(ಕ್ರಿ. ಶ. ೧೧೧೪-೧೧೮೫) (ಗಣಿತದ ಸಂಕೇತ ಪದ್ಧತಿ)

ಭಾರತದಲ್ಲಿ ಗಣಿತಶಾಸ್ತ್ರದ ಅಭಿವೃದ್ಧಿಗೆ ಅಮೋಘ ಸೇವೆ ಸಲ್ಲಿಸಿದ ಹೊಸ ಪದ್ಧತಿಗಳನ್ನು ಕಂಡು ಹಿಡಿದು ಗಣಿತಶಾಸ್ತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಪ್ರಮುಖ ಗಣಿತಶಾಸ್ತ್ರಜ್ಞ, ಎರಡನೆಯ ಭಾಸ್ಕರ, ಈತ ಅಸಾಧಾರಣ ಪ್ರತಿಭಾವಂತರಾಗಿದ್ದರು.

ಇಂದು ಗಣಿತಶಾಸ್ತ್ರದಲ್ಲಿ ಬಳಸಲಾಗುತ್ತಿರುವ ಸಂಕೇತ ಪದ್ಧತಿಯನ್ನು ಎರಡನೆಯ ಭಾಸ್ಕರರೇ ಕಂಡುಹಿಡಿದರೆಂದು ಹೇಳಲಾಗುತ್ತದೆ. ಈತ ಕ್ರಿ.ಶ. ೧೧೧೪ರಲ್ಲಿ ಈಗಿನ ವಿಜಾಪೂರ ಜಿಲ್ಲೆಯಲ್ಲಿ ಜನಿಸಿದರು. ಇವರು ಜ್ಯೋತಿಶ್ಯಾಸ್ತ್ರ, ಬೀಜಗಣಿತ ಮತ್ತು ಅಂಕಗಣಿತ ವಿಷಯಗಳನ್ನು ಕುರಿತು ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಅಂಕಗಣಿತ ಕುರಿತಾದ ಈತನ ಪುಸ್ತಕದ ಹೆಸರು “ಲೀಲಾವತಿ” ಎಂದಿದೆ. ಈ ಪುಸ್ತಕದಲ್ಲಿ ಎರಡನೆಯ ಭಾಸ್ಕರ “ಓ ಲೀಲಾವತಿ” ಎಂಬ ಪ್ರಸ್ತಾಪವನ್ನು ಪದೇ ಪದೇ ಮಾಡಿದ್ದಾರೆ. ಅದು ಯುವತಿಯ ಹೆಸರು. ಲೀಲಾವತಿ ಎಂಬ ಹೆಸರಿನ ಆ ಯುವತಿ ಭಾಸ್ಕರರ ಮಗಳೇ ಇರಬಹುದು ಎಂದು ನಂಬಲಾಗಿದೆ. ಆದರೆ ಈ ನಂಬಿಕೆಗೆ ಮಗಳೇ ಇರಬಹುದು ಎಂದು ನಂಬಲಾಗಿದೆ. ಇವರ ಇನ್ನೊಂದು ಕೃತಿ “ಕರಣಕೌತೂಹಲ”. ಇದು ಜ್ಯೋತಿಶ್ಯಾಸ್ತ್ರಕ್ಕೆ ಸಂಬಂಧಪಟ್ಟದ್ದು.

“ಲೀಲಾವತಿ” ಪುಸ್ತಕ ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿದೆ. ಅಂತಲೇ ಇಂದು ಕೂಡ ಸಂಸ್ಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯುತ್ತಾರೆ.

ಎರಡನೆಯ ಭಾಸ್ಕರ ತನ್ನ ಕೃತಿಗಳಲ್ಲಿ ದಶಮಾಂಶ ಪದ್ಧತಿಯನ್ನು ಬಳಸಿದ್ದಾರೆ. ಅಲ್ಲದೆ, ಅವರ ಹಿಂದಿನ ಗಣಿತಶಾಸ್ತ್ರಜ್ಞರು ಪರಿಹಾರ ಕಂಡು ಹಿಡಿಯದಿದ್ದಂಥ ಹಲವಾರು ಸಮೀಕರಣ ಸಮಸ್ಯೆಗಳನ್ನೂ ಬಿಡಿಸಿದ್ದಾರೆ. ಎರಡನೆಯ ಭಾಸ್ಕರ ಕ್ರಿ.ಶ. ೧೧೮೫ರಲ್ಲಿ ನಿಧನ ಹೊಂದಿದರು.

ಭಾರತ ತನ್ನ ಮೂರನೆಯ ಕೃತಕ ಉಪಗ್ರಹಕ್ಕೆ “ಭಾಸ್ಕರ-೨” ಎಂದು ನಾಮಕರಣ ಮಾಡಿ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.