ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದ ಚಿಕ್ಕ ಹೆಜ್ಜಾಲದಲ್ಲಿ ನಂಜಪ್ಪ -ಗೌರಮ್ಮ ದಂಪತಿಗಳ ಸುಪುತ್ರರಾಗಿ ೨೮-೮-೧೯೨೬ ರಂದು ಜನಿಸಿದವರು ಶ್ರೀನಿವಾಸರಾವ್. ಇವರ ತಾತ ರಂಗಣ್ಣನವರು ವೀಣಾ ತಯಾರಿಕರಾಗಿದ್ದರು. ತಾತನ ಮಾರ್ಗದರ್ಶನದಲ್ಲಿ ಸತತವಾಗಿ ಮೂರು ವರ್ಷಗಳು ಶ್ರಮಿಸಿ ವೀಣೆ ಮತ್ತು ತಂಬೂರಿ ತಯಾರಿಕೆಯ ವಿಧಾನವನ್ನು ಕಲಿತರು. ವಾದ್ಯ ತಯಾರಿಕೆ ಹಾಗೂ ರಿಪೇರಿ ಕೆಲಸದಲ್ಲಿ ಪರಿಣತರಾಗಿ ಸ್ವತಂತ್ರ ವಾದ್ಯ ತಯಾರಕರಾದರು. ಇವರು ತಯಾರಿಸಿದ ವಾದ್ಯಗಳು ಬೆಂಗಳೂರು, ಮುಂಬಯಿ, ಆಂಧ್ರ ತಮಿಳುನಾಡುಗಳ ಅನೇಕ ಕಲಾವಿದರನ್ನು ಸೇರಿ ಸಾರ್ಥಕವಾಗಿವೆ. ಹಾಗೇ ಇವರ ಕೆಲಸಕ್ಕೆ ಮೆಚ್ಚುಗೆಯೂ ದೊರೆತಿದೆ.

ಇವರ ನೈಪುಣ್ಯವನ್ನು ಗುರುತಿಸಿ ಮಧುರೈ ಆಕಾಶವಾಣಿಯವರು ತಮ್ಮ ನಿಲಯದ ಎಲ್ಲಾ ತಂಬೂರಿ ವೀಣೆಗಳನ್ನೂ ಇವರ ಮೂಲಕವೇ ದುರಸ್ತಿ ಮಾಡಿಸಿದ್ದಾರೆ. ಸಂಪ್ರದಾಯ ಬದ್ಧವಾಗಿ ಸೂಕ್ತವಾದ ಮರ ಮೊದಲಾದುವನ್ನು ಆಯ್ಕೆ ಮಾಡಿ ತಯಾರಿಸಿದರೆ ಮಾತ್ರ ವೀಣೆ ಉತ್ತಮ ವಾದ್ಯವಾಗದು. ಅದಕ್ಕೆ ಸರಿಯಾಗಿ ಮೇಳಕಟ್ಟಿ ನಾದ ತುಂಬುವ ಕಷ್ಟಕರವಾದ ಕೆಲಸದಲ್ಲಿ ಇವರು ನಿಪುಣರಾಗಿರುವುದರಿಂದ ಇವರ ತಯಾರಿಕೆಯಲ್ಲಿ ವೀಣೆ ತನ್ನತನವನ್ನು ಪಡೆದಿರುತ್ತದೆ. ವಿಶ್ವ ಸಂಗೀತ ವಾದ್ಯಗಳ ಪ್ರದರ್ಶನದಲ್ಲಿ ಅಮೇರಿಕಾದಲ್ಲಿ ಇವರ ವೀಣೆ ಮತ್ತು ತಂಬೂರಿಗಳು ಪ್ರದರ್ಶಿತವಾಗಿವೆ.

ಆರು ದಶಕಗಳನ್ನು ಸಮೀಪಿಸುತ್ತಿರುವ ಇವರ ಕೈಂಕರ್ಯ ಬೆಂಗಳೂರಿನ ಸಮೀಪದಲ್ಲಿರುವ ನೆಲಮಂಗಲದಲ್ಲಿ ಮುಂದುವರಿಯುತ್ತಿದೆ. ವಾದ್ಯ ತಯಾರಿಕೆಗಾಗಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩ ರ ಸಲಿನಲ್ಲಿ ’ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಇವರ ಸೇವೆಯನ್ನು ಗುರುತಿಸಿದೆ.