ಜನನ : ೬-೧೦-೧೯೪೬ – ಬೆಂಗಳೂರಿನಲ್ಲಿ

ಮನೆತನ :  ಸಂಗೀತಗಾರರ ಮನೆತನ. ತಂದೆ ವಿ. ನಾರಾಯಣಸ್ವಾಮಿ, ಪ್ರಸಿದ್ಧ ಬ್ಯಾಂಡ್ ಮಾಸ್ಟರ್ ಆಗಿದ್ದವರು. ಅಲ್ಲದೆ ೧೩ ಪಾಶ್ಚಾತ್ಯ ವಾದ್ಯಗಳ ನುಡಿಸುವ ಸಾಮರ್ಥ್ಯ. ತಾಯಿ ಶ್ರೀರಂಗಮ್ಮ – ಸಂಪ್ರದಾಯ ಹಾಡು ಹಾಡುತ್ತಿದ್ದರು.

ಗುರುಪರಂಪರೆ: ವಿ || ಸಿ. ಸುಬ್ಬು ಅವರಲ್ಲಿ ಮೃದಂಗ ಅಭ್ಯಾಸ. ಜೊತೆ ಜೊತೆಯಲ್ಲಿ ಉಪಲಯ ವಾದ್ಯಗಳನ್ನು ನುಡಿಸುವತ್ತ ಗಮನ. ಆಯ್ಕೆ ಮಾಡಿಕೊಂಡದ್ದು ಉಪಲಯ ವಾದ್ಯವನ್ನು.

ಸಾಧನೆ : ೧೯೮೧ ರಲ್ಲಿ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್ ಅವರ ಸಲಹೆ ಮಾರ್ಗದರ್ಶನದಂತೆ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಲ್ಲಿ ಉಪಲಯ ವಾದ್ಯಗಾರರಾಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಧ್ವನಿ ಸುರುಳಿ ತಯಾರಿಕಾ ಕ್ಷೇತ್ರದಲ್ಲಿ ಇವರು ೫೦೦ ಕ್ಕೂ ಹೆಚ್ಚು ಧ್ವನಿ ಸುರುಳಿಗಳ ಮುದ್ರಣದಲ್ಲಿ ತಮ್ಮ ಹಲವು ಬಗೆಯ ವಾದ್ಯಗಳನ್ನು ನುಡಿಸಿದ್ದಾರೆ. ಆಕಾಶವಾಣಿ ದೂರದರ್ಶನ ಕೇಂದ್ರಗಳಲ್ಲು ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಶ್ರೀನಿವಾಸ ಪ್ರಸಾದ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಯೋಜಿಸಿದ್ದ ಧ್ವನಿ ಸಂಸ್ಕರಣ ಹಾಗೂ ವಾದ್ಯಗಳ ತಾಂತ್ರಿಕತೆ ಬಗ್ಗೆ ನಡೆಸಿದ ಕಾರ್ಯಾಗಾರದಲ್ಲಿ ಉಪಲಯ ವಾದ್ಯಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದಾರೆ. ಘಟ, ಮೊರ್ಸಿಂಗ್, ಖಂಜರಿ, ಢೋಲಕ್ ಯಾವುದೇ ಉಪವಾದ್ಯ ಇವರಿಗೆ ಲೀಲಾಜಾಲ. ಬಿ.ಎಂ.ಶ್ರೀ ಪ್ರತಿಷ್ಠಾನ ನಡೆಸಿದ ಕಾರ್ಯಾಗಾರದಲ್ಲೂ ಈ ವಿಷಯದಲ್ಲಿ ಸೋದಾಹರಣ ನೀಡಿರುತ್ತಾರೆ.

ಬೆಂಗಳುರು ವಿಶ್ವವಿದ್ಯಾಲಯ, ’ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ರಮ್ಯ ಕಲ್ಚರಲ್ ಅಕಾಡೆಮಿ. ಹೊಂಬಾಳೆ ಪ್ರತಿಭಾರಂಗ, ಆದರ್ಶ ಸುಗಮ ಸಂಗೀತ ಅಕಾಡೆಮಿ, ಸಂಗೀತ ಸಾಧನಾ, ಕಾಳಿಂಗರಾಯರ ಬಳಗ, ಉಪಸನಾ ಮುಂತಾದೆಡೆಗಳಲ್ಲೆಲ್ಲಾ ಆ ಸಂಸ್ಥೆಗಳು ನಡೆಸಿದ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ.

ಇವೆಲ್ಲಕ್ಕೂ ಮುನ್ನ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರಾಜ್ಯ ಮಟ್ಟದ ಬ್ಯಾಂಡ್ ತಂಡದ ಕೊಳಲು ಮತ್ತು ಡ್ರಮರ್ ವಾದಕರಾಗಿ ಅನೇಕ ಜಂಬೋರಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಈ ತಂಡದ ಮೂಲಕ ರಾಷ್ಟ್ರಾದ್ಯಂತ ಪ್ರವಾಸ ಮಾಡಿರುತ್ತಾರೆ.

ಪ್ರಶಸ್ತಿ – ಸನ್ಮಾನ : ಸದಭಿರುಚಿ ಕಲಾವಿದರು ಸಂಸ್ಥೆಯಿಂದ ಗೀತಾಂಜಲಿ ಪ್ರಶಸ್ತಿ. ಹೊಂಬಾಳೆ ಪ್ರತಿಭಾ ರಂಗದಿಂದ ಕಲಾಕೋವಿದ ಪ್ರಶಸ್ತಿ ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೫-೦೬ರ ಸಾಲಿನ ವಾರ್ಷಿಕ ಪ್ರಶಸ್ತಿಯೂ ಇವರಿಗೆ ಲಭಿಸಿದೆ