ಜನನ : ೬-೪-೧೯೪೭ ರಂದು ರಾಮಸಂದ್ರದಲ್ಲಿ

ಮನೆತನ : ಮನೆಯಲ್ಲಿ ಸದಾ ಪುರಾಣ – ಪ್ರವಚನಗಳನ್ನು ನಡೆಸುತ್ತಿದ್ದ ಪರಂಪರೆಯ ಮನೆತನ, ತಂದೆ ಜ್ಞಾನಪ್ಪ ತಾಯಿ ಸುಬ್ಬಮ್ಮ,

ಶಿಕ್ಷಣ : ಗುಬ್ಬಿ ಕಂಪೆನಿಯ ಕೆ. ಎನ್. ಸುಬ್ರಹ್ಮಣ್ಯಾಚಾರ್ ಎಂಬುವರಲ್ಲಿ ಸಂಗೀತ ಕಲಿಕೆ. ಚಂದ್ರಾಪುರದ ರಾಮದಾಸ್ ಅವರ ಕಥೆ ಕೇಳಿ ಅದರಿಂದ ಸ್ಫೂರ್ತಿ ಹೊಂದಿ ಏಕಲವ್ಯನಂತೆ ಅವರನ್ನೇ ಮಾನಸಿಕ ಗುರುಗಳನ್ನಾಗಿ ಮಾಡಿಕೊಂಡು ಕೀರ್ತನಾಭ್ಯಾಸ. ಗಮಕ ಕಲೆಯಲ್ಲಿಯೂ ಪರಿಶ್ರಮವಿದ್ದು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಜೊತೆಗೆ ಬಿ.ಎ. ಪದವಿ.

ಕ್ಷೇತ್ರ ಸಾಧನೆ : ೧೯೬೯ ರಲ್ಲಿ ಕೋಲಾರದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ’ಭದ್ರಾಚಲ ರಾಮದಾಸ್’ ಕಥೆ ಮಾಡುವುದರೊಂದಿಗೆ ಪ್ರಥಮ ರಂಗ ಪ್ರವೇಶ. ಅನಂತರದಲ್ಲಿ ಕೀರ್ತನ ದಿಗ್ಗಜಗಳೆನಿಸಿದ ಆರ್. ಗುರುರಾಜುಲು ನಾಯ್ಡು ಸಂತ ಭದ್ರಗಿರಿ ಅಚ್ಯುತದಾಸರು. ಹಂಡೇ ಗುರು ವೇದವ್ಯಾಸಾಚಾರ್ಯರೇ ಮೊದಲಾದವರ ಕೀರ್ತನಾ ಕಾರ್ಯಕ್ರಮಗಳನ್ನು ಅವರ ಮಾರ್ಗದರ್ಶನದೊಂದಿಗೆ ತಮ್ಮ ಕೀರ್ತನ ಕಲೆಯನ್ನು ಅಭಿವೃದ್ಧಿಪಡಿಸಿಕೊಂಡರು.

ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡಿ ನೂರಾರು ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಕೇರಳ ವೈನಾಡಿನಲ್ಲಿ ಹರಿಕಥ ನಡೆಸಿ ಜನ ಮನ್ನಣೆ ಗಳಿಸಿದರು. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಆದೇಶದ ಮೇರೆಗೆ ಜೈನ ಗ್ರಂಥಗಳನ್ನು ಆಧರಿಸಿ ಜಿನ ಕಥೆ, ಭರತ – ಬಾಹುಬಲಿ ಪ್ರಸಂಗಗಳನ್ನು ಹರಿಕಥಾ ರೂಪಿಯಾಗಿ ಪ್ರಸ್ತುತ ಪಡಿಸಿ ಅವರ ಆದರಣೆಗೆ ಪಾತ್ರರಾದವರು. ಬೆಂಗಳೂರು ಆಕಾಶವಾಣಿ-ದೂರದರ್ಶನದ ಮೂಲಕ ಇವರ ಕಾರ್ಯಕ್ರಮಗಳು ಬಿತ್ತರಗೊಂಡಿವೆ.

ರಾಷ್ಟ್ರೀಯ ಸಂಗೀತ ನೃತ್ಯೋತ್ಸವ, ಹಂಪೀ ಉತ್ಸವ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನ ಮುಂತಾದ ಪ್ರಮುಖ ವೇದಿಕೆಗಳಲ್ಲಿ ಹಾಗೂ ರಾಷ್ಟ್ರದ – ರಾಜ್ಯದ ಹಿರಿಯ ಗಣ್ಯ ನಾಯಕರ ಸಮ್ಮುಖದಲ್ಲಿ ಮಠಾಧಿಪತಿಗಳ ಸನ್ನಿಧಾನದಲ್ಲಿ ಕಥಾ ಕೀರ್ತನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗಳು ನಡೆಸುವ ಕಥಾ -ಕೀರ್ತನ ಶಿಕ್ಷಣ ಶಿಬಿರಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಸಹ ನೀಡಿ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾಎ.

ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಪದಾಧಿಕಾರಿಗಳಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಎರಡು ಅವಧಿಗಳ ಕಾಲ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಸಿದ್ಧಗಂಗಾ ಮಠಾಧೀಶರಿಂದ ’ಶಿವ ಕೀರ್ತನಲಾಲಂಕಾರ’, ಶಿರಾದ ಸಂಘದಿಂದ ’ಕೀರ್ತನ ಕಲಾಭೂಷಣ”, ಧರ್ಮಸ್ಥಳದ ಧರ್ಮಾಧಿಕರಿಗಳಿಂದ ’ಜಿನ ಕಥಾ ಪ್ರವೀಣ’, ಹರಿಕಥಾ ಭೂಷಣ, ಕೀರ್ತನ ವಿಶಾರದ ಮುಂತಾಗಿ ಹಲವು ಬಿರುದು ಸನ್ಮಾನಗಳನ್ನು ಹೊಂದಿದ ಇವರಿಗೆ ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಕರ್ನಾಟಕ ಸಂಗೀತ – ನೃತ್ಯ ತನ್ನ ೧೯೯೮-೯೯ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.