ಜನನ : ೨೪-೧೦-೧೯೩೩ ರಲ್ಲಿ ಬೆಂಗಳೂರಿನಲ್ಲಿ

ಮನೆತನ : ಸಂಗೀತ -ಸಾಹಿತ್ಯ-ವೈದಿಕ ವಿದ್ವಾಂಸರ ಮನೆತನ. ತಾತ ನುಗ್ಗೇಹಳ್ಳಿ ತಿರುಮಲಾಚಾರ್ಯರು ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದವರು.

ಗುರುಪರಂಪರೆ : ಮೊದಲಿಗೆ ಹಾರ್ಮೋನಿಯಂ ಎಸ್. ಭೀಮರಾಯರಲ್ಲಿ ಪ್ರಾಥಮಿಕ ಶಿಕ್ಷಣ. ಅನಂತರ ಎಲ್. ಎಸ್. ನಾರಾಯಣಸ್ವಾಮಿ ಭಾಗವತರ್ ಹಾಗೂ ಕಾಂಚೀಪುರಂ ನಾರಾಯಣಪಿಳ್ಳೆ ಅವರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಪಡೆದು ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸಾಧನೆ: ೧೯೫೦ ರಲ್ಲಿ ಮಂಡ್ಯದಲ್ಲಿ ಗಣೇಶೋತ್ಸವದಲ್ಲಿ ಕಾರ್ಯಕ್ರಮ ನೀಡುವುದರ ಮೂಲಕ ರಂಗಪ್ರವೇಶ. ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಹಾಡಿದ್ದಾರೆ. ಇವರ ಭಾವಗೀತೆಗಳ ಗಾಯನದಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಎತ್ತಿ ಕಾಣುತ್ತದೆ. ಆಕಾಶವಾಣಿಯ ಕಲಾವಿದರಾಗಿ ತಿಂಗಳ ಹೊಸ ಹಾಡು, ವಿವಿಧ ಭಾರತಿಯಲ್ಲಿ ಭಾವಗೀತೆಗಳ ಗಾಯನ ಪ್ರಸಾರಗೊಂಡಿವೆ. ಅಲ್ಲದೆ ವಿವಿಧ ಭಾರತೀಯ ಮೂಲಕ ಭಾವಗೀತೆ ಕಾರ್ಯಕ್ರಮ ನೀಡಿದ ಪ್ರಥಮ ಕಲಾವಿದ ಎಂಬ ಹೆಗ್ಗಳಿಕೆ ಇವರದು. ಬೆಂಗಳೂರಿನ ಅನೇಕ ಸಂಗೀತ- ಸಾಹಿತ್ಯ ಸಂಸ್ಥೆಗಳು ಇವರ ಕಾರ್ಯಕ್ರಮಗಳನ್ನೇರ್ಪಡಿಸಿವೆ. ಅನೇಕ ಗೀತೆ ನಾಟಕಗಳನ್ನು ರಚಿಸಿದ್ದಾರೆ. ಕಾವೇರಿ ಕನ್ನಡ ಚಿತ್ರದಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿರುತ್ತಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್ ಗೋಷ್ಠಿಯಲ್ಲಿ ಸುಗಮ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಕುರಿತು ಸೋದಾಹರಣ ನೀಡಿದ್ದಾರೆ. ಇವರ ಕಿಸಾಗೌತಮಿ ನೃತ್ಯ ರೂಪಕ ಅತ್ಯಂತ ಜನಪ್ರಿಯ. ತಮ್ಮದೇ ಆದ ನಾದ ಸುಧಾ ಸಂಗೀತ ಸಭೆಯ ಸ್ಥಾಪಕರು. ೧೯೮೩-೧೯೯೩ ರಲ್ಲಿ ಎರಡು ಬಾರಿ ಅಮೆರಿಕಾ ಪರವಾಸ ಮಾಡಿ ಭಕ್ತಿ ಸಂಗೀತಗಳ ಕಾರ್ಯಕ್ರಮ ನೀಡಿದ್ದಾರೆ. ಡಿ.ವಿ.ಜಿ. ಅವರ ಸಮ್ಮುಖದಲ್ಲಿ ಅವರ ಅನ್ತಃಪುರ ಗೀತೆಗಳನ್ನು ಹಾಡಿ ಪ್ರಶಂಸೆಗೆ ಪಾತ್ರರಾದವರು ಎನ್.ಎಸ್. ರಾಮನ್.

ಪ್ರಶಸ್ತಿ – ಸನ್ಮಾನ : ೧೯೯೩ ರಲ್ಲಿ ಟೆಕ್ಸಾಸ್‌ನ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಿಂದ ಭಕ್ತಿ ಸಂಗೀತ ಕಲಾನಿಧಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೦-೦೧ ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.