ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ.

ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು.

[1] ಇದರರ್ಥ ಪಠಿಸಬಹುದಾದದ್ದು, ಎಂದು”.[2] ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.[3] “ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ.

“ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ್ತದೆಂದು ಅಪೇಕ್ಷೆ ಪಡುವುದು ಮಾತ್ರ ತಪ್ಪು. ಹೆಚ್ಚಿನ ಸಂದರ್ಭಗಳಲ್ಲಿ ಐತಿಹ್ಯದಲ್ಲಿ ಚರಿತ್ರೆ ಎಳ್ಳಷ್ಟೂ ಇರದೇ ಇರಲೂ ಬಹುದು. ಆದರೆ ಐತಿಹ್ಯ ಚರಿತ್ರೆಯ ವೇಷವನ್ನು ಮಾತ್ರ ತಪ್ಪದೇ ಧರಿಸುತ್ತದೆ.  ಅಷ್ಟೇ ಅಲ್ಲ, ಅದು ಅದರ ಪ್ರಧಾನ ಲಕ್ಷಣಗಳಲ್ಲಿ ಒಂದು.

ಅನೇಕ ವೇಳೆ ಐತಿಹ್ಯಕ್ಕೂ, ಪುರಾಣಕ್ಕೂ ಹೋಲಿಕೆಯಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಐತಿಹ್ಯ ಮತ್ತು ಪುರಾಣಗಳ ನಡುವಿನ ಅಂತರ ತಿಳಿಯುವುದು ಕಷ್ಟದ್ದಾಗುತ್ತದೆಂದು ಜಾನಪದ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ಜನತೆ ಕೂಡ ಪುರಾಣವನ್ನು ಅದು ಚರಿತ್ರೆಯಲ್ಲ ಎಂದು ತಿಳಿದಿರುತ್ತದೆ. ಆದರೆ ಐತಿಹ್ಯದ ಬಗೆಗೆ ಜನ ಸಾಮಾನ್ಯರಲ್ಲಿ ಈ ಧೋರಣೆ ಕಂಡು ಬರುವುದಿಲ್ಲ. ಆದ್ದರಿಂದ ಪುರಾಣ ಮತ್ತು ಐತಿಹ್ಯಗಳಲ್ಲಿ ಇದೊಂದು ಪ್ರಮುಖ ವ್ಯತ್ಯಾಸವೆನ್ನಬಹುದು. ಮೇಲಾಗಿ ಪುರಾಣಗಳ ದೀರ್ಘತೆ ಐತಿಹ್ಯಗಳಲ್ಲಿರುವುದಿಲ್ಲ.

ಅನೇಕ ವೇಳೆ ನಂಬಿಕೆಗಳು ಐತಿಹ್ಯಗಳ ಸೃಷ್ಟಿಗೆ ಕಾರಣವಾಗಬಹುದು. ಎಲ್ಲಮ್ಮ ಸಿದ್ಧರನ್ನು ನಿಗ್ರಹಿಸಿದಳು, ಎಂದು ಹೇಳಲಾಗುವ ಐತಿಹ್ಯದ ಹುಟ್ಟಿಗೆ ಇಂಥ ನಂಬಿಕೆಯೊಂದು ಕಾರಣವಾಗಿದ್ದಂತೆ ತೋರುತ್ತದೆ. ಈ ವಿಷಯದ ಹೆಚ್ಚಿನ ಚರ್ಚೆಯನ್ನು ಮುಂದೆ ಕಾಣಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಂಬಿಕೆ ತೀರ ಚಿಕ್ಕದಾದ ಘಟಕ. ಐತಿಹ್ಯ ನಂಬಿಕೆಯಷ್ಟು ಚಿಕ್ಕದಾಗಿರುವುದಿಲ್ಲ. ಅದೇ ರೀತಿ ಪುರಾಣದ ದೀರ್ಘತೆಯೂ ಐತಿಹ್ಯಕ್ಕಿರುವುದಿಲ್ಲವೆಂಬುದು ಸ್ಪಷ್ಟ.

ಇನ್ನು ಸಾಹಿತ್ಯಕ್ಕೂ ಐತಿಹ್ಯಕ್ಕೂ ತೀರ ಘನಿಷ್ಟವಾದ ಸಂಬಂಧವಿದೆ. ನಮ್ಮಲ್ಲಿರುವ ಶರಣರ-ದಾಸರ ಚರಿತ್ರೆಗಳಲ್ಲಿನ ಹೆಚ್ಚಿನ ಅಂಶ ಐತಿಹ್ಯವಾಗಿದೆ. ಇತಿಹಾಸ ಕಾವ್ಯಗಳೆಂದು ತಿಳಿಯಲಾಗುವ ಕುಮಾರರಾಮನ ಸಾಂಗತ್ಯಗಳು, ಕೆಳದಿ ನೃಪವಿಜಯ, ಚಿಕ್ಕದೇವರಾಯ ವಂಶಾವಳಿ ಮುಂತಾದ ಕೃತಿಗಳಲ್ಲಿ ಐತಿಹ್ಯದ ಅಂಶ ಗಮನಾರ್ಹ ಪ್ರಮಾಣದಲ್ಲಿ ಸೇರಿಕೊಂಡಿರುವುದನ್ನು ನಾವು ಕಾಣಬಹುದು.

ಐತಿಹ್ಯ ಹೆಚ್ಚಿನ ಸಂದರ್ಭಗಳಲ್ಲಿ ಒಂದು ಚಿಕ್ಕ ಕಥಾನಕವಾಗಿರುತ್ತದೆ. ನಂಬಿಕೆಗಳು, ಧಾರ್ಮಿಕ ಅಂಶಗಳು. ಆಚರಣೆಗಳು, ವ್ಯಕ್ತಿಗಳು, ಸ್ಥಳೀಯ ನೈಸರ್ಗಿಕ ವೈಚಿತ್ಯ್ರಗಳು, ಚಾರಿತ್ರಿಕ ಘಟನೆಗಳು ಮುಂತಾದವು ಐತಿಹ್ಯ ಸೃಷ್ಟಿಗೆ ಮೂಲ ಪರಿಕರಗಳನ್ನು ಒದಗಿಸಬಹುದು. ಉದಾಹರಣೆಗೆ ಸವದತ್ತಿಯ ಸಮೀಪದ ನವಿಲುತೀರ್ಥದ ಬಗೆಗಿನ ಐತಿಹ್ಯವನ್ನು ನೋಡಬಹುದು. ಈ ಭಾಗದಲ್ಲಿ ‘ಒಡಕು ಹೊಳೆ’ ಎಂದು ಕರೆಯುವ ಪ್ರದೇಶದಲ್ಲಿ ಮಲಪ್ರಭಾ ನದಿ ಮುನವಳ್ಳಿಯ ಮೇಲ್ಗಡೆಯ ಗುಡ್ಡವನ್ನು ಸೀಳಿಕೊಂಡು ಎತ್ತರದಿಂದ ಆಳಕ್ಕೆ ಧುಮುಕುತ್ತದೆ. ಗುಡ್ಡದ ಮುಂಭಾಗದಲ್ಲಿ ನದಿಯ ಎರಡೂ ಬದಿಗೆ ಗುಡ್ಡದ ಮೇಲೆ ಎರಡು ಹೋಳು ಬಂಡೆಗಳಿವೆ. ಇವುಗಳನ್ನು ಕುರಿತಂತೆ ಈ ಭಾಗದಲ್ಲಿ ಬಹು ಪ್ರಸಿದ್ಧವಾದ ಐತಿಹ್ಯವೊಂದು ಪ್ರಚಲಿತವಾಗಿದೆ. ಮಲಪೂರಿ-ಮಲ್ಲವ್ವ ಗಟ್ಟದಲ್ಲಿ ಹುಟ್ಟಿ, ರಭಸದಿಂದ ಹರಿಯುತ್ತ ಪೂರ್ವಾಭಿಮುಖವಾಗಿ ಬಂದಳಂತೆ. ಅವಳು ಈ ಪ್ರದೇಶದ ಬಳಿಗೆ ಬಂದಾಗ ಅವಳ ಪ್ರವಾಹಕ್ಕೆ ಎದುರಾಗಿ ಗುಡ್ಡ ಅಡ್ಡವಾಗಿ ಹತ್ತಿತು. ಆದ್ದರಿಂದ ಅವಳು ದಕ್ಷಿಣಕ್ಕೆ ತಿರುಗಿ ಬೆಳವಲದ ಕಡೆಗೆ ಹೊರಟಳು. ಆಗ ಗುಡ್ಡದ ಮೇಲೆ ಆಡುತ್ತಿದ್ದ ನವಿಲೊಂದು ಅವಳನ್ನು ಕಂಡು “ಬೆಟ್ಟಕಂಜಿ ಬೆಳವಲಾ ಸೇರತಾಳ ಮಲ್ಲಿ” ಎಂದು ಅಣಕವಾಡಿತು. ಅದನ್ನು ಕೇಳಿ ಕುಪಿತಳಾದ ಮಲ್ಲವ್ವ ಪುನಃ ತನ್ನ ಪ್ರವಾಹದ ದಿಕ್ಕನ್ನು ಬದಲಿಸಿ ಬಂದು ನವಿಲು ನಿಂತಿದ್ದ ಭಾಗದಲ್ಲಿಯೇ ಧುಮ್ಮಿಕ್ಕಿ ಹರಿದಳು. ಅವಳ ರಭಸಕ್ಕೆ ಗುಡ್ಡ ಸೀಳಿ ಇಬ್ಭಾಗವಾಗಿ ದಾರಿ ಕೊಟ್ಟಿತು. ಜೊತೆಗೆ ಅವಳನ್ನು ಅಣಕಿಸಿದ್ದ ನವಿಲು ಅವಳ ಕೋಪಕ್ಕೆ ತುತ್ತಾಗಬೇಕಾಯಿತು. ಗುಡ್ಡದ ಮೇಲೆ ಕೇಕೆ ಹಾಕಿ ಕುಣಿಯುತ್ತಿದ್ದ ನವಿಲನ್ನು ಮಲ್ಲವ್ವ ಸೀಳಿ ಎರಡು ತುಂಡಾಗಿಸಿ ಆಚೀಚೆ ಎಸೆದಳು. ಅವೆರಡು ತುಂಡುಗಳು ಈಗ ಮೇಲೆ ಹೇಳಿದ ಕಲ್ಲುಗಳಾಗಿ ಗುಡ್ಡದ ಎರಡೂ ಬದಿಗೆ ಬಿದ್ದುಕೊಂಡವು. ಎಂತಲೇ ನದಿಯ ಆ ಪ್ರದೇಶಕ್ಕೆ “ನವಿಲುತೀರ್ಥ” ಎಂದೇ ಹೆಸರು ಬಂತು.

ಇದೇ ರೀತಿ ಮೇಲೆ ಹೇಳಿದ ಇತರ ಸಂಗತಿಗಳೂ ಐತಿಹ್ಯ ಸೃಷ್ಟಿಗೆ ಕಾರಣವಾಗಬಹುದು. ಇರಲಿ, ನಾವು ಇಲ್ಲಿ ಎಲ್ಲಮ್ಮನನ್ನು ಕುರಿತ ಮುಖ್ಯವಾದ ಐತಿಹ್ಯಗಳನ್ನು ಈಗ ನೋಡಬಹುದು. ಎಲ್ಲಮ್ಮನ ಐತಿಹ್ಯಗಳ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಪೌರಾಣಿಕ ಅಂಶಗಳೂ, ನಂಬಿಕೆಗಳೂ ಅಡಕಗೊಳ್ಳಬೇಕಾದುದು ಅನಿವಾರ್ಯ.

ಒಟ್ಟಿನಲ್ಲಿ ಐತಿಹ್ಯಗಳ ಮೇಲೆ ನಮ್ಮ ಗಮನವನ್ನು ಪ್ರಧಾನವಾಗಿ ಕೇಂದ್ರೀಕರಿಸಿ ಇಲ್ಲಿ ಚರ್ಚಿಸಲಾಗುವುದು.

ಮೂಲ:

ಎಲ್ಲಮ್ಮನ ಮೂಲವನ್ನು ಕುರಿತಂತೆ ಹಲವು ಐತಿಹ್ಯಗಳು ನಂಬಿಕೆಗಳು ಪ್ರಚಲಿತವಾಗಿವೆ. ಅವುಗಳಲ್ಲಿ ಪ್ರಧಾನವಾದುವು ಎರಡು. ಒಂದರ ಪ್ರಕಾರ ಅವಳು ಉತ್ತರ ದೇಶದಿಂದ ಕರ್ನಾಟಕಕ್ಕೆ ಬಂದವಳೆಂದು ತಿಳಿಯುತ್ತದೆ. ಅವಳು ಕಾಶ್ಮೀರ ದೇಶದವಳು; ರೇಣುಕರಾಜನ ಮಗಳು; ಜಮದಗ್ನಿಯನ್ನು ಲಗ್ನವಾಗಿದ್ದಳೆಂಬುದು ಅದರಿಂದ ವ್ಯಕ್ತವಾಗುವ ವಿಷಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಪುರಾಣಗಳೂ, ಜಾನಪದ ಕಥೆಗಳೂ ಸಾಕಷ್ಟು ಪ್ರಚಲಿತವಾಗಿವೆ. ಎಂದರೆ ಈ ಐತಿಹ್ಯಕ್ಕೆ ಸಾಕಷ್ಟು ಪ್ರಸಾರವಿದೆಯೆಂದು ಹೇಳಬೇಕು. ಆದರೆ ಇದಕ್ಕೆ ವಿರುದ್ಧವಾಗಿ ಅವಳು -ಉಗರಗೊಳ್ಳದವಳೇ ಆದ ಹೆಣ್ಣುಮಗಳು ಎಂದು ಒಂದು ಐತಿಹ್ಯವಿದೆ.[4] ಮನೆಯಿಂದ ಪರಿತ್ಯಕ್ತಳಾದ ಅವಳು ರೋಗಿಯಾಗಿ ಅಡ್ಡಾಡಿ ಕೊನೆಗೆ ಅದರಿಂದ ಅಂತೂ ಇಂತೂ ಮುಕ್ತಳಾದಳೆಂದು ಹೇಳಲಾಗುವ ಐತಿಹ್ಯವೂ ಅಲ್ಲಲ್ಲಿ ಕೇಳಿಬರುತ್ತದೆ.

ಇನ್ನೊಂದು ನಂಬಿಕೆಯ ಪ್ರಕಾರ ಅವಳು ಬೇವಿನಮರದಡಿಯ ಹುತ್ತದ ಕ್ವಾವೆಯಲ್ಲಿ ವಾಸವಾಗಿದ್ದಳೆಂದು ತಿಳಿಯುತ್ತದೆ.[5] ಇದನ್ನು ಐತಿಹ್ಯವೆಂದು ಸ್ವೀಕರಿಸುವುದು ಕಷ್ಟ. ಇಂಥ  ನಂಬಿಕೆ ಎಲ್ಲಮ್ಮನ ಬಗ್ಗೆ ಮಾತ್ರವಿರದೆ ಇನ್ನೂ ಅನೇಕ ದೇವರುಗಳ ಬಗೆಗೆ ಇರುವುದನ್ನು ಕಾಣಬಹುದು. ಉದಾಹರಣಾರ್ಥ ತಿರುಪತಿಯ ವೆಂಕಟರಮಣ, ಮೈಲಾರದ ಮೈಲಾರಲಿಂಗಪ್ಪ ಮುಂತಾದ ದೇವತೆಗಳ ಬಗ್ಗೆಯೂ, ರಾಮಾಯಣವನ್ನು ಬರೆದ ವಾಲ್ಮೀಕಿ ಮುಂತಾದ ವೈದಿಕ ಪರಂಪರೆಯ ವ್ಯಕ್ತಿಗಳ ಬಗೆಗೂ ಈ ನಂಬಿಕೆ ಇರುವುದನ್ನು ಇಲ್ಲಿ ಉದಾಹರಿಸಬಹುದು. ಆದ್ದರಿಂದ ಇದರ ಮೂಲ ಯಾವುದೆಂದು ನಿರ್ಧರಿಸಿ ಹೇಳುವುದು ಕಷ್ಟವೇ. ಇತಿಹಾಸ ಪೂರ್ವದ ಕಾಡಿನ ಸಂಸ್ಕೃತಿಯ ಪಳೆಯುಳಿಕೆ ಇದಾಗಿರುವಂತೆ ಕಾಣುತ್ತದೆ. ಒಟ್ಟಿನಲ್ಲಿ ಇದು ವಲಸೆ ಬಂದ ಐತಿಹ್ಯ ಅಥವಾ ನಂಬಿಕೆ ಎಂದು ಹೇಳಬಹುದು.

ಲಗ್ನ:

ಎಲ್ಲಮ್ಮ ಲಗ್ನವಾಗಿದ್ದಳೆಂಬ ಸಂಗತಿ ಪುರಾಣ ಹಾಗೂ ಜಾನಪದ ಹಾಡುಗಳಲ್ಲಿ ಉಲ್ಲೇಖಗೊಂಡು ಬಹು ಪ್ರಸಿದ್ಧವಾಗಿದೆ. ಜಮದಗ್ನಿಯಿಂದ ಅವಳು ಐದು ಜನ ಮಕ್ಕಳನ್ನು ಕೂಡ ಪಡೆದಂತೆ ಪೌರಾಣಿಕ ಕಥೆಗಳಿವೆ. ಅದರಂತೆ ಕಾರ್ತವೀರ್ಯನಿಂದ ಜಮದಗ್ನಿಯ ಕೊಲೆಯಾಯಿತೆಂದೂ. ಅದಕ್ಕಾಗಿ ಅವಳು ವಿಧವೆಯಾದಳೆಂದೂ ತಿಳುವಳಿಕೆಯಿದೆ. ಇದೇ ನಿಮಿತ್ತ ಸವದತ್ತಿಯ ದೇವಸ್ಥಾನದಲ್ಲಿ, ಹೊಸ್ತಿಲ  ಹುಣ್ಣಿವೆಯನ್ನು ‘ರಂಡೆ ಹುಣ್ಣಿವೆ’ಯೆಂದೂ, ತರುವಾಯದ ‘ಬನದ ಹುಣ್ಣಿವೆ’ಯನ್ನು ‘ಮುತ್ತೈದೆ ಹುಣ್ಣಿವೆ’ಯೆಂದೂ ಆಚರಿಸುವುದು ವಾಡಿಕೆಯಾಗಿದೆ. ಮೊದಲಿನ ಹುಣ್ಣಿವೆಯಂದು ದೇವಿಯ ಕುಂಕುಮ. ಮಂಗಳಸೂತ್ರಗಳ ವಿಸರ್ಜನೆ ನಡೆದು ಅಂದು ಗುಡ್ಡಕ್ಕೆ ಬಂದ ಜೋಗತಿಯರು ತಮ್ಮ ಕೈಬಳೆಗಳನ್ನು ಒಡೆದುಕೊಳ್ಳುವರು. ಅದೇ ರೀತಿ ಬನದ ಹುಣ್ಣಿವೆಗೆ ದೇವಿಗೆ ಪುನಃ ಮಂಗಳಸೂತ್ರ ಧಾರಣೆ ನಡೆದು ಜೋಗತಿಯರು ಬಳೆ ಧರಿಸುವ ಕಾರ್ಯಕ್ರಮ ನೆರವೇರುವುದು. ಈ ವಿಧಿ ಕ್ರಿಯೆ (rituals) ಗಳನ್ನು ನೋಡಿದರೆ ಎಲ್ಲಮ್ಮ ಲಗ್ನವಾದದ್ದು ನಿಜವೆಂದು ಹೇಳಬೇಕಾಗುತ್ತದೆ. ಇದರ ಸಮೀಪದಲ್ಲಿ ನಿಲ್ಲುವ ಇನ್ನೊಂದು ಐತಿಹ್ಯ. ಕೋಲಾರದ ಕೋಲಾರಮ್ಮ ಅಥವಾ ರೇಣುಕೆಯ ಬಗೆಗೂ ಇದೆ. ಕೋಲಾರಮ್ಮ ತನ್ನ ಗಂಡ ಸತ್ತದ್ದರಿಂದ ಅವಳು ಸತಿ ಹೋದಳೆಂದೂ ಅಲ್ಲಿನ ಜನರ ನಂಬಿಕೆಯಾಗಿದೆ.[6] ಎಂದರೆ ಎಲ್ಲಮ್ಮ ಒಬ್ಬ ಮಹಾಸತಿ ಎಂದು ಹೇಳಬೇಕಾಗುತತದೆ. ಆದರೆ ಈ ಐತಿಹ್ಯಕ್ಕೆ ಹೆಚ್ಚಿನ ಬೆಂಬಲ ಕಂಡು ಬರುವುದಿಲ್ಲ. ಅವಳ ಲಗ್ನವಾಗಿತ್ತೆಂಬ ಅಂಶಕ್ಕೆ ಮಾತ್ರ ಇದರಿಂದ ಪುಷ್ಠಿ ದೊರೆಯುತ್ತದೆ. ಚಂದ್ರಗುತಿ ೨ ಯಲ್ಲಿಯೂ ಒಂದು ರೇಣುಕಾ ದೇವಸ್ಥಾನವಿದೆ. ಅಲ್ಲಿ ದೇವಿಯನ್ನು ರೇಣುಕೆ ಎಲ್ಲಮ್ಮ ಇತ್ಯಾದಿಯಾಗಿ ಕರೆಯುವುದರ ಜೊತೆಗೆ ಕನ್ನಮ್ಮ ಎಂದೂ ಹೆಸರಿಸಲಾಗುತ್ತದೆ. ‘ಕನ್ನಮ್ಮ ಎಂದರೆ ಕನ್ನೆ+ಅಮ್ಮ ‘ಕನ್ನಮ್ಮ’ ಎಂದು ಅರ್ಥ. ಕನ್ನೆಯೆಂದರೆ ಲಗ್ನವಾಗದೇ ಇರುವವಳು ಎಂಬುದು ಸ್ಪಷ್ಟ. ರೇಣುಕೆಯನ್ನು ಕನ್ಯೆಯೆಂದು ಭಾವಿಸುವುದಾದರೆ ಅವಳು ಲಗ್ನವಾದದ್ದು ಅಸಂಭವವಾಗುತ್ತದೆ. ದೇವಸ್ಥಾನದಲ್ಲಿ ದವನದ ಹುಣ್ಣಿವೆಯನ್ನು ಮುತ್ತೈದೆ ಹುಣ್ಣಿವೆಯೆಂದು ಆಚರಿಸುವುದಾಗಿ ತಿಳಿದು ಬರುತ್ತದೆ. ಹಾಗಾದರೆ ಸವದತ್ತಿಯಲ್ಲಿ ನಡೆಯುವ ರಂಡೆ-ಹುಣ್ಣಿವೆ ಮತ್ತು ಮುತ್ತೈದೆ ಹುಣ್ಣಿವೆಗಳ ಆಚರಣೆಗೆ ಏನು ಅರ್ಥ? ವಿವರಿಸುವುದು ಕಷ್ಟ.

ಇದಕ್ಕೆ ದೇವದಾಸಿಯರ ಜೀವನ ವಿಧಾನಗಳನ್ನೂ, ನಂಬಿಕೆಗಳನ್ನೂ ಆಳವಾಗಿ ಅಧ್ಯಯನ ಮಾಡುವುದು ಅವಶ್ಯವೆನಿಸುತ್ತದೆ. ಈ ಎರಡೂ ಹುಣ್ಣಿಮೆಯ ಆಚರಣೆಗಳಿಗೆ ಅವುಗಳಲ್ಲಿ ಉತ್ತರ ದೊರೆಯಬಹುದೋ ಏನೋ?

ಗೊಂದಲಿಗರು ಹೇಳುವ ಕಥೆಯೊಂದರಂತೆ -ಓರುಗಲ್ಲಿನ ರಾಜನು ರೇಣುಕೆಯನ್ನು ಲಗ್ನವಾಗ ಬಯಸಿದನೆಂದು ತಿಳಿದು ಬರುತ್ತದೆ. ರೇಣುಕೆ, ಮಹಾಮಾಯೆ ಆದಿಮಾತೆಯಾದುದರಿಂದ ಅವಳು ಆ ರಾಜನನ್ನೇ ಮಣಿಸಿ ತನ್ನ ದಾಸನನ್ನಾಗಿ ಮಾಡಿಕೊಂಡಳೆಂತಲೂ ಅವನು ಪಡ್ಡಲಿಗೆ ಹಿಡಿದು ಜೋಗಪ್ಪನಾದನೆಂತಲೂ ಅದರಲ್ಲಿ ವರ್ಣನೆಗಳಿವೆ.[7] ಈ ಕಥೆಯಂತೆಯೂ ಎಲ್ಲಮ್ಮ ಲಗ್ನವಾಗಿರುವುದಿಲ್ಲ.

ಪರಶುರಾಮಎಲ್ಲವ್ವ:

ಪುರಾಣಗಳ ಪ್ರಕಾರ ಈತ ರೇಣುಕೆಯ ಐದು ಜನ ಮಕ್ಕಳಲ್ಲಿ ಒಬ್ಬ. ಉಳಿದ ನಾಲ್ಕು ಜನರು ತಂದೆ ಆಜ್ಞೆ ಮಾಡಿದಾಗಲೂ ತಾಯಿಯ ಕೊಲೆಗೆ ಹಿಂದೆಗೆಯಲು, ಈತ ಮುಂದಾಗಿ ತಾಯಿಯ ತಲೆ ಕತ್ತರಿಸಿದನೆಂದು ಹೇಳಲಾಗುತ್ತದೆ. ಅದೇ ರೀತಿ ಕಾರ್ತವೀರ್ಯನನ್ನು ಕೊಂದುದು, ಕ್ಷತ್ರಿಯ ವಂಶವನ್ನು ನಿರ್ಮೂಲ ಮಾಡಿದ್ದು, ತಂದೆಯ ಆಶೀರ್ವಾದದಿಂದ ಪುನಃ ತಾಯಿಯನ್ನು ಬದುಕಿಸಿದ್ದು-ಮುಂತಾದ ಸಂಗತಿಗಳ ಉಲ್ಲೇಖ ಪುರಾಣಗಳಲ್ಲಿಯೂ, ಜಾನಪದ ಹಾಡುಗಳಲ್ಲಿಯೂ ಕಂಡು ಬರುತ್ತದೆ. ಇವೆಲ್ಲ ಪುರಾಣದ ವ್ಯಾಪ್ತಿಗೆ ಸೇರುವ ಅಂಶಗಳು. ಆದರೆ ಮತ್ತೊಂದು ಜನಪದ ಹಾಡಿನಂತೆ-ಪರಶುರಾಮನನ್ನು ಎಲ್ಲಮ್ಮ ಪವಾಡದ ರೀತಿಯಲ್ಲಿ ಹೆತ್ತಳೆಂದು ತಿಳಿದು ಬರುತ್ತದೆ. ಆದ್ದರಿಂದ ತಾಯಿಯ ಶೀಲವನ್ನು ಶಂಕಿಸಿದ ಪರಶುರಾಮ ತಾಯಿಯ ಕೊಲೆ ಮಾಡಿದನೆಂಬ ನಂಬಿಕೆ ಬಹು ಮಹತ್ತರವಾಗಿದೆ. ಆದರೆ ಆಚರಣೆಗಳನ್ನು ನೋಡಿದರೆ ಈತನು ‘ಕ್ಷೇತ್ರಪಾಲಕ ದೇವತೆ’ ಎನ್ನಬೇಕಾಗುತ್ತದೆ. ಗೊಂದಲಿಗರು ತಮ್ಮ ಗೊಂದಲದ ಕೊನೆಯಲ್ಲಿ ಈ ಪರಶುರಾಮನ ಪೂಜೆಯನ್ನು ತಪ್ಪದೇ ಕೈಕೊಳ್ಳುವರು. ಅದೇ ರೀತಿ ಎಲ್ಲಮ್ಮನ ಗುಡ್ಡಕ್ಕೆ ಹೋಗಿ. ತಮ್ಮೂರಿಗೆ ತಿರುಗಿ ಬಂದ ಭಕ್ತರು ಪರಶುರಾಮನನ್ನು ಕಳುಹಿಸುವ ವಿಧಿ ಕ್ರಿಯೆಯನ್ನು ತಪ್ಪದೇ ಆಚರಿಸುವರು. ಹೀಗೆ ಆಚರಿಸುವ ಕಾರಣವೆಂದರೆ ಪರಶುರಾಮ ಭಕ್ತರ ರಕ್ಷಣಾರ್ಥ ಅವರ ಬೆಂಗಾವಲಿಗೆ ಬಂದಿರುವನೆಂದೂ, ಅದಕ್ಕಾಗಿ ಅವನನ್ನು ಪೂಜಿಸಿ ಕಳುಹಿಸಬೇಕಾದುದು ಅನಿವಾರ್ಯವೆಂದೂ ಭಾವಿಸಲಾಗುತ್ತದೆ. ಇವೆರಡೂ ಕ್ಷೇತ್ರಪಾಲಕ ದೇವತೆಗಳಿಗೆ ಸಲ್ಲುವ ಪೂಜೆಗಳೇ ಎಂಬುದು ನಿಸ್ಸಂಶಯ. ಈ ಸಂಗತಿಯನ್ನು ಬೆಂಬಲಿಸುವಂತೆ ಪರಶುರಾಮನ ಗುಡಿಯು ಗುಡ್ಡದಲ್ಲಿ ಮುಖ್ಯ ದೇವಾಲಯದಿಂದ ತಕ್ಕಷ್ಟು ದೂರ ದಕ್ಷಿಣಕ್ಕೆ ಇರುವುದನ್ನು ಕಾಣಬಹುದು. ಇದು ಕೂಡ ಪರಶುರಾಮನು ಕ್ಷೇತ್ರಪಾಲಕನೆಂಬುದನ್ನು ಸಮರ್ಥಿಸುತ್ತದೆ.

ಕ್ಷೇತ್ರಪಾಲಕ ದೇವತೆಗಳು ಯಾವಾಗಲೂ ಉಗ್ರ, ಭೈರವ, ಕಾಳಭೈರವ, ಕಾಳಭೈರವಿ ಮುಂತಾದವರು ನಮ್ಮ ದೇವಾಲಯಗಳಲ್ಲಿ ಕ್ಷೇತ್ರಪಾಲಕ ದೇವರುಗಳಾಗಿರುತ್ತಾರೆ. ಇವರೆಲ್ಲ ಉಗ್ರದೇವತೆಗಳೇ. ಪರಶುರಾಮನು ಗಂಡುಗೊಡಲಿ ಹಿಡಿದಿರುವುದು, ಕಾರ್ತವೀರ್ಯ ಮತ್ತು ಇತರ ಕ್ಷತ್ರಿಯರನ್ನು ಅವನು ಸಂಹರಿಸಿದನೆಂದು ಹೇಳುವುದು ಅವನ ಈ ಹಿನ್ನೆಲೆಗೆ ಯೋಗ್ಯವೇ ಆಗಿದೆ. ಪುರಾಣ-ಜಾನಪದ ಕಥೆಗಳಲ್ಲಿ ಈ ವಿಷಯಕ್ಕೆ ಪುಷ್ಟಿ ದೊರೆಯುತ್ತದೆ. ದೇವಿಯ ಸೇವೆಗೆ ಸದಾ ಸನ್ನದ್ಧನಾಗಿ ನಿಂತಿರುವ ದೇವತೆಯಾದುದರಿಂದ ಅವನನ್ನು ದೇವಿಯ ಮಗನೆಂದು ಕಲ್ಪಿಸಲಾಯಿತ್ತೆಂದು ಹೇಳಬಹುದು. ಗಂಡನಿಲ್ಲದೇ ಪರಶುರಾಮನನ್ನು ಹೆತ್ತಳೆಂದು ಹೇಳುವುದು ಮಾತ್ರ ವಿಶೇಷ ಆಶಯದಿಂದ ಕೂಡಿರುವಂತೆ ಕಾಣುತ್ತದೆ. ದೇವದಾಸಿ ಪದ್ಧತಿಯನ್ನು ಸಮರ್ಥಿಸಲೋಸುಗ ಹುಟ್ಟಿದ ಕಥೆ ಇದೆಂಬಂತೆ ತೋರುತ್ತದೆ. ಎಂದರೆ ಆಚರಣೆಯ ಮೂಲಕ ಹುಟ್ಟಿದ ಐತಿಹ್ಯವಿದು ಎಂದು ಹೇಳಬೇಕಾಗುತ್ತದೆ. ಜನಪದರು ದೇವಿಯ ಗುಡಿಯಲ್ಲಿ ಪೂಜೆಯ ಕಾಲಕ್ಕೆ ನಡೆಯುವ ವಾದ್ಯ ವೈಭವದ ಸಪ್ಪಳ ಪರಶುರಾಮನ ಗುಡಿಯಲ್ಲಿ ಕೇಳುವುದಿಲ್ಲವೆಂದು ಹೇಳುತ್ತಾರೆ. ಈ ಸಂಗತಿ ಪರಿಶೀಲನಾರ್ಹವಾಗಿದೆ. ತನ್ನ ತಲೆಯನ್ನೇ ಕತ್ತರಿಸಿದ್ದಕ್ಕಾಗಿ ಎಲ್ಲಮ್ಮನು ಪರಶುರಾಮನಿಗಿತ್ತ ಶಾಪವೇ ಈ ಸಪ್ಪಳ ಕೇಳದಿರಲು ಕಾರಣವೆಂದು ಜನಪದರ ಹೇಳಿಕೆ. ಬಹುಶಃ ಈ ಎರಡೂ ದೇವಸ್ಥಾನಗಳು ನಿರ್ಮಿತವಾದ ಕೊಳ್ಳಗಳ ವಿಶಿಷ್ಟ ಪರಿಸರವೇ ಧ್ವನಿ ತರಂಗಗಳ ಪ್ರಸರಣಕ್ಕೆ ಅಡ್ಡಿಯುಂಟುಮಾಡುವ ಸಾಧ್ಯತೆಯಿದೆ. ಇಂಥ ನೈಸರ್ಗಿಕ ಸನ್ನಿವೇಶಗಳಿಗೆ ತಕ್ಕಂತೆ ಅವನ್ನು ವಿವರಿಸುವ ಅನೇಕ ಐತಿಹ್ಯಗಳು ಸೃಷ್ಟಿಗೊಳ್ಳುವವ ಎಂಬ ಸಂಗತಿಯನ್ನು ನಾವು ಈಗಾಗಲೇ ಗಮನಿಸಿದ್ದೇವೆ.

ಮಾತಂಗಿಸತ್ಯವ್ವ:

ಮಾತಂಗಿ ಹೊಲೆಯ ಅಥವಾ ಮಾದಿಗ ಜಾತಿಯವಳು ಎಂಬ ಬಗ್ಗೆ ಎಲ್ಲೆಡೆ ಏಕಾಭಿಪ್ರಾಯ ಕಂಡುಬರುತ್ತದೆ. ಪುರಾಣಗಳಲ್ಲಿ ಇವಳ ಪ್ರಸಕ್ತಿ ಇರುವಂತೆ ತೋರದು. ಇವಳು ಎಲ್ಲಮ್ಮನಿಗೆ ಕುಷ್ಟ-ತೊನ್ನು ಅಥವಾ ವಿಪರೀತ ಕಜ್ಜಿಗಳುಂಟಾದಾಗ ಅವಳನ್ನು ಉಚರಿಸಿದಳೆಂದು ಐತಿಹ್ಯವಿದೆ. ಅದೇ ರೀತಿ ಜೋಗುಳ ಬಾವಿಯ ಸತ್ಯವ್ವ ಎಲ್ಲವ್ವನನ್ನು ಸೇವಿಸಿದಳಂತೆ. ಇವೆಲ್ಲ ಶುದ್ಧ ಜನಪದೀಯವಾದ ಅಂಶಗಳು. ದೇವಸ್ಥಾನಕ್ಕೆ ಬರುವ ಭಕ್ತರು ಹುರುಕು-ಕಜ್ಜಿಗಳಿಂದ ಗುಣಹೊಂದಬೇಕೆಂದು, ಅಥವಾ ಹೊಂದಿದ್ದಕ್ಕಾಗಿ. ದೇವಿಗೆ ಉಪ್ಪನ್ನು ಅರ್ಪಿಸುವ ಪದ್ಧತಿಯಿದೆ. ಒಂದು ವಿಧದಲ್ಲಿ ಇದೂ ಕೂಡ ಮಾತಂಗಿ ಎಲ್ಲಮ್ಮನನ್ನು ಸೇವಿಸದಳೆಂಬ ಐತಿಹ್ಯಕ್ಕೆ ಉಪಷ್ಟಂಭಕವಾಗಿದೆ. ಆದರೆ ಎಲ್ಲಮ್ಮನಿಗೆ ಕಜ್ಜಿ-ತೊನ್ನುಗಳಾಗಿದ್ದವೆಂಬ ಕಲ್ಪನೆಯ ಹಿನ್ನೆಲೆಯಲ್ಲಿ ಇನ್ನೊಂದು ಜಾನಪದ ನಂಬಿಕೆ ಅಂತರ್ನಿಹಿತವಾಗಿರುವಂತೆ ತೋರುತ್ತದೆ. ನಮ್ಮಲ್ಲಿ ಒಂದೊಂದು ರೋಗಕ್ಕೂ ಒಬ್ಬೊಬ್ಬ ಅಧಿದೇವತೆಯರನ್ನು ಜನಪದರು ಕಲ್ಪಿಸಿದ್ದಾರೆ. ಮೈಲಿ-ಕಾಲರಾಗಳಿಗೆ, ಮೈಲಮ್ಮ-ಮಾರಮ್ಮ, ಉಡುಚುಗಡ್ಡಗೆ ಉಡುಚಮ್ಮ ಇತ್ಯಾದಿ. ಅದೇ ರೀತಿ ಎಲ್ಲಮ್ಮ ಕಜ್ಜಿ-ತೊನ್ನುಗಳಿಗೆ ಅಧಿದೇವತೆ ಎಂಬ ನಂಬಿಕೆ ಜನಪದರಲ್ಲಿದೆ. ಈ ನಂಬಿಕೆಯಿಂದಾಗಿ ಈ ಐತಿಹ್ಯ ಸೃಷ್ಟಿಗೊಂಡಿರಬಹುದಾಗಿದೆ.

ಎಕ್ಕಯ್ಯಜೋಗಯ್ಯ:

ಎಕ್ಕಯ್ಯ ಜೋಗಯ್ಯರೆಂಬ ಇಬ್ಬರು ಸಿದ್ಧಪುರುಷರ ಮಹಿಮೆಯಿಂದ ಎಲ್ಲಮ್ಮನ ಶಾಪ ಅಥವಾ ರೋಗ ನಿವಾರಣೆಯಾಯಿತೆಂಬ ನಂಬಿಕೆಯೂ ಇದೆ. ಪ್ರಮುಖ ದೇವರಿಂದ ಇತರರು ಉದ್ಧಾರವಾದ ಕಥೆಗಳೇ ಸಾಮಾನ್ಯವಾಗಿರುವಾಗ ಪ್ರಮುಖ ದೇವತೆಯೇ ಇತರರಿಂದ ಉದ್ಧಾರಗೊಂಡಳೆಂದು ಹೇಳುವ ಈ ಕಥೆ ವಿಚಿತ್ರವಾಗಿದೆ ! ಈ ಎಕ್ಕಯ್ಯ-ಜೋಗಯ್ಯರ ಹೆಸರುಗಳು ಏಕನಾಥ ಜೋಗಿನಾಥರೆಂದೂ ರೂಢಿಯಲ್ಲಿವೆ. ಇವರಿಬ್ಬರು ಐತಿಹಾಸಿಕ ವ್ಯಕ್ತಿಗಳಾಗಿದ್ದ ಪಕ್ಷದಲ್ಲಿ ನಾಥ ಪಂತೀಯರಾಗಿದ್ದರೋ ಏನೋ?! ಆದರೆ ಈ ಹೆಸರುಗಳನ್ನು ಇನ್ನೊಂದು ರೀತಿಯಿಂದಲೂ ವಿವರಿಸಬಹುದೆಂದು ಕಾಣುತ್ತದೆ. ಈ ಶಬ್ದಗಳು ಜೋಗಪ್ಪ ಜೋಗಮ್ಮಗಳ ಬಾಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಪ್ರಚಾರವಾಗಿವೆ. ಕೆಲವರು ಇವಕ್ಕೆ ಪ್ರತಿಯಾಗಿ ‘ಎಕ್ಕರಿಗೋ ಜೋಗವ್ವ’ ಎಂದು ಹೇಳುತ್ತಾರಾದರೆ ಮತ್ತೆ ಕೆಲವರು ಯೆ(ಎ)ಕ್ಕುಂದೇ(ದೀ) ಜೋಗವ್ವ ಎಂದೂ ಎಕ್ಕುಲ್ದೆ ಜೋಗವ್ವ ಎಂದೂ ಹೇಳುತ್ತಾರೆ. ದೇವರ ಹೆಸರಿನಿಂದ ಭಿಕ್ಷಾವೃತ್ತಿ ಕೈಗೊಂಡ ನೈಷ್ಠಿಕ ಭಕ್ತರು ತಮ್ಮ ಆರಾಧ್ಯ ದೇವತೆಯ ಹೆಸರು ಹೇಳುವುದು ವಾಡಿಕೆಯೇ ಹೊರತು, ಉಪದೇವತೆಗಳ ಹೆಸರನ್ನಲ್ಲ. ದಾಸಯ್ಯಗಳು ‘ವೆಂಕಟರಮಣಾ ಗೋವಿಂದ’ ಎಂದು ಹೇಳಿದರೆ ಮೈಲಾರಲಿಂಗನ ಭಕ್ತರು ‘ಏಳು ಕೋಟಿ ಏಳು ಕೋಟಿ’ ಎಂದು ಹೇಳುವರು. ಹಾವೇರಿಯಲ್ಲಿ ನಾನು ಕಿವಿಯಾರೆ ಕೇಳಿದಂತೆ ಒಬ್ಬ ಜೋಗವ್ವ ಭಿಕ್ಷೆ ಬೇಡುವಾಗ ‘ಹೊನ್ನತ್ತೆವ್ವನ ಜೋಗವ್ವ’ ಎಂದು ಹೇಳುತ್ತಿದ್ದಳು. ಅಂದರೆ ಈ ಜೋಗಮ್ಮ ಹೊನ್ನತ್ತಿಯ ಹೊನ್ನಮ್ಮನ ದೇವಸ್ಥಾನದಲ್ಲಿ ಹೊರೆ ಹೊತ್ತವಳೆಂದು ಅರ್ಥ. ಆದ್ದರಿಂದ ಅವಳ ಆರಾಧ್ಯ ದೇವತೆ ಹೊನ್ನತ್ತಿಯ ಹೊನ್ನಮ್ಮ. ಅವಳ ಹೆಸರು ಹೇಳುತ್ತ ಭಿಕ್ಷೆ ಬೇಡುವುದು ಇವಳ ವಿಧಿ. ಆದ್ದರಿಂದ ಜೋಗಪ್ಪ ಜೋಗಮ್ಮಗಳು ಹೇಳುವ ಈ ಶಬ್ದಗಳಲ್ಲಿ ತಮ್ಮ ಆರಾಧ್ಯ ದೇವತೆಯ ಹೆಸರಿರಬೇಕಾದುದು ಅನಿವಾರ್ಯ. ಕಾರಣ ಎಕ್ಕಯ್ಯ, ಎಕ್ಕಲಗೊ, ಎಕ್ಕುಂದೀ,(ದೇ) ಎಂಬ ಪೂರ್ವಪದವು ಈ ದೇವತೆಯ ವಾಚಕವಾಗಿರಲಿಕ್ಕೆ ಸಾಕು. ಉತ್ತರಪದ ಮಾತ್ರ ತಾನು ಆ ದೇವರ ಜೋಗಪ್ಪ ಅಥವಾ ಜೋಗವ್ವ ಎಂಬುವುದನ್ನು ತಿಳಿಸಿ ಹೇಳುವ ಶಬ್ದ. ಎಕ್ಕಯ್ಯ ಎಂಬುದಕ್ಕಿಂತ ಎಕ್ಕಲಿಗೆ ಅಥವಾ ಎಕ್ಕುಂದಿ ಎಂಬುವುದು ಹೆಚ್ಚು ಸರಿಯಾದ ಶಬ್ದ ಮತ್ತು ದೇವತಾವಾಚಕವಾದುದೆಂದು ಭಾವಿಸಬೇಕು. ದೇವಾಲಯದಲ್ಲಿರುವ ಶಾಸನದಲ್ಲಿ ದೇವಿಯನ್ನು ಜತ್ತಕ ಎಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಈ ಎಕ್ಕಲಿಗೆ, ಎಕ್ಕುಂದಿ, ಜತ್ತಕ, ಕನ್ಯಮ್ಮ ಮುಂತಾದ ಶಬ್ದಗಳಲ್ಲಿ ದೇವಿಯ ಮೂಲ ಹೆಸರು ಅಡಗಿದೆ ಎಂದು ಹೇಳಬಹುದು. ಇದರಿಂದ ಸಧ್ಯದ ‘ಎಲ್ಲಮ್ಮ’ ಎಂಬುದು ಈಚಿನ ಹೆಸರೆಂಬುದಂತೂ ನಿಶ್ಚಿತ.

ಎಲ್ಲಮ್ಮಸಿದ್ಧರು:

ದೇವಿಯನ್ನು ಕುರಿತ ಕೆಲವು ಹಾಡುಗಳಲ್ಲಿ ಎಲ್ಲಮ್ಮ ದುಷ್ಟರಾದ ಹಲವು ಜನ ಸಿದ್ಧರನ್ನು ನಾಶ ಮಾಡಿದಳೆಂಬ ವರ್ಣನೆ ಬರುತ್ತದೆ.[8] ಒಂದೆಡೆ ಆ ಸಿದ್ಧರ ಸಂಖ್ಯೆ ಮೂರುನೂರ ಅರವತ್ತು ಎಂದಿದೆ.[9] ಅವರು ಎಲ್ಲಮ್ಮನನ್ನು ಪರಿಪರಿಯಾಗಿ ಕಾಡಿಸಿದರೆಂದೂ ಮೊದಲು ಅವಳಿಂದ ನಾನಾ ಪ್ರಕಾರದ ಸೇವೆ ಮಾಡಿಸಿಕೊಂಡರೆಂದು ವರ್ಣಿಸಿರುವುದು ಕಂಡು ಬರುತ್ತದೆ. ಕೊನಗೆ ಎಲ್ಲಮ್ಮ ಅವರಿಗೆ ಭಂಗಿ ಸೇವಿಸಿ ಅವರೆಲ್ಲ ಅಮಲಿನಲ್ಲಿದ್ದಾಗ ಅವರ ತಲೆಗಳಲ್ಲಿ ಮೊಳೆ ಹೊಡೆದು ಅವರನ್ನು ತನ್ನ ಸ್ವಾಧೀನಪಡಿಸಿಕೊಂಡಳಂತೆ.

ಪಿಶಾಚಿ ಸಿದ್ಧರು  ಪಿಶಾಚಿಗಳನ್ನು ಹಿಡಿದು ವಶಪಡಿಸಿಕೊಳ್ಳುವಾಗ ತಮ್ಮ ಮಂತ್ರಬಲದಿಂದ ಅವುಗಳ ತಲೆಯಲ್ಲಿ ಮೊಳೆ ಜಡಿದು ಬಿಡವರೆಂದು. ಆಮೇಲ ಅವು ಆ ಮಾಂತ್ರಿಕರು ಹೇಳಿದಂತೆ ಕೇಳುವವೆಂದೂ ಜಾನಪದರು ನಂಬುತ್ತಾರೆ. ಅಂಥ ಜನಪದ ಕಥೆಗಳೂ ಪ್ರಚಾರದಲ್ಲಿವೆ. ಬಾಗಿಲಿಗೆ (ಬೇವಿನ) ಗಿಡಗಳಿಗೆ. ಪ್ರಸಿದ್ಧ ದೇವಾಲಯಗಳಲ್ಲಿನ ಮರಗಳಿಗೆ, ತೊಲೆ-ಕಂಬಗಳಿಗೆ ಮೊಳೆ ಹೊಡೆಯುವ ವಿಧಾನವನ್ನು ನಾವು ಎಲ್ಲಡೆ ನೋಡುತ್ತೇವೆ. ಈ ರೀತಿ ಈ ಐತಿಹ್ಯಕ್ಕೆ ಸಾಕಷ್ಟು ಪ್ರಸಾರವಿದೆಯೆಂದು ಹೇಳಬೇಕು. ಕಾರಣ ಮೇಲುನೋಟಕ್ಕೆ ಇದೊಂದು ವಲಸೆ ಬಂದ ಐತಿಹ್ಯದಂತೆ ತೋರುತ್ತದೆ. ಆದರೂ ಇದು ವಲಸೆ ಬಂದ ಐತಿಹ್ಯವಾಗಿರದೆ ಸ್ಥಳೀಯ ಐತಿಹ್ಯವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಎಲ್ಲಮ್ಮಮೈಲಾರಲಿಂಗಪ್ಪ:

ಕೊನೆಯದಾಗಿ ಧಾರವಾಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಇನ್ನೊಂದು ಐತಿಹ್ಯವನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. ಸವದತ್ತಿಯ ಎಲ್ಲಮ್ಮ, ಚಂದ್ರಗುತ್ತಿಯೆ ಎಲ್ಲಮ್ಮ ಮತ್ತು ಹೊನ್ನತ್ತಿಯ ಹೊನ್ನಮ್ಮ ಇವರು ಮೈಲಾರಲಿಂಗನ ತಂಗಿಯರು ಎಂದು ಹೇಳುತ್ತಾರೆ. ಈ ಮೂವರು ಸಹೋದರಿಯರು ಭಂಡಾರವನ್ನು ತಮ್ಮ ತವರುಮನೆಯಿಂದಲೇ ಎಂದರೆ ತಮ್ಮ ಅಣ್ಣನಾದ ಮೈಲಾರಲಿಂಗಪ್ಪನಿಂದಲೇ ತಂದರೆಂದು ನಂಬಿಕೆಯಿದೆ. ಅದೇ ರೀತಿ ಮೈಲಾರಲಿಂಗನ ದೇವಸ್ಥಾನದ ಗುರುಮನೆತನದವರಾದ ಒಡೆಯರು ಎಲ್ಲಮ್ಮ ತಮ್ಮ ಮನೆತನದ ಹೆಣ್ಣುಮಗಳು ಎಂದು ನಂಬುತ್ತಾರೆ. ಈ ಐತಿಹ್ಯಕ್ಕೆ ಬೇರೆ ಪ್ರಸಾರವಿರುವಂತೆ ಕಾಣದು. ಆದ್ದರಿಂದ ಇದಕ್ಕೆ ಎಷ್ಟು ಬೆಲೆ ಕೊಡಬೇಕೋ ತಿಳಿಯದು. ನಮ್ಮ ಜನಪದರು ಸುತ್ತಮುತ್ತಲಿನ ದೇವರುಗಳಿಗೆ ಅಣ್ಣ, ತಮ್ಮ, ತಂಗಿ, ತಂದೆ, ಮಗ, ಮಗಳು ಇತ್ಯಾದಿಯಾಗಿ ಸಂಬಂಧ ಕಲ್ಪಿಸುವುದು ಎಲ್ಲಡೆ ಕಂಡು ಬರುತ್ತದೆ. ಇದು ಕಲ್ಪನೆಯೋ ಅಥವಾ ವಾಸ್ತವಾಂಶವೇನಾದರೂ ಇದರಲ್ಲಿ ಇದೆಯೋ? ಹೇಳುವುದು ಕಷ್ಟ!

ಹೀಗೆ ಎಲ್ಲಮ್ಮನನ್ನು ಕುರಿತಿರುವ ಐತಿಹ್ಯಗಳಲ್ಲಿ ಹಲವಾರು ಜನಪದ ನಂಬಿಕೆಗಳು. ಪೌರಾಣಿಕ ಅಂಶಗಳು, ಆಚರಣೆಗಳು, ಅಡಕವಾಗಿರುವುದು ಕಂಡುಬರುತ್ತದೆ. ಹೆಚ್ಚಿನವುಗಳಿಗೆ ಜಾನಪದ ನಂಬಿಕೆಗಳೇ ಆಧಾರವಾಗಿವೆ. ಕೆಲವು ಐತಿಹ್ಯಗಳು ಪುರಾಣ ಸ್ಪರ್ಶವನ್ನು ಪಡೆದಿವೆ. ಒಂದೆರಡಾದರೂ ವಲಸೆ ಬಂದ ಐತಿಹ್ಯಗಳು ಇಲ್ಲಿ ಪ್ರಚಲಿತವಾಗಿವೆ. ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾದುದು ಅನಿವಾರ್ಯ. ವಿಶೇಷವಾಗಿ ದೇವದಾಸಿ ಪದ್ಧತಿ. ಪರಶುರಾಮದೇವರು ಹಾಗೂ ಎಲ್ಲಮ್ಮನ ಇತರ ಕ್ಷೇತ್ರಗಳ ಕ್ಷೇತ್ರಾಧ್ಯನ (Field Study) ವಿವರವಾಗಿ ನಡೆಯಬೇಕು. ಆಗ ಮಾತ್ರ ಹೆಚ್ಚು ನಿಖರವಾಗಿ ಈ ದೇವತೆಯ ಐತಿಹ್ಯಗಳನ್ನು ಪರೀಕ್ಷಿಸುವುದು ಸಾಧ್ಯವಾದೀತು.

* * *

 


[1]      ವಿಶ್ವಕೋಶ..ಮೈ.ವಿ.ವಿ. ‘ಐತಿಹ್ಯ’.

[2]      ಅದೇ.

[3]      ಅದೇ.

[4]      ಕರ್ನಾಟಕದ ಶಕ್ತಿ ದೇವತೆಗಳು -ಪುಟ ೩೪-೩೫.

[5]      ಕರುಣಿ ಕಣ್ಣ ತೆರೆಯ-ಪುಟ ೨೩.

[6]      ಕರ್ನಾಟಕದ ಶಕ್ತಿ ದೇವತೆಗಳು -ಪುಟ ೩೩.

[7]      ಕರುಣಿ ಕಣ್ಣ ತೆರೆಯೆ -ಪುಟ ೫೯.

[8]      ಜೋಗತಿ ಹಾಡು -ಕ.ವಿ.ವಿ. ಧಾರವಾಡ ಪುಟ ೮೪.

[9]      ಅದೇ -ಪುಟ ೮೩.