ಸಂಗೀತ ಮನೆತನದಲ್ಲಿ ೧೯೩೧ರಲ್ಲಿ ಜನಿಸಿದ ನಂಜುಂಡಸ್ವಾಮಿಯವರ ಮೊದಲ ಸಂಗೀತ ಗುರು ತಾಯಿ ಅನಂತಲಕ್ಷ್ಮಮ್ಮನವರು. ನಂತರ ವಿ. ರಾಮರತ್ನಂ ಹಾಗೂ ಟಿ. ಚೌಡಯ್ಯನವರಲ್ಲಿ ಸತತವಾಗಿ ದೀರ್ಘಕಾಲ ಶಿಕ್ಷಣ ಪಡೆದು ನಾಡಿನ ಗಣ್ಯ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಗಾಯಕರಾಗಿ, ಶಿಕ್ಷಕರಾಗಿ ಇವರು ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ.

ಉತ್ತರ ಭಾರತದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೊಬಗನ್ನು ಸಾರುವ ನಿಟ್ಟಿನಲ್ಲಿ ಇವರು ವಹಿಸಿರುವ ಶ್ರದ್ಧೆ ಪಾತ್ರಗಳು ಪ್ರಶಂಸನೀಯ. ಮೂರು ದಶಕಗಳಿಗೂ ಮಿಗಿಲಾಗಿ ಆಕಾಶವಾಣಿಯ ಮೂಲಕ ಇವರು ಪ್ರಸಾರ ಮಾಡಿರುವ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮಗಳು ಶ್ರೋತೃಗಳನ್ನು ಆಕರ್ಷಿಸಿವೆ. ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ವರ್ಷಂಪ್ರತಿ ಅಪರೂಪವಾದ ದಾಸ ಕೀರ್ತನೆಗಳನ್ನು ಹಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ರಾಜ್ಯದಲ್ಲೂ ನೆರೆ ರಾಜ್ಯಗಳಲ್ಲೂ ಅನೇಕಾನೇಕ ಸಂಗೀತ ಕಛೇರಿಗಳನ್ನು ಮಾಡಿರುವ ಹಿರಿಮೆ ಹೊಂದಿದ್ದರು.

ಯುವಕರಾಗಿದ್ದಾಗಲೇ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಪ್ರಾಚಾರ್ಯ ಪಂಡಿತ್‌ಓಂಕಾರನಾಥ್‌ ಠಾಕೂರ ಅವರ ಮೆಚ್ಚುಗೆ ಪಡೆದ ಸುದೈವಿ. ‘ಗಾನ ಕಲಾರತ್ನ’, ‘ಕಲಾನಿಧಿ’, ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳು ಶ್ರೀಯುತರಿಗೆ ಪ್ರಾಪ್ತವಾಗಿತ್ತು. ಸಂಗೀತ ಕಲಿಸುವುದರಲ್ಲಿ ಅವರಿಗಿದ್ದ ಉತ್ಸಾಹ,’ ಶಿಷ್ಯ ವಾತ್ಸಲ್ಯ  ಅಪರಿಮಿತ. ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದ ಶ್ರೀಯುತರ ಕಂಠಶ್ರೀ ಅತ್ಯಂತ ಮಧುರ ಭಾವಪೂರ್ಣ. ಇಂತಹ ಸಹೃದಯ ಕಲಾವಿದರು ಕಳೆದ ವರ್ಷ ೨೦೦೫ರಲ್ಲಿ ನಾದ ದೇವಿಯ ಪಾದಾರವಿಂದಗಳನ್ನು ಹೊಂದಿದರು.