ಸೂಚನೆ ||
ರಾಜೇಂದ್ರ ಧರ್ಮತನಯಂ ಬಾದರಾಯಣನ |
ವಾಜಿಮೇಧಾಧ್ವರ ವಿಧಾನಮಂ ಕೇಳ್ದು ಪಂ |
ಕೇಜಪತ್ರೇಕ್ಷಣನ ಮತವಿಡಿದುಃ ಕಳುಹಿದಂ ಕುದುರೆಗೆ ವೃಕೋದರನನು ||

ವನರುಹ ಭವಾಂಡದೊಳಗೈವತ್ತು ಕೋಟಿ ಯೋ |
ಜನದ ವಿಸ್ತೀರ್ಣದಿಳೆಯಂ ಸಪ್ತಶರನಿಧಿಗ |
ಳನುವೇಷ್ಟಿಸಿರಲದರ ಮಧ್ಯದೊಳಗಿಹುದು ಜಂಬೂದ್ವೀಪಮದರ ನಡುವೆ ||
ಅನವರತ ಸರಸ ಗೋಷ್ಠಿಗೆ ನೆರೆದ ನಿರ್ಜರಾಂ |
ಗನೆಯರಂಗಚ್ಛವಿಯ ಹಬ್ಬುಗೆಯೊ ಕಾರಮಿಂ |
ಚಿನ ಮಹಾರಾಶಿಯೋ ಪೇಳೆನಲ್ ಮೆರೆವ ಕನಕಾಚಲಂ ಕಣ್ಗೆಸೆದುದು ||೧||

ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು |
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |
ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |
ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |
ದೇಕಮಾನಸನಾಗಿ ಜೈಮಿನಿ ಮುನೀಂದ್ರನಂ ಬೆಸಗೊಂಡನೀ ತೆರದೊಳು ||೨||

ಪಿಂತೆ ಕೌರವಜಯಂ ತಮಗೆ ಕೈಸಾರ್ದ ಸಮ |
ನಂತರದೊಳಾದ ಸಾಮ್ರಾಜ್ಯದೊಳ್ ಪಾಂಡವರ |
ದೆಂತಿಳೆಯನೋವಿದರದೇಗೆಯ್ದರೆಂದು ಜನಮೇಜಯ ಮಹೀಪಾಲನು ||
ಸಂತಸಂದಳೆದು ಜೈಮಿನಿ ಮುನಿಪನಂ ಕೇಳ್ದೊ |
ಡಿಂತವಂ ಪೇಳ್ದನಾ ಭೂಪಂಗೆ ಸಕಲ ಜನ |
ಸಂತತಿಗೆ ಕರ್ಣಾವತಂಸಮೆನೆ ರಂಜಿಸುವ ಮಧುರತರ ಸತ್ಕಥೆಯನು ||೩||

ಕೇಳೆಲೆ ನೃಪಾಲ ಪಾಂಡವರ ಕಥೆಯಿದು ಪುಣ್ಯ |
ದೇಳಿಗೆಯಲ್ಲಾ ಸುಯೋಧನ ಮೇದಿನೀಶನಂ |
ಕಾಳಗದೊಳುರೆ ಗೆಲ್ದ ಬಳಿಕ ವರ ಹಸ್ತಿನಾಪುರದ ನಿಜ ಸಾಮ್ರಾಜ್ಯದ ||
ಬಾಳಿಕೆಯನನುಜರಿಂದೊಡಗೂಡಿ ಧರ್ಮಜಂ |
ತಾಳಿದಂ ಭರತ ನಳ ನಹುಷಾದಿ ರಾಯರಂ |
ಪೇಳುವೊಡವರ್ಗಿನಿತು ಗುಣಮಿಲ್ಲಮೆಂದು ಭೂಮಂಡಲಂ ಕೊಂಡಾಡಲು ||೪||

ಬಳಿಕ ನೃಪವರ ಯುಧಿಷ್ಠಿರನಾಳ್ವ ದೇಶದೊಳ್ |
ಕಳವು ಕೊಲೆ ಪಾದರಂ ಪುಸಿ ನುಸುಳು ವೈರವ |
ಟ್ವುಳಿ ತೋಹು ಬೆದರು ಬೆಜ್ಜರ ಕಷ್ಟನಿಷ್ಠುರಂ ಗಜರು ಗಾವಳಿ ವಿವಾದ ||
ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ |
ಮಳಿವು ಪಳಿವನ್ನಾಯ ಮರೆ ಮೋಸವಾಸಿ ತ |
ಲ್ಲಳ ತಳೆ ವಿಯೋಗಮಲಸಿಕೆ ಕರ‍್ಕ ಶಂಗಳಿವು ಮೊಳೆದೋರವೇಳ್ವೆನು ||೫||

ನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ ಸಂ |
ಪ್ರೀತಿ ಷರಹಿತ ಶುಭ ವಿಜಯ ವಿ |
ಖ್ಯಾತಿ ಕಲೆ ಸೌಭಾಗ್ಯಮಾರೋಗ್ಯ ಸೌಖ್ಯಮುನ್ನತ ಸತ್ಯ ನಿತ್ಯಭಕ್ತಿ ||
ಜಾತಿ ಧರ್ಮಾಚಾರ ನಿಷ್ಠೆ ದೈವಜ್ಞತೆ ವಿ |
ಭೂತಿ ಶಮೆ ದಮೆ ದಾನ ದಾಕ್ಷಿಣ್ಯಮೆಂಬಿವು ಮ |
ಹಾತಿಶಯಮೆನೆ ಪೆರ್ಚಿದುವು ಯುಧಿಷ್ಠಿರನರೇಶ್ವರನಾಳ್ವ ಭೂತಳದೊಳು ||೬||

ಕುಟಿಲ ಚಂಚಲ ಕಠಿನ ಮಾಂದ್ಯಮೆಂಬಿವು |
ತ್ಕಟ ಯೌವನಶ್ರೀವಿಲಾಸಿನಿಯರಳಕಾಳಿ |
ಚಟುಲ ಸುಕಟಾಕ್ಷ ವಕ್ಷೆಜಾತ ಮಧ್ಯ ಗತಿಗಳ ವಿಸ್ತರದೊಳಲ್ಲದೆ ||
ಘಟಿಸದು ಮದಾವಸ್ಥೆ ನಿಗಳಬಂಧನದ ಸಂ |
ಕಟ ಹರಿದ್ವೇಷ ಮತಿಹೀನತೆಗಳೆಂಬಿವಿಭ |
ಘಟೆಯೊಳಲ್ಲದೆ ಸಲ್ಲದೆಲ್ಲಿಯಂ ಧರ್ಮತನಯಂ ಪಾಲಿಸುವ ನೆಲದೊಳು ||೭||

ಗಾರುಡದೊಳಹುತತ್ವಮಾರಣ್ಯದೊಳ್ ದಾನ |
ವಾರಣಂ ಚಾರುಪ್ರವಾಳಮಣಿ ರುಚಿಯೊಳ್ ಸ |
ದಾರುಣಂ ಸರಸಿಯೊಳ್ ಕಲಹಂಸಸಮಯಮುತ್ಪಲಾಕ್ಷಿಯರ ಕಂಧರದೊಳು ||
ಹಾರವಲಯಂ ಭೂರುಹದೊಳನೇಕಾಗ್ರತೆ ನ |
ವಾರಾಮದೊಳ್ ಮಹಾಶೋಕಂ ವಸಂತದೊಳ್ |
ಮಾರಹಿತಮುಂಟಲ್ಲದಿಲ್ಲಮಿವು ಮತ್ತೆಲ್ಲಿಯುಂ ಧರ್ಮಜನ ನೆಲದೊಳು ||೮||

ಕೊಡೆಯೆಂಬರಾತಪತ್ರವನುದರದೇಶಮಂ |
ಪೊಡೆಯೆಂಬರೊಲಿದು ಮಂಥನವ ನೆಸಗೆಂಬುದಂ |
ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು ||
ಮಡಿಯೆಂಬರಂಬರದ ಧೌತಮಂ ಕಬರಿಯಂ |
ಮುಡಿಯೆಂಬರೆಡೆವಿಡದೆ ಮುಸುಕಿರ‍್ದ ಮೇಘಮಂ |
ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳ್ವಿಳೆಯೊಳು ||೯||

ಎಲ್ಲರುಂ ಭೋಗಿಗಳ್ ಪಾತಾಳಗತರೆನಿಸ |
ರೆಲ್ಲರುಂ ವಿದ್ಯಾಧರರ್ ನಭೋಜನರೆನಿಸ |
ರೆಲ್ಲರುಂ ದಾಕ್ಷಿಣ್ಯವರ್ತಿಗಳ್ ತಿಳಿಯೆ ಲಂಕಾನಿವಾಸಿಗಳೆನಿಸರು ||
ಎಲ್ಲರುಂ ಸುಮನೋರತರ್ ಮಧ್ರುವ್ರತರೆನಿಸ |
ರೆಲ್ಲರುಂ ಗುಣಯುತರ್ ಕಠಿನರೆನಿಸರ್ ಮನುಜ |
ರೆಲ್ಲರುಂ ಕಾಂತಾರಮಿತಭಾಗ್ಯಸಂಪದರ್ ಕುಜರೆನಿಸರವನಿಳೆಯೊಳು ||೧೦||

ವಸುಗಳಿಂದುಪಭೋಗ್ಯಮಾಗದೊಡೆ ಸೌರಭ್ಯ |
ರಸದಿಂದಮಾರೋಗ್ಯಮೆನಿಸದೊಡೆ ಸಂತತಂ |
ವಿಶದ ಸುಮನೋಯೋಗ್ಯಮಲ್ಲದೊಡೆ ಹರಿವಿಭವ ಸುಶ್ಲಾಘ್ಯಮಲ್ಲದಿರಲು ||
ಲಸದಪ್ಸರೋದ್ಯಾನ ಸೌಭಾಗ್ಯಮೊಂದಿರದೊ |
ಡೆಸೆವ ರಾಜೇಂದ್ರಂಗೆ ಸೊಗಸುವೀಡಾಗಿ ರಂ |
ಜಿಸದೊಡೆ ಹಸ್ತಿನಾವತಿಯನಮರಾವತಿಗೆ ಸರಿಯೆಂಬರೇ ಪ್ರೌಢರು ||೧೧||

ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತ ಮರ |
ನಾಗೇಂದ್ರನಂ ಬುದ್ಧಿದೊರೆಸಿತ್ತು ಪುರಮರ‍್ದ |
ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ ||
ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ |
ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ |
ನಾಗೇಂದ್ರಧರನ ಪಾತೆಯ ನಿಲವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು ||೧೨||

ಹರಿಯಂತೆ ಬಲಯುತಂ ಶಿವನಂತೆ ರಾಜಶೇ |
ಖರನಬ್ಜಭವನಂತೆ ಚತುರಾನನಂ ಸರಿ |
ದ್ವರನಂತೆ ರತ್ನಾಕರಂ ದಿವಾಕರನಂತೆ ನಿರ‍್ದೋಷನಿಂದ್ರನಂತೆ ||
ಪರಿಚಿತಸುರಭಿರಮ್ಯನಮೃತಾರ್ಚಿಯಂತೆ ವಿ |
ಸ್ತರಿತಕುವಲಯನೆಂದು ಧರ್ವಜನ ಧರೆ ಪೊಗಳು |
ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸನೊಂದುದಿವಸಂ ಬಂದನು ||೧೩||

ಬರಲಾ ನೃಪಾಲಕಂ ಸೋದರರ‍್ಪೆರಸಿ ಮುನಿ |
ವರನ ಪದಕೆರಗಿದೊಡೆ ಮಣೀದೆತ್ತಿ ಬೋಳೈಸಿ |
ಪರಸಿ ಮಂತ್ರಾಕ್ಷತೆಯನ್ನಿತ್ತು ಸತ್ಕಾರಮಂ ಕೊಂಡು ಕುಳ್ಳಿರ್ದ ಬಳಿಕ ||
ಅರಸನನುತಾಪದಿಂ ತಲೆವಾಗಿ ಮಾತಾಡ |
ದಿರುತಿರ್ದನನಿಲ ಸಂಚಾರಮೊಂದಿನಿತಿಲ್ಲ |
ದುರಿವ ಕಡುವೆಸಗೆಯ ಬಿಸಿಲಿನಿಂದ ಬಸವಳಿದ ಕೋಮಲರಸಾಲದಂತೆ ||೧೪||

ಕಂಡನರಸನ ಭಾವಮಂ ಬಳಿಕ ನಗುತೆ ಬೆಸ |
ಗೊಂಡನಿಂತೆಂದಾ ಮುನೀಂದ್ರನೆಲೆ ನೃಪತಿ ಭೂ |
ಮಂಡಲದ ಸಕಲ ಸಾಮ್ರಾಜ್ಯಮಂ ಪಾಲಿಸುವ ನಿನ್ನ ಸಂತಸದೇಳ್ಗೆಗೆ ||
ಖಂಡನವ ಮಾಳ್ಪುಧಾನನದಿರವು ಸಾಕು ಮನ |
ದಂಡಲೆಯ ತೊರೆಯೆನಲ್ ಜೀಯ ಸಂತಾಪದಿಂ |
ಬೆಂಡಾದುದೆನ್ನೂಡಲ್ ಸೈರಿಸಲರಿಯೆನೆಂದೊಡಾ ತಪೋನಿಧಿ ನುಡಿದನು ||೧೫||

ಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ |
ಪೊತ್ತುವೆಳಗಂ ಬೇರೆ ತೋರ‍್ಪರಾರ್ ಬಿಡದೆ ಘ |
ರ‍್ಮೋತ್ತರಕೆ ಮಾರುತಂ ಬೆಮಗ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದೆ ||
ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ |
ಮತ್ತೆ ರಕ್ಷೆಗೆ ಮಂತ್ರಸುವರಾರು ಭೂಪ ನೀ |
ನೊತ್ತುವನುತಾಪಕೆಡೆಗೊಟ್ಟೂಡಾರ್ ಬಿಡಿಸುವರ್ ಪೇಳೆಂದನಾ ಮುನಿಪನು ||೧೬||

ಎನಲಾ ಮುನೀಂದ್ರನಂ ನೋಡಿ ಬಿಸುಸುಯ್ಯತೊ |
ಯ್ಯನೆ ಮಹೀಪಾಲನಿಂತೆಂದನೆಂತೆನ್ನ ಮನ |
ದನುತಾಪಮಂ ಬಿಡುವೆನಕಟ ಶಿಶುತನದಿಂದೆ ಸಲಹಿದ ಪಿತಾಮಹಂಗೆ ||
ನೆನೆದೆವನುಚಿತವನಗ್ರಜನೆಂದರಿಯದೆ ಕ |
ರ್ಣನನಿರಿದೆವಾರ್ಚಾವಧೆಗೆಳಸಿದೆವು ಸುಯೋ |
ಧನ ಶಲ್ಯ ಮುಖ್ಯ ಬಾಂಧವರನೀಡಾಡಿದೆವು ಬದುಕಲೇಕಿನ್ನಿಯೊಳು ||೧೭||

ಶಿಷ್ಯರಿಂದಭಿವಧಿಸದ ಗುರುವಿನಂತೆ ವೈ
ದುಷ್ಯದಿಂ ಪೂಜ್ಯನಾಗದ ವಿಪ್ರನಂತೆ ಸುಹ |
ವಿಷ್ಯದಿಂ ಸೇವ್ಯನಾಗದ ವಹ್ನಿಯಂತೆ ಸಲಿಲಾಶಯವನಾಶ್ರೈಸದ ||
ಕೃಷ್ಯದಂತಖಿಳ ಬಾಂಧವರೊಡನೆ ಬದುಕುವ ಮ|
ನುಷ್ಯ ಸಂಸಾರದಿಂದೇನದರಿನೀ ನಿಜಾ |
ಯುಷ್ಯಮುಳ್ಳನ್ನ ಪರಿಯಂತ ವನವಾಸವಂ ಮಾಡುವುದೆ ಲೇಸೆಂದನು ||೧೮||

ಕಾಯದುಪಭೋಗ ಸಿರಿಯಂಬಯಸಿ ಸುಗತಿಯಂ |
ಕಾಯದುರುತರ ವೈರದಿಂದಖಿಳಬಾಂಧವ ನಿ |
ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ ||
ಕಾಯದುಳಿಯದು ಮಹಿಯನಿನ್ನಾಳ್ದೊಡಂ ಜಸಂ |
ಕಾಯದುರೆ ಮಾಣದದರಿಂದರಸುತನವೆ ಸಾ |
ಕಾ ಯದುಕುಲೇಂದ್ರನಂ ಭಜುಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು ||೧೯||

ಆಗಳರಸನ ಮಾತಿನಾಸರಂ ಕೇಳ್ದು ತಲೆ |
ದೂಗಿ ಮುನಿಪುಂಗವಂ ನುಡಿದನೆಲೆ ಭೂಪ ನಿಗ |
ಮಾಗಮ ಪುರಾಣ ಶಾಸ್ತ್ರಂಗಳ ವಿಚಾರಂ ನೀನರಿಯದಪ್ರೌಢವೆ ||
ಈಗಳನುತಾಪಮೇತಕೆ ನಿಖಿಳ ಸಾಮ್ರಾಜ್ಯ |
ಮಾಗಲಿಳೆಯಂ ಧರ್ಮದಿಂ ಪಾಲಿಸದೆ ಬನಕೆ |
ಪೋಗಲಾವುದು ಸಿದ್ಧಿ ನಿನಗಪ್ಪುದುಸುರೆನೆ ಧರಾನಾಥನಿಂತೆಂದನು ||೨೦||

ಜೀಯ ಚಿತ್ತೈಸಾದೊಡಿನ್ನ ಖಳ ಸಾಮ್ರಾಜ್ಯ |
ಮಾಯಿತೆಂಬುತ್ಸವಂ ತನಗಿಲ್ಲ ಕರ್ಣ ಗಾಂ |
ಗೇಯ ಗುರು ಶಲ್ಯ ಕೌರವರನುಳಿದೀ ಸಕಲಮೇದಿನೀಮಂಡಲವನು ||
ವಾಯುಜನೊಳಿರಿಸಿ ನಾಂ ಗೋತ್ರ ವಧೆಗೆಯ್ಸಿದೀ ||
ಕಾಯಮಂ ವನವಾಸಕೈದಿಸುವೆನೆನೆ ಬಾದ |
ರಾಯಣಂ ಗಹಗಹಿಸಿ ನಗುತೆ ನುಡಿ ನುಡಿ ಮತ್ತೆ ನುಡಿಯೆನುತ್ತಿಂತೆಂದನು ||೨೧||

ಕ್ಷಾತ್ರಧರ್ಮವನೀಕ್ಷಿಸಲ್ ನಿನಗೆ ಪಾತಕಂ |
ಗೋತ್ರವಧೆಯಿಂದೆ ಬಪ್ಪುದೆ ಮಹಾದೇವ ನೀಂ |
ಧಾತ್ರಿಯಂ ಪಾಲಿಸದಿರಲ್ಕೆ ನಿರ್ದೋಷಿಯೇ ನಾವರಿಯೆವೀಗ ನಿನ್ನ ||
ಗಾತ್ರಮಂ ವನವಾಸಕೈದಿಸುವ ಮತಮಾವ |
ಸೂತ್ರದೊಳ್ ಕಾಣಿಸಿತೊ ಲೇಸು ಲೇಸಾರಣ್ಯ |
ಯಾತ್ರೆಯಂ ಮಾಡು ನೀಂ ಮಾರುತಿಗೆ ಪಟ್ಟಮಂ ಕಟ್ಟುವೆವು ನಾವೆಂದನು ||೨೨||

ಧರ್ಮಸುತ ಮರುಳೆ ನೀನಿಂತಾಡುತಿರ್ದೊಡೆ ಬು |
ಧರ್ಮೆಚ್ಚುವರೆ ಸಾಕದಂತಿರಲಿ ಸೋಮಕುಲ |
ಜರ್ಮಹಾಕ್ರತುಗಳಂ ಮಾಡಿದಲ್ಲದೆ ಸಲ್ಲರದರಿಂದೆ ನಿನಗಿಳೆಯೊಳು ||
ನಿರ್ಮಲಸುಕೀರ್ತಿಯಪ್ಪಂತೆ ಯಜ್ಞಾದಿ ಸ |
ತ್ಕರ್ಮಂಗಳಂ ನೆಗಳ್ಚಲ್ ಗೋತ್ರವಧೆಗಳಂ |
ನಿರ್ಮಿಸಿದಘಂ ಪೋಗಿ ಶುಚಿಯಾಗಿ ಬಾಳ್ದಪೆಯೆನಲ್ ಭೂಪನಿಂತೆಂದನು ||೨೩||

ಅದೊಡೆ ತವಾನುಗ್ರಹಪ್ರಭಾವದೊಳಿನ್ನು |
ಮೇದಿನಿಯ ನಾನೆ ಪಾಲಿಸುವೆನೀ ಗೋತ್ರಹ |
ತ್ಯಾ ದೋಷಮೇತರಿಂ ಪೋಪುದಾ ತೆರನಂ ತಿಳಿಪಿ ರಾಜಕುಲದ ನೃಪರ |
ಸಾಧು ಚಾರಿತ್ರಮೆನ್ನಿಂದೆ ಸೊಗಡಾಗದಂ |
ತಾದರಿಸಿ ನೀವೆ ಕಾರುಣ್ಯದಿಂ ಮಾಳ್ಪುದು ಶು |
ಭೋದಯವನೆನಗೆಂದು ಕೈ ಮುಗಿದು ಧರ್ಮಜಂಗಾ ಮುನಿಪನಿಂತೆಂದನು ||೨೪||

ಎಣಿಕೆ ಬೇಡಲೆ ಮಗನೆ ರಾಈವಂ ಪಿಂತೆ ರಾ |
ವಣನಂ ಮಥಿಸಿ ವಾಜೆಮೇಧದೊಳ್ ಪಾರ‍್ವರಂ |
ತಣಿಪಿದಂ ನೀನುಮಂತಾ ಮಹಾಧ್ವರವನೆಸಗರ್ ನಿನಗೆ ಮೂಜಗದೊಳ್ ||
ಎಣೆಯಿಲ್ಲೆನಲ್ಕೆಂದು ಮಾಳ್ಪೆ ನಾನಾವ ಲ|
ಕ್ಷಣದ ಹಯಮದಕೆ ಋತ್ವಿಜರೆನಿಬರೆನಿಸು ದ |
ಕ್ಷಿಣೆಗಳದರಂದಮಂ ವಿಸ್ತರಿಸವೇಳ್ವುದೆನೆ ಶುಕತಾತನಿಂತೆಂದನು ||೨೫||

ಸ್ವಚ್ಛತರ ಧವಳಾಂಗದತಿ ಮನೋಹರ ಪೀತ |
ಪುಚ್ಛದ ಸುಗಮನದೊಂದೇ ಕಿವಿಯೊಳೆಸೆವ ನೀ |
ಲಚ್ಛವಿಯ ಕೋಮಲ ತುರಂಗಮಂ ಸಾಧಿಸಿ ಮಹಾಕ್ರತುವನಾಚರಿಪೊಡೆ ||
ಇಚ್ಛೆಗೈದುರೆ ಸಕಲ ಮೇದಿನೀ ತಳವನೇ |
ಕಚ್ಛತ್ರದಿಂ ಪಾಲಿಸುವ ನರೇಶ್ವರನವಂ |
ಗಚ್ಛಿದ್ರಮಾಗಿ ನಡೆವುದು ಭೂಪಕುಲದೀಪ ಕೇಳದರ ಮಾಳ್ಕೆಗಳನು ||೨೬||

ಸತ್ಯಶೌಚಾಚಾರ ಕುಲ ವೇದಶಾಸ್ತ್ರ ಪಾಂ |
ಡಿತ್ಯದ  ಸುವಿಪ್ರರಿಪ್ಪತ್ತು ಸಾವಿರಕೆ ನೈ |
ಪಥ್ಯ ವಸ್ತ್ರಾದಿ ಪೂಜೆಗಳಿಂದೆ ಸತ್ಕರಿಸಿ ಬೇರೆಬೇರೆವರವರ್ಗೆ ||
ಪ್ರತ್ಯೇಕವೊಂದೊಂದು ಬಳ್ಳ ಮುಕ್ತಾಫಲವ |
ನತ್ಯಧಿಕ ಹಯಗಜ ರಥಂಗಳೊಂದೊಂದನೌ |
ಚಿತ್ಯ ಸಾಲಂಕಾರಗೋಸಹಸ್ರವನೊಂದು ಭಾರ ಪೊನ್ನಂ ಕುಡುವುದು ||೨೭||

ಸನ್ನುತ ಕುಲಚಾರ ಗುಣ ವೇದಶಾಸ್ತ್ರ ಸಂ |
ಪನ್ನ ಭೂಸುರರನಿಬರೀ ತೆರದ ಸೌಖ್ಯತರ |
ಮನ್ನಣೆಗಳಂ ಪಡೆದು ಸಭೆಯಾಗಿ ಕುಳ್ಳಿರ್ದನುಜ್ಞೆಯಂ ಕೊಟ್ಟ ಬಳಿಕ ||
ಇನ್ನು ಮೇದಿನಿಪೊಳಾರಾದೊಡಂ ಮಿಡುಕುಳ್ಳೊ |
ಡುನ್ನತ ಪರಾಕ್ರಮಿ ತಡೆಯಲಿ ವಾಜಿಯನೆಂದು |
ತನ್ನ ಬಿರುದಂ ಬರೆದು ಪೊಂಬಟ್ಟಮಂ ಕಟ್ಟಿ ಬಿಡುವುದಾ ಹಯದ ಘಣಿಗೆ ||೨೮||

ಆ ಕುದುರೆ ಬಿಟ್ಟೊಂದು ವರ್ಷ ಪರ‍್ಯಂತ ತಾ |
ನೇ ಕಂಡಕಡೆಗೆ ತೆರಳಲ್ಕದರ೪ ಸಂಗಡಂ |
ಭೂಕಾಂತಸೂನುಗಳ್ ಪಲಬರಡಿಗಡಿಗೆ ಮಣಿಕನಕ ರಾಶಿಗಳ ಸುರಿದು ||
ಲೋಕಮಂ ತಣಿಸುತೈತರಲಖಿಳ ದೆಸೆಯೊಳದ |
ನಾಕೆವಾಳರ್ ತಡೆಯೆ ಬಿಡಿಸಬೇಕನಿಬರಿಂ |
ನೂಕದೊಡೆ ಕರ್ತೃ ತಾನಾದೊಡಂ ಪೋಗಿ ನಡೆಸುವುದು ಬಳಿಕಾಹಯವನು ||೨೯||

ಇಂತಾಹಯಂ ತಾನೆ ಮೇದಿನಿಯೊಳೊಂದು ವರು |
ಷಂ ತಿರುಗಿ ತನ್ನಿಳೆಗೆ ಬಂದು ನಿಲುವಲ್ಲಿಪರಿ |
ಯಂತಮಸಿಪತ್ರವೆಂಬುರುತರವ್ರತನಾಚರಿಸುತಿರ್ದಾ ಮಖವನು ||
ಮುಂತೆ ವೇದೋಕ್ತದಿಂ ಮಾಳ್ಪುದಿದರಮದಮಿದು |
ಕುಂತೀಕುಮಾರ ನೀನಾರ್ಪೊಡುಜ್ಜುಗಿಸೆನಲ್ |
ಚಿಂತಿಸುತೆ ನುಡಿದನೊಯ್ಯನೆ ಧರಿತ್ರೀತಳಾಧಿಪನಾ ತಪೋಧನನೊಳು ||೩೦||

ದ್ರವ್ಯಮೆನಗಿಲ್ಲ ಮೇದಿನಿಯೊಳರಸವೊಡೆ ಕೌ |
ರಮ್ಯರಿಂದಿಳೆನೊಂದುದಿ ನಿತುಲಕ್ಷಣಮುಳ್ಳ |
ದಿವ್ಯ ಹಯಮಿಲ್ಲ ಸೋದರರಾಹವಸಿದರ್‌ಸಹಾಯಂಗಳಿಲ್ಲ ||
ಸವ್ಯಸಾಚಿಯ ಮಿತ್ರನಿಲ್ಲಿಲ್ಲ ತನಗಧ್ಯ |
ರವ್ಯ ಸನಮೆಂತೊಡರ‍್ಪುದು ಪೇಳಿಮೆನಲು ವೇ |
ದವ್ಯಾಸ ಮುನಿವರಂ ಕರುಣದಿಂದಾ ಯುಧಿಷ್ಠಿರನೃಪನೊಳಿಂತೆಂದನು ||೩೧||

ರಾಯ ನೀನಿದಕೆ ಚಿಂತಿಸಬೇಡ ಧನಮಂ ಸ |
ಹಾಯಮಂ ತುರಗಮಂ ತೋರುವೆಂ ಮರುತನೆಂ |
ಬಾಯುಗದ ನೃಪನಶ್ವಮೇಧಮಂ ಮಾಡಿ ಬಹು ಕನಕಮಂ ಭೂಸುರರ್ಗೆ ||
ಈಯಲವರೊಯ್ಯುತೆಡೆಯೊಳಗಲಸಿ ಬಿಟ್ಟರ |
ಪ್ರೀಯದಿಂದಾ ವಸ್ತುವಿದೆ ಹಿಮಾಲಯದೊಳದ |
ಕಾಯಸಂ ಪಿರಿದಿಲ್ಲ ತಂದು ನೀನುಪಯೋಗಿಸೆನಲರಸನಿಂತೆಂದನು ||೩೨||

ಅಕಟ ಜಡಮತಿಗೆ ಮರುಳುಮ್ಮತವನಿಕ್ಕಿದೊಡೆ |
ಸುಕಲೆಯಪ್ಪುದೆ ಜೀಯ ಗೋತ್ರ ಸಂಹರಣ ಪಾ |
ತಕವನೊರಸುವ ಮಖವನಾ ವಿಪ್ರರೊಡವೆಯಿಂ ಮಾಡಲೆನಗಿಹ ಪರದೊಳು ||
ಪ್ರಕಟಮೆನಿಪುವೆ ಕೀರ್ತಿ ಸದ್ಗತಿಗಳೆನೆ ಮಗನೆ |
ಸಕಲ ಭೂಮಂಡಲಂ ದ್ವಿಜರದಲ್ಲವೆ ರಾಜ |
ನಿಕರವಂ ತರಿದೀಯನೇ ಪರಶುರಾಮನೀ ಧರೆಯನವನೀಸುರರ್ಗೆ ||೩೩||

ಬಾಹುಬಲಮುಳ್ಳ ನೃಪರೊಡೆಯರೀ ಧರೆಗೆ ಸಂ |
ದೇಹಮಿಲ್ಲದರಿಂ ದ್ವಿಜರ್ಗೆ ಸಲ್ಲದು ಬಗೆವೊ |
ಡಾ ಹಿಮಾಲಯದೊಳಿಹ ವಸ್ತು ನಿನ್ನದು ಯೌವನಾಶ್ವನೆಂಬವನೀಶನು ||
ಮೋಹದಿಂ ಭದ್ರಾವತೀ ನಗರದೊಳ್ ದಶಾ |
ಕ್ಷಾಯಿಣೀ ಸೇನೆಯಿಂ ಪಾಲಿಸುವನಿಂತಹ ಮ |
ಹಾ ಹಯೋತ್ತಮಮೊಂದನದು ನಿನಗೆ ಬಾರದಿರ್ಪುದೆ ಶೌರ‍್ಯಮುಂಟಾದೊಡೆ ||೩೪||

ಈ ಘಟೋತ್ಕಚನ ತನುಸಂಭವಂ ಬಡವನೇ |
ಮೇಘನಾದಂ ಕರ್ಣಸೂನು ವೃಷಕೇತು ತಾಂ |
ಮೋಘವಿಕ್ರಮನೆ ನಿನ್ನನುಜರೇಂ ಕಿರುಕುಳರೆ ಹರಿ ನೆನಸಿದೊಡೆ ಬಾರನೆ ||
ನೀ ಘನವಿದೆನ್ನದಿರು ಕೈಕೊಳಧ್ವರವ ತಾ |
ನೇ ಘಟಿಪುದಿನ್ನು ಸಂಶಯವೇಕೆ ಕರೆಸು ವಿ |
ಪ್ರೌಘವನೆನಲ್ ನೃಪಂ ನಗುತೆ ಕಲಿಭೀಮನಂ ನೋಡುಲವನಿಂತೆಂದನು ||೩೫||

ಜೀಯ ಸಂದೇಹಮೇಕುಜ್ಜುಗಿಸು ಮಖಮಂ ಸ |
ಹಾಯಮಂ ಧನಮಂ ತುರಂಗಮಂ ನಿನಗೆ ನಿ |
ರ‍್ದಾಯದಿಂ ತೋರಿಸಿದನೀ ಮುನಿಪ ನಾಂ ಪೋಗಿ ಭದ್ರಾವತೀನಗರಿಗೆ ||
ಆ ಯೌವನಾಶ್ವನಂ ಗೆಲ್ದವನ ಸೇನಾನಿ |
ಕಾಯಮಂ ತರಿದಾ ಸುವಾಜಿಯಂ ತಂದು ಮಖ |
ಕೀಯದೊಡೆ ಪರಲೋಕಬಾಹಿರಂ ತಾನಪ್ಪೆನೆಂದು ಮಾರುತಿ ನುಡಿದನು ||೩೬||

ಯಜ್ಞಕ್ಕೆ ತುರುಗಮಂ ತಹೆನೆಂದು ಭೀಮಂ ಪ್ರ |
ತಿಜ್ಞೆಯಂ ಮಾಡುತಿರಲಾ ಕ್ಷಣದೊಳಾಹವಕ |
ಭಿಜ್ಞನೆನಿಸುವ ಕರ್ಣಸುತ ವೃಷಧ್ವಜನೆದ್ದು ನಗುತೆ ಕೈಮುಗಿದು ನಿಂದು ||
ವಿಜ್ಞಾಪನಂಗೆಯ್ದ ನೆಲೆ ತಾತ ಕೊಡು ತನಗ |
ನುಜ್ಞೆಯಂ ಪವಮಾನತನುಜನಾಡಿದ ನುಡಿಗ |
ವಜ್ಞೆ ಬಂದೊಡೆ ರವಿಕುಮಾರಂಗೆ ಜನಿಸಿದನೆ ನೋಡೆನ್ನಧಟನೆಂದನು ||೩೭||

ವ್ಯಗ್ರದಿಂ ಬಾಲನಾಡಿದ ನುಡಿಗೆ ಭೂಪತಿ ಸ |
ಮಗ್ರಸಂತೋಷದಿಂ ತಗೆದಪ್ಪಿಕೊಂಡು ನಿ |
ನ್ನುಗ್ರ ಪ್ರತಾಪಮಂ ಬಲ್ಲೆನಾಂ ಮಗನೆ ಕೇಳೆಂದು ನೆಲದಾಸೆಯಿಂದ ||
ಅಗ್ರಜನನಿರಿದುದಲ್ಲದೆ ಪಸುಳೆ ನಿನ್ನ ನೀ |
ವಿಗ್ರಹಕೆ ಕಳುಹಿ ಸೈರಿಸುವೆನೆಂತಕಟ ವಾ |
ಜಿಗ್ರಹಣಕಾರ್ಯಮಂತಿರಲೆಂದೊಡವನೀಶ್ವರಂಗಾತನಿಂತೆಂದನು ||೩೮||

ತಾತ ಕೇಳ್ ಸಹಜಾತರಾದ ನಿಮ್ಮೈವರೊಳ್ |
ತಾ ತಳ್ತಿರದೆ ವಿರೋಧಿಸಿದನೆಮ್ಮಯ್ಯನಂ |
ತಾತನಪರಾಧಮಂ ಪರಿಹರಿಸದಿರ್ದೊಡಾನಿರ್ದು ಫಲವೇನು ಬಳಿಕ ||
ಆ ತುರಂಗಮಕೆ  ಪೋಪನಿಲಜನ ಕೂಡೆ ನಡೆ |
ದಾತುರದೊಳೆಯ್ತರ್ಪ ರಿಪುಚಾತುರಂಗಕಿದಿ |
ರಾತು ರಣದೊಳ್ ಗೆಲ್ವೆನಹಿತರಂ ತನಗೆ ಬೆಸೆಸೆಂದನಾ ಕರ್ಣಸೂನು ||೩೯||

ಅಪ್ರತಿಪರಾಕ್ರಮಿ ವೃಕೋದರಂ ಮಾಡಿದ ಘ |
ನ ಪ್ರತಿಜ್ಞೆಯನಿನಜತನಯನಾಡಿದ ಗಭೀ |
ರಪ್ರತಾಪವನಾಗಳಾ ಘಟೋತ್ಕಚನ ಸುತ ಮೇಘನಾದಂ ಕೇಳಿದು ||
ಕ್ಷಿಪ್ರದಿಂದೆದ್ದು ಬಂದವನಿಪಾಲಕನ ಚರ |
ಣಪ್ರದೇಶಕೆ ತನ್ನ ಹೊಳೆಹೊಳೆವ ಲಲಿತ ರತ್ನ |
ಪ್ರಭಾಶೋಭಿತ ಕಿರೀಟಮಂ ಚಾಚುತೊಯ್ಯನೆ ಬಿನ್ನಪಂ ಗೆಯ್ದನು ||೪೦||

ಭದ್ರಾವತಿಗೆ ನಡೆದು ಯೌವನಾಶ್ವನ ಬಲ ಸ |
ಮುದ್ರಮಂ ಕಲಕದಿರ್ಪನೆ ಕೆರಳ್ದೊಡೆ ಕಾಲ |
ರುದ್ರನಲ್ಲಾ ವೃಕೋದರನೀ ವೃಷಧ್ವಜನೊಳಿದಿರಾಂಪೊಡಾಹವದೊಳು ||
ಅದ್ರಿಮಥನಂಗರಿದು ಸಾಕದಂತಿರಲಿ ವೈ |
ರಿದ್ರು ಮಂಗಳನೆ ಖಂಡಿಸುವೆನೆಂಬಾಳುತನ |
ದುದ್ರೇಕಮೆನಗಿಲ್ಲ ನಿನ್ನ ವರ್ಗಶ್ವಮಂ ಪಿಡಿದೊಪ್ಪಿಸುವೆನೆಂದನು ||೪೧||

ಕರ್ಣತನುಸಂಭವಂ ಬಂದೊಡೇನೀ ಮೇಘ |
ವರ್ಣನೈತಂದೊಡೇನಾಂ ಪೋದೊಡೇನೀ ಸು |
ಪರ್ಣವಾಹನನ ಬಲ್ಪುಂಟಾದೊಡಪ್ಪುದಿವರಿರ್ವರಂ ಕೂಡಿಕೊಂಡು ||
ಅರ್ಣವೋಪಮ ಯೌವನಾಶ್ವ ಚತುರಂಗಮಂ |
ನಿರ್ಣಾಮವೆನೆಸಿ ವಾಜಿಗ್ರಹಣಕಾರ್ಯಮಂ |
ನಿರ್ಣಯಿಸಿ ಕೊಡುವೆನಿತ್ತಪುದೆನೆಗೆ ವೀಳೆಯವನೆಂದನಿಲಜಂ ನುಡಿದನು ||೪೨||

ಇಂದುಕುಲತಿಲಕ ಜನಮೇಜಯನರೇಂದ್ರ ಕೇ |
ಳಂದವರ್ ಮೂವರಂ ತುರಗಮಂ ಕೊಂಡು ಬಹೆ |
ವೆಮದು ಬೆಸವಂ ಬೇಡಿ ನಿಂದಿರಲ್ ಬಾದರಾಯಣನ ಮೊಗಮಂ ನೋಡುತೆ ||
ಇಂದಿವರನಾಂ ಕಳುಪಲಸುರವೈರಿಗೆ ಬೇಸ |
ರೊಂದಿನಿಸು ತೋರದಿರ್ಪುದೆ ಜೀಯ ತನಗಿದಕೆ |
ಮುಂದುಗಾಣಿಸದು ಕರುಣೆಪುದೆನೆ ಯುಧಿಷ್ಠಿರಂಗಾ ತಪೋನಿಧಿ ನುಡಿದನು ||೪೩||

ಭೂಪ ಕೇಳ್ ನೀಂ ಮರುಳೆ ಹರಿ ನಿನ್ನೆಡೆಯೊಳಲಸ |
ಲಾಪನೇ ಬೆಸನ ಬೇಡುವ ವೃಕೋದರನಪ್ರ |
ತಾಪನೇ ವೃಷಕೇತು ಮೇಘವರ್ಣಕರನೊಡಗೊಂಡು ಕುದುರೆಗೆ ನಡೆಯಲಿ ||
ಈ ಪವನ ತನಯನಂ ಕಳುಹೆಂದು ನಯದೊಳಾ |
ತಾಪಸೋತ್ತಮನೊಂಬಡಿಸೆ ನುಡಿದಾಜ್ಞಾನು |
ರೂಪದಿಂದರಸನಿತ್ತಂ ಭೀಮ ಹೈಡಿಂಬಿ ಕರ್ಣಜರ್ಗನುಮತಿಯನು ||೪೪||

ಬಳಿಕ ನೃಪನಂ ಪರಸಿ ಬೀಳ್ಕೊಂಡು ಮುನಿವರಂ |
ತಳರ್ದನಾಶ್ರಮಕಿತ್ತಲಂಜುತೆ ಯುಧಿಷ್ಠಿರಂ |
ನಳಿನಾಕ್ಷನಿಲ್ಲದಧ್ವರಕುಪಕ್ರಮಿಸೆ ನಡೆಯದು ಕಿರೀಟಿಯನೀಗಳೆ ||
ಕಳುಹಿ ಕರೆಸುವೆನೆಂಬೆಣಿಕೆಯೊಳಿರಲನ್ನೆಗಂ |
ತೊಳಲುತರಸುವ ಬಳ್ಳಿ ಕಾಲ್ದೊಡಕಿದಂತರಸು !
ಗಳ ಶಿರೋಮಣಿಗೆ ಸಂಭ್ರಮದೊಳೈತಂದು ಬಿನ್ನೈಸಿದಂ ಚರನೊರ್ವನು ||೪೫||

ಅವಧಾನ ಜೀಯ ನವಿಪೊಳಲ ಪೊರೆಗೆ ಯಾ |
ದವರೆರೆಯನಿದೆ ಬಂದನೆನೆ ಫಳಿಲನೆದ್ದು ನಿಂ |
ದವನ ನುಡಿಗುಚಿತಮಂ ಕುಡುತೆ ಭಕ್ತಾವಳಿಯ ಬಗೆಯನೊಡರಿಸುವೆಡೆಯೊಳೂ ||
ತವಕಮೆನಿತೋ ಮುರಾರಿಗೆ ಮಹಾದೇವ ತ್ರೈ |
ಭುವನದೊಳ್ ತಾನೇ ಕೃತಾರ್ಥನಲ್ಲಾ ಕೌತು |
ಕವನಿಂದು ಕಂಡೆನೆನುತರಸನರಮನೆಯಿಂದ ಪೊರಮಟ್ಟು ನಡೆತಂದನು ||೪೬||

ಮಿತ್ರೋದಯಾತ್ಪರದೊಳೈತಂದು ಹಯಮೇಧ |
ಸತ್ರ ಸಾಧನಕೆ ವೇದವ್ಯಾಸಮುನಿ ಧರ್ಮ |
ಪುತ್ರನಂ ಬೋಧಿಸಿ ಮರಳ್ದನಾ ರಾತ್ರಿಯೊಳ್ ಬಂದನೊಲಿದಿಭನಗರಿಗೆ ||
ಪತ್ರೀಂದ್ರವಾಹನಂ ಬಳಿಕೈದೆ ಪಾಂಡದ ಧ |
ರಿತ್ರೀರಮಣರಿದಿರ್ಗೊಂಟರುಗ್ಘಡಣೆಯ ವಿ |
ಚಿತ್ರ ಪಾಠಕರ ವಾದ್ಯಧ್ವನಿಯ ಸಾಲಕೈದೀವಿಗೆಯ ಸಂಭ್ರದೊಳು ||೪೭||

ಮಿರುಪ ಮಣಿಮಕುಟದೋರಣೆಸಿದಳಕಾವಳಿಯ |
ಪೆರೆನೊಸಲ ಕತ್ತುರಿಯ ಸುಲಲಿತಭ್ರೂಲತೆಯ |
ತುರುಗೆವೆಯ ನಿಟ್ಟೆಸಳುಗಂಗಳ ಸುನಾಸಿಕದ ಪೊಳೆವಲ್ಲ ನಸುದೋರುವ ||
ಕಿರುನಗೆಯ ಕದಪುಗಳ ಕುಂಡಲದ ಚೆಲ್ವಿನಿಂ |
ಮೆರೆವ ಸದ್ವದನನಂ ಮೋಹನದ ಸದನನಂ |
ನೆರೆಸೊಬಗ ಮದನನಂ ಪಡೆದ ನಿಜರೂಪನಂ ಕಂಡನವನೀಪಾಲನು ||೪೮||

ಭೂರಮಣ ಕೇಳ್ ಮುರಧ್ವಮಸಿ ನರಲೀಲಾವ |
ತಾರಮಂ ತಾಳ್ದು ಹೊಂದೇರನಿಳೀದೈತಂದು |
ಚಾರುಹಾಸದೊಳಾ ಯುಧಿಷ್ಠಿರನ ಕಾಲ್ಗೆರಗಲಾ ನೃಪಂ ಕೂಡೆ ತೊಲಗಿ ||
ವಾರಿಜಾಂಬಕನ ಪದಪಲ್ಲವಕೆ ಮಣಿಯುತಿರ |
ಲಾ ರಾಯನಂ ತೆಗೆದು ತಳ್ಕೈಸಲರಸನಸು |
ರಾರಿಯಂ ಪ್ರೇಮದಿಂ ಬಿಗಿಯಪ್ಪಿದಂ ಮತ್ತೆ ಮುನಿಜನಂ ಬೆರಗಾಗಲು ||೪೯||

ಮುರಹರಂ ಬಳಿಕ ವಂದಿಸುವ ಭೀಮಾದಿ ಭೂ |
ವರ ಸಹೋದರರನಾಲಿಂಗಿಸುತೆ ಹರುಷದಿಂ |
ದರಮನೆಗೆ ನಡೆದು ಬರೆ ಪಾಂಚಾಲಿ ಸರಸಿರುಹನಯನ ಪಣಿರಾಜಶಯನ ||
ಶರಣಜನದುರಿತಾಪಹರಣ ದೈತೇಯಸಂ |
ಹರಣ ಗೋವರ್ಧನೋದ್ಧರಣ ಪೀತಾಂಬರಾ |
ವರಣ ವರಕೌಸ್ತುಭಾಭರಣ ಸಲಹೆಂದು ಹರಿಚರಣಕೆರಗಿದಳು ಬಂದು ||೫೦||

ದ್ರುಪದತನುಜಾತೆಯಂ ಪಿಡಿದೆತ್ತಿ ಕರುಣದಿಂ |
ದುಪಚರಿಸಿ ಮನೆಗೆ ಬೀಳ್ಕೊಟ್ಟು ಸಂದಣಿಸಿ ನೆರೆ |
ದಪರಿಮಿತ ಪೌರಜನದೊಳವರವರ ತಾರತಮ್ಯಗಳನರಿತು ||
ಕೃಪೆಯಿಂದೆ ಕಳುಹಿ ಬೇಹವರೊಡನೆ ಬಳಿಕಸುರ |
ರಿಪು ನೃಪಗೆ ಕೈಗೊಟ್ಟು ನಡೆಯಲಾಸ್ಥಾನಮಂ |
ಟಪಕೆ ಬಂದಲ್ಲಿ ಕುಳ್ಳಿರ್ದನುತ್ಸವಮಾದುದಂದಿನಿರುಳೋಲಗದೊಳು ||೫೧||

ಶಕ್ರನಾಸ್ಥಾನಮಂ ವಿವಿಧ ವೈಭವದಿಂದ |
ತಿಕ್ರಮಿಸುವರಸನೋಲಗಮಂ ನಿರೀಕ್ಷಿಸುತು |
ಪಕ್ರಮಿಸುವೆಳನಗೆಯೊಳಸುರಾರಿ ನುಡಿದನೆಲೆ ನೃಪತಿ ಭೂಮಂಡಲದೊಳು ||
ವಕ್ರಿಸುವರಿಲ್ಲ ನಿನ್ನೀಸಿರಿಗೆ ರಾಜಧ |
ರ್ಮಕ್ರಿಯೆಗೆ ನಳ ಪುರೂರವ ಹರಿಶ್ಚಂದ್ರಾದಿ |
ಚಕ್ರವರ್ತಿಗೆಗಳೈದೆ ಸೋಲ್ವರಿನಿತರೊಳಿನ್ನು ಕೃತಕೃತ್ಯರಾವೆಂದನು ||೫೨||

ಎನಲಹುದು ಬಳಿಕೇನು ನಿಮ್ಮಡಿಯ ಸೇವಕರ |
ಘನತೆಯೊಳು ಕೃತಕೃತ್ಯರಹಿರಲಾ ನೀವಿದಿರೊ |
ಳನುಮಾನವೇ ಪಾಂಡವಸ್ಥಾಪನಾಚಾರ್ಯನೆಂದು ಧರೆಯುಳ್ಳನ್ನೆಗಂ ||
ಜನಮಾಡದಿರ್ದಪುದೆ ಸಾಕದಂತಿರಲಿ ಮುಂ |
ದೆನಗೆ ಮಾಡುವ ರಾಜಕಾರ್ಯಮಂ ಬೆಸವೇಳ್ವು |
ದೆನುತ ಭೀಮನ ಕಡೆಗೆ ಮೊಗದಿರುಹಿದರಸಂಗೆ ನಳಿನಾಕ್ಷನಿಂತೆಂದನು ||೫೩||

ದಾಯಾದರಿಲ್ಲ ಮಾರ್ಮಲೆವ ಪರಮಂಡಲದ |
ನಾಯಕರ ಸುಳಿವಿಲ್ಲ ನಿನ್ನಾಳ್ಕೆಗೆಲ್ಲಿಯುಮ |
ಪಾಯಮವನಿಯೊಳಿಲ್ಲಮಿನ್ನು ದಿಗ್ವಿಜಯಮಿಲ್ಲವಸರದ ಬೇಂಟೆಯಿಲ್ಲ ||
ವಾಯುನಂದನ ಧನಂಜಯರೊಳೆರವಿಲ್ಲ ಮಾ |
ದ್ರೇಯರೊಳ್ ತಪ್ಪಿಲ್ಲ ಚತುರಂಗಕೆಡರಿಲ್ಲ |
ರಾಯ ನಿನಗೇನು ಮಾಡುವ ರಾಜಕಾರ್ಯಮೆಂದಂ ಮುರಧ್ವಂಸಿ ನಗುತೆ ||೫೪||

ಈ ಚರಾಚರ ವಿಚಾರ ವ್ಯಾಪ್ತಿ ನಿಮ್ಮಡಿಗ |
ಗೋಚರವೆ ಶಿವಶಿವಾ ಸಾಕಿದೇತಕೆ ಬರಿದೆ |
ನಾಚಿಸುವಿರೆಂದು ವೇದವ್ಯಾಸಮುನಿವರಂ ಬಂದು ಕಾರಣ್ಯದಿಂದೆ |
ಆಚಾರಮಿದು ಭರತಕುಲದವರ್ಗೆನುತೆ ಕಾ |
ಲೋಚಿತವನರಿತು ಹಯಮೇಧವಿಧಿಯಂ ತನಗೆ |
ಸೂಚಿಸೆ ಪ್ರತಿಜ್ಞೆಗೈದಂ ಭೀಮನದಕಶ್ವಮಂ ತಂದುಕುಡುವೆನೆಂದು ||೫೫||

ತ್ವತ್ಪಾದ ಕಮಲದಾಶ್ರಯದಿಂದೆ ನಾನಾವಿ |
ಪತ್ಪರಂಪರೆಳಂ ದಾಂಟಿದೆವು ರಾಜಸಂ |
ಪತ್ಪದವನಧಿಕರಿಸಿದೆವು ಬಳಿಕದರ ಸೌಖ್ಯದಿಂದೆ ನಾವಿರುತಿರ್ದೊಡೆ ||
ಸತ್ಪುರುಷರೈದೆ ಮೆಚ್ಚುವರೆ ಭರತಾನ್ವಯಸ |
ಮುತ್ಪನ್ನರಾಗಿ ಫಲವೇನಾವತೆರದಿಂ ಜ |
ಗತ್ಪಾವನಾಶ್ವಮೇಧವನಾಗಿಸುವೆನಿದಕೆ ನೀವೆಂಬುದೇನೆಂದನು ||೩೬||

ಮರುಳಹರೆ ಭೂಪಾಲ ಬಾದರಾಯಣನಿಕ್ಕಿ |
ದುರುಲ ಕಣ್ಣಿಗೆ ಸಿಲುಕುವರೆ ಭೀಮನೆಂಬವಂ |
ದುರುಳನರಿಯಾ ಹಿಂದಣವರಲ್ಲ ಯೌವನಾಶ್ವ ಪ್ರಮುಖರತಿವೀರರು |
ಅರಳಾದ ಮಲ್ಲಿಗೆಯ ಪೊದರೊಳಗೆ ತಿರುಗಿದೊಡೆ |
ತೆರಳಬಲ್ಲುದೆ ಸಂಪಗೆಯ ಬನಕೆ ಮರಿದುಂಬಿ |
ತರಳಬಲ್ಲುದೆ ಹಯಮೇಧಕುದ್ಯೋಗಿಪರೆ ಹೇಳೆಂದು ಹರಿ ನುಡಿದನು ||೫೭||

ಮತಿಯುಳ್ಳೊಡಿವನಸುರಬಲಿಗೊದಗಿಸಿದ ಕೂಳ |
ನತಿಮಹೋದರಕಡಸಿಕೊಂಬನೇ ನೀತಿಗಳ |
ಗತಿಯನರಿದೊಡೆ ನಿಶಾಚರಿಯನಿವನಾಳ್ವನೇ ರಾಣಿಯೆಂದರಮನೆಯೊಳು ||
ಕ್ಷಿತಿಯೊಳದ್ಭುತರೂಪನೀ ವೃಕೋದರನಿವನ |
ಮತವಿಡಿದು ಹಯಮೇಧಕುದ್ಯೋಗಿಸಿದೊಡೆ ಪೂ |
ರಿತಮಹುದೆ ಮರುಳೆ ಹೇಳೆಂದು ನೃಪನೊಡನೆ ಮುರರಿಪು ಭೀಮನಂ ಜರೆದನು ||೫೮||

ಆಹಾ ಮಹಾದೇವ ಚಿತ್ರಮಂ ಕೇಳಿದೆವ |
ಲಾ ಹಲವುಲೋಕಮಂ ಕೊಳ್ಳದೇ ನಿನ್ನುದರ |
ಮಾಹಾನಿಶಾಚರಿಯರಲ್ಲವೇ ನರಕಾಸುರನ ಮನೆಯ ಬಾಲಿಕೆಯರು ||
ಈ ಹದಿರದೇಕೆ ಕರಡಿಯ ಮಗಳನಾಳ್ದ ನಿನ |
ಗೋಹೋ ಧರೆಯೊಳದ್ಭು ತಾಕಾರರಾರೊ ನಿ |
ನ್ನೂಹೆಗಳ ಬಲ್ಲೆ ನಾನಿತ್ತ ಭಾಷೆಗೆ ತಪ್ಪೆನೆಂದು ಭೀಮಂ ನುಡಿದನು ||೫೯||

ಭಾಷೆಯಂ ಕೊಟ್ಟು ತಪ್ಪುವನಲ್ಲ ನೀನಾವಿ |
ಶೇಷಮಂ ಕಂಡು ಬಲ್ಲೆವು ಹಿಂದೆ ರಣದೊಳಭಿ |
ಲಾಷೆಯಿಂ ಪೈಶಾಚರಂತೆ ಹೇಸದೆ ರಕ್ತಪಾನಮಂ ಮಾಡಿಯೊಡಲ ||
ಪೋಷಿಸಿದ ಬಂಡತನವಿದು ನಿನ್ನ ಸಾಹಸಕೆ |
ಭೂಷಣವೆ ಹೋಗೆಲವೋ ಬಾಣಸಿಗ ಲೋಕದೊಳ್ |
ದೂಷಣಕ್ಕೆ ಬೆದರೆಯೆಂದಂ ಮುರಧ್ವಂಸಿ ಮಿಗೆ ಸರಸದೊಳ್ ಪವನಜನನು ||೬೦||

ಶಿವಶಿವಾ ದೂಷಣಕೆ ಬೆದರಿ ಮಾಡಿದಿರಿ ಕೈ |
ತವಜಾರವಿದ್ಯೆಗಳ ಹೆಣ್ಣಾಗಿ ಬಾಣಸದ |
ಪವಣರಿದುದಿಲ್ಲಲಾ ಹೇವರಿಸದಸುರೆಯಸುವೀಂಟಿದವರಾರೋ ಬಳಿಕ ||
ಅವನಿಪತಿಗಳ ಕೂಡೆ ಗೋವಳರ್ಗಾವ ಮೇ |
ಳವದಿನ್ನು ನುಡಿಯಲಂಜುವೆವೆಮ್ಮ ನಿಜಭಾಷಿ |
ತವನುಳಿಯೆವಶ್ವಮಂ ತಹೆವು ಕ್ರತುವಂ ನಡೆಸಿ ಮೇಣುಳುಹಿ ನೀವೆಂದನು ||೬೧||

ನಕ್ಕನಸುರಾರಿ ಭೀಮನ ಮಾತಿಗೆಲ್ಲವೂ ಕಲ |
ಹಕ್ಕೆ ಬೇಸರೆಯಲಾ ತುರಗಮಂ ತಂದುಕುಡು |
ವಕ್ಕರುಳ್ಳೊಡೆ ನಡೆ ವೃಥಾ ಗಳಹಬೇಡ ನಾವೀಗ ಸಾರಿದೆವು ಮುಂದೆ ||
ಕಕ್ಕಸವಹುದು ವೀರರುಂಟಿಳೆಯ ಮೇಲೆ ಕೈ |
ಯಿಕ್ಕಲರಿದೀಮಖವನೈದೆ ನಡೆಸುವುದನ್ವ |
ಯಕ್ಕೆ ತೊಡರಪ್ಪುದು ವಿಚಾರದೊಳ್ ಕೈಕೊಂಬುದೆನೆ ಭೂಪನಿಂತೆಂದನು ||೬೨||

ದೇವ ನಿಮ್ಮಡಿಯ ಕಾರುಣ್ಯಮೊಂದುಳ್ಳೊಡೆ ಸ |
ದಾ ವಿಜಯರಾವದಾರಿದ್ದೇನ ಮಾಳ್ಪರರಿ |
ದಾವುದೊಲಿದೆನ್ನನುದ್ಧರಿಸವೇಳ್ಕೆಂದು ನೃಪನಚ್ಯುತನ ಪದಕೆರಗಲು ||
ಭೂವರನ ಮಕುಟಮಂ ಪಿಡಿದೆತ್ತಿ ರಾಜವಂ |
ಶಾವಳೀಯೊಳುಂಟೆ ನಿನ್ನಂದದರಸಿನ್ನು ನಿನ |
ಗೀವಾಜಿಮೇಧಮೇನಚ್ಚರಿಯೆ ಕೈಕೊಳಾವಿರ್ದು ನಡೆಸುವೆವೆಂದನು ||೬೩||

ನಳಿನೋದರನ ವಚನಮಂ ಕೇಳ್ದು ಸಂತಸಂ |
ದಳೆದು ನೃಪನಧ್ವರದ ಕಾರ್ಯಮಂ ನಾಡೆ ನೆಲೆ |
ಗೊಳಿಸಿ ಪವನಜ ವೃಷಧ್ವಜ ಮೇಘನಾದರಂ ಕುದುರೆ ತಹುದೆಂದು ಬೆಸಸಿ !
ಬಳಿಕೋಲಗವನಂದು ಬೀಳ್ಕೊಟ್ಟು ಹರಿಸಹಿತೆ |
ನಿಳಯದೊಳ್ ಷಡ ಸಾದಿಗಳನಾಗೋಗಿಸಿ ವಿ |
ಮಳ ಹಂಸತೂಲದೊಳ್ ಪವಡಿಸಿದನನ್ನೆಗಂ ತೋರಿತಿನಸೂತನೇಳ್ಗೆ ||೬೪||

ಮೂಡದೆಸೆಯೊಳ್ ಕೆಂಪು ದೊರೆಯ ತಾರಗೆ ಪರಿಯೆ |
ಕೂಡೆ ತಂಗಾಸಳಿ ಮುಂಬರಿಯೆ ಕಮಲಂ ಬಿರಿಯೆ |
ಪಾಡುವೆಳದುಂಬಿಗಳ್ ಮೊರೆಯೆ ಚಕ್ರಂ ನೆರೆಯ ನೈದಿಲೆಯ ಸೊಂಪು ಮುರಿಯೆ ||
ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತ |
ಲೋಡಿದುದೊ ನೋಡಿದಪೆನೆಂದು ಪೂರ್ವಾಚಲದ |
ಕೋಡುಗಲ್ಲಂ ಪತ್ತುವಂತೆ ಮೆರೆದಂ ಪ್ರಭೆಯೊಳಾನುತ್ಯನಾದಿತ್ಯನು ||೬೫||

ಇಂದು ವೇದವ್ಯಾಸಮುನಿವರಂ ಕೃಪೆಯೊಳೈ |
ತಂದು ಸನ್ನುತವಾಜಿಮೇಧಮಂ ಮಾಡು ನೀ |
ನೆಂದು ನಿಯಮಿಸಲೇತಕೊಡನೆ ಗರುಡಧ್ವಜಂ ತಾನೆ ಕಾರುಣ್ಯದಿಂದೆ ||
ಬಂದು ಮೈದೋರಲೇಕಿದು ತನ್ನ ಭಾಗ್ಯವಧು |
ವೊಂದುಗೂಡುವ ಕಾಲಮೆಂದು ಹರ್ಷದೊಳರಸ |
ನಂದು ನಿದ್ರಾಲಲನೆಯಂ ಬಿಟ್ಟನುಪ್ಪವಡಿಸಿದನೋಲಗಂಗೊಟ್ಟನು ||೬೬||

ಆ ವೇಳೆಯೊಳ್ ಪವನಜಂ ಬಂದು ಭೂಪನಡಿ |
ದಾವರೆಯೊಳೆರಗಿ ಪಯಣಕೆ ಬೆಸಂಬಡೆದರಸು |
ಗಾವಲಂ ಫಲುಗುಣನೊಳಿರಿಸಿ ಹೈಡಿಂಬಿಯಂ ಬರಿಸಿ ಕರ್ಣಜನ ಕರೆಸಿ ||
ಆ ವೀರರಿರ್ವರಿಂ ಬೆರಸಿ ರಥಮಂ ತರಿಸಿ |
ದೇವಪುರ ಲಕ್ಷ್ಮೀಶನಂಘ್ರಿಗುಪಚರಿಸಿ ಬಿರು |
ದಾವಳಿಯ ಪಾಠಕರ ಗಡಣದಿಂ ಪೊರಮಟ್ಟನಾ ಹಸ್ತಿನಾವತಿಯನು ||೬೭||