ಮೂಲತಃ ದೇವರ ಸೇವೆಗಾಗಿ, ಆರಾಧನೆಗಾಗಿ ತಮ್ಮನ್ನು ತಾವೇ ಸ್ವ ಇಚ್ಛೆಯಿಂದ ಸಮರ್ಪಿಸಿಕೊಂಡವರು ದೇವದಾಸಿಯರು. ಇವರು ದೇವಸ್ಥಾನವನ್ನು ಚೊಕ್ಕಟವಾಗಿಡುವ, ದೀಪಗಳನ್ನು ಶುಚಿಗೊಳಿಸುವ, ಚಾಮರ ಬೀಸುವ ಇತ್ಯಾದಿ ಕೆಲಸಗಳನ್ನು ವಹಿಸಿಕೊಂಡರು. ದೇವರ ಜೊತೆಗೇ ವಿವಾಹವಾದ ಕಾರಣ ಆಜನ್ಮ ಬ್ರಹ್ಮಚಾರಿಣಿಯರಾಗಿ ಉಳಿಯುತ್ತಿದ್ದರು. ದೇವಸ್ಥಾನದ ಎಲ್ಲ ಧಾರ್ಮಿಕ ವಿಧಿ-ವಿಧಾನಗಳಲ್ಲಿ, ನಿತ್ಯಾರ್ಚನೆಗಳಲ್ಲಿ ಇವರು ಪಾತ್ರವಹಿಸುತ್ತಿದ್ದರು. ಇವರಿಗಾಗಿ ಭೂದತ್ತಿಗಳನ್ನು ನೀಡಲಾಗುತ್ತಿತ್ತು. ದೇವತೆಗೆ ಸಲ್ಲುವ ಕಾಣಿಕೆಗಳಲ್ಲಿ ಪಾಲೂ ಇತ್ತು. ಊರಲ್ಲಿ ನಡೆಯುವ ಎಲ್ಲ ಮಂಗಲಕಾರ್ಯಗಳಲ್ಲಿ ಇವರ ಪ್ರವೇಶ ಶುಭವೆಂದು ನಂಬಲಾಗುತ್ತಿತ್ತು. ಮದುವೆಯಾಗದೇ ಜೀವನವಿಡೀ ದೇವರಸೇವೆಗೆ ಮುಡಿಪಾದ ಇವರ ಬಗ್ಗೆ ಜನರಲ್ಲಿ ಪೂಜ್ಯಭಾವನೆಯಿತ್ತು. ಇವರು ವ್ರತ ತಪ್ಪಿದರೆ ಶಿಕ್ಷೆಯನ್ನೂ ನೀಡುತ್ತಿತ್ತು ಆಗಿನ ಸಮಾಜ.

ಪ್ರಸ್ತುತ ನನ್ನ ಪ್ರಬಂಧ ಎಲ್ಲಮ್ಮ ದೇವಿಯ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಂಡಿರುವರ ಕುರಿತಾಗಿದೆ. ಮೇಲೆ ಹೇಳಿದ ದೇವದಾಸಿಯರು ಮಾಡುವ ಸಂಗೀತ-ನರ್ತನಗಳ ಗಂಧವೂ ಇವರಿಗಿಲ್ಲ, ಅದಕ್ಕಾಗಿ ಕಂಕಣಬದ್ಧರಾದವರೂ ಅಲ್ಲ. ಹೀಗಾಗಿ ಇವರನ್ನು ದೇವದಾಸಿಯರೆಂದು ಎಲ್ಲೂ ಕರೆದಿಲ್ಲ, ಕರೆಯಲೂಬಾರದು. ದೇವರ ಆರಾಧನೆಗಾಗಿ, ಅರ್ಚನೆಗಾಗಿ ತಮ್ಮನ್ನು ಅರ್ಪಿಸಿಕೊಂಡುದರ ಸೂಚಕವಾಗಿ ಮುತ್ತು ಕಟ್ಟಿಸಿಕೊಳ್ಳುವುದರಿಂದ ‘ಮುತ್ತು ಹೊತ್ತವರು’ ಎಂದು ಕರೆಸಿಕೊಳ್ಳುತ್ತಾರೆ. ಇವರನ್ನು ಮೂರು ಭಾಗಗಳನ್ನಾಗಿ ಅಭ್ಯಾಸದೃಷ್ಟಿಯಿಂದ ಮಾಡಿಕೊಳ್ಳಬಹುದು.

೧) ಮುತ್ತುಹೊತ್ತು ಮದುವೆ ಮಾಡಿಕೊಳ್ಳುವವರು,

೨) ಮುತ್ತಿನ ಜೊತೆಗೆ ಕೊಡ, ಜಗ, ಪಡಲಿಗೆಗಳನ್ನು ಹೊತ್ತ ಜೋಗತಿಯರು,

೩) ಮುತ್ತು ಹೊತ್ತು ಮದುವೆಯಾಗದೇ ಪುರುಷಸಂಬಂಧವನ್ನು ಇಟ್ಟುಕೊಳ್ಳುವವರು.

ಮೊದಲನೆಯ ವಿಭಾಗದವರು ದೇವತಾರಾಧನೆಯ, ಸರ್ವಾರ್ಪಣದ ಸೂಚಕವಾಗಿ ಮುತ್ತುಹೊತ್ತು ಗಂಡ-ಮಕ್ಕಳು-ಸಂಸಾರ ನಡೆಸಿಕೊಂಡು ಹೋಗುವವರು. ಇವರಲ್ಲಿ ಬಹುಜನರಿಗೆ ಎಲ್ಲಮ್ಮ ಮನೆದೇವತೆ. ಆಕೆಯನ್ನು ಮಂಗಳವಾರ, ಗುರುವಾರ ಶುಕ್ರವಾರ ಪೂಜಿಸಿ, ಕೆಲವು ವ್ರತ-ನಿಯಮಗಳನ್ನು ಪಾಲಿಸುತ್ತಾರೆ. ವರ್ಷಕ್ಕೊಮ್ಮೆ ಗುಡ್ಡಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು, ಪಡಲಿಗೆ ತುಂಬಿಸಿ ಬರುತ್ತಾರೆ. ಹಲವಾರು ದೇವಾನುದೇವತೆಗಳಿಗೆ ಉಳಿದವರು ನಡೆದುಕೊಳ್ಳುವಂತೆ ಇವರು ಎಲ್ಲಮ್ಮನಲಿಗೆ ನಡೆದುಕೊಳ್ಳುತ್ತಾರೆ ಅಷ್ಟೆ. ಧಾರ್ಮಿಕ ಭಾವನೆಯನ್ನು ಇವರು ಬೆಳೆಸುತ್ತಾರೆಯೇ ವಿನಃ ಅಚ್ಚಳಿಯದ ಯಾವುದೇ ಪರಿಣಾಮಗಳನ್ನು ಸಮಾಜ ಜೀವನದಲ್ಲಿ ಉಂಟು ಮಾಡುವುದಿಲ್ಲ. ಕಾರಣ ಅವರನ್ನು ಈ ಪ್ರಬಂಧದಲ್ಲಿ ಕೈಬಿಡಲಾಗಿದೆ.

ಎರಡನೆಯ ವಿಭಾಗಕ್ಕೆ ಸಂಬಂಧಪಟ್ಟಂತೆ ಜೋಗತಿಯರು ಹೆಂಗಸಾಗಿದ್ದರೆ ಜೋಗಮ್ಮನೆಂದು, ಗಂಡಸಾಗಿದ್ದರೆ ಜೋಗಪ್ಪನೆಂದು ಕರೆಸಿಕೊಳ್ಳುತ್ತಾರೆ. ಒಂಟಿಯಾಗಿ ಅಥವಾ ಮೇಳಗಳನ್ನು ಕಟ್ಟಿಕೊಂಡು ಶ್ರುತಿಚೌಡಿಕೆಗಳನ್ನು ಹಿಡಿದು, ಎಲ್ಲಮ್ಮನ ಗುಣಗಾನ ಮಾಡುತ್ತಾ ಅವಳ ಪವಾಡಗಳನ್ನು – ಮಹಾತ್ಮೆಗಳನ್ನು ಹಾಡಿ-ಕುಣಿದು ಜನರನ್ನು ಶಕ್ತಿಪಂಥದತ್ತ ಹೊರಳಿಸುವ ಕಾರ್ಯ ಮಾಡುತ್ತಾರೆ. ಆಚರಣೆಯ ದೃಷ್ಟಿಯಿಂದ ಇವರು ಧಾರ್ಮಿಕ ಭಿಕ್ಷುಕರು. ಈ ಗುಂಪಿನಲ್ಲಯೇ ಹುಟ್ಟಿನಿಂದ ನಪುಂಸಕರಾದವರು, ಉಭಯಲಿಂಗಿಗಳು, ದೇವತೆಯ ಹೆಸರಿನಲ್ಲಿ ನಿರ್ವೀರ್ಯರಾಗಿ ಸ್ತ್ರೀತ್ವವನ್ನು – ಪುರುಷತ್ವವನ್ನು ನಟಿಸುವವರು, ಬ್ರಹ್ಮಚಾರಿ -ಬ್ರಹ್ಮಚಾರಿಣಿಯರು ಸೇರಿಕೊಳ್ಳುತ್ತಾರೆ.

ಮೂರನೆಯ ವಿಭಾಗದಲ್ಲಿ ಜೋಗತಿಯರಾಗಿ ಪುರುಷ ಸಂಬಂಧವನ್ನಿಟ್ಟು ಕೊಂಡವರು ಹಾಗೂ ‘ಎಲ್ಲಮ್ಮನ ಬಸವಿಯರು’ ಎಂದು ಕರೆಸಿಕೊಂಡಲು ಒಬ್ಬನೊಟ್ಟಿಗೆ ಅಥವಾ ಹಲವರೊಟ್ಟಿಗೆ ದೇಹಸಂಪರ್ಕವನ್ನು ಇಟ್ಟುಕೊಂಡವರು ಸೇರುತ್ತಾರೆ. ಈ ರೀತಿ ಜೋಗತಿಯರಾಗುವುದಕ್ಕೆ ಇಂಥದೇ ಜಾತಿ-ಪಂಥ-ವರ್ಗಗಳಿಗೆ ಸೇರಿದವರಿರಬೇಕೆಂಬ ನಿಯಮವಿಲ್ಲ. ಹೀಗಿದ್ದರೂ ದಲಿತ ಜನಾಂಗದವರೇ ಅದರಲ್ಲಿಯೂ ಹರಿಜನರೇ ಹೆಚ್ಚಾಗಿ ಈ ರೀತಿ ಜೋಗತಿಯರಾಗುವುದು ಕಂಡುಬಂದಿದೆ. ಪುರುಷ ಸಂಬಂಧವನ್ನಿಟ್ಟುಕೊಳ್ಳುವುದು, ಉಳಿದೆಲ್ಲ ಜಾತಿಯ ಜೋಗತಿಯರಿಗೆ ಐಚ್ಚಿಕವಾದರೆ ಹರಿಜನರಿಗೆ ಕಡ್ಡಾಯ. ಹೀಗಾಗಿ ಎಲ್ಲ ಜೋಗತಿಯರನ್ನು ಸೂಳೆಯರೆಂಧು ಕರೆಯುವಂತಿಲ್ಲ ಎಂಬುದನ್ನು ಗಮನಿಸಬೇಕು.

ಧಾರ್ಮಿಕ ಪರಿಣಾಮಗಳು:

ಧರ್ಮದ ಹೆಸರಿನಲ್ಲಿ ಮುಗ್ಧೆಯರನ್ನು ಶೋಷಿಸಲು ಬೆಳೆದುಬಂದ ಈ ಸಂಪ್ರದಾಯ ಎಲ್ಲಮ್ಮದೇವಿಯ ಮಹಿಮೆಯನ್ನು ಬಿತ್ತರಿಸಲಿಕ್ಕಾಗಿಯೇ ಹುಟ್ಟಿಕೊಂಡದ್ದು. ಎಲ್ಲಮ್ಮದೇವಿ ಉಗ್ರ ಎಂದು ಸಾರುವುದಕ್ಕಾಗಿಯೇ ಅನೇಕ ಪವಾಡಗಳನ್ನು, ಕಥೆಗಳನ್ನು ಲೀಲಾಜಾಲವಾಗಿ ಸೃಷ್ಟಿಸಿ ಹಾಡುವುದರಿಂದ ‘ಹೆದರುವವರ ಮೇಲೆ ಕಪ್ಪೆ ಒಗೆದಂತಾಗಿ’ ದೇವಿಯ ಬಗ್ಗೆ, ಧರ್ಮದ ಬಗ್ಗೆ ಇನ್ನಷ್ಟು ಭಯ ಭದ್ರವಾಗಿ ಬೇರೂರಿ ಬಿಡುತ್ತದೆ. ಹೀಗಾಗಿ ಎಲ್ಲಮ್ಮನ ಭಕ್ತರಿಗೆ ಜೋಗತಿಯರ ಬಗ್ಗೆ ಅಪಾರ ಭಕ್ತಿ-ವಿಶ್ವಾಸಗಳಿವೆ. ಸುಗ್ಗಿಯ ಕಾಲದಲ್ಲಿ ಐವರು ಕಣಕ್ಕೆ ಹೋದರೆ ಯಾವ ಒಕ್ಕಲಿಗನೂ ದವಸ-ಧಾನ್ಯ  ಕೊಡದೇ ಇರುವುದಿಲ್ಲ. ಪ್ರತಿವರ್ಷ ಭಾರತಹುಣ್ಣಿಮೆಯಂದು ಹಳ್ಳಿಗರು ಇವರನ್ನು ಮನೆಗೆ ಕರೆದು ಪಡಲಿಗೆ ತುಂಬಿಸುತ್ತಾರೆ. ಎರೆದುಕೊಳ್ಳಲು ಕೊಬ್ಬರಿ ಎಣ್ಣೆ, ಉಡಲು ವಸ್ತ್ರಗಳನ್ನು ಕೊಡುತ್ತಾರೆ. ಇವರು ಎಲ್ಲಮ್ಮನ ಪ್ರತಿನಿಧಿಗಳಾದ್ದರಿಂದ ಗುಡ್ಡಕ್ಕೆ ಹೋಗಲಿಕ್ಕಾಗದವರು ದೇವರಿಗೆ ಸಲ್ಲಿಸುವ ಹರಕೆ-ಮುಡಿಪುಗಳನ್ನು ಇವರ ಕೈಯಲ್ಲಿಯೇ ಕೊಡುತ್ತಾರೆ. ಜೋಗತಿಯರಿಗೆ ಜಡೆಬಂದರಂತೂ ಅವಳು ಸಾಕ್ಷಾತ್‌ದೇವಿಯೇ; ಆಕೆ ಹೇಳಿದುದೇ ವೇದವಾಕ್ಯ. ಅಜ್ಞಾನಿಗಳು ಜೋಗತಿಯರ ಕೈಯಲ್ಲಿ, ಜೋಗತಿಯರು ಪೂಜಾರಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ವ್ಯವಸ್ಥೆಯನ್ನು ಇನ್ನೂ ಸಂಕೀರ್ಣವಾಗಿಸುತ್ತಿದ್ದಾರೆ.

ಇವರು ಸಮಾಜದಲ್ಲಿರುವ ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಧಾರ್ಮಿಕ ಆಚರಣೆಗಳನ್ನು ಬಿಟ್ಟಿರುವುದೇ ಕಾರಣ ಎಂದು ನಂಬಿಸುತ್ತಾರೆ. ಅಲ್ಲದೆ ಇದುವರೆಗೆ ಎಲ್ಲಮ್ಮದೇವಿಯ ಹೆಸರಿನಲ್ಲಿ ಮುತ್ತುಹೊರುವ ಸಂಪ್ರದಾಯ ಇದ್ದು ಅದನ್ನು ಕೈಬಿಟ್ಟಿರುವ ವ್ಯಕ್ತಿ, ಕುಟುಂಬ ಜಾತಿ, ಊರುಗಳಿಗೆ ಕೇಡಾಗುತ್ತದೆ ಎಂಬ  ಮೂಢನಂಬಿಕೆಯನ್ನು ಮುಗ್ಧಜನರ ತಲೆಯಲ್ಲಿ ತುಂಬಿಸಿ ಅವರನ್ನು ಮತ್ತೆ ಈ ಪಾಪಕೂಪಕ್ಕೆ ಎಳೆಯಲು ಸಮರ್ಥವಾಗಿದೆ. ಜೋಗತಿಕ-ಪೂಜಾರಿಗಳ ಈ ವ್ಯವಸ್ಥೆ, ‘ಮುತ್ತು ಕಟ್ಟುವುದು ಒಂದು ಪರಂಪರೆ. ಧಾರ್ಮಿಕ ದೃಷ್ಟಿಯಿಂದ ಮುತ್ತು ಕಟ್ಟಲಾಗುತ್ತದೆ. ಎಷ್ಟೋ ಜನ ಶ್ರೀಮಂತರೂ ಇದರಲ್ಲಿ ಪಾಲುಗೊಂಡಿದ್ದಾರೆ’ ಎಂದು ಒಂದೆಡೆ ಪೂಜಾರಿಗಳು ಹೇಳಿದರೆ, ಇನ್ನೊಂದೆಡೆ ಒಕ್ಕೊರಲಿನಿಂದ ‘ಅಮ್ಮ ಕಾಡುವವರಿಗೆ (ವಿವಿಧ ಚರ್ಮರೋಗಗಳು, ಜಡೆಗಟ್ಟುವುದು ಇತ್ಯಾದಿ) ಐದು ಹೂಗಳನ್ನು ಹಾಕುವ ಸಂಪ್ರದಾಯವನ್ನು ನಾವು ನಡೆಸುತ್ತೇವೆ. ಇದು ವೇಶ್ಯೆಯರನ್ನಾಗಿ ಪರಿವರ್ತಿಸುವ ಕಾರ್ಯವಲ್ಲ; ಧಾರ್ಮಿಕ ಕೆಲಸ ಎಂದು ನಂಬಿಸುವ, ಮತ್ತೊಂದೆಡೆ “ಆ ಸಂಪ್ರದಾಯ ನಿಂತುಹೋಗಿ ಎಷ್ಟೋ ದಿನಗಳಾದವು” ಎಂದು ಹೇಳುತ್ತ ಕಾನೂನಿಗೆ ಅಂಜಿ ಆ ಎಲ್ಲ ದೀಕ್ಷಾ ವಿಧಿಗಳನ್ನು ಗುಟ್ಟಾಗಿ ನೆರವೇರಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳು, ಮಹಾರಾಷ್ಟ್ರದ ಗಡಿಭಾಗದ ಜನರು ಎಲ್ಲಮ್ಮನಿಗೆ ನಡೆದುಕೊಳ್ಳುವುದರಿಂದ ಈ ಪ್ರದೇಶದ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳನ್ನು ಬಲವಂತವಾಗಿ ಈ ಸಂಪ್ರದಾಯಕ್ಕೆ ದೂಡಿ, ಅವರು ಅನ್ನಾನ್ನಗತಿಕರಾಗಿ ಸೂಳೆಯರಾಗಲು, ಮುಂಬೈ-ಪೂನಾ-ಕೊಲ್ಲಾಪುರಗಳ ವೇಶ್ಯಾವಾಟಿಕೆಗಳಲ್ಲಿ ದಿನ ನೂಕಲು ಕಾರಣರಾಗಿದ್ದಾರೆ. ಧಾರ್ಮಿಕ ಪದ್ಧತಿಯ ಹೆಸರು ಹೇಳುತ್ತ ಶ್ರೀಮಂತರು, ಗಣ್ಯವ್ಯಕ್ತಿಗಳ ಕಾಮಪಿಪಾಸೆ, ಕಾಮಲಾಲಸೆಗಳನ್ನು ತಣಿಸಲು ಮುಗ್ಧಜನರನ್ನು ಈ ಪೂಜಾರಿಗಳು ಹಿಂಡುತ್ತಿದ್ದಾರೆ.

ಅಂಧಶ್ರದ್ಧೆ, ಒತ್ತಡ, ಅನಿವಾರ್ಯತೆ, ಆಕರ್ಷಣೆಗಳ ಕಾರಣವಾಗಿ ಹರಿಜನ ಯುವತಿಯರ ಶೋಷಣೆ ಮಾಡುತ್ತಿರುವ ಈ ಸಂಪ್ರದಾಯ ತೊಲಗಬೇಕು ಎಂಬ ಭಾವ ಅನೇ ಕ ಹಿಂದುಳಿದ ವಿದ್ಯಾವಂತರಲ್ಲಿ ಬಂದರೂ ಬ್ರಾಹ್ಮಣರಿಗಿರುವ ಬುದ್ಧಿ (ಸಾಕ್ಷರತೆ), ಕ್ಷತ್ರಿಯರಿಗಿರುವ ಅಧಿಕಾರ (ಖಡ್ಗ ಇತ್ಯಾದಿ ಆಯುಧಗಳು), ವೈಶ್ಯರಿಗಿರುವ ಹಣಬಲ ಇವರಿಗೆ ಇಲ್ಲದೆ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಧರ್ಮದ ಈ ಕಬಂಧ ಬಾಹುವಿನಿಂದ ಹೆಣ್ಣುಗಳನ್ನು ಉಳಿಸಿಕೊಳ್ಳಲಾರದೆ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ. ಸೋದರಿಯರ ಶೋಷಣೆ, ಹೆಜ್ಜೆ ಹೆಜ್ಜೆಗೂ ಪೂಜಾರಿಗಳ ಸುಲಿಗೆ ಈ ಎಲ್ಲ ವ್ಯವಹಾರಗಳನ್ನು ಕಲಂಡ ಅವರ ಮನಸ್ಸು ಜಿಗುಪ್ಸೆಗೊಂಡಿದೆ. ರೊಚ್ಚಿ ಗಿದ್ದಿದೆ. ವಿದ್ಯಾವಂತ ಯುವಕರು ಗುಡ್ಡವನ್ನು ಬಾಂಬ್‌ ಇಟ್ಟು ಸ್ಫೋಟಿಸಬೇಕು ಎನ್ನುತ್ತಾರೆ. ಪೂಜಾರಿಗಳಲ್ಲೊಬ್ಬರು ಹರಿಜನರಿಗೇ ಈ ಕಲಂಕ ತಟ್ಟಿರುವುದನ್ನು ಕಂಡು ರೋಸಿ ಹೋಗಿ ‘ಈ ರೀತಿ ಮಾಡಲು ಹೇಳುವ ಎಲ್ಲಮ್ಮ ಒಬ್ಬ ಹಾದರಗಿತ್ತಿ’ ಎಂದು ಕಿಚ್ಚನ್ನು ಹೊರಹಾಕುತ್ತಾರೆ. ಈ ಎಲ್ಲ ಕ್ರಿಯೆಗಳನ್ನು ಕಂಡ ತಿಳುವಳಿಕೆಯುಳ್ಳವರು ದೇವಿ-ಧರ್ಮಗಳಿಂದ ಜಿಗುಪ್ಸೆಗೊಂಡು ಹೇಸಿಗೆಯ ಭಾವದಿಂದ ದೂರ ಸರಿಯುತ್ತಿದ್ದಾರೆ. ‘ಎಲ್ಲಮ್ಮನ ಜಾತ್ರೆಗ ಮರ್ಯಾದಸ್ಥ ಹೆಣ್ಣುಮಕ್ಕಳು ಹೋಗಬಾರದು’ ಎಂಬ ಭಾವನೆಯನ್ನು ಹುಟ್ಟಿಸಿದ್ದಾರೆ. ಕುರಿಗಳು ‘ಕುರಿಗಳಾಗಿರುವವರೆಗೆ ಕುರಿಗಾರನಿಗೆ ಲಾಭ’ ವಾಗುವಂತೆ ದಲಿತರಲ್ಲಿ ದೇವರು-ಧರ್ಮಗಳ ಬಗ್ಗೆ ಭಯ, ಪೂಜಾರಿಗಳ ಬಗ್ಗೆ ನಂಬಿಕೆಗಳು ಇರುವವರೆಗೆ ಪೂಜಾರಿಗಳ ಕೈಚಳಕ ತಪ್ಪಿದ್ದಲ್ಲ.

ಸಾಮಾಜಿಕ ಪರಿಣಾಮಗಳು:

ಕುಟುಂಬ ಎಂದರೆ ಗಂಡ-ಹೆಂಡತಿ-ಮಕ್ಕಳು ಸೇರಿ ವಾಸಿಸುವುದು ಎಂಬುದು ಸಾಮಾನ್ಯ ವಿವರಣೆ. ಅದನ್ನು ಬುಡಮೇಲು ಮಾಡುವ ಶಕ್ತಿ ಈ ಸಂಪ್ರದಾಯಕ್ಕಿದೆ. ಇಲ್ಲಿ ಗಂಡನಿರುವುದೇ ಇಲ್ಲ, ಮಕ್ಕಳಿರುವುದೂ ಅಪರೂಪ. ಜೋಗತಿಯಾದ ತಕ್ಷಣ ಅವಳು ತಂದೆ. ಮನೆಯಿಂದ ದೂರವಾದ ಹಾಗೆ. ಹೆತ್ತ ಕರುಳಿನ ಸೆಳೆತದಿಂದಾಗಿ ತಂದೆ-ತಾಯಿಗಳು ಮಗಳು ಕಣ್ಣ ಮುಂದಿರಲಿ ಎಂಬ ಉದ್ದೇಶದಿಂದ ‘ಹೆಣ್ಣು ಮಾಡುವುದ’ಕ್ಕಾಗಿ ಮದುವೆಯಾದ ಗಂಡಸೊಬ್ಬ ತಮ್ಮ ಮಗಳನ್ನು ಇಟ್ಟುಕೊಳ್ಳಲು ಅಣಿ ಮಾಡುತ್ತಾರೆ. ‘ಕುಲಸ್ಥರನ್ನು ಕೂಡಿಕೊಂಡರೂ ಕೂಲಿ ಮಾಡೋದು ತಪ್ಪಲಿಲ್ಲ ‘ಕುಲಸ್ಥರನ್ನು ಕೂಡಿಕೊಂಡರೆ ಕುಬಸಕ್ಕೆ ಗತಿಯಿಲ್ಲ’ ಎಂಬ ಭಾವನೆಯಿರುವುದರಿಂದ, ಉಚ್ಚಕುಲಸ್ಥರು, ಹಣವಂತರನ್ನೇ ಆರಿಸುತ್ತಾರೆ. ಜೊತೆಗೆ ಇಂತಹ ಅವಕಾಶಕ್ಕಾಗಿಯೇ ಅವರೂ ಕಾಯುತ್ತಿರುತ್ತಾರೆ. ತಮ್ಮ ಕಣ್ಣಿಗೆ ಸುಂದರಿಯಾದ ಹೆಣ್ಣೊಬ್ಬಳು ಈ ಜಾತಿಗಳಲ್ಲಿ ಕಂಡರೆ ಸಾಕು, ಊರಿನ ಪೂಜಾರಿಗೋ ಇಲ್ಲ ಜೋಗತಿಗೊ ಆ ಹೆಣ್ಣನ್ನು ಎಲ್ಲಮ್ಮನ ಬಸವಿಯನ್ನಾಗಿ ಬಿಡಲು ಹೇಳಬೇಕೆಂದು ಸೂಚಿಸುತ್ತಾರೆ. ಜೋಗತಿ ಅಥವಾ ಪೂಜರಿ ದೇವಿ ಮೈಮೇಲೆ ಬಂದ ಹಾಗೆ ನಾಟಕ ಮಾಡಿ, ಆ ಹೆಣ್ಣಿಗೆ ಮುತ್ತು ಹೂರಿಸುವಂತೆ ಆಜ್ಞಾಪಿಸುತ್ತಾರೆ. ತಂದೆ-ತಾಯಿಗಳ ಭಯಭೀತಿಯಿಂದ ಒಪ್ಪುತ್ತಾರೆ. ಒಪ್ಪದಿದ್ದರೆ ಕುಲಸ್ಥರು, ಬಹಿಷ್ಕಾರ ಹಾಕುತ್ತೇವೆಂದು ಹೆದರಿಸುತ್ತಾರೆ. ‘ಒಂದು ಕುರಿ ತಗ್ಗಿಗೆ ಬಿದ್ದರೆ ಉಳಿದ ಕುರಿಗಳು ಬೀಳುವ ಹಾಗೆ’ ಅಥವಾ ಬಸವಣ್ಣನ ಮೂಗಿನೊಳಗೆ ಕೈ ಇಟ್ಟು ಚೇಳು ಕಡಿಸಿಕೊಂಡವರ ಕಥೆಯ ಹಾಗೆ. ಸಾಮಾನ್ಯೀಕರಣದ ಪ್ರಯತ್ನ ನಡೆಯುತ್ತದೆ. ಅದೂ ನಾಟದಿದ್ದರೆ ಊರಿನ ಹಿರಿಯರು (ಗೌಡ-ಕುಲಕರ್ಣಿ-ಪಟೇಲ ಇತ್ಯಾದಿ) ಊರಲ್ಲಿ ಬಾಳಗೊಡುವುದಿಲ್ಲವೆಂದೊ, ಕೂಲಿ-ನಾಲಿಗೆ ಕರೆಯುವುದಿಲ್ಲವೆಂದೊ, ಸಾಲ-ಸೋಲ ನೀಡುವುದಿಲ್ಲವೆಂದೂ ಹೇಳಿ ಜಬರಿಸುತ್ತಾರೆ. ಅದಕ್ಕೂ ಮಣಿಯದಿದ್ದಲ್ಲಿ ಹೆಣ್ಣನ್ನು ಬಲಾತ್ಕಾರದಿಂದ ಭೋಗಿಸಿ ಎಲ್ಲಮ್ಮನ ಬಸವಿಯನ್ನಾಗಿ ಮಾಡಿಸುತ್ತಾರೆ. ಒಟ್ಟಿನಲ್ಲಿ ಹಣವಂತರಿಗೂ ಹೆಣ್ಣಿನ ತಂದೆ-ತಾಯಿಗಳಿಗೂ ಮಧ್ಯೆ ಈ ಜೋಗತಿ ಅಥವಾ ಪೂಜಾರಿಗಳೇ ಹಣಕಾಸಿನ ಕರಾರು ಮಾಡುವ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತಾರೆ. ಹೆಣ್ಣು ಮಾಡುವ ಸಮಾರಂಭದ ಮೊದಲ ರಾತ್ರಿಯ ಹಾಗೂ ಕೂಡಿಸುವ ಕೆಲ ದಿನಗಳ ಖರ್ಚನ್ನು ಸಿರಿವಂತನೇ ವಹಿಸಿಕೊಳ್ಳಬೇಕು. ಅಜೀವ ಪರ್ಯಂತ ಇಲ್ಲವೆ ತನಗೆ ಬೇಕೆನಿಸಿದಷ್ಟು ದಿನ ಈತ ಇವಳೊಡನೆ ಇರಬಹುದು. ಹೆಣ್ಣು ಅವನ ಜೊತೆ ಎಷ್ಟೇ ನಿಷ್ಠೆಯಿಂದ, ಪ್ರಾಮಾಣಿಕತನದಿಂದ ನಡೆದುಕೊಂಡರೂ ‘ಇಂಥವನ ಇಟ್ಟುಕೊಂಡವಳು’ ಎನ್ನುತ್ತಾರೆಯೇ ಹೊರತು ಕಟ್ಟಿಕೊಂಡವಳು (ಪತ್ನಿ) ಎನ್ನುವುದಿಲ್ಲ. ಪ್ರಭಾವೀವ್ಯಕ್ತಿ (ಧನಬಲ ಅಥವಾ ಅಧಿಕಾರಬಲ) ಯೊಬ್ಬ ಇಟ್ಟುಕೊಂಡಿರುವವರೆಗೆ ಅವಳ ಬಗೆಗೆ ಮಾತನಾಡಲು ಹೆದರುತ್ತಾರೆ, ಉಳಿದ ಕಾಮುಕರ ಕಾಟವಿರುವುದಿಲ್ಲ. ಅವಳ ಸಂಬಂಧಿಕರೂ ಊರಲ್ಲಿ ಮೆರೆಯಲು ಅವಕಾಶವಿರುತ್ತದೆ. ಯೌವ್ವನವಿರುವವರೆಗೆ ಇಟ್ಟುಕೊಂಡವನ ಸ್ವಾರ್ಥದ ಚಿಹ್ನೆಯಾಗಿ, ಪ್ರತಿಷ್ಠೆಯ ಗೊಂಬೆಯಾಗಿ, ಕಾಮ ತೃಪ್ತಿಯ ಭೋಗವಸ್ತುವಾಗಿ ಮೆರೆಯಬೇಕು. ಕಾಮಾಸಕ್ತಿ ತಣಿದ ಮೇಲೆ, ಯೌವನ ಹಿಂದೆ ಸರಿದಂತೆ ಸಂಬಂಧ ನಿಂತು ಹೋಗುತ್ತದೆ. ಇವಳು ಮತ್ತೇ ಬೀದಿಪಾಲು, ಜೀವನೋಪಾಯಕ್ಕಾಗಿ ಒಬ್ಬನ ಕೈಯಿಂದ ಇನ್ನೊಬ್ಬನ ಕೈಗೆ, ಇನ್ನೊಬ್ಬನ ಕೈಯಿಂದ ಮತ್ತೊಬ್ಬನ ಕೈಗೆ ದಾಟುತ್ತ ಹೋಗಬೇಕಾಗುತ್ತದೆ. ಇವಳ ನ್ನಿಟ್ಟುಕೊಂಡವ ಗಣ್ಯನಾಗಿದ್ದರೆ ಈಕೆಗೆ ಲಾಭದಾಯಕವಾಗುತ್ತದಷ್ಟೇ ಅಲ್ಲ, ಗೌರವದ-ಪ್ರತಿಷ್ಠೆಯ ಕುರುಹು, ಊರಲ್ಲಿ ಎದೆಸೆಟಿಸಿ ತಿರುಗುವ ಧೈರ್ಯ.

ಇಂಥವರ ಮಕ್ಕಳಿಗೂ ‘ಇಂಥವನಿಗೆ ಹುಟ್ಟಿದವ’ ಎನ್ನುತ್ತಾರೆಯೇ ಹೊರತು ಇಂಥವರ ಮಗ ಎನ್ನುವುದಿಲ್ಲ. ಕುಚೋದ್ಯವನ್ನು, ದೇವಿಯನ್ನು ಮಾಡಿ ಮುಸಿ ಮಲುಸಿ ನಗುತ್ತದೆ, ಕ್ರೂರ ಸಮಾಜ. ಹುಟ್ಟಿಸಿದವನ ಹೆಸರನ್ನು ದಾಖಲೆಗಳಲ್ಲಿ ಹಚ್ಚಿಕೊಳ್ಳುವ ಅಧಿಕಾರ ಈ ಮಕ್ಕಳಿಗಿಲ್ಲ. ತಾಯಿಯ ಹೆಸರನ್ನೇ ಬರೆಸಿಕೊಳ್ಳಬೇಕು. ವಿವಾಹಬಂಧನದಿಂದ ಜನಿಸಿದ ಸಂತಾನಕ್ಕೆ ಹುಟ್ಟಿನಿಂದಲೇ ಆಸ್ತಿಯ ಹಕ್ಕು ಇದ್ದರೆ ಈ ಮಕ್ಕಳಿಗೆ ಆಸ್ತಿಯಲ್ಲಿ ಪಾಲೇ ಇಲ್ಲ. ಹರಿಜನರು ಅಸ್ಪೃಶ್ಯರಾದುದರಿಂದ ಜೊತೆಗೆ ವೈವಾಹಿಕ ಬಂಧನದಿಂದ ಹೊರತಾದ ಸಂಬಂಧ ಅನೈತಿಕ ಎಂದು ಕರೆಸಿಕೊಳ್ಳುವುದರಿಂದ ಇಟ್ಟುಕೊಂಡವನ ಚಲನವಲನಗಳು ರಾತ್ರಿ ಮಾತ್ರ. ಹೀಗಾಗಿ ತಂದೆ-ಮಕ್ಕಳ ಸಾಮೀಪ್ಯ-ಪ್ರೀತಿ ಸಂಬಂಧಗಳು ಬೆಳೆಯುವುದೇ ಇಲ್ಲ. ಈ ರೀತಿ ಮುತ್ತು ಹೊರುವ ಸಂಪ್ರದಾಯ ಇರುವವರ ಮನೆಗೆ ಹೆಣ್ಣನ್ನು ಕೊಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ನಿರಾಕರಿಸುತ್ತಾರೆ. ಹೀಗಾಗಿ ಇವರ ಮಕ್ಕಳ ಮದುವೆಯದೊಂದು ಜಟಿಲ ಸಮಸ್ಯೆ. ಒಂದೋ ಇಂಥ ಸಂಪ್ರದಾಯ ಇರುವ ಮನೆತನದವರೊಂದಿಗೆ ಸಂಬಂಧ ಬೆಳೆಸಬೇಕು. ಇಲ್ಲವೇ ಜೀವನವಿಡೀ ಅವಿವಾಹಿತರಾಗಿ ಉಳಿಯಬೇಕು. ಅದೂ ಸಾಧ್ಯವಾಗದಿದ್ದರೆ ತಾವೂ ತಾಯಿಯ ಹಾದಿಯನ್ನೇ ತುಳಿಯಬೇಕು. ಅವರೆಷ್ಟೇ ಬುದ್ಧಿವಂತರಿರಲಿ, ಸಾಕ್ಷರರಿರಲಿ, ಹಣವಂತರಿರಲಿ ಅವರನ್ನು ಕೀಳುಭಾವನೆಯಿಂದಲೇ ಕಾಣಲಾಗುತ್ತದೆ. ಸಮಾಜ ಅವರನ್ನೆಂದೂ ಪುರಸ್ಕರಿಸುವುದಿಲ್ಲ. ‘ಚಪ್ಪಲಿ ಚಪ್ಪಲೀನೆ, ಟೊಪ್ಪಿಗಿ ಟೊಪ್ಪಿಗೇನೆ’ ಯಾವುದನ್ನು ಎಲ್ಲಿ ಹಾಕಿಕೊಳ್ಳಬೇಕೋ ಅಲ್ಲೇ ಹಾಕಿಕೊಳ್ಳಬೇಕು ಎನ್ನುವ ತಾರ್ಕಿಕ ಉತ್ತರ ಸದಾಸಿದ್ಧ.

ಈ ರೀತಿ ಉಚ್ಚ ವರ್ಣೀಯರಿಗೂ ದಲಿತರಿಗೂ ಸಂಬಂಧ ಏರ್ಪಡುವುದರಿಂದ ಸಂಸ್ಕೃತೀಕರಣ ಸಾಧ್ಯವಾಗುತ್ತದೆ, ರಾಜಕೀಯ ಪ್ರಾಬಲ್ಯ ಉಂಟಾಗುತ್ತದೆ, ವಿದ್ಯಾವಂತರಾಗಲು ಸಾಧ್ಯವಿದೆ ಎನ್ನುವ ವಾದಗಳಿವೆ. ಆದರೆ ಇವೆಲ್ಲವೂ ಸುಳ್ಳುನಂಬಿಕೆಗಳು. ಧನವಂತರಿಂದ ಜೋಗತಿಯರು ಹಾಗೂ ಅವರ ಮಕ್ಕಳು ಹಣ-ಒಡವೆಗಳನ್ನು ಕ್ವಚಿತ್ತಾಗಿ ಪಡೆಯಬಹುದೇ ಹೊರತು ಉಳಿದೆಲ್ಲವೂ ಶುದ್ಧ ಸುಳ್ಳು. ಸುಸಂಸ್ಕೃತವಾಗುವುದಾಗಲಿ, ವಿದ್ಯಾವಂತರಾಗುವುದಾಗಲಿ ಅವರವರ ಮನೋಧಾರ್ಡ್ಯವನ್ನು, ಮನೋನಿಶ್ಚಯವನ್ನು ಅವಲಂಬಿಸಿದೆ. ಇಂದು ಮೇಲೆ ಬಂದಿರುವ ವಿದ್ಯಾವಂತರಾಗಿರುವ, ಅಧಿಕಾರಿಗಳೂ-ಮಂತ್ರಿಗಳೂ ಆಗಿರುವ ಜೋಗತಿಯರ ಮಕ್ಕಳು ಆ ಸ್ಥಾನಗಳನ್ನು ಹೊಂದುವುದಕ್ಕೆ ಅವರ ಪ್ರಯತ್ನ, ಸರಕಾರದ ಮೀಸಲಾತಿ ಹಾಗೂ ಧನ ಸಹಾಯಗಳು ಕಾರಣ ಎನ್ನದೇ ಗತ್ಯಂತರವಿಲ್ಲ.

ಇನ್ನೊಂದು ಅಮಾನುಷವಾದ ಮೃಗೀಯ ವರ್ತನೆಯನ್ನು ನಾವಿಲ್ಲಿ ಕಾಣಬಹುದು. ಇವರ ಜೊತೆ ಸಂಬಂಧ ಇಟ್ಟುಕೊಳ್ಳುವವರಿಗೆ ವಯಸ್ಸಿನ ನಿರ್ಬಂಧವಿಲ್ಲದಿರುವುದರಿಂದ ಕೆಲವು ಬಾರಿ ತಂದೆ-ಮಕ್ಕಳಿಬ್ಬರೂ ಒಬ್ಬಳೊಡನೆ ಸಂಬಂಧ ಇಟ್ಟುಕೊಳ್ಳುವ ನಾಗರಿಕ ಸಮಾಜದಲ್ಲಿ ನಿಷಿದ್ಧವಾದ ರೀತಿಯೂ ಕಂಡುಬಂದಿದೆ. ಕ್ವಚಿತ್ತಾಗಿ ಈ ರೀತಿ ನಡೆದರೂ ಮನುಷ್ಯನ ನೈತಿಕ ಮೌಲ್ಯಗಳನ್ನೇ ಇದು ಬದಲಾಯಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಬ್ಬ ಗರತಿ ಎಷ್ಟೇ ಸುಂದರಿಯಾಗಿದ್ದರೂ ಕಾಮುಕವ್ಯಕ್ತಿ ಅವಳೆಡೆ ಕಣ್ಣೆತ್ತಿ ನೋಡಲು ಹಿಂಜರಿಯುತ್ತಾನೆ. ಆದರೆ ಸುಂದರಿಯದ ಹೆಣ್ಣು ಎಲ್ಲಮ್ಮನ ಬಸವಿಯಾಗಿದ್ದರೆ ಎಂಥ ನಿಶ್ಚಲ ಮನಸ್ಸಿನ ಗಂಡಸಿದ್ದರೂ ಮನಸ್ಸು ಹೊಯ್ದಾಡುತ್ತದೆ. ಕಣ್ಣುಗಳಲ್ಲಿ ಕಾಮುಕತೆ ಮಿಂಚುತ್ತದೆ, ನಾಲಿಗೆ ತುಟಿಗಳನ್ನು ಸವರುತ್ತದೆ. ಹೀಗಾಗಿ ಮನುಷ್ಯನ ನೈತಿಕ ಅಧಃಪತನಕ್ಕೆ ಈ ಸಂಪ್ರದಾಯ ಬಹುವಾಗಿ ಕಾರಣವಾಗುತ್ತದೆ ಎಂದೇ ಹೇಳಬೇಕಾಗುತ್ತದೆ.

ಮುಂಬಯಿಯ ಕಾಮಾಟಿಪುರ, ಫೋರ್ನಾಸ್‌ ರಸ್ತೆ, ಫಾಕ್ಲಂಡ್‌ ರಸ್ತೆ, ಸುಕ್ಲಾಜಿ ರಸ್ತೆ, ಬ್ಯಾಪ್ಟಿ ರಸ್ತೆಗಳ ನಿಬಿಡವಾಗಿರುವ ವೇಶ್ಯಾಗೃಹಗಳು ಹಾಗೂ ಪೂನಾ, ಕೊಲ್ಲಾಪುರ ಇತ್ಯಾದಿ ಊರುಗಳಲ್ಲಿ ವಾಸಿಸುವ ಕೆಲವು ಜನ ದೇವದಾಸಿಯರು ನೇರವಾಗಿ ವೇಶ್ಯಾ ವೃತ್ತಿಯನ್ನೇ ನಡೆಸಿಕೊಂಡು ಹೋಗುತ್ತಿದ್ದಾರೆ. ಊರಲ್ಲಿ ದೇಹ ಮಾರಾಟಕ್ಕಿಳಿದರೆ ಜನ ನಿಕೃಷ್ಟವಾಗಿ ಕಾಣುತ್ತಾರೆ  ಅಲ್ಲದೇ ಹಣವನ್ನು ಗಳಿಸಲಾಗುವುದಿಲ್ಲ ಎಂದೇ ಇವರು ದೊಡ್ಡ ದೊಡ್ಡ ಪಟ್ಟಣಗಳಿಗೆ ಹೋಗಿ ವಾಸಿಸುತ್ತಾರೆ ಎನ್ನುವುದು ಗಮನಾರ್ಹ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ತಮ್ಮ ಊರುಗಳನ್ನು ಸಂದರ್ಶಿಸುತ್ತಾರೆ. ವೇಶ್ಯಾವೃತ್ತಿ ಗಣನೀಯವಾಗಿ ಹೆಚ್ಚಲು ಇವರು ಕಾರಣವಾಗಿದ್ದಾರೆ ಎನ್ನಬಹುದು ಅಷ್ಟೆ.

ಆರ್ಥಿಕ ಪರಿಣಾಮಗಳು:

ಚಾತುರ್ವರ್ಣ್ಯ ಪದ್ಧತಿಯಲ್ಲಿ ಅಂತ್ಯಜರು, ಪಂಚಮರು ಎಂದು ಕರೆಸಿಕೊಂಡವರೇ ಹೆಚ್ಚಾಗಿ ಜೋಗತಿಯರಾಗುತ್ತಾರೆ. ಮೇಲ್ಕಾಣಿಸಿದ ಪದ್ಧತಿಯ ಪರಿಣಾಮವಾಗಿ ಆರ್ಥಿಕವಾಗಿ ಹಿಂದುಳಿದವರು, ಅನಿವಾರ್ಯರಾಗಿ ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕಾಯಿತು. ಈ ಜನಕ್ಕೆ ಸಾಕಷ್ಟು ಶಿಕ್ಷಣವಿಲ್ಲದ್ದರಿಂದ ನೌಕರಿಯಿಲ್ಲ, ಅಳಲು ಅಧಿಕಾರವಿಲ್ಲ, ವ್ಯಾಪಾರ ಮಾಡಲು ಹಣವಿಲ್ಲ, ಊಳಲು ಭೂಮಿ-ಸೀಮೆಗಳಿಲ್ಲ; ಹೀಗಾಗಿ ಆಸ್ತಿ-ಪಾಸ್ತಿಗಳನ್ನು ಗಳಿಸುವುದು ಸಾಧ್ಯವೇ ಇಲ್ಲ. ಇಂಥವರ ಮಕ್ಕಳಾದ ಜೋಗತಿಯರ ಪರಿಸ್ಥಿತಿ ಇನ್ನೇನಾಗಲು ಸಾಧ್ಯ? ಗಂಡನಿಲ್ಲದೆ ದುಡಿದು ತಂದು ಹಾಕುವವರಿಲ್ಲದೆ ಬದುಕು ಒಂದು ಬೃಹದಾಕಾರದ ಪ್ರಶ್ನೆಯಾಗುತ್ತದೆ ಇವರಿಗೆ. ಎಲ್ಲ ಗಳಿಕೆಯ ದಾರಿಗಳೂ ಮುಚ್ಚಿದಾಗ ಸಿರಿವಂತರ ಹೊಲಗಳಲ್ಲಿ ಕೂಲಿ ಮಾಡಬೇಕು. ಅವರ ಕಣ್ಣುಗಳೋ ಇವರ ದೇಹದ ಮೇಲೆ. ಅನಿವಾರ್ಯವಾಗಿ ದೇಹ ಮಾರಾಟಕ್ಕೇ ಇಳಿಯಬೇಕು. ತನ್ನ ಹೊಟ್ಟೆಯ ಜೊತೆಗೆ ಮಕ್ಕಳ ಹೊಟ್ಟೆಗೂ ತುತ್ತುಕೂಳು ಕಾಣಿಸಬೇಕು. ಇಟ್ಟುಕೊಂಡವ ಸಿರಿವಂತನಿದ್ದರೆ ಅಲ್ಪ ಮಟ್ಟಿನ ಸುಸ್ಥಿತಿ ಇರುತ್ತದೆ. ಅನ್ನ-ವಸತಿಗಳ ಸಮಸ್ಯೆಯಿರುವುದಿಲ್ಲ. ಇದು ಅಪರೂಪ. ಕಣ್ಣೀರಿನಲ್ಲಿ ಕೈ ತೊಳೆಯುವ ಪ್ರಸಂಗಗಳೇ ಅಧಿಕ. ಆರ್ಥಿಕ ಅನುಕೂಲತೆಯಿದ್ದರೆ ವಿರಾಮದಜೀವನ ನಡೆಸಬಹುದು ಇಲ್ಲದಿದ್ದರೆ ಬಡತನದ ಬೇಗೆಯಲ್ಲಿಯೇ ಬೇಯಬೇಕು. ಬಿಸಿಲು ಗಾಳಿ-ಮಳೆ-ಚಳಿಗಳೆನ್ನದೆ ದಿನವೆಲ್ಲಾ ದುಡಿದರೂ ಗೇಣು ಹೊಟ್ಟೆ ತುಂಬದು. ಹೀಗಾಗಿ ವೇಶ್ಯಾವೃತ್ತಿ ಕೊನೆಗೆ ಭಿಕ್ಷಾವೃತ್ತಿಯೇ ಗತಿ.

ಪಟ್ಟಣಗಳಲ್ಲಿರುವ ಹೆಣ್ಣುಗಳು ಉಳಿದ ಬೆಲೆವೆಣ್ಣುಗಳ ಜೊತೆ ಸ್ಪರ್ಧೆಗಿಳಿಯಬೇಕು. ತಿಂಗಳಿಗೆ ೧೦೦-೧೫೦ರ ಗಳಿಕೆ ಯಾತಕ್ಕೂ ಸಾಲದು. ಇದರಲ್ಲಿಯೇ ಊಟ-ತಿಂಡಿ-ವಸ್ತ್ರ-ಬಾಡಿಗೆ, ಅಲಂಕಾರ, ಮನೋರಂಜನೆ, ವೈದ್ಯಕೀಯ ಖರ್ಚು-ವೆಚ್ಚಗಳನ್ನೂ ಸರಿದೂಗಿಸಬೇಕು. ಬಹುತೇಕ ಸಾಲದಲ್ಲಿಯೇ ನರಳುತ್ತಾರೆ. ವೇಶ್ಯಾ ಗೃಹಗಳಲ್ಲಿದ್ದರೆ ಊಟ-ವಸತಿ-ಬಗ್ಗೆ, ಅಲಂಕಾರ ಸಾಮಗ್ರಿಗಳ ಸಮಸ್ಯೆಯಿಲ್ಲ. ಆದರೆ ಮನೆಯವರಿಗೆ ಹಣ ಕಳುಹಿಸಬೇಕು.

ಈ ಸಂಪ್ರದಾಯದಿಂದ ಆರ್ಥಿಕವಾಗಿ ಸುಧಾರಿಸುವವರು ಪಾಲಕರು, ಪೂಜಾರಿಗಳು ಮತ್ತು ಘರವಾಲಿಗಳು ಮಾತ್ರ. ಇತ್ತೀಚೆಗೆ ಕಾನೂನಿನ ಮೂಲಕ ಇದಕ್ಕೆ ಬಹಿಷ್ಕಾರ ಹಾಕುವುದರಿಂದ ಇವರಿಗೆ ಇನ್ನಷ್ಟು ಸಹಾಯವಾಗಿದೆ. ಜೊತೆಗೆ ಪೋಲೀಸರೂ ಲಾಭ ಗಳಿಸುವುದರಲ್ಲಿ ಶಾಮೀಲಾಗಿದ್ದಾರೆ.

ಸಾರ್ವಜನಿಕರ ಕೂಗು, ಕಾನೂನಿನ ನಿರ್ಬಂಧತೆಗಳು ಮುತ್ತು ಹೊರಿಸುವುದನ್ನು ನಿಷೇಧಿಸಿದ್ದರೂ ಅದು ಇನ್ನೂ ಹೆಚ್ಚು ಗುಟ್ಟಾಗಿ ನಡೆಯುತ್ತಿದೆ. ಜೊತೆಗೆ ಗುಟ್ಟಿನಲ್ಲಿ ನಡೆದಷ್ಟೂ ದೀಕ್ಷಾ ನೀಡಿಕೆಗಾಗಿ ಪೂಜಾರಿಗಳ ಧನಬೇಡಿಕೆ ಹೆಚ್ಚುತ್ತಿದೆ. ಜೊತೆಗೆ ಪ್ರತಿವರ್ಷ ವೃತ್ತಿಯಲ್ಲಿರುವವರು ಇಂತಿಷ್ಟು ಹಣವನ್ನು ಪೂಜಾರಿಗಳಿಗೆ ಒಪ್ಪಿಸಬೇಕೆಂಬ ಕರಾರೂ ಇರುತ್ತದಂತೆ. ಹೆಣ್ಣು ಮಾಡುವ ಕ್ರಿಯೆಗೆ ಹಣವಂತರನ್ನು ಒಪ್ಪಿಸುವುದಾಗಲಿ, ಹೆಣ್ಣುಗಳನ್ನು ವೇಶ್ಯಾವಾಟಿಕೆಗಳಿಗೆ ಮಾರುವಾಗ ಆಗಲಿ ಮಧ್ಯಸ್ಥಿಕೆ ವಹಿಸುವವರು ಪೂಜರಿಗಳೇ ಆದುದರಿಂದ ಅಲ್ಲಿಯೂ ಹಣ ಲಪಟಾಯಿಸುತ್ತಾರೆ. ಇನ್ನು ಘರವಾಲಿಗಳು ಊಟ-ವಸತಿ ವೆಚ್ಚಗಳನ್ನು ಮುರಿದು ಕೈಗೆ ಒಂದಿಷ್ಟು ಹಣವನ್ನು ಹಾಕಿ ಉಳಿದುದನ್ನು ತಾವೇ ಕಬಳಿಸಿ ಶ್ರೀಮಂತರಾಗುತ್ತಾರೆ. ಪೋಲೀಸರು ಕಾನೂನಿನ ಹೆದರಿಕೆ ಹಾಕಿ ಪೂಜಾರಿಗಳು, ಪಾಲಕರು, ಘರವಾಲಿಗಳು ಅಷ್ಟೇ ಅಲ್ಲ ಈ ಹೆಣ್ಣುಮಕ್ಕಳಿಂದಲೂ ಹಣವಸೂಲಿ ಮಾಡಿ ತಮ್ಮ ಹೊಟ್ಟೆ ಬೆಳೆಸುತ್ತಾರೆ. ಒಟ್ಟಿನಲ್ಲಿ ಈ ಹೆಣ್ಣುಮಕ್ಕಳ ಆರ್ಥಿಕ ಪರಿಸ್ಥಿತಿ ಏನೇನೂ ಸುಧಾರಿಸಿಲ್ಲ, ಸುಧಾರಿಸುವುದೂ ಇಲ್ಲ.

ನಮ್ಮಂತೆ ಅವರ ಬಗ್ಗೆ ಬರೆಯುವವರಿಗೆ ಚಲನಚಿತ್ರ ತೆಗೆಯುವವರಿಗೆ ಕೂಡ ಲಾಭವಿದೆ.

ಮಾನಸಿಕ ಪರಿಣಾಮಗಳು:

ದೇವತೆಯ ರಕ್ಷೆಯಲ್ಲಿ ದೇಹ ಮಾರಾಟಕ್ಕಿಳಿದ ಇವರು ‘ಸ್ವಚ್ಛಂದ ಲೈಂಗಿಕ ಪ್ರವೃತ್ತಿ ತಮ್ಮ ಹಕ್ಕು’ ಲೈಂಗಿಕ ಆರಾಧನೆಯೂ ಒಂದು ಬಗೆಯ ದೇವಿಯ ಸೇವೆ ಎಂದು ಭಾವಿಸಿದ್ದಾರೆ. ಅದಕ್ಕಾಗಿ ಯಾವುದೇ ರೀತಿಯ ಅಂಜಿಕೆ-ಅಳುಕುಗಳಿಲ್ಲ.. ಮನೆಯವರ ಜೊತೆಗೆ, ನೆರೆಹೊರೆಯವರ ಜೊತೆಗೆ, ಊರವರ ಜೊತೆಗೆ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದಾರೆ. ಹೀಗಾಗಿ ಹೆಚ್ಚು ಜನ ತಮ್ಮ ಉದ್ಯೋಗವನ್ನು ಪ್ರೀತಿಸುತ್ತಾರೆ. ಕೆಲವೇ ಜನ ತಾವು ಪಡೆದು ಬಂದದ್ದು ಎಂದುಕೊಂಡರು, (ಕೈ ಬೆರಳ ಮೇಲೆ ಎಣಿಸುವಷ್ಟು ಜನ) ಕ್ವಚಿತ್ತಾಗಿ ಮೆಚ್ಚುವುದಿಲ್ಲ. ಗಂಡ-ಸಂಸಾರ ಎನ್ನುವ ಆಸಕ್ತಿ-ಆಸೆ-ಆಕಾಂಕ್ಷೆಗಳು ಇಲ್ಲದಿರುವುದರಿಂದ ಮಾನಸಿಕ ರೋಗಿಗಳಾಗುವ ಪ್ರಶ್ನೆಯೇ ಇಲ್ಲ. ಆ ಜೀವನಕ್ಕೆ ಅವರು ಒಗ್ಗಿಕೊಂಡಿದ್ದಾರೆ. ಮದುವೆಯಾಗಲು ಇಚ್ಛಿಸುತ್ತೀರಾ? ಎಂದರೆ ಬಹಳಷ್ಟು ಜನ ‘ಒಬ್ಬ ಗಂಡಸಿನ ದಬ್ಬಾಳಿಕೆಯಲ್ಲಿ ಹೊಡೆಸಿಕೊಂಡು ಬಡಿಸಿಕೊಂಡು ಬಾಳುವುದಕ್ಕಿಂತ ಈ ಜೀವನವೇ ಒಳ್ಳೆಯದು’ ಎಂಬ ಉತ್ತರವನ್ನು ನೀಡುತ್ತಾರೆ. ಕೆಲವರಿಗೆ ಮತ್ರ (ವಿಧವೆಯರು, ಗಂಡ ಬಿಟ್ಟವರು ಇತ್ಯಾದಿ) ಗಂಡ-ಮಕ್ಕಳು-ಸಂಸಾರದ ಬಗ್ಗೆ ಆಸಕ್ತಿ ಇದ್ದು, ಈ ಸಂಪ್ರದಾಯಕ್ಕೆ ಸೇರಿದ್ದು ತಮ್ಮ ಕರ್ಮವೆಂದು ನಿಟ್ಟುಸಿರು ಬಿಡುತ್ತಾರೆ. ಕೆಲವರು ಇವರನ್ನು ಮದುವೆಯಾಗಲು ಮುಂದೆ ಬಂದರೂ ಇವರಿಗೇ ದಂಧೆಯನ್ನು ಬಿಡಲು ಮನಸ್ಸಿಲ್ಲ ಅಥವಾ ಎಲ್ಲಮ್ಮನ ಭಯ ಕಾಡುತ್ತದೆ. ಆದರೆ ಅನುಭವದ ಬಲದಿಂದ ತಮ್ಮ ಮಿಕ್ಕಳು ದೇಹ ಮಾರಾಟಕ್ಕಿಳಿಯಬಾರದೆಂದು ಮದುವೆ ಮಾಡಿಕೊಡಲು ಇಚ್ಛಿಸುತ್ತಾರೆ.

ಬಹುತೇಕ ಜನ ಜೋಗಪ್ಪಗಳು ಮಾತ್ರ ಮಾನಸಿಕ ರೋಗಿಗಳು (          ) ಎನ್ನುವುದು ಸ್ಪಷ್ಟ. ಎಲ್ಲರೂ ಒಂದಲ್ಲ ಒಂದು ರೀತಿಯ ತಿಕ್ಕಲು ಸ್ವಭಾವವನ್ನೇ ವ್ಯಕ್ತಪಡಿಸುತ್ತಾರೆ.

ಜೋಗತಿಯರ ಸಂತಾನ ಮಾತ್ರ ತುಂಬ ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ತಂದೆ ಯಾರು? ತಂದೆಯ ಪ್ರೀತಿ ಎಂಥಹದು? ಎಂಬ ಭಾವನೆಗಳಿಂದ ವಂಚಿತರಾಗುವುದರ ಜೊತೆಗೆ ಸಮಾಜದ ಟೀಕೆ-ಟಿಪ್ಪಣಿ, ನಿಂದೆ-ಗೇಲಿಗಳನ್ನು ಕೇಳಬೇಕಾಗುತ್ತದೆ. ಬಾಲ್ಯಾವಸ್ಥೆಯಲ್ಲಿ ಜನರ ಕುಹಕ, ಸಹಪಾಠಿಗಳ ಮುಸಿ ಮುಸಿ ನಗುವಿಕೆಗಳು ಅವರನ್ನು  ಅಧೀರರನ್ನಾಗಿಸುತ್ತವೆ. ಒಬ್ಬ ಹೇಳಿದಂತೆ ‘ಪಾಟೀ ಪೆನ್ಸಿಲ್‌ ಕೊಡ್ತಿಯೋ ಇಲ್ಲೊ, ಇಲ್ಲಾರ ನಿಮ್ಮವ್ವ ಯಾರಂತ ಎಲ್ಲರಿಗೂ ಹೇಳಿ ಬಿಡ್ತೀನಿ’ ಎನ್ನುವ ಕೀಟಲೆಗೆ ಒಳಗಾಗುವ ಇವರಲ್ಲಿ ಸಹಜವಾಗಿ ನೈಚ್ಯಾನುಸಂಧಾನ ಪ್ರವೃತ್ತಿ ಬೆಳೆದು ಬಿಡುತ್ತದೆ, ಬಾಲಾಪರಾಧಿಗಳಾಗಲು ಸಹಾಯ ಮಾಡುತ್ತದೆ.

ದೈಹಿಕ ಪರಿಣಾಮಗಳು:

ತಮ್ಮ ತಮ್ಮ ಊರುಗಳಲ್ಲಿಯೇ ವಾಸಿಸುವವರಿಗೆ ಹೆಚ್ಚಿನ ದೈಹಿಕ ಪರಿಣಾಮಗಳು ಉಂಟಾಗುವುದಿಲ್ಲ. ಸಾಮಾನ್ಯ ಸ್ತ್ರೀಯರ ದೇಹಸ್ಥಿತಿಯನ್ನೇ ಹೆಚ್ಚು ಹೋಲುತ್ತದೆ ಇವರ ಆರೋಗ್ಯ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ವಾಸಿಸುವವರು ಮಾತ್ರ ದೈಹಿಕ ನ್ಯೂನತೆಗಳಿಂದ ಬಳಲುತ್ತಾರೆ. ಇವರು ಗರ್ಭಿಣಿಯರಾಗುವುದು ಕ್ವಚಿತ್ತಾಗಿ, ಗರ್ಭಪಾತಗಳು ಜಾಸ್ತಿ, ಹುಟ್ಟಿದರೂ ಸತ್ತುಹುಟ್ಟುವ ಮಕ್ಕಳು ಹೆಚ್ಚು. ಜೊತೆಗೆ ಸರಿಯಾಗಿ ಜೋಪಾನ ಮಾಡದಿರುವುದರಿಂದ ಬದುಕಿ ಉಳಿಯುವವರ ಸಂಖ್ಯೆ ಬಹಳ ಕಡಿಮೆ.

ಈ ಸಂಪ್ರದಾಯ ಇತ್ತೀಚೆಗೆ ವೇಶ್ಯಾವೃತ್ತಿಗೆ ತಿರುಗುತ್ತಿರುವುದರಿಂದ ಬಹು ಮುಖ್ಯ ಹಾಗೂ ಅಪಾಯಕಾರಿ ಪರಿಣಾಮವೆಂದರೆ ಗುಹ್ಯರೋಗಗಳ ಹರಡುವಿಕೆ. ಮಲೇರಿಯಾ, ಕ್ಷಯಗಳನ್ನು ಬಿಟ್ಟರೆ ಈಗ ತ್ವರಿತ ಗತಿಯಿಂದ ಹರಡುತ್ತಿರುವ ಮಹತ್ತರ ಅಂಟುರೋಗವಿದು. ಭಾರತದಲ್ಲಿ ಪ್ರತಿವರ್ಷ ೮೦,೦೦೦ಕ್ಕೂ ಹೆಚ್ಚು ರೋಗಿಗಳ ವರದಿಯಾಗುತ್ತಿದೆ. ವರದಿಯಾಗದವು ಇನ್ನೆಷ್ಟೋ? ತಡೆಗಟ್ಟಲು ಸಮನಾದ ವೈದ್ಯಕೀಯ ಸೌಲಭ್ಯವೂ ಇಲ್ಲ. ಸಿಫಿಲಿಸ್‌, ಚಾಂಕ್ರೈಡ್‌, ಗನೋರಿಯಾ, ಲಿಂಫೊ ಗ್ಯ್ರಾನ್ಯುಲೋಮ್‌ ವೆನೆರಿಯಮ್‌, ಹರ್ಪ್ಸ್ ಇತ್ಯಾದಿ ಹೆಸರಿನ ಇವುಗಳಲ್ಲಿ ಹೆಚ್ಚು ಹಾನಿಕರವಾದವು, ಮಾನವ ಕುಲವನ್ನೇ ನುಂಗಿ ನೀರು ಕುಡಿಯುವಷ್ಟು ತೀಕ್ಷ್ಣವಾಗಿರುವವು ಎರಡು. ಒಂದು ಪರಂಗಿ ರೋಗ (?) ಇನ್ನೊಂದು ಮೇಹರೋಗ (?). ಪರಂಗಿ ರೋಗವು ಹೆಚ್ಚು ಅಪಾಯಕಾರಿ. ಇದರಿಂದ ಕಣ್ಣು ಕುರುಡಾಗುವುದು, ಕಿವುಡುತನ, ಕೈಕಾಲು ಊನವಾಗುವುದು, ಅಕಾಲಮರಣ, ಮಕ್ಕಳ ಸತ್ತುಹುಟ್ಟುವಿಕೆ, ಮುಂತಾದ ನ್ಯೂನತೆಗಳು ಉಂಟಾಗುತ್ತವೆ. ಮೇಹರೋಗ ಅದರಷ್ಟು ಭಯಂಕರವಲ್ಲದಿದ್ದರೂ ಅನಾರೋಗ್ಯ ಮತ್ತು ನಪುಂಸಕತ್ವ ಮುಂತಾದ ಊನಗಳನ್ನು ಉಂಟು ಮಾಡುತ್ತದೆ. ನಗರೀಕರಣ ಮತ್ತು ಕೈಗಾರಿಕೆಗಳು ಈ ರೋಗಗಳ ಹರಡುವಿಕೆಗೆ ಇನ್ನೂ ಹೆಚ್ಚು ಸಹಾಯ ಮಾಡುತ್ತಲಿವೆ. ಯುವ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಗುಹ್ಯರೋಗಗಳ ಪ್ರಮಾಣ ಗಾಬರಿಗೊಳಿಸುವ ಸಂಖ್ಯೆಯಲ್ಲಿ ಏರುತ್ತಿದೆ. ತಡ ಮಾಡದೆ ಸರಿಯಾದ ಕ್ರಮವನ್ನು ಕೈಕೊಂಡ ಹೊರತು ಪೂರ್ಣ ಮಾನವಕೋಟಿಯೇ ಈ ರೋಗಗಳ ಸುಳಿಗೆ ಸಿಲುಕುವ ಕಾಲ ದೂರವಿಲ್ಲ.

ಪ್ರತಿಯೊಂದು ಸಂಪ್ರದಾಯಕ್ಕೆ ಲಾಭ ಹಾನಿ, ಒಳ್ಳೆಯ ಪರಿಣಾಮ-ದುಷ್ಪರಿಣಾಮಗಳೆರಡೂ ಇರುವಂತೆ ಈ ಸಂಪ್ರದಾಯಕ್ಕೂ ಇದೆ ಎನ್ನುವುದನ್ನು ಮರೆಯುವಂತಿಲ್ಲ. ನೀತಿಗೆಟ್ಟವರು, ಅವಿವಾಹಿತ ತಾಯಂದಿರು ಸಂತಾನದ ಸೂಕ್ತ ಪಿತೃತ್ವಕ್ಕಾಗಿ ಈ ಸಂಪ್ರದಾಯದ ಅಡಿಯಲ್ಲಿ ನುಸುಳಿಕೊಂಡರು. ನಪುಂಸಕರು, ಉಭಯಲಿಂಗಿಗಳು, ಕುರೂಪಿಗಳು (ಜಡೆ-ರೋಗಿಷ್ಟರು ಇತ್ಯಾದಿ), ವಿಧವೆಯರು, ಅಂಗವಿಕಲರು ತಮ್ಮ ಜೀವನೋಪಾಯಕ್ಕಾಗಿ ಈ ಧಾರ್ಮಿಕ ಭಿಕ್ಷಾವೃತ್ತಿಯನ್ನು ಕೈಕೊಂಡರು. ಇದರ ಅಡಿಯಲ್ಲಿಯೇ ಎಲ್ಲಮ್ಮನ ಕುರಿತಾದ ಬೃಹತ್‌ ಜಾನಪದ ಸಾಹಿತ್ಯ ಸೃಷ್ಟಿಗೊಂಡಿತು. ಶೃತಿ-ಚೌಡಿಕೆಗಳ ಹಿನ್ನೆಲೆಯಲ್ಲಿ ಹಿಮ್ಮೆಳ-ಮುಮ್ಮೇಳಗಳಿಂದ ಕೂಡಿದ ಹಾಡುಗಾರಿಕೆ ಬಳೆದು ಬಂದಿತು. ತಲೆಯ ಮೇಲೆ ಬಿಂದಿಗೆ ಹೊತ್ತು ಕೈಗಳ ಆಸರೆಯಿಲ್ಲದೆ ಕುಣಿಯುವ ನೃತ್ಯದ ವಿಕಾರ ರೀತಿಯು ಬೆಳೆಯುವುದಕ್ಕೆ ಕಾರಣವಾಯಿತು ಎನ್ನುವುದು ಗಮನಾರ್ಹ.

ಸಮಾಜದ ಕೆಲವರಿಗೆ ಈ Ventillation ಅಗತ್ಯ ಎನ್ನುವವರೂ ಇದ್ದಾರೆ. ಆದರೆ ಅದಕ್ಕೆ ಧಾರ್ಮಿಕ ರಕ್ಷೆ ಏಕೆ? ದಲಿತರೇ ಅದಕ್ಕೆ ಬಲಿಯಾಗಬೇಕೇ? ಎನ್ನುವುದು ನನ್ನ ಪ್ರಶ್ನೆ.