ನಾ ದೂರದಲಿ ಅಲೆಯುತ್ತಿದ್ದಾಗ, ಕೈಬೀಸಿ
ಕರೆದಿತ್ತು ನಿನ್ನ ಮುಗುಳುನಗೆ ಬೆಳುದಿಂಗಳು,
ಹಂಬಲಿಸಿ ಹಾಗೂ ಹೀಗು ಬಳಿಗೈತಂದು
ನೋಡಿದರೆ ಕಾಣುವುದೇನು ? ಕಾರ್ಮೋಡಗಳ
ಹುಬ್ಬುಗಂಟು ! ನಿನ್ನ ಬಳಿ ಬಂದು ನಿಲ್ಲುವ ಮೊದಲು.
ನಿಂತು ಈ ಉದಾಸೀನದುರಿಗಣ್ಣ ಬಿರುಬ-
ನುಣ್ಣುವ ಬದಲು, ದೂರಕ್ಕೆ ನಾ ಕಂಡ ನಿನ್ನ ಆ
ಚಂದ್ರಿಕೆಯ ತಂಪೇ ಬಹಳ ಸೊಗಸಾಗಿತ್ತು.
ಅರ್ಥವಾಗದು ನನಗೆ ಈ ನಿನ್ನ ಎರಡು ಮುಖ
ಬೇಡ ಈ ಮಿಲನದೌದಾಸೀನ್ಯ ; ಸಾಕು
ಮತ್ತೆ ಕಳುಹಿಸು ನನ್ನ ವಿರಹ ಸೌಭಾಗ್ಯಕ್ಕೆ.
ಮರೆಸಿಬಿಡು ನಾನಿನ್ನ ಬಳಿಗೈತಂದೆನೆನ್ನುವ ಪರಿಯ
ಅಲೆವುದೇ ಸುಖವೇನೊ ಹಾರೈಸಿ ನಿನ್ನ ಸನ್ನಿಧಿಯ !