ಹೆಬ್ಬಾರ್ ಅಯ್ಯಂಗಾರ್ ಮತಸ್ಥರಾದ ನರಸಿಂಹ ಐಯ್ಯಂಗಾರ್ ಮತ್ತು ರುಕ್ಕಮ್ಮನವರ ಕೊನೆಯ ಪುತ್ರಿಯಾಗಿ ತಾರೀಖು ೧೮.೯.೧೯೨೨ ರಲ್ಲಿ ಬೆಂಗಳೂರಿನಲ್ಲಿ ಇವರ ಜನನವಾಯಿತು. ಇವರಿಗೆ ಐದು ಜನ ಅಕ್ಕಂದಿರು ಹಾಗೂ ನಾಲ್ಕು ಜನ ಅಣ್ಣಂದಿರು. ಇವರ ಸಹೋದರೆಲ್ಲಾ ಆಗಿನ ಕಾಲದಲ್ಲಿಯೇ ಗೌರವಾರ್ಹವಾದ ಹುದ್ದೆಯಲ್ಲಿದ್ದರು. ಇವರ ಇಬ್ಬರು ಸಹೋದರರು ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಮನೆತನದವರೆಲ್ಲಾ ಕಾಂಗ್ರೆಸ್‌ ಪಕ್ಷದವರು. ಇವರ ಮಾತೃಶ್ರೀಯನ್ನು ಕಾಂಗ್ರೆಸ್‌ ರುಕ್ಕಮ್ಮ ಎಂದೇ ಜನ ಕಾಣುತ್ತಿದ್ದರು.

ಚೊಕ್ಕಮ್ಮನವರ ಸಹೋದರಿ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಇವರ ಯಜಮಾನರು ಗಂಧದೆಣ್ಣೆ ಕಾರ್ಖಾನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅನೇಕ ವರ್ಷಗಳು ಮಕ್ಕಳಿಲ್ಲದ ಕಾರಣ ಇವರು ಚೊಕ್ಕಮ್ಮನನ್ನೇ ಅವರ ಎರಡನೆಯ ವಯಸ್ಸಿನಲ್ಲಿಯೇ ತಮ್ಮೊಂದಿಗೆ ಇಟ್ಟುಕೊಂಡು ವಾತ್ಸಲ್ಯದಿಂದ ಸಾಕಿ, ಎಸ್‌.ಎಸ್‌.ಎಲ್‌.ಸಿ ವರೆಗೆ ಓದಿಸಿದರು. ಚೊಕ್ಕಮ್ಮನವರ ತಾಯಿ ಮತ್ತು ಸಹೋದರಿಯವರಿಗೆ ಅಲ್ಪ ಸ್ವಲ್ಪ ಸಂಗೀತ ಬರುತ್ತಿದ್ದ ಕಾರಣ ಚೊಕ್ಕಮ್ಮನವರು ಇವರುಗಳಿಂದ ತಮ್ಮ ಐದನೆಯ ವಯಸ್ಸಿನಲ್ಲಿಯೇ ಹಾರ್ಮೋನಿಯಂ ನುಡಿಸಲು ಮತ್ತು ಭಕ್ತಿಗೀತೆಗಳನ್ನು ಹಾಡಲು ಕಲಿತರು. ಭಾವನವರು ಪಿಟೀಲು ನುಡಿಸುತ್ತಿದ್ದರು. ಹೀಗೆ ಚೊಕ್ಕಮ್ಮನವರಿಗೆ ಮನೆಯವರಿಂದ ಪ್ರೋತ್ಸಾಹ ದೊರಕಿತು.

ತಮ್ಮ ಏಳನೆಯ ವಯಸ್ಸಿನಲ್ಲಿ ಆಟವಾಡುತ್ತಾ ಹಾಡಿಕೊಳ್ಳುತ್ತಿದ್ದ ಈಕೆಯನ್ನು ಒಬ್ಬ ವಿದ್ವಾಂಸರು ಕಂಡು ಈಕೆಯ ಕಂಠ ಮಾಧುರ್ಯಕ್ಕೆ ಬೆರಗಾಗಿ, ತಾವೇ ಇವರಿಗೆ ಪ್ರಪ್ರಥಮ ಗುರುವಾದರು. ಅವರೇ ವಿರೂಪಾಕ್ಷ ಶಾಸ್ತ್ರಿಗಳು. ಶಾಸ್ತ್ರಿಗಳು ವೀಣಾ ವಿದ್ವಾಂಸರೂ ಆಗಿದ್ದ ಕಾರಣ, ಚೊಕ್ಕಮ್ಮನವರಿಗೆ ವೀಣೆ ನುಡಿಸಿಕೊಂಡೇ ಹಾಡುವ ಅಭ್ಯಾಸವನ್ನು ಮಾಡಿಸಿದರು. ಶಾಸ್ತ್ರಿಗಳು ತಮ್ಮ ಸ್ವಂತ ಊರಿಗೆ ತೆರಳಿದಾಗ ಚೊಕ್ಕಮ್ಮನವರಿಗೆ ಪಾಠ ತಪ್ಪಿತು. ಇವರು ಸ್ವರಜತಿಗಳ ಪಾಠವನ್ನು ಸ್ವರಮೂರ್ತಿ ವಿ.ಎನ್‌. ರಾವ್‌ರವರಿಂದಲೂ ಅನಂತರ ವೀಣೆ ಸುಬ್ಬಣ್ಣನವರ ನೆಚ್ಚಿನ ಶಿಷ್ಯರಾದ ವಿದ್ವಾನ್‌ ದೇವಪ್ಪನವರಿಂದಲೂ ಮುಂದೆ ಟಿ.ಎಂ. ಪುಟ್ಟಸ್ವಾಮಯ್ಯ ಮತ್ತು ಶ್ರೀ ತಿಟ್ಟೆಕೃಷ್ಣಯ್ಯಂಗಾರ್ ರವರಲ್ಲೂ ಪಾಠ ಮುಂದುವರಿಸಿದರು.

ತಬಲಾ ಶೇಷಪ್ಪನವರು ಇವರಿಗೆ ಉತ್ತಮ ಸಲಹೆಗಳನ್ನು ನೀಡುವುದರಲ್ಲಿಯೂ, ಇವರಿಗೆ ಸದಾಕಾಲಲ ತಬಲಾ ಪಕ್ಕವಾದ್ಯ ನುಡಿಸಿಯೂ ಪ್ರೋತ್ಸಾಹಿಸಿದರು. ಇವರ ಸಹಕಾರದಿಂದ ಸಂಗೀತ ಕಲಾನಿಧಿ ವಾಸುದೇವಾಚಾರ್ಯರವರಲ್ಲಿ ಪಾಠ ಮಾಡುವ ಭಾಗ್ಯ ಇವರಿಗೆ ಒದಗಿ ಬಂತು. ಈ ದಿಗ್ಗಜರಿಂದ ಪಾಠ ಮಾಡಿ ಪುಟಕ್ಕಿಟ್ಟ ಚಿನ್ನದಂತೆ ಇವರ ಸಂಗೀತಕ್ಕೆ ಮೆರುಗು ಬಂದಿತು. ಪ್ರಸಿದ್ಧ ವಿದ್ವಂಸರದ ಆಲಂಗುಡಿ ರಾಮಚಂದ್ರನ್‌ರವರೊಂದಿಗೂ ಅಭ್ಯಾಸ ಮಾಡಿದ್ದಾರೆ.

ಚೊಕ್ಕಮ್ಮನವರ ಅಕ್ಕಭಾವಂದಿರೂ ಇವರ ಶ್ರೇಯಸ್ಸಿಗಾಗಿ ಬಹಳ ಶ್ರಮಿಸಿದರು. ಈ ಎಲ್ಲರ ಸಹಕಾರದಿಂದ ತಮ್ಮ ದುಃಖ ನೋವುಗಳನ್ನು ಮರೆತು ಸಂಗೀತಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟರು.

ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಕಚೇರಿ ಮಾಡಿ ಪ್ರಖ್ಯಾತರಾದರು. ವೀಣೆಯೊಂದಿಗೆ ಕಂಠಶ್ರೀಯನ್ನು ಬೆರೆಸಿ ಕಚೇರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರು ಮತ್ತು ಹೆಸರುವಾಸಿಯಾದರು.

ಸುಂದರ ರೂಪಿಯಾಗಿ ಸುಮಧುರ ಕಂಠದಿಂದ ಹಾಡಿ ವೀಣೆ ನುಡಿಸುತ್ತಿದ್ದ ಇವರ ಸಾಧನೆ ಅಪಾರ. ಹಿತಮಿತವದ ರಾಗಾಲಾಪನೆ, ಖಚಿತ ಸ್ವರ ಕಲ್ಪನೆ ಇವುಗಳಿಂದ ರಸಿಕರನ್ನು ಮುಗ್ಧಗೊಳಿಸುತ್ತಿದ್ದರು.

೧೯೩೮ರಲ್ಲಿ ಪ್ರಚಾರಕ್ಕೆ ಬಂದ ಗೋಪಾಲ ಸ್ವಾಮಿಯವರ ರೇಡಿಯೋವಿನಿಂದ ಇವರ ಕಾರ್ಯಕ್ರಮ ಬಿತ್ತರಿಸಲ್ಪಟ್ಟಿತ್ತು. ಅಲ್ಲಿಂದ ಇಂದಿನವರೆಗೂ ಅವರ ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ. ಟೈಗರ್ ವರದಾಚಾರ್, ಆಲತ್ತೂರ್ ಬ್ರದರ್ಸ್ ಇಂತಹ ದಿಗ್ಗಜಗಳೊಂದಿಗೆ ವೇದಿಕೆ ಏರಿ ಕಚೇರಿ ಮಾಡಿದ್ದಾರೆ ಎಂದರೆ ಇವರ ಸಂಗೀತದ ಗುಣಮಟ್ಟ ಎಂತಹುದು ಎಂಬುದನ್ನು ಮನಗಾಣಬಹುದು. ಇವರ ಕಾರ್ಯಕ್ರಮಗಳನ್ನು ದೇಶದ ಅನೇಕ ವಿದ್ವನ್ಮಣಿಗಳೇ ಕೇಳಿ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.

ದಕ್ಷಿಣ ದೇಶಾದ್ಯಂತ ಖ್ಯಾತಿಗಳಿಸಿದ ಕಲಾವಿದೆ ಚೊಕ್ಕಮ್ಮ ಕೇರಳದ ನಾನಾ ಸಭೆಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತಂಜಾವೂರಿನಲ್ಲಿ ಮತ್ತು ಹೆಸರುವಾಸಿಯಾದಂಥ ನಾಗಸ್ವರ ವಿದ್ವಾಂಸರ ಸಮ್ಮಖಳದಲ್ಲಿ ವೀಣಾ ವಾದನ ಮಾಡಿ ಎಲ್ಲೆಡೆಯೂ ಪ್ರಶಂಸೆ ಗಳಿಸಿದ್ದಾರೆ.

ಕನ್ಯಾಕುಮಾರಿಯಲ್ಲಿ ಅವರ ಕಾರ್ಯಕ್ರಮ ನಡೆದಾಗ ಅಲ್ಲಿದ್ದ ಶ್ರೋತೃಗಳಲ್ಲಿ ಅಪರಿಚಿತ ವಿದೇಶೀ ದಂಪತಿಗಳೂ ಇದ್ದು, ಇವರ ವೀಣಾ ವಾದನ ಮತ್ತು ಕಂಠ ಮಾಧುರ್ಯದಲ್ಲಿ ತಮ್ಮನ್ನೇ ಮರೆತು, ಕಚೇರಿ ಮಧ್ಯದಲ್ಲಿಯೇ ಅಲ್ಲಿ ಮಾರುತ್ತಿದ್ದ ಗುಲಾಬಿ ಹೂಮಾಲೆಕೊಂಡು ಇವರ ಕೊರಳಿಗೆ ತೊಡಿಸಿ, ಕಾಣಿಕೆ ಇತ್ತು ಸನ್ಮಾನ ಮಾಡಿದರಂತೆ.

ಇವರ ವೀಣಾ ವಾದನದೊಂದಿಗೆ ಹಾಡುವ ವೈಖರಿಯಿಂದ ಬೆರಗಾದ ಸರ್. ಸಿ.ವಿ. ರಾಮನ್‌ರವರು ಇವರ ತಲೆಮುಟ್ಟಿ ಆಶೀರ್ವಾದ ಮಾಡಿ ಈ ಸಂಪ್ರದಾಯವನ್ನು ಕಡೆಯವರೆಗೆ ಉಳಿಸಿಕೊಳ್ಳುವಂತೆ ಆದೇಶವಿತ್ತರಂತೆ. ದಸರಾ ಮಹೋತ್ಸವದಲ್ಲಿ ಮೈಸೂರು ಆಸ್ಥಾನದ ದರ್ಬಾರಿನಲ್ಲಿ ಮಹಾರಾಜರ ಸಮ್ಮುಖದಲ್ಲಿ ಕಚೇರಿ ನಡೆಸಿ ಖಿಲ್ಲತ್ತು ಪಡೆದಿದ್ದಾರೆ.

ಮಲ್ಲಾಡಿ ಸ್ವಾಮಿಗಳ ಮುಂದೆ ಕಾರ್ಯಕ್ರಮ ಮಾಡಿದಾಗ ಅವರು ಸಂತೋಷದಿಂದ ಸ್ವರ ಕಿನ್ನರಿ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಅಖಿಲ ಭಾರತ ಸಾಧು ಸಮಾಜದಿಂದ ವೀಣಾವಾದನ ಚತುರೆ ಎಂಬ ಬಿರುದು ಗಳಿಸಿದ್ದಾರೆ. ಹೆಬ್ಬಾರ್ ಶ್ರೀ ವೈಷ್ಣವ ಸಭೆಯಲ್ಲಿ ಇವರ ಕಾರ್ಯಕ್ರಮವಾದಾಗ ಸನ್ಮಾನಿಸಲ್ಪಟ್ಟಿದ್ದಾರೆ.

ಮೈಸೂರಿನಲ್ಲಿ ೧೯೬೭ನೇ ಇಸವಿಯಲ್ಲಿ ವೀಣಾವಾದನ ಚತುರೆ, ೧೯೭೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೮೦ ರಲ್ಲಿ ಬೆಂಗಳೂರು ಗಾಯನ ಸಮಾಜದ ವರ್ಷದ ಕಲಾವಿದರಾಗಿ, ೧೯೮೩ರಲ್ಲಿ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ ಹೀಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಆಗಿನ ಕಾಲದ ಮಹಿಳಾ ಕಲಾವಿದರಲ್ಲಿ ಶ್ರೇಷ್ಠ ಮಟ್ಟದ ಕಲಾಕೋವಿದೆ ಎಂದು ಹೆಸರು ಪಡೆದಿದ್ದರು.

ಹಿಂದಿ, ಸಂಸ್ಕೃತ, ತಮಿಳು ಮತ್ತು ಕನ್ನಡ ಈ ನಾಲ್ಕು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಆಕಾಶವಾಣಿಯ ಅಂಗೀಕೃತ ಕಲಾವಿದೆ. ಅನೇಕ ದೇವರನಾಮಗಳಿಗೆ ಸ್ವರ ಸಂಯೋಜಿಸಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತು ನಡೆಸುವ ಸಂಗೀತ ವಿದ್ವಾಂಸರ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಗಿ ಆಯ್ಕೆಮಾಡಿ ಗಾನಕಲಾಭೂಷಣ ಬಿರುದನ್ನಿತ್ತು ಗೌರವಿಸಿದ್ದಾರೆ.

ಈಗ ಮೈಸೂರಿನಲ್ಲಿ ಒಂಟಿಯಾಗಿ, ಸೇವಕರ ಸಹಕಾರದಿಂದ ಕಾಲ ತಳ್ಳುತ್ತಿದ್ದಾರೆ. ಇವರ ಪ್ರಿಯವಾದ ಹವ್ಯಾಸ, ಪಶು ಪಕ್ಷಿ ಸಾಕುವುದು. ಅವುಗಳ ಜೊತೆಯಲ್ಲಿ ಒಂಟಿತನವನ್ನು ಮರೆಯುತ್ತಿದ್ದಾರೆ. ಇವರೊಂದಿಗೆ ಗಿಣಿ, ಪಾರಿವಾಳ, ನಾಯಿ, ಹಸು ಮತ್ತು ಬೆಕ್ಕು ಮುಂತಾದ ಜೀವಿಗಳು ಅವರ ಆದರ ಸ್ವೀಕರಿಸುತ್ತಿವೆ. ದಿನ ನಿತ್ಯ ವೀಣೆ ನುಡಿಸುವುದು, ವಾರ, ಮಾಸ ಮತ್ತು ದಿನ ಪತ್ರಿಕೆ ಓದುವುದು, ರೇಡಿಯೋ, ಕ್ಯಾಸೆಟ್‌ ಕೇಳುವುದು. ಹೀಘೆ ಇವರ ಕಾಲ ಬಹಳ ಉಪಯುಕ್ತವಾಗಿ ಕಳೆಯುವಂತಾಗಿದೆ. ಇಂತಹ ಶ್ರೇಷ್ಠ ವಿದ್ವಾಂಸರು ಈಗಿನ ತರುಣ ವಿದ್ವಾಂಸರಿಗೆ ಸ್ಪೂರ್ತಿದಾಯಕರಾಗುವುದರಲ್ಲಿ ಯಾವ ಸಂಶಯವೂ ಇಲ್ಲ.