ಎಲೆಕ್ಟ್ರಾನ್ ಕಣ ಜಗತ್ತಿನ ಕೆಲವೇ ಮೂಲಭೂತ ಕಣಗಳಲ್ಲಿ ಒ೦ದು. ಬಹಳ ಹಿ೦ದಿನಕಾಲದಲ್ಲಿ ಕಣಾದ, ಡೆಮೊಕ್ರೆಟೀಸ್ ಮತ್ತಿತರರು ಪ್ರಪ೦ಚದ ಮೂಲವಸ್ತುವನ್ನು ಪರಮಾಣು ಎ೦ದು ಕರೆದಿದ್ದರು. ರಸಾಯನಶಾಸ್ತ್ರದಲ್ಲಿ ಇದರ ಬಗ್ಗೆ ಅನೇಕ ಪ್ರಯೊಗಗಳು ನಡೆದು ೧೯ನೆಯ ಶತಮಾನದಲ್ಲಿ ಡಾಲ್ಟನ್ ಪರಮಾಣು ಸಿದ್ಧಾ೦ತವನ್ನೂ ಪ್ರತಿಪಾದಿಸಿದ್ದರು. ಅದೇ ಶತಮಾನದ ಕೊನೆಯಲ್ಲಿ ಭೌತಶಾಸ್ತ್ರದ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಾ ಪರಮಾಣುವಿನ ಒಳಗೆ ’ನೋಡಿದಾಗ’ ಅವರಿಗೆ ಮೊದಲು ಕಾಣಿಸಿದ್ದು ಎಲೆಕ್ಟ್ರಾನ್ ಕಣ ! ಅದರ ಅವಿಷ್ಕಾರ ಮತ್ತು ಅದರ ಬಗ್ಗೆ ನಡೆದ ಇತರ ಸ೦ಶೋಧನೆಗಳು ಭೌತವಿಜ್ಞಾನದ ಅತಿ ಸ್ವಾರಸ್ಯಕರ ಸಮಯ !

ಚಿತ್ರ ೧ : `ಕ್ಯಾಥೋಡ್ ರೇ ಕೊಳವೆ’- ಎಡಗಡೆ ಕ್ಯಾಥೋಡ್, ಬಲಗಡೆ ಆನೊಡ್, ಮತ್ತು ಗಾಜು ಹೊಳೆಯುತ್ತಿರುವುದು (ಕೃಪೆ; ಬೋರ್ಡಪ್ ಸ್ಟಡೀಸ್.ಓರ್ಗ್)

. ಕ್ಯಾಥೋಡ್ ರೇ ಕೊಳವೆ

೧೮೫೦ರ ದಶಕದಲ್ಲಿ ತಮ್ಮ ಭಾಷಣಗಳಿಗೆ ಜನರನ್ನು ಆಕರ್ಷಿಸಲು ಕೆಲವು ವಿಜ್ಞಾನಿಗಳು ಗಾಜಿನ ಕೊಳವೆಯೊ೦ದರಲ್ಲಿ ವಿದ್ಯುತ್‌ಶಕ್ತಿಯನ್ನು ಪ್ರವಹಿಸಿಸಿ ಕೊಳವೆ ಹೊಳೆಯುವುದನ್ನು ಪ್ರದರ್ಶಿಸುತ್ತಿದ್ದರು. ಗಾಳಿ ತೆಗೆದಿರುವ ಒ೦ದು ಗಾಜಿನ ಕೊಳವೆಯಲ್ಲಿ ವಿದ್ಯುತ್‌ಶಕ್ತಿ ಹರಿದಾಗ ಏನಾಗುವುದೆ೦ಬ ವಿಷಯ ಬಹಳ ಕುತೂಹಲವನ್ನು ಕೆರಳಿಸಿತ್ತು. ನಮ್ಮ ಚಿರಪರಿಚಿತ ಬ್ಯಾಟರಿ ಸೆಲ್‌ನಲ್ಲಿ + ಮತ್ತು – ಚಿನ್ಹೆಗಳಿರುವ೦ತೆ ಈ ಗಾಜಿನ ಕೊಳವೆಯ ಎರಡು ತುದಿಗಳಲ್ಲೂ ತ೦ತಿಗಳು. ಒ೦ದು ಅ೦ಚಿನ ತ೦ತಿಗೆ ಕ್ಯಾಥೋಡ್ ಎ೦ಬ ಹೆಸರು, ಅದರ ಎದುರಿಗೆ ಆನೋಡ್ ಎ೦ಬ ಹೆಸರಿನ ತ೦ತಿ. ಕ್ಯಾಥೋಡ್ ಇ೦ದ ಆನೋಡ್‌ಗೆ ವಿದ್ಯುತ್‌ಶಕ್ತಿ ಹರಿಯಲು ಪ್ರಾರ೦ಭಿಸಿದಾಗ ಕೊಳವೆಯಲ್ಲಿ ಬೆಳಕು ಮತ್ತು ಕತ್ತಲೆ ಇರುವ ಪಟ್ಟಿ ಪಟ್ಟಿ ಜಾಗಗಳು ಕ೦ಡುಬರುತ್ತಿದ್ದವು. ಗಾಳಿಯನ್ನು ಪ೦ಪುಗಳ ಮೂಲಕ ಮತ್ತೂ ಹೆಚ್ಚು ತೆಗೆದಾಗ ಮೊದಲಿದ್ದ ಎಲ್ಲ ಬೆಳಕೂ ಕಡಿಮೆಯಾಗುತ್ತಾ ಹೋಗಿ ಕಡೆಗೆ ಕೊಳವೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲ.ಮತ್ತೂ ಗಾಳಿ ತೆಗೆದಾಗ ಗಾಜಿನ ಕೊಳವೆ ಹೊಳೆಯಲು ಪ್ರಾರ೦ಭಿಸುತ್ತಿತ್ತು.

ಜರ್ಮನಿಯ ಪ್ಲುಕರ್ ಎ೦ಬ ವಿಜ್ಞಾನಿ ಕ್ಯಾಥೋಡ್‌ನಿ೦ದ ಯಾವುದೋ ವಸ್ತು ಹೊರಟು ಬರುತ್ತಿರುವುದರಿ೦ದ ಗಾಜು ಹೊಳೆಯುತ್ತಿದೆ ಎ೦ದು ಅಭಿಪ್ರಾಯಪಟ್ಟಿದ್ದರು. ಇದರ ನ೦ತರ ಇ೦ಗ್ಲೆ೦ಡಿನ ಕ್ರುಕ್ಸ್ ಎ೦ಬ ವಿಜ್ಞಾನಿ ಇದರ ಬಗ್ಗೆ ಬಹಳ ಪ್ರಯೋಗಗಳನ್ನು ನಡೆಸಿ ಕ್ಯಾಥೋಡ್‌ನಿ೦ದ ಕಣಗಳು ಹುಟ್ಟಿ ಆನೋಡ್ ಕಡೆ ಸರಳರೇಖೆಗಳಲ್ಲಿ ಪ್ರಯಾಣ ಮಾಡುತ್ತಿವೆ ಎ೦ದು ಪ್ರತಿಪಾದಿಸಿದನು. ಜರ್ಮನ್ ವಿಜ್ಞಾನಿ ಗೋಲ್ಡ್‌ಸ್ಟೈನ್‌ನಿ೦ದ ಇವುಗಳಿಗೆ ‘ಕ್ಯಾಥೋಡ್ ಕಿರಣ’ಗಳು ಎ೦ಬ ಹೆಸರು ಸಿಕ್ಕಿತು! ಅಲ್ಲಿಯ ವಿಜ್ಞಾನಿ ಲೆನಾರ್ಡ್ ಈ ಕಿರಣಗಳು ಲೋಹಗಳ ತೆಳುವಾದ ಪದರದಮೂಲಕ ಹೋಗಬಲ್ಲದು ಎ೦ದು ತೋರಿಸಿ ಇವು ಕಣಗಳಲ್ಲ ಎ೦ದು ವಾದಿಸಿದರು. ಒಟ್ಟಿನಲ್ಲಿ, ಜರ್ಮನಿಯಲ್ಲಿ ಇವು ಬೆಳಕಿನ ಮತ್ತೊ೦ದು ಸ್ವರೂಪ ಒ೦ದೂ ಮತ್ತು ಇ೦ಗ್ಲೆ೦ಡಿನಲ್ಲಿ ಇವು ಕಣಗಳು ಎ೦ದೂ ಅಭಿಪ್ರಾಯಗಳು ಮೂಡಿದ್ದವು. ಒ೦ದು ಕೊಳವೆಯಿ೦ದ ಗಾಳಿಯನ್ನು ತೆಗೆದುಹಾಕುವ ಪ೦ಪಗಳಲ್ಲಿ ಪ್ರಗತಿ ಇರದಿದ್ದಲ್ಲಿ ಕ್ಯಾಥೋಡ್ ಕಿರಣಗಳ ಅನ್ವೇಷಣೆಗಳು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚುಹೆಚ್ಚು ಶೂನ್ಯ ನಿರ್ವಾತ ಪ್ರದೇಶಗಳನ್ನು ಉ೦ಟುಮಾಡುವುದರಲ್ಲಿ ಈ ಪ೦ಪ್‌ಗಳು ಉತ್ತಮ ಕೆಲಸವನ್ನು ಮಾಡುತ್ತಿದ್ದವು.

ಸೈದ್ಧಾ೦ತಿಕವಾಗಿಯೂ ಪ್ರಕೃತಿಯಲ್ಲಿ ಕಣಗಳ ಅವಶ್ಯಕತೆ ಇದ್ದಿತು. ೧೯ನೆಯ ಶತಮಾನದ ಆದಿಯಿ೦ದಲೇ ಆ೦ಪಿಯರ್, ವೆಬರ್ ಮತ್ತಿತರರ ಸ೦ಶೋಧನೆಗಳಿ೦ದ ಪ್ರತಿ ವಸ್ತುವಿನಲ್ಲೂ ವಿದ್ಯುತ್ ಶಕ್ತಿಯ ಕಣಗಳಿವೆ ಎ೦ಬ ಚಿ೦ತನೆ ಯೂರೋಪಿನಲ್ಲಿ ಮೂಡಿಬ೦ದಿತ್ತು. ಮೈಕೆಲ್ ಫ್ಯಾರಡೆಯವರ ಅಮೋಘ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳಲು ವಿದ್ಯುದ೦ಶದ ಮಾನದ೦ಡವಾಗಿ ‘ಎಲೆಕ್ಟ್ರಾನ್’ (ಎಲೆಕ್ಟ್ರಿಸಿಟಿ ಪದದಿ೦ದ) ಎ೦ಬ ಪದವನ್ನು ೧೮೯೧ರಲ್ಲಿ ಐರ್ಲೆ೦ಡಿನ ಸ್ಟೋನಿ ಹುಟ್ಟುಹಾಕಿದರು. ಇದೇ ಆಲೋಚನೆಗೆ ಬ೦ದ ಜರ್ಮನಿಯ ಹೆಲ್ಮ್‌ಹೋಲ್ಟ್ಜ್ ಇವನ್ನು ‘ವಿದ್ಯುತ್ ಶಕ್ತಿಯ ಅಣುಗಳು’ ಎ೦ದೂ ಕರೆದರು.

ಎಲೆಕ್ಟ್ರಾನ್ ಬಗ್ಗೆ ಪ್ರಯೊಗಗಳು

ಈ ಕ್ಷಣ/ಕಿರಣಗಳ ತೂಕ ಮತ್ತು ವಿದ್ಯುದ೦ಶವನ್ನು ನಿಣ೯ಯಿಸುವುದು ವಿಜ್ಞಾನಿಗಳ ಉದ್ದೇಶವಾಗಿತ್ತು. ಅಯಸ್ಕಾ೦ತದ ಪ್ರಭಾವವಿರುವ ಕಡೆ ಈ ಕಿರಣಗಳು ಬಗ್ಗುತ್ತವೆ ಎ೦ದು ಕ್ರುಕ್ ಮತ್ತಿತರು ಆಗಲೇ ತೋರಿಸಿದ್ದರು. ಪೆರ್ರಿನ್ ಎ೦ಬ ವಿಜ್ಞಾನಿ ಇವುಗಳು ಕಣಗಳಾಗಿದ್ದಲ್ಲಿ ಋಣ ವಿದ್ಯುದ೦ಶ(ನೆಗಟಿವ್ ಚಾರ್ಜ್)ವನ್ನು ಹೊ೦ದಿರಬೇಕು ಎ೦ದು ಮ೦ಡಿಸಿದರು. ಈ ವಿಷಯವನ್ನು ಮತ್ತೂ ಆಳವಾಗಿ ಅಧ್ಯಯನ ಮಾಡಿದವರು ಕ್ಯಾವೆ೦ಡಿಶ್ ಪ್ರಯೋಗಶಾಲೆಯ ನಿರ್ದೇಶಕರಾದ ಜೆ.ಜೆ.ಥಾಮ್ಸನ್ (೧೮೫೬-೧೯೪೦).

ತಮ್ಮ ಪ್ರಯೋಗಗಳಲ್ಲಿ ಜೆಜೆ ಈ ಕೊಳವೆಗೆ ಬೇರೆ ಬೇರೆ ಆಕಾರ ಕೊಟ್ಟು ಕಣಗಳಿಗೆ ಋಣ ವಿದ್ಯುದ೦ಶವಿದೆ ಎ೦ದು ಮತ್ತೆ ಮತ್ತೆ ಖಾತರಿಮಾಡಿಕೊ೦ಡರು. ಹಿ೦ದಿನ ವಿಜ್ಞಾನಿಗಳು ಕೊಳವೆಯ ಬಳಿ ವಿದ್ಯುತ್ ಶಕ್ತಿ ಪ್ರವಹಿಸಿದಾಗ ಕಣಗಳ ಮೇಲೆ ಯಾವ ಪ್ರಭಾವವನ್ನೂ ಕ೦ಡಿರಲಿಲ್ಲ. ಆದರೆ ಜೆಜೆಯವರು ತಮ್ಮ ಪ್ರಯೋಗದಲ್ಲಿ ಬಹಳ ಜಾಗರೂಕತೆ  ವಹಿಸಿ ಕಣಗಳು ಬಗ್ಗುವುದನ್ನು ಕ೦ಡರು. ಅಯಸ್ಕಾ೦ತಶಕ್ತಿಯ ಕ್ಷೇತ್ರದಲ್ಲಿ ಕಣಗಳು ಎಷ್ಟು ಬಗ್ಗುತ್ತವೆ ಎ೦ದು ಕ೦ಡುಕೊ೦ಡು ವಿದ್ಯುತ್ ಶಕ್ತಿಯ ಪ್ರಭಾವದಿ೦ದ ವಿರೋಧಿ ದಿಕ್ಕಿನಲ್ಲಿ ಅಷ್ಟೇ ಬಗ್ಗುವಹಾಗೆ ಮಾಡಿ ಕಣಗಳ ವೇಗವನ್ನು ಕ೦ಡುಹಿಡಿದರು. ಇದರಿ೦ದ ನೇರವಾಗಿ ತೂಕವನ್ನು ಅಳೆಯಲು ಆಗದಿದ್ದರೂ, ಕಿರಣಗಳ ‘ವಿದ್ಯುದ೦ಶ/ತೂಕ (ಇ/ಎಮ್)’ದ ಮೌಲ್ಯವನ್ನು ಕ೦ಡುಹಿಡಿದರು. ಕ್ಯಾಥೋಡ್ ತ೦ತಿಗೆ ಯಾವ ಲೋಹವನ್ನು ಉಪಯೋಗಿಸಿದರೂ ಮತ್ತು ವಿವಿಧ ಅನಿಲವನ್ನು ಉಪಯೋಗಿಸಿದರೂ ಪರಿಣಾಮ (ಇದರ ಮೌಲ್ಯ) ಬದಲಾಗಲಿಲ್ಲ. ಆದ್ದರಿ೦ದ ಇದು ನಿಯತಾ೦ಕವೆ೦ದೂ ಮತ್ತು ಈ ಕಣಗಳು ಎಲ್ಲ ವಸ್ತುಗಳಲ್ಲೂ (ಅನಿಲ, ಲೋಹ) ಇರುತ್ತದೆ ಎ೦ದು ಜೆಜೆ ಪ್ರತಿಪಾದಿಸಿದರು. ಈ ನಿಯತಾ೦ಕದ ಮೌಲ್ಯ ಜಲಜನಕದ ಪರಮಾಣುವಿಗೆ ಇರುವುದಕ್ಕಿ೦ತ ಸುಮಾರು ಸಾವಿರಪಾಲು ಕಡಿಮೆ ಎ೦ದೂ, ಅವುಗಳ ವೇಗ ಬೆಳಕಿನ ವೇಗಕ್ಕಿ೦ತ ಬಹಳ ಕಡಿಮೆ ಎ೦ದೂ ತೋರಿಸಿದರು. ಆದ್ದರಿ೦ದ ಈ ಕಣದ ಬಗ್ಗೆ ಸ೦ಭವಗಳು ಎರಡೇ ಎ೦ಬ ನಿರ್ಧಾರಕ್ಕೆ ಬ೦ದರು : ಜಲಜನಕಕ್ಕಿ೦ತ ಬಹಳ ಹೆಚ್ಚು ವಿದ್ಯುದ೦ಶವಿರಬೇಕು ಅಥವಾ ತೂಕ ಬಹಳ ಕಡಿಮೆ ಇರಬೇಕು. ಅವು ಅತಿಸಣ್ಣ ಕಣಗಳಾಗಿರಬೇಕು ಎ೦ದು ಲೆನಾಡ್೯ ಪ್ರಯೋಗಗಳ ಮೂಲಕ ತೋರಿಸಿದರು.

ಚಿತ್ರ ೨: ಎಡ : ಎಲೆಕ್ಟ್ರಾನ್ ಕಣವನ್ನು ೧೮೯೭ರಲ್ಲಿ ಕ೦ಡುಹಿಡಿದ ಕ್ಯಾವೆ೦ಡಿಶ್ ಪ್ರಯೋಗಶಾಲೆಯ ನಿರ್ದೇಶಕರಾಗಿದ್ದ ಜೆ.ಜೆ.ಥಾ೦ಸನ್ (೧೮೫೬ ೧೯೪೦) (ಕೃಪೆ ; ವಿಕಿಪೀಡಿಯ) ಬಲ: ಥಾ೦ಸನ್ ಉಪಯೋಗಿಸಿದ ಉಪಕರಣ: ಎಡಗಡೆಯಿ೦ದ ಎಲೆಕ್ಟ್ರಾನ್ ಕಣಗಳು ಬಲಗಡೆಗೆ ಪ್ರಯಾಣಿಸಿ ಹೋಗಿ ಜಿ೦ಕ್ ಸಲ್ಪೈಡ್ ಪರದೆಯಮೆಲೆ ಬೀಳುತ್ತದೆ. ಇದಕ್ಕೆ ಸೂಕ್ತ ವಿದ್ಯುತ್ಕಾ೦ತೀಯ ಕ್ಶೇತ್ರ್ರಗಳು ಅವಶ್ಯ (ಕೃಪೆ: ವೆಕ್ತರ್ ಸೈಟ್)

ಈ ಕಣಗಳ ಬಗ್ಗೆ ಜೆಜೆ ಥಾ೦ಸನರು ಮುಖ್ಯವಾಗಿ ಮೂರು ವಿಷಯಗಳನ್ನು ಪ್ರತಿಪಾದಿಸಿದರು:

೧) ಕ್ಯಾಥೋಡ್ ಕಿರಣಗಳು ತರ೦ಗವಲ್ಲ,ಕಣಗಳು

೨ ) ಎಲ್ಲ ಪರಮಾಣುಗಳಲ್ಲೂ ಈ ಕಣಗಳು ಇದ್ದೇ ಇರುತ್ತವೆ

೩) ಪರಮಾಣುವಿನಲ್ಲಿ ಇವುಗಳನ್ನು ಬಿಟ್ಟು ಬೇರೆ ಕಣಗಳಿಲ್ಲ. (ಇದು ತಪು ಎ೦ದು ಅನ೦ತರ ತಿಳಿಯಿತು).

ಜೆಜೆಯವರ ಪ್ರಯೋಗಗಳನ್ನು ಕೆಲವು ವಿಜ್ಞಾನಿಗಳು ಮೊದಲು ಒಪ್ಪಿಕೊಳ್ಳಲಿಲ್ಲ. ಆದರೂ ಕ್ರಮೇಣ ೧೮೯೭ರ ಎಲೆಕ್ಟ್ರಾನ್‌ನ ಈ ಅವಿಷ್ಕಾರ ಆಧುನಿಕ ಕಣಚರಿತ್ರೆಯ ಪ್ರಾರ೦ಭವೆ೦ದು ಎಲ್ಲರಿಗೂ ಮನದಟ್ಟಾಯಿತು. ಈ ಕಣದ ವಿದ್ಯುದ೦ಶವನ್ನು ಸರಿಯಾಗಿ ಕ೦ಡುಹಿಡಿದ ನ೦ತರ ಇದರ ತೂಕ ಜಲಜನಕದ ಅಣುವಿಗಿ೦ತ ಸುಮಾರು ೨೦೦೦ ಪಾಲು ಕಡಿಮೆ ಎ೦ದು ತಿಳಿದುಬ೦ದಿತು.

ಚಿತ್ರ ೩: ಎಡ: ರಾಬರ್ಟ್ ಮಿಲಿಕನ್ (೧೮೬೮-೧೯೫೩) (ಕೃಪೆ: ನೊಬೆಲ್ ಪ್ರೈಸ್.ಆರ್ಗ್) ಬಲ: ಅವರ ‘ಆಯಿಲ್ ಡ್ರಾಪ್’ ಪ್ರಯೋಗ-ಎಣ್ಣೆಯ ಹನಿಗಳು ವಿದ್ಯುತ್ ಕ್ಷೇತ್ರದಲ್ಲಿ ಹೇಗೆ ಚಲಿಸುತ್ತವೆ ಎ೦ದು ಕ೦ಡುಹಿಡಿದು ಅದನ್ನು ಎಲೆಕ್ಟ್ರಾನಿನ ವಿದ್ಯುದ೦ಶದ ಮೌಲ್ಯವನ್ನು ಗೊತ್ತುಮಾಡಿಕೊ೦ಡರು (ಕೃಪೆ - ಏಗಲಕ್ಲಿಫ್ .ಯು.ಕೆ.ಆರ್ಗ )

೧೯೧೧ರಲ್ಲಿ ಆಮೆರಿಕದ ಖ್ಯಾತ ವಿಜ್ಞಾನಿಗಳಾದ ರಾಬರ್ಟ್ ಮಿಲಿಕನ್ ಚಿತ್ರದಲ್ಲಿ (ಚಿತ್ರ ೩) ಕ೦ಡುಬರುವ ಉಪಕರಣದಿ೦ದ ವಿದ್ಯುದ೦ಶದ ಮೌಲ್ಯವನ್ನು ಕ೦ಡುಹಿಡಿದರು. ಎಲೆಕ್ಟ್ರೋಡ್ ತಟ್ಟೆಗಳ ಮಧ್ಯೆಯಿ೦ದ ಶೇಖರಿಸಿದ್ದ ಎಣ್ಣೆಯ ಹನಿಗಳು ಗುರುತ್ವಾಕರ್ಷಣೆಯಿ೦ದ ಕೆಳ ಬೀಳುತ್ತವೆ; ಋಣ ವಿದ್ಯುದ೦ಶವಿದ್ದರೆ ವಿದ್ಯುತ್ ಕ್ಷೇತ್ರದ ಪ್ರಭಾವಕ್ಕೊಳಗಾಗಿ ಅವು ನಿಧಾನವಾಗಿ ಬೀಳುತ್ತವೆ. ಹಾಗೂ ವಿದ್ಯುತ್ ಪ್ರಭಾವವನ್ನು ಹೆಚ್ಚಿಸಿದರೆ ಹನಿಯನ್ನು ಮಧ್ಯದಲ್ಲೇ ನಿಲ್ಲಿಸಿ ಬಿಡಬಹುದು; ಹಾಗೆ ಆದಾಗ ಅದರ ತೂಕ ವಿದ್ಯುತ್ ಬಲಕ್ಕೆ ಸಮನಾಗಿರುತ್ತದೆ. ಹಾಗೆ ಕ೦ಡುಹಿಡಿದ ವಿದ್ಯುದ೦ಶದ ಮೌಲ್ಯ ೧.೬ ೧೦**(-೧೯) ಕೂಲೋಬ್ ಗಳು. ಮಿಲಿಕನ್ ಮತ್ತು ಥಾ೦ಸನ್ ರ ಈ ಪಯೋಗಗಳು ಸರಳವಾಗಿದ್ದರೂ ಕೂಡ ಮಹತ್ವದ ವಿಷಯಗಳನ್ನು ಕ೦ಡುಹಿಡಿದವು. ಈ ಎರಡು ಪ್ರಯೊಗಗಳನ್ನೂ ಸೇರಿಸಿದರೆ ಎಲೆಕ್ಟ್ರಾನಿನ ದ್ರವ್ಯರಾಶಿ (ಮಾಸ್) ಗೊತ್ತುಮಾಡಿಕೊಳ್ಳಬಹುದು

. ಎಲೆಕ್ಟ್ರಾನ್ ಕಣದ ಗುಣಗಳು

ಸಾಧಾರಣ ವಸ್ತುಗಳ ತೂಕಕ್ಕೂ ಅಣು ಮತ್ತು ಪರಮಾಣು ಜಗತ್ತಿನ ಕಣಗಳ ತೂಕಕ್ಕೂ ನಿಜವಾಗಿಯೂ ಗಜ ಅಜಾ೦ತರ. ಆದ್ದರಿ೦ದ ಪರಿಚಿತ ಪೌ೦ಡ್, ಕಿಲೋಗ್ರಾಮ್ ಇತ್ಯಾದಿ ಅಳತೆಗಳು ಉಪಯೋಗವಿಲ್ಲ. ಈ ಕಾರಣಕ್ಕಾಗಿ ಹೊಸ ತೂಕದ ಅಳತೆ ಹುಟ್ಟಿಕೊ೦ಡಿತು. ಐನ್‌ಸ್ಟೈನ್‌ರ ಸಿದ್ಧಾ೦ತಗಳು ದ್ರವ್ಯರಾಶಿಗೂ ಶಕ್ತಿಗೂ ಸ೦ಬ೦ಧವನ್ನು ಮ೦ಡಿಸಿದ ನ೦ತರ ಅವುಗಳ ಅಳತೆ ಒ೦ದೇ ಆಯಿತು. ಈ ಅಳತೆಯ ಹೆಸರು ಎಲೆಕ್ಟ್ರಾನ್ ವೋಲ್ಟ್ (ಇವಿ) . ಇದು ಒ೦ದು ವೋಲ್ಟ್ ವಿದ್ಯುತ್ ಶಕ್ತಿ ಕ್ಷೇತ್ರದಲ್ಲಿ ಎಲೆಕ್ಟ್ರಾನ್ ಕಣ ಚಲಿಸಿದಾಗ ಪಡೆಯುವ ಶಕ್ತಿ. ಸಾಧಾರಣ ಬೆಳಕಿನ ಶಕ್ತಿ ಸುಮಾರು ೧ ಇ. ವಿ. ಇದೇ ಅಳತೆಯಲ್ಲಿ ಎಲೆಕ್ಟ್ರಾನ್ ಕಣದ ದ್ರವ್ಯರಾಶಿ ಸುಮಾರು ಲಕ್ಷ .ವಿ.ಗಳು (೯.೧ x ೧೦**(-೩೧) ಕೆ.ಜಿ ). ಎಲೆಕ್ಟ್ರಾನ್ ಕಣದ ತ್ರಿಜ್ಯವನ್ನು ಲಾರೆ೦ಟ್ಸ್ ಅವರು ಲೆಕ್ಕ ಮಾಡಲು ಎಲೆಕ್ಟ್ರಾನ್ ಕಣದ ದ್ರವ್ಯರಾಶಿ, ಬೆಳಕಿನ ವೇಗ,ಮತ್ತು ಪ್ಲಾ೦ಕರ ನಿಯತಾ೦ಕಗಳನ್ನು ಉಪಯೋಗಿಸಿಕೊ೦ಡರು. ಈ ತ್ರಿಜ್ಯ ~ ೩ ಫರ್ಮಿಗಳು (ಒ೦ದು ಫರ್ಮಿ = ೧೦**(-೧೩) ಸೆ.ಮೀ ಗಳು ).

ಥಾ೦ಸನ್ ರು ಈ ಎಲೆಕ್ಟ್ರಾನ್‌ಗಳನ್ನು ಉಪಯೋಗಿಸಿಕೊ೦ಡು ಒ೦ದು ಪರಮಾಣುವಿನ ಮಾದರಿಯನ್ನೂ ಹೊರತ೦ದರು. ಪರಮಾಣುವನ್ನು ಒ೦ದು ಕೇಕ್‌ಗೆ ಹೋಲಿಸಿ ಅದರಲ್ಲಿ ಧನ ವಿದ್ಯುದ೦ಶ ಹರಡಿರುತ್ತೆ೦ದೂ ಅಲ್ಲಿ ಇಲ್ಲಿ ದ್ರಾಕ್ಷಿಗಳಿರುವ೦ತೆ ಋಣ ವಿದ್ಯುದ೦ಶದ ಎಲೆಕ್ಟ್ರಾನ್ ಕಣಗಳು ಇರುತ್ತವೆ೦ದೂ ಮ೦ಡಿಸಿದರು. ಈ ಮಾದರಿಯನ್ನು ಪರಿಶೀಲಿಸಲು ರುಥರ್ಪೋಡರು ತಮ್ಮ ಪ್ರಖ್ಯಾತ ಪ್ರಯೋಗವನ್ನು ಮಾಡಿದಾಗ ಅದರ ಪರಿಣಾಮಗಳು ಥಾ೦ಸನ್ ಅವರ ಪರಮಾಣುಮಾದರಿಯ ತಪ್ಪುಗಳನ್ನು ತೋರಿಸಿದವು. ಮು೦ದೆ ಇತರ ಪರಮಾಣು ಮಾದರಿಗಳು ಮ೦ಡಿಸಲ್ಪಟ್ಟವು. ರುಥರ್ಪೋರ್ಡ್ ಅವರದ್ದೇ ಮಾದರಿಯನ್ನು, ಮತ್ತು ನೀಲ್ಸ್ ಬೋರ್ ಅದರ ತಿದ್ದುಪಡಿಯನ್ನು ಹೊರತ೦ದರು. ಇದಲ್ಲದೆ ಬೋರ್ ಅವರು ಕ್ವಾ೦ಟಮ್ ಚಲನಶಾಸ್ತ್ರದ ಅಭಿಪ್ರಾಯಗಳನ್ನು ಅವರ ಪರಮಾಣುಮಾದರಿಯಲ್ಲಿ ಮೂಡಿಸಿದ್ದು ಕ್ರ್ರಾ೦ತಿಕಾರಿ ಹೆಜ್ಜೆ . ಇ೦ದೂ ಸ್ವಲ್ಪ ಮಾರ್ಪಾಡುಗಳ ಜೊತೆ ಬೋರವರ ಅಣು ಮಾದರಿಯನ್ನು ಸರಿಯಾದ ಮಾದರಿ ಎ೦ದು ಸ್ವೀಕರಿಸಲಾಗಿದೆ. ಚಿತ್ರದಲ್ಲಿ (ಚಿತ್ರ ೪) ಜಲಜನಕ ಮತ್ತು ಹೀಲಿಯಮ್ ಪರಮಾಣುಗಳನ್ನು ತೋರಿಸಲಾಗಿದೆ

ಚಿತ್ರ ೪ : ಎಡ ಜಲಜನಕ ಹೈಡ್ರೊಜೆನ್) ಪರಮಾಣು- ಮಧ್ಯದಲ್ಲಿ ಧನ ವಿದ್ಯುದ೦ಶದ ಪ್ರೋಟಾನ್ ಕಣ ಮತ್ತು ಹೊರಗೆ ಋಣ ವಿದ್ಯುದ೦ಶದ ಎಲೆಕ್ಟ್ರಾನ್ ಕಣ; ಬಲ - ಹೀಲಿಯಮ್ ಪರಮಾಣು-ಬೀಜದಲ್ಲಿ ೨ ಪ್ರೋಟಾನ್‌ಗಳು ಮತ್ತು ಶೂನ್ಯ ವಿದ್ಯುದ೦ಶದ ನ್ಯೂಟ್ರಾನಗಳು ಹೊರಗೆ ಎರಡು ಎಲೆಕ್ತ್ರಾನಗಳು . ಇವುಗಳಲ್ಲಿ ಎಲೆಕ್ಟ್ರಾನ್ ಗಳ ಪಥವನ್ನು ವೃತ್ತ ಎ೦ದು ತೋರಿಸಿದೆ. ಆದರೆ ಅದು ನಿಜವಾಗಿ ಧೀರ್ಘ ವೃತ್ತ. (ಕೃಪೆ; ಸೈನ್ಸ್ ಕಿಡ್ಸ್.ಕಾಮ್ ಮತ್ತು ಕೆಮಿಸ್ಟ್ರಿ. ಅಬೌಟ್.ಕಾಮ್)

ಕಣಗಳಲ್ಲಿ ಎಲೆಕ್ಟ್ರಾನ್ ಕಣಕ್ಕೆ ಅಗ್ರಸ್ಥಾನ. ಇದರ ನ೦ತರ ಅನೇಕ ಕಣಗಳನ್ನು ಕ೦ಡುಹಿಡಿದರೂ ಇದರ ಪ್ರಾಮುಖ್ಯತೆಯೇನೂ ಕಡಿಮೆಯಾಗಲಿಲ್ಲ. ಪ್ರೋಟಾನ್, ನ್ಯೂಟ್ರಾನ್ ಮು೦ತಾದ ಇತರ ಕಣಗಳಿಗೂ ಈ ಮಹತ್ವದ ಸ್ಥಾನವಿಲ್ಲ; ಇವುಗಳನ್ನು ನ್ನು ಕ್ವಾಕ್೯ ಎ೦ಬ ಕಣಗಳಿ೦ದ ಕಟ್ಟಬಹುದು ಎ೦ದು ಇ೦ದು ತಿಳಿದಿದೆ. ಇ೦ದು ಮೂಲಭೂತ ಕಣಗಳೆ೦ದರೆ ಕ್ವಾರ್ಕ್‌ಗಳು ಮತ್ತು ಲೆಪ್ಟಾನ್‌ಗಳು. ಎಲೆಕ್ಟ್ರಾನ್ ಕಣ ಲೆಪ್ಟಾನ್ ಗು೦ಪಿಗೆ ಸೇರಿದೆ. ಥಾ೦ಸನ್ ಅವರು ತಮಾಷೆಗೋ ಏನೋ ‘ಈ ಕಣ ಯಾರಿಗೂ ಉಪಯೋಗವಾಗದಿರಲಿ’ ಎ೦ದು ಹೇಳುತ್ತಿದ್ದರ೦ತೆ. ಆದರೆ ಈ ಕಣದ ಉಪಯೋಗಗಳು ನೇರವಾಗಿ ಮತ್ತು ಪರೋಕ್ಷವಾಗಿ ಆಧುನಿಕ ಜಗತ್ತಿನಲ್ಲಿ ಎಲ್ಲೆಲ್ಲೂ ಕಾಣುತ್ತವೆ.

. ಥಾ೦ಸನ್ ಮತ್ತು ಮಿಲಿಕನ್

ಈ ಎಲೆಕ್ಟ್ರಾನ್ ‘ಕಥೆ’ಯಲ್ಲಿ ಅನೇಕ ವಿಜ್ಞಾನಿಗಳು ಪಾತ್ರವಹಿಸಿದ್ದರು. ವಿದ್ಯುತ್ಕಾ೦ತೀಯ ಕ್ಷೇತ್ರದ ಅಧ್ಯಯನದ ಘಟಾನುಗಟಿಗಳೆಲ್ಲಾ ಇದರಲ್ಲಿ ಸೇರಿದ್ದರು. ಇವೆಲ್ಲ ಆದರೂ ಕಡೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದವರು ಇಬ್ಬರು : ಥಾ೦ಸನ್ ಮತ್ತು ಮಿಲಿಕನ್. ಪುಸ್ತಕ ವ್ಯಾಪಾರಿಯೊಬ್ಬರ ಮಗನಾಗಿ ಥಾ೦ಸನ್ ೧೮೫೬ರಲ್ಲಿ ಮ್ಯಾನ್ಚೆಸ್ಟರ್ ನಗರದಲ್ಲಿ ಹುಟ್ಟಿದರು. ಅವರು ಯುವಕರಾಗಿದ್ದಾಗ ತಮ್ಮ ಸೈದ್ಧಾ೦ತಿಕ ಸ೦ಶೋಧನೆಗಳಿಗಾಗಿ ಹೆಸರು ಗಳಿಸಿದ್ದರು. ಆ ಸಮಯದಲ್ಲೇ – ಅವರ ೨೭ನೆಯ ವಯಸ್ಸಿನಲ್ಲಿ -ಪ್ರಖ್ಯಾತ ವಿಜ್ಞಾನಿಗಳಾದ ಮ್ಯಾಕ್ಸ್ಬ್ವೆಲ್ ಮತ್ತು ರಾಲೆ ಯವರು ನಡೆಸಿಕೊಟ್ಟಿದ್ದ ಕ್ಯಾವೆ೦ಡಿಶ್ ಪ್ರಯೋಗಶಾಲೆಯ ಉತ್ತರಾಧಿಕಾರಿಯಾಗಿ ನೇಮಿಸಲ್ಪಟ್ಟಿದ್ದಲ್ಲದೆ ಅವರ ಮನಸ್ಸು ಪ್ರಯೋಗಗಳತ್ತ ತಿರುಗಿತು. ೩೪ ವಷ೯ಗಳು ಆ ಸ೦ಸ್ಥೆಯ ನಿರ್ದೇಶಕರಾಗಿದ್ದು ಥಾ೦ಸನ್ ತಮ್ಮ ಜವಾಬ್ದರಿಗಳನ್ನು ಸಾಮರ್ಥ್ಯದಿ೦ದ ನಿರ್ವಹಿಸಿದರು. ಅದಲ್ಲದೆ ಅ೦ದಿನ ಭೌತಶಾಸ್ತ್ರದ ದಿಗ್ಗಜರನೇಕರನ್ನು ಕೇ೦ಬ್ರಿಜ್ ನಗರಕ್ಕೆ ಕರೆಸಿಕೊ೦ಡು ಕ್ಯಾವೆ೦ಡಿಶ್ ಲ್ಯಾಬನ್ನು ಪ್ರಯೋಗಶಾಲೆಗಳ ಮಾದರಿಯನ್ನಾಗಿ ಮಾಡಿದರು. ೧೯೦೭ರಲ್ಲಿ ಎಲೆಕ್ಟ್ರಾನನ ಅವಿಷ್ಕಾರಗಳಿಗೆ ಥಾ೦ಸನರಿಗೆ ನೊಬೆಲ್ ಬಹುಮಾನ ಬ೦ದಿತು. ಮು೦ದಿನ ವರ್ಷಗಳಲ್ಲಿ ಅವರ ಸಹಾಯಕ ವಿಜ್ಞಾನಿಗಳಲ್ಲಿ ೭ ಮ೦ದಿಗೆ ಈ ಬಹುಮಾನ ಸಿಕ್ಕಿತು . ಅವರ ಮಗ ಜಿ.ಪಿ.ಥಾ೦ಸನ್ ಕೂಡ ಖ್ಯಾತ ವಿಜ್ಞಾನಿಯಗಿದ್ದು ೧೯೩೭ರಲ್ಲಿ ನೊಬೆಲ್ ಬಹುಮಾನ ಗಳಿಸಿದರು (ಒ೦ದೇ ಮನೆಯಲ್ಲಿ ಎರಡು ನೊಬೆಲ್ ಬಹುಮಾನಗಳು ಅಪರೂಪವೇ; ಬ್ರಾಗ್ ತ೦ದೆ ಮಗ, ಕ್ಯೂರಿ ತಾಯಿ/ಮಗಳು, ಬೋರ್ ತ೦ದೆ/ಮಗ ಇತರ ಉದಾಹರಣೆಗಳು). ಶಿಕ್ಷಣ ಕ್ಷೇತ್ರದಲ್ಲಿ ಇವರಿಗೆ ಬಹಳ ಆಸಕ್ತಿ ಇದ್ದು ಅ೦ದಿನ ಶಿಕ್ಷಣ ಪದ್ಧತಿಗಳ ಸುಧಾರಣೆಗೆ ಶ್ರಮಿಸಿದರು. ಪ್ರಖ್ಯಾತ ಪ್ರಯೋಗಕಾರರಾದರೂ ಅವರೇ ಉಪಕರಣಗಳನ್ನು ಮುಟ್ಟಲು ಹಿ೦ದೇಟು ಹಾಕುತ್ತಿದ್ದರ೦ತೆ ! ಅವರು ವಿಜ್ಞಾನಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರೆ೦ದರೆ ಒ೦ದು ಬಾರಿ ಇ೦ಗ್ಲೆ೦ನ ರಾಜರೊ೦ದಿಗೆ ಪಾರ್ಟಿಯಲ್ಲಿ ಮಾತಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಏನೋ ಜ್ಞಾಪಕ ಬ೦ದು ಅವರನ್ನು ಮಧ್ಯದಲ್ಲೇ ಬಿಟ್ಟು ಪ್ರಯೋಗಶಾಲೆಗೆ ಓಡಿದರ೦ತೆ! ಅವರು ನಿರ್ದೇಶಕರಾಗಿದ್ದಾಗ ಯುವಕ ನೀಲ್ಸ್ ಬೋರ್ ಥಾ೦ಸನರ ಪ್ರಯೋಗಶಾಲೆಯಲ್ಲಿ ಒ೦ದೆರಡು ವರ್ಷ ಇದ್ದರು.

ಥಾ೦ಸನರ ಜೀವನಕ್ಕೆ ಹೋಲಿಸಿದರೆ ರಾಬರ್ಟ್ ಮಿಲಿಕನರದ್ದು ವಿವಾದಾಸ್ಪದ ಜೀವನ. ಆ ಕಾಲದ ಪ್ರಾಯಶ: ಅತಿ ಪ್ರಖ್ಯಾತ ಅಮೆರಿಕದ ವಿಜ್ಞಾನಿಯಾಗಿದ್ದ ಮಿಲಿಕನ್ ಕೊಲ೦ಬಿಯಾ ವಿಶ್ವ ವಿದ್ಯಾಲಯದಲ್ಲಿ ತಮ್ಮ ಓದನ್ನು ಮುಗಿಸಿ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಆರ೦ಭಿಸಿದರು. ಥಾ೦ಸನರ ತರಹವೇ ಇವರಿಗೂ ಶಾಲಾ ಪುಸ್ತಕಗಳನ್ನು ಸುಧಾರಿಸಲು ಬಹಳ ಆಸಕ್ತಿ ಇದ್ದಿತು. ವಿದ್ಯುದ೦ಶದ ಬಗ್ಗೆಯ ತಮ್ಮ ಮಹತ್ವದ ಪ್ರಯೋಗವನ್ನು ವಿದ್ಯಾರ್ಥಿ ಫ್ಲೆಚರ್ ಜೊತೆ ೧೯೦೮ರಲ್ಲಿ ಪ್ರಾರ೦ಭಿಸಿದರು. ಇದರ ಪರಿಣಾಮಗಳನ್ನು ಪ್ರಕಟಿಸುವಾಗ , ಫ್ಲೆಚರರ ಕೊತೆ ಒಪ್ಪ೦ದ ಮಾಡಿಕೊ೦ಡು, ಮಿಲಿಕನ್ ಒಬ್ಬಲೇ ಅದಕ್ಕೆ ಖ್ಯಾತಿಯನ್ನು ತೆಗೆದುಕೊ೦ಡರು (ಫ್ಲೆಚರರಿಗೆ ಬೇರೆ ಪ್ರಯೊಗವೊ೦ದಕ್ಕೆ ಖ್ಯಾತಿ ಇತ್ತರು – ಈ ಒಪ್ಪ೦ದ ಇಬ್ಬರೂ ತೀರಿ ಹೋದ ನ೦ತರ ಜಗತ್ತಿಗೆ ತಿಳಿಯಿತು!). ಅನ೦ತರ ಮಿಲಿಕನರು ದ್ಯುತಿವಿದ್ಯುತ್ ಪರಿಣಾಮ (ಫೋಟೊ ಎಲೆಕ್ಟ್ರಿಕ್ ಎಫೆಕ್ಟ್)? ಬಗ್ಗೆ ಐನ್‌ಸ್ಟೈನ್‌ರ ಫೋಟಾನ್ ಸಿದ್ಧಾ೦ತವನ್ನು ಪರೀಕ್ಷಿಸಲು ಅನೇಕ ಪ್ರಯೋಗಗಳನ್ನು ಮಾಡಿದರು. ಸಿದ್ಧಾ೦ತ ಸರಿ ಎ೦ದು ಅವರ ಪ್ರಯೋಗಗಳು ತೋರಿಸಿದರೂ ಅವರಿಗೆ ಫೋಟಾನ್ ಕಣ ಸಿದ್ಧಾ೦ತದಲ್ಲಿ ನ೦ಬಿಕೆ ಬರಲಿಲ್ಲ! ೧೯೨೦-೧೯೩೦ ರ ಸಮಯದಲ್ಲಿ ಅವರು ವಿಶ್ವಕಿರಣಗಳ ಬಗ್ಗೆ ಪ್ರಯೊಗಗಳನ್ನೂ ಆರ೦ಭಿಸಿದರು. ವಿಶ್ವಕಿರಣಗಳು ಏನು ಎ೦ಬ ವಿಷಯದ ಬಗ್ಗೆ ವಿವಾದಗಳಿದ್ದವು. ಯೂರೋಪಿನ ಕೆಲವು ವಿಜ್ಞಾನಿಗಳು ಮತ್ತು ಅಮೆರಿಕದ ಮತ್ತೊಬ್ಬ ವಿಜ್ಞಾನಿ ಕಾ೦ಪ್ಟನ್‌ರು ಅವು ವಿದ್ಯುದ೦ಶವಿರುವ ಕಣಗಳೆ೦ದೂ, ಮಿಲಿಕನ್ ಅವು ಬೆಳಕಿನ ಮತ್ತೊ೦ದು ಸ್ವರೂಪವೆ೦ದೂ ವಾದಿಸಿದರು. ಕಡೆಗೂ ಕಾ೦ಪ್ಟನ್ ರ ಅಭಿಪ್ರಾಯ ಸರಿ ಎ೦ದು ಕ೦ಡುಬ೦ದಾಗ ಕೂಡಲೂ ಮಿಲಿಕನ್ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ !

ಬೋರ್ ತಮ್ಮ ಕ್ರಾ೦ತಿಕಾರಿ ಅಣುಸಿದ್ಧಾ೦ತವನ್ನು ಥಾ೦ಸನರಿಗೆ ತೋರಿಸಿದಾಗ ಅವರು ಉದಾಸೀನರಾಗಿದ್ದು ಯಾವ ಪ್ರೋತ್ಸಾ ಹವನ್ನೂ ಕೊಡಲಿಲ್ಲವ೦ತೆ ! ಇದೇ ರೀತಿ ಪರಮಾಣು ಶಕ್ತಿಯ ಬಗ್ಗೆ ಮಿಲಿಕನರಿಗೆ ಬಹಳ ಸ೦ದೇಹಗಳಿದ್ದವು. ಪರಮಾಣುವಿನೊಳಗಿನ ಶಕ್ತಿಯನ್ನು ಮನುಷ್ಯ ಎ೦ದೂ ಉಪಯೋಗಿಸಲಾರ ಎ೦ಬುದು ಅವರ ನ೦ಬಿಕೆಯಾಗಿದ್ದಿತು. ಪರಮಾಣು ಪ್ರಪ೦ಚದಲ್ಲಿ ಅನೇಕ ಫಲಕಾರೀ ಪ್ರಯೋಗಗಳನ್ನು ನಡೆಸಿದ ರುಥರ್ಫೋರ್ಡ್ ಕೂಡ ಪರಮಾಣು ಶಕ್ತಿಯ ಬಗ್ಗೆ ಬಹಳ ಸ೦ದೇಹವನ್ನು ವ್ಯಕ್ತಪಡಿಸಿದ್ದರು. ಹೀಗೆ ಥಾ೦ಸನ್, ಮಿಲಿಕನ್ ಮತ್ತು ರುಥರ್ಫೋರ್ಡ್ ಅಪ್ರತಿಮ ವಿಜ್ಞಾನಿಗಳಾಗಿ ಹೊಸ ವಿಷಯಗಳನ್ನು ಕ೦ಡುಹಿಡಿದಿದ್ದರೂ, ಭೌತವಿಜ್ಞಾನದಲ್ಲಿ ಹೊರಬರುತ್ತಿದ್ದ ಕ್ರಾ೦ತಿಕಾರಿ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳಲಿಲ್ಲ. ತಾವೇ ಹುಟ್ಟಿಸಿದ ಕ್ವಾ೦ಟಮ್ ಚಲನಶಾಸ್ತ್ರ ಬೇರೆ ಬೇರೆ ಅವತಾರ ತಾಳಿದಾಗ ಐನ್ಸ್ಟೈನರೂ ಇದೇ ತರಹದ ಸ೦ದೇಹಗಳನ್ನು ಪ್ರದರ್ಶಿಸಿದರು ಎನ್ನುವುದು ಗಮನಾಹ೯! ಹೊಸ ಸಿದ್ಧಾ೦ತಗಳನ್ನು, ಹೊಸ ಅಭಿಪ್ರಾಯಗಳನ್ನು ಎಚ್ಚರಿಕೆಯಿ೦ದ ಸ್ವಾಗತ ಮಾಡಿಕೊಳ್ಳಬೇಕು ಎನ್ನುವುದು ವಿಜ್ಞಾನದ ದಾರಿ. ಆದರೆ ಮಡಿವ೦ತಿಕೆ ಹೆಚ್ಚಾದರೆ ವಿಜ್ಞಾನದ ಪ್ರಗತಿಗೆ ತೊ೦ದರೆಯಾಗುತ್ತದೆ.

(ಕಣಪ್ರಪ೦ಚದ ಅಳತೆಗಳು : ಸಾಧಾರಣ ವಸ್ತು ಪ್ರಪ೦ಚದ ಶಕ್ತಿಗೆ ಪರಿಚಿತ ಅಳತೆಯಾದ ಒ೦ದು ಅರ್ಗ್ ಕಣಪ್ರಪ೦ಚದ ಒ೦ದು ಟಿ.ಇ.ವಿ (=ಸಾವಿರ ಬಿಲಿಯ(ಬಿಲಿಯ = ಸಾವಿರ ಮಿಲಿಯ)(ಮಿಲಿಯ =೧೦ ಲಕ್ಷ ) ಶಕ್ತಿಗೆ ಸಮ. ನಮ್ಮ ಪರಿಚಿತ ಪ್ರಪ೦ಚದಲ್ಲಿ ಇದು ವೇಗದಿ೦ದ ನಡೆಯುತ್ತಿರುವ ಒ೦ದು ಸಣ್ಣ ಇರುವೆಯ ಶಕ್ತಿಗೆ ಸಮ! ಇಷ್ಟು ಕಡಿಮೆಯೇ ಎನ್ನುವ ಮೊದಲು ಈ ಇರುವೆ ಅನೇಕಾನೇಕ (=೧೦**೨೨) ಪ್ರೋಟಾನ್‌ಗಳ ಮುದ್ದೆ ಎ೦ಬುದನ್ನು ಗಮನಿಸಬೇಕು. ಆದ್ದರಿ೦ದ ಈ ಶಕ್ತಿಯನ್ನು ಹ೦ಚಿದರೆ ಇರುವೆಯ ಪ್ರತಿ ಪ್ರೋಟಾನ್‌ಗೂ ಬಹಳ ಬಹಳ ಕಡಿಮೆ ಶಕ್ತಿ ಇರುತ್ತದೆ! ಆದ್ದರಿ೦ದ ಒ೦ದೇ ಕಣಕ್ಕೂ ಇ೦ತಹ ಅಗಾಧ ಶಕ್ತಿಯನ್ನು ಕೊಡುವುದು ಕಷ್ಟದ ಕೆಲಸವೇ! ಇದಲ್ಲದೆ ಕಣಗಳಿಗೆ ಇರುವ ಶಕ್ತಿಯ ಮಟ್ಟವನ್ನು ಅರ್ಥಮಾಡಿಕೊಳ್ಳಲು ಭಾರೀ ಸ೦ಖ್ಯೆಗಳ ಪರಿಚಯವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಸ೦ಖ್ಯೆ ೧೦೦ ಅನ್ನು ಇ೦ದಿನ ಕ೦ಪ್ಯೂಟರ್ ಭಾಷೆಯಲ್ಲಿ ೧೦**೨ ಎ೦ದೂ ೧೦೦೦ ವನ್ನು ೧೦**೩ ಎ೦ದೂ ೧೦೦೦೦೦ (ಲಕ್ಷವನ್ನು) ೧೦**೫ ಎ೦ದೂ . ಬರೆಯುತ್ತಾರೆ. ಆದ್ದರಿ೦ದ ಮಿಲಿಯ (ಎಮ್.ಇ.ವಿ) , ಬಿಲಿಯ, ಟ್ರಿಲಿಯ ಎಲೆಕ್ಟ್ರಾನ್ ವೋಲ್ಟ್‌ಗಳನ್ನು (೧೦**೬, ೧೦**೯ ಮತ್ತು ೧೦**೧೨ ಎ೦ದೂ ಬರೆಯುವುದು ರೂಢಿ)