-೧-

ತೋಂಟದ ಸಿದ್ಧಲಿಂಗರು ವೀರಶೈವಧರ್ಮದ ಇತಿಹಾಸದಲ್ಲಿ ಒಬ್ಬ ಮಹಾವ್ಯಕ್ತಿಗಳು ಮತ್ತು ವಚನಕಾರರು.

ಈ ವಿಶೇಷಣ ವೀರಶೈವಧರ್ಮದ ಇತಿಹಾಸದಲ್ಲಿ ಕಾಣಿಸಿಕೊಳ್ಳುವ ಎಲ್ಲರಿಗೂ ಅನ್ವಯಿಸುವುದಿಲ್ಲ. ಯಾಕೆಂದರೆ ಮಹಾವ್ಯಕ್ತಿಗಳಲ್ಲದ ಅನೇಕ ವಚನಕಾರರು ಇದ್ದಾರೆ: ಆದರೆ ಮಹಾವ್ಯಕ್ತಿಯೂ ವಚನಕಾರರೂ ಏಕಾಕಾಲದಲ್ಲಿ ಆಗಿರುವವರು ಈ ಧರ್ಮದ ಇತಿಹಾಸದಲ್ಲಿ ಬೆರಳೆಣಿಕೆಗೆ ದೊರೆಯುವಷ್ಟು ಮಾತ್ರ. ಅಂಥವರ ವಿರಳ ಪಂಕ್ತಿಯಲ್ಲಿ ಸಿದ್ಧಲಿಂಗರೂ ಒಬ್ಬರು.

ಇವರನ್ನು ವೀರಶೈವಧರ್ಮದ ಇತಿಹಾಸದಲ್ಲಿ ಮಹಾವ್ಯಕ್ತಿಗಳು ಎಂದು ನಿರ್ದೇಶಿಸುವುದರ ಕಾರಣ- ಬಸವಾದಿಗಳ ಕಾಲದಲ್ಲಿ ನಡೆದಂಥ ಒಂದು ಧಾರ್ಮಿಕ ಸಂಘಟನೆ ಮತ್ತೆ ಸಂಭವಿಸಿದುದು ಹದಿನೈದನೆಯ ಶತಮಾನದಲ್ಲಿ, ಎಡೆಯೂರು ಸಿದ್ಧಲಿಂಗರ ವ್ಯಕ್ತಿತ್ವದ ಕೇಂದ್ರದಲ್ಲಿ ಎನ್ನುವುದೇ ಆಗಿದೆ. ಹದಿನೈದನೆಯ ಶತಮಾನದಲ್ಲಿ ಇದ್ದ ಸಿದ್ಧಲಿಂಗಯತಿಗಳು, ಏಳುನೂರಾ ಒಂದು ವಿರಕ್ತರ ಸಂಘದ ಕೇಂದ್ರ ವ್ಯಕ್ತಿಗಳಾಗಿ ವೀರಶೈವಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದರು. ತಮ್ಮ ಶಿಷ್ಯ ಪ್ರಶಿಷ್ಯರೊಂದಿಗೆ ನಾಡನ್ನೆಲ್ಲ ಸಂಚಾರಮಾಡಿ ಧರ್ಮಜಾಗೃತಿಯನ್ನು ತಂದ, ಅನೇಕ ಪವಾಡಗಳನ್ನೆಸಗಿ ಜನರ ಭಕ್ತಿ-ಶ್ರದ್ಧೆಗಳನ್ನು ಉದ್ದೀಪಿಸಿದ, ಅನೇಕ ಪೀಠಗಳಿಗೆ ಮೂಲ ಆಚಾರ್ಯರಾದ, ಅನೇಕ ಕವಿಕೃತಿಗಳಿಗೆ ಸ್ಫೂರ್ತಿಯಾದ, ಅನೇಕ ಶಾಸನಗಳಲ್ಲಿ ಉಲ್ಲೇಖಿತರಾದ, ಶ್ರೀ ಸಿದ್ಧಲಿಂಗರ ವ್ಯಕ್ತಿತ್ವ ತನ್ನ ವಿಶೇಷವಾದ ಪ್ರಭಾವ ಮುದ್ರೆಯಿಂದ ‘ಮಹಾವ್ಯಕ್ತಿ’ ಎಂಬ ವಿಶೇಷಣಕ್ಕೆ ಅರ್ಹವಾಗಿದೆ.

ಈ ವ್ಯಕ್ತಿತ್ವ, ಎಲ್ಲ ಮಹಾವ್ಯಕ್ತಿತ್ವಗಳಿಗೂ ಒದಗುವ ಪೌರಾಣಿಕತ್ವದಿಂದ ಪಾರಾಗಿಲ್ಲ. ಸಿದ್ಧಲಿಂಗರ ನಿಜ ಜೀವನ, ಕಾವ್ಯ ಪುರಾಣಗಳು ಬೆಳೆಯಿಸಿದ್ದ ಸಾಮರ್ಥ್ಯ- ಪವಾಡಾದಿ ಅಲೌಕಿಕ ಪ್ರತೀತಿಗಳ ಹೊದರಿನಲ್ಲಿ ಮರೆಯಾಗಿದೆ. ಸಾಕ್ಷಾತ್ತಾಗಿ ಕೈಲಾಸದಿಂದಲೇ ‘ಆ ನಿರಂಜನ ಜಂಗಮವು ಎಂಟು ವರ್ಷದ ಶಿಶುರೂಪವನ್ನು ತಳೆದು ಧರೆಗವತರಿಸಿದನು’ ಎಂದೂ, ಆಗ ‘ಅಂತರಿಕ್ಷದಿ ಜಯದುಂದುಂಭಿ ವಾದ್ಯಗಳಾದುವು’ ಎಂದೂ, ಅವರ ಅವತಾರದ ಮಹತ್ವವನ್ನು ‘ಬಜಾಯಿಸು’ವುದರ ಜೊತೆಗೆ, ಅವರು ನಡೆಯಿಸಿದರೆಂದು ಹೇಳಲಾದ ಅನೇಕ ಪವಾಡ- ಮಹಿಮಾ ವಿಶೇಷಗಳನ್ನು ಕಾವ್ಯ ಪುರಾಣಗಳು ಉದ್ಘೋಷಿಸಿವೆ. ಅವರನ್ನು ಎರಡನೆಯ ಪ್ರಭುದೇವರೆಂದು ಪ್ರಶಂಸಿಸಿರುವುದರ ಜೊತೆಗೆ, ಅವರ ಗುರುಪರಂಪರೆಯನ್ನು ಬಸವಣ್ಣನವರಿಗಿಂತಲೂ ಒಂದು ಶತಮಾನದಷ್ಟು ಹಿಂದಕ್ಕೆ ಒಯ್ಯುವ ಪ್ರಯತ್ನಗಳೂ ನಡೆದಿವೆ. ಒಂದು ವ್ಯಕ್ತಿತ್ವದ ಪರಂಪರೆಯನ್ನು ಪ್ರಾಚೀನತೆಗೆ ಒಯ್ಯುವುದರಿಂದಾಗಲಿ, ಪವಾಡಗಳ ಸಂಖ್ಯೆಯನ್ನು ಗುಣಿಸಿ ತೋರಿಸುವುದರಿಂದಾಗಲಿ, ವ್ಯಕ್ತಿಯ ಶ್ರೇಷ್ಠತೆ ಸ್ಥಾಪಿತವಾಗುವುದು ಸಾಧ್ಯವಿಲ್ಲ ಎಂಬ ಕಹಿಸತ್ಯವನ್ನು ಒತ್ತಿಹೇಳಬೇಕಾಗುತ್ತದೆ. ಇವೆಲ್ಲ ಹಿನ್ನೆಲೆ ಇಲ್ಲದೆಯೂ ಸಿದ್ಧಲಿಂಗರು ವೀರಶೈವ ಧರ್ಮದ ಮಹಾವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದನ್ನು, ಅವರು ಬಸವಾದಿಗಳ ನಂತರ, ದಕ್ಷಿಣಕರ್ಣಾಟಕದಲ್ಲಿ ಮತ್ತೊಮ್ಮೆ ಅಂಥ ಒಂದು ಧಾರ್ಮಿಕ ಚಟುವಟಿಕೆಯ ಕೇಂದ್ರ ವ್ಯಕ್ತಿಯಾಗಿದ್ದರು ಎಂಬ ಸಂಗತಿ ಸ್ಪಷ್ಟಪಡಿಸುತ್ತದೆ. ಅವರ ಸಾಧಕ ಜೀವನ ಹೇಗಿತ್ತು, ಅವರು ಅನುಭಾವದಲ್ಲಿ ನಿಂದ ನಿಲುವೇನು ಅವರ ಸಾಮಾಜಿಕವಾದ ದೃಷ್ಟಿಕೋನ ಯಾವುದು ಎಂಬ ವಿಷಯಗಳನ್ನು ಅರಿಯಬೇಕಾದರೆ ನಾವು ಅವರ ವಚನ ರಚನೆಗಳಿಗೇ ಹೋಗಬೇಕಾಗುತ್ತದೆ.

ವೀರಶೈವಧರ್ಮದ ಮಹಾವ್ಯಕ್ತಿಯನ್ನು ಕುರಿತು ವಿವೇಚಿಸುವಾಗ ಅಂಥ ವ್ಯಕ್ತಿಯ ಅಭಿವ್ಯಕ್ತಿಯಾದ ವಚನವಾಙ್ಮಯವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ ವೀರಶೈವ ಧರ್ಮದೊಂದಿಗೆ ಸಂಬಂಧಿಸಿದ ಯಾವ ಪ್ರಮುಖ ವ್ಯಕ್ತಿಯನ್ನು ತೆಗೆದುಕೊಂಡರೂ, ಆತ ಒಂದಲ್ಲ ಒಂದು ರೀತಿಯಲ್ಲಿ ವೀರಶೈವಧರ್ಮದ ಅಭಿವ್ಯಕ್ತಿಯಾದ ವಚನವಾಙ್ಮಯದೊಂದಿಗೆ ಒಂದಲ್ಲ ಒಂದು ಬಗೆಯ ಸಂಬಂಧವನ್ನಿರಿಸಿಕೊಂಡಿರುವುದು ಸ್ಪಷ್ಟವಾಗಿದೆ. ಈ ಸಂಬಂಧ, ವಚನರಚನೆ, ವಚನ  ಸಂಕಲನ, ವಚನ ಪರಿಷ್ಕರಣ, ವಚನ ವ್ಯಾಖ್ಯಾನ ಇತ್ಯಾದಿ ರೂಪದ್ದಾಗಿರಬಹುದು.

ಅಲ್ಲದೆ ವೀರಶೈವಧರ್ಮಕ್ಕೂ ವಚನವಾಙ್ಮಯಕ್ಕೂ ಒಂದು ಬಗೆಯ ಸಾವಯವ ಸಂಬಂಧವಿದೆ:

ಹಿಂದೂಧರ್ಮ ಎಂದೊಡನೆ ವೇದೋಪನಿಷತ್ತುಗಳನ್ನು ನೆನೆಯುವಂತೆ, ಕ್ರೈಸ್ತಧರ್ಮ ಎಂದೊಡನೆ ಬೈಬಲ್ಲನ್ನು ನೆನೆಯುವಂತೆ, ಮುಸ್ಲಿಂ ಧರ್ಮ ಎಂದೊಡನೆ ಖುರಾನ್ ಅನ್ನು ನೆನೆಯುವಂತೆ, ವೀರಶೈವ ಧರ್ಮ ಎಂದೊಡನೆ ವಚನವಾಙ್ಮಯವನ್ನು ನೆನೆಯಬೇಕಾಗುತ್ತದೆ. ಶ್ರೀ ಸಿದ್ಧಲಿಂಗಯತಿಗಳು ಮಹಾವ್ಯಕ್ತಿಗಳಾಗಿ, ತಾವೇ ಸ್ವತಃ ವಚನರಚನೆಯನ್ನು ಮಾಡಿದ್ದಲ್ಲದೆ,  ವಚನ ಪರಿಷ್ಕರಣ ಸಂಕಲನಾದಿ ಕಾರ‍್ಯಗಳಿಗೆ ಪ್ರೇರಕರೂ ಆದ ಕಾರಣ, ಅವರನ್ನು ವೀರಶೈವಧರ್ಮದ ಮಹಾ ವ್ಯಕ್ತಿಗಳು ಮತ್ತು ವಚನಕಾರರು ಎಂದು ಹೇಳಿದ್ದು.

ಸಿದ್ಧಲಿಂಗರ ವಚನಗಳನ್ನು ಕುರಿತು ವಿಚಾರ ಮಾಡುವಾಗ ಮುಖ್ಯವಾಗಿ ನೆನಪಿನಲ್ಲಿಡ ಬೇಕಾದ ಅಂಶ ಇದು: ಸಿದ್ಧಲಿಂಗರು ಒಂದು ಸುಸಮರ್ಥವಾದ ವಚನ ಪರಂಪರೆಯ ಒಂದು ಅಂಶ ಮಾತ್ರ; ಮತ್ತು ವಚನ ಪರಂಪರೆಯ ಆರಂಭಕಾಲದ ಪರಿಸರಕ್ಕೂ, ಸಿದ್ಧಲಿಂಗರ ಕಾಲದ ಪರಿಸರಕ್ಕೂ ಯುಗಧರ್ಮದಲ್ಲಿ ವಿಶೇಷವಾದ ವ್ಯತ್ಯಾಸವಿದೆ. ಈ ಎರಡು ಅಂಶಗಳನ್ನು ಗಮನಿಸುವುದು ಸಿದ್ಧಲಿಂಗರ ವಚನಗಳ ಇತಿಮಿತಿಯನ್ನು ಗುರುತಿಸಲು ಅಗತ್ಯವಾದದ್ದು.

ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ನೋಡುವುದಾದರೆ, ಹನ್ನೆರಡನೆಯ ಶತಮಾನದ ಈ ವಚನವಾಙ್ಮಯ ಒಂದು ದ್ವೀಪಸಂಭವದಂತೆ ಭಾಸವಾಗುತ್ತದೆ. ಈ ಒಂದು ಅಭಿವ್ಯಕ್ತಿಪ್ರಕಾರ, ಒಂದು ಪರಂಪರೆಯಾಗಿ ಮುಂದುವರಿಯದೆ ಹೋದದ್ದು ಆಶ್ಚರ್ಯವೆಂಬಂತೆ ತೋರಿದರೂ ಅಸಹಜವೇನಲ್ಲ; ಒಂದು ಕಾಲದ ಶಕ್ತಿ, ತನ್ನ ಕಾಲದ ಭಾಷೆಯ ಸಾಧ್ಯತೆಯನ್ನು ಸವೆಯುವತನಕ ಬಳಸಿಕೊಂಡ ಮೇಲೆ, ಮತ್ತೆ ಅದೇ ರೀತಿಯ ಅಭಿವ್ಯಕ್ತಿಯ ಸಾಧ್ಯತೆಯನ್ನು ಅದರ ಮುಂದಿನ ಸಮೀಪ ಕಾಲದಲ್ಲಿಯೇ ನಿರೀಕ್ಷಿಸಲಾರೆವು. ಒಂದು ವೇಳೆ ಇಂಥ ಸಿದ್ಧಪ್ರಕಾರದ ಪರಂಪರೆಯನ್ನು ಮುಂದುವರಿಸಬೇಕೆಂಬ ಪ್ರಯತ್ನ ನಡೆದರೆ, ಅದು ಕೇವಲ ಅನುಕರಣ ಮಾತ್ರವಾಗಿ ಎರಡನೆಯ ದರ್ಜೆಗೆ ಸೇರುವ ಅಪಾಯದಿಂದ ತಪ್ಪಿಸಿಕೊಳ್ಳಲಾರದು. ಆದುದರಿಂದಲೇ ಈ ವಚನರಚನೆಯ ಪ್ರಯತ್ನ, ಮತ್ತೆ ಬಸವಾದಿಗಳ ನಂತರ ಮುನ್ನೂರು ವರ್ಷಗಳ ಮೇಲೆ, ಅದೇ ಬಗೆಯ ಆಧ್ಯಾತ್ಮಿಕ ಚಿತ್ತಭಿತ್ತಿಯನ್ನುಳ್ಳ ಸಿದ್ಧಲಿಂಗರಿಂದ ನಡೆದಿರುವುದನ್ನು ಕಾಣಬಹುದು. ಒಂದು ಅಭಿವ್ಯಕ್ತಿಪ್ರಕಾರ, ಮೂರು ನಾಲ್ಕು ಶತಮಾನಗಳ ನಂತರ ಮತ್ತೆ ಕಾಣಿಸಿಕೊಂಡಾಗ ಅನುಕರಣದ್ದಾಗುವ ಹಾಗೂ ಎರಡನೆ ದರ್ಜೆಯದಾಗುವ ಅಪಾಯದಿಂದ ಪಾರಾಗುತ್ತದೆ ಎಂದೇನೂ ಅರ್ಥವಲ್ಲ; ಹಾಗೆ ಅನುಕರಣಕ್ಕೆ ಒಳಗಾಗದೆ, ಅದೇ ಪರಂಪರೆಯಲ್ಲಿ ಅಂದಂದಿನ ಯುಗಧರ್ಮದ ಅವಶ್ಯಕತೆಗೆ ಅನುಸಾರವಾಗಿ, ಅಭಿವ್ಯಕ್ತಿಯ ಹೊಸರೂಪವನ್ನು ಕೊಡುವ ಸ್ವತಂತ್ರ ಪ್ರತಿಭೆಯ ಲೇಖಕರು ಇರಲಾರರು ಎಂದೂ ಇದರರ್ಥವಲ್ಲ. ಸಿದ್ಧಲಿಂಗರ ವಚನಗಳು ಕೇವಲ ಅನುಕರಣವೇ, ನಿಜವಾಗಿಯೂ ಸ್ವತಂತ್ರವೇ ಎಂಬುದನ್ನು ಮುಂದೆ ಪರಿಶೀಲಿಸುವ ದೃಷ್ಟಿಯಿಂದ, ವಚನವಾಙ್ಮಯದ ಮೊದಲ ದಿನಗಳಿಗೂ ಸಿದ್ಧಲಿಂಗರು ಬದುಕಿದ ದಿನಗಳಿಗೂ ಇರುವ ಮುಖ್ಯವಾದ ವ್ಯತ್ಯಾಸವನ್ನು ಗಮನಿಸೋಣ:

ಹನ್ನೆರಡನೆಯ ಶತಮಾನದಂದು, ಈ ವಚನರಚನೆಗೆ ಮೂಲಕಾರಣವಾದ ಯಾವ ಧಾರ್ಮಿಕ- ಸಾಮಾಜಿಕ ಆಂದೋಳನದ ಒಂದು ಒತ್ತಡವಿದ್ದಿತೋ, ಅದು ಹದಿನೈದನೆಯ ಶತಮಾನದ ವಚನಕಾರರಾದ ಸಿದ್ಧಲಿಂಗರಿಗೆ ಇರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ  ಅಂಶ. ಹದಿನೈದನೆಯ ಶತಮಾನದ ವೇಳೆಗಾಗಲೇ ವೀರಶೈವ ಧರ್ಮ ಸಾಕಷ್ಟು ವ್ಯಾಪಿಸಿ ನೆಲೆಯಾಗಿತ್ತು. ಬಸವಾದಿ ಶರಣರ ವಚನಗಳು ಹರಿಹರಾದಿ ಕವಿಗಳ ಕಾವ್ಯದ ಮೇಲೆ ತಕ್ಕಷ್ಟು ಪ್ರಭಾವವನ್ನು ಬೀರಿ, ವಚನಗಳ ಸಂಕಲನ ಪರಿಷ್ಕರಣಾದಿ ಕಾರ‍್ಯಗಳು ಪ್ರೌಢದೇವರಾಯನ ಕಾಲದಲ್ಲಿ ನಡೆದು ಒಂದು ಹಿನ್ನೆಲೆ ಸಿದ್ಧವಾಗಿತ್ತು. ಹನ್ನೆರಡನೆಯ ಶತಮಾನದಂದು ವಚನಕಾರರಿಗೆ ಇದ್ದಂಥ ಪ್ರತಿಕೂಲ ಪರಿಸರ, ಹದಿನೈದನೆಯ ಶತಮಾನದ ವಚನಕಾರರಿಗೆ ಇರಲಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕಬೇಕಾದವರಿಗೆ ಸಹಜವಾಗಿ ಒದಗುವ ಆವೇಶ, ರಭಸ, ಅದರಿಂದ ಅಭಿವ್ಯಕ್ತಿಗೆ ಒದಗುವ ಅನಿವಾರ‍್ಯತೆ ಮತ್ತು ತೀವ್ರತೆ, ಅನುಕೂಲ ಪರಿಸ್ಥಿತಿಯವರಿಗೆ ಇರುವುದಿಲ್ಲ. ಹೀಗಾಗಿ ತಮ್ಮ ಹಿಂದಿನ ಹಿರಿಯರು ಯಾವ ದಾರಿಯನ್ನು ಹಾಕಿಕೊಟ್ಟಿದ್ದಾರೋ, ಮತ್ತು ಅವರು ಏನನ್ನು ಮಾಡಿದ್ದಾರೆಯೋ ಅದನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಉಳಿಸಿಕೊಂಡು ಹೋಗುವುದು ತಮ್ಮ ಕರ್ತವ್ಯವೆಂಬ ಭಾವನೆ ಪ್ರಧಾನವಾಗುತ್ತದೆ. ಇಂಥ ಪರಿಸರದಲ್ಲಿದ್ದವರು ಸಿದ್ಧಲಿಂಗರು. ಅವರು ತಾವೇ ಶಿವಾನುಭವಿಗಳಾದ ಕಾರಣ, ತಮ್ಮ ಚಿತ್ತವೃತ್ತಿ ಹಿಂದಿನ ಆ ಶರಣರ ಚಿತ್ತವೃತ್ತಿಯೊಂದಿಗೆ ಹೊಂದಿಕೊಳ್ಳುವ ಕಾರಣ, ಆ ಶರಣರ  ಅಭಿವ್ಯಕ್ತಿಯ ಕ್ರಮವನ್ನು ತಾವೂ ಅನುಸರಿಸಿದರು. ಈ ಒಂದು ಚಿತ್ತವೃತ್ತಿ ಯಾಕೆ ತನಗಿಂತ ಹಿಂದೆ ಸಿದ್ಧವಾದ ವಚನವೆಂಬ ಪ್ರಕಾರವನ್ನೇ ಆಶ್ರಯಿಸಿತು? ಸಿದ್ಧಲಿಂಗರು ತಾವೇ  ಬೇರೊಂದು ಬಗೆಯ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಲಿಲ್ಲವೇಕೆ? -ಎಂಬ ಪ್ರಶ್ನೆಗಳು ಏಳುವುದು, ‘ವಚನ’ಗಳನ್ನು ಕೇವಲ ಸಾಹಿತ್ಯ ಎಂದೂ, ವಚನಕಾರರು ಕೇವಲ ‘ಸಾಹಿತಿ’ಗಳೆಂದೂ ಭಾವಿಸಿದಾಗ ಮಾತ್ರ. ಆದರೆ ಗಮನಿಸಬೇಕು- ಧಾರ್ಮಿಕ- ಸಾಮಾಜಿಕ ಪರಿಸ್ಥಿತಿಯ ಒಂದು ತುರ್ತಿನಿಂದ ಹುಟ್ಟಿದ, ಸ್ವಾನುಭವಾಭಿವ್ಯಕ್ತಿರೂಪದ ಈ ವಚನ ಪ್ರಕಾರ, ಹನ್ನೆರಡನೆಯ ಶತಮಾನದಂದು ತನ್ನ ಕಾರ್ಯ ಮುಗಿದೇ ಹೋಯಿತೆಂಬಂತೆ ತಟಕ್ಕನೆ ನಿಂತು ಹೋದದ್ದನ್ನು ನೋಡಿದರೇ ತಿಳಿಯುತ್ತದೆ, ಇದೊಂದು ಸಾಹಿತ್ಯಕ ಪರಂಪರೆಯನ್ನು ಒಪ್ಪಿಕೊಳ್ಳುವ ಅಥವಾ ಮುಂದುವರಿಸುವ ‘ಸಾಹಿತ್ಯೋದ್ದೇಶ’ದಿಂದ ಸಂಭವಿಸಿದ್ದಲ್ಲ ಎಂಬುದು. ಮತ್ತೆ ಹದಿನೈದನೆಯ ಶತಮಾನದಲ್ಲಿ ಈ ಪ್ರಕಾರ ತಲೆಯೆತ್ತಿದ್ದಕ್ಕೆ ಕಾರಣ, ಈ ಒಂದು ಅಭಿವ್ಯಕ್ತಿಗೆ ಅಗತ್ಯವಾದ ಆಧ್ಯಾತ್ಮಿಕ ಚಿತ್ತಭಿತ್ತಿಯೂ, ಮತ್ತು ಧರ್ಮಪ್ರಸಾರದ ಉದ್ದೇಶವೂ ಸಿದ್ಧಲಿಂಗರಲ್ಲಿತ್ತು ಎಂಬುದೇ ಆಗಿದೆ. ಆದ್ದರಿಂದಲೇ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆ ಹಿಂದಿನ ಶಿವಶರಣರ ಪರಂಪರೆಗೆ ಸೇರುವ ಸಿದ್ಧಲಿಂಗರು, ತಾವು ಹಿಂದಿನವರಿಂದ ಬೇರೆಯಾದ ಅಭಿವ್ಯಕ್ತಿ ಪ್ರಕಾರವನ್ನು ರೂಪಿಸಿಕೊಳ್ಳುವಲ್ಲಿ ಸಾಹಿತಿಗೆ ಮಾತ್ರ ಪ್ರಾಪ್ತವಾಗುವ ‘ಹೋರಾಟ’ದ ಬಗ್ಗೆ ತಟಸ್ಥರಾಗಿದ್ದಾರೆ ಮತ್ತು ತಾವು ಒಂದು ಪೂಜ್ಯವಾದ ಪರಂಪರೆಯ ಅಂಗವೆಂಬ ಶ್ರದ್ಧೆ ಅವರಲ್ಲಿ ಪ್ರಧಾನವಾದದ್ದರಿಂದ, ಅದೇ ಪರಂಪರಾಗತವಾದ ಅಭಿವ್ಯಕ್ತಿ ಮಾರ್ಗದೊಂದಿಗೆ ತಮ್ಮನ್ನು ಬೆಸೆದುಕೊಳ್ಳುವುದರಲ್ಲಿ ತೃಪ್ತರಾಗಿದ್ದಾರೆ. ಹೀಗೆ ತಮ್ಮ ಅಭಿವ್ಯಕ್ತಿಯು ಸಾಹಿತ್ಯ ಹೌದೆ ಅಲ್ಲವೆ ಎಂಬ ಬಗ್ಗೆ ತಟಸ್ಥರಾಗಿರುವ ವಚನಕಾರರ ‘ವಚನ’ಗಳನ್ನು ಸಾಹಿತ್ಯ ದೃಷ್ಟಿಯಿಂದಲೂ ನೋಡಿ ತೂಗಲು ಯತ್ನಿಸಲು ಕಾರಣ, ನಾವು ನಿಜವಾದ ಸಾಹಿತ್ಯವೆಂದು ಯಾವುದನ್ನು ಗುರುತಿಸುತ್ತೇವೆಯೋ, ಆ ಲಕ್ಷಣಗಳು ವಚನವಾಙ್ಮಯದಲ್ಲಿರುವುದೇ ಆಗಿದೆ.

-೨-

ಸಿದ್ಧಲಿಂಗರು ಬರೆದ ‘ಷಟ್‌ಸ್ಥಲಜ್ಞಾನಸಾರಾಮೃತ’, ಅದರ ಹೆಸರಿನಿಂದ ಮತ್ತು ಬಹುಸಂಖ್ಯೆಯ ವಚನಗಳ ‘ವಸ್ತು’ವಿನಿಂದ ಪ್ರಧಾನವಾಗಿ ಶಾಸ್ತ್ರಗ್ರಂಥವೆಂದು ಪರಿಗಣಿತ ವಾಗಿರುವುದಾದರೂ, ಈ ಕೃತಿಯ ಕೆಲವು ವಚನಗಳು ತಮ್ಮ ವಿಶಿಷ್ಟಾಭಿವ್ಯಕ್ತಿಯಿಂದ ‘ಸಾಹಿತ್ಯ’ವೂ ಆಗಿವೆ ಎಂಬುದನ್ನು ಮರೆಯುವಂತಿಲ್ಲ.

ಏಳುನೂರಾ ಒಂದು ವಚನಗಳ ಈ ‘ಷಟ್‌ಸ್ಥಲಜ್ಞಾನಸಾರಾಮೃತ’, ಯೋಗಿಯಾದ ಸಿದ್ಧಲಿಂಗರ ತಾತ್ವಿಕ ನಿಲುವಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಅವರನ್ನು ಕುರಿತ ಕಾವ್ಯ-ಪುರಾಣಗಳು ಅವರನ್ನು ಈ ಸಂಸಾರದ ಸೋಂಕಿಲ್ಲದ ಅಲೌಕಿಕ ವ್ಯಕ್ತಿಯನ್ನಾಗಿ ಮಾಡಿದ್ದರೆ- ಅವರ ಕೆಲವು ವಚನಗಳು, ಅವರೂ ಸಾಧಕರಾದ ಮನುಷ್ಯರೇ ಎಂಬ ಸಂಗತಿಯನ್ನು, ಲೋಕದ ಪ್ರಲೋಭನೆಗಳ ನಡುವೆ ಹೊಯ್ದಾಡುತ್ತ ಹಾದು ಬಂದವರೇ ಎಂಬುದನ್ನು ಅತ್ಯಂತ ಪ್ರಾಮಾಣಿಕವಾಗಿ ಪ್ರಕಟಿಸುತ್ತವೆ.

ಕಾಮನಿಂದ ಕರಗಿದೆನಯ್ಯ, ಕ್ರೋಧದಿಂದ ನೊಂದೆನಯ್ಯ,
ಲೋಭ ಮೋಹಂಗಳಿಂದ ಅತಿನೊಂದೆನಯ್ಯ
ಮದಮತ್ಸರಂಗಳಿಂದ ಬೆದಬೆದನೆ ಬೆಂದೆನಯ್ಯ
ಅಹಂಕಾರ ಮಮಕಾರದಿಂದ ಮತಿಮಂದನಾದೆನಯ್ಯ
ಇದು ಕಾರಣ
ಎನ್ನ ಕಾಮಾದಿ ಷಡುವರ್ಗಂಗಳ ಕಳೆದು
ಅಹಂಕಾರ ಮಮಕಾರಂಗಳ ಮಾಣಿಸಿ
ನಿರಹಂಕಾರಿಯೆಂದೆನಿಸಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.     (ವ.೧೨೭)

ಎಂಬುದು ಒಂದು ವಚನದ ಮೊರೆಯಾದರೆ, ಮತ್ತೊಂದು ವಚನದಲ್ಲಿ-

ಎನ್ನ ಮನಸ್ಸು ಹೊನ್ನು, ಹೆಣ್ಣು, ಮಣ್ಣ ನೆನೆನೆನೆದು
ನಿಮ್ಮ ನೆನೆಯಲೊಲ್ಲದು ನೋಡಾ      (ವ. ೧೩೧)

ಎಂದು ಚಂಚಲ ಮನಸ್ಸಿನ ಅವಿವೇಕವನ್ನು ಕುರಿತ ವರ್ಣನೆಯಿದೆ. ಇನ್ನೊಂದರಲ್ಲಿ-

ಯುವತಿಯರ ವ್ಯವಹಾರವೆಂಬ ವಿಕಳತೆ ಹತ್ತಿ
ಯೋಗದ ಸಮತೆ ಸಡಿಲಿತ್ತು ನೋಡಾ  (ವ.೧೫೦)

ಎಂಬ ಸ್ಪಷ್ಟವಾದ ಆಘಾತದ ಉದ್ಗಾರವಿದೆ. ಇನ್ನೊಂದು ವಚನದಲ್ಲಿ ತನ್ನ ಮನಸ್ಸನ್ನು ತಾನೆ ಕುರಿತು-

ಮೊಲನ ಕಂಡ ನಾಯಂತೆ
ಇಂದ್ರಿಯ ವಿಷಯಕ್ಕೆ ಮುಂದುವರಿಯದಿರಾ
ಅಂಗನೆಯರ ಸಮ್ಮೇಳನದಿಂ ಭಂಗಿತನಾಗದಿರಾ
ಲಿಂಗವ ನೆಮ್ಮಿ ಸುಖಿಯಾಗು ಎಲೆ ಮನವೆ.     (ವ. ೩೯೮)

ಎಂದು ಸಂಬೋಧಿಸುವ ಎಚ್ಚರದ ನುಡಿಯಿದೆ. ಬೇರೊಂದು ವಚನದಲ್ಲಿ ಈ ಎಲ್ಲ ಪ್ರಲೋಭನೆಗಳನ್ನು ಒಡ್ಡಿ ಪರೀಕ್ಷಿಸುವ ಪರಮಾತ್ಮನನ್ನೇ ಕುರಿತು-

ಕಾಯಗೊಂಡು ಹುಟ್ಟಿಸಿ ಕರಣಾದಿ ಗುಣಂಗಳಿಗೆ ಗುರಿಮಾಡಿ
ಕಾಡಿ ನೋಡುವಿರಯ್ಯಾ.
ಇದು ಕಾರಣ
, ಎನ್ನ ಕಾಯದ ಕರಣದ ಗುಣಂಗಳ ಕಳೆದು
ಎನ್ನ ಒಳ ಹೊರಗೆ ಹಿಡಿದಿಪ್ಪ ಮಾಯಾಪ್ರಪಂಚವ ಮಾಣಿಸಿ
ನೀವಲ್ಲದೆ ಮತ್ತೇನುವನು ಅರಿಯದಂತೆ
ಸಂಸಾರಸುಖವ ನೆನೆಯದಂತೆ ಕರುಣಿಸಯ್ಯಾ
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ.     (ವ. ೩೧೯)

ಎಂಬ ಬೇಡಿಕೆಯಿದೆ. ಈ ಬಗೆಯ ಪರಿಸ್ಥಿತಿಯಿಂದ ಪಾರಾಗಿ, ಶಿವಯೋಗದ ಹಾದಿಗೆ ಬಂದ ಸಂದರ್ಭವನ್ನೂ ಚಿತ್ರಿಸುವ ಒಂದೆರಡು ವಚನಗಳಿವೆ:

ಆಡವಿಯ ಹುಲ್ಲ ಮೇದ ಪಶು
ಮಡುವಿನಗ್ಘವಣಿಯ ಕುಡಿದು ನಡುಬೀದಿಯಲ್ಲಿ ಬರುತ್ತಿರಲು
ಕಡೆಯಲಿರ್ದ ಹುಲಿ ಬಂದು ಹಿಡಿಯಲು
ನಿನ್ನೊಡವೆಯನೇನ ಬಳಿಸಿಕೊಂಡೆನೋ ಎಂದು ತನ್ನೊಡೆಯನ ಕೂಗಿ ಕರೆಯಲು
,
ಹಿಡಿದ ಹುಲಿ ಬಿಟ್ಟೋಡಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.     (ವ. ೧೩೬)

ಎಂಬ ಈ ಸಚಿತ್ರವಾದ ವಚನ, ತನ್ನ ಬದುಕಿನಲ್ಲಿ ಒದಗಿದ ಪ್ರಲೋಭನೆಗಳ ಬಿಡುಗಡೆಯನ್ನು ನುಡಿಯುತ್ತದೆ. ಹಾಗೆಯೇ-

ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗೆದು
ಶಿವಲಿಂಗಮೂರ್ತಿಯ ಮಾಡಿ ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯಾ

ಶ್ರೀ ಗುರು (ವ. ೧೭೭)

ಎಂಬಲ್ಲಿ ತನಗೆ ಗುರುಕಾರುಣ್ಯವಾದ ಪರಿ ಚಿತ್ರಿತವಾಗಿದೆ. ಈ ಕೆಲವು ವಚನಗಳು ಒಂದು ಅನುಕ್ರಮವಾದ ಘಟನಾ ಪರಂಪರೆಯನ್ನು ಚಿತ್ರಿಸುತ್ತವೆ. ಶ್ರೀ ಸಿದ್ಧಲಿಂಗರಿಗೆ ಒದಗಿದ ಪ್ರಲೋಭನೆಗಳು; ಅವುಗಳೊಳಗಿಂದ ಹಾದು ಬರುವಾಗ ಅವರ ಅಂತರಂಗ ಪಟ್ಟ ಪಾಡು; ಕಡೆಗೆ ಗುರುಕೃಪೆಯಿಂದ ಈ ಕೋಟಲೆಗಳು ಬಿಡುಗಡೆಯಾಗಿ, ಸ್ವಸ್ವರೂಪದ ಅನುಸಂಧಾನದ ಹಾದಿಗೆ ಹಚ್ಚಿದ ಗುರುವಿನ ನಿರ್ದೇಶನ- ಇವಿಷ್ಟು ಅತ್ಯಂತ ಪ್ರಾಮಾಣಿಕವಾಗಿ ನಿರೂಪಿತವಾಗಿವೆ. ಈ ಆತ್ಮಕಥನರೂಪದ ವಚನಗಳು, ಶ್ರೀ ಸಿದ್ಧಲಿಂಗರು ಮನುಷ್ಯರಾಗಿದ್ದುಕೊಂಡೇ ಮಹಾಯೋಗಿಯ ನಿಲುವಿಗೆ ಏರಿದ ಪರಿಯನ್ನು ಚಿತ್ರಿಸುತ್ತವೆ.

ಬಸವಾದಿ ಶರಣರಂತೆಯೆ ಸಿದ್ಧಲಿಂಗರೂ ಅನುಭಾವವೆಂಬುದು ಶಾಸ್ತ್ರಾದಿಗಳಿಂದ ದೊರಕತಕ್ಕದ್ದಲ್ಲ ಎಂಬುದನ್ನು ಅರಿತವರು:

ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ
ಮಾತಿನ ಮಮಕಾರಕ್ಕೆ ಆಗಮವ ಬಲ್ಲೆವೆಂದು
ಕೂಗಿಡುವರು ನೋಡಾ.        (ವ. ೩೫೪)

ಎಂದು ಶಾಸ್ತ್ರಾಗಮಗಳನ್ನು ದೊಡ್ಡದು ಮಾಡಿ, ತಾವು ಪರತತ್ವವನ್ನು ಅರಿತೆವೆನ್ನುವವರನ್ನು ಹಾಸ್ಯ ಮಾಡಿದ್ದಾರೆ. ಇನ್ನೊಂದೆಡೆ:

ನುಡಿಗೆ ನುಡಿಯ ಕಲಿತು
ತರ್ಕಮರ್ಕಟರಂತೆ ಹೋರುವ
ಬಯಲ ಸಂಭ್ರಮದ ತರ್ಕಿಗಳ ಕಂಡರೆ
ಮಾಗಿಯ ಕೋಗಿಲೆಯಂತೆ
ಮುಖ ಮುನಿಸಾಗಿರಿಸಯ್ಯಾ.    (ವ. ೨೧೮)

ಎಂದು ತರ್ಕವಿಮುಖತೆಗಾಗಿ ಹಂಬಲಿಸಿದ್ದಾರೆ. ಸಾಧನೆಯಲ್ಲಿ ಮುಂದುವರಿದು ‘ಹೊಳೆಯುತ್ತಿದ್ದ ಕಾಲಾಗ್ನಿಯೋಪಾದಿಯ ಕಾಂತಿಯನ್ನುಳ್ಳುದು ಅನಂತ ಕೋಟಿ ಮಿಂಚುಗಳ ಪ್ರಭೆಯ ಪ್ರಕಾಶವನ್ನುಳ್ಳುದು’ -ಎಂದು ಆ ಪರವಸ್ತುವನ್ನು ದರ್ಶಿಸಿದ ಅನುಭವವನ್ನು ಹೇಳುತ್ತಾರೆ. ಅಷ್ಟೇ ಅಲ್ಲ ಸುತ್ತಣ ನಿಸರ್ಗ ವ್ಯಾಪಾರದಲ್ಲೂ, ಒಳಗೆ ಹೊಳೆದ ಆ ಪರವಸ್ತುವನ್ನೆ ಕಂಡ ಅನುಭವವನ್ನು ಕುರಿತು-

‘ಮಿಂಚಿನ ಪ್ರಭೆಯಲ್ಲಿ ಪಂಚವದನನ ಕಂಡೆನಯ್ಯಾ’          (ವ. ೮೫)

ಎನ್ನುತ್ತಾರೆ. ಶಿವಾನುಭವದ ಪರಮಸ್ಥಿತಿಯನ್ನು ಕುರಿತು-

ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯಾ
ತೆರೆಯಳಿದ ಅಂಬುಧಿಯಂತೆ ಪರಮಶಿವ ಸಾಗರದೊಳಗೆ
ಪರಮ ಚಿದ್ಗಂಭೀರನಾಗಿರ್ದೆನಯ್ಯಾ.    (ವ.೬೨೮)

ಎಂದು ಯೋಗಿಯ ಚಿತ್ತಸ್ಥಿತಿಯನ್ನು ಉಪಮಿಸಿ ಹೇಳಿದ್ದಾರೆ.

ಸಿದ್ಧಲಿಂಗರ ಏಳುನೂರಾ ಒಂದು ವಚನಗಳು ಯೋಗಿಯಾದವನೊಬ್ಬನ ಏರುವೆಯ ಆರು ಹಂತಗಳನ್ನು ಸ್ವಾನುಭವದಿಂದ ಚಿತ್ರಿಸುವುದರ ಮೂಲಕ ‘ಷಟ್‌ಸ್ಥಲ ಸಿದ್ಧಾಂತ’ವನ್ನು ಪ್ರತಿಪಾದಿಸುತ್ತವೆ. ಈ ಪ್ರಯತ್ನದಲ್ಲಿ ಸಾಧಕನಾದವನ ಚಿತ್ತಸ್ಥಿತಿ ಯಾವ ಯಾವ ಹಂತದಲ್ಲಿ, ಯಾವ ಯಾವ ಅವಸ್ಥೆಗಳ ಮೂಲಕ ಹಾದು ಹೋಗುತ್ತದೆ ಎಂಬುದು ಚಿತ್ರಿತವಾಗಿದೆ. ಈ ಯೋಗಾನುಭವದ ನಿರೂಪಣೆಯ ವಚನಗಳಲ್ಲಿ ಸಿದ್ಧಲಿಂಗರು ಬಳಸುವುದು ಸಿದ್ಧ ಅಭಿವ್ಯಕ್ತಿಯನ್ನೆ. ಬಸವ-ಅಲ್ಲಮ-ಮಹಾದೇವಿ ಮೊದಲಾದವರ ವಚನಗಳನ್ನು ಓದಿಕೊಂಡವರಿಗೆ, ಸಿದ್ಧಲಿಂಗರ ವಚನಗಳಲ್ಲಿಯೂ ಹಿಂದಿನ ಆ ಶರಣರ ನುಡಿಗಟ್ಟುಗಳೂ, ಉಪಮೆ ರೂಪಕಗಳೂ ಪುನರಾ ವರ್ತನೆಯಾಗುವುದನ್ನು ಕಾಣಬಹುದು. ಸಿದ್ಧಲಿಂಗರು ತಮಗೆ ಹಿಂದಿನ ಆ ವಚನ ವಾಙ್ಮಯವನ್ನು ಅತ್ಯಂತ ಶ್ರದ್ಧೆಯಿಂದ ಅಭ್ಯಸಿಸಿ, ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಂಡದ್ದು ಕಂಡುಬರುತ್ತದೆ. ಸಿದ್ಧಲಿಂಗರು, ಹಿಂದಿನ ಸಿದ್ಧರೂಪವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡರೂ ಸಹ, ಇವುಗಳಲ್ಲಿ ಅಭಿವ್ಯಕ್ತವಾಗಿರುವುದು ಸಿದ್ಧಲಿಂಗರ ಸ್ವಾನುಭವವಲ್ಲ ಎಂಬ ಶಂಕೆ ನಮಗೆ ಉಂಟಾಗುವುದಿಲ್ಲ. ಕಾರಣ, ಹಿಂದಿನವರ ವಚನ ವಿನ್ಯಾಸದಿಂದ, ಅದೇ ಬಗೆಯ ಅಭಿವ್ಯಕ್ತಿಯ ತಾಂತ್ರಿಕ ಕೌಶಲವನ್ನು ಸಿದ್ಧಲಿಂಗರು ಸಾಧಿಸಿಕೊಂಡಿದ್ದಾರೆ. ಅವರ ವಚನಗಳಲ್ಲಿ  ಹಿಂದಿನವರ ವಚನಗಳ ಹಾಸು ಬೀಸು, ನುಡಿಗಟ್ಟಿನ ವಿನ್ಯಾಸ, ಇತ್ಯಾದಿಗಳು ಕಂಡು ಬಂದರೂ ಅದು ಕೇವಲ ಅನುಕರಣವೆಂದು ಅನ್ನಿಸದೆ, ಇವೂ ಕೂಡಾ ವಿಶಿಷ್ಟವ್ಯಕ್ತಿತ್ವವೊಂದರ ಅಭಿವ್ಯಕ್ತಿಯೆಂಬಂತೆ ತೋರುತ್ತವೆ. ಇದಕ್ಕೆ ಕಾರಣ ಅವರು ಹಿಂದಿನ ಪರಂಪರೆಯಿಂದ ಪುಷ್ಟರಾದರೂ, ತಮ್ಮದೇ ಆದ ಅಭಿವ್ಯಕ್ತಿಯನ್ನು ಅಲ್ಲಲ್ಲಿ ರೂಪಿಸಿಕೊಳ್ಳುವ ಪ್ರಯತ್ನಗಳನ್ನು ಪ್ರಕಟಿಸಿದ್ದಾರೆ. ನಿದರ್ಶನಕ್ಕೆ ಈಗಾಗಲೇ ಉದ್ಧರಿಸಿರುವ ಒಂದೆರಡು ಅಭಿವ್ಯಕ್ತಿಗಳನ್ನು ಗಮನಿಸಬಹುದು.

ಅಡವಿಯ ಹುಲ್ಲ ಮೇದ ಪಶು
ಮಡುವಿನಗ್ಭವಣಿಯ ಕುಡಿದು ನಡುಬೀದಿಯಲ್ಲಿ ಬರುತ್ತಿರಲು
ಕಡೆಯಲಿರ್ದ ಹುಲಿ ಬಂದು ಹಿಡಿಯಲು
ನಿನ್ನೊಡವೆಯನೇನ ಬಳಸಿಕೊಂಡೆನೋ ಎಂದು ತನ್ನೊಡೆಯನ ಕೂಗಿ ಕರೆಯಲು
ಹಿಡಿದ ಹುಲಿ ಬಿಟ್ಟೋಡಿತ್ತು ನೋಡಾ.    (ವ. ೧೩೬)

ಎಂಬ ಈ ವಚನವನ್ನು ನೋಡೋಣ. ಈ ವಚನದಲ್ಲಿ ಬರುವ ‘ಕಾಡಪಶು’ವಿನ ಪ್ರತಿಮೆ ಬಸವಣ್ಣನವರ ವಚನದಲ್ಲಿದ್ದದ್ದೆ. ಪ್ರಾಣಿಗಳ ಪ್ರತಿಮೆಯನ್ನು ವಿಶೇಷವಾಗಿ ಬಳಸಿದ ಬಸವಣ್ಣನವರ ವಚನದಲ್ಲಿ ‘ಹಸು’ವಿನ ಪ್ರತಿಮೆ- ‘ವಿಷಯವೆಂಬ ಹಸುರ ಮೇಯುವ’ ‘ಪಂಕದಲ್ಲಿ ಬಿದ್ದು ಕಾಲು ಬಡಿಯುವ’ ‘ಪಶು ನಾನು ಪಶುಪತಿ ನೀನು’ -ಎನ್ನುವ ಕೆಲವು ವಚನಗಳಲ್ಲಿದೆ. ಅಷ್ಟೇ ಅಲ್ಲ, ಸಿದ್ಧಲಿಂಗರ ಈ ಶಬ್ದಚಿತ್ರಕ್ಕೆ ಸೂಚನೆ ‘ಕಾಡ ಬಸವನ ಹುಲಿ ಕೊಂಡೊಯ್ವರೆ, ಆರಯ್ಯಲಾಗದೆ?’ ಎಂಬ ಬಸವಣ್ಣನವರ ವಚನದಲ್ಲಿಯೇ ಇದೆ. ಆದರೆ ಆ ಒಂದು ಸೂಚನೆಯಿಂದ ಒಂದು ಸಮಗ್ರ ಅನುಭವವನ್ನು ವಿಶಿಷ್ಟವಾದ ಶಬ್ದ ಚಿತ್ರವನ್ನಾಗಿ ರೂಪಿಸುವ ಸಿದ್ಧಲಿಂಗರ ಈ ವಚನ ಒಂದು ಪುನರ್‌ನಿರ್ಮಿತಿಯೇ ಸರಿ. ಅಡವಿಯಲ್ಲಿ ಹುಲ್ಲು ಮೇದು, ಮಡುವಿನಲ್ಲಿ ನೀರುಕುಡಿದು ಬರುವ ಹಸು; ತಟಕ್ಕನೆ ಮೇಲೆರಗಿ ಬರುವ ಹುಲಿ; ಹಸುವಿನ ಮೊರೆ; ಒಡೆಯನನ್ನು ಕೂಗಿದ ಮಾತ್ರಕ್ಕೆ ಹಿಡಿದ ಹುಲಿ ಬಿಟ್ಟೋಡಿದ ಪರಿ -ಹೀಗೆ ಶ್ರದ್ಧೆಯಲ್ಲಿ ಬದುಕುವ ಮುಗ್ಧ ಜೀವವೊಂದಕ್ಕೆ, ಅರಿವಿಲ್ಲದೆ ಎರಗಿಬಂದ ಪ್ರಲೋಭನೆ, ತಕ್ಕಷ್ಟು ಎಚ್ಚರದಿಂದ ತನ್ನೊಡೆಯನಿಗೆ ಮೊರೆಯಿಟ್ಟ ಕಾರಣದಿಂದ ದೊರೆತ ಬಿಡುಗಡೆ, ಹೀಗೆ ಬದುಕಿನ ಅಂತರಾನುಭವವನ್ನು ತಕ್ಕ ಚಿತ್ರವೊಂದರ ಮೂಲಕ ಅಭಿವ್ಯಕ್ತಿಪಡಿಸುವ ಕೌಶಲ, ಕೇವಲ ಅನುಕರಣೆಗೆ ಸಾಧ್ಯವಿಲ್ಲ. ಅಲ್ಲದೆ ಈ ವಚನದ ಹಾಸು-ಬೀಸು, ಒಳಪ್ರಾಸಗಳ ಸಂಯೋಜನೆ, ಇಡೀ ಚಿತ್ರದ ರಚನೆ -ಇವೆಲ್ಲ ಸ್ವತಂತ್ರ ನಿರ್ಮಾಣ ಸಮರ್ಥವಾದ ಹಾಗೂ ತಂತ್ರ ಪರಿಣತವಾದ ವ್ಯಕ್ತಿತ್ವವನ್ನೆ ಸೂಚಿಸುತ್ತದೆ. ಇದರಂತೆಯೆ, ಇನ್ನೊಂದು ಶರಣರ ನಿಲುವನ್ನು ಸೂಚಿಸುತ್ತದೆ-

ಉಂಗುಷ್ಟದಲ್ಲಿ ಸರ್ಪದಷ್ಟವಾಗಲು
ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ
;
ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು
ಆ ಶರಣನ ಸರ್ವಾಂಗವೆಲ್ಲವೂ ಲಿಂಗವಪ್ಪುದು ತಪ್ಪದು ನೋಡಾ . (ವ. ೨೮೯)

ಇದೊಂದು ತೀರಾ ವಿಲಕ್ಷಣವಾದ ಉಪಮಾಚಿತ್ರ. ಲಿಂಗಸಂಗದಿಂದ ಶರಣನು ತಾನೇ ಲಿಂಗವಾಗುತ್ತಾನೆ ಎಂಬ ಅನುಭಾವಿಕ ಸ್ಥಿತಿಯನ್ನು, ಅತ್ಯಂತ ತೀವ್ರವಾದ ರೀತಿಯಲ್ಲಿ ಈ ವಚನ ಹೇಳುತ್ತದೆ- ಹಾವು ಕಡಿದು ವಿಷವೇರಿದವನ ಉಪಮೆಯಲ್ಲಿ. ಅನಿರ್ವಚನೀಯವಾದ ಅನುಭಾವಿಕ ಸತ್ಯವೊಂದನ್ನು ಮಾತಿನಲ್ಲಿ ಮೂಡಿಸಿ, ಅದನ್ನು ಇತರರಿಗೆ ತಿಳಿಯಪಡಿಸುವ ವಿಧಾನ ಇದು.

ಅನುಭಾವದ ಪರಮ ಸೀಮೆಯಲ್ಲಿ ನೆಲೆನಿಂತ ಮನಸ್ಸಿನ ಸ್ಥಿತಿಯನ್ನು ಹೇಳುವಲ್ಲಿ-

ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯಾ  (ವ. ೬೨೮)

ಎಂಬ ಈ ಉಪಮೆ ಪರಿಭಾವಿಸಿದಷ್ಟೂ ಸೊಗಸಾಗಿದೆ. ಎಲೆಯುದುರಿಸಿಕೊಂಡು ನಿಂತ ಮರ, ಸಮಸ್ತ ಬಂಧನಗಳನ್ನು ಕಳಚಿನಿಂದ ಚಿತ್ತಸ್ಥಿತಿಗೆ ಸೊಗಸಾದ ಪ್ರತಿಮೆಯಾಗಿದೆ.

ಶಾಸ್ತ್ರಾಗಮಗಳನ್ನು ಓದಿ ಪರತತ್ವವನ್ನು ಬಲ್ಲೆವೆಂಬ ಬಾಯಮಾತಿನ ಅಬ್ಬರದವರನ್ನು ‘ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ’ ಎಂದೂ, ‘ನುಡಿಗೆ ನುಡಿಯ ಕಲಿತು ತರ್ಕಮರ್ಕಟರಂತೆ ಹೋರುವ ಬಯಲ ಸಂಭ್ರಮದ ತರ್ಕಿ’ಗಳೆಂದೂ ಕರೆಯುವಲ್ಲಿ; ತನ್ನಲ್ಲಿಯೇ ಇರುವ ಪರವಸ್ತುವನ್ನು ಬೇರೆ ಬೇರೆಯ ಹೊರಗಣ ತೀರ್ಥ ಕ್ಷೇತ್ರಾದಿಗಳಲ್ಲಿ ಹುಡುಕುವವರನ್ನು ಕುರಿತು-

ಕೈಯಲ್ಲಿ ಹಣ್ಣಿದ್ದಂತೆ ಮರವನೇರಿ ಕೊಂಬ ಬಾಗಿಸಿ
ಕಾಯ ಕೊಯಿವ ಅರೆಮರುಳನಂತೆ

ಎಂಬ ಚಿತ್ರ ಎಷ್ಟು ಸೊಗಸಾಗಿ ವಿಡಂಬಿಸುತ್ತದೆ. ‘ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ ಮುನ್ನಿನ ಚಿನ್ನವೆ ಆದಂತೆ’ ‘ಗಾಳಿ ಗಂಧವನಪ್ಪಿದಂತೆ’ ‘ಪಕ್ಷಿಯನೊಳಗೊಂಡ ತತ್ತಿಯಂತೆ’ ‘ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ’ ‘ಪುಷ್ಪ ತನ್ನ ಪರಿಮಳವ ತಾನರಿಯದಂತೆ’ -ಇತ್ಯಾದಿ ಉಪಮೆಗಳಲ್ಲಿ; ‘ಕೋತಿಗೆ ಕೊಂಬು ಹುಟ್ಟಬಲ್ಲುದೆ?’ ‘ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೆ’? ‘ಬೆಳದಿಂಗಳೊಳಗೆ ಕಿಚ್ಚುಂಟೆ?’ ‘ಸಟ್ಟುಗ ಸವಿಯಬಲ್ಲುದೆ?’ ‘ಸುರಚಾಪ ನಿರ್ಧರವಾಗಬಲ್ಲುದೆ?’ ‘ಗುಡುಗನಾಡುವನು ಗೊತ್ತ ಮರೆವನೆ’? ‘ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯಾ?’ -ಎನ್ನುವಂಥ ಪ್ರಶ್ನೋಕ್ತಿಗಳಲ್ಲಿ ಎಂತಹ ಕಾವ್ಯಗುಣ ಇದೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ.

ನಾವು ಆಗಲೇ ಹೇಳಿರುವಂತೆ ಒಂದು ಅಭಿವ್ಯಕ್ತಿ ಪ್ರಕಾರ ಒಂದು ಕಾಲದಲ್ಲಿ ಪರಿಪೂರ್ಣಾವಸ್ಥೆಯನ್ನು ಮುಟ್ಟಿದ ಮೇಲೆ, ಮತ್ತೆ ಅದೇ ವಿಧಾನದ ಅಭಿವ್ಯಕ್ತಿಗೆ ತೊಡಗುವವರ ಬರವಣಿಗೆಯಲ್ಲಿ ಸಹಜವಾಗಿಯೇ ಒದಗಬಹುದಾದ ಪರಿಮಿತಿಗಳಿಂದ ಸಿದ್ಧಲಿಂಗರ ವಚನಗಳು ಪಾರಾಗಿಲ್ಲ; ಹಾಗೆಯೆ ಬಸವಾದಿಗಳಿಗಿದ್ದಂತಹ ಸಂಕೀರ್ಣವಾದ ಸಾಮಾಜಿಕ ಸುಧಾರಣೆಯ ಜವಾಬ್ದಾರಿ ಈ ಕಾಲಕ್ಕೆ ಅಷ್ಟು ತೀವ್ರವಾಗಿಲ್ಲದ ಕಾರಣ, ಸಿದ್ಧಲಿಂಗರ ವಚನಗಳಲ್ಲಿ ಬಸವಾದಿಗಳ ವಚನಗಳಲ್ಲಿ ಕಂಡುಬರುವಂತಹ ಸಮಾಜ ವಿಮರ್ಶೆ ಹಾಗೂ ಸಮಾಜ ವಿಡಂಬನೆಯ ವಚನಗಳು ಅಷ್ಟಾಗಿ ಇಲ್ಲದೆ, ಬಹುಮಟ್ಟಿಗೆ ಇವು ಅಂತರನುಭವದ ನಿರೂಪಣೆಯ ಕಡೆಗೆ ಗಮನಕೊಟ್ಟಿವೆ. ಅದರಲ್ಲೂ ‘ಅಂತರನುಭವ’ ಎಂದರೆ ಬಸವ-ಮಹಾದೇವಿ ಮೊದಲಾದವರಲ್ಲಿ ಕಂಡುಬರುವ ಸ್ವಾತ್ಮವಿಮರ್ಶೆಯ ತಾಕಲಾಟಗಳ ಕರುಣಸ್ವರ ಸಿದ್ಧಲಿಂಗರಲ್ಲಿ ಅಷ್ಟಾಗಿ ಕಾಣದು. ಸಂಸಾರ ಹೇಯಸ್ಥಲದ ಕೆಲವು ವಚನಗಳಲ್ಲಿ, ಸಿದ್ಧಲಿಂಗರು ತಮ್ಮ ಮನಸ್ಸು ಹೆಣ್ಣು ಹೊನ್ನು ಮಣ್ಣುಗಳ ಸೆಳೆತಕ್ಕೆ ಒಳಗಾಗಿ ಯೋಗದ ಸಮತೆ ಸಡಿಲಗೊಂಡ ಸಂಘರ್ಷಗಳನ್ನು ಹೇಳುತ್ತಾರಾದರೂ, ಬಸವ ಮಹಾದೇವಿಯರಿಗೆ ಬಂದಂಥ ವೈಯಕ್ತಿಕ ಸಂಘರ್ಷಗಳ ತೀವ್ರತೆ, ಇವರ ಈ ಕೆಲವು ವಚನಗಳಲ್ಲಿ ಕಾಣದು. ಸಿದ್ಧಲಿಂಗರಿಗೆ ನಿಜವಾಗಿಯೂ ಈ ಅನುಭವ ಪ್ರಲೋಭನೆಗಳ ಸೆಳೆತಕ್ಕೆ ಸಿಕ್ಕಿ ಬವಣೆಗೊಂಡ ಅನುಭವ ಆಗಿರಬಹುದು; ಅಥವಾ ಭಕ್ತನಾದವನ ಮನಃಸ್ಥಿತಿ ಸಂಸಾರ ಹೇಯಸ್ಥಲದಲ್ಲಿ ಯಾವ ಒಂದು ಸಂಘರ್ಷಕ್ಕೆ ಒಳಗಾಗುತ್ತದೆ ಎನ್ನುವುದರ ಚಿತ್ರವನ್ನು ಕೊಡುವ ಉದ್ದೇಶವೂ ಇರಬಹುದು. ಇವರು ಮೂಲತಃ ಯೋಗಿಗಳಾದ್ದರಿಂದ ಇವರ ವಚನಗಳನ್ನು ಪ್ರಭುದೇವರ ವಚನಗಳೊಂದಿಗೆ ಹೋಲಿಸಬಹುದು. ಈ ಹೋಲಿಕೆಯ ಮುಖ್ಯಾಂಶ ಪ್ರಭುದೇವರಲ್ಲ್ಲಿಯಂತೆ ಸಿದ್ಧಲಿಂಗರ ವಚನಗಳಲ್ಲಿಯೂ, ಬೆಡಗಿನ ವಚನಗಳೇ ವಿಶೇಷವಾಗಿವೆ ಎನ್ನುವುದು.

ಸಾಹಿತ್ಯದ ದೃಷ್ಟಿಯಿಂದ ನೋಡಿದರೆ ಇವುಗಳ ಸಾಹಿತ್ಯಿಕ ಮೌಲ್ಯ ಬಸವಾದಿಗಳ ವಚನಗಳ ಸಾಹಿತ್ಯಕ ಗುಣಗಳ ಎತ್ತರಕ್ಕೆ ಬಾರದು. ಸಿದ್ಧಲಿಂಗರು, ಬಸವ ಪರಂಪರೆಯೊಂದಿಗೆ ತಮ್ಮನ್ನು ಹೊಂದಿಸಿಕೊಂಡ, ವಚನ ಪರಂಪರೆಯನ್ನು ಮೂರು ಶತಮಾನಗಳ ನಂತರ ಶ್ರದ್ಧೆಯಿಂದ ಸುಸಮರ್ಥವಾಗಿ ಮುಂದುವರಿಸಿದವರೆಂಬುದೆ ಗಮನಿಸತಕ್ಕ ಸಂಗತಿಯಾಗಿದೆ. ಆದರೆ ಸಿದ್ಧಲಿಂಗರ ವಚನಗಳ ತಾಂತ್ರಿಕ ಪರಿಣತಿ, ಕೇವಲ ಅನುಕರಣದಿಂದ ಪ್ರಾಪ್ತವಾಗದ ಒಂದು ಅಭಿವ್ಯಕ್ತಿಯ ಸ್ಪಷ್ಟತೆ ಮತ್ತು ವಿಶಿಷ್ಟತೆ, ಅಂತರನುಭವಗಳನ್ನು ಬಹಿರಂಗದ ಶಬ್ದಚಿತ್ರಗಳಲ್ಲಿ ಹಿಡಿದಿಡುವಲ್ಲಿ ಕಂಡುಬರುವ ಹೊಸತನ ಸಾಹಿತ್ಯಾಂಶವನ್ನು ತಕ್ಕಮಟ್ಟಿಗೆ ಪ್ರಕಟಿಸುತ್ತದೆ.

ಸಿದ್ಧಲಿಂಗರ ವಚನಗಳಲ್ಲಿ ತಕ್ಕಷ್ಟು ಸಾಹಿತ್ಯದ ದೀಪ್ತಿಯಿದೆ; ಕಾವೂ ಇದೆ. ಧಾರ್ಮಿಕ ದೃಷ್ಟಿಯಿಂದ ಈ ವಚನಗಳಲ್ಲಿ ಅಭಿವ್ಯಕ್ತವಾಗಿರುವ ಮತ್ತು ಇವುಗಳನ್ನು ಬರೆದ ವ್ಯಕ್ತಿತ್ವ ದೊಡ್ಡದು; ಮತ್ತು ಅನೇಕ ಸೃಜನಾತ್ಮಕ ಹಾಗೂ ರಚನಾತ್ಮಕ ಸಾಹಿತ್ಯ ಚಟುವಟಿಕೆಗಳಿಗೆ ಕೇಂದ್ರ ಸ್ಫೂರ್ತಿಯಾದದ್ದು. ಸಿದ್ಧಲಿಂಗಯತಿಗಳನ್ನು ಕುರಿತು ಹೇಳುವುದಾದರೆ, ಅವರು ಅತ್ಯುತ್ತಮ ವಚನಕಾರರೆನ್ನುವುದಕ್ಕಿಂತ, ಅತಿಮಹತ್ವದ ವ್ಯಕ್ತಿಗಳೆನ್ನುವುದು ಸರಿಯಾದ ಮಾತು.

ಅನುರಣನ (೧೯೭೮)

—-