ಮನೆತನ : ಸಾಂಸ್ಕೃತಿಕ ಹಿನ್ನೆಲೆಯಿರುವ ಕುಟುಂಬ. ತಂದೆ ನಾಟಕ ಕಲಾವಿದರು – ರಚನಕಾರರು. ತಾತ ತಾಳಮದ್ದಳೆ ಅರ್ಥದಾರಿಗಳು – ಗಮಕಿಗಳು. ಚಿಕ್ಕಪ್ಪ ಸಂಗೀತ ವಿದ್ವಾಂಸರು.

ಗುರುಪರಂಪರೆ : ಪಂಚರತ್ನ ಮ. ನ. ಶೈಣೈಯವರಲ್ಲಿ ಕಥಾ ಕೀರ್ತನದ ಪ್ರಾರಂಭಿಕ ಹಾಗೂ ಮಾಧ್ಯಮಿಕ ಶಿಕ್ಷಣ. ಮುಂದೆ ಹಿರಿಯ ಕಥಾ ಕೀರ್ತನ ದಿಗ್ಗಜ ಹಂಡೇ ಗುರು ವೇದವ್ಯಾಸಾಚಾರ್ಯರ ಬಳಿ ಉನ್ನತ ಶಿಕ್ಷಣ – ಮಾರ್ಗದರ್ಶನ ಕೇವಲ ಹರಿಕಥೆ ಮಾತ್ರವಲ್ಲದೆ ಪ್ರವಚನಕಾರರೂ ಆಗಿರುತ್ತಾರೆ.

ಕ್ಷೇತ್ರ ಸಾಧನೆ : ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ರವಿಕುಮಾರ ದಾಸರ ಕಥೆಯಲ್ಲಿ ಸಂಗೀತ, ಸಾಹಿತ್ಯ ಹಾಗೂ ನಿರೂಪಣಾ ಚಾತುರ್ಯ ಎದ್ದು ಕಾಣುತ್ತದೆ. ನಾಡಿನಾದ್ಯಂತ ಸಂಚರಿಸಿ ಕಥಾ ಕೀರ್ತನ, ಪ್ರವಚನಾದಿಗಳನ್ನು ನಡೆಸಿರುತ್ತಾರೆ. ರಾಮಾಯಣ, ಮಹಾಭಾರತ, ಭಾಗವತಗಳ ಪಾತ್ರ ಪ್ರಪಂಚಗಳ ಕುರಿತು ಅನೇಕ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಧರ್ಮ ಪ್ರಚಾರ ಸಂಸ್ಥೆಗಳಲ್ಲಿ ವರ್ಷಾನುಗಟ್ಟಲೆಗಳ ಕಾಲ ಪ್ರವಚನ ಮಾಡಿರುತ್ತಾರೆ. ಸುಮಾರು ಮೂರು ದಶಕಗಳಿಂದ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಲೆಯ ಜೊತೆಗೆ ಸಂಘಟನಾ ಶಕ್ತಿಯನ್ನು ಪಡೆದು ಅನೇಕ ಸಂಘ ಸಂಸ್ಥೆಗಳ ಕಾರ್ಯನಿರ್ವಾಹಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಸಹ ಕಾರ್ಯದರ್ಶಿ, ಸುಮನಾ ಸಮಾನ ಸಾಂಸ್ಕೃತಿಕ ವೇದಿಕೆಯ ಸ್ಥಾಪಕ ಕಾರ್ಯದರ್ಶಿ, ಅಖಿಲ ಕರ್ನಾಟಕ ದಾಸಕೂಟದ ಸಂಸ್ಥಾಪಕ, ಆರ್ಯ ವೈಶ್ಯ ಸಂಘ ಮಲ್ಲೇಶ್ವರದ ಕಾರ್ಯಕ್ರಮ ಸಂಚಾಲಕ, ತಿರುಪತಿ-ತಿರುಮಲ ದೇವಸ್ಥಾನಗಳ ಧರ್ಮ ಪ್ರಚಾರ ವಿಭಾಗದ ಸಂಚಾಲಕ ಹೀಗೆ ಹತ್ತು ಹಲವು ಧಾರ್ಮಿಕ – ಸಾಂಸ್ಕೃತಿಕ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ ಸಂಸ್ಥೆಗಳು, ಮಠ – ಮಂದಿರಗಳ ಇವರ ಸೇವೆಯನ್ನು ವಿದ್ವತ್ತನ್ನು ಗುರುತಿಸಿ ಗೌರವ – ಸನ್ಮಾನಗಳನ್ನು ಮಾಡಿ ’ಕೀರ್ತನ ಚತುರ’, ’ಕೀರ್ತನ ಕಲಾ ಕೋವಿದ’, ’ಹರಿಕಥಾ ವಿದ್ವಾನ್’, ’ಹರಿಕಥಾ ಭೂಷಣ’, ’ಕಥಾ ಕೀರ್ತನ ಪರಿಮಳ’, ’ಹರಿಕಥಾ ಪ್ರವೀಣ’, ’ಹರಿಕಥಾ ರತ್ನ’ ಮುಂತಾಗಿ ಬಿರುದುಗಳನ್ನು ನೀಡಿವೆ.