ವಿಶ್ವಪ್ರಸಿದ್ಧ ಸಿತಾರ ವಾದಕ ಪಂ. ರವಿಶಂಕರ ಅವರ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾಗಿ ಭಾರತದ ದಕ್ಷಿಣ ಭಾಗದಲ್ಲಿ ಸಿತಾರ ವಾದ್ಯವನ್ನು ಪ್ರಚಾರ ಮಾಡಿದ ಸಿತಾರ ವಾದಕರಲ್ಲಿ ಬೆಂಗಳೂರಿನ ಪಂ. ಎನ್‌.ಆರ್. ರಾಮರಾವ್‌ ಅಗ್ರಗಣ್ಯರು. ಅವರು ಜನಿಸಿದ್ದು ೧೯೨೭ರಲ್ಲಿ ಹಾಸನದಲ್ಲಿ. ಅವರು ಬಿ.ಎಸ್‌.ಸಿ. ಪದವೀಧರರು. ನಂತರ ಪ್ರಸಿದ್ಧ ಸಿತಾರ್‍ಪಟು ಪಂಡಿತ್‌ ರವಿಶಂಕರ್ ಅವರ ಸಿತಾರ್ ವಾದನವನ್ನು ಕೇಳಿ, ಅದರಿಂದ ಪ್ರಭಾವಿತರಾಗಿ, ಸಿತಾರ್ ಕಲಿಯಬೇಕೆಂಬ ಅಚಲ ಆಸೆಯಿಂದ ಪಂಡಿತ್‌ ರವಿಶಂಕರ್ ಅವರ ಬಳಿಯೇ ಶಿಷ್ಯ ವೃತ್ತಿಯನ್ನು ಪ್ರಾರಂಭಿಸಿದರು. ಇವರು ತಮ್ಮ ಮೊದಲ ಕಛೇರಿಯನ್ನು ಬೆಂಗಳೂರು ಸಭೆಯ ಆಶ್ರಯದಲ್ಲಿ ನೀಡಿದ್ದಾರೆ. ನಂತರ ಭಾರತದ ಅನೇಕ ಪ್ರತಿಷ್ಠಿತ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಇವರ ಕಛೇರಿಗಳು ನಡೆದು ಜನ ಮನ್ನಣೆ ಗಳಿಸಿವೆ. ರವಿಶಂಕರ್ ಅವರ ‘ಸೌಂಡ್‌ ಅಂಡ್‌ ರಿದಂ’, ‘ನವರಸ ರಂಗ್‌’ ಮುಂತಾದ ಸಂಗೀತ ಸಂಯೋಜನೆಗಳಲ್ಲಿ ಇವರು ಭಾಗಿಯಾಗಿ ಹೆಸರು ಗಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದೂಸ್ಥಾನಿ ಸಂಗೀತದ ಪ್ರಚಾರವನ್ನು ಶ್ರಮವಹಿಸಿ ಮಾಡುತ್ತಿದ್ದಾರೆ. ಬೆಂಗಳೂರಿನ ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಅನೇಕ ವಿದ್ಯಾಥಿಗಳಿಗೆ ಸಿತಾರ್ ವಾದನದ ಶಿಕ್ಷಣ ನೀಡುತ್ತಿದ್ದಾರೆ.

ಈ ಕಲಾವಿದರ ಸಿತಾರ್ ವಾದನ ಕಾರ್ಯಕ್ರಮಗಳು ಬೆಂಗಳೂರು ಆಕಾಶವಾಣಿ ಹಾಗೂ ಟಿ.ವಿ.ಗಳಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿರುತ್ತದೆ. ರಾಮರಾಯರು ಆಗಾಗ್ಗೆ ವಿದೇಶ ಪ್ರವಾಸಗಳನ್ನು ಕೈಗೊಂಡು ಅಲ್ಲಿನ ಜನತೆಗೆ ಭಾರತೀಯ ಸಂಗೀತದ ಬಗ್ಗೆ ಹೆಚ್ಚಿನ ಗೌರವ-ಪ್ರೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಪಂಡಿತ್‌ ರವಿಶಂಕರ್ ಅವರ ನೆಚ್ಚಿನ ಶಿಷ್ಯರಾದ ಇವರು ಅನೇಕ ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಎನ್‌.ಆರ್. ರಾಮರಾವ್‌ ಅವರ ಸಿತಾರ್ ವಾದನದ ಬಗ್ಗೆ ಅನೇಕ ಪತ್ರಿಕೆಗಳೂ ಹಾಗೂ ಕಲಾ ವಿಮರ್ಶಕರೂ ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ. ೧೯೮೮ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಕಲಾವಿದರಿಗೆ ನೀಡಿ ಗೌರವಿಸಿದೆ. ರಾಮರಾವ್‌ ಅವರ ಕಲಾಜೀವನದಲ್ಲಿ ಮುಂಬೈನ ನ್ಯಾಷನಲ್‌ ಸೆಂಟರ್ ಆಫ್‌ ಪರ್ ಫಾರ್ಮಿಂಗ್‌ ಆರ್ಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಸ್ಮರಣೀಯವಾದುದು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ‘ಕರ್ನಾಟಕ ಕಲಾತಿಲಕ’ ಬಿರುದು ನೀಡಿ ಅವರನ್ನು ಗೌರವಿಸಿದೆ.