ದಿನಾಂಕ ೧೨-೫-೧೯೫೧ರಂದು ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ಜನಿಸಿದ ಎನ್. ಜಿ. ರವಿಗೆ ಸಹಜವಾಗಿಯೇ ಚಿಕ್ಕಂದಿನಿಂದಲೂ ಲಯವಾದನದ ಕಡೆ ಅಪಾರ ಆಸಕ್ತಿ. ಇದನ್ನು ಮನಗಂಡ ರವಿಯ ತಂದೆ, ತಾಯಿಯರಾದ ಶ್ರೀ ಎನ್. ಎ. ಗಂಗಾಧರರಾವ್ ಮತ್ತು ಶ್ರೀಮತಿ ರಾಜಲಕ್ಷ್ಮಿ ಮಗನ ಉತ್ಸಾಹಕ್ಕೆ ತಣ್ಣೀರೆರಚದೆ ಏಳು ವರ್ಷದ ಹುಡುಗನನ್ನು ವಿದ್ವಾನ್ ಕೋಲಾರ ವೆಂಟರಮಣಯ್ಯರ್ ಅವರಲ್ಲಿ ಮೃದಂಗ ಕಲಿಯಲು ಬಿಟ್ಟರು. ರವಿಯ ಅಜ್ಜ ಅಜ್ಜಿಯರಾದ ಬಳ್ಳಾರಿ ವೆಂಕಟಪ್ಪ ಹಾಗೂ ಸುಭದ್ರಮ್ಮನವರು ತಮ್ಮ ಮೊಮ್ಮಗನಲ್ಲಿ ಹುದುಗಿದ್ದ ಕಲಾಸಕ್ತಿಯನ್ನು ಕಂಡು ವಿದ್ವಾನಿ ಟಿ.ಎ.ಎಸ್.ಮಣಿ ಅವರ ಬಳಿ ಲಯವಾದ್ಯಗಳ ವಾದನವನ್ನು ಕಲಿಯಲು ಪ್ರೇರೇಪಿಸಿದರು. ಮೊದಮೊದಲು ಅವರಲ್ಲಿ ಘಟ ನಾದನವನ್ನು ಕಲಿತು, ಮೃದಂಗ ವಾದನದಲ್ಲೂ ಸಾಕಷ್ಟು ಪ್ರಾವೀಣ್ಯತೆಯನ್ನು ಪಡೆದು ಸ್ವತಂತ್ರವಾಗಿ ಅನೇಕ ಹಿರಿಯ ವಿದ್ವಾಂಸರುಗಳಿಗೆ ಮೃದಂಗ ನುಡಿಸುವ ಸಾಮರ್ಥ್ಯವನ್ನು ಹೊಂದಿ ಅವರುಗಳ ಪ್ರಶಂಸೆಗೂ ಪಾತ್ರರಾದರು. ಆದರೂ ಇವರ ಕಲಿಕೆಯ ದಾಹ ಅಡಗಲಿಲ್ಲ. ಮುಂದೆ ಹೆಸರಾಂತ ಮೃದಂಗ ಮಾಂತ್ರಿಕ ಚೆನ್ನೈನ ಉಮಯಾಳಪುರಂ ಕೆ. ಶಿವರಾಮನ್ ಅವರಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಅವರ ಮಾರ್ಗದರ್ಶನದಲ್ಲಿ ಒಬ್ಬ ಸಮರ್ಥ ಮೃದಂಗ ವಾದಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕೇವಲ ಸಂಗೀತ ಕ್ಷೇತ್ರಕ್ಕೆ ತಮ್ಮ ಪಾಂಡಿತ್ಯವನ್ನು ಮೀಸಲಾಗಿದೆ ನೃತ್ಯ ಕ್ಷೇತ್ರಕ್ಕೂ ಪರಸರಿಸಿ ಅನೇಕ ನೃತ್ಯ ಕಾರ್ಯಕ್ರಮಗಳಲ್ಲೂ ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ತಮ್ಮ ಅಪರಿಮಿತ ಸಾಧನೆಯಿಂದ ನೃತ್ಯ ಕ್ಷೇತ್ರದಲ್ಲಿ ಅಪಾರ ಬೇಡಿಕೆಯುಳ್ಳ ಹಿರಿಯ ಮೃದಂಗ ವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಲಾವಿದ.

ಸಾತ್ತೂರು ಸುಬ್ರಹ್ಮಣ್ಯಂ, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ, ಸೇಲಂ ದೇಶಿಕನ್, ಮಹಾರಾಜಪುರಂ, ಸಂತಾನಮ್, ಡಾ. ಎನ್. ರಮಣಿ, ಟಿ. ವಿ. ಶಂಕರನಾರಾಯಣನ್ ಮುಂತಾದ ಸಂಗೀತ ದಿಗ್ಗಜಗಳೇ ಅಲ್ಲದೆ ನೃತ್ಯ ಪಟುಗಳಾದ ಪದ್ಮಿನಿ ರಾಮಚಂದ್ರನ್, ಪದ್ಮಿನಿ ರಾವ್, ವೀಣಾಮೂರ್ತಿ, ಲಲಿತಾ ಶ್ರೀನಿವಾಸನ್ ಮುಂತಾದವರ ಕಾರ್ಯಕ್ರಮಗಳಿಗೆ ಮೃದಂಗ ನುಡಿಸಿ ’ನಾದ ಗಂಭೀರ’ ಎನಿಸಿಕೊಂಡಿದ್ದಾರೆ.

ಹೊರ ರಾಷ್ಟ್ರಗಳಲ್ಲಿ ಅದರಲ್ಲೂ ಪ್ರಮುಖವಾಗಿ ಅಮೆರಿಕಾ ಸಂಯುಕ್ತ ರಾಷ್ಟ್ರಗಲ್ಲಿ ಸಂಚರಿಸಿ ಅಲ್ಲಿನ ನೃತ್ಯ ಪಟುಗಳಾದ ವಿಜಿಪ್ರಕಾಶ್, ರೇವತಿ ಸತ್ಯು, ಆಶಾ ಗೋಪಾಲ್, ಪದ್ಮಭೂಷಣ ಕಮಲಾ ನಾರಾಯಣ್ ಅವರ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ.

’ಲಯವಾದ್ಯ ಶೇಖರ’, ’ಕಲಾ ಆರತಿ ರತ್ನ’, ’ನೃತ್ಯ ಕಲಾನಿಪುಣ’ ಮುಂತಾದ ಬಿರುದು ಪ್ರಶಸ್ತಿಗಳನ್ನು ಹೊಂದಿರುವ ಎನ್.ಜಿ. ರವಿ ಅವರು ನೃತ್ಯ ಕಲಾಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩-೦೪ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.