ಏನು ಉಜ್ವಲ ನೀಲಿ ಈ ಮೆಡಿಟರೇ-
ನಿಯನ್ ಸಮುದ್ರಕ್ಕೆ ! ನೀಸ್ ನಗರ-
ದರ್ಧಚಂದ್ರಾಕೃತಿಯ ತೀರದಲ್ಲಿ ನಿಂ-
ತು ನೋಡಿದೆನು ಚಂಚಲಿಸುವಲೆಯ
ಕಡುನೀಲಿ ಕಡಲ ವಿಸ್ತಾರವನ್ನು. ಮೇಲೆ
ನಿರಭ್ರ ನೀಲಿಯ ಗಗನ. ಕೆಳಗೆ
ಥಳಥಳ ಹೊಳೆವ ನೀಲವಜ್ರದ ಶುಭ್ರ
ಜಲ ಕಲ್ಲೋಲ. ನಿರಂತರ ಚಲನೆ-
ಯೊಳಗೊಂದು ನೀಲಿ, ಅಚಂಚಲ ಸ್ಥಿ-
ರತೆಯೊಳಗೊಂದು ನೀಲಿ. ಈ ನಾನು
ಎರಡು ನೀಲಿಯ ನಡುವೆ ಕರಗಿ ಹೋ-
ಗದೆ ನಿಂತ ರಹಸ್ಯವಾದರು ಏನು !
Leave A Comment