ದೇವರನಾಮಗಳನ್ನು ಹಾಡುವುದರಲ್ಲಿಯೂ, ಭಾರತ ವಾಚನ ಮಾಡುವುದರಲ್ಲಿಯೂ ನಿಸ್ಸೀಮರಾಗಿದ್ದ ನಾಟ್ನಹಳ್ಳಿ ಕೇಶವಯ್ಯನವರ ಸುಪುತ್ರರಾಗಿ ೧೮೯೫ರಲ್ಲಿ ಜನಿಸಿದವರು ಚೆನ್ನಕೇಶವಯ್ಯ. ಹದಿನಾಲ್ಕನೇ ವಯಸ್ಸಿನಲ್ಲಿ ಮೈಸೂರಿಗೆ ಬಂದ ಮೇಲೆ ವೀಣೆ ಶಿವರಾಮಯ್ಯನವರಲ್ಲಿ ಶಿಷ್ಯರಾಗಿ ಸಂಗೀತವನ್ನು ಕ್ರಮವಾಗಿ ಅಭ್ಯಾಸ ಮಾಡತೊಡಗಿದರು. ಕುಟುಂಬ ಪೋಷಣೆಗಾಗಿ ಶಾರದಾ ವಿಲಾಸ ಪಾಠಶಾಲೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮೈಸೂರು ವಾಸುದೇವಾಚಾರ್ಯರ ಪಟ್ಟಶಿಷ್ಯರಾಗಿ ಸಂಗೀತದ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಅಪೂರ್ವ ಪಾಂಡಿತ್ಯ ಪಡೆದರು.

ವೇದಿಕೆಯ ಗಾಯಕರಾಗಿ ನಾಡಿನಲ್ಲೂ ಹೊರನಾಡುಗಳಲ್ಲೂ ಅಸಂಖ್ಯಾತ ಕಛೇರಿಗಳನ್ನು ನಡೆಸಿದ್ದರೂ ಚೆನ್ನಕೇಶವಯ್ಯನವರು ಅಧಿಕಾರಯುತವಾಗಿ ವಿಷಯಗಳನ್ನು ತಿಳಿಸಬಲ್ಲ ಲಾಕ್ಷಣಿಕರಾಗಿಯೇ ಹೆಚ್ಚು ಖ್ಯಾತಿ ಗಳಿಸಿದರು. ‘ರಾಗಾಲಾಪನ ಪದ್ಧತಿ ತಾನ ಮತ್ತು ಪಲ್ಲವಿ’ ಎಂಬ ಪುಸ್ತಕದಲ್ಲಿ ಅವರು ಸುಮಾರು ೧೮೦ ಪಲ್ಲವಿಗಳನ್ನು ಸ್ವರ ಸಹಿತ ನೀಡಿದ್ದಾರಲ್ಲದೆ ತಾನ ಮತ್ತು ಪಲ್ಲವಿ ನಿರೂಪಣೆಯ ಮಾರ್ಗವನ್ನು ಅತ್ಯಂತ ಶಾಸ್ತ್ರಬದ್ಧವಾಗಿ ತಿಳಿಸಿದ್ದಾರೆ.

ವಿವಿಧ ದಾಸವರೇಣ್ಯರ ಪದಗಳನ್ನು ಸ್ವರ ಲಿಪಿ ಸಹಿತವಾಗಿ ‘ಕೀರ್ತನ ಸುಧಾ ಸಾಗರ’ ಎಂಬ ಪುಸ್ತಕಗಳ ರೂಪದಲ್ಲಿ ಲೋಕಾರ್ಪಣ ಮಾಡಿದ್ದಾರೆ. ಪಾಂಡಿತ್ಯ ಪೂರ್ಣ ಲೇಖನಗಳನ್ನು ಬರೆಯುವುದರಲ್ಲಿ ಮತ್ತು ವಿದ್ವತ್‌ಗೋಷ್ಠಿಗಳಲ್ಲಿ, ಭಾಷಣ ನೀಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ರಾಜ್ಯ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿ. ಚೌಡಯ್ಯ ಪ್ರಶಸ್ತಿ, ಸಂಗೀತ ವಿದ್ಯಾನಿಧಿ, ಗಾನ ಕಲಾಸಿಂಧು, ಸಂಗೀತ ಕಲಾರತ್ನ – ಇವರು ಗಳಿಸಿದ ಬಿರುದು, ಪ್ರಶಸ್ತಿಗಳಲ್ಲಿ ಮುಖ್ಯವಾದುದು.