ಸಕಲೇಶಪುರ ತಾಲ್ಲೂಕು ಯೆಡೇಹಳ್ಳಿ ಸಮೀಪದ ಕಾಡುಗದ್ದೆಯ ನಿವೃತ್ತ ಯೋಧ ಚಿದಂಬರ ಅವರದ್ದು ಅನುಶೋಧನಾತ್ಮಕ ಗುಣ. ಪ್ರತಿ ಹಂತದಲ್ಲೂ ‘ಹೀಗೆ ಮಾಡಿದರೆ ಹೇಗೆ’ ಎಂದು ಯೋಚಿಸುವ ಮನಸ್ಸು. ಹೀಗಾಗಿಯೇ ಅವರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಹಲವು ಅನುಶೋಧನೆಗಳನ್ನು ಕೈಗೊಂಡಿದ್ದಾರೆ. ಆ ಪಟ್ಟಿಯಲ್ಲಿ ‘ಎರೆಗೊಬ್ಬರದ ತೊಟ್ಟಿ ಸುತ್ತ ಅಜೋಲಾ ಬೆಳೆಸಿರುವ’ ವಿಧಾನವೂ ಒಂದು.

ಎರೆಹುಳುಗಳಿಗೆ ಇರುವೆ ಕಾಟ. ಅದನ್ನು ನಿಯಂತ್ರಿಸುವ ಸಲುವಾಗಿ ಎರೆಗೊಬ್ಬರದ ತೊಟ್ಟಿಯ ಸುತ್ತ ಒಂದು ಇಟ್ಟಿಗೆ ದಾಯದ ಪುಟ್ಟದೊಂದು ಕಾಲುವೆ ಮಾಡಿದರು. ಮುಕ್ಕಾಲು ಅಡಿ ಅಗಲ, ನಾಲ್ಕರಿಂದ ಐದು ಇಂಚು ಆಳದ ಈ ಕಾಲುವೆಯಲ್ಲಿ ಸದಾ ನೀರು ಇರುವಂತೆ ನಿಗಾವಹಿಸಿದ್ದರು. ಇದೇ ಸಮಯದಲ್ಲಿ ಸಾವಯವ ಗ್ರಾಮ ಯೋಜನೆ ಅನುಷ್ಠಾನಗೊಳಿಸುತ್ತಿದ್ದ ಭೂಮಿ ಸಂಸ್ಥೆ ಅಜೋಲಾ ಬೆಳೆಸಲು ಚಿದಂಬರ ಅವರಿಗೆ ಸಲಹೆ ನೀಡಿತು.

ಅಜೋಲಾ ಘಟಕ್ಕೆ ನಿರ್ಮಾಣಕ್ಕೆ ಬೇಕಾದ ನೆರಳು, ನೀರು, ಸಗಣಿ.. ಇತ್ಯಾದಿ ಸಂಪನ್ಮೂಲ ಸೌಲಭ್ಯಗಳೆಲ್ಲ ಎರೆಗೊಬ್ಬರದ ತೊಟ್ಟಿಯ ಸುತ್ತಾ ನಿರ್ಮಿಸಿದ ಪುಟ್ಟ ಕಾಲುವೆಯಲ್ಲಿ ಲಭ್ಯವಾಯಿತು. ಪ್ರತ್ಯೇಕವಾಗಿ ಅಜೋಲಾ ಘಟಕ ನಿರ್ಮಾಣದ ಚಿಂತನೆಯನ್ನು ಕೈಬಿಟ್ಟರು ಎರೆಹುಳು ಗೊಬ್ಬರದ ತೊಟ್ಟಿ ಸುತ್ತ ಇರುವ ಕಾಲುವೆಯಲ್ಲೇ ಅಜೋಲಾ’ ಹರಿಯಬಿಟ್ಟರು.

‘ಹೇಗೂ ಗೊಬ್ಬರಕ್ಕೆ ನೆರಳು ಮಾಡಿರುತ್ತೇವೆ. ಇರುವೆ ನಿಯಂತ್ರಣಕ್ಕೆ ಕಾಲುವೆಯಲ್ಲಿ ನೀರು ಹರಿಸುತ್ತೇವೆ. ಪಕ್ಕದಲ್ಲೇ ಸಗಣಿಯಿದೆ. ಸ್ಲರಿ ಮಾಡಿ ನೀರಿಗೆ ಕದಡಿದರೆ ಅಜೋಲಾ ಬೆಳೆಸಬಹುದಲ್ಲಾ ಅಂತ ಯೋಚಿಸಿದೆ. ಕಳೆದ ಮೂರು ವರ್ಷಗಳಿಂದ ಹೀಗೆ ಅಜೋಲಾ ಬೆಳೆಯುತ್ತಿದ್ದೆನೆ. ಲಾಭ, ನಷ್ಟ, ಉಪಯೋಗದ ಬಗ್ಗೆ ಚಿಂತಿಸುತ್ತಿಲ್ಲ. ಅಜೋಲಾ ಮಾಡೋದಕ್ಕೆ ಪ್ರತ್ಯೇಕ ಸ್ಥಳ, ಸಮಯ, ಶ್ರಮ ಉಳಿಯಿತಲ್ಲ ಎನ್ನುವುದೊಂದೇ ಸಮಾಧಾನ’ ಎನ್ನುತ್ತಾರೆ ಚಿದಂಬರ.

‘ಅಜೋಲಾ ಬಳಸುವ ಸ್ಥಳದ ಸಮೀಪದಲ್ಲೇ ಅದನ್ನು ಬೆಳೆಸುವ ಘಟಕ ಸ್ಥಾಪಿಸಬೇಕು. ಇದರಿಂದ ಶ್ರಮ ಉಳಿತಾಯದ ಜೊತೆಗೆ, ಖರ್ಚು ಕಡಿಮೆಯಾಗುತ್ತದೆ. ಅಜೋಲಾ ಬೆಳೆಯಲು ಅತಿಯಾದ ಶ್ರಮ ಬೇಡ. ಇಂಥ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು’ ಎಂದು ತಮ್ಮ ವಿಧಾನವನ್ನು ಚಿದಂಬರ ಸಮರ್ಥಿಸಿಕೊಳ್ಳುತ್ತಾರೆ.

ಎರಡರಿಂದ ಮೂರು ತಿಂಗಳಿಗೊಂದು ಸಾರಿ ನೀರನ್ನು ಬದಲಾಯಿಸುತ್ತಾರೆ. ಪ್ರತಿ ದಿನ ಒಂದರಿಂದ ಒಂದೂವರೆ ಕೆ.ಜಿ ಅಜೋಲಾ ತೆಗೆದು ಆಕಳುಗಳಿಗೆ ಮೇವು ಹಾಗೂ ಬೂಸಾ ಜೊತೆಗೆ ಬೆರೆಸಿಕೊಡುತ್ತಾರೆ. ಆದರೆ ಈ ವಿಧಾನ ಗಮನಿಸಿದ ಕೆಲ ರೈತರು ‘ತೊಟ್ಟಿ ಸುತ್ತ ನೀರು ನಿಲ್ಲಿಸುವುದು ಇರುವೆ ನಿಯಂತ್ರಣಕ್ಕೆ. ಆದರೆ ಅಜೋಲಾ ಬೆಳೆಸುವುದರಿಂದ ಇರುವೆ ಹರಿದಾಡಲು ಸೇತುವೆ ನಿರ್ಮಿಸಿದಂತಾಗುತ್ತದಲ್ಲಾ’ ಎಂದು ಪ್ರಶ್ನಿಸುತ್ತಾರೆ.

‘ಶ್ರಮ, ಖರ್ಚು ಕಡಿಮೆ ಮಾಡುವ ವಿಧಾನಗಳನ್ನು ಅನುಸರಿಸುವಾಗ ಇಂಥವುಗಳ ಬಗ್ಗೆ ಸ್ವಲ್ಪ ಎಚ್ಚರವಹಿಸಿದರೆ ಅಪಾಯ ತಪ್ಪಿಸಬಹುದು. ‘ಇರುವೆ’ಯಂತಹ ಕಾರಣಕ್ಕಾಗಿ ಸರಳ ವಿಧಾನವನ್ನೇ ತಳ್ಳಿ ಹಾಕಿದರೆ, ಬೆಟ್ಟದಂತಹ ಖರ್ಚು, ಶ್ರಮ, ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಈ ವಿಧಾನಗಳ ಆಯ್ಕೆ ‘ಆಯಾ ರೈತರಿಗೆ’ ಬಿಟ್ಟಿದ್ದು ಎಂದು ಸರಳವಾಗಿ ಉತ್ತರಿಸುತ್ತಾರೆ ಚಿದಂಬರಂ.