ಮಂಡ್ಯ ಜಿಲ್ಲೆಯ  ಕೊಡಿಯಾಲದಲ್ಲಿ ೧೫-೭-೧೯೨೮ ರಂದು ಜನಿಸಿದ ಚೆಲುವರಾಜ್‌ಅವರ ತಂದೆ ನಿಟ್ಟೂರು  ಲಕ್ಷ್ಮಯ್ಯನವರು ತಬಲಾ ವಾದಕರು. ಇವರ ಪ್ರಥಮ ಸಂಗೀತ ಗುರುಗಳು ಕೊಡಿಯಾಲದ ಬಿ.ವಿ. ವೆಂಕಟರಮಣಯ್ಯ. ಮುಂದೆ ಸಂಗೀತ ರತ್ನ ಟಿ. ಚೌಡಯ್ಯ ಹಾಗೂ ಚಿಂತಲಪಲ್ಲಿ ವೆಂಕಟರಾವ್‌ ಅವರಲ್ಲಿ ಉನ್ನತಾಭ್ಯಾಸ ಮಾಡಿದರು. ಸಿ.ಬಿ. ಮಲ್ಲಪ್ಪನವರ ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತ ಕೆಲವು ಪಾತ್ರಗಳನ್ನು ವಹಿಸಿದ್ದರು.

ನಾಡಿನಾದ್ಯಂತ ಹಲವಾರು ಸಭೆಗಳಲ್ಲಿ, ಉತ್ಸವಗಳಲ್ಲಿ ಹಾಡಿ ಕೀರ್ತಿ ಪಡೆದಿರು. ವೀಣೆ ಮತ್ತು ಪಿಟೀಲು ವಾದನಗಳಲ್ಲೂ ಪರಿಶ್ರಮವಿರುವ ಶ್ರೀಯುತರು ಶ್ರೀ ಮಂಜುನಾಥೇಶ್ವರ ಸಂಗೀತ ಕಲಾ ಶಾಲೆಯನ್ನು ಆರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿರುತ್ತಾರೆ. ಮಧುರೆಯ ತ್ಯಾಗರಾಜ ಆರಾಧನಾ ಉತ್ಸವ, ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ, ತಿರುಪತಿ ದೇವಸ್ಥಾನ, ಮೈಸೂರು ಪ್ರಸನ್ನ ಸೀತಾರಾಮ ಮಂದಿರ ಇತ್ಯಾದಿ ಸಂಸ್ಥೆಗಳಲ್ಲಿನ ಕಾರ್ಯಕ್ರಮಗಳು ಉಲ್ಲೇಖಾರ್ಹವಾದುವು. ಆಕಾಶವಾಣಿಯಿಂದ ಇವರ ಗಾಯನ ಪ್ರಸಾರವಾಗುತ್ತಿದೆ.

ಹಲವಾರು ಪ್ರಮುಖ ಸಂಸ್ಥೆಗಳು ಶ್ರೀಯುತರ ಸೇವೆಯನ್ನು ಗುರುತಿಸಿ ಗೌರವಿಸಿವೆ. ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಸ್ವೀಕರಿಸಿರುವ ಇವರು ಈಗಲೂ ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ಎಳೆಯರಿಗೆ ಹಂಚುತ್ತ ವಿಶ್ರಾಂತ ಜೀವನವನ್ನು ಅನುಭವಿಸುತ್ತಿದ್ದಾರೆ.