೧೯೪೯ ನೇ ಇಸವಿ, ಆಗ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಒಂದು ದಿನ ನಮ್ಮ ಮನೆಗೆ ನನ್ನ ಬಂಧು ಒಬ್ಬಳು ಬಂದಳು. ಅವಳು ತುಂಬಾ ಚೆನ್ನಾಗಿ ಹಾಡ್ತಿದ್ದಳು. ನನಗಿನ್ನೂ ನೆನಪಿದೆ, ಅವಳು ಅಂದು ಭೈರವಿರಾಗದ “ನೀಪಾದಮುಲೆ” ಎಂಬ ಕೀರ್ತನೆಯನ್ನು ಸೊಗಸಾಗಿ ಹಾಡಿದಳು. ಅವಳ ಹಾಡು ಕೇಳುತ್ತಿದ್ದ ಹಾಗೆ ಎಷ್ಟು ಚೆನ್ನಾಗಿದೆ ಇವಳ ಗುರುಗಳ ಪಾಠಕ್ರಮ; ಕಲಿತರೆ ಅವರ ಹತ್ತಿರವೇ ಸಂಗೀತ ಕಲೀಬೇಕು ಅನ್ನುವ ತೀವ್ರ ಹಂಬಲ ಉಂಟಾಯಿತು. ಅವರ ಹೆಸರು ಎನ್‌. ಚೆನ್ನಕೇಶವಯ್ಯ. ಅವರಿಗೆ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ. ಅವರು ಎಲ್ರಿಗೂ ಪಾಠ ಹೇಳಿ ಕೊಡೋಲ್ಲ ಎಂದು ತಿಳಿದ ಮೇಲೂ ಅಳುಕಿದ್ದರೂ ಮಾನಸಿಕ ಛಲದಿಂದ ನಾನು ನನ್ನ ತಂದೆಯವರೊಡನೆ ಅವರ ಮನೆಗೆ ಹೋದೆ.

ಡಿ. ಸುಬ್ಬಯ್ಯ ರೋಡ್‌ನಲ್ಲಿ ಒಂದು ವಠಾರ. ಅಲ್ಲಿ ನಾಲ್ಕು ಮನೆಗಳು. ಒಂದರಲ್ಲಿ ಚೆನ್ನಕೇಶವಯ್ಯನವರ ಸಂಸಾರ. ಅಲ್ಲಿ ಒಂದು ದೊಡ್ಡ ಹಾಲು ಸಂಗೀತಕ್ಕೆ ಹೇಳಿ ಮಾಡಿಸಿದ ಹಾಗಿತ್ತು. ನಾವು ಅಲ್ಲಿ ಕುಳಿತ ಎರಡು, ಮೂರು ನಿಮಿಷದಲ್ಲಿ ಸಣ್ಣಗೆ ಉದ್ದಕ್ಕೆ ಇದ್ದ ಒಬ್ಬ ವ್ಯಕ್ತಿ ಬಂದರು. ಕಚ್ಚೆ ಹಾಕಿ ಉಟ್ಟಿದ್ದ ಕೆಂಪು ಮಗುಟ. ಹಣೆಯ ತುಂಬಾ ವಿಭೂತಿ. ಶಾಂತ ಮುಖ ಮುದ್ರೆ. ಅವರನ್ನು ನೋಡುತ್ತಿದ್ದ ಹಾಗೇ ಅವರಿಗೆ ಅಡ್ಡಬೀಳಬೇಕು ಎನಿಸುವಂಥ ವರ್ಚಸ್ಸು ಆ ಮುಖದಲ್ಲಿ, “ಏನು ಬಂದದ್ದು” ಎಂದರು. “ನನ್ನ ಮಗಳಿಗೆ ತಾವು ದಯವಿಟ್ಟು ಸಂಗೀತ ಪಾಠ ಕಲಿಸಬೇಕು” ಎಂದರು ನಮ್ಮ ತಂದೆಯವರು. ಹಿಂದೆ ಮುಂದೆ ಏನೂ ವಿಚಾರಿಸದೆ “ಆಯ್ತು ಬರಲಿ” ಎಂದರು ಅವರು. ನನಗೋ ಸ್ವರ್ಗಕ್ಕೆ ಮೂರೇಗೇಣು ಸಿಕ್ಕಷ್ಟು ಸಂತೋಷವಾಯ್ತು “ಹೇಗೀ ಬಂದಿದ್ದೀಯಲ್ಲ, ಇವತ್ತಿನಿಂದಾನೇ ಪಾಠ ಶುರುಮಾಡ್ತೀನಿ” ಅಂದರು. ನನಗೆ ವರ್ಣ ಕೀರ್ತನೆಗಳಷ್ಟು ಪಾಠ ಆಗಿದೆ ಎಂದೆ. ಸರಿ ಅಂತ ಹೇಳಿ “ಇಂತಚಲಮು” ಅನ್ನೋ ಬೇಗಡೆ ರಾಗದ ವರ್ಣವನ್ನು ಪ್ರಾರಂಭ ಮಾಡೇಬಿಟ್ಟರು. ಎಷ್ಟೋ ದಿನಗಳು ನೇರ ಶಾಲೆಯಿಂದ, ಮುಂದೆ ಕಾಲೇಜಿನಿಂದ ಹಾಗೇ ಗುರುಗಳ ಮನೆಗೆ ಪಾಠಕ್ಕೆ ಹೋಗುತ್ತಿದ್ದ ದಿನಗಳಲ್ಲಿ ಅವರು ತಪ್ಪದೆ “ನೋಡಿಲ್ಲಿ ಮಗೂ ಬಂದಿದೆ ಅಥವಾ ಲೀಲಾವತಿ ಬಂದಿದ್ದಾಳೆ, ಅವಳಿಗೆ ಅನ್ನ ಹಾಕು” ಅಂತ ಅವರ ಹೆಂಡತಿಗೆ ಹೇಳುತ್ತಿದ್ದರು. ಅವರು ಒಂದು ತಟ್ಟೆಯಲ್ಲಿ ಅನ್ನಕಲೆಸಿಕೊಟ್ಟು, ಒಂದು ಲೋಟ ಕಾಫಿ ಕೊಡ್ತಿದ್ದರು. ನಂತರವೇ ಪಾಠ ಹೇಳಲುತ್ತಿದ್ದುದು.

ನಾಟನಹಳ್ಳಿ ಚೆನ್ನಕೇಶವಯ್ಯನವರು ಹುಟ್ಟಿದ್ದು ಕೃಷ್ಣರಾಜಪೇಟೆ ತಾಲ್ಲೂಕಿನ ಮಂದಗೆರೆ ಸಮೀಪದ ನಾಟನಹಳ್ಳಿಯಲ್ಲಿ. ಅವರ ಜನ್ಮ ದಿನಾಂಕ ೧೮೯೫ರ ನವೆಂಬರ್‌ ೭ನೇ ತಾರೀಖು. ಹುಟ್ಟಿನಿಂದಲೇ ಇವರು ತುಂಬ ಪ್ರತಿಭಾಶಾಲಿಯಾಗಿದ್ದರು. ಜೊತೆಗೆ ಪರಂಪರೆ ಹಾಗೂ ಸುತ್ತಮುತ್ತಲ ಪರಿಸರವೂ ಇವರ ಕಲಾವಿಕಾಸಕ್ಕೆ ಇಂಬುಕೊಟ್ಟಿತೆಂದರೆ ಅತಿಶಯೋಕ್ತಿಯಲ್ಲ. ‘ಸಂಗೀತದ ಸಣ್ಣಪ್ಪ’ ಎಂದೇ ಜನ ಕರೆಯುತ್ತಿದ್ದ ಚೆನ್ನಕೇಶವಯ್ಯನವರ ತಂದೆ ನಾಟನಹಳ್ಳಿ ಕೇಶವಯ್ಯನವರು ದೇವರನಾಮಗಳನ್ನು ಹಾಡುವುದರಲ್ಲೂ, ಭಾರತವಾಚನ ಮಾಡುವುದರಲ್ಲೂ ನಿಷ್ಣಾತರಾಗಿದ್ದರು ಅಲ್ಲದೆ, ಅವರು ನಾಟಕಗಳಲ್ಲೂ ಅಭಿನಯಿಸುತ್ತಿದ್ದುದು ಉಂಟು. ಚೆನ್ನಕೇಶವಯ್ಯನವರ ತಾಯಿ ಲಕ್ಷ್ಮೀದೇವಮ್ಮನವರೂ ಸಂಸ್ಕಾರವಂತರು. ಮನೆಯ ವಾತಾವರಣ ಪರಂಪರೆಯ ಜೊತೆಗೆ ಚೆನ್ನಕೇಶವಯ್ಯನವರ ಗುರು ಪರಂಪರೆಯೂ ಪ್ರಸಿದ್ಧವಾಗಿತ್ತು. ಇವರು ತ್ಯಾಗರಾಜರ ನೇರ ಪರಂಪರೆಗೆ ಸೇರಿದವರು. ತ್ಯಾಗರಾಜರ ಶಿಷ್ಯರಾದ ಮಾನಂಬುಚಾವಡಿ ವೆಂಕಟಸುಬ್ಬಯ್ಯನವರ ಶಿಷ್ಯರೇ ಪಟ್ಣಂ ಸುಬ್ರಹ್ಮಣ್ಯಯ್ಯರ್. ಪಟ್ಣಂರವರ ಶಿಷ್ಯರು ವಾಸುದೇವಾಚಾರ್ಯರು. ವಾಸುದೇವಾಚಾರ್ಯರ ಪಟ್ಟ ಶಿಷ್ಯರೇ ನಾಟನಹಳ್ಳಿ ಚೆನ್ನಕೇಶವಯ್ಯನವರು. ಗುರುಗಳಲ್ಲಿ ದೀರ್ಘಕಾಲ ಶಿಷ್ಯವೃತ್ತಿ ಮಾಡಿದವರು ಇವರು. ಇದರ ಜೊತೆಗೆ ವೀಣೆ ಶೇಷಣ್ಣನವರು, ಸುಬ್ಬಣ್ಣನವರು, ಟೈಗರ್ ವರದಾಚಾರ್ಯರು, ಬಿಡಾಋಂ ಕೃಷ್ಣಪ್ಪನವರಂಥ ಮಹಾ ವಿದ್ವಾಂಸರ ನಿರಂತರ ಸಾನಿಧ್ಯ ಚೆನ್ನಕೇಶವಯ್ಯನವರಿಗೆ ಲಭಿಸಿತ್ತು. ಹೀಗಾಗಿ ಪ್ರತಿಭಾಶಾಲಿ ಚೆನ್ನಕೇಶವಯ್ಯನವರಿಗೆ ಭವ್ಯ ಪರಂಪರೆ ಹಾಗೂ ಪ್ರಭಾವಶಾಲಿ ಪರಿಸರವು ಪ್ರತಿಭೆಯನ್ನು ಅರಳಿಸುವಲ್ಲಿ ತುಂಬ ಸಹಕಾರಿಯಾಯಿತು.

೧೯೧೪-೧೯೧೫ರ ವೇಳೆಗೆ ಚೆನ್ನಕೇಶವಯ್ಯನವರು ಅಪ್ಪರ್ ಸೆಕೆಂಡರಿ ಟೀಚರ್ಸ್ ಟ್ರೈನಿಂಗ್‌ ಮುಗಿಸಿದ್ದರು. ಇವರು ಚಿತ್ರಕಲೆಯಲ್ಲಿ (ಡ್ರಾಯಿಂಗ್‌) ಡಿಪ್ಲೊಮಾ ಪಡೆದಿದ್ದರು. ಅಲ್ಲದೆ ಕೃಷಿ, ಪಶುವೈದ್ಯಗಳಲ್ಲೂ ಶಿಕ್ಷಣ ಪಡೆದಿದ್ದರು. ಮೈಸೂರಿನ ಶಾರದಾವಿಲಾಸ ಪಾಠಶಾಲೆಯಲ್ಲಿ ೧೯೧೬ರಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಬೋಧಕರಾಗಿ ಡ್ರಾಯಿಂಗ್‌, ಕನ್ನಡ, ಹಿಂದಿ, ಸಂಗೀತ ಮೊದಲಾದ ವಿಷಯಗಳನ್ನು ಕಲಿಸುತ್ತಿದ್ದರು.

ಚೆನ್ನಕೇಶವಯ್ಯನವರು ಶಿಕ್ಷಕ ತರಬೇತಿಯನ್ನು ಪಡೆಯುತ್ತಿದ್ದ ದಿನಗಳಲ್ಲೆ ಆಸ್ಥಾನ ವಿದ್ವಾನ್‌ ವೀಣೆ ಶಿವರಾಮಯ್ಯನವರ ಸಂಗೀತ ಪಾಠಶಾಲೆಯಲ್ಲಿ ಸಂಗೀತಾಭ್ಯಾಸವನ್ನು ಆರಂಭಿಸಿದರು. ಆದರೆ ಪಿತೃವಿಯೋಗದ ದೆಸೆಯಿಂದಾಗಿ ಕುಟುಂಬದ ಹೊರೆಯ ಭಾರ ಹೊತ್ತ ಇವರು ಬಹಳ ಕಾಲ ಅಲ್ಲಿ ಸಂಗೀತ ಪಾಠ ಮುಂದುವರೆಸಲಾಗಲಿಲ್ಲ. ಈ ಮಧ್ಯೆ ಪ್ರತಿ ಏಕಾದಶಿ ದಿನದಂದು ಶಿವರಾಮಯ್ಯನವರ ಮನೆಯಲ್ಲಿ ನಡೆಯುತ್ತಿದ್ದ ಭಜನೆಯ ಕಾರ್ಯಕ್ರಮದಲ್ಲೊಮ್ಮೆ ಚೆನ್ನಕೇಶವಯ್ಯನವರಿಗೆ ವಾಸುದೇವಾಚಾರ್ಯರ ಪರಿಚಯವಾಯಿತು. ಆಚಾರ್ಯರಲ್ಲಿ ಸಂಗೀತಾಭ್ಯಾಸ ಮಾಡಬೇಕೆಂಬ ಆಸೆಯಾಯಿತು. ಆದರೆ ಸ್ವಭಾವತಃ ಆಚಾರ್ಯರು ಯಾರನ್ನೂ ಅಷ್ಟು ಸುಲಭವಾಗಿ ಶಿಷ್ಯರಾಗಿ ಸ್ವೀಕರಿಸುತ್ತಿರಲಿಲ್ಲ. ನಿರಂತರ ಎರಡು ಮೂರು ವರ್ಷಗಳ ಕಾಲ ಆಚಾರ್ಯರ ಸಂಗೀತವನ್ನು ಕೇಳಿ ಚೆನ್ನಕೇಶವಯ್ಯನವರಿಗೆ ಆ ಶೈಲಿಯ ಪ್ರಕಾರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಒಂದು ದಿನ ಚೆನ್ನಕೇಶವಯ್ಯನವರು ಧೈರ್ಯಮಾಡಿ “ನನ್ನನ್ನು ತಮ್ಮ ಶಿಷ್ಯನಾಗಿ ದಯಮಾಡಿ ಸ್ವೀಕರಿಸಬೇಕು” ಎಂದು ಆಚಾರ್ಯರನ್ನು ಕೇಳಿಯೇಬಿಟ್ಟರು. ‘ಸರಿ ನೋಡೋಣ’ ಎಂದು ಹೇಳಿ ಆಚಾರ್ಯರು ರಾತ್ರಿ ಶಂಕರಾಭರಣ ರಾಗದ ಕೃತಿಯೊಂದನ್ನು ಕಲಿಸಿ, ರಾತ್ರಿ ಅಲ್ಲಿಯೇ ಮಲಗಲು ಹೇಳಿದರು. ಮಾರನೆಯ ದಿನ ಬೆಳಗ್ಗೆ ಆಚಾರ್ಯರು ಕೇಳಿದಾಗ ನಿಶಿತಮತಿ ಚೆನ್ನಕೇಶವಯ್ಯನವರು ಚಾಚೂತಪ್ಪದೆ ಕೃತಿಯನ್ನು ಯಥಾವತ್ತಾಗಿ ಒಪ್ಪಿಸಿದರಂತೆ. ಆನಂದಾತಿರೇಕದಿಂದ ಆಚಾರ್ಯರು ಅವರನ್ನು ತಬ್ಬಿಕೊಂಡು, ಅಂದಿನಿಂದ ಚೆನ್ನಕೇಶವಯ್ಯನವರನ್ನು ಶಿಷ್ಯರಾಗಿ ಸ್ವೀಕರಿಸಿದರಂತೆ. ಶಿಷ್ಯನಿಗೆ ಬೇಕಾದ ಗುರುವು ದೊರೆತಿದ್ದರು, ಗುರುವಿಗೆ ಬೇಕಾದ ಶಿಷ್ಯ ದೊರೆತಿದ್ದ, ಹೀಘಾಗಿ ಇವರಿಬ್ಬರ ಬಾಂಧವ್ಯ ಕಾಲಕ್ರಮದಲ್ಲಿ ಅತ್ಯಂತ ಗಾಢವಾಗಿ ಬೆಳೆಯಿತು.

ಉದರ ಪೋಷಣೆಗಾಗಿ ಚೆನ್ನಕೇಶವಯ್ಯನವರು ಬಹಳ ಕಷ್ಟ ಪಡುತ್ತಿದ್ದ ಕಾಲ ಅದು. ಅದನ್ನರಿತ ಆಚಾರ್ಯರು ಶಿಷ್ಯನಿರುವಲ್ಲಿಗೇ ಹೋಗಿ ವಿದ್ಯೆಯನ್ನು ಧಾರೆಯೆರೆಯುತ್ತಿದ್ದರಂತೆ. ಅಲ್ಲದೆ ಆಚಾರ್ಯರು ಇರುವೆಡೆಯಲ್ಲಿಯೇ ಆಶ್ರಯವನ್ನೂ ಕಲ್ಪಿಸಿಕೊಟ್ಟರಂತೆ. ಎಂಥ ಗುರುಶಿಷ್ಯ ಬಾಂಧವ್ಯ! ಸಂಗೀತ ವ್ಯಾಪರೀಕರಣವಾಗುತ್ತಿರುವ ಈ ದಿನಗಳಲ್ಲಿ ಹಿಂದಿನ ಆ ಸಂಬಂಧ ಕಲ್ಪನೆಗೂ ಸಿಗದು ಎಂದರೆ ಆಶ್ಚರ್ಯವಲ್ಲ.

ಸಂಗೀತದ ಅಭ್ಯಾಸ ಕ್ರಮವೂ ಅಷ್ಟೆ. ಸಂಗೀತ ವಿದ್ಯೆ ಒಂದು ತಪ್ಸೆನ್ನುವಂತೆ ಹಗಲೂ ರಾತ್ರಿ ಸಂಗೀತಾಭ್ಯಾಸದಲ್ಲೇ ಮುಳುಗಿ ಬಿಡುತ್ತಿದ್ದರು. ಹಾಗೆಯೇ ಚೆನ್ನಕೇಶವಯ್ಯನವರೂ ಸಹ ಅಹೋ ರಾತ್ರಿ ಸಂಗೀತ ಸಾಧನೆಯನ್ನು ಮಾಡಿದರು. ಸಾಧನೆಯೆನ್ನುವಾಗ ಇಲ್ಲಿ ಒಂದು ಸಾಧನೆಯ ಕ್ರಮ ನೆನಪಾಗುತ್ತದೆ. ಟೈಗರ್ ವರದಾಚಾರ್ಯರು ಕಂಠಮಟ್ಟದವರೆಗೆ ನೀರಿನಲ್ಲಿ ನಿಂತು ಆಕಾರ ಸಾಧನೆ ಮಾಡುತ್ತಿದ್ದರಂತೆ. ಸರಸ್ವತಿ ಪೂಜಿಸಿದಷ್ಟೂ ಒಲಿಯುತ್ತಾಳೆ. ಅಂದರೆ, ಸಾಧನೆ ಮಾಡಿದಷ್ಟು ಫಲ ಮಾತ್ರ ನಮ್ಮ ಮಡಿಲಿಗೆ ಬೀಳುತ್ತದೆ. ಸಂಗೀತಾಭ್ಯಾಸದಲ್ಲೂ ಕೆಲವೊಂದು ಕ್ರಮವನ್ನು ಅನುಸರಿಸಿದಾಗ ಮಾತ್ರ ಅದನ್ನು ಸಾಕಷ್ಟು ಕರಗತ ಮಾಡಿಕಲೊಳ್ಳುವುದು ಸಾಧ್ಯ.

ಹಾಡುವಾಗ ಕುಳಿತುಕೊಳ್ಳಬೇಕಾದ ರೀತಿ, ಆಧಾರ ಶ್ರುತಿಗೆ ಶಾರೀರವನ್ನು ಸೇರಿಸುವ ಕ್ರಮ, ಶ್ವಾಸನಿರೋಧ, ಲಯಶುದ್ಧಿ, ಸಾಹಿತ್ಯೋಚ್ಚಾರಣೆ, ಪದಬಂಧಗಳ ಪರಿಕ್ರಮ, ರಾಗ ವಿಸ್ತಾರ ಕ್ರಮ, ಕಲ್ಪನಾಸ್ವರ ವಿನ್ಯಾಸಕ್ರಮ, ಭಾವ ಪ್ರಾಧಾನ್ಯತೆ, ರಂಜನೆಯ ದೃಷ್ಟಿ, ಗಮಕ ಪ್ರಯೋಗಗಳ ಔಚಿತ್ಯ ಎಲ್ಲವನ್ನೂ ಅರ್ಥ ಮಾಡಿಕೊಂಡು ಹಾಡಿದಾಗ ಮಾತ್ರ ಆ ಹಾಡಿಕೆಯ ಸೌಂಧರ್ಯ ಹಾಗೂ ಕಲೆಯ ಸಾರ್ಥಕತೆ. ಇಂಥ ಕಠಿಣಕ್ರಮವನ್ನು ಚೆನ್ನಕೇಶವಯ್ಯನವರು ತಮ್ಮ ಗುರುಗಳಿಂದ ಸಂಪೂರ್ಣವಾಗಿ ಗ್ರಹಿಸಿ, ಆ ದಿಸೆಯಲ್ಲೇ ಅಭ್ಯಾಸ ಮಾಡಿದರು. ಅವರ ಗುರುಗಳಿಂದ ಬಳುವಳಿಯಾಗಿ ಬಂದ ವಿದ್ಯೆಯನ್ನು ಶಿಷ್ಯರಿಗೆ ಮನಬಿಚ್ಚಿ ಧಾರೆಯೆರೆಯುತ್ತಿದ್ದರು.

ಗುರುವಿನ ವಿದ್ಯೆ ಶಿಷ್ಯರಾದ ಚೆನ್ನಕೇಶವಯ್ಯನವರಲ್ಲಿ ಮೈಗೂಡಿ ಸಾರ್ಥಕತೆಯನ್ನು ಪಡೆದುಕೊಂಡಿತ್ತು. ಅದರಿಂದಾಗಿ ವಿವಿಧ ರೇಡಿಯೋ ಕೇಂದ್ರಗಳಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಜನಮನ್ನಣೆ ಗಳಿಸಿತು. ಅಲ್ಲದೆ ತಿರುವಾಂಕೂರು, ತಿರುಚಿನಾಪಳ್ಳಿ, ಕೊಚ್ಚಿ, ಬರೋಡ, ಇಂದೋರ್‌, ಬೆಂಗಳೂರು, ಮೈಸೂರು ಇತ್ಯಾದಿ ಸ್ಥಳಗಳಲ್ಲಿ ಸಭಾ ಕಚೇರಿಗಳನ್ನು ನೀಡಿ ಜನಮನವನ್ನು ರಂಜಿಸಿದರು. ಚೆನ್ನಕೇಶವಯ್ಯನವರ ಪ್ರತಿಭೆಗೆ ಸಾಕ್ಷಿಯಾಗಿ ಒಂದು ಘಟನೆಯನ್ನು ನೆನೆಯಬಹುದು.

ಮೈಸೂರಿನಲ್ಲಿ ಒಂದುದಿನ ಸಂಜೆ ಮನೆಗೆ ಹಿಂದಿರುಗುವಾಗ ತಮ್ಮಷ್ಟಕ್ಕೆ ತಾವೇ ತೋಡಿರಾಗವನ್ನು ಆಲಾಪನೆ ಮಾಡಿಕೊಂಡು ಹೋಗುತ್ತಿದ್ದರಂತೆ. ಅವರು ಮನೆಯನ್ನು ತಲುಪುವ ವೇಳೆಗೆ ರಾಗಾಲಾಪನೆ ಮುಗಿಯಿತಂತೆ. ಆಗ ಬೆನ್ನ ಮೇಲೆ ಯಾರೋ ಕೈ ಇಟ್ಟು “ಆಹಾ, ಎಷ್ಟೊಂದು ಚೆನ್ನಾಗಿ ತೋಡಿ ರಾಗವನ್ನು ಆಲಾಪನೆ ಮಾಡಿದೆಯಯ್ಯಾ, ನೀನು ಇಷ್ಟು ಚೆನ್ನಾಗಿ ಹಾಡುತ್ತೀ ಎಂದು ನನಗೆ ಗೊತ್ತೇ ಇರಲಿಲ್ಲ” ಎಂದರಂತೆ. ಇವರನ್ನು ಹಿಂಬಾಲಿಸಿ ಬಂದಿದ್ದವರು ಮಹಾನ್‌ ಗಾಯಕರಾದ ಟೈಗರ್‌ ವರದಾಚಾರ್ಯರು.

ಚೆನ್ನಕೇಶವಯ್ಯನವರ ಹಾಗೂ ಅವರ ಗುರುಗಳ ಬಾಂಧವ್ಯ ಅತ್ಯಂತ ಆತ್ಮೀಯವಾದದ್ದು. ಹಾಗಾಗಿಯೇ ಪ್ರಾಯಶಃ ಆಚಾರ್ಯರು ತಮ್ಮ ಎಲ್ಲ ಕೆಲಸಗಳಲ್ಲೂ ಚೆನ್ನಕೇಶವಯ್ಯನವರ ಸಲಹೆಯನ್ನು ಪಡೆಯುತ್ತಿದ್ದರು. ಆಚಾರ್ಯರ ಕೃತಿ ರಚನೆಗಳ ಸ್ವರ ಹಾಗೂ ಸಾಹಿತ್ಯದ ಔಚಿತ್ಯವನ್ನು ಶಿಷ್ಯ ಚೆನ್ನಕೇಶವಯ್ಯನವರು ಮಾಡಿದರೇ ಆಚಾರ್ಯರಿಗೆ ತೃಪ್ತಿ. ಅಷ್ಟೇ ಅಲ್ಲ ಅವರ ಗುರುಗಳ ಸಂಗೀತ ಕಚೇರಿಯ ಸಂಪೂರ್ಣ ಪಟ್ಟಿಯನ್ನು ತಯಾರು ಮಾಡುವ ಜವಾಬ್ದಾರಿಯನ್ನು ಚೆನ್ನಕೇಶವಯ್ಯನವರೇ ಹೊತ್ತು ಕೊಂಡಿದ್ದರು. ಇಂಥಹ ಅನೇಕ ಸಂದರ್ಭಗಳು ಅವರ ಜೀವನದಲ್ಲಿ ಬಂದಿದೆ. ಸ್ವಭಾವತಃ ವಾಸುದೇವಾಚಾರ್ಯರಿಗೆ ಸಭಾಕಂಪ, ಜೊತೆಗೆ ಬಿಡಾರಂ ಕೃಷ್ಣಪ್ಪನವರನ್ನು ಕಂಡರೆ ಕಹೆದರಿಕೆ ಬೇರೆ. ಹಾಗಾಗಿ ಒಂದು ಸಾರಿ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ವಾಸುದೇವಾಚಾರ್ಯರ ಕಚೇರಿ ಏರ್ಪಾಡಾಗಿದ್ದ ಸಂದರ್ಭದಲ್ಲಿ “ಕಚೇರಿ ಖಂಡಿತ ಕೆಟ್ಟು ಹೋಗುತ್ತೆ” ಎಂಬ ಅಪಸ್ವರದ ನುಡಿ ಚೆನ್ನಕೇಶವಯ್ಯನವರ ಕಿವಿಗೆ ಬಿದ್ದು ಬೇಸರವಾಯಿತಂತೆ. ಹಾಗಾಗಿ ಆಚಾರ್ಯರ ಮನಸ್ಸಿನಲ್ಲಿ ಛಲ ಹುಟ್ಟುವಂತೆ ಮಾಡಿ, ಅವರ ಕಚೇರಿ ತುಂಬಾ ಯಶಸ್ವಿಯಾಗುವಂತೆ ಮಾಡಿದರಂತೆ. ಇದಕ್ಕಾಗಿ ಎಲ್ಲರಿಂದ ಮುಕ್ತ ಪ್ರಶಂಸೆ ದೊರೆಯಿತಂತೆ.

ಇನ್ನೊಮ್ಮೆ ಮದರಾಸಿನ ಮ್ಯೂಸಿಕ್‌ ಅಕಾಡೆಮಿಯ ಒಂದು ಅಧಿವೇಶನದಲ್ಲಿ ಆಚಾರ್ಯರನ್ನು ಹಾಡುವಂತೆ ಪ್ರೇರೇಪಿಸಿ ಹಾಡಿಸಿದ ಯಶಸ್ಸೂ ಚೆನ್ನಕೇಶವಯ್ಯನವರದೇ. ಚೆನ್ನಕೇಶವಯ್ಯನವರ ಇಂಗಿತವನ್ನು ಅರಿತ ಟೈಗರ್‌ ವರದಾಚಾರ್ಯರು ಧಿಗ್ಗನೆದ್ದು ಬಂದು ಆಚಾರ್ಯರನ್ನು ಬಲವಂತವಾಗಿ ಕೈ ಹಿಡಿದುಕೊಂಡು ಬಂದು ವೇದಿಕೆಯ ಮೇಲೆ ಕುಳ್ಳಿರಿಸಲು ಕಾರಣ ಚೆನ್ನಕೇಶವಯ್ಯನವರು. ಜನರೆಲ್ಲ ಪಟ್ಣಂಸುಬ್ರಹ್ಮಣ್ಯ ಅಯ್ಯರ್ ರವರ ಸಂಗೀತವನ್ನೇ ಕೇಳಿದಂತಾಯಿತು ಎಂದು ಸಂತೋಷ ಪಟ್ಟರಂತೆ. ಶಿಷ್ಯನ ಈ ಗುರುಭಕ್ತಿಯನ್ನು ಕಂಡು ಆಚಾರ್ಯರಿಗೆ ಎಷ್ಟು ಸಂತೋಷವಾಗಿರಬೇಡ.

ಚೆನ್ನಕೇಶವಯ್ಯನವರದು ನಿಶಿತಮತಿ. ಅವರನ್ನು ಏಕಸಂಧಿಗ್ರಾಹಿ ಎಂದರೂ ತಪ್ಪಾಗಲಾರದು. ಒಮ್ಮೆ ಒಂದು ಕೃತಿಯನ್ನು ಕೇಳಿದರೆಕಲ ಸಾಕು, ಒಂದೇ ಒಂದು ಸ್ವರವೂ ಬದಲಾಗದಂತೆ ಆ ಕೃತಿಯನ್ನು ಹಾಡುವ ಶಕ್ತಿ ಅವರಿಗೆ ದೈವದತ್ತವಾಗಿ ಬಂದಿತ್ತೇನೋ? ಹಾಗಾಗಿ ಒಮ್ಮೆ ಕೇಳಿದ ಕೃತಿಯನ್ನು ಸ್ವರಪ್ರಸ್ತಾರ ಹಾಕಿ ಬರೆಯುವ ಅಸಾಧಾರಣ ಕಲೆಯೂ ಅವರಿಗೆ ಚಿಕ್ಕಂದಿನಿಂದಲೇ ಮೈಗೂಡಿತ್ತು. ಈ ಒಂದು ಅಸಾಧಾರಣ ಶಕ್ತಿಯ ಬಲದಿಂದಲೇ ತಾನೇ ಚೆನ್ನಕೇಶವಯ್ಯನವರು ಆಚಾರ್ಯರ ಶಿಷ್ಯರಾದದ್ದೂ ಕೂಡ. ಇದರಿಂದ ವಾಸುದೇವಾಚಾರ್ಯರ ಕೃತಿಗಳು ಲಿಖಿತರೂಪಕ್ಕಿಳಿಯಲು ಬಹುಮಟ್ಟಿಗೆ ಚೆನ್ನಕೇಶವಯ್ಯನವರು ಕಾರಣೀಭೂತರಾದರು.

ಒಮ್ಮೆ ಹೀಗಾಯಿತಂತೆ. ಮುತ್ತಯ್ಯ ಭಾಗವತರು ರಚಿಸಿದ ‘ಮಾನಮು ಕಾವಲೆನು ತಲ್ಲಿ’ ಎಂಬ ಶಹನಾರಾಗದ ಕೃತಿಯನ್ನು ಬರೆದಿಡಬೇಕಾಯಿತು. ಭಾಗವತರು ಹಾಡುತ್ತ ಹೋದರು. ಚೆನ್ನಕೇಶವಯ್ಯನವರು ಬರೆಯುತ್ತಾ ಹೋದರು. ಭಾಗವತರು ಕೃತಿಯನ್ನು ಹಾಡಿ ಮುಗಿಸಿದ ಕಮೇಲೆ ಚೆನ್ನಕೇಶವಯ್ಯನವರು ಸ್ವರಪ್ರಸ್ತಾರ ಹಾಕಿಕೊಂಡು ಬರೆದುಕೊಂಡಿದ್ದ ಕೃತಿಯನ್ನು ಚಾಚೂ ತಪ್ಪದೆ ಮುತ್ತಯ್ಯ ಭಾಗವತರು ಹಾಡಿದಂತೆಯೇ ಹಾಡಿ ಬಿಟ್ಟರಂತೆ. ಭಾಗವತರಿಗೆ ಆಶ್ಚರ್ಯ, ಜೊತೆಗೆ ಸಂತೋಷವಾಯಿತಂತೆ.

ಚೆನ್ನಕೇಶವಯ್ಯನವರ ಅಸಾಧಾರಣ ಸ್ಮರಣಶಕ್ತಿ, ಅತಿಸೂಕ್ಷ್ಮ ಸ್ವರ ಲಯ ಜ್ಞಾನದ ಪ್ರಭಾವದಿಂದಾಗಿ ಎಷ್ಟೋ ಪ್ರಾಚೀನ ಗೇಯ ಕೃತಿಗಳು ಸ್ವರಲಿಪಿ ಸಹಿತವಾಗಿ ಗ್ರಂಥಸ್ಥವಾಗಿ ಇಂದು ನಮಗೆಲ್ಲರಿಗೂ ಮುಂದಿನ ತಲೆಮಾರಿನವರಿಗೂ ಬಳುವಳಿಯಾಗಿ ಉಳಿದಿದೆ. ಚೆನ್ನಕೇಶವಯ್ಯನವರ ವಿದ್ವತ್ತು ಬಹಳ ಹಿರಿದು. ಮೈಸೂರು ಸದಾಶಿವರಾಯರ ಹಲವು ಕೃತಿಗಳ ಸಾಹಿತ್ಯ, ಸ್ವರ ವಿನ್ಯಾಸ ಇವರಿಂದಾಗಿಯೇ ನಮಗುಳಿದಿರುವುದು. ಸದಾಶಿವರಾಯರ ಎರಡು ಸಂಕಲನಗಳನ್ನು ಅರ್ಥ, ವರ್ಣಮಟ್ಟು, ರಾಗಲಕ್ಷಣಗಳ ಸಹಿತ ಮುಂದಿನ ಪೀಳಿಗೆಗೆ ಬಿಟ್ಟುಹೋಗಿದ್ದಾರೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ೯೪ ಕೃತಿಗಳನ್ನು ಅವುಗಳ ಸ್ವರಸಹಿತ ಪಾಠವನ್ನು ಸಿದ್ಧಪಡಿಸಿದ್ದರು. ಅಲ್ಲದೆ ಚಿಂತಲಪಲ್ಲಿ ವೆಂಕಟರಾಯರ ತಾತಂದಿರಾದ ಗವಿರಂಗದಾಸರ ೭೫ ಕೀರ್ತನೆಗಳನ್ನೂ ಚೆನ್ನಕೇಶವಯ್ಯನವರು ಸ್ವರಪಡಿಸಿಟ್ಟರು.

ಚೆನ್ನಕೇಶವಯ್ಯನವರು ಸಂಗೀತ ಶಾಸ್ತ್ರಪಂಡಿತರು ವಿದ್ವಾಂಶರು. ಇದರಿಂದಾಗಿ ‘ಹರಿದಾಸ ಕೀರ್ತನ ಸುಧಾಸಾಗರ’ ಎಂಬ ದಾಸಸಾಹಿತ್ಯದ ಮೂರು ಸಂಪುಟಗಳನ್ನೂ ಅಣಿಗೊಳಿಸಿ ಪ್ರಕಟಿಸಿದರು. ಇದರಲ್ಲಿ ಪುರಂದರದಾಸರು, ಕನಕದಾಸರು, ಶ್ರೀಪಾದರಾಜರು, ವಾದಿರಾಜರು, ವ್ಯಾಸತೀರ್ಥರು ಇತ್ಯಾದಿ ದಾಸಶ್ರೇಷ್ಠರ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸ್ವರಪಡಿಸಿ, ಕೃತಿಗಳ ಅರ್ಥ, ರಾಗಲಕ್ಷಣ, ಕೃತಿಕಾರರ ಮಾಹಿತಿಯನ್ನೂ ನೀಡಿ ಪ್ರಕಟಿಸಿದ್ದಾರೆ. ಇಂಥ ಅಮೂಲ್ಯ ಗ್ರಂಥ ರಚನೆ ಚೆನ್ನಕೇಶವಯ್ಯ ನವರಂಥ ವಿದ್ವನ್‌ ಮಣಿಗಳಿಗಲ್ಲದೆ ಬೇರಾರಿಗೆ ತಾನೇ ಇಂಥ ಕೆಲಸ ಸಾಧ್ಯವಾದೀತು. ಚೆನ್ನಕೇಶವಯ್ಯನವರು ಡಿ.ವಿ.ಜಿ. ಯವರ ಆಸೆಯ ಮೇರೆಗೆ ‘ಹನುಮದ್ವಿಲಾಸ’ ಕಾವ್ಯವನ್ನು ಸ್ವರಬದ್ಧಗೊಳಿಸಿದರು. ಅಲ್ಲದೆ ಡಿ.ವಿ.ಜಿ. ಯವರ ಪ್ರೇರಣೆಯಂತೆ ಹಿಂದಿನವರಾರೋ ರಚಿಸಿದ್ದ “ಪಾರ್ಥಸಾರಥಿ ಕೀರ್ತನಂ” ಎಂಬಗ ಗೇಯ ಕೃತಿಗೆ ಅಷ್ಟಾದಶ ರಾಗಮಾಲಿಕೆಯ ಸ್ವರ ಪ್ರಸ್ತಾರ ಹಾಕಿ ಜನತೆಗೆ ನೀಡಿದರು.

ಚೆನ್ನಕೇಶವಯ್ಯನವರು ವೇದಿಕೆಯ ಹಾಡುಗಾರರಾಗಿ ಸಂಗೀತ ಕಚೇರಿಗಳನ್ನು ಮಾಡಿ ಪ್ರಸಿದ್ಧರಾಗಿದ್ದುದಕ್ಕಿಂತ ಹೆಚ್ಚಾಗಿ ಅವರು ಸಂಗೀತ ಶಾಸ್ತ್ರಾಧಿಕಾರ, ಸಂಪ್ರದಾಯ ಪಾಂಡಿತ್ಯ, ಸಂಗೀತ ಲಕ್ಷಣ ಜ್ಞಾನ, ವರ್ಣ, ಕೃತಿ, ಪಲ್ಲವಿಗಳ ಸಂಗ್ರಹಕಾರರಾಗಿ ಸಂಗೀತ ಪ್ರಪಂಚದ ವಿದ್ವನ್ಮಣಿಗಳೆನ್ನಿಸಿದರು. ಚೆನ್ನಕೇಶವಯ್ಯನವರು ಅವರ ಹರೆಯದಲ್ಲಿ ಸಾಕಷ್ಟು ಸಂಗೀತ ಕಚೇರಿಗಳನ್ನು ಮಾಡಿ ವಾಸುದೇವಾಚಾರ್ಯರಿಗೆ ತಕ್ಕ ಶಿಷ್ಯರೆಂದು ಹೆಸರು ಮಾಡಿ ಜನಮನ್ನಣೆಗಳಿಸಿದ್ದಂತೂ ನಿಜವಾದರೂ ಮುಂದಿನ ವರ್ಷಗಳಲ್ಲಿ ಶಾಸ್ತ್ರಜ್ಞಾನ ಪಂಡಿತರಾಗಿ ಮೆರೆದರು.

ನಾನು ಅವರಲ್ಲಿ ಪಾಠಕ್ಕೆ ಸೇರುವ ವೇಳೆಗೆ ಅವರು ಸಂಗೀತ ಕಚೇರಿಗಳನ್ನು ನೀಡುವುದನ್ನು ನಿಲ್ಲಿಸಿಬಿಟ್ಟಿದ್ದರೆಂದೇ ಹೇಳಬಹುದು. ಆದರೆ ಅವರಿಗೆ ಸಂಗೀತಜ್ಞಾನ ದಾಹ ಬಹಳ ಹೆಚ್ಚಾಗಿದ್ದುದರಿಂದ ಆ ನಿಟ್ಟಿನಲ್ಲೇ ಹೆಚ್ಚು ಹೆಚ್ಚು ಕೆಲಸವನ್ನು ಮಾಡಿದರು. ಅವರು ತಮ್ಮ ಸ್ವಂತ ಜ್ಞಾನಾಭಿವೃದ್ಧಿಯ ಜೊತೆಗೆ, ಇತರರಿಗೂ ತಮ್ಮ ಜ್ಞಾನವನ್ನು ಹಂಚುವುದರಲ್ಲೇ ತಮ್ಮ ಜೀವಿತಾವಧಿಯನ್ನು ಕಳೆದರು ಎಂದರೆ ಉತ್ಪ್ರೇಕ್ಷೆಯಾಗಲಾರದು. ಅವರ ಈ ಸೌಜನ್ಯದ ಸ್ವಭಾವದಿಂದಾಗಿ ಬಹಳ ಸಂಗೀತಗಾರರು ಉಪಕೃತರಾಗಿದ್ದಾರೆ. ಯಾರಿಗೆ ಯಾವ ಕೃತಿ, ಸಾಹಿತ್ಯ ಬೇಕಾದರೂ ಸಂತೋಷ, ಶ್ರದ್ಧೆಯಿಂದ ಒದಗಿಸಿ ಕೊಡುತ್ತಿದ್ದರು.

ಬೆಂಗಳೂರು, ಮೈಸೂರು ಪ್ರಾಂತ್ಯಗಳಲ್ಲಂತೂ ಸಂಗೀತದ ಬಗ್ಗೆ ಯಾರಿಗೆ ಯಾವ ಜಿಜ್ಞಾಸೆ ತಲೆದೋರಿದರೂ “ಚೆನ್ನಕೇಶವಯ್ಯನವರನ್ನು ಕೇಳಿದರೆಕ ಸಮಸ್ಯೆ  ಪರಿಹಾರವಾಗುತ್ತದೆ” ಎನ್ನುವಷ್ಟರ ಮಟ್ಟಿಗೆ ಮನೆಮಾತಾಗಿತ್ತು ಅವರ ಪಾಂಡಿತ್ಯದ ಔನ್ನತ್ಯ. ಅವರ ಜ್ಞಾನದಾಹಕ್ಕೆ ಕೈಗನ್ನಡಿಯಾಗಿ “ರಾಗಾಲಾಪನ ಪದ್ಧತಿ, ತಾನ ಮತ್ತು ಪಲ್ಲವಿ” ಕೃತಿಯಲ್ಲಿ ೧೮೧ ಪಲ್ಲವಿಗಳನ್ನು ಸ್ವರಸಮೇತ ಕೊಟ್ಟಿದ್ದಾರೆ. ಅಲ್ಲದೆ, ೧೪೮ ಪಲ್ಲವಿಗಳಿಗೆ ಸಾಹಿತ್ಯವನ್ನೂ ಒದಗಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಸಂಗೀತಕಲೆ ಹಾಗೂ ವಾಗ್ಗೇಯಕಾರರ ಬಗ್ಗೆ ಅನೇಕ ಭಾಷಣಗಳನ್ನೂ ನಡೆಸಿಕೊಟ್ಟಿದ್ದಾರೆ. ಇವರು ಹಲವು ಸಂಚಿಕೆಗಳಿಗಾಗಿ ಲೇಖನಗಳನ್ನೂ ಬರೆಯುತ್ತಿದ್ದರು. ವೈಣಿಕ ಪ್ರವೀಣ ವೀಣೆ ಸುಬ್ಬಣ್ಣನವರ ಜೀವನ ಚರಿತ್ರೆಯನ್ನು ಬರೆದರು. ಶ್ರೀ ಗೋವಿಂದದಾಸರ ಭಜನ ಪದ್ಧತಿ ಎಂಬ ಸಂಕಲನವನ್ನು ಸಿದ್ಧಪಡಿಸಿದರು. “ತಿರುಮಲಾರ್ಯನ ಗೀತಗೋಪಾಲ” ಕಾವ್ಯದ ಸಾಹಿತ್ಯಗುಣ, ಸಂಗೀತಾಂಶ ಕುರಿತು ಸುದೀರ್ಘ ವ್ಯಾಖ್ಯಾನ ಬರೆದರು. ಹಲವು ಆಯ್ದ ಕೃತಿಗಳಿಗೆ ಸ್ವರಪ್ರಸ್ತಾರವನ್ನೂ ಹಾಕಿದರು. ಇವರು ಮದರಾಸಿನಲ್ಲಿ ಪ್ರತಿವರ್ಷ ನಡೆಯುವ ಸಂಗೀತ ಸಮ್ಮೇಳನಗಳ ವಿದ್ವದ್ಗೋಷ್ಟಿಗಳಲ್ಲಿ ಭಾಗವಹಿಸುತ್ತಿದ್ದರು. ಮೈಸೂರು, ಬೆಂಗಳೂರು, ಟಿ. ನರಸೀಪುರ ಮುಂತಾದ ಕಡೆ ನಡೆದ ಸಂಗೀತ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. ಚೆನ್ನಕೇಶವಯ್ಯನವರು ಮದರಾಸಿನ ವಿದ್ವತ್‌ ಪರಿಷತ್ತಿನ ತಜ್ಞ ಸಲಹೆಗಾರ ಸಮಿತಿಯ ಸದಸ್ಯರಾಗಿದ್ದರು. ಅಲ್ಲಿ ದಾಸಸಾಹಿತ್ಯ, ವಿದ್ವಜ್ಜನರ ಶರಣಸಾಹಿತ್ಯ ಇತ್ಯಾದಿ ಹಲವಾರು ವಿಷಯಗಳ ಕುರಿತು ಗೋಷ್ಠಿಗಳಲ್ಲಿ ಉಪನ್ಯಾಸ ಮಾಡಿ, ಕೃತಿಗಳನ್ನು ಹಾಡಿತೋರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಇಂಥ ಉದ್ದಾಮ ಪಂಡಿತರೂ, ವಿದ್ವಾಂಸರೂ ಆಗಿದ್ದ ಚೆನ್ನಕೇಶವಯ್ಯನವರು ತೀರ ಸರಳ ವ್ಯಕ್ತಿಯಾಗಿದ್ದರು. ಮಗುವಿನಂಥ ಮುಗ್ಧ ಸ್ವಭಾವ ಇವರದು. ಬಿಚ್ಚುಮನಸ್ಸಿನಿಂದ ಶಿಷ್ಯರಿಗೆ ಪಾಠ ಕಲಿಸುತ್ತಿದ್ದರು. ಅವರ ಮನೆಯೇ ಒಂದು ಸರಸ್ವತಿಯ ದೇಗುಲವಾಗಿತ್ತು. ಸದಾ ಹಲವಾರು ವಿದ್ವಾಂಸರು ಅಲ್ಲಿಗೆ ಬರುತ್ತಿದ್ದರು. ವಾಸುದೇವಾಚಾರ್ಯರು, ರಾಳ್ಳಪಲ್ಲಿ ಅನಂತಕೃಷ್ಣಶರ್ಮರು, ಚಿಂತಲಪಲ್ಲಿ ವೆಂಕಟರಾಯರು, ಚಿಂತಲಪಲ್ಲಿ ರಾಮಚಂದ್ರರಾಯರು, ಬಿ. ಸುಬ್ಬರಾಯರು, ಎ.ವಿ. ಕೃಷ್ಣಮಾಚಾರ್ಯರು ಇತ್ಯಾದಿ ವಿದ್ವಾಂಸರುಗಳು ಅವರಲ್ಲಿಗೆ ಸದಾ ಬರುತ್ತಿದ್ದರು. ಅವರೆಲ್ಲರ ಮುಂದೆ ನನ್ನನ್ನು ‘ಹಾಡು’ ಎಂದು ಹೇಳಿಬಿಡುತ್ತಿದ್ದರು. ನನಗೋ ಭಯ, ಅಂತಹ ಘನ ವಿದ್ವಾಂಸರ ಮುಂದೆ ಹೇಗೆ ಹಾಡುವುದೆಂದು. “ಧೈರ್ಯವಾಗಿ ಹಾಡು, ಇಂತಹವರ ಆಶೀರ್ವಾದ ನಿನಗೆ ಬೇಕು” ಎಂದು ಹೇಳಿ ಗುರುಗಳು ನನ್ನಿಂದ ಹಾಡಿಸುತ್ತಿದ್ದರು.

ನಾಗಪುರದ ಬಿ. ಸುಬ್ಬರಾಯರು ಸದಾ ಗುರುಗಳ ಮನೆಗೆ ಬರುತ್ತಿದ್ದರು. ಅವರು ಹಿಂದಿಯಲ್ಲಿ ವರ್ಣಗಳು, ಕೀರ್ತನೆಗಳು ಹಾಗೂ ಬಿಡಿ ಹಾಡುಗಳನ್ನು ರಚಿಸಿದ್ದರು. ನಿಂಗೆ ಹಿಂದಿ ಹಾಡುಗಳು ಹಾಡೋಕೆ ಇಷ್ಟತಾನೇ? (ಆಗ ಹಿಂದಿ ಸಿನಿಮಾ ಹಾಡುಗಳನ್ನು ತುಂಬಾ ಹಾಡುತ್ತಿದ್ದೆ) “ಇವರ ಹತ್ತಿರ ಹೋಗಿ ವರ್ಣ, ಕೀರ್ತನೆಗಳನ್ನು ಕಲಿ” ಎಂದು ಹೇಳಿದರು. ಎಂಥಾ ವಿಶಾಲ ಮನೋಭಾವ! ಮಾತ್ಸರ್ಯವೇ ಕಂಡರಿಯದ ವಿನಮ್ರ ಜೀವಿ. ಕೃಷ್ಣಮಾಚಾರಿ ಹತ್ತಿರ ಕನ್ನಡ ಗೀತೆ ಕಲೀತಿದ್ದೀಯೋ? ಸರಿ. ಒಳ್ಳೇದು ಎಂದು ಅದಕ್ಕೂ ಒಳ್ಳೇ ಮಾತಾಡಿದರು. ಮಡಿವಂತಿಕೆಯ ಸಂಗೀತದ ವಲಯದಲ್ಲಿದ್ದೂ ಹೃದಯ ವೈಶಾಲ್ಯತೆ ತೋರಿಸಿದ್ದರು. ಕುವೆಂಪುರವರ “ಗುರಿ ಯಾವುದೆಂದೆನ್ನ ಕೇಳುವರು ಎನ್ನ” ಎಂಬ ಕವನಕ್ಕೆ ಶ್ರೀರಂಜನಿ ರಾಗ ಸಂಯೋಜಿಸಿ ನನಗೆ ಕಲಿಸಿದ್ದರು. ಹಿಂದೆ ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಮಾಡುತ್ತಿದ್ದಾಗ ಈ ವರ್ಣ ಹಾಡು, ಕೀರ್ತನೆ ಇದನ್ನು ಹಾಡು ಎಂದೂ ಆಲಾಪನೆ, ನೆರವಲು, ಸ್ವರ ಪ್ರಸ್ತಾರ ಯಾವ ಯಾವ ಕೃತಿಗಳಿಗೆ ಮಾಡಬೇಕೆಂದೂ ಹೇಳಿಕಳುಹಿಸುತ್ತಿದ್ದರು.

ಇಂತಹ ಉತ್ತಮ ಪಂಡಿತ ಹಾಗೂ ವಿದ್ವಾಂಸರಿಗೆ ಹಲವು ಮನ್ನಣೆ, ಸನ್ಮಾನ, ಪ್ರಶಸ್ತಿಗಳು ದೊರೆತಿದ್ದವು. ಸಂಗೀತರತ್ನ ಟಿ.ಚೌಡಯ್ಯ ಪ್ರಶಸ್ತಿ, ಗಾಯನ ಸಮಾಜದ ಪ್ರಶಸ್ತಿ ಲಭಿಸಿತು. ೧೯೬೯ರಲ್ಲಿ ತಿರುಮಕೂಡಲು ನರಸೀಪುರದಲ್ಲಿ ಇವರಿಗೆ ಸಂಗೀತ ವಿದ್ಯಾನಿಧಿ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು. ೧೯೬೯ ರಲ್ಲಿ ಬೆಂಗಳೂರಿನ ಗಾಯನ ಸಮಾಜದ ಪ್ರಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೪೪ರಿಂದ ಅರಮನೆಯ ‘ಆಸ್ಥಾನ ವಿದ್ವಾಂಸರಾಗಿದ್ದರು. ೧೯೬೩ರಲ್ಲಿ ಮೈಸೂರಿನ ಪ್ರಸನ್ನ ಸೀತಾರಾಮಮಂದಿರದ ಆರನೆಯ ಸಮ್ಮೇಳನದ ಅಧ್ಯಕ್ಷರಾಗಿ, ಅಲ್ಲಿ ಗಾನಕಲಾಸಿಂಧು ಎಂಬ ಬಿರುದನ್ನು ಪಡೆದರು ಹಾಗೂ, ೧೯೭೧ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಮತ್ತು ಅದೇ ವರ್ಷ “ಕೀರ್ತನ ಸುಧಾ ಸಾಗರ” ಮಾಲಿಕೆಯ ಮೊದಲ ಸಂಪುಟಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಯೂ ಇವರಿಗೆ ಲಭಿಸಿತು.