ಉತ್ತರ ಕರ್ನಾಟಕದಲ್ಲಿ, ಜಾತ್ರೆ, ರಥೋತ್ಸವಗಳು ವೈಭವದಿಂದ ಜರುಗುತ್ತವೆ. ಅವುಗಳಲ್ಲಿ ಸವದತ್ತಿ ಎಲ್ಲಮ್ಮ, ಕಲಬುರ್ಗಿಯ ಶರಣಬಸವೇಶ್ವರ, ಮೈಲಾರದ ಮೈಲಾರಲಿಂಗ, ಸಿರಸಿಯ ಮಾರಿಕಾಂಬೆ ಹಾಗೂ ಬಾದಾಮಿ ಬನಶಂಕರಿ ಜಾತ್ರೆ ಇವು ಪ್ರಸಿದ್ಧ ದೊಡ್ಡ ಜಾತ್ರೆಗಳು.

ಎಲ್ಲಮ್ಮನ ಜಾತ್ರೆ ಸವದತ್ತಿಯಲ್ಲಿ ಮಾತ್ರವಲ್ಲದೆ ಕರ್ನಾಟಕದ ಅನೇಕ ಕಡೆಗಳಲ್ಲಿ ಓರಂಗಲ್ಲು, ಆದವಾನಿ, ಮಾವೂರು, ಹುಲಿಗೆ, ಉಚ್ಚಂಗಿ, ಮೆಕಳಿ, ಬಂಕಾಪುರ, ನಾಗಾವಿ, ಚಾಕಲಬ್ಬಿ, ಮತ್ತಿಗಟ್ಟೆ, ಕೊಕಟನೂರು, ಚಂದ್ರಗುತ್ತಿ, ಗುನ್ನಾಗರೆ, ಬಿಂಕದಕಟ್ಟಿ ಈ ಮುಂತಾದ ಸ್ಥಳಗಳಲ್ಲಿ ವೈಭವ ಪೂರ್ಣವಾಗಿ ಜರಗುತ್ತದೆ.

ಬೆಳಗಾಂವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ಕ್ಷೇತ್ರ ದಕ್ಷಿಣ ಭಾರತದಲ್ಲಿ ಪ್ರಸಿದ್ಧ. ಈ ಎಲ್ಲಮ್ಮನಿಗೆ “ಏಳು ಕೊಳ್ಳದ ಎಲ್ಲಮ್ಮ” ಎಂಬುದು ಮತ್ತೊಂದು ಹೆಸರು.

ಆಯಾ ಜಾತ್ರೆಗಳ ವೈಶಿಷ್ಟ್ಯ:

ಎಲ್ಲಮ್ಮನಿಗೆ ಎಲ್ಲ ಜಾತಿ-ಮತ-ಪಂಥಗಳಲ್ಲೂ ಭಕ್ತವರ್ಗವಿದೆ. ಅವಳು ಭಕ್ತ ಕೋಟಿಯ ಕುಲದೇವತೆ. “ನನ್ನ ಕ್ಷೇತ್ರಕ್ಕೆ ಯಾವೊತ್ತು ಹೊಸ ಭಕ್ತಾದಿಗಳು ಬರುವುದಿಲ್ಲವೋ ಆ ದಿನದಿಂದಲೇ ನಾನು ಅಲ್ಲಿಲ್ಲವೆಂದು ತಿಳಿಯಿರಿ.” ಎಂದು ಎಲ್ಲಮ್ಮ ಭಾಷೆ ಕೊಟ್ಟಿದ್ದಾಳೆಂಬುದು ಜನಪದ ನಂಬಿಕೆ. ಆದ್ದರಿಂದಲೇ ಪ್ರತಿದಿನವೂ ತಪ್ಪದೇ ನೂರಾರು ಭಕ್ತರು ಸುತ್ತಲಿನ ದೂರದ ಊರುಗಳಿಂದ ಬಂದೇ ಬರುತ್ತಾರೆ. ಎಲ್ಲಮ್ಮನ ಜಾತ್ರೆ ಹರಿಜಾತ್ರೆ; ವರ್ಷದ ಹನ್ನೆರಡೂ ತಿಂಗಳು ಇವಳ ಜಾತ್ರೆ. ಸವದತ್ತಿ ಎಲ್ಲಮ್ಮನ ಜಾತ್ರೆ “ಜೋಗ್ತಿಯರ ಜಾತ್ರೆ” ಎಂಬುದನ್ನು ಜಾನಪದರು ರಸವತ್ತಾಗಿ ಬಣ್ಣಿಸಿದ್ದಾರೆ.

ಗೆಣತಿ ಗೆಣಿಯನ ಜಾತ್ರಿ ಕೆಲವsಡಿ ರಂಗನದ
ಎಲ್ಲವ್ನ ಜಾತ್ರಿ ಜೋರ್ಗ್ತೇದ
ಕೂಡಲ ಸಂಗಯ್ನ ಜಾತ್ರೆ ಶರಣರದ.

ಇವಳ ಜಾತ್ರೆ ನವರಾತ್ರಿ ಹಬ್ಬದೊಂದಿಗೇ ಪ್ರಾರಂಭ. ತುಳಜಾಪುರದ ಅಂಬಾ ಭವಾನಿಯ ಜಾತ್ರೆ ಕೈಕೊಂಡವರು ಸವದತ್ತಿ ಎಲ್ಲಮ್ಮನ ಜಾತ್ರೆ ಮಲುಗಿಸಿಕೊಂಡೇ ಹೋಗುವ ಸಂಪ್ರದಾಯವಿದೆ . ಇಲ್ಲಿ ರಥೋತ್ಸವದಂಥ ಆಕರ್ಷಣೆಯಿಲ್ಲ. ಆದರೂ ಇಂಥ ವೈಭವದ ಜಾತ್ರೆ ಇನ್ನೊಂದಿಲ್ಲ.

ಮಹಾನವಮಿಯ ತರುವಾಯ ಸೀಗೆ ಹುಣ್ಣಿಮೆಗೆ ಜಾತ್ರೆ ಭರದಿಂದ ಕೂಡುವದು. ದೀಪಾವಳಿ ಅಮವಾಸ್ಯೆ ಗೌರೀ ಹುಣ್ಣಿಮೆ ದಿವಸವೂ ಜಾತ್ರೆ ಬಹಳ. ಇವುಗಳಿಗಿಂತ ವೈಭವಪೂರ್ಣವಾದುದು ಹೊಸ್ತಿಲ ಹುಣ್ಣಿವೆ ಮತ್ತು ಬನದ ಹುಣ್ಣಿವೆ ಭಾರತ ಹುಣ್ಣಿವೆ ಜಾತ್ರೆ.

ಹೊಸ್ತಿಲ ಹುಣ್ಣಿಮೆಗೆ ಎಲ್ಲಮ್ಮ ಕ್ಷೇತ್ರದ ಭಾಗದಲ್ಲಿ ರಂಡೆ ಹುಣ್ಣಿಮೆ ಎಂದು ಹೆಸರು. ಈ ದಿನ ಎಲ್ಲಮ್ಮ ರಂಡೆಯಾದಳು. ಕಾರ್ತವೀರ್ಯಾರ್ಜುನನು ಜಮದಗ್ನಿಯ ರುಂಡವನ್ನು ಹೊಡೆದ ಸಂದರ್ಭದಿದು. ಭಕ್ತಾದಿಗಳಿಗಿಂತ ಜೋಗಿಗಳು, ಜೋಗಿತಿಯರು ಹೆಚ್ಚಿನ ಪ್ರಮಾಣದಲ್ಲಿ ಬಂದು ಸೇರುವುದೇ  ಈ ರಂಡಿ ಹುಣ್ಣಿಮೆಯ ಜಾತ್ರೆಯ ವೈಶಿಷ್ಟ್ಯ. ಈ ಹುಣ್ಣಿಮೆಯ ಹಿಂದಿನ ದಿನವೇ ಚತುರ್ದಶಿಯ ದಿನ ರೋಹಿಣಿ ನಕ್ಷತ್ರದ ಸಮಯದಲ್ಲಿ ದೇವಿಯ ಕಂಕಣ ಹಾಗೂ ಮಂಗಲಸೂತ್ರ ವಿಸರ್ಜನೆಯ ಕಾರ್ಯ ನೆರವೇರುವುದು; ದೇವಿಯ ಗುಡಿಯಲ್ಲಿ ಯಜ್ಞಕಾರ್ಯ ನಡೆಸಲಾಗುವುದು.  ಈ ಸಂದರ್ಭದಲ್ಲಿ ಎಲ್ಲಮ್ಮನ ಗುಡಿಯಿಂದ ಪಲ್ಲಕ್ಕಿ ಹೊರಡುವುದು. ವಾದ್ಯಮೇಳದವರು ಮುಂದೆ ಇರುವರು. ಜೋಗಿಗಳು, ಜೋಗಿತಿಯರು ಪಲ್ಲಕ್ಕಿಯ ಜೊತೆಗಿರುವರು. ಅವರು ಜಮದಗ್ನಿಯ ಗುಡಿಯ ವರೆಗೆ ಬಂದ ನಂತರ ಪೂಜೆ ಜರುಗುವುದು. ಆಗ ಪಲ್ಲಕ್ಕಿಯೊಳಗಿರುವ ದೇವಿಯ ಕೈಗಳಲ್ಲಿಯ ಬಳೆಗಳನ್ನು ತೆಗೆಯುವರು. ಆ ಸಂದರ್ಭದಲ್ಲಿ, ಎಲ್ಲಮ್ಮನ ಬಳೆ ತೆಗೆದರೆಂದು ಜೋಗಿತಿಯರೂ ತಮ್ಮ ಕೈ ಬಳೆಗಳನ್ನು ತೆಗೆದೊಯುವರು. ಪಲ್ಲಕ್ಕಿ ಎಲ್ಲಮ್ಮನ ಬೆಳ್ಳಿಯ ಮೂರ್ತಿಯನ್ನು ಹೊತ್ತುಕೊಂಡು ಹಿಂತಿರುಗಿ ದೇವಿಯ ಗುಡಿಗೆ ಬರುವುದು. ಪಲ್ಲಕ್ಕಿ ಹಿಂತಿರುಗಿ ಬಂದೊಡನೆಯೇ. ಮಹಾರಾಷ್ಟ್ರದಿಂದ ಬಂದ ದೇವಿಯ ಭಕ್ತರು, ಜೋಗಿ, ಜೋಗಿತಿಯರು, ಗುಡ್ಡವನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹಿಂತಿರುಗುವರು. ರಂಡಿ ಹುಣ್ಣಿಮೆಯ ದಿನ ಬೆಳಗಾಗುವದರೊಳಗಾಗಿ ಗುಡ್ಡವನ್ನು ಬಿಡಬೇಕೆಂಬುದು ಮಹಾರಾಷ್ಟ್ರದಿಂದ ಬಂದ ಭಕ್ತರ ಪರಂಪರೆಯಾಗಿದೆ.

ಬನದ ಹುಣ್ಣಿಮೆಗೆ ವಿಶೇಷತಃ ಬೆಳಗಾವಿ, ಕೊಲ್ಲಾಪೂರ, ಮುಂಬಯಿಗಳಿಂದ ಜನರು ಬರುವರು. ಆಗ ಇಲ್ಲಿ ಬಹು ದೊಡ್ಡ ಜಾತ್ರೆ.

ಇಡೀ ವರ್ಷದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಬಲು ದೊಡ್ಡದು. ಎಲ್ಲ ಭಾಗದ ಜನರೂ ಈ ಜಾತ್ರೆಗೆ ಬರುವರು. ಅಂದು ಸುಮರು ೨ ಲಕ್ಷ ಜನ ಸೇರಿರುವರು. ಈ ಜಾತ್ರೆಗಾಗಿ ದಿನಗಟ್ಟಲೇ ಸಂವರಣೆ; ಹುಣ್ಣಿಮೆ ಮುಂದಿದ್ದಾಗಲೇ ಪ್ರಯಾಣ. ಅಲಂಕಾರ ಮಾಡಿದ ಎತ್ತಿನ ಬಂಡಿ ಹೂಡಿಕೊಂಡು, ಬಂಧು ಬಳಗವನ್ನು ಕೂಡಿಕೊಂಡು, ಜೋಗಿ-ಜೋಗಿತಿಯರ ಮೇಳ ಹೊರಡಿಸಿಕೊಂಡು, ಮೋಜು ಮಜಲು ಮಾಡುತ್ತ ಹೊತ್ತು ಮುಳುಗಿದಲ್ಲಿ ವಸ್ತಿ ಮಾಡುತ್ತ, ಬುತ್ತಿಯ ಗಂಟುಗಳನ್ನು ಸವೆಸುತ್ತ, ಹುಣ್ಣಿಮೆಯ ಹೊತ್ತಿಗೆ ಗುಡ್ಡದಲ್ಲಿ ಸೇರುತ್ತಾರೆ. ಒಂದೊಂದು ಊರ ಭಕ್ತರದು ಒಂದೊಂದು ಗುಂಪು. ಗುಡ್ಡದ ತುಂಬ ಭಕ್ತರು. ದೇವಿಯ ದರ್ಶನವೇ ಅವರಿಗೊಂದು ಪುಣ್ಯಲಾಭ. ೧೯೭೦ ಕ್ಕಿಂತ ಮೊದಲು ಚಕ್ಕಡಿಗಳ ಮೂಲಕ ಬರುವ ಯಾತ್ರಿಕರ ಸಂಖ್ಯೆಯೇ ಹೆಚ್ಚಾಗಿದ್ದಿತು. ಸವದತ್ತಿಯ ಬಸ್‌ ನಿಲ್ದಾಣದಿಂದ ಹಿಡಿದು ಮುಂದೆ ಜೋಗುಳ ಭಾವಿಯ ಮೂಲಕ ಎಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಯಾತ್ರಿಕರ ಚಕ್ಕಡಿಗಳು ಮೂರು ಮೂರು ಸಾಲುಗಳಾಗಿ ರಸ್ತೆಯುದ್ದಕ್ಕೂ ಹೋಗುತ್ತಿರುವ ದೃಶ್ಯ; ರಸ್ತೆಯ ಇಕ್ಕೆಲಗಳಲ್ಲಿ ರಾತ್ರಿಯ ಸಮಯದಲ್ಲಿ ಯಾತ್ರಿಕರು ತಂಗುವ ದೃಶ್ಯ; ಅವರಲ್ಲಿರತಕ್ಕ ಭಕ್ತಿಯ ಹೊನಲು ಇದೆಲ್ಲವೂ ವರ್ಣನಾತೀತ. ಯಾತ್ರಿಕರ ಹಣೆಯ ಮೇಲೆ-ಮೈಮೇಲೆ ಕುಂಕುಮ-ಭಂಡಾರಗಳ ಅಲಂಕಾರವೇ ಅಲಂಕಾರ. “ರೇಣುಕಾತಾಯಿ ನಿನ್ನ ವಾಲಗಕ್ಕುಧೋ ಉಧೋ; ಗುಡ್ಡದೆಲ್ಲಮ್ಮಾ ನಿನ್ನ ವಾಲ ಗಕ್ಕುಧೋ ಉಧೋ ! ಪರಶುರಾಮಾ ನಿನ್ನ ವಾಲಗಕ್ಕುಧೋ ಉಧೋ; ಜೋಗುಳ ಭಾವಿ ಸತ್ತೆವ್ವಾ ನಿನ್ನ ವಾಲಗಕ್ಕುಧೋ: ಉಧೋ; ಉಧೋ: ಉಧೋ; ಉಧೋ: ಎಂದು ಯಾತ್ರಿಕರು ಘೋಷಣೆ ಮಾಡುತ್ತಿರುವುದು-ಎಂಥ ನಾಸ್ತಿಕನನ್ನೂ ಆಸ್ತಿಕನನ್ನಾಗಿ ಪರಿವರ್ತಿಸದೇ ಇರಲಾರದು. ಆದರೆ ೧೯೭೦ ರಿಂದ ಈಚೆಗೆ ಕರ್ನಾಟಕ-ಮಹಾರಾಷ್ಟ್ರ-ಆಂಧ್ರ ರಾಜ್ಯ ಸರಕಾರಗಳು ಇಲ್ಲಿಗೆ ಬರುವ ಯಾತ್ರಿಕರ ಅನುಕೂಲತೆಗಾಗಿ ಅನೇಕ ವಾಹನಗಳ ವ್ಯವಸ್ಥೆ ಮಾಡಿರುವುದರಿಂದ ಜನ ಸಂದಣಿಗೆ ಲೆಕ್ಕವೇ ಇಲ್ಲ. ಗುಡ್ಡದ ತುಂಬೆಲ್ಲ ಭಕ್ತರೇ ಭಕ್ತರು. ಆಗ ದೇವಿಯ ದರ್ಶನವಾಗುವದೇ ಕಠಿಣ. ಬಾಜಾ ಭಜಂತ್ರಿಯವರು, ಕರಡಿ ಮಜಲಿನವರು, ಡೊಳ್ಳಿನವರು, ಕಣಿ ವಾದ್ಯದವರು, ಮುಂತಾದವರು ದೊಡ್ಡ ಪ್ರಮಾಣದಲ್ಲಿ ಗುಡ್ಡದಲ್ಲಿ ಸೇರಿರುವರು. ದೇವಿಯ ಗುಡಿಯ ಸುತ್ತಲೂ ಇರುವ ಎತ್ತರವಾದ ಪೌಳಿಯ ಮೇಲೆ ಹತ್ತಿ, ಸುತ್ತಲೂ ದೇವಿಗೆ ಪ್ರದಕ್ಷಿಣೆ ಹಾಕುತ್ತ ಕರ್ಪೂರ ಹಚ್ಚುವ ದೃಶ್ಯ ಆಕರ್ಷಣೀಯವಾದದ್ದು.

ಈ ಜಾತ್ರೆಯ ಸಮಯದಲ್ಲಿ ಯಾವುದೇ ನಾಟಕ ಕಂಪನಿಗಳಾಗಲಿ. ಸಂಚಾರಿ ಚಲನ ಚಿತ್ರ ಮಂದಿಗಳಾಗಲಿ ಇಂದಿನ ವರೆಗೂ ಬಂದಿಲ್ಲವೆಂಬುದು ಸೋಜಿಗ. ತಲೆಯ ಮೇಲೆ ಕೊಡ ಹೊತ್ತು ಕೈಬಿಟ್ಟು ಕುಣಿಯುವ ಜೋಗಿತಿಯರ ದೃಶ್ಯಗಳು ಜಾತ್ರೆಯ ಉದ್ದಗಲಕ್ಕೂ ಅಲ್ಲಲ್ಲಿ ಕಾಣುತ್ತವೆ. ಅವರ ಮೈಮೇಲೆಲ್ಲ ಭಂಡಾರ ಹಾರಿಸುವ ದೃಶ್ಯ ವೈಶಿಷ್ಟ್ಯಪೂರ್ಣವಾದದ್ದು. ಚೌಡಕಿಯನ್ನು ಬಾರಿಸುತ್ತ, ತಾಳ ಹಾಕುತ್ತ, ಮಧುರ ಕಂಠದಿಂದ ಹಾಡುತ್ತ ಇರುವಾಗ ಆ ನಾದದ ಮೋದದಲ್ಲಿ, ತಾಳ ಲಯದ ಗತ್ತಿನಲ್ಲೆ ಕೂಡ ಹೊತ್ತು, ಸುತ್ತು ಕಡೆಗೆ ಹೊರಳುತ್ತ ಕುಣಿಯುವವರು ನೆರೆದ ಯಾತ್ರಿಕರನ್ನು ತಣಿಸುತ್ತಾರೆ. ಭಕ್ತಿಯ ರಸ ಹೆಚ್ಚುತ್ತಿರುತ್ತದೆ. ಇಂತಹ ತನ್ಮಯತೆಯಲ್ಲಿ ಕುಣಿದಾಡುವ ಯಾತ್ರಿಕರಿಗೆ ನಾಟಕ, ಸಿನೇಮಾದಂತಹ ಮನರಂಜನೆಗಳ ಅಗತ್ಯವೇ ಇಲ್ಲ. ದೇವಿಯ ನಾಮಸ್ಮರಣೆ, ಮಂತ್ರ ಘೋಷಣೆ ಯಾತ್ರಿಕರ ಹೃದಯಕ್ಕೆ ಆನಂದವುಂಟು ಮಾಡುತ್ತವೆ.

ಜಾತ್ರೆಯಲ್ಲಿ ಎಲ್ಲ ಪ್ರಕಾರದ ವೈಶಿಷ್ಟ್ಯಪೂರ್ಣ ಅಂಗಡಿಗಳನ್ನು ಕಾಣಬಹುದು. ಇಲ್ಲಿರುವಷ್ಟು ಬಳೆಗಾರ ಅಂಗಡಿಗಳು ಬಹುಶಃ ಕರ್ನಾಟಕದ ಬೇರೆ ಯಾವ ಜಾತ್ರೆಗಳಲ್ಲಿಯೂ ಕಂಡು ಬರಲಿಕ್ಕಿಲ್ಲ.

ಇಲ್ಲಿ ಮೊಟ್ಟ ಮೊದಲ ಸಲ ಜಾತ್ರೆಗೆ ಹೋದವರು ತಬ್ಬಿಬ್ಬಾಗುವಂತಹ ವಿಚಿತ್ರ ನೋಟವೊಂದು ನಮಗೆ ಕಂಡು ಬರುತ್ತದೆ. ಬಂದವರ ಹಣೆಗೆಲ್ಲ ಭಂಡಾರ ಹಚ್ಚುತ್ತ ಕಾಸಿಗಾಗಿ ಕೈಯೊಡ್ಡುವವರು ಗಂಡಸರೋ ಹೆಂಗಸರೋ ಎಂಬುದನ್ನು ನಿರ್ಧರಿಸಲಾಗದಂಥ ಸೋಜಿಗ; ಬಹುಶಃ ಭಾರತದ ಉಳಿದೆಲ್ಲ ಜಾತ್ರೆಗಳಲ್ಲಿಯೇ ಇದು ವಿಶಿಷ್ಟ. ಹೂರಣಗಡಬನ್ನು ಜೋಗಿತಿಯರಿಗೆ ಉಣಿಸುವುದು; ಹಡ್ಡಲಿಗೆ ತುಂಬಿಸುವದು; ಉಧೋ; ಉಧೋ; ಎಂಬ ಘೋಷಣೆ ಈ ಜಾತ್ರೆಯ ವಿಶೇಷ.

ಹೋಳಿ ಹುಣ್ಣಿವೆಯಲ್ಲಿ ಜಾತ್ರೆ ಕಡಿಮೆ. ಯುಗಾದಿ ಪಾಡ್ಯದ ದಿನ ಬೆಳಗಿನಲ್ಲಿಯೇ ಜಾತ್ರೆ ಕೂಡಿರುವುದು. ದವನದ ಹುಣ್ಣಿವೆ ಉತ್ತರ ಕರ್ನಾಟಕದ ಬಹುತೇಕ ಮನೆತನಗಳಲ್ಲಿ “ಕುಲಧರ್ಮ ಹುಣ್ಣಿಮೆ”ಯಾಗಿದೆ. ಇದು ಮುತ್ತೈದೆ ಹುಣ್ಣಿಮೆಯೆಂದು ಪರಿಚಿತವಾದದ್ದು. ಈ ದಿನ ಸಾಕಷ್ಟು ಪ್ರಮಾಣದಲ್ಲಿ ಜನ ಸೇರುವುದು. ಆಗೀ ಹುಣ್ಣಿಮೆ, ಕಾರ ಹುಣ್ಣಿಮೆ, ಕಡ್ಲಿಗಾರ ಹುಣ್ಣಿಮೆಗಳಲ್ಲಿ ಜಾತ್ರೆ ಸಾಧಾರಣ. ಶ್ರಾವಣ ಮಾಸದ ಪರ್ಯಂತ ಜಾತ್ರೆ ಇದ್ದೇ ಇರುತ್ತದೆ; ನೂಲ ಹುಣ್ಣಿಮೆಯಂದು ವಿಶೇಷ ಜಾತ್ರೆ. ಅನಂತ ಹುಣ್ಣಿಮೆಯಂದು ಸಾಧಾರಣ ಜಾತ್ರೆ.

ಹೀಗೆ ವರ್ಷದುದ್ದಕ್ಕೂ ಸವದತ್ತಿ ಎಲ್ಲಮ್ಮನ ಜಾತ್ರೆ ಬಹು ಮುಖ್ಯ ವಿಶಿಷ್ಟತೆ ಹೊಂದಿದೆ. ದೇವಿಯ ಜಾತ್ರೆಗೆ ಬಂದಂತಹ ಭಕ್ತರು ಅವಳ ದರ್ಶನ ಪಡೆದು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವಾಗ-

ಮತ್ತೆ ಬರ್ತೀವಿ ತಾಯಿ ನಿನ್ನ ಗುಡ್ಡಕ,
ಇನ್ನುಮ್ಯಾಲೇ ವರ್ಷ ವರ್ಷಕ್ಕ
ಹರಸಿ ಕಳಿಸವ್ವ ನೀ ನಮಗ ಮನಿತನಕ ||

ಎಂದು ದೇವಿಯನ್ನು ಪ್ರಾರ್ಥಿಸುತ್ತ ಮರಳುವ ದೃಶ್ಯ ಚೇತೋಹಾರಿಯಾದದ್ದು. “ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ ನೋಡಲೇ ಬೇಕು || ಎಲ್ಲಮ್ಮ ನಿನ್ನಂಥಾಕಿನಲ್ಲಿ ಕಾಣೆ ಎಲ್ಲಿ ಕಾಣೆ ||” ಎಂದು ಶಿಶುನಾಳ ಷರೀಫಸಾಹೇಬರು ಭಾವ ಪರವಶತೆಯಿಂದ ಹಾಡಿದ್ದು ಅರ್ಥಪೂರ್ಣ.

ಎಲ್ಲಮ್ಮನ ಪೂಜೆ:

ಶಕ್ತಿ ಪೂಜೆ ಭಾರತೀಯರಲ್ಲಿಯ ಒಂದು ಸತ್ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಸವದತ್ತಿ ಎಲ್ಲಮ್ಮನ ಪೂಜೆ ವಿಶಿಷ್ಟವಾದದ್ದು. ಇವಳ ಪೂಜೆಯನ್ನು ಬೇರೆ ಬೇರೆ ಪ್ರಕಾರಗಳಿಂದ ನೆರವೇರಿಸಲಾಗುವುದು.

ಈ ದೇವಿಯ ಅರ್ಚಕರು ಉಗರಗೋಳ ಗ್ರಾಮದಲ್ಲಿದ್ದಾರೆ. ಈ ಅನುವಂಶಿಕ ಅರ್ಚಕರ ಮನೆತನಗಳು ಸಧ್ಯ ಸುಮಾರು ೧೨೦ ಇವೆ. ಪೂರ್ವ ಕಾಲದಿಂದಲೂ ಈ ಅರ್ಚಕರಲ್ಲಿ ಎಂಟು ಬಣಗಳಿವೆ. ಅದೇ ಪ್ರಕಾರ ಸೇವಾಕಾರರಲ್ಲಿಯೂ ಎಂಟು ಬಣಗಳಿದ್ದು, ಪ್ರತಿ ನಾಲ್ಕು ದಿನಗಳಿಗೊಮ್ಮೆ ಅರ್ಚಕರು ಹಾಗೂ ಸೇವಾಕಾರರು ಸರದಿಯಂತೆ ಪೂಜೆ ಸಲ್ಲಿಸುವುದು ಕಡ್ಡಾಯವಿದೆ. ಪೂಜೆಯ ವಿಧಾನ, ವೇಳೆ ಹಾಗೂ ಭಕ್ತರು ಒಪ್ಪಿಸುವ ಕಾಣಿಕೆ ಮುಂತಾದವುಗಳ ಬಗೆಗೆ ಸರದಿಯ ಅರ್ಚಕರು ಪೂರ್ವ ಒಪ್ಪಿಗೆಯಂತೆ ನಿರ್ಧರಿಸುವರು. ಇವರು ವೀರಶೈವರು;

[1] ಪ್ರಾರಂಭದಲ್ಲಿ ಬ್ರಾಹ್ಮಣರೇ ಅರ್ಚಕರಾಗಿದ್ದರೆಂಬ ಪ್ರತೀತಿ ಇದೆ (ಸಂ), ಆಚಾರವಂತರು.

ಅರ್ಚಕರ ಸ್ತ್ರೀ ವರ್ಗದವರು ದೇವಿಯ ಗರ್ಭಗುಡಿ ಪ್ರವೇಶಿಸುವುದನ್ನು ಸಂಪ್ರದಾಯದ ಪ್ರಕಾರ ನಿಷೇಧಿಸಲಾಗಿದೆ.

ಈ ದೇವಾಲಯದಲ್ಲಿ ಪೂಜಾ ವಿಧಾನ ಮಂತ್ರ ಕ್ರಿಯಾದಿಗಳಲ್ಲಿ ಪಾರಂಗತವಾದುದಲ್ಲ. ಈ ಪೂಜೆ ಆಗಮತತ್ತ್ವಗಳಿಗನುಸಾರವಾಗಿಯಾಗಲಿ, ಶಾಕ್ತಪದ್ಧತಿಯಂತಾಗಲಿ, ತಾಂತ್ರಿಕ ತತ್ವಗಳನ್ನು ಅನುಸರಸಿಯಾಗಲಿ ನಡೆಯದೆ ಸ್ಥಳೀಯ ಪದ್ಧತಿಗಳನ್ನನುಸರಿಸಿ ಸಾಂಪ್ರದಾಯಿಕವಾಗಿ ನಡೆದು ಬಂದಿದೆ.

ಸಂಪ್ರದಾಯದಂತೆ ಶ್ರೀದೇವಿಯ ಮಜ್ಜನ ಹಾಗೂ ಅಭಿಷೇಕಗಳನ್ನು, ಎಣ್ಣೆ ಹೊಂಡದಿಂದ ತಂದ ಪವಿತ್ರ ಜಲದಿಂದ ಪ್ರತಿದಿವಸ ಎರಡು ಸಲ ಮಾಡಲಾಗುವುದು; ಬಣ್ಣ-ಬಣ್ಣದ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುವುದು. ಮುಂಜಾನೆ ಹಾಗೂ ಸಾಯಂಕಾಲ ದೇವಿಗೆ ಆರತಿ ಮಾಡಲಾಗುವುದು.

ನಿತ್ಯ ನೈವೇದ್ಯವನ್ನು ಸ್ವತಃ ಅರ್ಚಕರೇ ತಯಾರಿಸಿ ದೇವಿಗೆ ಅರ್ಪಿಸುವರು. ಭಕ್ತರಿಂದ ಬಂದ ಉತ್ಪನ್ನ, ಶಿಖರಕ್ಕೆ ಬಂದ ಕಾಣಿಕೆಗಳು ಮತ್ತು ಪರಶುರಾಮ ದೇವಾಲಯಕ್ಕೆ ಬಂದ ಕಾಣಿಕೆಗಳು – ಇವುಗಳಿಂದಲೇ ಅರ್ಚಕರು ದೇವಿಯ ನಿತ್ಯನೈವೇದ್ಯದ ಖರ್ಚನ್ನು ನೋಡಿಕೊಳ್ಳುವರು. ಅನ್ನ, ಬೇಳೆ, ಪಲ್ಯ ಇವುಗಳನ್ನು ದೇವಿಯ ನೈವೇದ್ಯಕ್ಕಾಗಿ ಅರ್ಪಿಸಲಾಗುವುದು. ಮುಂಜಾನೆ ದೇವಿಯ ಪೂಜೆಯ ನಂತರ, ಪ್ರಸಾದ ನೈವೇದ್ಯ ಅರ್ಪಿಸಿ, ಅನಂತರ ಪಂಚಾಮೃತ ನೈವೇದ್ಯವನ್ನು ಸಮರ್ಪಿಸಲಾಗುವುದು. ಆದರೆ ಸಾಯಂಕಾಲದ ಪೂಜೆಯ ನಂತರ, ಕೇವಲ ಪ್ರಸಾದ ನೈವೇದ್ಯ ಅರ್ಪಿಸಲಾಗುವುದು. ಆಗ ದೇವಿಗೆ ತಾಂಬೂಲ ನೀಡಲಾಗುವುದು.[2]

ಕುಂಕುಮ-ಭಂಡಾರ ಇವುಗಳನ್ನು ದೇವಿಯ ಪೂಜೆಗಾಗಿ ವಿಶೇಷವಾಗಿ ಉಪಯೋಗಿಸಲಾಗುವುದು.

ಶ್ರಾವಣ ಮಾಸದಲ್ಲೆಲ್ಲ ಯಥಾ ಪ್ರಕಾರ ದೇವಿಯ ಪೂಜಾದಿಗಳು ನಡಯುವವು; ಪ್ರತಿದಿನ ಬೆಳಗಿನ ಮೂರು ಗಂಟೆಯಿಂದಲೇ ಪ್ರಾರಂಭವಾದ ದೇವಿಯ ಮಹಾಪೂಜೆ, ಪಂಚಾಮೃತಾಭಿಷೇಕ-ಮಹಾನವೇದ್ಯಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.

ಇತರ ಹುಣ್ಣಿಮೆಗಳಲ್ಲಿ ದೇವಿಯ ಪೂಜೆ-ಅಭಿಷೇಕಗಳು ನಡೆಯುವವು. ಆದರೆ ನವರಾತ್ರಿಯಲ್ಲಿ ಪ್ರತಿ ದಿನ ದೇವಿಯನ್ನು ಸರ್ವಾಲಂಕಾರ ಭೂಷಿತಳನ್ನಾಗಿ ಅಲಂಕರಿಸಿ, ಮಹಾಪೂಜೆ-ದೇವಿಯ ಪಾರಾಯಣ ನಡೆಸಲಾಗುವುದು. ದೀಪಾವಳಿ ಹಬ್ಬದಲ್ಲಿ ಹಾಗೂ ಅಶ್ಚಿಜ ಬಹುಳ ಚತುರ್ದಶಿಯಲ್ಲಿ ಬೆಳಗಿನ ನಾಲ್ಕು ಗಂಟೆಯಿಂದ ವಿಶೇಷ ಪೂಜೆ-ನೈವೇದ್ಯ.[3]

ಪ್ರತಿನಿತ್ಯವೂ ಎಲ್ಲಮ್ಮ ದೇವಿಯ ಪೂಜಾ ಕಾಲಕ್ಕೆ ಅರ್ಚಕರು ಬೆಳ್ಳಿಬಟ್ಟಲು ತುಂಬ ಗಂಧ ಅರೆದು-ದೇವಿಯ ಹಣೆಯ ತುಂಬ ಲೇಪಿಸುವರು. ಭಕ್ತರು ಕೇಳಿದಾಗ ಆಶೀರ್ವಾದ ಮಾಡುವಾಗ ಈ ನೊಸಲು ಗಂಧ ಕೊಡುವ ಸಂಪ್ರದಾಯವಿದೆ. (ಹಿರೇಮಠ, ೪೭).

ಪೂಜೆಯ ವೈವಿಧ್ಯತೆಗಳು:

) ‘ಉಡಿಗೆಉಡಿಸುವಿಕೆ:
ಪ್ರತಿ ದಿವಸ ಎಲ್ಲಮ್ಮ ದೇವಿಯ ಮಜ್ಜನ ಮಾಡಿಸಿದ ನಂತರ, ಅರ್ಚಕರು ಭಕ್ತಿಯಿಂದ, ದೇವಿಗೆ ಎರಡೂ ಹೊತ್ತು ಮಡಿಯಾಗಿದ್ದ ಪತ್ತಲುಗಳನ್ನೇ ಉಡಿಸುವರು. ಭಕ್ತರ ಇಷ್ಟಾನುಸಾರ, ಅರ್ಚಕರು ದೇವಿಗೆ ಬಣ್ಣ ಬಣ್ಣದ ಸೀರೆ-ಪತ್ತಲು-ಪೀತಾಂಬರಗಳನ್ನು ಉಡಿಸಿ ಅವಳನ್ನು ತೃಪ್ತಿಗೊಳಿಸುವರು. ಒಂದೊಂದು ದಿನ ಸಾವಿರಾರು ಪತ್ತಲುಗಳನ್ನು ಜೋಡಿಸಿ ಉಡಿಸುವರು. ಅನೇಕ ಸುಳುವು, ಹೂ, ಮಹಲು, ಮಂದಿರ ಇನ್ನೂ ಮುಂತಾದ ವರ್ಣಾತೀತ ರೀತಿಯಲ್ಲಿ ಸೀರೆಗಳನ್ನು ಉಡಿಸುವ ಕಲೆಯಲ್ಲಿ ಕುಶಲರು. ಇವೆಲ್ಲ ಪತ್ತಲುಗಳು ಭಕ್ತರ ಕಾಣಿಕೆಗಳು, ಒಮ್ಮೆ ಉಡಿಸಿದ ಸೀರೆಯನ್ನು ದೇವಿಗೆ ಮತ್ತೊಮ್ಮೆ ಉಡಿಸದೇ ಇರುವುದು ಇಲ್ಲಿಯ ಪೂಜೆಯ ವೈಶಿಷ್ಟ್ಯ.

) ಪಲ್ಲಕ್ಕಿ ಸೇವೆ:
ಪ್ರತಿ ಮಂಗಳವಾರ, ಶುಕ್ರವಾರ. ಹುಣ್ಣಿಮೆಯ ದಿನ ಹಾಗೂ ಮಹಾನವಮಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಪ್ರಾಕಾರದ ಸುತ್ತಲೂ ಮೆರೆಸಲಾಗುವುದು. ಎಲ್ಲಮ್ಮ ದೇವಿಯ ಸಧ್ಯದ ಉತ್ಸವ ಮೂರ್ತಿ ಶುದ್ಧ ಬೆಳ್ಳಿಯದು. ಆದರೆ ತೂಕ ೧೫ ಕಿಲೋ; ಹುಬ್ಬಳ್ಳಿಯ ಗೋಪಾಲಕೃಷ್ಣ ಸವಣೂರ ಎಂಬವರು ಇದನ್ನು ಮಾಡಿಸಿ ದಾನವಾಗಿ ಕೊಟ್ಟಿದ್ದಾರೆ.

ವಿಜಯದಶಮಿಯ ದಿನ, ಎಲ್ಲಮ್ಮನಗುಡಿಯಿಂದ ಪಲ್ಲಕ್ಕಿ ಹೊರಟು, ಜಮದಗ್ನಿ ಗುಡಿಗೆ ಬಂದು, ನಂತರ ಉಗರಗೋಳ ಸಮೀಪದ ಬನ್ನಿಮಹಾಂಕಾಳಿ ಕಟ್ಟೆಗೆ ಹೋಗಿ ಮರಳುತ್ತದೆ.

ಬನದ ಹುಣ್ಣಿಮೆಯ ದಿನ ಜಮಖಂಡಿಯ ಭಕ್ತರು ಆಗಮಿಸಿ, ತಾವು ತಂದ ಎರಡೂ ಪಲ್ಲಕ್ಕಿಗಳನ್ನು ಪೌಳಿಯಲ್ಲಿ ಪ್ರದಕ್ಷಿಣೆ ಹಾಕಿಸಿ, ನಂತರ ತಾವು ಇಳಿದುಕೊಂಡ ಸ್ಥಳಕ್ಕೆ ಒಯ್ಯುವರು.

ಈ ಪಲ್ಲಕ್ಕಿ ಉತ್ಸವ ಸೇವೆ ವರ್ಷಾನುವರ್ಷ ನಡೆಯುವುದು. ಆದರೆ ರಂಡಿ ಹುಣ್ಣಿಮೆಯಿಂದ ಮುತ್ತೈದೆ ಹುಣ್ಣಿಮೆ ವರೆಗೆ ಮಾತ್ರ ಪಲ್ಲಕ್ಕಿ ಸೇವೆ ನಡೆಯುವುದಿಲ್ಲ.

) ಬೆತ್ತಲೆ ಸೇವೆ:
ಗೌರೀ ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಇಲ್ಲಿಯ ಅರ್ಚಕರು, ಶ್ರೀ ದೇವಿಗೆ “ಬೆತ್ತಲೆ ಸೇವೆ” ಸಲ್ಲಿಸುವರು. ಇದಕ್ಕೆ “ಬೆತ್ತಲೆ ಹುಟ್ಟಿಗೆ” ಎಂದು ಹೆಸರು. ಆ ದಿನ ಪ್ರತಿಯೊಂದು ಅರ್ಚಕ ಮನೆತನದಿಂದ ಒಬ್ಬೊಬ್ಬರು “ಬೆತ್ತಲೆ ಸೇವೆ” ಸಲ್ಲಿಸುವ ನಿಮಿತ್ತದಿಂದ ಬಂದು, ಮೊದಲು ಎಣ್ಣಿಗೊಂಡದಲ್ಲಿ ಸ್ನಾನ ಮಾಡಿ, ಅಲ್ಲಿಂದ ನೇರವಾಗಿ ಬೆತ್ತಲೆಯಾಗಿಯೇ ದೇವಿಯ ಗುಡಿಗೆ ಬಂದು, ಗುಡಿಯ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಗುಡಿಯೊಳಗೆ ಪ್ರವೇಶಿಸಿ, ಶ್ರೀದೇವಿಗೆ ನಮಸ್ಕರಿಸುವರು. ಈ ಸಂದರ್ಭದಲ್ಲಿ ಎಣ್ಣಿಗೊಂಡದಿಂದ ಹಿಡಿದು ಗುಡಿಯ ಸುತ್ತಲಿನ ವರೆಗಿನ ಎಲ್ಲ ವಿದ್ಯುದ್ದೀಪಗಳನ್ನು ಆರಿಸಲಾಗುತ್ತದೆ.[4]

) ದೇವಿಯನ್ನು ಮಾತನಾಡಿಸಲು ಬರುವದು:
ಅಕ್ಕಪಕ್ಕದ ಹಳ್ಳಿಯ ಹಾಗೂ ನಿಷ್ಠಾವಂತ ಭಕ್ತರು ರಂಡಿ ಹುಣ್ಣಿಮೆಯಾದ ತರುವಾಯ, ದೇವಿಯನ್ನು ಮಾತನಾಡಿಸಲು ಬರುವರು. ಅವರು ಪಕ್ವಾನ್ನದ ಅಡಿಗೆ ತಂದು ನೈವೇದ್ಯ ಸಲ್ಲಿಸುವರು.

) ದೇವಿಯನ್ನು ಒಳಗೆ ಕರೆದುಕೊಳ್ಳುವದು:
ಭಾರತ ಹುಣ್ಣಿಮೆಯ ದಿವಸ, ದೇವಿಯನ್ನು ಒಳಗೆ ಕರೆದುಕೊಳ್ಳುವ ಕಾರ್ಯಕ್ರಮ ಏರ್ಪಡಿಸಲಾಗುವುದು. ದೇವಿಯ ಎದುರಿಗೆ ಹೊರಭಾಗದಲ್ಲಿದ್ದ ಚಂದ್ರಶಾಲೆಯಲ್ಲಿಯ ಆಮೆ (ಪಾದಗಟ್ಟೆ) ಯನ್ನು ಪೂಜಿಸಿ, ನಂತರ ದೇವಿಯನ್ನು ಒಳಗೆ ಕರೆದುಕೊಳ್ಳುವರು. ಇದೇ ಮುತ್ತೈದೆ ಹುಣ್ಣಿಮೆಯೆಂದು ಕೆಲವರು ಭಾವಿಸುವರು.[5]

) ಮಹಾ ನೈವೇದ್ಯ:
ಮಹಾನೈವೇದ್ಯವೆಂದರೆ- “ಹೋಳಿಗೆ. ತುಪ್ಪ, ಹಾಲು, ಮೊಸರು, ಅಕ್ಕಿ ಪಾಯಸ, ಅನ್ನ, ಒಡೆ, ಗಾರಿಗೆ, ಶಾವಿಗೆ, ಕಡುಬು, ಕರ್ಚಿಕಾಯಿ, ಬೇರೆ ಬೇರೆ ಪ್ರಕಾರದ ಉಂಡಿಗಳು ಹಾಗೂ ಸಂಡಿಗೆ. ಹಪ್ಪಳ” ಮುಂತಾದವುಗಳನ್ನು ಅರ್ಚಕರು ತಮ್ಮ ತಮ್ಮ ಇಚ್ಛಾನುಸಾರ ತಯಾರಿಸಿ ದೇವಿಗೆ ಅರ್ಪಿಸುವರು. ಚೈತ್ರ ಶುದ್ಧ ಪ್ರತಿಪದೆಯಂದು, ಅರ್ಚಕರು ಶ್ರೀದೇವಿಗೆ ಮಹಾನೈವೇದ್ಯ ಅರ್ಪಿಸಿ, ಕಳಸ ಪೂಜೆ ಮಾಡಿ, ದೇವಿಗೆ ಮತ್ತೆ ಮುತ್ತೈದೆತನ ಬರುವುದರ ಮುನ್ಸೂಚನೆ ತಿಳಿಸುವರು.

) ಹೆಡಿಗೆ ಒಯ್ಯುವುದು:
ಅರ್ಚಕರು ವರ್ಷದಲ್ಲಿ ಎರಡು ಸಲ ಎಲ್ಲಮ್ಮ ದೇವಿಗೆ ಹೆಡಿಗೆ ಒಯ್ಯುವರು. ಯುಗಾದಿ ಪಾಡ್ಯಕ್ಕೆ ಒಮ್ಮೆ, ಕಾರ್ತಿಕದಲ್ಲಿ ಚತುರ್ದಶಿಗೆ ಒಮ್ಮೆ. ಹೆಡಿಗೆ ತಯಾರಿಸುವ ಮುನ್ನಾದಿನ. ಮುಚ್ಚಂಜೆಯಲ್ಲಿಯೇ ಹೆಡಿಗೆಯ ಸಿದ್ಧತೆ ಪ್ರಾರಂಭವಾಗಿ. ಬೆಳಗಿನ ನಾಲ್ಕು ಗಂಟೆಗೆ ಮುಗಿಯುವುದು. ಬಗೆ ಬಗೆಯ ಪಕ್ವಾನ್ನ ತಯಾರಿಸಿ. ಬೆಳಗಿನ ಜಾವದಲ್ಲಿಯೇ ಹೆಡಿಗೆ ತುಂಬಿ. ಹೊಸ ಬಟ್ಟೆಗಳನ್ನು ಧರಿಸಿ. ಗಂಡು ಮಕ್ಕಳೇ ಹೆಡಿಗೆ ಹೊತ್ತು ಶ್ರೀದೇವಿಗೆ ತರುವರು.

) ಕಂಕಣ ಮಂಗಲೋತ್ಸವ:
ದವನದ ಹುಣ್ಣಿಮೆಯ ಹಿಂದಿನ (ಚತುರ್ದಶಿ) ದಿನ, ದೇವಿಯ ಕಂಕಣೋತ್ಸವ ಮಂಗಲೋತ್ಸವಗಳನ್ನು ಚಿತ್ತಾ ನಕ್ಷತ್ರದಲ್ಲಿಯೇ ನೆರವೇರಿಸಲಾಗುವುದು. ಇದರ ಅರ್ಥ ಮತ್ತೆ ಆ ದಿವಸ ಅವಳು ಮುತ್ತೈದೆಯಾದಳೆಂದು. ಅಂದು ದೇವಿಯ ಶಾಂತಿಗಾಗಿ ಹೋಮಕಾರ್ಯ ನಡೆಯುವುದು.

ರಂಡಿ ಹುಣ್ಣಿಮೆಯ ದಿವಸ ದೇವಿಯ ಗುಡಿಯಲ್ಲಿ ಯಜ್ಞಕಾರ್ಯ ಹಾಗೂ ದವನದ ಹುಣ್ಣಿಮೆಯ ದಿನದ ಹೋಮಕಾರ್ಯಗಳನ್ನು ಹೂಲಿಯ ಸಿದ್ಧಾಂತಿಗಳಾದ ಶಿವಶಂಕರ ಶಿವಾಚಾರ್ಯ ಶಾಸ್ತ್ರಿಗಳು ನೆರವೇರಿಸುವರು. ಮುತ್ತೈದೆಯ ಉಡಿ ತುಂಬಲು ಸೀರೆ, ಕುಪ್ಪಸ ಇತ್ಯಾದಿ ಹರಳ ಕಟ್ಟಿ ದೈವದವರು ತರುವರು.

ಕೆಲವು ಭಕ್ತರು ಹಾಗೂ ಅರ್ಚಕರು ರಂಡಿ ಹುಣ್ಣಿಮೆಯಿಂದ ಮುತ್ತೈದೆ(ದವನದ) ಹುಣ್ಣಿಮೆ ವರೆಗೆ ಯಾವ ಶುಭ ಕಾರ್ಯಗಳನ್ನೂ ಮಾಡದಿರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ.[6]

) ಪ್ರಸಾದ ವ್ಯವಸ್ಥೆ
ಟ್ರಸ್ಟಿನವರು ಪ್ರತಿ ದಿನ ಎರಡು ಸಲ ಪ್ರಸಾದಕ್ಕಾಗಿ ಬಾಳೆಹಣ್ಣು, ತೆಂಗಿನಕಾಯಿ, ಕಲ್ಲುಸಕ್ಕರೆ, ಕೇರಬೀಜ, ದ್ರಾಕ್ಷಿ, ಗಂಧದೆಣ್ಣೆ, ಎಳ್ಳೆಣ್ಣೆ, ಜೇನುತುಪ್ಪ, ಆಕಳ ತುಪ್ಪ, ಗೋಡಂಬಿ, ಆಕಳಹಾಲು, ಕಾರೀಕ ಮುಂತಾದ ಸಾಮಗ್ರಿಗಳನ್ನು ಅರ್ಚಕರಿಗೆ ಕೊಡುವರು. ಅಂದರೆ ಅಭಿಷೇಕಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಪ್ರತಿ ದಿವಸ ಟ್ರಸ್ಟ ವತಿಯಿಂದ ಕೊಡಲಾಗುವುದು. ಆದರೆ ನಿತ್ಯ ನೈವೇದ್ಯಕ್ಕಾಗಿ ಬೇಕಾದ ಖರ್ಚಿನ ಹಣವನ್ನು ಟ್ರಸ್ಟಿನಿಂದ ಕೊಡುವುದಿಲ್ಲ. ಉಳಿದೆಲ್ಲ ದಿನಗಳಲ್ಲಿ ಕಡಿಮೆ ಪ್ರಮಾಣದಲ್ಲಿರುವುದಾದರೂ ನವರಾತ್ರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದ ಸಾಮಗ್ರಿಗಳು ಬೇಕಾಗುವವು. ಉಪವಾಸವಿರುವವರಿಗೆಲ್ಲ ಪ್ರಸಾದ ತಲುಪಿಸಬೇಕಾಗುವುದರಿಂದ ಹೆಚ್ಚು ಬೇಕಾಗುವದು.

೧೦) ದೇವಿಗೆ ಹಾಸಿಗೆ ಸೇವೆ:
ಪ್ರತಿ ದಿವಸ ರಾತ್ರಿ ಸುಮಾರು ಎಂಟೂವರೆ ಗಂಟೆಗೆ ದೇವಿಯ ಗರ್ಭಗುಡಿಯನ್ನು ಶುಚಿಗೊಳಿಸಿ, ನಂತರ ಗುಡಿಯ ಬಾಗಿಲುಗಳನ್ನೆಲ್ಲ ಹಾಕಿ, ಗರ್ಭಗುಡಿಯಲ್ಲಿ ಕರ್ಪೂರ, ಊದಬತ್ತಿ ಮೊದಲಾದವುಗಳನ್ನು ಹಚ್ಚಲಾಗುವುದು. ಅನಂತರ ಗರ್ಭಗುಡಿಯಲ್ಲಿದ್ದ ಮಂಚವನ್ನು ಅವಳಿಗೆ ಶಯನಕ್ಕಾಗಿ ಅಲಂಕರಿಸಲಾಗುವುದು. ಹಾಸಿಗೆಯ ಹತ್ತಿರ ಕೇವಲ ಒಂದು ತಂಬಿಗೆ ನೀರು, ಲೋಟಾ, ಎಲೆ ಅಡಿಕೆಗಳನ್ನು ಇಡಲಾಗುವುದು. ಗರ್ಭಗುಡಿಯಲ್ಲಿದ್ದ ವಿದ್ಯುದ್ದೀಪಗಳನ್ನು ಆರಿಸಲಾಗುವುದು. ಇದಕ್ಕೆ ಬದಲಾಗಿ ದೇವಿಯ ಮಂಚದ ಎರಡೂ ಬದಿಗಳಲ್ಲಿ ಎರಡು ಸಮೆಗಳನ್ನು ಇಡಲಾಗುವುದು.

ಹೀಗೆ ಎಲ್ಲಮ್ಮನ ಜಾತ್ರೆ ಪೂಜೆ ವೈವಿಧ್ಯಮಯವಾಗಿ ವೈಭವಪೂರ್ಣವಾಗಿ ಜರುಗುತ್ತದೆ. ಈ ವೈವಿಧ್ಯಗಳ ಹಿಂದಿರುವ ಅರ್ಥವನ್ನು ವಿದ್ವಾಂಸರು ಇನ್ನೂ ವಿಶ್ಲೇಷಿಸಬೇಕಾಗಿದೆ.

* * *[1]

[2]      ಈ ವಿಷಯವನ್ನು ತಿಳಿಸಿದವರು ವಿಶ್ವನಾಥಗೌಡ್ರು ಗೋವಿಂದಗೌಡ್ರು ರೇಣಕಿಗೌಡ್ರ ಇವರ ವಯಸ್ಸು ೬೭ ವರ್ಷ ಇವರು ಎಲ್ಲಮ್ಮ ದೇವಿಯ ಅರ್ಚಕರು.

[3]     ಈ ವಿಷಯವನ್ನು ತಿಳಿಸಿದವರು, ಎಲ್ಲಪ್ಪ ಬಸವಣ್ಣೆಪ್ಪ ಬೆಳೇಬಾರ. ಇವರ ವಯಸ್ಸು ೬೮ ವರ್ಷ. ಇವರು ಎಲ್ಲಮ್ಮ ದೇವಿಯ ಪ್ರವಚನಕಾರರು.

[4]      ಈ ವಿಷಯವನ್ನು ತಿಳಿದವರು, ಶಿವನಗೌಡ್ರು ಗಂದಿಗವಾಡ ಇವರ ವಯಸ್ಸು ೫೦ ವರ್ಷ ಹಾಗೂ ಎಲ್ಲಪ್ಪಗೌಡ್ರು ರಾಮನಗೌಡ್ರು ಚೆನ್ನಪ್ಪಗೌಡ್ರು ಇವರ ವಯಸ್ಸು ೩೫.

[5]      ಇದನ್ನು ತಿಳಿಸಿದವರು , ಎಲ್ಲಪ್ಪ ಬಸವಣ್ಣೆಪ್ಪ ಬೆಳೇಬಾರ, ಇವರ ವಯಸ್ಸು ೬೮ ವರ್ಷ.

[6]      ಕೃತಯುಗದ ನಾಲ್ಕು ದಿವಸ ರೇಣುಕಾ ಮಾತೆಗೆ ಒದಗಿದ ವಿಧವಾ ವಿಯೋಗವು; ಅದು ಈ ಕಲಿಯುಗದಲ್ಲಿ (ಹೊಸ್ತಿಲ ಹುಣ್ಣಿಮೆಯಿಂದ ದವನದ ಹುಣ್ಣಿಮೆಯ ವರೆಗೆ) ನಾಲ್ಕು ತಿಂಗಳುಗಳಾಗಿ ಪರಿವರ್ತಿಸಲ್ಪಟ್ಟಿದೆ ಎಂದು ಭಕ್ತರು ನಂಬಿದ್ದಾರೆ. -ಕೆ.ಎಸ್‌.ಕುಲಕರ್ಣಿ-ಶ್ರೀ ರೇಣುಕೆಯ ಕಥೆ- ೧೯೫೪