲಾಹಾರ ಮನೆತನಕ್ಕೆ ಸೇರಿದ ಇವಳು ವಿಕ್ರಮಾದಿತ್ಯನ ಅಚ್ಚುಮೆಚ್ಚಿನ ಮಡದಿಯಾಗಿದ್ದಳು. ಈಶ್ವರ ಧರ್ಮದೇವನ ಮಗಳಾದ ಧಾರಲದೇವಿಯ ಉಲ್ಲೇಖ ದೇವರಗೋನಾಲ (೧೧೦೬) ಮತ್ತು ಬೊಮ್ಮನಹಳ್ಳಿಯ(೧೧೦೬) ಶಾಸನಗಳಲ್ಲಿದೆ. ಇವಳು ಆರನೆ ವಿಕ್ರಮಾದಿತ್ಯನ ರಾಣಿಯಾಗಿದ್ದಾಳೆ. ಈತನ ಮತ್ತೊಬ್ಬರಾಣಿ ಅಬ್ಬಲದೇವಿಯು ಕರಡಿಕಲ್ಲು-೩೦೦ರಲ್ಲಿಯ ಭತ್ತಗ್ರಾಮ ಲಿಂಗ (ಲಿಂಗಸೂಗೂರು-೧೧೨೪)ವನ್ನು ಆಳುತ್ತಿದ್ದಳು.

ಸಾಮಂತ ಅರಸರು : ವಿವಿಧ ಪ್ರಾಂತಗಳಿಗೆ ಒಡೆಯರಾಗಿ ಆಳುತ್ತಿದ್ದವರು ಸಾಮಂತರು. ಆಳುವ ದೃಷ್ಟಿಯಿಂದ ಇವರು ಸ್ವತಂತ್ರರಾಗಿದ್ದರೂ ತಮ್ಮ ಮೇಲಿನ ಒಡೆಯರಿಗೆ ನಿಷ್ಠೆಯಿಂದ ಇರಬೇಕಾಗಿತ್ತು. ಕಾಲಕಾಲಕ್ಕೆ ಕಪ್ಪಕಾಣಿಕೆಗಳನ್ನು ಸಲ್ಲಿಸುವುದರ ಜೊತೆಗೆ ಚಕ್ರವರ್ತಿಯು ಯುದ್ಧಕ್ಕೆ ಹೊರಟಾಗ ಸ್ಯೆನ್ಯದ ನೆರವನ್ನು ಒದಗಿಸಬೇಕಿತ್ತು. ತಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇವರು ಪದೋನ್ನತಿಯನ್ನು ಪಡೆಯುತ್ತಿದ್ದರು.

ಎಡೆದೊರೆನಾಡು ವ್ಯಾಪ್ತಿಯಲ್ಲಿ ದೊಡ್ಡದಾಗಿದೆ. ಆದ್ದರಿಂದ ಒಂದೇ ಅರಸು ಮನೆತನವು ಅದನ್ನು ವಂಶಪಾರಂಪರ್ಯವಾಗಿ ರಾಜ್ಯಭಾರ ನಡೆಸಲು ಸಾಧ್ಯವಾಗಲ್ಲಿಲ್ಲ. ಹೈಹಯ ವಂಶದ ಅರಸರು ಈ ವಿಭಾಗವನ್ನು ಆಳುತ್ತಿದ್ದುದು ಶಾಸನಗಳಿಂದ ತಿಳಿಯುತ್ತದೆ. ಆದರೆ  ಅದೇ ಅವಧಿಯಲ್ಲಿ ಈ ನಾಡಿನ ಕೆಲವು ಉಪವಿಭಾಗಗಳನ್ನು ಇತರ ಅರಸು ಮನೆತನಗಳು ಆಳುತ್ತಿದ್ದವು. ಅವರ ಶಾಸನಗಳಲ್ಲಿ ಹೈಹಯ ಅರಸರ ಮೇಲಾಳ್ವಿಕೆಯ ಉಲ್ಲೇಖವಿಲ್ಲ. ಅದ್ದರಿಂದ ಎಡೆದೊರೆನಾಡಿನ ಕೆಲವು ಉಪವಿಭಾಗಗಳನ್ನು ಬೇರೆ ಅರಸು ಮನೆತನಗಳು ಸ್ವತಂತ್ರವಾಗಿ ಆಳುತ್ತಿದ್ದವೆಂದು ಹೇಳಬಹುದು.

ಯಲಬರ್ಗಿಯ ಸಿಂದರು : ಸಿಂದ ವಂಶದ ಅರಸರು ಇಂದಿನ ಕೊಪ್ಪಳ ಜಿಲ್ಲೆಯನ್ನು ಕ್ರಿ. ಶ. ೭ನೇ ಶತಮಾನದಷ್ಟು ಹಿಂದೆಯೇ ಆಳುತ್ತಿದ್ದುದು ಕುಕನೂರು ಶಾಸನಗಳಿಂದ ತಿಳಿಯುತ್ತದೆ. ಆದರೆ ಇವರಲ್ಲಿ ಯಲಬುರ್ಗಿ ಸಿಂದ ಶಾಖೆಯು ಕ್ರಿ. ಶ. ೧೦೭೬ ರಿಂದ ರಾಜ್ಯಭಾರ ಮಾಡತೊಡಗಿತು. ಆರಂಭದಲ್ಲಿ ಮಹಾಸಾಮಂತರಾಗಿದ್ದ ಇವರು ಮುಂದೆ ಮಹಾಮಂಡಳೇಶ್ವರರಾಗಿ ಪದೋನ್ನತಿ ಪಡೆದರು.

ಯಲಬುರ್ಗಿ ಸಿಂದ ಶಾಖೆಯ ಚರಿತ್ರೆಯು ಸಪ್ತ ಸಹೋದರರಿಂದ ಪ್ರಾರಂಭವಾಗುತ್ತದೆ. ಮುಂದೆ ಒಂದನೆಯ ಆಚುಗಿ, ಸಿಂಘಣ, ಚಾವುಂಡ, ಎರಡನೆಯ ಸಿಂಘ, ಎರಡನೆಯ ಆಚುಗಿ, ಒಂದನೆಯ ಪೆರ್ಮಾಡಿ, ಎರಡನೆಯ ಚಾವುಂಡ, ವೀರ ಬಿಜ್ಜಲ ಮತ್ತು ವಿಕ್ರಮರು ಕ್ರಮವಾಗಿ ಆಳಿದರು. ಸಿಂದರು ಭೋಗಾವತೀ ಪುರವರಾಧೀಶ್ವರ, ಅಹಿಚ್ಛತ್ರಪುರ ಧರಾಮರರಕ್ಷದಕ್ಷ ಮೊದಲಾದ ಪ್ರಶಸ್ತಿಗಳನ್ನು ಧರಿಸಿದ್ದಾರೆ. ಯಲಬುರ್ಗಿ ಸಿಂದ ಶಾಖೆಯವರು ‘ಹಟ್ಟಿಗಾರ ಕುಲ’ ಎಂಬ ವಿಶಿಷ್ಟ ಬಿರುದನ್ನು ಧರಿಸಿದ್ದಾರೆ. ಇವರು ಕೆಳವಾಡಿ-೩೦೦, ಕಿಸುಕಾಡು-೭೦ ಬಾಗಡಗೆ-೭೦, ನರೆಯಂಗಲ್ಲು-೧೨, ಕರಿವಿಡಿ-೩೦ ಮತ್ತು ಕುಕನೂರು-೩೦ಗಳನ್ನು ಆಳುತ್ತಿದ್ದರು. ಚಾಲುಕ್ಯರಿಗೆ ಕಂಟಕಪ್ರಾಯರಾಗಿದ್ದ ಗೋವೆ ಕದಂಬರು, ಪಾಂಡ್ಯರು ಮತ್ತು ಚೋಳರ ವಿರುದ್ದ ಅನೇಕ ಸಲ ಇವರು ಯುದ್ಧ ಸಾರಿದ್ದಾರೆ. ಈ ಮನೆತನದ ಎರಡನೆ ಚಾವುಂಡನು ಕಲಚೂರಿ ಬಿಜ್ಜಳನ ತಂಗಿಯರಾದ ಸಿರಿಯಾದೇವಿ ಮತ್ತು ಲಕ್ಷ್ಮಿದೇವಿಯರನ್ನು ಮದುವೆಯಾಗಿದ್ದನು. ಸುಮಾರು ೧೫೦ ವರ್ಷಗಳ ಕಾಲ (೧೦೭೬-೧೨೨೦) ಆಳ್ವಿಕೆ ನಡೆಸಿದ ಈ ಮನೆತನದ ಸೇವಣರ ಕಾಲಕ್ಕೆ ಅಸ್ತಂಗತವಾಯಿತು.

ಸಾಲಗುಂದಿಯ ಸಿಂದರು : ಸಿಂಧನೂರು ತಾಲೂಕಿನ ಸಾಲಗುಂದಿಯು ಒಂದು ಪ್ರಸಿದ್ಧ ಅಗ್ರಹಾರವಾಗಿತ್ತು. ಅದು ಎಪ್ಪತ್ತು ಹಳ್ಳಿಗಳ ಮುಖ್ಯ ಪಟ್ಟಣವಾದಾಗ ಸಿಂದ ವಂಶದ ಅರಸರು ಆಳತೊಡಗಿದರು. ಇವರು ತಮ್ಮ ವಂಶದ ಮೂಲ ಪುರುಷ ನಾಗೇಂದ್ರ ಮತ್ತು ನಾಗಿಣಿಯರೆಂದು ಹೇಳಿಕೊಂಡಿದ್ದಾರೆ. ಈ ಮನೆತನದಲ್ಲಿ ಕಾಣಿಸಿಕೊಳ್ಳುವ ಮೊದಲು ಅರಸ ಕಾಲಿಗಾನಭೂಪ. ಈತನ ಕಾಲ ಕ್ರಿ. ಶ. ೧೦೩೦. ಮುಂದೆ ಇವನ ಮಗ ಕಣ್ಣರಸ ಕ್ರಿ. ಶ. ೧೦೫೩ರಲ್ಲಿ ಪಟ್ಟಕ್ಕೆ ಬಂದನು. ಈತನ ರಾಣಿ ಕಾಮಲದೇವಿ. ಇವರಿಗೆ ಇಮ್ಮಡಿ ಕಾಲಿಗಾನ ಭೂಪ ಮತ್ತು ಬಾಚಿಭೂಪರೆಂಬ ಇಬ್ಬರು ಮಕ್ಕಳು ಜನಿಸಿದರು. ಹಿರಿಯವನಾದ ಕಾಲಿಗಾನಭೂಪನ ಆಳ್ವಿಕೆಯನ್ನು ಶಾಸನಗಳು ಹೇಳುವುದಿಲ್ಲ. ಬಹುಶಃ ಅವನು ತಂದೆಯ ಆಳ್ವಿಕೆಯ ಕಾಲಾವಧಿಯಲ್ಲಿಯೇ ಅಕಾಲ ಮರಣಕ್ಕೆ ತುತ್ತಾಗಿರಬೇಕು. ಮುಂದೆ ಈತನ ತಮ್ಮ ಬಾಚಿಭೂಪನು ಅಧಿಕಾರಕ್ಕೆ ಬಂದನು.

‘ಪೆರ್ಮಾಡಿಯ ಬಲ್ವು’ವೆನಿಸಿದ್ದ ಬಾಚಿಭೂಪನ ಉಲ್ಲೇಖ ಕ್ರಿ.ಶ.೧೦೬೩ರ ಸಾಲಗುಂದೆ ಶಾಸನದಲ್ಲಿದೆ. ಇವನು ಕ್ರಿ. ಶ. ೧೦೮೮ರವರೆಗೆ ರಾಜ್ಯಭಾರ ನಡೆಸಿದನು. ಆದರೆ ಈ ಬಾಚಿಭೂಪನ ನಂತರ ಸಿಂದರ ಇತಿಹಾಸ ಅಸ್ಪಷ್ಟವಾಗಿದೆ.

ಸಗರ ನಾಡಿನ ಹೈಹಯರು : ರಾಷ್ಟ್ರಕೂಟರ ಕಾಲದಲ್ಲಿ ಇವರು ಸಗರ ನಾಡಿನ ಗಾವುಂಡರಾಗಿ ಆಳುತ್ತಿದ್ದುದು ಶಾಸನದಿಂದ ತಿಳಿಯುತ್ತದೆ. ಈ ವಂಶದ ಅತ್ಯಂತ ಪ್ರಾಚೀನ ಅರಸ ಚಂದಯ್ಯನ ಉಲ್ಲೇಖ ಕ್ರಿ. ಶ. ೯೩೯ರ ಸಿರಿವಾಳ ಶಾಸನದಲ್ಲಿದೆ. ಇವನು ಸಗರನಾಡ ನಾಳ್ಗಾವುಂಡನಾಗಿದ್ದನು. ಮುಂದೆ ಇವನ ಮಗ ನಿಂಬ ಆನಂತರ ಅವನ ಮಗ ಮಹಾಸಾಮಂತ ಮನ್ನೆಯ ಚಂದರು ಆಳ್ವಿಕೆ ನಡೆಸಿದರು. ಕ್ರಿ.ಶ.೧೦೧೪ರ ಮಲ್ಲಾಬಾದ ಶಾಸನದಲ್ಲಿ ಈ ಚಂದನ ಉಲ್ಲೇಖವಿದೆ. ಇವನ ಮಗನಾದ ಮಹಾಮಂಡಳೇಶ್ವರ ರೇವರಸನು ಎಡೆದೊರೆನಾಡಿನ ಆಳ್ವಿಕೆಗೆ ನಿಯುಕ್ತಗೊಂಡನು. ಆದ್ದರಿಂದ ಬಹುಶಃ ಇವನ ಮಗನಾದ (ಇಲ್ಲವೆ ತಮ್ಮ) ಏಚರಸನು ೧೦೪೬ರಲ್ಲಿ ಈ ವಿಭಾಗವನ್ನು ಆಳತೊಡಗಿದನು. ಇವನ ನಂತರ ಚಂದರಸ (೧೦೬೭), ರೇವರಸನ ತಮ್ಮ ಗೊಗ್ಗರಸ(೧೦೬೭-೧೦೯೩), ಮಲ್ಲಿರೇವರಸ (೧೦೯೫-೧೧೨೯), ಮಹಾಮಂಡಳೇಶ್ವರ ಸೋವಿದೇವರಸ (೧೧೩೭), ಮಹಾಮಂಡಳೇಶ್ವರ ಅಲ್ಲಿ ಪುಲಿ ದೇವರಸ (೧೧೫೫-೧೧೭೭), ಮಹಾಮಂಡಳೇಶ್ವರ ಚಂದಗಿ ದೇವರಸ (೧೧೮೦-೧೨೦೮)ರು ಕ್ರಮವಾಗಿ ಈ ವಿಭಾಗವನ್ನು ಆಳಿದರು.

ಅಯ್ಯಣವಾಡಿಯ ಹೈಹಯರು : ಈ ವಂಶದ ಮತ್ತೊಂದು ಶಾಖೆಯು ಅಯ್ಯಣವಾಡಿ-೩೦೦ ವಿಭಾಗವನ್ನು ಆಳುತ್ತಿದ್ದುದು ಶಾಸನಗಳಿಂದ ತಿಳಿಯುತ್ತದೆ. ಕ್ರಿ.ಶ. ೧೦೨೨ರ ಬಲ್ಲಟಗಿ ಶಾಸನವು ಮನ್ನೆಯ ಲೋಕಾದಿತ್ಯನು ಈ ವಿಭಾಗವನ್ನು ಆಳುತ್ತಿದ್ದನೆಂದು ಹೇಳಿದೆ. ಆರಂಭದಲ್ಲಿ ಮನ್ನೆಯರಾಗಿದ್ದ ಇವರು ಮುಂದೆ ಮಹಾಸಾಮಂತರಾಗಿ ಪದೋನ್ನತಿ ಪಡೆದರು. ಗೊಬ್ಬೂರು ಶಾಸನದಲ್ಲಿ ಮಹಾಸಾಮಂತ ಚಂದರಸನ ಉಲ್ಲೇಖವಿದೆ. ಹಿಂದೆಯೇ ನೋಡಿದಂತೆ ದೇವದುರ್ಗ ತಾಲೂಕಿನ ಗೊಬ್ಬೂರು ಗ್ರಾಮವು ಅಯ್ಯಣವಾಡಿಯ ಅಗ್ರಹಾರವಾಗಿದೆ. ಆದ್ದರಿಂದ ಈ ಶಾಸನದ (೧೦೮೫) ಚಂದರಸನು ಲೋಕಾದಿತ್ಯನ ಮಗನಾಗಿರಬೇಕು. ಅಲ್ಲದೆ ಇವನು ತಂದೆಯ ನಂತರ ಈ ವಿಭಾಗವನ್ನು ಆಳಿರಬೇಕು.

ಎಡೆದೊರೆ ನಾಡಿನ ಹೈಹಯರು : ಹಿಂದೆಯೇ ನೋಡಿದಂತೆ ಸಗರ ನಾಡನ್ನು  ಆಳುತ್ತಿದ್ದ ಹೈಹಯ ವಂಶದ ಚಂದನ ಮಗ ರೇವರಸನು ಎಡೆದೊರೆ ನಾಡಿನ ಆಳ್ವಿಕೆಗೆ ನಿಯುಕ್ತನಾದವನು. ಇವನ ಅತ್ಯಂತ ಪ್ರಾಚೀನ ಉಲ್ಲೇಖ ಕ್ರಿ.ಶ. ೧೦೫೨ರ ಶಾಸನವಾಗಿದೆ. ಮಾನ್ವಿಯ ಕ್ರಿ.ಶ. ೧೦೫೪ರ ಶಾಸನವು ಅವನು ಎಡೆದೊರೆನಾಡನ್ನು ಆಳುತ್ತಿದ್ದನೆಂದು ಹೇಳಿದೆ. ರೇವರಸನ ನಂತರ ಬಹುಶಃ ಅವನ ಮಗನಾದ ಜೋಯಿಮಯ್ಯರಸನನು ಎಡೆದೊರೆನಾಡನ್ನು ಆಳಿದನು. ಕ್ರಿ.ಶ. ೧೦೮೫ರ ಗುತ್ತಿ ಮತ್ತು ಗೊಬ್ಬೂರ ಶಾಸನಗಳು ಅವನು ಎಡೆದೊರೆನಾಡನ್ನು ಆಳುತ್ತಿದ್ದನೆಂದು ಹೇಳಿದೆ. ದೇವರಗುಡಿಯ ಕ್ರಿ. ಶ.೧೧೦೧ ಶಾಸನವು ಮಹಾಮಂಡಳೇಶ್ವರ ದಶವರ್ಮನು ಎಡೆದೊರೆನಾಡನ್ನು ಆಳುತ್ತಿದ್ದನೆಂದು ಹೇಳಿದೆ. ಬಹುಶಃ ಇವನು ಜೋಯಿಮರಸನ ಮಗನಾಗಿರಬೇಕು.

ದಶವರ್ಮನ ನಂತರ ಕ್ರಿ.ಶ. ೧೧೨೫ರಿಂದೀಚೆಗೆ ಎಡೆದೊರೆನಾಡಿನ ಆಳ್ವಿಕೆಯು ಹೈಹಯ ವಂಶದವರಿಗೆ ತಪ್ಪಿಹೋಗಿ ಮೊರಟ-೩೦೦ರಂಥ ಚಿಕ್ಕ ವಿಭಾಗವನ್ನು ಆಳತೊಡಗಿದರು. ಬಹುಶಃ ಕೆಳವಾಡಿ ಮತ್ತು ಕರಡಿಕಲ್ಲು ನಾಡುಗಳನ್ನು ಕ್ರಮವಾಗಿ ಪ್ರಬಲ ಸಾಮಂತರಾದ ಸಿಂದರು ಹಾಗೂ ಕದಂಬರು ಆಳತೊಡಗಿದ್ದರಿಂದ ಹೈಹಯರ ಅಧಿಕಾರವ್ಯಾಪ್ತಿ ಮೊಟಕುಗೊಳ್ಳಲು ಕಾರಣವಾಗಿರಬೇಕು.

ಮೊರಟದ ಹೈಹಯರು : ಬಲ್ಲಟಗಿಯ ಕ್ರಿ. ಶ. ೧೧೨೮ರ ಶಾಸನ ಮಹಾಮಂಡಳೇಶ್ವರ ಘಟ್ಟಿದೇವರಸನನ್ನು ಉಲ್ಲೇಖಿಸಿದೆ. ಮಲ್ಲಟದ ಎರಡು ಶಾಸನಗಳು ಇವನು ಮೊರಟ-೩೦೦ನ್ನು ಆಳುತ್ತಿದ್ದನೆಂದು ಹೇಳಿವೆ. ಮುಂದೆ ಇವನ ಮಗ ಹಲ್ಲರಸನು ಆಳಿದನು. ಇವನ ನಂತರ ಮೈಳುಗಿದೇವ ಅಥವಾ ಮಲ್ಲಿದೇವನು ರಾಜ್ಯಭಾರ ನಡೆಸಿದನು. ಕ್ರಿ.ಶ. ೧೧೯೧ರ ಹಿರೇಕೊಟ್ನಿಕಲ್ಲು ಶಾಸನವು ಇವನನ್ನು ಉಲ್ಲೇಖಿಸಿದೆ. ಬಳಗಾನೂರಿನ ಕ್ರಿ.ಶ. ೧೧೯೧-೯೨ರ ಶಾಸನವು ಈ ಮಲ್ಲಿದೇವನು ‘ರಾಜಧಾನಿ ಮದನ ಸಿರವೂರ’ (ಸಿರವಾರ)ದಿಂದ ಆಳುತ್ತಿದ್ದನೆಂದು ಹೇಳಿದೆ. ಹಿಂದೆಯೇ ನೋಡಿದಂತೆ ಹಿರೇಕೊಟ್ನಿಕಲ್ಲು, ಸಿರಿವಾರ ಮತ್ತು ಬಳಗಾನೂರು ಗ್ರಾಮಗಳು ಮಲ್ಲಟ-೩೦೦ರಲ್ಲಿ ಸಮಾವೇಶಗೊಂಡಿವೆ.

ಮಹಾಮಂಡಳೇಶ್ವರ ಮಲ್ಲಿದೇವನ ಪಟ್ಟದರಾಣಿ ಮಾಕಲದೇವಿ. ಇವರಿಗೆ ಅಲ್ಲ ಹುಲಿದೇವರಸನೆಂಬ ಮಗನಿದ್ದನು. ಇವನು ತಂದೆಯ ಆಳ್ವಿಕೆಯಲ್ಲಿ ಕೆರೆಯೂರು ಮೊದಲಾದುವುಗಳನ್ನು ಕುಮಾರ ವೃತ್ತಿಯಿಂದ ಆಳುತ್ತಿದ್ದನೆಂದು ಬಳಗಾನೂರು ಶಾಸನ ಹೇಳಿದೆ. ಮುಂದೆ ಕ್ರಿ.ಶ. ಸು ೧೨೦೦ರ ವೇಳೆಗೆ ಅವನು ಈ ವಿಭಾಗವನ್ನು ಆಳಿರಬೇಕು. ಕವಿತಾಳದ ಕ್ರಿ.ಶ. ೧೨೧೭ರ ಎರಡು ಶಾಸನಗಳು ಅಲ್ಲಾಹುಲಿದೇವನ ಮಗ ಎರಡನೆಯ ಮಲ್ಲಿದೇವನು ಮದನಸಿರಿವೂರ ರಾಜಧಾನಿಯಿಂದ ಆಳುತ್ತಿದ್ದುದನ್ನು ಉಲ್ಲೇಖಿಸಿವೆ. ಇಲ್ಲಿಂದ ಮುಂದೆ ಈ ವಂಶದ ಆಳ್ವಿಕೆಯು ಹೆಚ್ಚೂ ಕಡಿಮೆ ನಿಂತು ಹೋಯಿತು.

ಕರಡಕಲ್ಲಿನ ಕದಂಬರು : ಕದಂಬವಂಶದ ಒಂದು ಶಾಖೆಯು ಇಂದಿನ ಲಿಂಗಸೂಗೂರು ತಾಲೂಕಿನ ಕರಡುಕಲ್ಲನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದಿತು. ಆದ್ದರಿಂದ ಇವರನ್ನು ಕರಡಿಕಲ್ಲಿನ ಕದಂಬರೆಂದು ಕರೆಯಲಾಗಿದೆ. ಇವರು ಕದಂಬರ ಸಾಮಾನ್ಯ ಪ್ರಶಸ್ತಿಗಳ ಜೊತೆಗೆ ‘ನವಿಲೆಯ ಪಾರ್ಥ, ತೊಱೆದಡಿಯಭೀಮ, ಮೊನ್ನೆಯ ಗೊಡವೆ’ ಮೊದಲಾದ ಬಿರುದುಗಳನ್ನು ಧರಿಸಿದ್ದರು.

ಕರಡುಕಲ್ಲ ಕದಂಬ ವಂಶದ ಮೊದಲ ಅರಸ ಮಹಾಸಾಮಂತ ನಾಗವರ್ಮನಾಗಿದ್ದಾನೆ. ಮುಂದೆ ಕ್ರಮವಾಗಿ ಭೂತರಸ (೧೧೧೩), ಮಾಧವತ್ತಿಯರಸ, (೧೧೩೫)ರು ರಾಜ್ಯಭಾರ ನಡೆಸಿದರು. ಇವರ ನಂತರದಲ್ಲಿ ಒಂದನೆಯ ಬಿಜ್ಜ, ಒಂದನೆಯ ಕಾಚ, ಎರಡನೆಯ ಬಿಜ್ಜ ಮತ್ತು ಮೂರನೆಯ ಬಿಜ್ಜರಸರು ಆಳ್ವಕೆ ನಡೆಸಿದರೆಂದು ಕರಡಿಕಲ್ಲು (೧೧೯೧) ಮತ್ತು ಮುದಗಲ್ಲು (೧೨೧೫) ಶಾಸನಗಳು ಹೇಳಿವೆ. ಮೂರನೆಯ ಬಿಜ್ಜನ ಆಳ್ವಕೆಯಲ್ಲಿ ಈ ವಿಭಾಗದ ರಾಜಧಾನಿಯು ಮುದಗಲ್ಲು ಪಟ್ಟಣಕ್ಕೆ ಸ್ಥಳಾಂತರಗೊಂಡಿತು.

ಆಡಳಿತಾಧಿಕಾರಿಗಳು : ಚಕ್ರವರ್ತಿಯು ತನ್ನ ಸಾಮ್ರಾಜ್ಯದ ವಿವಿಧ ಕರ್ತವ್ಯಗಳನ್ನು ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿಕೊಳ್ಳುತ್ತಿದ್ದನು. ಇದರಂತೆ ವಿವಿಧ ಪ್ರಾಂತಗಳ ಅರಸರೂ ಅನೇಕ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದರು. ಇವರಲ್ಲಿ ಮಹಾಸಾಮಂತಾಧಪತಿ ಮಹಾಪ್ರಚಂಡ ದಂಡನಾಯಕ ಶ್ರೇಣಿಯ ಅಧಿಕಾರಿಗಳಿಂದ ಚಕ್ರವರ್ತಿಯಿಂದ ನಿಯುಕ್ತರಾಗಿದ್ದರೆ, ಇತರರು ಪ್ರಾಂತೀಯ  ಅರಸರ  ಸಹಾಯಕರಾಗಿದ್ದಾರೆ. ಕೇಂದ್ರ ಸರಕಾರದಲ್ಲಿ ಸುಂಕದ ಇಲಾಖೆ, ವಿದ್ಯಾ ಇಲಾಕೆ, ರಕ್ಷಣಾ ಇಲಾಖೆ, ವಿದೇಶಾಂಗ ಇಲಾಖೆ ಮೊದಲಾದ ಬೇರೆ ಬೇರೆ ಶಾಖೆಗಳಿದ್ದವು. ಆಯಾ ಇಲಾಖೆಗಳಿಗೆ ಮಹಾಸಾಮಂತಾಧಪತಿ ಮಹಾ ಪ್ರಚಂಡ ದಂಡನಾಯಕರು ಮುಖ್ಯಸ್ಥರಾಗಿದ್ದರು. ಶಾಸನಗಳು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ದಂಡನಾಯಕರೆಂದೇ ಕರೆದಿವೆ. ಆದ್ದರಿಂದ ಇವರು ಕೇವಲ ಸೈನ್ಯಾಧಿಕಾರಿಗಳಾಗಿರಲಿಲ್ಲವೆಂಬುದು ಸ್ಪಷ್ಟವಾಗಿದೆ. ಇವರಲ್ಲಿಯ ಮುಖ್ಯಸ್ಥನನ್ನು ಪ್ರಧಾನ, ಮಹಾಪ್ರಧಾನ, ಮಹಾಪ್ರಚಂಡ ದಂಡನಾಯಕ ಎಂಬ ಹೆಸರಿನಿಂದ ಕರೆದಿವೆ. ಇನ್ನು ಈ ಅಧಿಕಾರಿಗಳಿಗೆ ಸಂಬಂಧಿಸಿ ಬರುವ ‘ಆಳುತ್ತಮಿರೆ’ ಎಂಬುದನ್ನು ತನ್ನ ಹುದ್ದೆಯನ್ನು ನಿರ್ವಹಿಸುತ್ತಿದ್ದನೆಂದೇ ಭಾವಿಸಬೇಕು.

ಭೀಮರಾಯನಗುಡಿ ಶಾಸನ (೧೦೫೧)ವು ತ್ರೈಳೋಕ್ಯಮಲ್ಲನ ಅಧಿಕಾರಿ ಪುರಕ್ಖರಧಿಷ್ಠಾಯಕ ಕಿಳ್ವಾಲ ಸೋಮಯ್ಯನಾಯಕನನ್ನು, ಬೈಚಬಾಳ ಶಾಸನ (೧೦೭೪)ವು ಆರನೆಯ ವಿಕ್ರಮಾದಿತ್ಯನ ಅಧಿಕಾರಿ ಮಹಾಸಾಮಂತಾಧಿಪತಿ ಮಹಾಪ್ರಚಂಡ ದಂಡನಾಯಕ ಸಿಂಗರಸ ಮತ್ತು ಆತನ ತಂದೆ ದಂಡನಾಯಕ ರೆಬ್ಬಣಯ್ಯರನ್ನು ಉಲ್ಲೇಖಿಸಿವೆ. ಏವೂರು ಶಾಸನವು (೧೧೦೮) ಅಚ್ಚು ಪನ್ನಾಯದಧಿಷ್ಟಾಯಕ ದಂಡನಾಯಕ ಮುದ್ದರಸನನ್ನು, ಯಡ್ರಾವಿ ಶಾಸನ (೧೧೧೧) ಮಹಾಪ್ರಧಾನ ದಂಡನಾಯಕ ಆದಿತ್ಯ ಭಟ್ಟಯ್ಯನನ್ನು, ಏವೂರು ಶಾಸನ (೧೧೨೫) ಮಹಾಪ್ರಧಾನ ದಂಡನಾಯಕ ಲಕ್ಷ್ಮಣಯ್ಯನನ್ನು, ಸಿರಿವಾಳ ಶಾಸನ (೧೧೩೭), ಮಹಾಸಾಮಂತಾಧಿಪತಿ – ಮಹಾಪ್ರಧಾನ ಸೇನಾಧಿಪತಿ ಕಡಿತವೆರ್ಗಡೆ – ಕನ್ನಡ ಸಂಧಿ ವಿಗ್ರಹಿ -ಹಿರಿಯ ದಂಡನಾಯಕ ಕಾಳಿಮರಸನನ್ನು ಉಲ್ಲೇಖಿಸಿವೆ. ಈ ಕಾಳಿಮರಸನ ಸಾಮಂತನಾಗಿ ಮಹಾಪ್ರಧಾನ ದಂಡನಾಯಕ ತಿಕ್ಕರಸನು ಕಾರ್ಯನಿರ್ವಹಿಸುತ್ತಿದ್ದನು.

ಕುರಡಿ ಶಾಸನದಲ್ಲಿ ಆರನೆಯ ವಿಕ್ರಮಾದಿತ್ಯನ ಅಧಿಕಾರಿ ಮಹಾಸಾಮಂತಾಧಿಪತಿ ಮಹಾಪ್ರಚಂಡ ದಂಡನಾಯಕ ರವಿಯಣಭಟ್ಟನ ಉಲ್ಲೇಖವಿದೆ. ಅಲ್ಲದೆ ಇಲ್ಲಿಯ ಮತ್ತೆ ಎರಡು ಶಾಸನ (೧೧೧೯-೧೧೨೩) ಗಳಲ್ಲಿ ಮಧುವಪಯ್ಯ ದಂಡನಾಯಕನ ಉಲ್ಲೇಖಗಳಿವೆ. ಇವರಲ್ಲಿ ರವಿಯಣಭಟ್ಟನು ಹೇರಿಲಾಳ ಸಂಧಿವಿಗ್ರಹಿಯಾಗಿದ್ದನೆಂದು ಕುರಡಿಯ ಮತ್ತೊಂದು ಶಾಸನದಿಂದ ತಿಳಿಯುತ್ತದೆ. ಏವೂರು ಶಾಸನ (೧೦೭೭)ವು ಅವನ ವಂಶಾವಳಿಯನ್ನು ವಿವರವಾಗಿ ನೀಡಿದೆ. ಇವನು ಕಿರುದೊರೆಯ (ತುಂಗಭದ್ರ ನದಿಯ) ಮುಕ್ಕುಂದೆ ಗ್ರಾಮದವನು. ವಿಕ್ರಮಾದಿತ್ಯನ ಮತ್ತೊಬ್ಬ ಅಧಿಕಾರಿ ಮಹಾಸಾಮಂತಾಧಿಪತಿ ಮಹಾಪ್ರಚಂಡ ದಂಡನಾಯಕ ಮುದ್ದಣ್ಣ ನಾಯಕನು ಕೆಳವಾಡಿ-೩೦೦ನ್ನು ಆಳುತ್ತಿದ್ದನೆಂದು ಪುರಶಾಸನ (೧೧೧೮) ಹೇಳಿದೆ.

ಕಲ್ಲೂರು ಶಾಸನ (೧೧೪೩) ದಲ್ಲಿ ಪಟ್ಟಸಾಹಣಿ ಹಿರಿಯ ದಂಡನಾಯಕ ಭೀಮಣಯ್ಯನ ಉಲ್ಲೇಖವಿದೆ. ಈತನ ಕೆಳಗೆ ಹೆಗ್ಗಡೆ ದಂಡನಾಯಕ ಕಾವರಾಜಯ್ಯನು ಎಡೆದೊರೆ-೨೦೦೦ವನ್ನು ಆಳುತ್ತಿದ್ದನು. ಮಹಾಪ್ರಧಾನ ದಂಡನಾಯಕ ಶ್ರೀಮದಯ್ಯನ ಕೆಳಗೆ ಹಿರಿಯ ಗೊಬ್ಬೂರು ಅಚ್ಚಿನಮೊಳೆಯ ಅಸ್ಪಷ್ಟ ಉಲ್ಲೇಖದ ಅಧಿಕಾರಿಯೊಬ್ಬರು ಕೆಲಸ ಮಾಡುತ್ತಿದ್ದುದು ಕುರಡಿ ಶಾಸನ (೧೦೪೮)ದಲ್ಲಿದೆ. ಮಹಾ ಪ್ರಧಾನ ಸೇನಾಧಿಪತಿ ಹಿರಿಯ ದಂಡನಾಯಕ ಕಡಿತವೆರ್ಗ್ಗಡೆ ಕನ್ನಡ ಸಂಧಿ ವಿಗ್ರಹಿ ಚಿದ್ದರಸರು ತರ್ದವಾಡಿ-೧೦೦೦, ಎಡೆದೊರೆ-೨೦೦೦, ಬೆಳ್ವೊಲ-೩೦೦ ಮೊದಲಾದ ವಿಭಾಗಗಳನ್ನು ಆಳುತ್ತಿದ್ದನೆಂದು ಸಂಗಮ ಶಾಸನ (೧೧೪೩) ಹೇಳಿದೆ.

ಎರಡನೆಯ ಜಗದೇಕಮಲ್ಲನ ಅಧಿಕಾರಿ ಮಹಾಪ್ರಧಾನ ಸುಂಕವೆರ್ಗ್ಗಡೆ ಗಯಾಧರ ದಂಡನಾಯಕನ ಉಲ್ಲೇಖ ಮುದನೂರು ಶಾಸನ(೧೧೪೬)ದಲ್ಲಿದೆ. ಮಲ್ಲಾಬಾದ ಶಾಸನ (೧೧೪೮)ದಲ್ಲಿ ಮಹಾಪ್ರಧಾನ ಸೇನಾಪತಿ ಸಗರ-೫೦೦ ಬಾಡದ ಪೆರ್ಗಡೆ ದಂಡನಾಯಕ ಲಕ್ಕಣದೇವರಸ ಮತ್ತು ಮಹಾಪ್ರಧಾನ ಸೇನಾಧಿಪತಿ ಸಗರ-೫೦೦ ಬಾಡದ ಸಂಕವೆರ್ಗ್ಗಡೆ ಗಜೆಯಕವರಸರ ಉಲ್ಲೇಖಗಳಿವೆ. ಕಲಚೂರು ಅಹವಮಲ್ಲದೇವನ ಅಧಿಕಾರಿ ಮಹಾಪ್ರಚಂಡ ದಂಡನಾಯಕ ಸಾಹಣಾಧಿಪತಿ ಚಂಡುಗಿ ದೇವರಸನು ಅಯಿಜೆ, ಎಡೆದೊರೆ, ಕನ್ನೆ, ಕೋಸಗಿ, ಗೊಂಕ ನಾಡು ಮೊದಲಾವುಗಳನ್ನು ಆಳುತ್ತಿದ್ದನೆಂದು ಮರಮಕಲ್ಲು ಶಾಸನ ಹೇಳಿದೆ. ರಾಯಮುರಾರಿ ಸೋವಿದೇವನ ಅಧಿಕಾರಿ ಮಹಾಪ್ರಧಾನ ಸೇನಾಧಿಪತಿ ಮಹಾಪ್ರಚಂಡ ದಂಡನಾಯಕ ಕುಮಾರ ಬಮ್ಮಿದೇವರಸನ ಉಲ್ಲೇಖ ಮುದನೂರು ಶಾಸನ (೧೧೭೫)ದಲ್ಲಿದೆ. ಆದರೆ ಪೋತಗಲ್ಲು  ಶಾಸನ (೧೧೭೫)ವು ಇವನನ್ನು ‘ಕಲಚೂರ್ಯ ರಾಜ್ಯ ನಿರ್ಮೂಲನ, ಚಾಳುಕ್ಯರಾಜ್ಯ ಸಮುದ್ಧರಣ, ದಂಡನಾಥಂಗಳಂಕಕಾರ’ ಎಂದು ಬಣ್ಣಿಸಿದೆ. ಆದ್ದರಿಂದ ಸೇನೆಯ ಮುಖ್ಯ ಅಧಿಕಾರಿಯಾಗಿದ್ದ ಇವನು ಚಾಲುಕ್ಯ ನಾಲ್ಕನೆಯ ಸೋಮೇಶ್ವರನಿಗೆ ಕಲಚೂರ್ಯರನ್ನು ಯುದ್ಧದಲ್ಲಿ ಸೋಲಿಸಲು ಸಹಾಯ ಮಾಡಿದ್ದನೆಂದು ಹೇಳಬೇಕಾಗುತ್ತದೆ.

ಆಡಳಿತಾಧಿಕಾರಿಗಳು ತಮ್ಮ ಕಾರ್ಯದಕ್ಷತೆ ಮತ್ತು ಪ್ರಾಮಾಣಿಕತೆ ಮೂಲಕ ಉನ್ನತ ಹುದ್ದೆಯನ್ನು ಹೊಂದುತ್ತಿದ್ದರು. ಕುರಡಿ ಶಾಸನವು (೧೧೨೩ ಮತ್ತು ೧೧೩೮) ಮಹಾಪ್ರಾಧಾನ ದಂಡನಾಯಕ ನಿಂಬಣಯ್ಯನು ಸತ್‌ಚಾರಿತ್ರ್ಯದಿಂದಲೇ ಮುಂದೆ ಬಂದನೆಂದು ಹೇಳಿದೆ. ಅವನು ಶಸ್ತ್ರ, ಶಾಸ್ತ್ರ ಸಾಹಿತ್ಯ ಮೊದಲಾದ ಕಲೆಗಳಲ್ಲಿ ಪರಿಣಿತನಾಗಿದ್ದನು. ರವಿಯಣಭಟ್ಟನು (ಏವೂರು-೧೦೬೫) ಒಂದನೆಯ ಸೋಮೇಶ್ವರ, ೨ನೆಯ ಸೋಮೇಶ್ವರ ಮತ್ತು ವಿಕ್ರಮಾದಿತ್ಯರ ಆಳ್ವಿಕೆಯಲ್ಲಿ ಕ್ರಮವಾಗಿ ಸ್ಯೆನ್ಯ ಹೇರಿಲಾಳ ಸ್ಥಾನಕ್ಕೆ ಬಡ್ತಿ ಪಡೆದನು.

ಪ್ರಾಂತೀಯ ಅರಸರೂ ತಮ್ಮ ವಿಭಾಗದ ಆಡಳಿತವನ್ನು ನೋಡಿಕೊಳ್ಳಲು ಕೆಲವು ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದರು. ಕೇಂದ್ರದಂತೆ ಇಲ್ಲಿಯೂ ಸುಂಕ, ವಿದ್ಯೆ, ರಕ್ಷಣೆ ಮೊದಲಾದ ಇಲಾಖೆಗಳಿವೆ. ಮಹಾಮಂಡಳೇಶ್ವರ ದೇವರಸ (ಸಗರ-೩೦೦)ನ ಅಧಿಕಾರಿ ಮಹಾಪ್ರಧಾನ ಶ್ರೀಕರಣ ದಂಡನಾಯಕ ಭೋಗರಸನ ಉಲ್ಲೇಖ ದೇವರಗೋನಾಲ  (೧೧೦೬) ಶಾಸನದಲ್ಲಿದೆ. ಆರನೆ ವಿಕ್ರಮಾದಿತ್ಯನ ರಾಣಿ ಧಾರಲದೇವಿಯು (ಬೊಮ್ಮನಹಳ್ಳಿ-೧೧೦೬) ಇವನಿಗೆ ದಾನ ನೀಡಿದ್ದಾಳೆ. ಆದ್ದರಿಂದ ಇವನು ವಿದ್ಯಾ ಇಲಾಖೆಯ ಅಧಿಕಾರಿಯಾಗಿರಬೇಕು. ಅಯ್ಯಣವಾಡಿ ನಾಡ ಹೆಗ್ಗೆಡೆ ದಂಡನಾಯಕ ಪಸಾಯಿತ ಸಿರಗಿ ವೆಣ್ಣಮರಸನ ಉಲ್ಲೇಖ ಕಲ್ಲೂರು ಶಾಸನ (೧೧೫೦)ದಲ್ಲಿದೆ. ಮಹಾಮಂಡಳೇಶ್ವರ ಬೂಚಿದೇವನ ಮಹಾಪ್ರಧಾನ ತಂತ್ರಪಾಳ x ಕಣ, ಹೆಗ್ಗಡೆ ಚೌಡಣರ ಉಲ್ಲೇಖ ಕಲ್ಲೂರಿನ ಶಾಸನ (೧೦೮೦)ದಲ್ಲಿದೆ. ಇವನ ಮೊಮ್ಮಗ ಮುದು ಗುಂದೂರು-೩೦೦ರ ಮಹಾಮಂಡಳೇಶ್ವರ ಬೂಚಿದೇವನ ಹೆಗ್ಗಡೆ ಮಲ್ಲಿದೇವರಸ ಮತ್ತು ಕೊಪ್ಪರಸರು ಹೆಜ್ಜುಂಕ, ಬಿಲ್ಕೊಡೆ ಹಾಗೂ ವಡ್ಡರಾವುಳವನ್ನು ನೋಡಿಕೊಳ್ಳುತ್ತಿದ್ದರೆಂದು ಕಲ್ಲೂರು ಶಾಸನ (೧೧೫೦) ಹೇಳಿದೆ. ಹೆಗ್ಗಡೆ ಕೇತಯ್ಯ ನಾಯಕನು ಸಗರ-೫೦೦ನ್ನು ಆಳುತ್ತಿದ್ದನೆಂದು ಯಡ್ರಾವಿ ಶಾಸನ (೧೧೬೯) ಹೇಳಿದೆ.

ಇದಲ್ಲದೆ ಬಿಡಿಬಿಡಿಯಾಗಿ ಕೆಲವು ಅಧಿಕಾರಿಗಳು ಈ ನಾಡಿನ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೈಹಯರ ಸಾಮಂತರಾದ (ಸಿರಿವಾರ-೧೦೯೬) ಪೆರ್ಗ್ಗಡೆ ಮಾರಮಯ್ಯ, ಪೆರ್ಗ್ಗಡೆxx ಳಯ್ಯ, ಎರಡನೇ ಜಯಸಿಂಹನ ರಾಣಿ ಮಹಾದೇವಿಯ (ಬಲ್ಲಟಗಿ-೧೦೨೨) ತಂತ್ರಪಾಳ ಮಲ್ಲಯ್ಯ, ದಂಡನಾಯ ಚಾಕಿಮಯ್ಯ (ನುಗಡೋಣಿ-೧೦೩೪), ಹೆಗ್ಗಡೆ ಚೌಡಣ (ಕಲ್ಲೂರು-೧೧೩೫), xx ವತನಾಡ ತಂತ್ರಪಾಳ ಗಂಗರ ಚಾವುಂಡಮಯ್ಯ (ಮಾನ್ವಿ-೧೧ನೇ ಶತಮಾನ) ಅಲ್ಲದೆ ಗೂಗೆಬಾಳ ಶಾಸನ (೧೧೭೫)ವು ಅಸ್ಪಷ್ಟ ಉಲ್ಲೇಖದ ಹೆಜ್ಜುಂಕದ ಅಧಿಕಾರಿಯನ್ನು ಹೇಳಿದೆ. ಕರಡಿಕಲ್ಲು ಶಾಸನ (೧೧೯೧)ವು ಕದಂಬ ಬಿಜ್ಜರಸನ ಮಹಾಪ್ರಧಾನ ಆನೆಯ ಮಾಳಯ್ಯ ನಾಯಕನನ್ನು ಉಲ್ಲೇಖಿಸಿದೆ.