(ಕ್ರಿ.ಶ. ೧೮೫೩-೧೯೧೭ (ಗಂಟಲುಮಾರಿಗೆ ರಕ್ತರಸಿಕೆ ಚಿಕಿತ್ಸೆ)

ಎಮಿಲ್ ಅಗಸ್ಟಸ್ ಬೆರ್ರಿಂಗ್ ೧೮೫೩ರಲ್ಲಿ ಜರ್ಮನಿಯ ಹ್ಯಾನ್ಸ್ ಡಾರ್ಫ್‌ನಲ್ಲಿ ಉಪಾಧ್ಯಾಯರ ಕುಟುಂಬದಲ್ಲಿ ಜನಿಸಿದರು. ಆತ ಬಡ ಕುಟುಂಬಕ್ಕೆ ಸೇರಿದ್ದನಾದರೂ ಅದರಿಂದ ಅವರ ವಿದ್ಯಾಭ್ಯಾಸಕೆನೂ ಭಂಗ ಉಂಟಾಗಲಿಲ್ಲ. ತನ್ನ ವೈದ್ಯಕೀಯ ವ್ಯಾಸಂಗವನ್ನು ಬರ್ಲಿನ್‌ನಲ್ಲಿ ಪ್ರಾರಂಭಿಸಿದರು. ವ್ಯಾಸಂಗಕ್ಕೆ ಬೇಕಾಗಿದ್ದ ಹಣವನ್ನು ಸೈನ್ಯದಲ್ಲಿ ದುಡಿದು ಸಂಪಾದಿಸಿದರು. ವೈದ್ಯಕೀಯ ವ್ಯಾಸಂಗ ಮುಗಿದ ಮೇಲೆ ಪುನಃ ಸೈನ್ಯದಲ್ಲಿ ಸೇವೆ ಸಲ್ಲಿಸತೊಡಗಿದರು. ಆಗಲೇ ಅವರ ಗಮನ ಪ್ರಯೋಗ ಪರೀಕ್ಷೆಗಳ ಕಡೆಗೆ ಹರಿಯಿತು.

ಸೋಂಕುರೊಧಕಗಳ ಬಳಕೆಗಿಂತ ಬೇರೆ ಬಗೆಯ ವಿಧಾನದ ಮೂಲಕ ದೇಹವನ್ನು ರೋಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಎಮಿಲ್ ಬೆರ್ರಿಂಗ್ ಪ್ರಯೋಗಗಳನ್ನು ಮಾಡಿದರು. ಆತ ಮಾಡಿದ ಈ ಪ್ರಯೋಗಗಳು ಮುಂದೆ ರಸಾಯನ ರೋಗ ಚಿಕಿತ್ಸೆಯ ಬೆಳವಣಿಗೆಗೆ ಬುನಾದಿಯನ್ನು ಹಾಕಿದವು.

ಮುಂದೆ ರಾಬರ್ಟ್ ಕವೀಹ್‌ರ ನೇತೃತ್ವದ ಜನಾರೋಗ್ಯ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಬೆರ್ರಿಂಗ್‌ಗೆ ಅಲ್ಲಿ ರಕ್ತರಸಿಕೆಯ ಬಗ್ಗೆ ಕೂಲಂಕಷ ಅಧ್ಯಯನ ಮಾಡಲು ವಿಫುಲ ಅವಕಾಶ ದೊರಕಿತು. ಅಲ್ಲಿ ಕಿಟಸಾಟೋ ಎಂಬುವರ ಜತೆಗೂಡಿ ಅವರು ಗಂಟುಮಾರಿ (ಡಿಫಿರಿಯ) ಮತ್ತು ಧನುವಾರ್ಯಯು ರೋಗಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸುವ ಪ್ರಯೋಗಗಳನ್ನು ಆರಂಭಿಸಿದರು. ಬೆರ್ರಿಂಗ್ ಗಿನಿ ಇಲಿಗಳ ಮೇಲೆ ಪ್ರಯೋಗ ಮಾಡಿ ಗಂಟಲು ಮಾರಿ ಜೀವಾಣುಗಳ ವಿರುದ್ಧ ಸೆಣೆಸಬಲ್ಲಂಥ ರಕ್ತರಸಿಕೆಯನ್ನು ಕಂಡುಹಿಡಿದರು. ಮುಂದೆ ಮ್ಯೂನಿಕ್, ಲೀಪ್‌ಜಿಗ್, ಬರ್ಲಿನ್ ಮೊದಲಾದ ನಗರಗಳಲ್ಲಿ ಗಂಟಮಾರಿ ರೋಗಕ್ಕೆ ಒಳಗಾಗಿದ್ದ ಮಕ್ಕಳಿಗೆ ರಕ್ತರಸಿಕೆ ಚಿಕಿತ್ಸೆ ನೀಡಿ ಮಕ್ಕಳನ್ನು ರಕ್ಷಿಸಲಾಯಿತು. ರಕ್ತರಸಿಕೆ ಚಿಕಿತ್ಸೆ ಎಲ್ಲೆಡೆಯಲ್ಲೂ ಬಳಕೆಗೆ ಬರತೊಡಗಿತು. ಬೆರ್ರಿಂಗ್‌ರನ್ನು “ಮಕ್ಕಳ ರಕ್ಷಕ” ಎಂದು ಕರೆಯಲಾಯಿತು. ನೊಬೆಲ್ ಪಾರಿತೋಷಕ ಸಮಿತಿ ತನ್ನ ಪ್ರಥಮ ವೈದ್ಯ ಪುರಸ್ಕಾರವನ್ನು ಎಮಿಲ್ ಬೆರ್ರಿಂಗ್‌ರಿಗೆ ನೀಡಿತು.

ಈ “ಮಕ್ಕಳ ರಕ್ಷಕ” ೧೯೧೭ರಲ್ಲಿ ನಿಧನ ಹೊಂದಿದರು.