ಎಡೆದೊರೆನಾಡಿನ ಜನರು ವೀರರು, ಧೀರರು, ದಾನಿಗಳು ಮತ್ತು ತ್ಯಾಗಿಗಳೂ ಆಗಿದ್ದರು. ಇವರ ವೀರತ್ವಕ್ಕೆ ವೀರಗಲ್ಲು, ಮಾಸ್ತಿ ಕಲ್ಲುಗಳು ಸಾಕ್ಷಿಯಾಗಿ ನಿಂತಿವೆ. ಗೋವುಗಳ ಅಪರಣ, ಸ್ತ್ರೀಯರ ಮಾನರಕ್ಷಣೆ ಮತ್ತು ಗ್ರಾಮಗಳ ಅಳಿವಿನ ಸಂದರ್ಭದಲ್ಲಿ ಅವರು ಹೋರಾಡಿ ಅಮರರಾಗಿದ್ದಾರೆ. ಕ್ರಿ.ಶ. ೧೦ನೆಯ ಶತಮಾನದ ಹೇರೂರು ಶಾಸನವು “ಪಡಿxಲ ಗಾವುಂಡ ಚಟ್ಟಯ್ಯನ ಅಜಿಯ್ಯನ ಮುಯ್ದುನ ಎರೆಯಮ್ಮಜೀ ಎಱೆಯಬ್ಬೆಯ ಮಲ್ಲನ ತಮ್ಮ ಸತಗೊಂಡನು ಕಾಳಗ” ದಲ್ಲಿ ಮಡಿದಾಗ ಅವನ ಹೆಂಡತಿ ಕಾವಬ್ಬೆಯು ಸತಿ ಹೋದಳೆಂದು ಹೇಳಿದೆ. ಕರ್ತಮೇಶ್ವರದ ಆಚಾರ್ಯ ಅಮಿತರಾಶಿಯ ಶಿಷ್ಯ “xಗಱು ಮಾದಿಗಾವುಂಡನು ತುರುಗೋಳ”ದಲ್ಲಿ ಮಡಿದುದ್ದನ್ನು ಕ್ರಿ.ಶ. ೧೨ನೆಯ ಶತಮಾನದ ಹೇರೂರಿನ ಮತ್ತೊಂದು ಶಾಸನ ಉಲ್ಲೇಖಿಸಿದೆ.

ಎಡೆದೊರೆನಾಡಿನ ಹೆಚ್ಚಿನ ಶಾಸನಗಳು ದಾನ-ದತ್ತಿಗಳಿಗೆ ಮೀಸಲಾಗಿವೆ. ದಾನವನ್ನು ಪುತ್ರೋತ್ಸವ, ಪಟ್ಟಾಭಿಷೇಕ ಮುಂತಾದ ಸಂದರ್ಭಗಳಲ್ಲಿ; ಹಬ್ಬ-ಹರಿದಿನ, ಸೂರ್ಯಗ್ರಹಣ, ಸಂಕ್ರಾಂತಿ ಮೊದಲಾದ ದಿನಗಳಲ್ಲಿ ನೀಡುತ್ತಿದ್ದರು.

ಕೆರೆ-ಬಾವಿಗಳನ್ನು ತೋಡಿಸುವುದು, ಸತ್ರಗಳನ್ನು ನಿರ್ಮಿಸುವುದು ಆ ಕಾಲದ ಜನರ ಮತ್ತೊಂದು ಆದರ್ಶವಾಗಿತ್ತು. ಪುರ, ಧರೆಯಾಪುರ, ದೇವಸೂಗೂರು, ಕಲ್ಲೂರು, ಬಲ್ಲಟಗಿ ಮೊದಲಾದ ಶಾನಗಳು ಅಲ್ಲಿ ಕೆರೆ ನಿರ್ಮಿಸಿ ದಾನ ನೀಡಿದ್ದನ್ನು ಉಲ್ಲೇಖಿಸಿವೆ. ಅಲ್ಲದೆ ಏವೂರಿನ ಅಣ್ಣಮಗಾವುಂಡನ ಕೆರೆ-ದಂಡನಾಯಕನ ಕೆರೆ; ಯಾಳಗಿಯ (೧೨೬೫) ಸಂಜೆ ವೇಳೆಯ ಬಾವಿ-ಹೆಸರಬಾವಿ ಮೊದಲಾದುವುಗಳ ಉಲ್ಲೇಖ ಅಲ್ಲಿಯ ಶಾಸನಗಳಲ್ಲಿವೆ. ನಾಗದೇವ ದಂಡನಾಯಕನು ಸಾಲಗುಂದಿ(೧೦೬೩)ಯಲ್ಲಿ “ಬಾವಿದೇಗುಲಂ ಕೆರೆ ನಿರ್ಮಳವುಳ್ಳ ಪೊಕ್ಕರಣಿ ದೀರ್ಗ್ಘಿಗೆ ದೇವನಿವಾಸ……… ನಂದನಾವಳಿ ಛತ್ರ” ಮೊದಲಾದುವುಗಳನ್ನು ನಿರ್ಮಿಸಿದನು. ಆರನೆಯ ವಿಕ್ರಮಾದಿತ್ಯನು ತನ್ನ ಸುದೀರ್ಘವಾದ ಆಳ್ವಿಕೆಯಲ್ಲಿ ಪ್ರತಿನಿತ್ಯವೂ ಭೂಮಿದಾನ ಮಾಡಿದುದಕ್ಕೆ ಶಾಸನಾಧಾರಗಳಿವೆ.  ಇದರಿಂದಾಗಿ ಅವನ ಸಾಮ್ರಾಜ್ಯದಾದ್ಯಂತ ಅನೇಕ ಕೆರೆ- ಬಾವಿಗಳು ನಿರ್ಮಾಣವಾದವು. ಇದನ್ನೆ ಸಾಲಗುಂದಿ ಶಾಸನ (೧೦೬೩)ವು –

ವಸುಧೆಯೆಲ್ಲಮಂ ಕೆರೆ ಬಾವಿದೀರ್ಗ್ಘಿಗೆ ದೇಗುಲಂ ಪೂದೋಟಂ ಛತ್ರಂಗಳಿಂ
ಮುಸುಕಿ ಮಾಣ್ದನೆ ಪುಣ್ಯತೀರ್ಥಗಳುಳ್ಳ ನಿತುಮಂ ನೆರೆಮಿಂದು ಬ್ರಾಹ್ಮಣರ್ಗ್ಗೆ
ಪೆಸರ ದಾನಂಗಳನಿತುಮಂ ಪೊಣ್ದಿತ್ತಂ ಮಂಗಳಾಚಾರದಿಂ ಕಲಿದೋಷಮಂ
ಪೊಸೆದು ಬಿಸುಟಂ ಮಹಾದಾನಿ ಚಕ್ರೇಶಂ ತ್ರಿಭುವನಮಲ್ಲದೇವಂ

ಎಂದು ಬಣ್ಣಿಸಿದೆ.

ಸತ್ರಗಳು ಪ್ರವಾಸಿಗರಿಗೆ, ಅನಾಥರಿಗೆ ಮತ್ತು ಮಠಗಳಲ್ಲಿ ಓದುವ ವಿದ್ಯಾರ್ಥಿ-ತಪೋಧನರಿಗೆ ಆಹಾರವನ್ನು ಒದಗಿಸುತ್ತಿದ್ದವು. ಒಂದು ರೀತಿಯಲ್ಲಿ ಅತಿಥಿ ಸತ್ಕಾರದ ವಿಸ್ತೃತ ರೂಪವೇ ಸತ್ರವೆನ್ನಬಹುದು. ಗುಲ್ಲಿಮಯ್ಯನು ಅಳವಂಡಿಯಲ್ಲಿ (೧೦೬೧) ಬಾವಿ, ದೇಗುಲ ಮತ್ತು ಸತ್ರದ ಮನೆಯನ್ನು ಮಾಡಿಸಿದನು. ಆದಿತ್ಯ ಸೋಮಯಾಜಿ ಗೊಬ್ಬರಿ (೧೧೨೮)ನಲ್ಲಿ ದೇವರ ಸತ್ರಕ್ಕೆ ಐದು ಮತ್ತರು ಭೂಮಿಯನ್ನು ಬಿಟ್ಟಿದ್ದಾನೆ. ಇದಲ್ಲದೆ ಏವೂರು (೧೦೭೭), ಮದ್ರಿಕೆ (೧೦೬೭), ಹುಲಿಗೆ (೧೦೮೯), ನವಿಲೆ (೧೧೩೫) ಮುದನೂರು (೧೧೪೬), ಹಿರೆಕೊಟ್ನಿಕಲ್ಲು (೧೧೯೧)ಮತ್ತು ಯಡ್ರಾವಿಗಳಲ್ಲಿ ಸತ್ರಗಳನ್ನು ನಿರ್ಮಿಸಿದ ಉಲ್ಲೇಖಗಳಿವೆ.

ದೇವಾಲಯಗಳಿಗೆ ದಾನದತ್ತಿಗಳನ್ನು ಬಿಡುವ ಮೂಲಕ ನಮ್ಮವರು ಅಲ್ಲಿ ವಿದ್ಯಾಭ್ಯಾಸವು ನಿರಂತರವಾಗಿ ಮುಂದುವರೆಯುವಂತೆ ನೋಡಿಕೊಂಡಿದ್ದಾರೆ. ದೇವಸ್ಥಾನ-ಮಠಗಳ ಸಮಸ್ತ ಹೊಣೆಹೊತ್ತ ಸ್ಥಾನಾಚಾರ್ಯರು ವಿದ್ಯಾಪಕ್ಷಪಾತಿಗಳಾಗಿದ್ದರು. ಮಹಾಮಂಡಳೇಶ್ವರ ರೇವರಸನ ರಾಣಿ ಮಾಳಿಯಬ್ಬರಸಿಯು ಕೆಂಬಾವಿ (೧೦೫೪) ಯಲ್ಲಿ ತನ್ನ ಹೆಸರಿನ ದೇವಾಲಯ ನಿರ್ಮಿಸಿ ಅಲ್ಲಿಯ ತಪೋಧನರಿಗೆ ಮತ್ತು ಅವರ ಮಠದಲ್ಲಿ ಓದುವ ವಿದ್ಯಾರ್ಥಿಗಳ ಆಹಾರಕ್ಕೆ ದಾನ ಬಿಟ್ಟಿದ್ದಾಳೆ.  ಲಿಂಗಸೂಗೂರು ತಾಲೂಕಿನ ಒಂದು ಶಾಸನವು (೧೦೭೭) ತತ್ಪುರುಷರಾಶಿಯ ಶಿಷ್ಯನೇತ್ರ ಶಿವಪಂಡಿತನು-“ಅನೇಕ ಶಸ್ತ್ರ ಶಾಸ್ತ್ರ” ಗಳಲ್ಲಿ ಪಾರಂಗತರಾಗಿದ್ದರೆಂದು ಹೇಳಿದೆ. ಹುಳಿಯಮೇಶ್ವರ ದೇವಾಲಯದ ಸ್ಥಾನಾಚಾರ್ಯ ನಾದ ಚಿಕ್ಕಯ್ಯ ಪಂಡಿತನು “ತರ್ಕವ್ಯಾಕರಣಂಗಳು ಅಕ್ಕರಮುಂ ಶಬ್ದಶಾಸ್ತ್ರಮುಂ ಓದುಗಳ”ಲ್ಲಿ ಹಲವರಿಂದ ಮೆಚ್ಚುಗೆ ಪಡೆದಿದ್ದನು. ಕೆಂಬಾವಿಯ (೧೦೫೬) ಕಿಟ್ಟಗಾವೆ ಸಂತತಿಯ ಶಿವಲಿಂಗ ಭಟಾರಕರ ಶಿಷ್ಯ ಕಳೇಶ್ವರ ಪಂಡಿತನು ತರ್ಕ, ನಾಡಿ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನು. ಸಗರ (೧೦೭೧)ದ ನಗರೇಶ್ವರ ದೇವಾಲಯದ ಸ್ಥಾನಾಚಾರ್ಯ ಅನಂತ ಶಕ್ತಿ ಸಿದ್ದಾಂತ ದೇವರು ‘ಲಾಕುಳ ಸಿದ್ಧಾನ್ತ ಶಾಸ್ತ್ರಾರ್ಥ ಸಮುದ್ಧರಣರು, ತರ್ಕ ಶಾಸ್ತ್ರ ವಿಧಾನ ಪರಿಣಿತ’ರೆನಿಸಿದ್ದರು.

ಇದಲ್ಲದೆ ವಿದ್ಯಾ ಕ್ಷೇತ್ರದಲ್ಲಿ ನಿರತರಾಗಿದ್ದ ಕೆಲವು ಬಿಡಿ ಬಿಡಿಯಾದ ಉಪಾಧ್ಯಾಯರ ಉಲ್ಲೇಖ ಇಲ್ಲಿಯ ಶಾಸನದಲ್ಲಿದೆ. ಕುರಡಿ (೧೧೩೫)ಯ ಸೋಮಭಟ್ಟೋಪಾಧ್ಯಾಯ, ನವಿಲೆಯ (೧೧೩೫) ಆಚಾರ್ಯ ಚಾಯಣ ಭಟ್ಟೋಪಾಧ್ಯಾಯ- ಸಾವಣ ಭಟ್ಟೋಪಾಧ್ಯಾಯ, ಹುಣಸಗಿಯ (೧೧೩೬)  ಚಂದ್ರ ಭಟ್ಟೋಪಾಧ್ಯಾಯ, ಕೆಂಬಾವಿಯ (೧೦೫೬) ಪುರೋಹಿತ ಚಂದ್ರಾದಿತ್ಯ ಭಟ್ಟೋಪಾಧ್ಯಾಯ. ಮುದನೂರಿನ (೧೧೫೪) ಅಪ್ಪಣ ಭಟ್ಟೋಪಾಧ್ಯಾಯ, ಹಿರೇ ಕೊಟ್ನಕಲ್ಲು (೧೧೯೧) ಚಿಕ್ಕ ತಿಪ್ಪಣ್ಣ ಭಟ್ಟೋಪಾಧ್ಯಾಯರು ಪ್ರಮುಖರಾಗಿದ್ದಾರೆ. ಇವರಿಗೆ ಆಯಾ ಗ್ರಾಮಗಳಲ್ಲಿ ದಾನ ನೀಡಿರುವುದನ್ನು ಶಾಸನಗಳು ಹೇಳಿವೆ.

ಶಾಸನಗಳಲ್ಲಿ ವಿದ್ಯಾಭ್ಯಾಸದ ಪಠ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಆದರೆ ಸ್ಥಾನಾಚಾರ್ಯರನ್ನು ಕುರಿತು ಹೇಳುವಾಗ ಅವರು ಶಾಸ್ತ್ರ, ವ್ಯಾಕರಣ, ಲಾಕುಳ ಸಿದ್ಧಾಂತ, ತರ್ಕ, ಕಾವ್ಯ, ನಾಟಕ, ಮೊದಲಾದವುಗಳಲ್ಲಿ ಪರಿಣಿತರಾಗಿದ್ದರೆಂದು ಹೇಳಿವೆ. ಬಹುಶಃ ಇವುಗಳನ್ನೇ ಅವರು ವಿದ್ಯಾರ್ಥಿಗಳಿಗೆ ಕಲಿಸುತ್ತಿರಬೇಕು. ಯಡ್ರಾವಿಯ ಮೋನಿ ಪಂಡಿತರ ಮಠವು ‘ಕನ್ನಡಕ್ಕರದ ವಿದ್ಯಾಸ್ಥಾನ’ವೆನಿಸಿತ್ತೆಂದು ಅಲ್ಲಿಯ ಶಾಸನ (೧೨ ನೆಯ ಶತಮಾನ) ಹೇಳಿದೆ.

ರಾಜರ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ವ್ಯವಸ್ಥೆಯೊಂದು ಇದ್ದಂತಿದೆ. ಚಕ್ರವರ್ತಿಗಳ ಕುಮಾರರು ಮತ್ತು ಸಾಮಂತ ಅರಸರ ಪುತ್ರರು ನಿರ್ದಿಷ್ಟ ಗುರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಗುರುಗಳನ್ನು ರಾಜಗುರು ಮತ್ತು ವಿದ್ಯಾಗುರುಗಳೆಂದು ಎರಡು ಭಾಗವಾಗಿ ವಿಂಗಡಿಸಬಹುದು. ವಿದ್ಯೆಯನ್ನು ಕಲಿಸಿ ಸುಶಿಕ್ಷಿತರನ್ನಾಗಿ ಮಾಡಿದವರು ವಿದ್ಯಾಗುರುಗಳು. ಇವರನ್ನು ಭಟ್ಟೋಪಾಧ್ಯಾಯ, ಶ್ರೀಮದಯ್ಯಂಗಳು ಎಂದು ಶಾಸನಗಳು ಕರೆದಿವೆ. ರಾಜಮನೆತನಗಳ ಬಗ್ಗೆ ವಿಶೇಷ ಆಸ್ಥೆವಹಿಸಿ ಅವರಿಗೆ ರಾಜನೀತಿಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದವರು ರಾಜಗುರುಗಳಾಗಿದ್ದಾರೆ. ಸಾಮಾನ್ಯವಾಗಿ ಪ್ರತಿಯೊಂದು ರಾಜಮನೆತನವು ಇಂತಹ ರಾಜಗುರುವನ್ನು ಹೊಂದಿರುತ್ತಿದ್ದವಲ್ಲದೆ, ಅವರು ವಂಶಪರಂಪರೆಯಾಗಿ ಮುಂದುವರೆಯುತ್ತಿದ್ದರು. ಏವೂರು ಶಾಸನ (೧೧೧೯)ವು ಆರನೆಯ ವಿಕ್ರಮಾದಿತ್ಯನ ವಿದ್ಯಾಗುರು ಬ್ರಹ್ಮಪ್ರಕಾಶ ಭಟಾರಕ ದೇವರನ್ನು ಉಲ್ಲೇಖಿಸಿದೆ. ಇಲ್ಲಿಯ ಮತ್ತೊಂದು ಶಾಸನವು (೧೧೦೫) ಸತ್ಯ ಪ್ರಚಾರ ಭಟಾರಕದೇವರು ವಿಕ್ರಮಾದಿತ್ಯನ ಗುರುಗಳಾಗಿದ್ದರೆಂದು ಹೇಳಿದೆ. ಯಡ್ರಾವಿ ಶಾಸನದಲ್ಲಿ ಈತನ ಮತ್ತೊಬ್ಬ ಗುರು ಭಾಸ್ಕರ ಭಟ್ಟ ದಂಡನಾಥನ ಉಲ್ಲೇಖವಿದೆ. ಕಲ್ಲೂರಿನ (೧೦೯೭) ಸರ್ವಕೃತ ಸೋಮಯಾಜಿ ಭಟ್ಟೋಪಾಧ್ಯಾಯರೂ ಇವನ ವಿದ್ಯಾಗುರುಗಳಾಗಿದ್ದರು. ಚಕ್ರವರ್ತಿಯು ಅವರಿಗೆ ಕಲ್ಲೂರು ಗ್ರಾಮವನ್ನು ‘ಪಂಚಲಾಗೂಲ ಕ್ರತು ದಕ್ಷಿಣೆಯಾಗಿ’ ಬಿಟ್ಟುಕೊಟ್ಟನು. ಇವರೆಲ್ಲ ಬ್ರಾಹ್ಮಣರಾಗಿದ್ದುದು ಶಾಸನಗಳಿಂದ ತಿಳಿಯುತ್ತದೆ.

ಕರಡಕಲ್ಲಿನ (೧೦೭೯) ಸೋಮನಾಥ ದೇವಾಲಯದ ಸ್ಥಾನಾಚಾರ್ಯರಾದ ಶಿವ ಚಿಂತಾಯಕರು ಆರನೆಯ ವಿಕ್ರಮಾದಿತ್ಯನ ರಾಜಗುರುಗಳಾಗಿದ್ದರು. ಹೈದರಾಬಾದ ವಸ್ತು ಸಂಗ್ರಹಾಲಯದ ಶಾಸನ(೧೦೭೭)ವು ತತ್ಪುರುಷರಾಸಿ ಗುರುದೇವ ಮತ್ತು ಆತನ  ಶಿಷ್ಯ ನೇತ್ರ ಶಿವಪಂಡಿತರನ್ನು ಉಲ್ಲೇಖಿಸಿದೆ. ಈ ಶಾಸನವು ಮೂಲತಃ ಲಿಂಗಸೂಗೂರು ತಾಲೂಕಿಗೆ ಸೇರಿದೆ. ಆದ್ದರಿಂದ ಕರಡುಕಲ್ಲು ಶಾಸನದ ಶಿವಚಿಂತಾಯಕ ಮತ್ತು ಇಲ್ಲಿಯ ನೇತ್ರ ಶಿವಪಂಡಿತರು ಅಭಿನ್ನರಾಗಿದ್ದಾರೆಂದು ಹೇಳಬಹುದು. ಇವರು ಪರಬಳ ಭೀಷಣ, ಬಂಧು ಜನಾಧಾರ, ಕೋದಂಡ ಚತುರ್ಭುಜ, ವೈರಿಭುಜ ಮದನಿವಾರಣ ಮೊದಲದ ಬಿರುದುಗಳನ್ನು ಧರಿಸಿದ್ದಾರೆಂದು ಮೇಲಿನ ಎರಡೂ ಶಾಸನಗಳು ಹೇಳಿವೆ. ಈ ಶಿವಚಿಂತಾಯಕರ ಅಂಕಕಾರ-ಪೆರ್ಗ್ಗಡೆ ಮತ್ತು ಶಿಷ್ಯನಾದ ಸೂಕ್ಷ್ಮ ಶಿವಭಳಾರಕರು ಸೋಮೇಶ್ವರ ದೇವಾಲಯಕ್ಕೆ ಇತರರೊಂದಿಗೆ ದಾನ ಬಿಟ್ಟಿರುವುದನ್ನು ಮೇಲಿನ ಕರಡುಕಲ್ಲು ಶಾಸನ ಹೇಳಿದೆ. ರಾಜಗುರುಗಳು ಪ್ರಸಂಗ ಬಂದರೆ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರೆಂಬುದು ಅವರು ಧರಿಸಿರುವ ಬಿರುದುಗಳಿಂದ ಸ್ಪಷ್ಟವಾಗುತ್ತದೆ.

ಶಾಸನ ಕವಿಗಳು :

ಒಂದು ಶಾಸನ ನಿರ್ಮಾಣಗೊಳ್ಳಲು ಶಾಸನ ಕವಿ, ಲಿಪಿಕಾರ ಮತ್ತು ರೂವಾರಿಗಳ ಪರಿಶ್ರಮವಿರುತ್ತದೆ. ಕವಿಯು ಶಾಸನ ಪಾಠವನ್ನು ರಚಿಸಿದರೆ, ಲಿಪಿಕಾರನು ಅದನ್ನು ಕಲ್ಲ ಮೇಲೆ ಬರೆಯುತ್ತಾನೆ. ಮುಂದೆ ರೂವಾರಿ ಅಥವಾ ಕಲ್ಲುಕುಟಿಯು ಅದನ್ನು ಖಂಡರಿಸುತ್ತಾನೆ. ಕೆಲವೊಮ್ಮೆ ಈ ಮೂರು ಕೆಲಸವನ್ನು ಒಬ್ಬನೋ ಇಲ್ಲವೆ ಇಬ್ಬರು ಕೂಡಿ ಮಾಡುತ್ತಾರೆ. ಎಡೆದೊರೆನಾಡಿನ ಶಾಸನಗಳ ಕೊನೆಯಲ್ಲಿ ತಮ್ಮ ಹೆಸರನ್ನು ದಾಖಲೆಗೊಳಿಸಿದ ಕೆಲವು ಕವಿಗಳ ವಿಷಯವನ್ನು ಇಲ್ಲಿ ಗಮನಿಸಬಹುದು.

ಮಸ್ಕಿಯ (೧೦೧೦) ಶಾಸನವು “ಬರೆದಂ ಕಾಟ್ಟಜಂ” ಎಂದು ಹೇಳಿದೆ. ಇವನು ಕವಿಯೊ ಲಿಪಿಕಾರನು ಸ್ಪಷ್ಟವಾಗುವುದಿಲ್ಲ. ಕೀಲಾರಟ್ಟಿ ಶಾಸನ (೧೦೪೬)ವು “ಬರೆದಂಸೇನಬೋವಂ ಬಮ್ಮಣಯ್ಯ” ಎಂದು ಹೇಳಿದ. ಆದ್ದರಿಂದ ಇವನು ಲಿಪಿಕಾರ ಮತ್ತು ರೂವಾರಿ ಎರಡೂ ಆಗಿರಬೇಕು. ಕೆಂಬಾವಿ ಶಾಸನ (೧೦೫೪)ವು “ಶ್ರೀಮತ್ ಬರೆವರ ರುದ್ರಂ ಚಂಗದೇವಯ್ಯಂ ಬರೆದಂ” ಎಂದು ಹೇಳಿದೆ. ಇವನು ಶಾಸನ ಕವಿಯಾಗಿದ್ದಾನೆ.  ಈ ಶಾಸನವನ್ನು ಅಜಮೋಜ ಮತ್ತು ಕಾಳೋಜರು ಖಂಡರಿಸಿದ್ದಾರೆ.

ಏವೂರು ಶಾಸನವು (೧೦೭೭) “ತಾನೆ ನೆಟ್ಟನೆ ಬಲ್ಲಂ ಬರೆಯಲ್ಕನೇಕಲಿಪಿಯಂ” ಎಂದು ರವಿಗಚಮೂಪನನ್ನು ಹೊಗಳಿದೆ. ಆದ್ದರಿಂದ ಈ ಶಾಸನವೂ ಸೇರಿದಂತೆ ಕೆಲವನ್ನು ರವಿಗಚಮೂಪನು ಬರೆದಿರಬೇಕು. ವ್ಯಾಕರಣ, ತರ್ಕ ಮೊದಲಾದ ಶಾಸ್ತ್ರಗಳಲ್ಲಿ ಪಾರಂಗತನಾದ ಓಲೆಯ ಭಟ್ಟೋಪಾಧ್ಯಾಯನು ಸಂಗಮ ಶಾಸನ (೧೦೬೭) ಪಾಠವನ್ನು ಬರೆದಿದ್ದಾನೆ. ಬನ್ನಿಗೋಳ ಶಾಸನ (೧೦೫೫)ವನ್ನು ಊರೊಡೆಯ (ಬ್ರಾಹ್ಮಣ) ನಾಗವರ್ಮಯ್ಯನು ಬರೆದಿದ್ದಾನೆ. ಇವನು ಕವಿ ಮತ್ತು ಲಿಪಿಕಾರನಾಗಿದ್ದಾನೆ. ದೇವರಗುಡಿ ಶಾಸನವು “ಶಂಭುವಣ್ಣಂಗಳು ಬ[ರಹ]” ಎಂದು ಹೇಳಿದೆ. ಆದ್ದರಿಂದ ಇವನು ಶಾಸನ ಕವಿಯಾಗಿರಬೇಕು.

ಇದಲ್ಲದೆ ಶಾಸನಗಳನ್ನು ಖಂಡಿಸಿದ ರೂವಾರಿಗಳ ಹೆಸರುಗಳೂ ಇಲ್ಲಿಯ ಕೆಲವು ಶಾಸನಗಳಲ್ಲದೆ. ಕಾಸಿಗ ದುಗ್ಗೋಜನ ಮಗ ವೋಜನಿಗೆ ೧೦ ಮತ್ತರು ಭೂಮಿ ಮತ್ತು ಒಂದು ಮನೆ ನಿವೇಶನ ಬಿಟ್ಟುಕೊಟ್ಟರೆಂದು ದೋರನಹಳ್ಳಿ ಶಾಸನ (೧೦೧೭) ಹೇಳಿದೆ. ಹೆಬ್ಬಾಳ ಶಾಸನದಲ್ಲಿ (೧೦೮೧) ಕಲ್ಲುಕುಟಿಗ ಮಾರೋಜನಿಗೆ ದತ್ತಿ ಬಿಟ್ಟ ಉಲ್ಲೇಖವಿದೆ. ಅಲ್ಲದೆ ಬೈಚಬಾಳ ಶಾಸನ(೧೦೭೪)ದಲ್ಲಿಯೂ ಇವನ ಹೆಸರಿದೆ. ಮಹಾಸಾಮಂತ ಲೋಕರಸನು ಸೋತ್ರಧಾರಿ ನೇಮೋಜನಿಗೆ ಭೂಮಿಯನ್ನು ದಾನ ನೀಡಿದನೆಂದು ಬಲ್ಲಟಗಿ ಶಾಸನ ಹೇಳಿದೆ. ಏವೂರು ಶಾಸನದಲ್ಲಿ ಒಡ್ಡರ ಕೋಟಿ ಬೋಜನಿಗೆ ದೇವರ ತಳವೃತ್ತಿಯಲ್ಲಿ ೬ ಮತ್ತರ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇವರಲ್ಲಿ ಕೆಲವರು ಶಾಸನಗಳನ್ನು ಖಂಡರಿಸುವುದರ ಜೊತೆಗೆ ದೇವಾಲಯಗಳನ್ನು ಕಟ್ಟುವ ಕೆಲಸದಲ್ಲಿಯೂ ನಿರತರಾಗಿದ್ದರು.

ಒಟ್ಟಿನಲ್ಲಿ ಎಡೆದೊರೆ ನಾಡು ರಾಷ್ಟ್ರಕೂಟರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದು, ಚಾಲುಕ್ಯರ ಕಾಲದಲ್ಲಿ ರಾಜ್ಯದ ಹೋರಾಟ ಕೇಂದ್ರವಾಯಿತು. ಚೋಳರ ತಮಿಳು ಶಾಸನಗಳಲ್ಲಿ ಈ ವಿಭಾಗವು ಪದೇ ಪದೆ ಕಾಣಿಸಿಕೊಂಡಿದೆ. ಈ ನಾಡಿನ ಕರಡಿಕಲ್ಲು ಮತ್ತು ಕುಮ್ಮಟಕೋಟೆಗಳ ಮೇಲೆ ಅವರು ದಾಳಿ ನಡೆಸಿದ ಬಗ್ಗೆ ದಾಖಲೆಗಳಿವೆ. ಮಸ್ಕಿಯಲ್ಲಿ ಇವರಿಬ್ಬರ ನಡುವೆ ಯುದ್ಧ ನಡೆದಿದೆ. ಮುಂದೆ ಹೊಯ್ಸಳರು ಮತ್ತು ಸೇವುಣರು ಈ ನಾಡಿನ ಮೇಲೆ  ಪ್ರಭುತ್ವ ಸಾಧಿಸಲು ಪ್ರಯತ್ನಿಸಿದ್ದರು. ಮಹತ್ವಾಕಾಂಕ್ಷೆಯ ಸೇವುಣ ೫ನೆಯ ಬಿಲ್ಲಮನು ಈ ವಿಭಾಗವನ್ನು ತಮ್ಮ ಆಳ್ವಿಕೆಯಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದನು .ಆದರೆ ೧೩ನೆಯ ಶತಮಾನದ ಕೊನೆಯಲ್ಲಿ ದೆಹಲಿ ಸುಲ್ತಾನರ ಒತ್ತಡ ಹೆಚ್ಚಿತು. ಇತ್ತ ಕಾಕತೀಯರೂ ನಿರಂತರ ದಾಳಿ ನಡೆಸಿ ಮಾನ್ವಿ, ರಾಯಚೂರುಗಳನ್ನು ವಶಪಡಿಸಿಕೊಂಡರು. ಇದರೊಂದಿಗೆ ಸುಮಾರು ೪೦೦ ವರ್ಷಗಳಿಂತಲೂ ಹೆಚ್ಚುಕಾಲ ಆಡಳಿತ ವಿಭಾಗವಾಗಿ ಮೆರೆದ ‘ಎಡೆದೊರೆನಾಡು’ ಚರಿತ್ರೆಯ ಪುಟಗಳಿಂದ ಕಣ್ಮರೆಯಾಯಿತು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)