ಎಲ್ಲಮ್ಮನನ್ನು ‘ಏಳುಕೊಳ್ಳದ ಎಲ್ಲಮ್ಮ’ ಎಂದೇ ಕರೆಯುವುದು ರೂಢಿ. ‘ಏಳೂಕೊಳ್ದೆಲ್ಲಮ್ಮಾ ನಿನ್ನಾಲಕ ಉಧೋ ಉಧೋ’ ಇದು ಭಕ್ತರ ಉದ್ಘೋಷ. ‘ಎಲ್ಲಿ ಕಾಣೆಲ್ಲಿ ಕಾಣೆ. ಎಲ್ಲಮ್ಮನಂಥಾಕೆಲ್ಲಿ ಕಾಣೆಲ್ಲಿ ಕಾಣೆ’ ಹುಟ್ಟೀ ಬಂದೆ ಎಲ್ಲಮ್ಮನಾಗಿ ನಿನ ಮದವೀ ಮಾಡಿ ಕೊಟ್ಟಾರವ್ವ ಜಮದಗ್ನಿಗಿ’ ಇತ್ಯಾದಿ ಎಲ್ಲಮ್ಮನ ಮಹಿಮೆಯನ್ನು ಸಾರುವ ಜನಪದ ಹಾಡುಗಳು.

ಎಲ್ಲಮ್ಮನ ಕ್ಷೇತ್ರಕ್ಕೆ ಸಂಬಂಧಿಸಿದ ಜನಪದ ಹಾಡುಗಳಲ್ಲಿ ‘ಏಳುಕೊಳ್ಳ’, ‘ಸಿದ್ಧನಕೊಳ್ಳ’ ಮುಂತಾದ ಮಾತು ದೊರೆಯುತ್ತವೆ. ಸವದತ್ತಿ ಹತ್ತಿರದ ಈ ಪ್ರದೇಶದ ಭೌಗೋಲಿಕ ಪಾತಳಿ ಕೊಳ್ಳಗಳಿಂದ ರೂಪುಗೊಂಡಿದ್ದು , ಪುರಾತನ ಕಾಲದಿಂದ ಸಿದ್ಧ ಸಂತರ ಸಾಧನೆಯ ಕ್ಷೇತ್ರವಾಗಿರಬೇಕು; ಮತ್ತು ಈ ಪ್ರದೇಶದ ಮಣ್ಣಿನಲ್ಲಿಯೇ ಹುಟ್ಟಿ, ಬೆಳೆದು ಬದುಕಿದ ಎಲ್ಲಮ್ಮನಿಗೂ ಇಲ್ಲಿಯ ಏಳು ಕೊಳ್ಳಗಳಿಗೂ ಗಾಢವಾದ ಸಂಬಂಧ ಏರ್ಪಟ್ಟು ಅದು ಮೌಖಿಕ ಪರಂಪರೆಯ ಮೂಲಕ ನಿರಂತರವಾಗಿ ಸಂವಹನಗೊಳ್ಳುತ್ತ ಬಂದಿರಬೇಕು. ಈ ಮಾತಿಗೆ ಇಂದಿಗೂ ಜನಪದ ಹಾಡುಗಳಲ್ಲಿ ದೊರೆಯುವ ‘ಹೊಕ್ಕುಳದೇವಿ ಕಾಲ್ಮುಂದ ಮಾಡಿ’ ವಾರಿ ವಾರಿ ತಿರುಗುತ್ತಿದ್ದಳು’ ‘ಏಳು ಮಂದಿ ಸಿದ್ಧರನಾಕಿ ಒತ್ತಿ ಬಿಟ್ಟಾಳ ಪಾತಾಳಕ ದೂಡಿ; ಮ್ಯಾಲಿನಿಂದ ಸೀಸದ ಗುಂಡ, ಓಡೀ ಓಡೀ (ಜಡೀ ಜಡೀ)’ ಮುಂತಾದ ಮಾತುಗಳು ಸಂಕೇತವಾಗಿವೆ. ಇವುಗಳನ್ನು ಕುರಿತು ಖಚಿತವಾದ ಐತಿಹಾಸಿಕ ಆಧಾರಗಳು ದೊರೆಯುವುದಿಲ್ಲ. ಆ ಏಳು ಸಿದ್ಧರು ಯಾರು? ಅವರ ಸೇವೆಯಲ್ಲಿ ಎಲ್ಲಮ್ಮ ತೊಡಗಿದ ಸಂದರ್ಭ ಯಾವುದು? ಎಲ್ಲಮ್ಮ ಯಾರು? ಯಾವ ವೃಂದಕ್ಕೆ ಸಂಬಂಧಿಸಿದವಳು? ಈಕೆ ‘ಧರ್ಮ’ದಲ್ಲಿ ತೊಡಗಿ, ದೇವತೆಯಾಗಿ ಪರಿವರ್ತನೆಗೊಂಡು ಅತಿಮಾನುಷ ಅಥವಾ ದೈವೀಶಕ್ತಿಯಾಗಿ, ಎಲ್ಲ ಜನಸಮುದಾಯಗಳಿಗೂ ಅಮ್ಮನಾಗಿ ವಿಜೃಂಭಿಸಿದ್ದು ಎಂದಿನಿಂದ?  ಈಕೆಯ ಸುತ್ತೂ ಹುಟ್ಟಿಕೊಂಡಿರುವ ಪೌರಾಣಿಕ ಐತಿಹಾಸಿಕ ಮತ್ತು ಜನಪದ ಕಥೆಗಳಲ್ಲಿ ಹುದುಗಿರುವ, ಪವಾಡಗಳಲ್ಲಿ ಅಡಕಗೊಂಡಿರುವ ಸಂಗತಿಗಳ ನಿಜರೂಪ ಯಾವುದು? ಇತ್ಯಾದಿ ಪ್ರಶ್ನೆಗಳ ಒಂದು ದೊಡ್ಡ ಜಾಲವನ್ನೇ ನಾವು ಎದುರಿಸುತ್ತೇವೆ. ಏಕೆಂದರೆ ಎಲ್ಲಮ್ಮನನ್ನು ಕುರಿತು ದೊರೆಯುವ ಸಾಮಗ್ರಿ ಮೂರು ವಿಭಿನ್ನ ಆಕರಗಳಲ್ಲಿ ತೊಡಗಿಕೊಂಡಿದ್ದು, ಒಂದೊಂದೂ ಅನೇಕ ಸಾಮ್ಯ ಮತ್ತು  ವೈರುಧ್ಯಗಳನ್ನು ಒಳಗೊಂಡಿವೆ. ಒಂದು: ಶಿಷ್ಟಪದ ಪುರಾಣಗಳಲ್ಲಿ ದೊರೆಯುವ ಕಥೆಗಳು; ಎರಡು: ಐತಿಹಾಸಿಕ ವ್ಯಕ್ತಿಗಳ ಜೊತೆ ಹೆಣೆಯುಲಾದ ಸಂಗತಿಗಳು; ಮೂರು: ಜನಪದ ಹಾಡುಗಳ ಮೂಲಕ ವಿಭಿನ್ನ ಪ್ರದೇಶಗಳಲ್ಲಿ ಹರಡಿ ಚದುರಿದ ಸ್ಥಿತಿಯಲ್ಲಿರುವ ಘಟನೆಗಳು.

ಈ ಪ್ರತಿಯೊಂದರಲ್ಲಿಯೂ ಕಂಡು ಬರುವ ಎಲ್ಲಮ್ಮನ ಪೌರಾಣಿಕ ವಿವರಣೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಆ ಬಳಿಕ ಅವುಗಳ ವಿವೇಚನೆ-ವಿಶ್ಲೇಷಣೆ ಮಾಡುವುದು ಸೂಕ್ತ. ಎಲ್ಲಮ್ಮನನ್ನು ಕುರಿತ ಪೌರಾಣಿಕ ಸಂಗತಿಗಳನ್ನು ವಿವರವಾಗಿ ತಿಳಿದುಕೊಳ್ಳುವ ಮೊದಲ ಹಂತದಲ್ಲಿಯೇ ಎದುರಾಗುವ ಪ್ರಶ್ನೆ: ‘ಎಲ್ಲಮ್ಮ’ ಮತ್ತು ‘ರೇಣುಕಾ’ ಹೆಸರುಗಳ ಸಮೀಕರಣ.

ಶಿಷ್ಟಪದ ಪುರಾಣಗಳಲ್ಲಿ ‘ರೇಣುಕಾ’ ಎನ್ನುವ ಹೆಸರು ಬರುತ್ತದೆಯೇ ಹೊರತು ಅಲ್ಲಿ ಎಲ್ಲಿಯೂ ರೇಣುಕೆಯೇ ‘ಎಲ್ಲಮ್ಮ’ ಎಂದು ಹೇಳಲಾಗಿಲ್ಲ.

ಸಧ್ಯ ಇಲ್ಲಿ ಉಕ್ತ ‘ರೇಣುಕಾದೇವಿ’ಯೇ ಎಲ್ಲಮ್ಮ ಎಂದು ಭಾವಿಸಿ ಅಲ್ಲಿಯ ಘಟನೆಗಳನ್ನು ನೋಡಬಹುದು.

ರೇಣುಕೆಯ ಉಲ್ಲೇಖ ದೊರೆಯುವ ಮೊದಲ ಹಂತದ ಪುರಾಣಗಳು: ವಾಯು ಪುರಾಣ, ಹರಿವಂಶ, ಭಾಗವತ ಮತ್ತು ಮಹಾಭಾರತ. ಎರಡನೆಯ ಹಂತದಲ್ಲಿ ಸ್ಕಾಂದ ಪುರಾಣ. ತ್ರಿಪುರಾರಹಸ್ಯ. ಮೂರನೆಯ ಹಂತದಲ್ಲಿ ಗುಣಭದ್ರ ಮಹಾ ಪುರಾಣದ ಉತ್ತರಭಾಗ. ಒಂದರಲ್ಲಿ ವಿಷ್ಣು ಪಾರಮ್ಯ; ಮತ್ತೊಂದರಲ್ಲಿ ಶಿವ-ಶಕ್ತಿ ಪಾರಮ್ಯ: ಮೂರನೆಯದರಲ್ಲಿ ಜೈನ ಧಾರ್ಮಿಕ ಸಂಗತಿಗಳು. ಈ ವಿಭಿನ್ನ ಸಂಗತಿಗಳ ಜಾಲದಿಂದ ‘ಎಲ್ಲಮ್ಮನನ್ನು ಬೇರ್ಪಡಿಸಿ ಗುರುತಿಸುವ ವಿನಮ್ರಯತ್ನ ಈ ಪ್ರಬಂಧದ ಗುರಿ.

ಪುರಾಣವನ್ನು ಕೇಳುವುದರಿಂದ ಭವ್ಯಾತ್ಮರಿಗೆ ನಿರ್ಬಾಧವಾಧ ಅಭ್ಯುದಯವುಳ್ಳ ‘ಮೋಕ್ಷಲಕ್ಷ್ಮೀ’ಯ ಸಮಾಗಮವಾಗುವುದು ಮುಕ್ತಿ ಪ್ರಾಪ್ತವಾಗುವುದು (ಗುಣಭದ್ರ ಮಹಾಪುರಾಣದ ಉತ್ತರಭಾಗ: ಪರ್ವ ೪೮, ಶ್ಲೋಕ ೭, ಪು. ೧ ಸಂ. ಶಾಂತಿರಾಜ ಶಾಸ್ತ್ರಿ ೧೯೮೧) ಎನ್ನುವ ಶಿಷ್ಟಪದ ಪುರಾಣ ಲಕ್ಷಣಗಳು ಎಲ್ಲಮ್ಮನನ್ನು ಕುರಿತ ಧಾರ್ಮಿಕ ಹಿನ್ನೆಲೆಯೊಂದನ್ನು ಬಿಟ್ಟರೆ-ಇನ್ನುಳಿದ ಹಾಡುಗಳ ವಿಶ್ಲೇಷಣೆಗೆ ನೆರವಾಗುವುದಿಲ್ಲ. ಇದಕ್ಕೆ ಕೆಲಮಟ್ಟಿಗೆ ದಿಕ್ಕು ತೋರುವುದು ಲೆವಿಸ್ಟ್ರಾಸ್‌ ಎನ್ನುವ ವಿದ್ವಾಂಸ ಪ್ರತಿಪಾದಿಸಿದ -‘ಸ್ಟ್ರಕಚರಾಲಿಸಮ್‌-’ ರಾಚನಿಕ ಪಂಥದ ಧೋರಣೆಗಳು.

ಈ ಪಂಥದ ಹಿನ್ನೆಲೆಯಲ್ಲಿ ಇಂಡೋ ಯುರೋಪಿಯನ್‌ ಪುರಾಣಗಳ ಅಧ್ಯಯನ ಮಾಡಿದ ದುಮೇಜಿಲ್‌ ಎನ್ನುವ ವಿದ್ವಾಂಸನ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಪುರಾಣ ದೇವೆತೆಗಳನ್ನು ಅವರ ‘ಕ್ರಿಯೆ’ ಅಥವಾ ‘ನಿಯೋಗ’ಗಳಿಂದ ಬೇರ್ಪಡಿಸಿ ಅವರಿಗೆ ಹೊರತಾದ ಇತರ ದೇವತೆಗಳನ್ನು ಸ್ವತಂತ್ರವಾಗಿ ವಿಶ್ಲೇಷಿಸುವ ಆತನ ‘ರಾಚನಿಕ ಪಂಥ’ ವಿಧಾನ ಒಂದು ಬಹುದೊಡ್ಡ ಕಾಣಿಕೆಯೆಂದು ಭಾವಿಸಲಾಗಿದೆ.

[1]

ಲಭ್ಯವಿದ್ದ ಪುರಾಣ ಸಾಮಗ್ರಿಗಳನ್ನು ರಾಚನಿಕ ಪಂಥ ಭಾಷಾವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸುತ್ತದೆ. ರಾಚನಿಕ ಪಂಥದ ಪ್ರತಿಪಾದಕ ಲೇವಿಸ್ಟ್ರಾಸ್‌ ವಿಭಿನ್ನ ಘಟಕಗಳಿಂದ ರಚನೆಗೊಂಡ ಭಾಷೆಯೊಂದರ ಸಂವಹನವೇ ಪುರಾಣ ಎನ್ನುತ್ತಾನೆ.[2]

ಆದುದರಿಂದ ಐತಿಹ್ಯಗಳ ವಿಕಸಿತರೂಪವಾದ ಪುರಾಣ ರಚನೆಯ ಅಂತರ್ಗತ ಘಟಕಗಳನ್ನು ಬಿಡಿಸಿದಾಗ, ಪಾಠಾಂತರಗಳ ಮೂಲಕ ಅವುಗಳಲ್ಲಿರುವ ಸಾಮ್ಯ ವೈರುಧ್ಯಗಳನ್ನು ಗುರುತಿಸುವುದು ಸುಲಭ. ಏಕೆಂದರೆ ಲೆವಿಸ್ಟ್ರಾಸ್‌ ಹೇಳುವಂತೆ ಪೌರಾಣಿಕ ಆಲೋಚನೆ ಯಾವಾಗಲೂ ವೈರುಧ್ಯಗಳ ಅರಿವಿನಿಂದ ಅವುಗಳ ಪ್ರಗತಿಪರ ಮಧ್ಯಸ್ಥಿಕೆಯತ್ತ ಕಾರ್ಯ ಮಾಡುತ್ತದೆ (ಅದೇ ಪು. ೧೭೫).

ಶಿಷ್ಟಪದ ಪುರಾಣ ಕಥೆಗಳನ್ನು ಪಾಠ ೧, ಪಾಠ ೨, ಪಾಠ ೩ ಎಂದು ಗುರುತಿಸಿ ಅವುಗಳ ಅಂತರ್ಗತ ಘಟಕಗಳನ್ನು ಒಡೆಯಲಾಗಿದೆ. ಬಳಿಕ ಒಂದನೆಯ ಪಾಠದ ವ್ಯತ್ಯಾಸಗಳನ್ನು ಅಕ್ಷರಗಳ ಮೂಲಕ ಪಾಠ ೨, ೩ ರಲ್ಲಿ ಸೂಚಿಸಲಾಗಿದೆ.

ಪಾಠ: (ಹರಿವಂಶ ೧-೨೭, ವಾಯು ಪುರಾಣ ೯೧, ಭಾಗವತ ೯-೧೫, ಮಹಾಭಾರತ ವನಪರ್ವ ೧೧೭, ಶಾಂತಿ ಪರ್ವ ೪೮, ಆದಿ ಪರ್ವ ೨-೬೫-೧೧೩. ರಾಮಾಯಣ ಬಾಲಕಾಂಡ ಸರ್ಗ ೭೪-೧೬ ಇವುಗಳಲ್ಲಿ ಉಕ್ತ).

ಆ: ರೇಣುಕರಾಜ. ಆತನಿಗೆ ಪ್ರಸೇನಜಿತೆ, ಸಂವೇಣಮುನಿ ಇತ್ಯಾದಿ ಹೆಸರು.

ಆ: ರೇಣುಕರಾಜನ ಮಗಳು ರೇಣುಕಾ. ಕಮಲದಲ್ಲಿ ಜನಿಸಿದವಳು (ಪ್ರಸೇನಜಿತ)ನ ಸಾಕುಮಗಳು. ಕಾಮಾಲಿ ಈಕೆಯ ಇನ್ನೊಂದು ಹೆಸರು.

ಇ: ಭ್ರಗುವಂಶದ ಜಮದಗ್ನಿ: ಕಟ್ಟುನಿಟ್ಟಿನ ವ್ರತಾಚರಣೆಗೆ ಹೆಸರಾದವನು.

ಈ: ಜಮದಗ್ನಿಯ ಜೊತೆ ರೇಣುಕೆಯ ಮದುವೆ.

ಉ: ಐದು ಮಕ್ಕಳು. ಕೊನೆಯವನು ಪರಶುರಾಮ.

ಊ: ರೇಣುಕಾ ನೀರು ತರಲು ಹೋದಾಗ-ಜಲಕ್ರೀಡೆಯಲ್ಲಿದ್ದ ದಂಪತಿಗಳನ್ನು ಕಂಡು ಅವಳ ಚಿತ್ತ ಚಾಂಚಲ್ಯ- ಮರಳಿ ಆಶ್ರಮಕ್ಕೆ ಬರಲು ವಿಲಂಬ. ವ್ಯಭಿಚಾರದ ಆರೋಪಕ್ಕೆ ಬೀಜ.

ಋ: ಕುಪಿತ ಜಮದಗ್ನಿ: ರೇಣುಕೆಯ ರುಂಡ ಚೆಂಡಾಡಲು ಮಕ್ಕಳಿಗೆ ಆಜ್ಞೆ. ಪರಶುರಾಮ ಆಜ್ಞೆಗೆ ತಲೆಬಾಗಿ ತಾಯಿಯ ರುಂಡ ಚೆಂಡಾಡುವುದು (ಇನ್ನುಳಿದ ತನ್ನ ಸಹೋದರರನ್ನು).

ೠ: ಮಗನ ಆಜ್ಞಾಪಾಲನೆಗೆ ಸುಪ್ರೀತ ಜಮದಗ್ನಿ: ಮಗನಿಗೆ ವರ ಕೊಡುವುದು. ಅದರ ಬಲದಿಂದ ಪರಶುರಾಮ ತಾಯಿ ಮತ್ತು ಸೋದರರನ್ನು ಜೀವಂತಗೊಳಿಸುವುದು.

ಎ: ಸೂರ್ಯವಂಶದ ಕೃತವೀರ್ಯನ ಮಗ ಸಹಸ್ರಬಾಹು ಕಾರ್ತವೀರ್ಯ.  ದತ್ತಾತ್ರೇಯನ ಆರಾಧಕ: ಆತನಿಂದ ವರ ಪಡೆದ ಮಹಾಶೂರ.

ಏ: ಕಾರ್ತವೀರ್ಯ ಸೈನ್ಯದೊಡನೆ ಬೇಟೆಗೆ ಹೊರಟು, ಜಮದಗ್ನಿಯ ಆಶ್ರಮಕ್ಕೆ ಬರುತ್ತಾನೆ.  ಬಂದವರಿಗೆಲ್ಲ ತಕ್ಷಣ ಕಾಮಧೇನುವಿನ ಕೃಪೆಯಿಂದ ಸುಖಭೋಜನ-ಸತ್ಕಾರ.

ಐ: ಕಾಮಧೇನುವಿನ ಮಹಿಮೆ ತಿಳಿದ ಕಾರ್ತವೀರ್ಯನಿಂದ ಅದನ್ನು ಕೊಂಡೊಯ್ಯುವ ಯತ್ನ: ಜಮದಗ್ನಿಯ ನಿರಾಕರಣೆ. ಕಾರ್ತವೀರ್ಯನಿಂದ ಜಮದಗ್ನಿಯ ಕೊಲೆ.

ಒ: ಇದನ್ನು ತಿಳಿದು ಕೆರಳಿದ ಪರಶುರಾಮನಿಂದ ಕಾರ್ತವೀರ್ಯನ ಕೊಲೆ. ಅವನ ರಾಜ್ಯ ನಿರ್ಮೂಲನ. ವಂಶ ನಿರ್ಮೂಲನ. ಪರಶುರಾಮ ಮಹಾವಿಷ್ಣುವಿನ ಆರನೆಯ ಅವತಾರ.

ಪಾಠ: (ಸ್ಕಾಂದ ಪುರಾಣ ಅ. ೬. ಅ. ೮ ನಾಗರಖಂಡ, ಆಮತ್ಯಖಂಡ. ತ್ರಿಪುರಾ ರಹಸ್ಯ, ಇತ್ಯಾದಿಗಳ ಉಕ್ತ).

ಆ-೨: ಕಾರ್ತವೀರ್ಯ ಕ್ಷತ್ರಿಯ ದಾನವನ ಅಹಂಕಾರ ಉಪಟಳ. ಅದಿತಿಯಲ್ಲಿ ದೇವತೆಗಳ ಮೊರೆ. ದಕ್ಷ ಪ್ರಜಾಪತಿಯ ಮಗಳು ಆದಿತಿ. ಎಲ್ಲ ದೇವತೆಗಳ ತಾಯಿ. ಅದಿತಿಯೇ ರೇಣುಕರಾಜನ ಪುತ್ರಕಾಮೇಷ್ಟಿ ಯಜ್ಞ ಕುಂಡದಲ್ಲಿ ‘ಅಯೋನಿಜೆ’ಯಾಗಿ ಮೂಡುತ್ತಾಳೆ. ಅವಳ ಹೆಸರು ಜಗದಂಬಾ: ಏಕವೀರಾ. ಅವಳೇ ರೇಣುಕೆ. ಪ್ರಾಪ್ತ ವಯಸ್ಕಳಾದಾಗ ಅಗಸ್ತ್ಯ ಮುನಿಗಳ ಸೂಚನೆಯಂತೆ ಸಿದ್ಧಾಚಲಕ್ಕೆ ರೇಣುಕರಾಜನ ಪಯಣ.

ಇ-೨: ಸಿದ್ಧಾಚಲದ ರುಚಿಕ ಮುನಿ ಸತ್ಯವತಿಯರ ಮಗ ಜಮದಗ್ನಿ.

ಉ-೨: ಶ್ರೀಮನ್ನಾರಾಯಣನ ಅವತಾರವೇ ಪರಶುರಾಮ-ಗಜಾನನನಿಂದ ಪರಶು ಪಡೆದವನು.

ಒ-೨: ಕಾರ್ತವೀರ್ಯ ಜಮದಗ್ನಿಯನ್ನು ಕೊಂದಾಗ ರೇಣುಕಾ ಇಪ್ಪತ್ತೊಂದು ಸಲ ಎದೆ ಎದೆ ಬಡಿದುಕೊಂಡು ಶೋಕಿಸಿದ್ದಕ್ಕಾಗಿ ಪರಶುರಾಮ ಅಷ್ಟು ಸಲ ಭೂಮಿಯನ್ನು ಸುತ್ತಿ ಕ್ಷತ್ರಿಯರ ಬೇಟೆಯಾಡಿ ಅವರ ನಿಮೂಲನ ಮಾಡುತ್ತಾನೆ. ಮಹಾಯಜ್ಞ ಮಾಡಿ ಅದರ ಮೂಲಕ ಗಳಿಸಿದ ರಾಜ್ಯವನ್ನು (ಭೂಮಿ) ಕಶ್ಯಪನಿಗೆ ದಾನ ಮಾಡುತ್ತಾನೆ.

ಪಾಠ: (ಜೈನ ಪುರಾಣದ ಕಥಾನಕ: ಕ್ರಿ.ಶ. ೮೯೭ರಲ್ಲಿ ರಚಿತವಾದ ಗುಣಭದ್ರನ ಉತ್ತರ ಪುರಾಣ: ಪರ್ವ ೬೫ ಶ್ಲೋ: ೫೧-೧೫೦).

ಅ-೩: ಕಾನ್ಯಕುಬ್ಜ್ದ ಅರಸನ ತೊಂಬತ್ತೊಂಬತ್ತು ಮಕ್ಕಳಲ್ಲಿ ಕೊನೆಯವಳೇ ರೇಣುಕೆ. ಈಕೆ ಮಣ್ಣಲ್ಲಿ ಆಡುತ್ತಿದ್ದುದರಿಂದ ಈಕೆಯನ್ನು ಈ ಹೆಸರಿನಿಂದ ಕರೆಯಲಾಯಿತು.

ಇ-೩: ಇಷ್ಟೌಕುವಂಶದ ಸಹಸ್ರಬಾಹು. ಆತನ ಚಿಕ್ಕಪ್ಪ ಶತಬಿಂದು. ಪಾರತ ದೇಶದ ಅರಸನ ತಂಗಿ ಶ್ರೀಮತಿಯ ಜೊತೆ ಶತಬಿಂದು ಮದುವೆ. ಶತಬಿಂದುವಿನ ಮಗ ಜಮದಗ್ನಿ. ಜಮದಗ್ನಿಗೆ ಬಾಲ್ಯದಲ್ಲಿ ಮಾತೃವಿಯೋಗ. ಪಂಚಾಗ್ನಿ ಮಧ್ಯೆ ತಪಸ್ಸು. ಅಪುತ್ರಸ್ಯ ಗತಿರ್ನಾಸ್ತಿ ಎಂದು ತಿಳಿದು ತಪಸ್ಸು ತೊರೆದು ಕಾನ್ಯಕುಬ್ಜಕ್ಕೆ ಕನ್ಯಾರ್ಥಿಯಾಗಿ ಬರುತ್ತಾನೆ.

ಈ-೩: ಮಣ್ಣಲ್ಲಿ ಆಡುತ್ತಿದ್ದ ಕಾನ್ಯಕುಬ್ಜದ ಅರಸನ ಕೊನೆಯ ಮಗಳನ್ನು ‘ರೇಣುಕಾ’ ಎಂದು ಹೆಸರಿಸಿ ಅವಳನ್ನು ವರಿಸುತ್ತಾನೆ.

ಉ-೩: ಇಬ್ಬರು ಮಕ್ಕಳು: ಇಂದ್ರರಾಮ: ಶ್ವೇತರಾಮ. ಇಂದ್ರರಾಮನೇ ಪರಶುರಾಮ. ಈತ ತನ್ನ ತಾಯಿಯ ಅಣ್ಣ ಅರಿಂಜಯ ಮುನಿಯಿಂದ ಕಾಮಧೇನು ಪಡೆಯುತ್ತಾನೆ.

ಉ-ಏ-೩ ಸಹಸ್ರಬಾಹು ತನ್ನ ಮಗ ಕೃತವೀರನ ಜೊತೆ ತನ್ನ ಸೋದರ ಜಮದಗ್ನಿಯ ಆಶ್ರಮಕ್ಕೆ ಬರುತ್ತಾನೆ. ತಕ್ಷಣ ಎಲ್ಲರಿಗೂ ಮೃಷ್ಟಾನ್ನ ಭೋಜನದ ಉಪಚಾರ. ಕೃತವೀರನಿಗೆ ತನ್ನ ಚಿಕ್ಕಮ್ಮ ರೇಣುಕೆಯ ಮೂಲಕ ಧೇನುವಿನ ಮಹಿಮೆ. ಅದರ ಗುಟ್ಟು ತಿಳಿಯುವುದು.

ಐ-೩: ಕೃತವೀರ ಚಿಕ್ಕಮ್ಮನ ಮಾತನ್ನೂ ಕೇಳದೆ ಜಮದಗ್ನಿಯನ್ನು ಕೊಂದು ಧೇನುವನ್ನು ಒಯ್ಯುವುದು. ಗೆಡ್ಡೆ ಗೆಣಸು ಸಂಗ್ರಹಿಸಲು ಹೋದ ಮಕ್ಕಳು ಮರಳಿ ವಿಷಯ ತಿಳಿದು ಕೆರಳುವುದು.

ಓ-೩: ಪರಶುರಾಮ (ಇಂದ್ರರಾಮ)ನಿಂದ ಸಹಸ್ರಬಾಹು ಮತ್ತು ಕೃತವೀರ್ಯನ ಕೊಲೆ. ಅವರ ಸರ್ವನಾಶ. ಗರ್ಭವತಿಯಾಗಿದ್ದ ಕೃತವೀರನ ಹೆಂಡತಿ ಚಿತ್ರಮತಿಗೆ ಸುಬಂಧು ಮುನಿಯ ಆಶ್ರಮದಲ್ಲಿ ರಕ್ಷೆ. ಚಿತ್ರಮತಿಯಲ್ಲಿ ಜನಿಸಿದ ಮಗ ಸುಭೌಮ. ಈತ ಜೈನ ಪುರಾಣೋಕ್ತ ಹನ್ನೆರಡು ಚಕ್ರವರ್ತಿಗಳಲ್ಲಿ ಒಬ್ಬ. ಈತನ ಮತ್ತೊಂದು ಹೆಸರು ಕಾರ್ತವೀರ್ಯ. ಶೈವ ವೈಷ್ಣವ ಪುರಾಣ ಕಥೆಗಳಿಗಿಂತ ಅಧಿಕವಾದ ಕೆಲವು ಘಟನೆಗಳಿಗೆ ಜೈನ ಧರ್ಮದ ಹಿನ್ನೆಲೆಯಿದೆ.

ಔ-: ರೇಣುಕೆಯ ಮಕ್ಕಳಿಂದ ಇಪ್ಪತ್ತೊಂದು ಬಾರಿ ಪೃಥ್ವಿಯ ಅಲೆದಾಟ ಕ್ಷತ್ರಿಯ ಬೇಟೆ. ಇಬ್ಬರೂ-ಪರಶುರಾಮ (ಇಂದ್ರರಾಮ) ಮತ್ತು ಶ್ವೇತರಾಮ ಸಾರ್ವಭೌಮರಾಗುತ್ತಾರೆ.  ಕೃತವೀರನ ಮಗ ಸುಭೌಮ ನಿಂದ (ಕಾರ್ತವೀರ್ಯ) ಪರಶುರಾಮನ ಕೊಲೆ.

ಮೇಲಿನ ಎಲ್ಲ ಘಟಕಗಳ ಪೃಥಕ್ಕರಣದಿಂದ ಕಾಣುವ ಮುಖ್ಯ ಸಂಗತಿಗಳು:

ಆ) ಎಲ್ಲಿಯೂ ‘ರೇಣುಕಾ’ನೇ ‘ಎಲ್ಲಮ್ಮ’ ಎಂದು ಹೇಳಲಾಗಿಲ್ಲ. ರೇಣುಕೆ ‘ಎಲ್ಲಮ್ಮ’ ನಾದಳೆ ಆ ಸಂಗತಿಯನ್ನು ಆರ್ಯ ಮೂಲ ಧರ್ಮಗಳಲ್ಲಿ ಹುಡುಕುವುದು ಅಸಮಂಜಸ. ಆದರೆ ರೇಣುಕೆಕ ‘ಜಗದಾಂಬೆ’ ಎಂಬ ಕಲ್ಪನೆ ಪುರಾಣೇತಿಹಾಸಗಳಲ್ಲಿ ದೊರಕುವುದಿಲ್ಲವೆ? ದೊರಕಿದರೆ ಇದೇ ಅರ್ಥದಲ್ಲಿ           ‘ಎಲ್ಲಮ್ಮ’ ‘ಎಲ್ಲವ್ವ’ ಎಂದು ಕರೆಯುವುದು ಅಸಮಂಜಸವಲ್ಲ(ಸರಿ).
(ಕಮಲ ಜನನ: ಅಯೋನಿಜೆ; ಕಾನ್ಯಕುಬ್ಜದ ಅರಸನ ಮಗಳು).

ಆ) ರೇಣುಕೆಯ ಮದುವೆಯಾದ ಜಮದಗ್ನಿ, ಒಮ್ಮೆ ಬ್ರಾಹ್ಮಣ, ಒಮ್ಮೆ ಶೈವ, ಮತ್ತೊಮ್ಮೆ ಜೈನ.

ಎ) ಇಡೀ ಕಥೆಗಳಲ್ಲಿ ಕಾಣುವ ಮುಖ್ಯ ವ್ಯಕ್ತಿ ಘಟನೆಗಳು: ರೇಣುಕೆ-ಜಮದಗ್ನಿ-ಪರಶುರಾಮ, ಕಾರ್ತವೀರ್ಯಾರ್ಜುನ. ರೇಣುಕೆಯ ಮೇಲೆ ವ್ಯಭಿಚಾರದ ಆರೋಪ. ಪರಶುರಾಮನಿಂದ ತಾಯಿ ಕೊಲೆ-ಮರುಹುಟ್ಟು. ಕಾಮಧೇನು-ಅದರ ಕಾರಣದಿಂದಾಗಿ ಕ್ಷತ್ರಿಯರ ಮೇಲೆ ಯುದ್ಧ-ಸಂಹಾರ.

ಈ) ಜೈನ ಪರಂಪರೆಯಂತೆ ಎಲ್ಲಮ್ಮ-ಕ್ಷತ್ರಿಯ-ಕೃತವೀರನ ಚಿಕ್ಕಮ್ಮ. ಕೃತವೀರನ ಮಗ ಸುಭೌಮ (ಕಾರ್ತವೀರ್ಯ)ವಿಗೆ ಅಜ್ಜಿ. ಈ ಸುಭೌಮನೇ ತನ್ನ ಚಿಕ್ಕಪ್ಪ ಪರಶುರಾಮನನ್ನು ಕೊಲ್ಲುತ್ತಾನೆ.

ಒಟ್ಟಾರೆ, ರೇಣುಕೆಯನ್ನು ಕುರಿತ ಈ ಕಥೆಯಲ್ಲಿ-ಮೂರೂ ಮತಗಳನ್ನು ಆಧರಿಸಿದ ಸಂಗತಿಗಳಲ್ಲಿ-ಪರಸ್ಪರ ಕೆಲವು ವೈರುಧ್ಯಗಳು ಸ್ಪಷ್ಟವಾಗಿವೆ.

ಇದೇ ಹಂತದಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ: ರೇಣುಕೆಯ ಹೆಸರಿನಲ್ಲಿಯೇ ಎಲ್ಲಿಯೂ ದೇವಾಲಯಗಳಿಲ್ಲದಿರುವುದು ಮತ್ತೂ ಎಲ್ಲಮ್ಮನ ಹೆಸರಿನ ಗುಡಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಆಂಧ್ರಪ್ರದೇಶದ ಗಡಿಭಾಗಗಳಲ್ಲೂ ಕಂಡುಬರುವುದು. ಇದಕ್ಕೆ ಕಾರಣ ಜನಪದ ಮತ್ತು ಶಿಷ್ಟಪದ ಪರಂಪರೆಗಳ ಸ್ವೀಕರಣ-ನಿರಾಕರಣಗಳು. ಬೃಹತ್‌ ಪರಂಪರೆಯ ಶಿಷ್ಟಪದ ಪುರಾಣ ಮತ್ತು ‘ಸಣ್ಣ ಪರಂಪರೆ’ಯ ಜನಪದ ಕಥನಗಳಲ್ಲಿ ಪರಸ್ಪರ ಆದಾನ ಪ್ರದಾನ ನಡೆಯುತ್ತಿದ್ದು ಶಿಷ್ಟಪರಂಪರೆ ಜನಪದ ಪರಂಪರೆಗಳ ಮೇಲೆ ತನ್ನ ಗಾಢ ಮತ್ತು ವ್ಯಾಪಕ ಪ್ರಭಾವ ಬೀರುತ್ತಿರುತ್ತದೆ. ಜನಪದ ವೃಂದಗಳ ‘ಸಣ್ಣ ಪರಂಪರೆ’ಯ ಸ್ಥಳೀಯ ‘ಸಾಂಸ್ಕೃತಿಕ ವೀರ’-ವ್ಯಕ್ತಿ. ಸಂಗತಿ ಘಟನೆಗಳ-ಮೇಲೆ ಶಿಷ್ಟಪದ ಪುರಾಣದ ಪ್ರಭಾವಿ ವ್ಯಕ್ತಿಗಳು ಹೇರಲ್ಪಡುತ್ತಾರೆ. ಜನಪದ ಐತಿಹ್ಯ, ಪೌರಾಣಿಕ ರೂಪದ ಚದುರಿದ ಕಥಾನಕಗಳ ‘ಸೀಳು’ಗಳಲ್ಲಿ ಶಿಷ್ಟಪದ ಪುರಾಣ ದೇವತೆಗಳು ತುಂಬಿ ನಿಲ್ಲುತ್ತಾರೆ. ಈ ಕ್ರಿಯೆಯನ್ನು ಜನಪದ ವೃಂದಗಳು ಅಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದಾಗ ಸ್ಥಳೀಯ-ಸಾಂಸ್ಕೃತಿಕ ವೀರರೆಂದು ಕರೆಯಬಹುದಾದ ದೇವತೆಗಳು ಉಚ್ಛಾಟನೆಗೊಂಡು ಬೃಹತ್‌ ಪರಂಪರೆಯ ದೇವತೆಗಳು ಸ್ಥಾಪಿತಗೊಳ್ಳುತ್ತಾರೆ ಅಥವಾ ಸಮೀಕರಣಗೊಳ್ಳುತ್ತಾರೆ.

ಎಲ್ಲಮ್ಮನ ಸಂಗತಿಯೂ ಅಷ್ಟೇ. ಶಿಷ್ಟಪದ ಪುರಾಣಗಳ ಆದಿತಿರೂಪದ ಆದಿಶಕ್ತಿ ‘ಏಕವೀರಾ’ ರೇಣುಕೆಯರು ಸ್ಥಳೀಯ ದೇವತೆ-ಶಕ್ತಿದೇವತೆಯೆಂದು ಪೂಜಿಸಲ್ಪಡುತ್ತಿರುವ ಎಲ್ಲಮ್ಮನ ಕಥೆಯ ‘ಸೀಳು’ಗಳಲ್ಲಿ ತುಮಬಿ ಆಕೆಯ ಜೊತೆಗೆ ಸಮೀಕರಣಗೊಂಡಿದ್ದಾರೆ. ಶಕ್ತಿದೇವತೆಯನ್ನೇ ಸ್ಥ ಳೀಯವಾಗಿ (ಸವದತ್ತಿಯಲ್ಲಿ) ‘ಎಲ್ಲಮ್ಮ’ ಎಂದು ಕರೆದಂತಾಯಿತು. ರೇಣುಕೆ ‘ಜಗದಾಂಬೆ’ ಎಂಬ ಕಲ್ಪನೆ ಇದೆ. (ಮುಂದೆ ನೋಡಿ). ಆದುದರಿಂದಲೇ ರೇಣುಕೆ ಎಲ್ಲಮ್ಮರ ಸಮೀಕರಣ (ಸಂ.) ಆದುದರಿಂದ ಪುರಾಣಗಳ ರೇಣುಕೆಯೇ ಬೇರೆ, ಏಳುಕೊಳ್ಳದದ ಎಲ್ಲಮ್ಮನೇ ಬೇರೆಯಾಗಿರುವುದು ಹೆಚ್ಚು ಸಂಭವನೀಯ. ಇದನ್ನು ಕುರಿತು ಇಷ್ಟೆಲ್ಲ ಚರ್ದ ಮಾಡಿದ ಮೇಲೂ ರೇಣುಕೆಯೇ ಎಲ್ಲಮ್ಮ ಎಂದು ಆಳವಾಗಿ ಬೇರೂರಿದ ನಂಬಿಕೆಗೆ ಇರುವ ಪ್ರಬಲ ಕಾರಣವೊಂದನ್ನು ಸ್ಪಷ್ಟಪಡಿಸಗೇಕು. ಅದೆಂದರೆ ಶಿಷ್ಟಪದದಿಂದ ಬಂದ ರೇಣುಕೆಯೇ ಎಲ್ಲಮ್ಮ ಎನ್ನುವ ಮಾತನ್ನು ಜನಪದರು ಸ್ವೀಕರಿಸಿ ಎರಡೂ ಹೆಸರನ್ನೂ ಸಮೀಕರಿಸಿರುವುದು. ಎಲ್ಲಮ್ಮ ದೇವತೆಯ ದೈವೀಕರಣಗೊಂಡ ವ್ಯಕ್ತಿಯ ಜೀವನದ ಕೆಲವು ಘಟನೆಗಳಲ್ಲಿ ಇದ್ದರಿಬಹುದಾದ ಸಾಮ್ಯಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡು ಹಾಡುತ್ತ ಬಂದಿರುವುದು.

ಸವದತ್ತಿ ಸುತ್ತಮುತ್ತಣ ಜೋಗಪ್ಪ ಜೋಗತಿಯರ ಜನಪದ ಹಾಡುಗಳಲ್ಲಿ ಕಾಣುವ ಎಲ್ಲಮ್ಮನ ಪುರಾಣ ಸದೃಶ ಕಥೆ ಹೀಗಿದೆ . ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಹಾಡುಗಳ ಕಥಾನಕಕಕ್‌ಎ ಜನಪದ ಪುರಾಣ ಎಂದು ಖಚಿತವಾಗಿ ಹೇಳು ಬಾರದು. ಏಕೆಂದರೆ ಇವು ಕೇವಲ ಐತಿಹ್ಯಗಳ ಮಟ್ಟಕ್ಕೇ ನಿಲ್ಲುತ್ತಿದ್ದು ಇವುಗಳಲ್ಲಿ ಹೇಳಲು ಬಾರದಷ್ಟು ಘಟನಾವಳಿಗಳು. ಶಿಷ್ಟಪದ ಪುರಾಣಗಳ ವ್ಯಕ್ತಿ ಸಂಗತಿಗಳು ಒಂದರೊಳಗೆ ಒಂದು ಹೆಣೆದುಕೊಂಡು ಬಿಟ್ಟಿವೆ. ಇವುಗಳಲ್ಲಿ ಗಮನಿಸುವ ಸಂಗತಿ ‘ಕೆಲವು ಜನಪ್ರಿಯ ಆಶಯಗಳು ಹೇಗೆ ಅಪ್ರಜ್ಞಾಪೂರ್ವಕವಾಗಿ ಇಂಥ ಚೌಕಟ್ಟಿನಲ್ಲಿ ಸೇರಿಕೊಂಡು ಮುಖ್ಯ ಕಥೆಯೊಡನೆ ಸಾವಯವ ಸಂಬಂಧವನ್ನೂ ಸಾಧಿಸಿಕೊಳ್ಳುತ್ತವೆ’ (ಜೀಶಂಪ,೧೩) ಎನ್ನುವುದು. ಆದುದರಿಂದ ಇಲ್ಲಿ ದೊರಕುವುದು ಪುರಾಣ ಸದೃಶ ಸಂಗತಿಗಳ ಹೊರತು ಒಂದಲು ಕ್ರಮೋಕ್ತ ಪುರಾಣ ಅಲ್ಲ. ಆದುದರಿಂದ ಜನಪದ ಹಾಡುಗಳ ಮೂಲಕ ಚದುರಿದ ರೂಪಗಳಲ್ಲಿ ಕಾಣುವ-ಪವಾಡ-ಕಥೆಗಳನ್ನು ಕಥೆ ಆ: ಆ.ಇ. ಈ ಪಾಠಗಳ ಮೂಲಕ ಗುರುತಿಸಿ: ಅವುಗಳ ಘಟಕಗಳನ್ನು ಒಡೆದು ಲಪಾಠಾಂತರಗಳನ್ನು ಸೂಚಿಸಲಾಗಿದೆ.

ಪಾಠದ ಘಟಕಗಳು:

೧) ಕಾಶ್ಮೀರದ ರೇಣುಕರಾಜನ ಮಗಳು ರೇಣುಕ-ಜಗದಂಬ ‘ಕರಿಯೆಲ್ಲ’ ಶಕ್ತಿಯ ಅವತಾರ.

೨) ಜಮದಗ್ನಿಯ ರೂಪಕ್ಕೆ ಮೆಚ್ಚಿ ಅವನನ್ನೆ ಮದುವೆಯಾಗಲು ಹಟ ಮಾಡುತ್ತಾಳೆ: ಬಳಗದವರು ಒಪ್ಪುವುದಿಲ್ಲ.

೩) ರೇಣುಕಾ, ಜಮದಗ್ನಿಯರ ಸಮುದ್ರಸ್ನಾನ ಬೇರೆ ಬೇರೆ ಅಂಚಿನಲ್ಲಿ. ರೇಣುಕೆಯ ಮೈಗಂಧ ತೇಲಿ ಬರುವುದು. ಜಮದಗ್ನಿಯ ಮೈಬೆವರು ರೇಣುಕೆಗೆ ತಗಲುವುದು. ಇಬ್ಬರೂ ಕೂಡಿಕೊಳ್ಳುತ್ತಾರೆ.

೪) ರೇಣುಕೆ ಗರ್ಭವತಿ. ವ್ರತಭಂಗದ ನೀರು ತರಲು ಹೋಗಿ ಮರಳಲು ವಿಲಂಬವಾಗುವುದರಿಂದ-ಆರೋಪ.

೫) ಜಮದಗ್ನಿ ರೇಣುಕೆಯನ್ನು ಹೊರದೂಡುತ್ತಾನೆ.

೬) ಪತಿಯಿಂದ ತಿರಸ್ಕೃತ ರೇಣುಕೆಗೆ ಜೋಗುಳ ಬಾವಿಯ ಸತ್ಯವ್ವ ಮಾತಂಗಿಯರ ಆಸರೆ.

೭) ಪರಶುರಾಮನ ಜನನ.

೮) ತಂದೆಯ ಹೆಸರು ತಿಳಿಯದ ಪರಶುರಾಮ ತಾಯಿಯ ನಡತೆಯನ್ನು ಶಂಕಿಸುವುದು. ‘ಹಾದರಗಿತ್ತಿ’ ಇತ್ಯಾದಿ ಬೈಗಳು. ತಾಯಿಯನ್ನು ಕಂಬಕ್ಕೆ ಎಳೆದು ಕಟ್ಟುವುದು.

೯) ಅದಕ್ಕೆ ರೇಣುಕಾ, ಹಾದಿಯ ಮಾತಂಗಿ ಜೋಗುಳ ಬಾವಿ ಸತ್ಯವ್ವನನ್ನು ಕೇಳೆಂದು ತಿಳಿಸುವುದು.

೧೦) ತಾಯಿಯನ್ನು ಬೈದು, ಪೀಡಿಸಿದ ರಾಮನ ಕಣ್ಣು ಹೋಗುತ್ತವೆ.

೧೧) ಎಲ್ಲಮ್ಮ ಮಗನ ಸ್ಥಿತಿ ನೋಡಿ ಮರುಗಿ, ಶಿವನ ಹತ್ತಿರ ಹೋಗಿ ಮಗನಿಗೆ ಕಣ್ಣು ಕರುಣಿಸುವಂತೆ ಯಾಚಿಸುತ್ತಾಳೆ.

೧೨) ರಾಮನಿಗೆ ಕಣ್ಣು ಬರುತ್ತವೆ. ಪಶ್ಚಾತ್ತಾಪ ಪಟ್ಟ ರಾಮ ತಾಯಿಯ ಪಾದದ ಮೇಲೆ ಬಿದ್ದು ಅತ್ತು ‘ಉಧೋ ಉಧೋ’ ಎಂದು ಹಾಡಿ ತಾಯಿಯ ಪೂಜೆ ಮಾಡುತ್ತಾನೆ.

ಪಾಠದ ಘಟಕಗಳು:

೫ಆ: ಹೆಚ್ಚಿನ ತಪ್ಸಸಿದ್ಧಿಗಾಗಿ ಜಮದಗ್ನಿ ಬಸಿರಿಯಾದ ಎಲ್ಲಮ್ಮನನ್ನು ಬಿಟ್ಟು ತಾನು ಹೋದ ವಿಷಯವನ್ನು ಇತರರಿಗೆ ತಿಳಿಸದಂತೆ ಕಟ್ಟಪ್ಪಣೆ ಮಾಡಿ ಗುಪ್ತಸ್ಥಳಕ್ಕೆ ಹೋಗುತ್ತಾನೆ. ಎಲ್ಲಮ್ಮ ಜಮದಗ್ನಿಯ ಪ್ರತಿಮೆ ಮಾಡಿಟ್ಟು ಪೂಜಿಸುತ್ತಿರುವುದು.

೮ಆ: ಗಂಡ ಸತ್ತನೆಂದು ಪರಶುರಾಮನಿಗೆ ಎಲ್ಲಮ್ಮ ಹೇಳುತ್ತಾಳೆ. ‘ರಂಡಿ’ಯಾಗುತ್ತಾಳೆ. ಜಮದಗ್ನಿ ಪುನಃ ತಾನೇ ಮರಳಿ ಬರುತ್ತಾನೆ. ಇವಳ ಅಣ್ಣ ಗೊಡಚಿಯ ವೀರರ್ಣಣ ‘ರಂಡಿ’ಯಾದ ತಂಗಿ ಎಲ್ಲಮ್ಮನಿಗೆ ಕುಂಕಲುಮ ಬಳೆ ಕಳಿಸುತ್ತಾನೆ. ಎಲ್ಲಮ್ಮ ಮತ್ತೆ ಮುತ್ತೈದೆಯಾಗುತ್ತಾಳೆ.

ಪಾಠದ ಘಟಕಗಳು:

೧-ಇ: ಎಲ್ಲಮ್ಮ ಏಳ್ಳೋವೆಯಿಂದ ತಾನೇ ಮೂಡಿ ನಿಂತಳು. ಜಗಜ್ಜನನಿ-ಗಿರಿರಾಜಮುನಿ ಅಥವಾ ಗಿರಿಜಾಮುನಿ ಜನ್‌ಕುಮ್‌ ದೇವಿಯರಿಗೆ ಮಗಳು-ಎಲ್ಲಮ್ಮ.

೨-ಇ: ಶೈವ ಪರಂಪರೆಯ ಜಮದಗ್ನಿ ಎಲ್ಲಮ್ಮನಿಗೆ-ನೀಳ್ಗೂದಲು-ಮೋಹಿತನಾಗಿ ತಾನೇ ಅವಳನ್ನು ಮದುವೆಯಾಗಬಯಸುತ್ತಾನೆ.

೩-ಇ: ಎಲ್ಲಮ್ಮನಿಟ್ಟ ಕೆಲವು ಶರತ್ತು. ಮದುವೆಗೆ ಒಪ್ಪಿಗೆ. ಜಮದಗ್ನಿಯ ತಲೆಯ ಮೇಳೆ ಇಟ್ಟ ಹಸ್ತದಿಂದ ಏಳು ವರ್ಷದ ಬಾಲಕನಾಗುತ್ತಾನೆ. ಮಾವನಿಂದ ಜಮದಗ್ನಿಯ ಕೋಪ ಶಮನ . ವಿವಾಹ. ಜಮದಗ್ನಿ ಎಲ್ಲಮ್ಮನನ್ನು ಪರೀಕ್ಷೆಗೆ ಒಳಪಡಿಸುವುದು. ಅವಳ ರುದ್ರ ಭಯಂಕರ ರೂಪ. ಅವರಿಗೆ ಜಮದಗ್ನಿ ಶರಣಾಗತನಾಗುವನು.

ಪಾಠದ ಘಟಕಗಳು:

೧-ಈ: ಉಗುರಗೊಳ್ಳದ ಶ್ರೀಮಂತ ಲಿಂಗವಂತ ರೈತನ ಮಗಳು-ಎಲ್ಲವ್ವ. ಅವಳಿಗೆ ತೊನ್ನು ರೋಗ.

೨-ಈ: ಯಾರೂ ಮದುವೆಯಾಗಲು ಒಪ್ಪುವುದಿಲ್ಲ . ತಂದೆಗೆ ದುಃಖ. ಅವನ ಕನಸಿನಲ್ಲಿ ಜೋಗಿಕೊಳ್ಳದ ಬಾವಿಯ ಎಕ್ಕಯ್ಯ ಜೋಗಯ್ಯ ಕಾಣಿಸಿಕೊಳ್ಳುವುದು. ಮೈಗೆ ಬೂದಿ ಹಚ್ಚಿಕೊಳ್ಳುವುದರಿಂದ ಎಲ್ಲಮ್ಮನ ರೋಗ ವಾಸಿಯಾಗುವ ಹೇಳಿಕೆ. ಎಲ್ಲಮ್ಮನ ಸೇವೆಯಿಂದ ಸುಪ್ರೀತರಾದ ಜೋಗಯ್ಯ ಸಿದ್ಧರ ಕರುಣೆ. ಎಲ್ಲಮ್ಮ ಪಾರ್ವತಿಯ ಅಂಶವೆಂದು ಗುರುತಿಸುವುದು-ಪಂಚಾಕ್ಷರಿ ಮಂತ್ರ ಬೋಧೆ. ಎಲ್ಲಮ್ಮ ‘ಮಾಯಕಾರ್ತಿ’; ಜಗ ಹೊತ್ತು ಕುಣಿಯುತ್ತ ಭಕ್ತರು ನಿನ್ನ ಸೇವೆ ಮಾಡಲಿ ಎಂದು ಆಶೀರ್ವಾದ.

ಈ ಎಲ್ಲ ಪವಾಡ ಸದೃಶ ಸಂಗತಿಗಳು ಜನಪದ ಕಥೆಯ ಅನೇಕ ರಾಚನಿಕ ಅಂಶಗಳನ್ನು ಮೈಗೂಡಿಸಿಕೊಂಡಿವೆ. ಜನಪದ ಕಥೆಯ ‘ಆಶಯ’ಗಳು, ಸ್ಥಳೀಯ ಸಾಂಸ್ಕೃತಿಕವೀರರ ಜೀವನದಲ್ಲಿ ತೊಡಗಿ ಕಾಲಾನಂತರ ಅಗೋಚರ ವಿಸ್ಮಯಕಾರಿ ಕಥಾನಕಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ‘ಆಶಯ’ಗಳಿಗೂ ಪುರಾಣದ ಪವಾಡಗಳಿಗೂ ಸಂಬಂಧ ಏರ್ಪಡುವುದು ಹೀಗೆ. ಇದರಿಂದ ಕಥಾನಕಗಳ ವೈರುಧ್ಯ ವಿವೇಚನೆಗೆ ಸುಲಭ ದಾರಿ ದೊರೆಯುತ್ತದೆ.

ಈಗ ಮೇಲಿನ ಸಂಗತಿಗಳಲ್ಲದೆ ಇನ್ನೂ ಹೆಚ್ಚಿನ ಕೆಲವು ಜನಪದ ಹಾಡುಗಳ ಘಟನೆಗಳನ್ನು ಗಮನಿಸೋಣ.

ಪಾಠದ ೧೨ನೆಯ ಅಂಕಿಯಿಂದ ಮುಂದಿನ ಕ್ರಮಸಂಖ್ಯೆ ೧೩, ೧೪ ಹೀಗೆ ಅವುಗಳನ್ನು ಸೂಚಿಸಲಾಗಿದೆ.

೧೩) ಎಲ್ಲಮ್ಮನ ಅಣ್ಣ-ಕಾರ್ತವೀರ್ಯ.

೧೪) ಜಮದಗ್ನಿಯ ಆಶ್ರಮಕ್ಕೆ ಬಂದು ಕಾಮಧೇನುವಿನ ಆಸೆಯಿಂದಾಗಿ. ಕಾರ್ತವೀರ್ಯ ಜಮದಗ್ನಿಯನ್ನು ಕೊಲ್ಲುತ್ತಾನೆ.

೧೫) ಬಸಿರಿ ಎಲ್ಲಮ್ಮನ ಹೆರಿಗೆಗಾಗಿ ಅವಳ ಅಣ್ಣ ಕಾರ್ತವೀರ್ಯನ  ಸೂಚನೆಯಂತೆ ಸೂಲಗಿತ್ತಿ ವೇಷದ ಗೂಢಚಾರ ಬರುತ್ತಾನೆ. ಆತ ಎಲ್ಲಮ್ಮನ ಹೊಟ್ಟೆಯಲ್ಲಿದ್ದ ಪರಶುರಾಮನನ್ನು ಕೊಲ್ಲುತ್ತಾನೆ.

೧೬) ತಂದೆಯ ಹೆಸರು ಹೇಳದ ತಾಯಿ ಎಲ್ಲಮ್ಮನ್ನು ಪರಶುರಾಮ ಕಡಿದು ಚೆಲ್ಲುತ್ತಾನೆ. ಕಡಿದಂತೆಲ್ಲ ಅವಳ ರುಂಡ ಮತ್ತೆ ಬೆಳೆಯುತ್ತದೆ. ಕೊನೆಗೆ ಆಕೆ ಮಗನಿಗೆ ಎಲ್ಲವನ್ನು ವಿವರಿಸಿ ಹೇಳುತ್ತಾಳೆ.

೧೭) ಪರಶುರಾಮ ಕಾರ್ತವೀರ್ಯನನ್ನು ಕೊಂಡು ಅವನ ಶಿರವನ್ನೇ ಚೌಡಿಕೆ ಮಾಡಿಕೊಳ್ಳುತ್ತಾನೆ.

೧೮) ಅಣ್ಣನನ್ನು ಹುಗಿದ ಸ್ಥಳದಲ್ಲಿಯೇ ಎಲ್ಲಮ್ಮ ಸ್ನಾನ ಮಾಡುವಂತೆ ಪರಶುರಾಮ ತಾಯಿಯನ್ನು ಒತ್ತಾಯಿಸುತ್ತಾನೆ.

೧೯) ಎಲ್ಲಮ್ಮ ಮಗನ ಕೈಗೆ ಸಿಗದೆ ಕಲ್ಯಾಣದ ಮಾದಿಗರ ಚೆನ್ನಪ್ಪಜ್ಜನ ‘ಬಾನಿ’ಯಲ್ಲಿ ಅಡಗುತ್ತಾಳೆ.

೨೦) ಅದನ್ನಲು ಗುರುತಿಸಿದ ರಾಮ ಅವಳನ್ನು ಹೊರಗೆಳೆದು ಕೊಲ್ಲುತ್ತಾನೆ. ಬಳಿಕ ಪಶ್ಚಾತ್ತಾಪ ಪಡುತ್ತಾನೆ.

೨೧) ತಾಯಿಯ ರುಂಡವನ್ನು ವಿಜಯನಗರಕ್ಕೆ ತಂದು ಪೂಜಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ.

ಈ ಕೆಲವು ಪರಸ್ಪರ ವಿರೋಧ ಸಂಗತಿಗಳಿಗೆ ಮೀರಿ ಮತ್ತೆ ಕೆಲವು ಹೀಗಿವೆ:

೨೨) ಬಂಜೆಯಾದ ಎಲ್ಲಮ್ಮ ಎಲ್ಲರ ತಿರಸ್ಕಾರಕ್ಕೆ ಒಳಗಾಗಿರುತ್ತಾಳೆ.

೨೩) ಅವಳಿಗೆ ಶಿವನ ಕೃಪೆಯಿಂದ ಸಂತಾನ ಪ್ರಾಪ್ತಿ.

೨೪) ಎಲ್ಲಮ್ಮ ನೀರು ತರುವಾಗ ಅವಳ ಚಿತ್ತ ಚಾಂಚಲ್ಯಕ್ಕೆ ಕಾರಣ-ನದಿಯಲ್ಲಿ ಆಡುತ್ತಿದ್ದ ಜೋಡಿ ಮೀನು.

೨೫) ಎಲ್ಲಮ್ಮನ ಬಾಣಂತನ ಮಾಡಿದವರು ಮಾತಂಗಿ ಸತ್ಯವ್ವ.

೨೬) ನಿರಾಶ್ರಿತಳಾದ ಎಲ್ಲಮ್ಮ ಮಗು ರಾಮನನ್ನು ‘ಹೊಟ್ಟೀಮ್ಯಾಲೆ’ ಕಟ್ಟಿಕೊಂಡು ಸಿದ್ಧರ (ಮುನ್ನೂರು ಸಿದ್ಧರು?) ಹತ್ತಿರ ದುಡಿದು ಉಪಜೀವನ ಮಾಡುವುದು.

೨೭) ಬಂಕಾಪುರದ ‘ಮಾದ್ಯಾ’ ಎಲ್ಲಮ್ಮನನ್ನು ‘ಮಂಚ’ಕ್ಕೆ ಕರೆದಾಗ ಈಕೆ ಅವನನ್ನು ಎಳೆದು ಜಡಿದು. ಸೀರಿ ಉಡಿಸಿ, ಬಳಿ ತೊಡಿಸಿ ಜೋಗತಿ ಮಾಡಿ ಕಳಿಸುತ್ತಾಳೆ.

೨೮) ತೊರಗಲ್ಲಿನವನಾಗಿರಬಹುದಾದ-ರುದ್ರ ಹೆಸರಿನವನಾಗಿರಬೇಕು. ಯಾಲಗಾರ ಸೆಟ್ಟಿಗೆ ಬಗೆ ಬಗೆ ಹುಣ್ಣು-ಎಲ್ಲಮ್ಮನಿಂದ ಅವನ ರೋಗ ನಿವಾರಣೆ.

ಎಲ್ಲಮ್ಮನ ಜೀವನದಲ್ಲಿ ತೊಡಗಿಕೊಂಡಿರುವ ಐತಿಹಾಸಿಕ ಸಂಗತಿಗಳು ಒಂದು ಪ್ರತ್ಯೇಕ ಅಧ್ಯಯನದ ವಿಷಯವಾದುದರಿಂದ ಅದನ್ನಿಲ್ಲಿ ಕೈಬಿಡಲಾಗಿದೆ.

(ವಿಷ್ಣು ಶಿವ ಪುರಾಣಗಳ ಕಾರ್ತವೀರ್ಯಾರ್ಜುನ, ಜೈನ ಪುರಾಣದ ‘ಕೃತವೀರ’ ಮತ್ತು ಕಾರ್ತವೀರ್ಯ ಬಳಿಕ ರಟ್ಟವಂಶದ ದೊರೆ ೯೬೦ರಲ್ಲಿ ಆಗಿ ಹೋದವನು. ಮೊದಲನೆಯ ಕಾರ್ತವೀರ್ಯ.

ಪುರಾಣದ ಸುವರ್ಣಾಕ್ಷಿ ದೇವಾಲಯ, ಇತಿಹಾಸದಲ್ಲಿ ದಾಖಲೆಗೊಂಡಿರುವ ಸುವರ್ಣಾಕ್ಷಿ-ದೇವತೀರ್ಥಗಳು-ಒರಗಲ್ಲಿನ ಕಾಕತೀರ್ಯ ಪ್ರತಾಪರುದ್ರ, ತೊರಗಲ್ಲಿನ ಮಾಲಗಾರ ಸೆಟ್ಟಿರುದ್ರ; ಕಲ್ಯಾಣದ ಮಾದರ ಚೆನ್ನಪ್ಪಜ್ಜ ಮತ್ತು ಜೋಗುಳ ಬಾವಿ ಸತ್ಯವ್ವ-ಮಾತಂಗಿ; ಶಾಕ್ತರ ಕೇಂದ್ರವಾಗಿದ್ದ ಸೊಗಲ ಪ್ರದೇಶದ ಎಕ್ಕಯ್ಯ ಜೋಗಯ್ಯ ಸಿದ್ಧರು ಮತ್ತು ಎಲ್ ಲಮ್ಮ ಇವಿಷ್ಟು ಐತಿಹಾಸಿಕ ಜಟಿಲ ಸಮಸ್ಯೆಗಳು).

ವೈರುಧ್ಯಸ್ವೀಕರಣಸ್ಥಿರೀಕರಣ:

ಪರಂಪರಾಗತ ಶಿಷ್ಟ ಪುರಾಣ ಮತ್ತು ಜನಪದ ಕಥಾನಕಗಳ ಪುರಾಣ ಸದೃಶ ಸಂಗತಿಗಳ  ಅನೇಕ ವೈರುಧ್ಯಗಳ ನಡುವೆಯೂ ಯಾವುದೋ ಒಂದು ಹಂತದಲ್ಲಿ ಒಂದರೊಳಗೊಂದು ಸೇರಲು ಮತ್ತು ಸಮೀಕರಣಗೊಳ್ಳಲು ಮತ್ತೊಂದು ಬೇರೆ ಕಾರಣವಿದೆ. ಅದು ವಾಸ್ತವ ಪಾತಳಿಯ ಮೇಲೆ ಬೆಳೆದು ಬಂದಿರುವಂಥದು.

ಪ್ರಾದಿಮ ಕಾಲದಿಂದ ಬೆಳೆದು ಬಂದ ಮಾನವ ಜನಾಂಗಗಳ ವಿವಿಧ ಘಟ್ಟಗಳಲ್ಲಿ ಎಲ್ಲಮ್ಮನಿಗೆ ಸಂಬಂಧಿಸಿದಂತೆ ತೊಡಗಿಕೊಳ್ಳುವ ಕುಲಗಳು, ಶೈವ, ಬ್ರಾಹ್ಮಣ, ಕ್ಷತ್ರಿಯ, ಲಿಂಗವಂತ ಮತ್ತು ಮಾದರು. ಎಲ್ಲಮ್ಮ ಒಮ್ಮೆ ಶೈವ ವಿರೋಧಿ, ಒಮ್ಮೆ ಕ್ಷತ್ರಿಯ ಕುಲದ ಕನ್ಯೆ, ಒಮ್ಮೆ ಶಕ್ತಿದೇವತೆ ಹೀಗೆ ಕೆಲವು ವೈರುಧ್ಯಗಳ ಮಧ್ಯೆ, ಎಲ್ಲಮ್ಮನ ಜನಪದ ಕಥಾನಕಗಳ ಬೆಳವಣಿಗೆ. ಈ ವೈರುಧ್ಯಗಳೇ ‘ರಾಚಾನಿಕ ಪಂಥ’ದಲ್ಲಿ ಹೇಳಲಾದ ಸ್ಣಾಚ್ಸ್ ಅಥವಾ ಕಂಡಿಗಳು.  ಇಂಥ ‘ಸೀಳು’ಗಳಿರುವ ಕಡೆ ಶಿಷ್ಟಪದ ಪರಂಪರೆ ಹೊಕ್ಕು ನಿಲ್ಲುತ್ತದೆ. ಮತ್ತು  ಮೇಲೆ ಹೇಳಿದ ವಿವಿಧ ಮತ ಪಂಥದ ವೃಂದಗಳು ಜೊತೆ ಜೊತೆಗೆ, ನೆರೆಹೊರೆಯವರಾಗಿ ಬಾಳುತ್ತ ಬಂದಂತೆಲ್ಲ ಸ್ಥಳೀಯ ‘ಎಲ್ಲಮ್ಮ’ ಬೃಹತ್‌ ಪರಂಪರೆಯ ‘ರೇಣುಕೆ’ಯ ಜೊಲತೆ ಸಮೀಕರಣಗೊಂಡದ್ದು ಅಥವಾ ‘ಎಲ್ಲಮ್ಮ’ ದೇವತೆಯ ಸ್ಥಾನವನ್ನು ‘ರೇಣುಕೆ’ ಆಕ್ರಮಿಸಿದ್ದು. ಜನಪದರು ಅನೇಕ ವೈರುಧ್ಯಗಳ ಮಧ್ಯೆಯೂ ಈ ಸಮೀಕರಣ, ಅಥವಾ ‘ಆಕ್ರಮಣ’ವನ್ನು ಸ್ವೀಕರಿಸಿದ್ದು ಏಕಕಾಲಕ್ಕೆ ತಮಾಷೆಯಾಗಿ ಕಂಡರೂ ವಾಸ್ತವ ಸತ್ಯವಾಗಿ ಪರಿಣಮಿಸಿದೆ.

ಇದರಂತೆಯೇ ತೊರಗಲ್ಲು ರುದ್ರ ಮತ್ತು ಬಂಕಾಪುರ ‘ಮಾದ್ಯಾ’ ಸೀಳುಗಳಲ್ಲಿ ಒರಗಲ್ಲು ಪ್ರತಾಪರುದ್ರ ಇತ್ಯಾದಿ ಕಥೆಗಳು ಧುಮುಕಿರುವುದನ್ನು ಗುರುತಿಸಬಹುದಾಗಿದೆ. ಎಕ್ಕಯ್ಯ ಜೋಗಯ್ಯ ಮತ್ತು ಎಲ್ಲಮ್ಮನಿಗೆ ಸಂಬಂಧಿಸಿದಂತೆ ಒಂದು ಮಾತು ಗಮನಾರ್ಹವಾಗಿದೆ. ಶಾಕ್ತಪಂಥ ಪ್ರಬಲವಗಿದ್ದು ಸಿದ್ಧಾಚಲ, ಸಿದ್ಧರಕೊಳ್ಳ ಎಂದು ಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಪ್ರಸರಣಗೊಂಡ ನಾಥ ಸಂಪ್ರದಾಯ ಸಿದ್ಧರು ನೆಲೆಗೊಂಡಿದ್ದ ಕಾಲ ಎಲ್ಲಮ್ಮನ ಚರಿತ್ರೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ವಿಶೇಷತಃ ಏಕನಾಥ ಜೋಗಿನಾಥ’ರ ಕಾಲ. ಕುಷ್ಟರೋಗ ಪೀಡಿತಳಾದ ಎಲ್ಲಮ್ಮನಿಗೆ ಆಶ್ರಯ ಕೊಟ್ಟ ಇವರು ಅವಲ ರೋಗವನ್ನು ಕಳೆದ ‘ಪುಣ್ಯಾತ್ಮರು’ . ಅವರ ಮಹಿಮೆ ತಿಳಿದ ಎಲ್ಲಮ್ಮ ‘ಎಕ್ಕಯ್ಯ ಜೋಗಯ್ಯ’ ಎಂದು ಹಾಡುತ್ತ ಅವರ ಕೃಪೆಗೆ ಪಾತ್ರಳಾಗಿರಬೇಕು; ಅವರಿಂದ ಅನೇಕ ‘ಸಿದ್ಧಿ’ ‘ಶಕ್ತಿ’ಗಳನ್ನು ಸಂಪಾದಿಸಿರಬೇಕು. ಕಾಲಾನಂತರದಲ್ಲಿ ಎಲ್ಲಮ್ಮ ಈ ಪ್ರದೇಶದಲ್ಲಿ ಮೊದಲೇ ಇದ್ದಿರಬಹುದಾದ ಶಕ್ತಿ ದೇವತೆಯ ದೇವಾಲಯವೊಂದರಲ್ಲಿ ಸಮೀಕರಣಗೊಂಡಿರಬೇಕು. ಸಂಸ್ಕೃತೀಕರಣಗೊಂಡಿರಬೇಕು.

ರೇಣುಕಾ ಯಕ್ಷಿಣ-ಯಕ್ಷಿಣಿಯಮ್ಮ ಎಕ್ಕಲಮ್ಮ-ಎಕ್ಲಮ್ಮ ಲೆಂದು ‘ಎಲ್ಲಮ್ಮ’ ಶಬ್ದರೂಪವನ್ನು ಹಿಗ್ಗಾ ಮುಗ್ಗಾ ಜಗ್ಗಲಾಗಿದೆ.

ಯಕ್ಷಿಣಿ ಜಕ್ಕಿಣಿ ‘ಜತ್ತಕ್ಕ’ ಈ ಕ್ರಮ ಬಿಟ್ಟು ಯಕ್ಷಣಿ ಯಕ್ಷಿಣಮ್ಮ-ಯಕ್ಕಲಮ್ಮ ಎಂದು ಮುಂತಾಗಿ ಮುಂದುವರೆದರೆ ‘ಜಕ್ಕಿಣಿ’ ಮಧ್ಯದಲ್ಲಿಯೇ ಕಳಚಿಕೊಂಡು ಹೋಗುತ್ತದೆ. ಆದುದರಿಂದ ನಾರಾಯಣಗೌಡರು ಸಿದ್ಧಿಸಿದ ‘ಯಕ್ಕಲಮ್ಮ’ ‘ಎಲ್ಲಮ್ಮ’ ಶಬ್ದ ತಾಳಮೇಳವನ್ನು ಕಳೆದುಕೊಳ್ಳುತ್ತದೆ: ಊಹೆಯಾಗಿ ಉಳಿಯುತ್ತದೆ.

‘ಯಮ್ಮ ಎಲ್ಲಾರ ಬಾಯಲ್ಲು
‘ಎಲ್ಲಿ’ ಶಬುದವಮ್ಮಾ ರಾಮರಾಮ
ಎಲ್ಲಮ್ಮ ರಾಮರಾಮ ಎಂದೋ
‘ಕರಿಯೆಲ್ಲ’ ಎಂದೋ ಜನಪದ ಹಾಡುಗಳಲ್ಲಿ ಹೇಳಲಾಗಿದೆ.

ಎಲ್ಲಮ್ಮ ಅನ್ಯಭಾಷೆಯಿಂಧ ಸಾಧಿಸಿದ ಶಬ್ದ ಅಲ್ಲ; ಕನ್ನಡ ಜನಪದ ನುಡಿಯ ಸಹಜ ನಿಷ್ಪನ್ನ ಶಬ್ದ. ಕಲ್ಲಮ್ಮ. ಮಲ್ಲಮ್ಮ, ಚೆನ್ನಮ್ಮ ಇತ್ಯಾದಿಗಳ ಹಾಗೆ.

ಎಲ್ಲಮ್ಮನಿಗೆ ಒಬ್ಬ ಅಣ್ಣ.ಆಗ ‘ಗೊಡಚಿಯ ವೀರಣ್ಣ’ ಎಂದು ಹೇಳಲಾಗಿದೆ. ಶಕ್ತಿದೇವತೆ ಎಲ್ಲಮ್ಮನ ಹಾಗೆಯೇ ವ್ಯಾಪ್ತಿಯನ್ನು ಪಡೆದ ಇನ್ನೊಂದು ಆದರೆ ಪುರುಷ ದೇವತಾ ಶಕ್ತಿ ವೀರಭದ್ರ. ವೀರಣ್ಣ ಒಬ್ಬ ಸ್ಥಳೀಯ ಸಾಂಸ್ಕೃತಿಕ ವೀರನಾಗಿದ್ದು ಶಿಷ್ಟಪದ ಶೈವ. ಪುರಾಣದ ವೀರಭದ್ರನಲ್ಲಿ ಸಮೀಕರಣಗೊಂಡದ್ದಕ್ಕೆ ಆಧಾರಗಳಿಲ್ಲ. ಗೊಡಚಿ. ಸವದತ್ತಿಗೇನೂ ಅಷ್ಟು ದೂರದ ಪ್ರದೇಶ ಅಲ್ಲ. ಈರಣ್ಣ ಎನ್ನುವ ಒಬ್ಬ ಅಣ್ಣ ಎಲ್ಲಮ್ಮನಿಗೆ ಇದ್ದಿರಬಹುದಾದರೆ ಆರ್ಯ-ದ್ರಾವಿಡ ಮಿಶ್ರ ಸಂಸ್ಕೃತಿಯ ಸಂದರ್ಭದ ಎಲ್ಲಮ್ಮನ ಸಂಘರ್ಷಮಯ ಬದುಕಿನಲ್ಲಿ ಈತ ಪಾಲ್ಗೊಂಡಿರಬಹುದೇ? ‘ಈರಣ್ಣ’ನ ಸ್ಥಳವನ್ನು ಪುರಣಾಗಳ ಕಾರ್ತವೀರ್ಯ ಆಕ್ರಮಿಸಿಕೊಂಡನೇ? ಎಲ್ಲ ಸಂದೇಹಾಸ್ಪದವಾಗಿಯೇ ಉಳಿಯುತ್ತವೆ.

ಇಷ್ಟಿದ್ದರೂ ಎಲ್ಲಮ್ಮನ ಒಂದು ಸ್ಥೂಲ ಜೀವನದ ಚಿತ್ರವನ್ನು ಹೀಗೆ ರೇಖಿಸಬಹುದು. ಇದು ಅತಿ ದುರ್ಬಲವಾಗಿ ಕಾಣಬಹುದು. ಜೊತೆಗೆ ಅನೇಕ ಪ್ರಶ್ನೆಗಳನ್ನು ಧುತ್ತೆಂದು ಚೆಲ್ಲಬಹುದು. ಆದರೆ ಪ್ರಥಮ ಹಂತದ ಅನ್ವೇಷಣೆಗೆ ಕುತೂಹಲ ಕೆರಳಿಸಬಹುದು.

ಅ) ಸೊಗಲ ಪ್ರದೇಶದ ಊರೊಂದರ ಉಗುರಗೊಳ್ಳ . . . . .? ಬ್ರಾಹ್ಮಣೇತರ ಕುಲಗುಂಪಿನಲ್ಲಿ ಎಲ್ಲಮ್ಮ ಜನಿಸಿದಳು. ಅವಳು ಚೆಲುವೆ. ಬಾಲ್ಯದಿಂದಲೇ ರೋಗಪೀಡಿತಳು.

ಅ) ಈ ಕ್ಷೇತ್ರದ ಶಕ್ತಿದೇವತೆಯ ಭಕ್ತರಾಗಿದ್ದ ಆಕೆಯ ತಂದೆ ತಾಯಿಗಳು ದೇವತೆಯ ಸೇವೆಗೆ ತಮ್ಮ ಮಗಳನ್ನು ತಂದು ಇಟ್ಟರು. ಅಲ್ಲಿಯ ಎಕ್ಕಯ್ಯ ಜೋಗಯ್ಯಗಳು ಈ ಬಾಲಿಕೆಯ ಮೇಲೆ ಕೃಪೆದೋರಿ ಗಿಡಮೂಲಿಕೆ ಇತ್ಯಾದಿಗಳ ಮೂಲಕ ರೋಗ ಕಳೆದರು.

ಇ) ಕೆಲಕಾಲದ ಬಳಿಕ ಇದೇ ಪ್ರದೇಶದ ಕ್ಷೇತ್ರದಲ್ಲಿ ಅಧ್ಯಯನಕ್ಕಾಗಿ ಇತರ ಕಡೆಯಿಂದ ಬಂದ ಒಬ್ಬ ಉಚ್ಚವರ್ಣದ-ಬ್ರಾಹ್ಮಣ-ವ್ಯಕ್ತಿಯಿಂದ ಆಕರ್ಷಿತಳಾದಳು. ಅವನೂ ಇವಳಿಂದ ಆಕರ್ಷಿತಳಾದನು. ಇಬ್ಬರ ಮದುವೆಯಾಯಿತು.

ಈ) ಕೆಲವು ವರ್ಷಗಳ ಬಳಿಕ ಪುನಃ ಕುಷ್ಟರೋಗ ಎಲ್ಲಮ್ಮನಲ್ಲಿ ಕಾಣಿಸಿಕೊಂಡಿತು. ಆಗ ಗಂಡನಿಂದ ತಿರಸ್ಕೃತಳಾದ ಇವಳ ಮೇಲೆ ವ್ಯಭಿಚಾರದ ಆರೋಪವೂ ಬಂದಿತು. ಆಗ ಇವಳು ಗರ್ಭಿಣಿ.

ಉ) ಎಲ್ಲರ ತಿರಸ್ಕಾರಕ್ಕೆ ಒಳಗಾದ ಎಲ್ಲಮ್ಮನಿಗೆ ಆಶ್ರಯ ಕೊಟ್ಟವರು ಸತ್ಯವ್ವ ಮತ್ತು ಮಾತಂಗಿ. ಎಲ್ಲಮ್ಮನ ಗಂಡ ಬಿಟ್ಟು ಪತ್ತೆಯಿಲ್ಲದಂತೆ ಹೋಗಿರುತ್ತಾನೆ.

ಊ) ಮಗ ಹುಟ್ಟುತ್ತಾನೆ. ಅವನ ಹೆಸರು ರಾಮ (?)  ದೊಡ್ಡವನಾದ ಮೇಲೆ ತಂದೆಯ ಹೆಸರಿಗಾಗಿ ತಾಯಿಯನ್ನು ಪೀಡಿಸುತ್ತಾನೆ. ದೂರ ತಪಸ್ಸಿಗೆ ಇತ್ಯಾದಿ ಹೋಗಿದ್ದಾನೆಂದು ತಿಳಿಸಿದರೂ ರಾಮ ನಂಬುವುದಿಲ್ಲ.

ಋ) ಅಕಸ್ಮಾತ್‌ ಬಂದ ಎಲ್ಲಮ್ಮನ ಗಂಡ ಅವಳನ್ನು ತಿರಸ್ಕಾರದಿಂದ ಕಾಣುತ್ತಾನೆ. ಅವಳ ‘ಅಪರಾಧ’ಕ್ಕಾಗಿ ಅವಳನ್ನು ಕೊಲ್ಲಲು ಮಗ ರಾಮನಿಗೆ ಆಜ್ಞಾಪಿಸಿ ಮತ್ತೆ ಹೋಗುತ್ತಾನೆ.

ೠ) ಸತ್ಯಕ್ಕೆ ಮಾತಂಗಿಯರಿಂದ ತಾಯಿಯ ಪಾವಿತ್ಯ್ರ ಅರಿತ ರಾಮ ತಾಯಿಯನ್ನು ಕೊಲ್ಲುವುದಿಲ್ಲ;. ಮತ್ತೆ ಸಿದ್ಧರ ಸೇವೆ ಕೈಕೊಂಡು ಕೆಲವು ಸಿದ್ಧಿಗಳನ್ನು ಪಡೆಯುತ್ತಾಳೆ. ಮಹಿಮಾಶಾಲಿಯಾಗಿ ಜನರ ಗೌರವಾದರಗಳಿಗೆ ಪಾತ್ರಳಾಗುತ್ತಾಳೆ. ಜನ ಇವಳನ್ನು ದೇವಾಂಶ ಸಂಭೂತಳೆಂದೇ ಭಾವಿಸುತ್ತಾರೆ. ದೀನದಲಿತರಿಗೆ ನಿಮ್ನ ವರ್ಗದವರಿಗೆ ಈಕೆ ಆಶ್ರಯ ನೀಡುತ್ತಾಳೆ. ಅವಳ ಪ್ರಭಾವ ವ್ಯಾಪಕವಾಗುತ್ತದೆ. ಜನಪದ ವೃಂದಗಳಲ್ಲಿ ‘ತಾಯಿ’ ‘ಅಮ್ಮ’ ಎಲ್ಲರ’ ಅಮ್ಮ’ ಎಲ್ಲರ ಅಮ್ಮ>ಎಲ್ಲಮ್ಮ ಎಂಬ ಈ ನಿಷ್ಪತ್ತಿ ‘ಎಲ್ಲೆಯ ಅಮ್ಮ’ನಿಗಿಂತ ಹೆಚ್ಚು ಸಾಧು , ಅರ್ಥಪೂರ್ಣ ಹಾಗೂ ಸಂಭವನೀಯ ಎಂದು ಇಲ್ಲಿ ಒತ್ತಿ ಹೇಳ ಬಯಸುತ್ತೇನೆ (ಸಂ) ‘ಮಾಕಾಯರ್ತಿ’ ಇತ್ಯಾದಿ ಭಾವನೆಗಳು ವಿವಿಧ ವರ್ಗದ ಜನ ಈಕೆಯ ಭಕ್ತರಾಗುತ್ತಾರೆ. ದೇವತೆಯ ಸೇವೆ ಕೈಕೊಂಡ ಎಲ್ಲಮ್ಮ ಬೇರೆ ಬೇರೆ ಊರುಗಳಿಗೆ ಹೋದಾಗ ತನ್ನನ್ನು ಕಾಮುಕ ದೃಷ್ಟಿಯಿಂದ ಕಂಡವರ ಸೊಕ್ಕು ಮುರಿಯುತ್ತಾಳೆ. ಕೆಲವರ ರೋಗರುಜಿನ ಕಳೆಯುತ್ತಾಳೆ. ತನ್ನ ಜೀವಿತ ಕಾಲದಲ್ಲಿಯೇ ‘ಏಳುಕೊಳ್ಳದೆಲ್ಲಮ್ಮ’ನಾಗಿ ಮನ್ನಣೆ ಪಡೆಯುತ್ತಾಳೆ. ‘ಎಲ್ಲಮ್ಮ ದೇವತೆ’ ಎನ್ನುವ ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆ ಬೆಳೆದುವು. ಈ ಹಂತದಲ್ಲಿ ಆಗಲೇ ರೂಢಿಯಲ್ಲಿದ್ದ ಪಾತ್ರದವರೂ, ನಿರ್ಗತಿಕ ದೇವದಾಸಿಯರೂ ಬಂದು ಈಕೆಯ ಆರಾಧನೆಯಲ್ಲಿ ತೊಡಗಿದರು. ಕುಣಿದರು-ಹಾಡಿದರು. ಜೋಗಪ್ಪ ಜೋಗತಿಯರ ಪರಂಪರೆ ತೀವ್ರಗತಿಯಲ್ಲಿ ಬೆಳೆಯಿತು. ಎಲ್ಲಮ್ಮ ಕಾಲಾನಂತರದಲ್ಲಿ ಎಲ್ಲಮ್ಮ ವಾಸವಗಿದ್ದ ಶಕ್ತಿದೇವತೆಯ ಈ ಕ್ಷೇತ್ರ ಎಲ್ಲಮ್ಮ ದೇವತೆಯ ಕ್ಷೇತ್ರವಾಯಿತು. ನೂರು ವರುಷಗಳ ಬಳಿಕ ದಂತ ಕಥೆ, ಐತಿಹ್ಯ-ಸುಮಾರು ೫೦೦ ವರ್ಷಗಳ ಬಳಿಕ ಪುರಾಣ ಪವಾಡಗಳು ಬಂದು ಈಕೆಯ ಚರಿತ್ರೆಯ ಸಾದೃಶ್ಯ ಸಂಗತಿಗಳ ಮೇಲೆ ತಳವೂರಿದವು. ಎಲ್ಲಮ್ಮ-ರೇಣುಕಾ ಎರಡೂ ಹೆಸರು ಸಮಸಮವಾಗಿ ರೂಢಿಯಲ್ಲಿ ಹರಡಿದುವು.

ಒಟ್ಟಾರೆ, ಮಾತೃಪೂಜೆಯ ಶಕ್ತಿ ದೇವತೆಯ ಪರಿಕಲ್ಪನೆ, ಪರಂಪರೆಗಳು ಎಲ್ಲಮ್ಮ ಕ್ಷೇತ್ರದ ಸಂಸ್ಥೀಕರಣದಲ್ಲಿ ಪಾತ್ರವಹಿಸಿದ ಬಗೆ, ಮಿಶ್ರ ಸಂಸ್ಕೃತಿಗಳ ಸಂಘರ್ಷ, ಸ್ವರೂಪ ಲಭ್ಯಸಾಮಗ್ರಿಯಲ್ಲಿ ದೊರೆಯುವ ಅನೇಕ ವೈರುಧ್ಯಗಳು-ಸಾಂಸ್ಕೃತಿಕ ದಾಳಿ, ನಿರಾಕರಣೆ, ಸ್ವೀಕರಣ, ಸ್ಥಿರೀಕರಣದಿಂದ ವಿವಿಧ ಹಂತಗಳು-ಹೀಗೆ ವಿವಿಧ ಆಯಾಮಗಳನ್ನು ಧ್ರುವೀಕರಿಸುವ ತಲಸ್ಪರ್ಶಿಯಾದ ಅನ್ವೇಷಣೆ-ಸಂಶೋಧನೆಗಳು ಇನ್ನು ಮುಂದೆ ನಡೆಯಬೇಕಾಗಿರುವ ಕಾರ್ಯ. 

ಸಾಹಿತ್ಯ ಋಣ:

೧.         Lane, Michael (Ed), Structuralism, 1970.

೨.       ಜೀಶಂಪ(ಡಾ), ಕರುಣೆ ಕಣ್ಣು ತೆರೆಯೆ: ಚೌಡಿಕೆ ಸಂಪ್ರದಾಯದ ಹಾಡುಗಳು ಮೈಸೂರು.

೩.       ಗೌಡ, ನಾರಾಯಣ: ಚೌಡಿಕೆ ಕಾವ್ಯ, ಮೈಸೂರು.

* * *[1]      It is perhaps his greatest contribution that he has seperated the gods from their functions adn shown that the latter can be analysed independentley of the former.

-Michael Lane (Ed), p.173

[2]      ….. a myth is a communication in a language composed of units. Ibid p,295.