ಇದು ನನ್ನ ಸಮಗ್ರ ಗದ್ಯದ ಐದನೆಯ ಸಂಪುಟ. ಈ ಸಂಪುಟದಲ್ಲಿ ಈಗಾಗಲೆ ಪ್ರಕಟವಾಗಿರುವ  ‘ವಿಸ್ತರಣ’ (೧೯೯೫), ಚದುರಿದ ಚಿಂತನೆಗಳು’ (೨೦೦೦), ‘ಯಾವುದೂ ಸಣ್ಣದಲ್ಲ’ (೨೦೦೪), ‘ಕಾವ್ಯಸಂವಾದ’ (೨೦೦೫), ‘ಶಿವಯೋಗಿ ಸಿದ್ಧರಾಮ’ (೧೯೯೭), ‘ಸರ್ಪಭೂಷಣ ಶಿವಯೋಗಿ’ (೧೯೯೫), ಮತ್ತು ‘ಚತುರಂಗ’ (೧೯೮೬) – ಈ ಕೃತಿಗಳ ಒಳಗಿರುವ ಬರಹಗಳು ಸೇರುತ್ತವೆ; ಹಾಗೆಯೆ ಇವುಗಳಾಚೆಯ ಒಂದಷ್ಟು ಲೇಖನಗಳೂ ಇವೆ.  ಹಿಂದಿನ ನನ್ನ ನಾಲ್ಕು ಗದ್ಯ ಸಂಪುಟಗಳಿಗೆ ಹೋಲಿಸಿದರೆ ಈ ಐದನೆಯ ಸಂಪುಟವು ಯಾವುದೆ ಒಂದು ನಿರ್ದಿಷ್ಟವಾದ ಚೌಕಟ್ಟಿಗೆ ಅಳವಡದೆ ಸಮ್ಮಿಶ್ರ ಸ್ವರೂಪದ್ದಾಗಿದೆ.  ಮೊದಲ ಸಮಗ್ರ ಗದ್ಯ ಸಂಪುಟವು ಪ್ರಾಚೀನ ಸಾಹಿತ್ಯವನ್ನು, ಎರಡನೆಯ ಸಮಗ್ರ ಗದ್ಯ ಸಂಪುಟವು ಆಧುನಿಕ ಸಾಹಿತ್ಯವನ್ನೂ, ಮೂರನೆಯ ಸಮಗ್ರ ಗದ್ಯ ಸಂಪುಟವು ಸಾಹಿತ್ಯ ವಿಮರ್ಶೆ ಮತ್ತು ಕಾವ್ಯಮೀಮಾಂಸೆಯನ್ನು, ನಾಲ್ಕನೆಯ ಸಮಗ್ರ ಗದ್ಯ ಸಂಪುಟವು ಪ್ರವಾಸ ಸಾಹಿತ್ಯವನ್ನೂ ಕುರಿತ ಬರೆಹಗಳನ್ನು ಒಳಗೊಂಡಿದೆ.  ಆದರೆ ಈ ಐದನೆಯ ಸಂಪುಟವು ಸ್ವರೂಪದಲ್ಲಿ ಅವುಗಳಿಗಿಂತ ಭಿನ್ನವಾಗಿದೆ.  ಹೀಗಾಗಿ ಇಲ್ಲಿ ವ್ಯಕ್ತಿ ಚಿತ್ರಗಳಿವೆ; ಸೃಜನಶೀಲತೆಯನ್ನು ಕುರಿತ ಚಿಂತನಗಳಿವೆ; ಸಮಕಾಲೀನ ಸಾಂಸ್ಕೃತಿಕ ಸಂಗತಿಗಳನ್ನೂ ಬಿಕ್ಕಟ್ಟುಗಳನ್ನೂ ಕುರಿತ ಪ್ರತಿಕ್ರಿಯೆಗಳಿವೆ; ಸಾಹಿತ್ಯದ ಸ್ವರೂಪವನ್ನು ಕುರಿತ ಚರ್ಚೆಗಳಿವೆ, ಅಸಮಗ್ರವಾದ ಆತ್ಮಕಥನವಿದೆ.

ಇಂಥ ಒಂದು ಸಂಪುಟವನ್ನು ತುಂಬ ವಿಶ್ವಾಸದಿಂದ ಪ್ರಕಟಿಸುತ್ತಿರುವ ‘ಪ್ರಿಯದರ್ಶಿನಿ’ ಪ್ರಕಾಶನ ಗೆಳೆಯರಾದ ಡಾ. ಎಸ್. ವಿದ್ಯಾಶಂಕರ ಅವರಿಗೆ; ಅರ್ಥವತ್ತಾದ ಬೆನ್ನುಡಿಯನ್ನು ಬರೆದುಕೊಟ್ಟ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರಿಗೆ ಮತ್ತು ಅಚ್ಚುಕಟ್ಟಾಗಿ ಮುದ್ರಿಸಿರುವ ಸ್ನೇಹಾ ಪ್ರಿಂಟರ್ಸ್ ಅವರಿಗೂ ನನ್ನ ಹೃತ್ಪೂರ್ವಕವಾದ ವಂದನೆಗಳು.

ಜಿ.ಎಸ್. ಶಿವರುದ್ರಪ್ಪ
ಜೂನ್ ೨೦೦೭


ಎರಡನೆಯ ಮುದ್ರಣಕ್ಕೆ ಎರಡು ಮಾತು

 

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷಿ  ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

-ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯