ಹಗಲ ಸೊಗಸನ್ನೆಲ್ಲ ಹೇರಿಕೊಂಡು ಸೂರ್ಯನ ಬಂಡಿ
ಕತ್ತಲೆಯ ದಾರಿಯನು ಹಿಡಿಯಿತು. ಈ ನಾನು
ನೀನುಗಳ ದಿನವೊಂದರನುಭವದ ಎಲ್ಲ ನೆನಪೂ
ಹೋಗುತಿದೆ ಹಿಂದಿರುಗಿ ಬಾರದ ಹಾಗೆ; ನನ್ನಾಯುಷ್ಯ-
ದೊಳಗೊಂದು ದಿನ ಸೋರಿ ಹೋಯಿತು; ಗೋರಿಯ
ದಾರಿಯಲ್ಲಿನ್ನೆರಡು ಹೆಜ್ಜೆಯನಿಟ್ಟೆ, ಓ ಮನವೆ
ಎಚ್ಚರು, ಎಚ್ಚರು, ಇನ್ನಾದರು ಎಚ್ಚರು.

ಅಯ್ಯೊ, ಏ ವೇದಾಂತಿ, ಸಂತೋಷಪಡು;
ಸೂರ್ಯ ಮುಳುಗಿದ, ಮುಳುಗಿಯೇ ಬಿಟ್ಟ.
ಇವತ್ತಿನ ಸೂರ್ಯ ಮತ್ತೆ ಮೂಡುವುದಿಲ್ಲ-
ನಮಗಷ್ಟೆ ಸಂತೋಷ. ಗೊತ್ತೆ, ಇವತ್ತಾಗಲೇ
ತಾರೀಕು ಇಪ್ಪತ್ತೆಂಟು. ಇನ್ನೆರಡು ದಿನ ಈತ ಹೀಗೆಯೇ
ಮುಳುಗಿದರೆ ಸಂಬಳದ ತಾರೀಕು!
ಮುಳುಗಿದರೇನು ಈ ಸೂರ್ಯ, ಯಾರಿಗೆ ನಷ್ಟ?
ಅವನು ಮುಳುಗುವುದು ನಮಗಂತು ಇಷ್ಟ!