ಜನನ : ೧೫-೬-೧೯೩೪ ರಂದು ಚಿಂತಾಮಣಿಯ ಊಲವಾಡಿಯಲ್ಲಿ

ಮನೆತನ : ಸಂಗೀತ – ರಂಗಭೂಮಿ ಕಲಾವಿದರ ಮನೆತನ. ತಾತ ಗುರುಮೂರ್ತಪ್ಪನವರು ತೆಲುಗು ವಾಗ್ಗೇಯಕಾರರು. ತಂದೆ ವೆಂಕಟಪ್ಪ ತಾಯಿ ಮಂಗಮ್ಮ ದೊಡ್ಡಪ್ಪ ಗುರುಮೂರ್ತಿಪ್ಪ ಉ. ಪಿಟೀಲು ತಾಯಪ್ಪ ಪ್ರಸಿದ್ಧ ಪಿಟೀಲು ವಾದಕರು. ಚಿಕ್ಕಪ್ಪ ಶ್ರೀನಿವಾಸಯ್ಯ ನಾಟಕರಂಗದಲ್ಲಿದ್ದರು.

ಶಿಕ್ಷಣ : ಕಥಾ ಕೀರ್ತನ ಕಲೆಯನ್ನು ಆರ್. ಗುರುರಾಜುಲು ನಾಯ್ಡುರವರಲ್ಲೂ ಅನಂತರ ಲಕ್ಷಣದಾಸ ವೇಲ್ಹಣಕರ್ ಅವರಲ್ಲೂ ಅಭ್ಯಾಸ ಮಾಡಿದ್ದಾರೆ. ವೆಂಕಟಾಚಾಲಯ್ಯನವರಲ್ಲಿ ಸಂಗೀತ ಶಿಕ್ಷಣವನ್ನೂ ಪಡೆದಿರುತ್ತಾರೆ. ಇಂಟರ್‌ಮೀಡಿಯಟ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಕ್ಷೇತ್ರ ಸಾಧನೆ : ಕಾಡುಗೋಡಿಯ ಸಮೇತನ ಹಳ್ಳಿಯಲ್ಲಿ ಪ್ರಥಮ ಕಾರ್ಯಕ್ರಮ. ಮುಂದೆ ಗುರುಗಳಾದ ಗುರುರಾಜುಲು ನಾಯ್ಡು ಅವರೊಂದಿಗೆ ಸಹ ಕೀರ್ತನಕಾರರಾಗಿ ಭಾಗವಹಿಸಿ ಅನಂತರ ಸ್ವತಂತ್ರವಾಗಿ ಕಥೆ ಮಾಡಲು ಪ್ರಾರಂಭ, ಈಗ ಸುಮಾರು ೪೦ ವರ್ಷಗಳಿಗೂ ಮಿಕ್ಕಿ ರಾಜ್ಯಾದ್ಯಂತ ಸಂಚಾರ ಮಾಡಿ ಹರಿಕಥಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ರಾಮೋತ್ಸವ, ಗಣೇಶೋತ್ಸವಗಳಲ್ಲಿ ಅಪಾರ ಬೇಡಿಕೆಯುಳ್ಳ ಕೀರ್ತನಕಾರರು. ನಾಟಕರಂಗದಲ್ಲೂ ಸಾಕಷ್ಟು ಪರಿಶ್ರಮವಿದ್ದು ಗುರುರಾಜುಲು ನಾಯ್ಡುರವರ ಜಯ ಭಾರತಿ ಕಲಾ ಸಂಘದ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು. ಕನ್ನಡ – ಸಂಸ್ಕೃತಿ ಇಲಾಖೆಯ ಅಧಿಕೃತ ಕಲಾವಿದರಾಗಿ ಅನೇಕ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಘ ಸಂಸ್ಥೆಗಳ ಸಂಘಟಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಗಡಿ ರಸ್ತೆಯ ಗುರು ರಾಘವೇಂದ್ರಸ್ವಾಮಿ ಸೇವಾ ಸಮಿತಿಯ ಸಹ ಕಾರ್ಯದರ್ಶಿಯಾಗಿ ಪ್ರಸ್ತುತ ಪ್ರಧಾನ ಕಾರ್ಯದರ್ಶಿಗಳಾಗಿ ಅದರ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ. ಆಕಾಶವಾಣಿ – ದೂರದರ್ಶನಗಳಲ್ಲೂ ಕಾರ್ಯಕ್ರಮ ಪ್ರಸಾರವಾಗಿದೆ. ೨೦೦೫ ರಲ್ಲಿ ಕೀರ್ತನ ಕಲಾ ಪರಿಷತ್ತು ಹಾಗೂ ಮಲ್ಲೇಶ್ವರ ಆರ್ಯವೈಶ್ಯ ಸಭಾದ ಜಂಟಿ ಆಶ್ರಯದಲ್ಲಿ ಶತ ಕೀರ್ತನೋತ್ಸವವನ್ನು ಆಚರಿಸುವಲ್ಲಿ ಇವರ ಪಾತ್ರ ಹಿರಿದು. ದಾಸ ಸಾಹಿತ್ಯ ಪ್ರಚಾರಕರೂ ಕೂಡ.

ಪ್ರಶಸ್ತಿ – ಪುರಸ್ಕಾರಗಳು : ೧೯೮೪ ರಲ್ಲಿ ಆದಿಚುಂಚನಗಿರಿ ಮಠಾಧೀಶರಿಂದ ಗೌರವ ಸನ್ಮಾನ, ಸೋಸಲೆ ವ್ಯಾಸರಾಜ ಮಠಾ ಧೀಶರಿಂದ ಅನುಗ್ರಹ, ಶೇಷವಸ್ತ್ರಧಾರಣೆ, ಬಿ.ಇ.ಎಲ್. ಆಡಳಿತ ವರ್ಗದಿಂದ ಕೀರ್ತನ ಚತುರ, ಚಿಂತಾಮಣಿ ಗಾಯನ ಸಮಾಜದ ವತಿಯಿಂದ ’ನಾದ ಚಿಂತಾಮಣಿ’ ಅಲ್ಲದೆ ಕೀರ್ತನ ಭಾಸ್ಕರ, ಕೀರ್ತನ ಶಿರೋಮಣಿ, ಕೈವಾರದಲ್ಲಿ ಸನ್ಮಾನ ಹೀಗೆ ಅನೇಕ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೫-೯೬ರ ’ಕರ್ನಾಟಕ ಕಲಾಸ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೦೫ ರಲ್ಲಿ ಕೆಂಪೇಗೌಡ ಪ್ರಶಸ್ತಿಯೂ ಇವರಿಗೆ ಲಭಿಸಿದೆ.