(ಕ್ರಿ.ಶ. ೧೯೦೧-೧೯೫೪) (ಪರಮಾಣು ರಿಯಾಕ್ಟರ್)

ಎನ್ರಿಕೊ ಫರ್ಮಿ ಸೆಪ್ಟೆಂಬರ್ ೨೯, ೧೯೦೧ರಂದು ಆಲ್ಬರ್ಟೋ ಫರ್ಮಿ ಮತ್ತು ಇಡಾ ಡಿ ಗ್ಯಾಟಿಸ್ ದಂಪತಿಗಳ ಮೂರನೆಯ ಮಗುವಾಗಿ ಜನಿಸಿದರು. ಆತನ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ.

ಚಿಕ್ಕವನಿದ್ದಾಗಲೇ ಎನ್ರಿಕೊ ಪುಸ್ತಕದ ಹುಳು ಆಗಿದ್ದ. ಗಣಿತ ಮತ್ತು ಭೌತಶಾಸ್ತ್ರ ಆತನ ನೆಚ್ಚಿನ ವಿಷಯಗಳಾಗಿದ್ದವು. ಮುಂದೆ ಇವರು ಪೀಸಾ ಮತ್ತು ರೋಮ್ ನಗರಗಳಲ್ಲಿ ಉನ್ನತ ವ್ಯಾಸಂಗ ಮುಗಿಸಿಕೊಂಡು ಜರ್ಮನಿಯ ಗಾಟೆಂಗೆನ್ ವಿಶ್ವವಿದ್ಯಾಲಯದಲ್ಲೂ ಅಧ್ಯಯನ ಮಾಡಿದರು.

ಎನ್ರಿಕೊ ಫರ್ಮಿ ತಮ್ಮ ವ್ಯಾಸಂಗ ಮುಗಿದ ಮೇಲೆ ರೋಮ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ವಹಿಸಿಕೊಂಡರು. ಇಲೆಕ್ಟ್ರಾನು, ಪ್ರೋಟಾನು ಮತ್ತು ನ್ಯೂಟ್ರಾನುಗಳ ಚಲನೆ ಬಗ್ಗೆ ಸಾಂಖ್ಯಿಕ ನಿಯಮವೊಂದನ್ನು ಪ್ರತಿಪಾದಿಸಿ ಅಪಾರ ಖ್ಯಾತಿಗೆ ಪಾತ್ರರಾದರು. ಇದೇ ನಿಯಮವನ್ನು ಇಂಗ್ಲೆಂಡಿನ ಡಿರ್ಯಾಕ್ ಎಂಬುವರೂ ಸ್ವತಂತ್ರವಾಗಿ ಮಂಡಿಸಿದ್ದರಿಂದ ಅದಕ್ಕೆ ಫರ್ಮಿ-ಡಿರ್ಯಾಕ್ ಸ್ಟ್ಯಾಟಿಸ್ಟಿಕ್ಸ್ ಎಂದು ಕರೆಯಲಾಯಿತು. ಮಂದಗತಿಯಲ್ಲಿ ಚಲಿಸುವ ನ್ಯೂಟ್ರಾನುಗಳು ಸುಲಭವಾಗಿ ನ್ಯೂಕ್ಲಿಯಸ್ಸುಗಳನ್ನು ಪರಿವರ್ತಿಸುತ್ತವೆ ಎಂಬುದನ್ನು ಎನ್ರಿಕೊ ಫರ್ಮಿ ಕಂಡುಹಿಡಿದರು. ಭೌತವಿಜ್ಞಾನದಲ್ಲಿ ಅವರ ಸಾಧನೆಯನ್ನು ಮಾನ್ಯ ಮಾಡಿ ಅವರಿಗೆ ನೊಬೆಲ್ ಪಾರಿತೋಷಿಕ ನೀಡಿ ಗೌರವಿಸಲಾಯಿತು.

ಫರ್ಮಿಯವರ ಪತ್ನಿ ಯಹೂದಿ ಜನಾಂದವಳು. ಮುಸೊಲಿನಿಯ ಕ್ರೂರ ದೃಷ್ಟಿ ಯಹೂದ್ಯರ ಮೇಲೆ ಬಿದ್ದಾಗ ಎನ್ರಿಕೊ ಫರ್ಮಿ, ಇವರು ಕ್ಯಾಥೊಲಿಕರಾಗಿದ್ದರೂ, ಸಂ.ರಾ. ಅಮೇರಿಕಕ್ಕೆ ಹೋಗಬೇಕಾಯಿತು. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ವಿದಳನ ಸರಣಿಯಿಂದ ಶಕ್ತಿ ಉತ್ಪಾದಿಸುವ ಪರಮಾಣು ರಿಯಾಕ್ಟರಿನ ನಿರ್ಮಾಣ ಮಾಡಲು ಅವರು ತನ್ನ ಶಿಷ್ಯ ಹರ್ಬರ್ಟ್ ಆಂಡರ್ಸನ್‌ರ ಜೊತೆಗೂಡಿ ಪ್ರಯತ್ನಿಸಿತೊಡಗಿದರು. ಆದರೆ ದ್ವಿತೀಯ ಜಾಗತಿಕ ಯುದ್ಧದ ಬಿಸಿ ವಾತಾವರಣದಲ್ಲಿ ಅವರು ಆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಪರಮಾಣು ಬಾಂಬ್ ತಯಾರಿಕೆಯ ಕಾರ್ಯದಲ್ಲಿ ಭಾಗವಹಿಸಲು ಹೋದರು. ಆದರೂ ಫರ್ಮಿ ಅವರ ಪ್ರಯತ್ನ ಫಲವಾಗಿ ಜಗತ್ತಿನ ಮೊದಲ ಪರಮಾಣು ರಿಯಾಕ್ಟರು ಡಿಸೆಂಬರ್ ೧, ೧೯೪೨ರಂದು ಕಾರ್ಯಮಾಡಲಾರಂಭಿಸಿತು. ಇನ್ನೊಂದು ಕಡೆ ಅವರು ಭಾಗಿಯಾಗಿದ್ದ ತಂಡ ತಯಾರಿಸಿದ ಸರ್ವನಾಶಕ ಪರಮಾಣು ಬಾಂಬನ್ನು ಜುಲೈ ೧೬, ೧೯೪೫ರಂದು ಆಲಮೊಗೊರ‍್ಡೊ ಮರುಭೂಮಿಯಲ್ಲಿ ಪರೀಕ್ಷಾರ್ಥವಾಗಿ ಸ್ಫೋಟಿಸಲಾಯಿತು.

ಆದರೆ ಯುದ್ಧವನ್ನು ವಿರೋಧಿಸುವ ವಿಜ್ಞಾನಿಗಳ ಮತ್ತು ಇತರ ವಿದ್ವಾಂಸರುಗಳ ಯಾವ ಸಂಘಟನೆಯನ್ನೂ ಎನ್ರಿಕೊ ಫರ್ಮಿ ಸೇರಿಕೊಳ್ಳಲಿಲ್ಲ. ಅವರು ಕರುಳು ಬೇನೆಯಿಂದ ೧೯೫೪ರಲ್ಲಿ ನಿಧನರಾದರು.