ನಿಸರ್ಗದೊಂದಿಗೆ ಮಾನವನ ದ್ವಂದ್ವ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಒಂದೊಂದು ನೈಸರ್ಗಿಕ ವಿಘ್ನಗಳು ಭೂತಾಕಾರವಾಗಿ ಕಣ್ಣಮುಂದೆ ತಾಂಡವ ನೃತ್ಯಗೈಯುವಾಗ ಪ್ರಖರವಾದ ಆ ನಿಸರ್ಗ ಶಕ್ತಿಗೆ ಆದಿಮಾನವ ಮೊರೆಹೊಕ್ಕಿರಬೇಕು. ಅನಂತರದಲ್ಲಿ ಆರಾಧನ ಸ್ವರೂಪ ಮೊಳಕೆಯೊಡೆದು, ಸಮಸ್ಯೆಗಳ ನಿವಾರಣೆಗೆ ನಂಬಿಕೆ, ಹರಕೆ, ಆಚರಣೆ ಮುಂತಾದವು ಬೆಳೆದು ಬಂದಿರಬೇಕು. ‘ಆರೋಗ್ಯ ರಕ್ಷಣೆ ಮನುಷ್ಯನ ಪ್ರಪ್ರಥಮ ಪ್ರಯತ್ನಗಳಲ್ಲೊಂದಾಗಿರಬೇಕು. ಆದ್ದರಿಂದ  ಮನುಷ್ಯನ ವ್ಯವಸಾಯದ ಕಡೆ ಗಮನ ಹರಿಸುವ ಮೊದಲೇ ದೇಹಕ್ಷೇಮ ಸಾಧಕವಾದ ವಿಷಯಗಳನ್ನು ಕಂಡುಹಿಡಿಯಲು ಅವನು ತನ್ನ ಬುದ್ಧಿಶಕ್ತಿಯನ್ನು ಬಳಸಿರಬೇಕು’ ಎಂದು ತೋರುತ್ತದೆ. (ಜವರೇಗೌಡ, ೨೯೨).

ಕಣ್ಣಿಗೆ ಕಾಣದ ಶಕ್ತಿಗೆ ಧಾರ್ಮಿಕ ವ್ಯವಸ್ಥೆಯ ರೂಪಕೊಟ್ಟು ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ, ಅದನ್ನು ಬಳಸಿಕೊಳ್ಳುವುದು ಸಮಾಜದಲ್ಲಿ ಮೊದಲಿನಿಂದಲೂ ಕಂಡು ಬರುತ್ತದೆ. ಮಾನವನು ತನ್ನ ನೀಡಿಕೆಗಳನ್ನು ಪೂರೈಸಿ ಕೊಳ್ಳುವುದಕೋಸ್ಕರ ಈ ಅಗೋಚರ ಶಕ್ತಿಗೆ ಮೊರೆ ಹೋಗುವ ಸಾಧನಗಳಲ್ಲಿ ಹರಕೆಯೂ ಒಂದಾಗಿದೆ. ಪ್ರಸ್ತುತ ಪ್ರಬಂಧದ ಉದ್ದೇಶ ಎಲ್ಲಮ್ಮನ ಹರಕೆ ನಂಬಿಕೆಗಳನ್ನು ವಿಶ್ಲೇಷಿಸುವುದಾಗಿದೆ.

ಹರಕೆ ಸ್ವರೂಪ ಮತ್ತು ಲಕ್ಷಣ:
ಹರಕೆ ಎಂಬ ಶಬ್ದ ಎರಡು ಅರ್ಥದಲ್ಲಿ ಬಳಕೆಯಾಗಿದೆ. (೧) ಭಕ್ತಾದಿಗಳು ಭಿಕ್ಷೆಯನ್ನು ನೀಡಿಸಿಕೊಂಡ ನಂತರದಲ್ಲಿ ಹೇಳುವ ದೇವರ ಹೊಗಳಿಕೆ. ಹರಕೆ ಕೊಡುವುದು ಅಥವಾ ಹರಸುವುದು. (೨) ದೇವರ ಹೆಸರಿನಲ್ಲಿ ಬೇಡಿಕೊಂಡು ಅದು ಕೈಗೂಡಿದ ಬಳಿಕ ಅರ್ಪಿಸುವುದು. ಇವುಗಳಲ್ಲಿ ಇಲ್ಲಿ ಅಧ್ಯಯನಕ್ಕೆ ಎತ್ತಿಕೊಂಡಿರುವುದು ಎರಡನೆಯ ಅರ್ಥದ ಹರಕೆಯನ್ನು.

ಹರಕೆ ಎನ್ನುವದು ಪ್ರಾರ್ಥನೆಗೆ ಸಮೀಪವಾಗಿದ್ದರೂ ಅದಕ್ಕಿಂತ ಭಿನ್ನವಾಗಿದೆ. ತಮಗೆ ಬಂದ ಸಮಸ್ಯೆಗೆ ಪರಿಹಾರ ಬೇಡಿ ಅದು ಕೈಗೂಡಿದಾಗ ವಾಗ್ದಾನ ಮಾಡಿದಂತೆ ಅರ್ಪಿಸುವುದೇ ಹರಕೆ. ಈ ಹರಕೆಯ ಲಕ್ಷಣಗಳನ್ನು ಈ ಕೆಳಕಂಡಂತೆ ಗುರುತಿಸಬೇಕಾಗುತ್ತದೆ.

(೧) ಬೇಡಿಕೊಳ್ಳುವುದು: ಮನಸ್ಸಿನಲ್ಲಿ ಮೂಡಿದ ಬಯಕೆಯನ್ನು ಪೂರೈಸುವಂತೆ ದೇವರಲ್ಲಿ ಬೇಡಿಕೊಳ್ಳುವದು.

(೨) ಶಪಥ ಗೈಯುವದು: ಬಯಕೆಯನ್ನು ದೇವರು ಪೂರೈಸಿಕೊಟ್ಟದ್ದೇಯಾದರೆ ಅದಕ್ಕೆ ಪರ್ಯಾಯವಾಗಿ ಇಂಥದ್ದನ್ನು ಕೊಡುವೆ ಅಥವಾ ಇಂಥದ್ದನ್ನು ಮಾಡುವೆ ಎಂದು ಪ್ರಮಾಣ ಮಾಡುವುದು.

(೩) ನಿಭಾಯಿಸುವದು: ಬೇಡಿಕೊಂಡ ಬಯಕೆ ಈಡೇರಿದ ನಂತರ ಶಪಥ ಮಾಡಿದಂತೆ ಅದನ್ನು ಪೂರೈಸುವುದು.

ಈ ಮೂರು ಅಂಶಗಳು ಹರಕೆಯಲ್ಲಿ ಇರಲೇಬೇಕು. ಇದರಲ್ಲಿ ಯಾವುದಾದರೊಂದು ಇರದೇ ಹೋದರೆ ಅದು ಹರಕೆ ಎನಿಸಲಾರದು. ಧಾರ್ಮಿಕ ಆಚರಣೆಗೆ ಒಳಪಟ್ಟದ್ದಾಗಿದ್ದರೂ, ಹರಕೆ ಸಂಪ್ರದಾಯವಲ್ಲ. ಸಂಪ್ರದಾಯ ನಮ್ಮೊಂದಿಗೆ ತಾನೇ ತಾನಾಗಿ ಸಾಮಾಜಿಕ ಜೀವನದ ಅಂಗವಾಗಿ ಕೂಡಿ ಬಂದರೆ, ಹರಕೆ ಎನ್ನುವುದು. ವ್ಯಕ್ತಿಗತವಾಗಿ ಕಾಯಾ, ವಾಚಾ, ಮನಸಾ ಬಯಸಿ ತಂದುಕೊಂಡದ್ದಾಗಿರುತ್ತದೆ.

[1]

ಹೆಚ್ಚಾಗಿ ಪ್ರಕಟವಾಗುವುದು ವ್ಯಕ್ತಿನಿಷ್ಠವಾಗಿಯಾದರೂ ಅದು ಸಮೂಹ ನಿಷ್ಠವಾಗಿ ಬೆಳೆಯುವ ಸಾಧ್ಯತೆಗಳೂ ಇವೆ. ಒಬ್ಬ ವ್ಯಕ್ತಿ ತನ್ನ ಇಷ್ಟಾರ್ಥ ಪೂರೈಸಿಕೊಳ್ಳಲು ಹೊರುವ ಹರಕೆ ಒಂದು ಬಗೆಯಾದರೆ, ಇನ್ನೊಬ್ಬರ ಅಥವಾ ಕುಟುಂಬದ ಇಷ್ಟಾರ್ಥಗಳನ್ನು  ಪೂರೈಸಿಕೊಳ್ಳಲು ಹೊರುವ ಹರಕೆ ಮತ್ತೊಂದು ಬಗೆಯದು. ಸಾಮೂಹಿಕ ಅಥವಾ ಸಾರ್ವತ್ರಿಕ ಹಿತಾಶಕ್ತಿಗಳಿಗಾಗಿ ಹೊರುವ ಹರಕೆಗಳು ತೀರ ವಿರಳ; ಆದರೆ ಸಮೂಹವೇ ಹರಕೆ ಹೊರುವುದಾಗಲೀ ಒಪ್ಪಿಸುವುದಾಗಲೀ ಕಂಡು ಬರುವುದಿಲ್ಲ. ಹರಕೆಯನ್ನು ಹೊರುವ ಕ್ರಮದಲ್ಲಿ ವ್ಯಕ್ತಿಗತವಾಗಿ ಹಾಗೂ ಪ್ರಾದೇಶಿಕವಾಗಿ ಭಿನ್ನತೆ ಇದೆ. ಕೆಲವು ಯಾವುದೇ ದಿನ , ಇನ್ನು ಕೆಲವು ಹಬ್ಬ ಹರಿದಿನ, ಜಾತ್ರೆ ದಿನ ಆಚರಿಸಲ್ಪಡುತ್ತವೆ.

ಎಲ್ಲಮ್ಮನ ಕುರಿತ ಹರಕೆಗಳನ್ನು ಗಮನಿಸಿದಾಗ ಅವು ಹೆಚ್ಚಾಗಿ ಸಮಾಜದ ಕೆಳವರ್ಗದವರಿಗೆ ಸೀಮಿತವಾಗಿರುವುದು ಸುಸ್ಪಷ್ಟವಾಗಿದೆ. ದೇವಿ ಅಹಂಕಾರದ ವ್ಯಕ್ತಿಗಳನ್ನು ಶರಣಾಗತರನ್ನಾಗಿ ಮಾಡಿಕೊಳ್ಳುವುದಕ್ಕೋಸ್ಕರ ಅವರಲ್ಲಿ ರೋಗರುಜಿನಗಳನ್ನು ತುಂಬುತ್ತಾಳೆ. ಆಸೆಗಳನ್ನು ಹತಗೊಳಿಸುತ್ತಾಳೆ. ಆಗುವ ಕೆಲಸಗಳಿಗೆ ಅಡ್ಡಲಾಗಿ ನಿಲ್ಲುತ್ತಾಳೆ. ಹೀಗೆ; ಅಹಂಕಾರಿಗಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಿ ತನ್ನಲ್ಲಿ ಭಕ್ತರಾಗಿ ಬರುವಂತೆ ಹರಕೆಯನ್ನು ಹೊರಿಸಿಕೊಳ್ಳುತ್ತಾಳೆ. ಅನಂತರದಲ್ಲಿ ತನ್ನ ಇಷ್ಟಾರ್ಥ ಪೂರ್ತಿಗೊಂಡ ಭಕ್ತ ಅದಕ್ಕೆ ಪರ್ಯಾಯವಾಗಿ ಉಡುಗೊರೆ ನೀಡುತ್ತಾನೆ. ಉಡುಗೊರೆಯನ್ನು ದೇವಿಯೇ ಬಯಸುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿರುವುದನ್ನು ಪ್ರಸ್ತುತದಲ್ಲಿ ಗಮನಿಸಬೇಕು.

ಹರಕೆ: ವರ್ಗೀಕರಣ ಕನ್ನಡ ವಿಶ್ವಕೋಶದಲ್ಲಿ (ಪು. ೧೫೬೭).

(೧) ವೈಯಕ್ತಿಕ ಹರಕೆ (೨) ಕೌಟುಂಬಿಕ ಹರಕೆ (೩) ಊರ ಹರಕೆ ಎಂದು ಮೂರು ವಿಧವಾಗಿ ಹರಕೆಯನ್ನು ವರ್ಗೀಕರಿಸಲಾಗಿದೆ.

ಎಲ್ಲಮ್ಮನ ಹರಕೆಗಳನ್ನಷ್ಟೇ ಗಮನಿಸಿದರೆ ಆಕೆಗೆ ಹೊರುವ ಹರಕೆಗಳಲ್ಲಿ ವೈಯಕ್ತಿಕ, ಕೌಟುಂಬಿಕ (ಕುಟುಂಬದ ಸಮಸ್ಯೆ ಮುಂದಿಟ್ಟು ಹರಕೆ ಹೊರುವುದು) ಎಂಬ ಎರಡು ಹರಕೆಗಳು ಒಡೆದು ಕಾಣುತ್ತವೆ. ಊರ ಹರಕೆ (ಊರಿನ ಸಮಸ್ಯೆಗೆ ಊರ ಗೌಡರು, ಶಾನುಭೋಗರು ಹೊರುವ ಹರಕೆಗಳು) ಗೌಣವಾಗಿದೆ.

ಎಲ್ಲಮ್ಮನ ಹರಕೆಗಳು ಇತರ ದೇವತೆಗಳಿಗೆ ಹೊರುವ ಹರಕೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿಲ್ಲ. ಈಕೆಯ ಕೆಲವು ಹರಕೆಗಳು ದ್ಯಾಮವ್ವ, ದುರಗವ್ವ, ಮರಗವ್ವ, ಕಾಳವ್ವ, ಬಂಡೆಮ್ಮ ಮುಂತಾದ ದೇವತೆಗಳಿಗೂ ಸಲ್ಲುತ್ತವೆ. ಒಟ್ಟಿನಲ್ಲಿ ಎಲ್ಲಮ್ಮನ ಹರಕೆಗಳನ್ನು ಈ ಕೆಳಕಂಡಂತೆ ವರ್ಗೀಕರಿಸುವುದು ಸಮಂಜಸವೆನಿಸುತ್ತದೆ.

೧) ಉಡುಗೊರೆ ಹರಕೆಗಳು

೨) ಶಿಕ್ಷಾ ಹರಕೆಗಳು

೩) ಬಲಿಕೊಡುವ ಹರಕೆಗಳು

೪) ನಿರ್ಮಾಣ-ನಿರ್ಮೂಲನ ಹರಕೆಗಳು

ಈ ವರ್ಗೀಕರಣ, ಹರಕೆಯನ್ನು ಒಪ್ಪಿಸುವ ಬಗೆಗಳನ್ನು ಆಧರಿಸಿದೆ.

. ಉಡುಗೊರೆ ಹರಕೆಗಳು:

ನಿಗದಿತವಾದ ವಸ್ತುವನ್ನು ಯಥಾವತ್ತಾಗಿ ದೇವರಿಗೆ ಅರ್ಪಿಸುವಂತವುಗಳನ್ನು ಉಡುಗೊರೆ ಎಂದು ಕರೆಯಲಾಗಿದೆ. ಎಲ್ಲ ಬಗೆಯ ಹರಕೆಗಳಿಗಿಂತ ಉಡುಗೊರೆ ಹರಕೆಗಳು ಬಹು ವ್ಯಾಪಕ ಮತ್ತು ಸಮೃದ್ಧವಾಗಿವೆ. ಇವುಗಳಲ್ಲಿ

೧) ಶಾಶ್ವತ ಉಡುಗೊರೆ ಹರಕೆ.

೨) ನಶ್ವರ ಉಡುಗೊರೆ ಹರಕೆಗಳೆಂದು ಎರಡು ವಿಧ.

ಶಾಶ್ವತ ಉಡುಗೊರೆ ಹರಕೆ:

ದೇವಿಯ ಅಂಗಾಂಗಳು ಮತ್ತು ಅವಳ ಕೈಯಲ್ಲಿರುವ ಆಯುಧಗಳು ಹಾಗು ಇತರ ವಸ್ತುಗಳು ಶಾಶ್ವತ ಹರಕೆಗಳು. ಬಂಗಾರ, ಬೆಳ್ಳಿ ಮೊದಲಾದ ಲೋಹಗಳಿಂದ ಮಾಡಿಸಿಕೊಡುವವು ಹೀಗಿವೆ. ಅಂಗಾಂಗಗಳಿಗೆ ಸಂಬಂಧಿಸಿದವು ಮುಖ (ಮಕ), ಹಸ್ತ, ಕಣ್ಣು (ಕಣಬೊಟ್ಟು), ಮೀಸೆ ಇತ್ಯಾದಿ. ಬಳಸುವ ವಸ್ತುಗಳು: ಲಿಂಗ, ತ್ರಿಶೂಲ, ಛತ್ತರಿಕೆ, ನಾಗ, ಕ್ಯಾದಗಿ, ಬಳೆ, ಪಾದರಕ್ಷೆ (ಪಾದುಕೆ), ಗಂಟೆ, ಕೊಡ, ರತಿ, ಝಗ, ಚವರ, ಗೆಜ್ಜೆ, ಕಳಸ, ಪಾಲಕಿ, ಕುದುರೆ ಇತ್ಯಾದಿ. ದೇವಿಯ ಪರಿಸರದಲ್ಲಿರುವ ಎಲ್ಲ ವಸ್ತುಗಳು ಹರಕೆಯ ವಸ್ತುಗಳಾಗಿ ಪರಿಣಮಿಸಿವೆ.

ಮೈಸುಲಿಗ ಹರಕೆ:

ಮಕ್ಕಳಾಗದೆ ಹೋದಾಗ ಈ ಬಗೆಯ ಹರಕೆ ಒಪ್ಪಿಸುವುದಿದೆ. ಮೈಸುಲಿಗೆ ಎಂದರೆ ಹರಕೆ ಹೊತ್ತವಳು ತನ್ನ ಮೈಮೇಲೆ (ಅಥವಾ ತನ್ನ ಮಗನ ಮೈಮೇಲೆ) ಇರುವ ಆಭರಣಗಳೆಲ್ಲವನ್ನು ಕಳಚಿ ದೇವಿಗೆ ಒಪ್ಪಿಸುವುದು.

ಜನಗಿ ಹರಕೆ:

ಮನೆಯಲ್ಲಿ ಹೈನವಾಗಲಿ ಎಂದು ಹರಕೆ ಹೊತ್ತು ಆಕಳು, ಆಡುಗಳನ್ನು ದೇವಿಯ ಹೆಸರಿನಲ್ಲಿ ಕರು ಮರಿಯಾಗಿದ್ದಾಗಲೇ ಬಿಡುವ ಸಂಪ್ರದಾಯವಿದೆ. ದೇವಿಯ ಹೆಸರಿಂದ ಬಿಟ್ಟ ಯಾವುದೇ ಪ್ರಾಣಿಯನ್ನು ಮಾರಾಟ ಮಾಡಬಾರದು. ದನ ಕಟ್ಟಿದಾಗಲೆ (ಗರ್ಭಧರಿಸಿದಾಗಲೆ) ಪೂಜಾರಿಗೆ ನೀಡಬೇಕು. ಒಂದು ವೇಳೆ ಮನೆಯಲ್ಲಿಯೇ ಈದರೆ ಅದರ ಹೈನ  (ಹಾಲು, ಮೊಸರು, ಬೆಣ್ಣೆ, ತುಪ್ಪ) ಮನೆ ಹೊರಗಿನವರಿಗೆ ಕೊಡಬಾರದು. ಹರಕೆಗೆ ಬಿಟ್ಟ ಪ್ರಾಣಿ ತಿನ್ನುವ ವಸ್ತುವನ್ನು ಕಸಿದುಕೊಳ್ಳಬಾರದು. ಅದನ್ನು ಹೊಡೆಯಬಾರದು. ಮುಂತಾಗಿ ನಿಯಮಗಳನ್ನು ಪಾಲಿಸಿ, ಹರಕೆಗೆ ಬಿಟ್ಟ ಪ್ರಾಣಿಯನ್ನು ತಂದು ಪೂಜಾರಿಗೆ ಕೊಡುತ್ತಾರೆ. ಈತ ಅದನ್ನು ಮಾರಲು, ಸಾಕಲೂ ಸ್ವತಂತ್ರನು. ಇದಲ್ಲದೆ ತುಲಾಭಾರದಂಥ ಹರಕೆಗಳೂ ಇಲ್ಲಿ ಲಬಂದು ಸೇರಿವೆ. ದೇವಿಗಾಗಿ ಬೆಳ್ಳಿಯಿಂದಲೇ ಪಲ್ಲಕ್ಕಿ ಮಾಡಿಸಿಕೊಡುವ ಪದ್ಧತಿಯೂ ಇದೆ.[2]

ನಶ್ವರ ಉಡುಗೊರೆ ಹರಕೆ:

ನಶ್ವರ ಉಡುಗೊರೆ ಹರಕೆಗಳು ಒಂದು ದಿನ ಅಥವಾ ಎರಡು ದಿನಗಳ ವರೆಗೆ ಮಾತ್ರ ಇರುತ್ತಿದ್ದು ನಂತರ ನಶಿಸಿ ಹೋಗುವಂತಹದಾಗಿರುತ್ತದೆ. ಪೂಜೆಗಳಂತಹ ಹರಕೆಗಳೂ ಇದರಲ್ಲಿ ಸೇರಿಕೊಳ್ಳುತ್ತವೆ. ಬೇಡಿಕೊಂಡಷ್ಟು ಕಾಯಿಗಳನ್ನು ಒಡೆಸುವದು, ಕರ್ಪೂರ ಉರಿಸುವದು, ದೇವರಿಗೆ ದಟ್ಟಿ (ಸೀರೆ) ತೊಡಿಸುವುದು, ಉಡಿ ತುಂಬುವುದು, ಎಡಿ ತುಂಬುವುದು, ಬಳೆ ತೊಡಿಸುವುದು ಮುಂತಾದವು ಇದರಲ್ಲಿಯೇ ಸೇರಿಕೊಳ್ಳುತ್ತವೆ. ಇವುಗಳಲ್ಲಿ  ಕೆಲವನ್ನು ವಿವರವಾಗಿ ಪರಿಶೀಲಿಸಬಹುದು.

ಅರಿಷಿಣಕುಂಕುಮ ಹರಕೆ:

ದೇವಿಯನ್ನು ಕೇವಲ ಕುಂಕುಮದಿಂದ ಇಲ್ಲವೆ ಅರಿಷಿಣದಿಂದ ಪೂಜಿಸುವುದು ಅರಿಷಿಣ-ಕುಂಕುಮ ಹರಕೆ. ಕುಂಕುಮದ ಹರಕೆಯನ್ನು ದೇವಿಯ ರಂಡಿ (ಹೊಸ್ತಿಲ) ಹುಣ್ಣಿಮೆಯಲ್ಲಿ ಸಲ್ಲಿಸುವುದಿಲ್ಲ. ಅದು ಉಳಿದ ದಿನಗಳಲ್ಲಿ ಮಾತ್ರ ನಡೆಯುತ್ತದೆ. ಆದರೆ ಅರಿಷಣ ಪೂಜೆಗೆ ರಂಡಿ ಹುಣ್ಣಿಮೆಯಲ್ಲಿ ಮಾತ್ರ ಪ್ರಾಮುಖ್ಯತೆ.

ಮೀಸಲು ತುಪ್ಪದ ಹರಕೆ:

ದನಗಳು ಈದು ಐದೋ. ಹತ್ತೊ, ಹದಿನೈದೋ ದಿನಗಳವರೆಗೆ ಹೆಣ್ಣು ಮಕ್ಕಳು ಶುಚಿಯಾಗಿ ಹೈನ ಮಾಡಿ, ಬೆಣ್ಣೆ ತೆಗೆದು ಮಜ್ಜಿಗೆ ಕೂಡ ಹೊರಗಿನವರೆಗೆ ಕೊಡದೆ ತುಪ್ಪ ಕಾಸಿ ನೆಲದ ಮೇಲೆ ಇಡದೆ ನೆಲುವಿನ (ಅಂತರದ) ಮೇಲಿಟ್ಟು ದೇವರಿಗೆ ಜಾತ್ರೆಯಲ್ಲಿ ಮುಟ್ಟಿಸಬೇಕು. ಈ ಮೀಸಲು ತುಪ್ಪ ದೀಪಕ್ಕೆ ಹಾಕಿ ಉರಿಸುವುದರಿಂದ ‘ಮೀಸಲು ದೀಪದ ಹರಕೆ’ ಎಂದು ಕರೆಯುವದಿದೆ.

ಎಲಿ ಚಟ್ಟದ ಹರಕೆ:

ಕಮಾನಿನ ಆಕಾರದಲ್ಲಿ ಮೊದಲೇ ಬಿಟ್ಟು ಚಟ್ಟು ಮಾಡಿದ್ದು, ಅದಕ್ಕೆ ಐದು ಸಾವಿರ ಎಲೆಗಳಿಂದ ಜೋಡಿಸಿ ಸಿಂಗರಿಸುತ್ತಾರೆ. ಎಲೆ ಕೊಡುವ ವಿಧಾನ, ಸಂಖ್ಯೆ, ಬೇಡಿಕೊಂಡವರ ಹರಕೆಗೆ ಸಂಬಂಧಿಸಿದ್ದು, ಪೂಜಾರಿಯೇ ಈ ಚಟ್ಟು ಕಟ್ಟುತ್ತಾನೆ.

ಉಪ್ಪು ಗಂಟಿನ ಹರಕೆ:

ಹೊಸ ಅರಿವೆಯ ತುಂಡಿನಲ್ಲಿ ಅಥವಾ ಬಿಚ್ಚು ಕೈಯಲ್ಲಿ ಉಪ್ಪನ್ನೊಯ್ದು ಎಲ್ಲಮ್ಮನ ಮಂದಿರಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ಗುಡಿಯ ಹಿಂದೆ ಇರುವ ಹುರುಕು ಎಲ್ಲಮ್ಮನಿಗೆ ಹಾಕುತ್ತಾರೆ. ಇಲ್ಲವೆ ಎಲ್ಲಮ್ಮನ ಗುಡಿಯ ಮೇಲೆಯೇ ಎಸೆಯುತ್ತಾರೆ. ಹುರುಕು ಎಲ್ಲಮ್ಮ ಉಪದೇವತೆಯಾಗಿರದೆ ಆಕೆಯೂ ಎಲ್ಲಮ್ಮನೆಂದೇ ಹೇಳಲಾಗುತ್ತಿದೆ. ಇದು ಆಕೆ ಕಳೆದುಕೊಂಡ ಕುಷ್ಟರೋಗದ ಪರಿಹಾರದ ಮೇಲಿಂದ ಬಂದ ನಂಬಿಕೆಯಾಗಿದೆ.

ಮುಡುಪಿನ ಹರಕೆ:

ಮುಡುಪು (ಮುಡಿಪು) ಎಂದರೆ ದೇವರ ಹೆಸರಿನಿಂದ ಹಣ ಸಂಗ್ರಹಿಸಿ ಅದನ್ನು ಒಯ್ದು ದೇವರ ಹುಂಡಿಗೆ ಹಾಕುವುದು ಒಂದು ಬಗೆಯಾದರೆ, ಆ ಎಲ್ಲ ಹಣವನ್ನು ದೇವಿಯ ಜಾತ್ರೆಗಾಗಿ, ದೇವಿಯ ವಸ್ತುಗಳನ್ನು ಖರೀದಿಸಲು ಬಳಸುವುದು ಮತ್ತೊಂದು ಬಗೆ. ಮುಡುಪು ಕಟ್ಟುವುದಕ್ಕೆ ಕೆಲವೆಡೆ ‘ಹೊನ್ನೆಸ್ಳು’ ಮಾಡಿ ಕಟ್ಟುವುದು ಎಂದೂ ಕರೆಯಲಾಗುತ್ತದೆ.[3]

ಈ ಬಗೆಯ ಹರಕೆಗಳಲ್ಲದೆ ಅಭಿಷೇಕದಂತಹ ಹರಕೆಗಳೂ ಆಚರಣೆಯಲ್ಲಿರುವುದನ್ನು ಕಾಣುತ್ತೇವೆ.

. ಹರಕೆಗಳು:

ಹರಕೆಗಳಲ್ಲಿ ಶಿಕ್ಷೆ ಭೋಗಿಸುವಂತಹ ಹರಕೆಗಳೂ ಇವೆ. ತಾನೇ ಹರಕೆ ಹೊತ್ತು ತಾನೇ ಶಿಕ್ಷೆ ಅನುಭವಿಸುವಂತಹದು ಸ್ವಶಿಕ್ಷಾ ಹರಕೆಯಾದರೆ, ಹರಕೆ ಹೊತ್ತದ್ದು ಒಬ್ಬರಾಗಿದ್ದು ಶಿಕ್ಷೆ ಅನುಭವಿಸುವವರು ಮತ್ತೊಬ್ಬರು ಎಂಬ ಅನ್ಯ ಶಿಕ್ಷಾ ಹರಕೆಯಾಗಿದೆ. ಉದಾ: ತಾಯಿ ತನ್ನ ಕಣ್ಣ ನೋವಿಗಾಗಿ ಹರಕೆ ಹೊತ್ತು ಆಮೇಲೆ ತಾನು ಶಿಕ್ಷೆ ಅನುಭವಿಸಿದರೆ ಅದು ಸ್ವಶಿಕ್ಷಾ ಹರಕೆ. ಮಗಳ ಕಣ್ಣ ನೋವಿಗೆ ಹರಕೆ ಹೊತ್ತು ತಾನು ಶಿಕ್ಷೆ ಅನುಭವಿಸಿದರೆ ಅನ್ಯಶಿಕ್ಷಾ ಹರಕೆ.

ಇದರಲ್ಲಿಯೇ ಕೆಲವು ದೈಹಿಕ, ಮಾನಸಿಕ ಶಿಕ್ಷೆಗಳಿವೆ. ಇವುಗಳನ್ನು ಗೆರೆಕೊರೆದು ಗುರುತಿಸಲಾಗದಿದ್ದರೂ ಸ್ಥೂಲವಾಗಿ ವರ್ಗೀಕರಿಸಿ ಹೀಗೆ ಅಧ್ಯಯನ ಮಾಡಬಹುದಾಗಿದೆ.

ದೈಹಿಕ ಶಿಕ್ಷೆಯ ಹರಕೆಗಳು:

ದೇವಿಯ ಗುಡಿಯವರೆಗೆ ಪಾದಚಾರಿಯಾಗಿ ಹೋಗುವುದು, ದೀಡ ನಮಸ್ಕಾರ (ದೀರ್ಘದಂಡ ನಮಸ್ಕಾರ) ಹಾಕುವುದು, ದಿಂಡರಿಕೆ ಉರುಳುವುದು, ಉಪವಾಸ ಮಾಡುವುದು, ಪರಸಿ ಒಯ್ಯುವುದು, ಸಿಡಿಯಾಡುವುದು, ಕಡ್ಲೆತ್ತಿನ ಹರಕೆ ಹೊರುವುದು. (ಮುಂತಾದವು ದೈಹಿಕ ದಂಡನೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಬಂದವುಗಳಾಗಿವ) ಉಟಗಿ, ಚಂಬಳಿಕೆ, ಕಡ್ಲೆತ್ತಿನ ಹರಕೆ ಇವು ದೈಹಿಕ ಶಿಕ್ಷೆಯ ಹರಕೆಗಳು. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ.

ಸಿಡಿ ಹರಕೆ:

ಸಿಡಿಯಲ್ಲಿ ಎರಡು ಬಗೆಯಿರುವುದು ಕಂಡು ಬರುತ್ತದೆ. ಮೊದಲನೆಯದು ಬಲಿಗೆ ನೇರವಾಗಿ ನಿಲ್ಲುವ ಸಿಡಿದಲೆ ಎಂಬುದು. ಹೊತ್ತ ಹರಕೆಗೆ ತಲೆಯನ್ನೇ ಕಡೆಸಿಕೊಂಡು ಬಿಡುವುದು, ಇಂತಹವುಗಳಿಗೆ ಶಾಸನದಲ್ಲಿ ಉಲ್ಲೇಖಗಳಿವೆ.[4] ಇನ್ನೊಂದು ಪ್ರಾಣವನ್ನು ಕೊಡದೆ ಶಿಕ್ಷೆಯನ್ನು ಭೋಗಿಸುವಂತಹದು. ಈ ಬಗೆಯ ಸಿಡಿಯ ಕುರಿತು ಭಾರತಕ್ಕೆ ಬಂದ ಅನೇಕ ಪ್ರವಾಸಿಕರು ವಿವರ ನೀಡುತ್ತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.[5] ಈಗಲೂ ಕೆಲವೊಂದು ಹಳ್ಳಿಗಳಲ್ಲಿ ಗುಡಿಯ ಅಕ್ಕಪಕ್ಕದಲ್ಲಿ ನಿಂತ ‘ಸಿಡಿಕಂಬ’ಗಳನ್ನು ಕಾಣುತ್ತೇವೆ. ಇವುಗಳಿಗೆ ಉಯ್ಯಾಲೆಗಳೆಂದು ಕರೆಯುತ್ತಾರೆ. ಅಂಥವುಗಳಲ್ಲೆಲ್ಲಾ ಸಿಡಿಯಾಟವೇ ನಡೆಯುತ್ತಿತ್ತು ಎಂಬುದರಲ್ಲೇನೂ ಸಂಶಯವಿಲ್ಲ.

ಸಿಡಿಯಾಟಕ್ಕೆ ಬಳಕೆಯಾಗಬಹುದಾದ ಕಲ್ಲಿನ ಕಂಬವೊಂದು ಸವದತ್ತಿಯಲ್ಲಿದೆ. ಅದು ಚಾರಿಕತ್ರಿಯಲ್ಲಿದೆ. ಇದಕ್ಕೀಗ ‘ದೀಪಮಾಲಿಕೆ’ ಎಂದು ಕರೆಯಲಾಗುತ್ತಿದೆ. ಇದು ಮೂಲತಃ ಸಿಡಿಗಂಬವೇ ಆಗಿತ್ತು. ಈ ಕಂಬದ ಮೇಲೆ ಈಗ ದೀಪ ಉರಿಸುವುದರಿಂದ ಹಾಗೆ ಕರೆಯಲಾಗುತ್ತಿದೆ. ಈ ಕಂಬ ನೋಡುವುದಕ್ಕೆ ನಾಲ್ಕು, ನಾಲ್ಕುವರೆ ಅಡಿ ಎತ್ತರವಾಗಿದ್ದರೂ ಹೊಸದಾಗಿ ಕಟ್ಟಲಾದ ಕಟ್ಟೆಯಲ್ಲಿ ಅದರ ಬಹುಭಾಗ ಅಡಗಿ ಹೋಗಿದೆ. ಕಟ್ಟೆಯ ಕೆಳಭಾಗದಲ್ಲಿ ಆಳವಾದ ಹೊಂಡವಿದ್ದು ಅದರ ಮಧ್ಯದಲ್ಲಿ ಕಂಬ ನಿಲ್ಲಿಸಲಾಗಿದೆ. ಆ ಹೊಂಡದಲ್ಲಿ ಸಿಡಿಯಾಡುತ್ತಿದ್ದರೆಂದು ಹೇಳಲಾಗುತ್ತಿದೆ. ಆದರೆ ಯಾವ ರೀತಿಯಿಂದ ಆಡುತ್ತಿದ್ದರೆಂದು ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಆದರೆ ಸಿಡಿ ನಿಂತು ಹೋದದ್ದು ಏಕೆ ಎಂಬುದಕ್ಕೆ ಕಾರಣ ಹೀಗೆ ಹೇಳುತ್ತಾರೆ.

ಹೆಣ್ಣುಮಗಳೊಬ್ಬಳು ಮಗುವನ್ನು ಕಟ್ಟಿಕೊಂಡು ಸಿಡಿ ಹರಕೆ ಒಪ್ಪಿಸುತ್ತಿರುವಾಗ ಮಗು ಜಾರಿ ಹೊಂಡಕ್ಕೆ ಬಿದ್ದು ಸತ್ತು ಹೋಯಿತು. ಅಂದಿನಿಂದ ಸಿಡಿಗೆ ಮಂಗಳ ಹಾಡಿದರು ಎನ್ನಲಾಗುತ್ತಿದೆ. ಸರಕಾರದ ಕಟ್ಟಾಜ್ಞೆ ಇದ್ದಾಗಲೂ ಇದು ನಡೆಯುತ್ತಿತ್ತಂತೆ.

ಸಿಡಿ ಆಡುವುದು ಮೂರು ಬಗೆಯಾಗಿದೆ. (೧) ನೆಲದಲ್ಲಿ ನೆಟ್ಟ ಕಂಬದ ತುದಿಯ ಮೇಳೆ ಅದರಷ್ಟೇ ಉದ್ದವಾದ ಕಟ್ಟಿಗೆಯನ್ನು ಅಡ್ಡಲಾಗಿ ಹಾಕಿ ತುಲಾಭಾರದಂತೆ ಮಾಡಲಾಗುತ್ತದೆ. ಒಂದು ಕಡೆ ಮನುಷ್ಯನೊಬ್ಬ ಹಗ್ಗ ಹಿಡಿದು ಜೋತು ಬಿದ್ದರೆ, ಇನ್ನೊಂದೆಡೆಗೆ ಸಿಡಿ ಆಡುವವನು ಬೆನ್ನುಹುರಿಗೆ ಅಥವಾ ಶರೀರದ ಪಕ್ಕಕ್ಕೆ (ಪಕ್ಕಡೆ ಭಾಗ) ಕಬ್ಬಿಣದ ಕೊಕ್ಕೆಯನ್ನು ಚುಚ್ಚಿಕೊಂಡು ತಕ್ಕಡಿಯಂತೆ ಮೇಲೆ ಕೆಳಗೆ ಜೋತಾಡುತ್ತಾನೆ. (೨) ಮೇಲೆ ಅಡ್ಡ ಜೋಡಿಸಿರುವ ಕಟ್ಟಿಗೆ ವರ್ತುಲಾಕಾರವಾಗಿ ತಿರುಗುವ ವ್ಯವಸ್ಥೆಯದಿರುತ್ತದೆ. ಮೇಲೆ ಕೆಳಗೆ ತೂಗುವ ಬದಲು ಇಲ್ಲಿ ವರ್ತುಲಾಕಾರವಾಗಿ ಸಿಡಿಯಾಡುವವ ತೂಗುತ್ತಾನೆ. (೩) ನೆಲದಲ್ಲಿ ನೆಡದೆ ಒಂದು ಬಂಡಿಯ ಅಚ್ಚಿನ ಮೇಲೆ ಅಡ್ಡಲಾಗಿ ಸಿಡಿ ಕಂಬ ಜೋಡಿಸಲಾಗಿರುತ್ತದೆ. ಕಂಬದ ಒಂದು ತುದಿಯನ್ನು ಕೆಳಗೆ ಒತ್ತಿದರೆ ಇನ್ನೊಂದು ತುದಿ ಮೇಲೇಳುತ್ತದೆ. ಮೇಲೇಳುವ ತುದಿಗೆ ಸಿಡಿಯಾಡುವ ವ್ಯಕ್ತಿ ತೂಗುತ್ತಿದ್ದಂತೆ ಬಂಡಿಯನ್ನು ಎಳೆದುಕೊಂಡು ಹೋಗುತ್ತಾರೆ.

ಸೌದತ್ತಿಯಲ್ಲಿ ನೆಟ್ಟ ಕಂಬವಿದೆ. ಈ ಹಿಂದೆ ಹೇಳಿದ ಕೂಸು ಸತ್ತ ಘಟನೆಯನ್ನು ಸ್ಮರಿಸಿಕೊಂಡರೆ ಹೊಯ್ದಾಡುವ ತಕ್ಕಡಿಯಂತಿರುವ ಸಿಡಿಯಲ್ಲಿ ಆ ಬಗೆಯ ಅಪಾಯ ತೀರ ಕಡಿಮೆ. ಆದರೆ ವರ್ತುಲಾಕಾರದಲ್ಲಿ ಈ ಬಗೆಯ ಅಪಾಯ ಸಾಧ್ಯ. ಆದ್ದರಿಂದ ಇಲ್ಲಿ ಬಹುಶಃ ತಿರುಗಣೆ ಸಿಡಿಯೇ ಇದ್ದಿರಬೇಕು.

‘ಸಿಡಿದಲೆ’ ಸಂಪ್ರದಾಯ ಪೂರ್ವದ್ದಾಗಿದ್ದು, ಅದರ ನಂತರ ಸಿಡಿಯಾಟ ಬಂದಿರಬಹುದು. ಸಿಡಿಯಾಟಕ್ಕೆ ಕಂಬಗಳಿಲ್ಲದೆ, ಕೇವಲ ಕೊಕ್ಕೆಯನ್ನು ಬೆನ್ನುಹುರಿಗೆ ಹಾಕಿಕೊಂಡು ಮರಕ್ಕೆ ಜೋತು ಬೀಳುವ ಸಿಡಿ ಕಂಡುಬರುತ್ತದೆ. ೬(. ಎಚ್‌.ಎಲ್‌. ನಾಗೇಗೌಡ -ಪ್ರವಾಸಿ ಕಂಡ ಇಂಡಿಯಾ ಸಂ. ೫/ಪು. ೪೮೩.) ನೆಲದಲ್ಲಿ ನೆಡದೆ ಒಂದು ಬಂಡಿಯ ಅಚ್ಚಿನ ಮೇಲೆ ಅಡ್ಡಲಾಗಿ ಸಿಡಿ ಕಂಬ ಜೋಡಿಸಲಾಗಿರುತ್ತದೆ. ಕಂಬದ ಒಂದು ತುದಿಯನ್ನು ಕೆಳಗೆ ಒತ್ತಿದರೆ ಇನ್ನೊಂದು ತುದಿ ಮೇಲೇಳುತ್ತದೆ. ಮೇಲೇಳುವ ತುದಿಗೆ ಸಿಡಿಯಾಡುವ ವ್ಯಕ್ತಿ ತೂಗುತ್ತಿದ್ದಂತೆ ಬಂಡಿಯನ್ನು ಎಳೆದುಕೊಂಡು ಹೋಗುತ್ತಾರೆ.

ಸೌದತ್ತಿಯಲ್ಲಿ ನೆಟ್ಟ ಕಂಬಿವಿದೆ. ಈ ಹಿಂದೆ ಹೇಳಿದ ಕೂಸು ಸತ್ತ ಘಟನೆಯನ್ನು ಸ್ಮರಿಸಿಕೊಂಡರೆ ಹೊಯ್ದಾಡುವ ತಕ್ಕಡಿಯಂತಿರುವ ಸಿಡಿಯಲ್ಲಿ ಆ ಬಗೆಯ ಅಪಾಯ ತೀರ ಕಡಿಮೆ. ಆದರೆ ವರ್ತುಲಾಕಾರದಲ್ಲಿ ಈ ಬಗೆಯ ಅಪಾಯ ಸಾಧ್ಯ. ಆದ್ದರಿಂದ ಇಲ್ಲಿ ಬಹುಶಃ ತಿರುಗಣೆ ಸಿಡಿಯೇ ಇದ್ದಿರಬೇಕು.

‘ಸಿಡಿದಲೆ’ ಸಂಪ್ರದಾಯ ಪೂರ್ವದ್ದಾಗಿದ್ದು, ಅದರ ನಂತರ ಸಿಡಿಯಾಟ ಬಂದಿರಬಹುದು. ಸಿಡಿಯಾಟಕ್ಕೆ ಕಂಬಗಳಿಲ್ಲದೆ, ಕೇವಲ ಕೊಕ್ಕೆಯನ್ನು ಬೆನ್ನುಹುರಿಗೆ ಹಾಕಿಕೊಂಡು ಮರಕ್ಕೆ ಜೋತು ಬೀಳುವ ಸಿಡಿ ಕಂಡುಬರುತ್ತದೆ.[6] ಸಿಡಿದಲೆಯನ್ನು ಕೊಡುವವರು ಹರಕೆಯನ್ನು ಹೊತ್ತೇ ಕೊಡುತ್ತಿದ್ದರು ಎಂಬುದು ಗಮನಾರ್ಹ ಸಂಗತಿ.

ಈ ದೇವಿಗೆ ರಕ್ತ ಕೊಡಬಾರದೆಂದು ಹೇಳುವುದು ಕಂಡುಬರುತ್ತದೆ. ಬಲಿ ಮಾತಂಗಿಗಾಗಿಯೇ ಇದೆ ಎಂಬುದು ಮತ್ತೊಂದು ವಿಷಯ. ಈ ಸಿಡಿಯಾಟವನ್ನು ಕೂಡ ಮೊದಲಿನಿಂದ ಮಾತಂಗಿ ಹೆಸರಿನಿಂದಲೇ ಆಡುತ್ತಿದ್ದರೆಂದು ತೋರುತ್ತದೆ. ಏಕೆಂದರೆ ಮಲೆನಾಡಿನ ಭಾಗದಲ್ಲಿ ತಲ್ಲೂರ ಅಂಗಡಿಯಲ್ಲಿ ‘ಅಮ್ಮ’ ಮತ್ತು ‘ಮಾತಂಗಿ’ಯ ಜೋಡು ಗುಡಿಯ ಮುಂದೆ ಈ ರೀತಿ ಸಿಡಿಯಾಟ ನಡೆಯುತ್ತಿದ್ದು ‘ಅಮ್ಮ’ನಿಗೆ ಬರೀ ಹಣ್ಣು-ಹಾಲು ನೈವೇದ್ಯವಾದರೆ ಮಾತಂಗಿಗೆ ರಕ್ತಹಾರ ನಡೆಯುತ್ತದೆ ಎಂದು ಹೇಳಲಾಗುತ್ತದೆ.[7] ಆದ್ದರಿಂದ ಬಲಿಯು ಮಾತಂಗಿಗೆ ಸಲ್ಲುವಂತೆ ರಕ್ತ ಹಾರವೆನಿಸುವ ಸಿಡಿಯೂ ಅವಳಿಗೆ ಸಲ್ಲುತ್ತಿರಬೇಕು.

ಚಂಬಳಿಕೆ ಹರಕೆ:

ಚರ್ಮದಿಂದ ಪಾದುಕೆ ತಯಾರಿಸಿ ದೇವಿಗೆ ಅರ್ಪಿಸುವ ಹರಕೆಯೇ ಚಂಬಳಿಕೆ ಹರಕೆ. ಇದು ಯಾವುದೇ ಜಾತಿಯ ಜನಾಂಗಕ್ಕೆ ಸೀಮಿತವಾಗಿರದಿದ್ದರೂ ಹೆಚ್ಚಾಗಿ ಹರಿಜನರಲ್ಲೇ ಬಳಿಕೆಯಲ್ಲಿದೆ. ಚಂಬಳಿಕೆ ಮಾಡುವವರು ಮಾದಿಗರು. ಹರಕೆ ಹೊತ್ತವರು ಮೊದಲೇ ತಿಳಿಸಿದರೆ ಅವನು ಮಡಿಯಾಗಿದ್ದು ಕತ್ತರಿಸದೆ ಇರುವ (ಪೂರ್ಣವಾಗಿರುವ) ಚರ್ಮದಿಂದ ಚಂಬಳಿಕೆ ತಯಾರಿಸಿ ಕೊಡುತ್ತಾನೆ. ಹರಕೆ ಹೊತ್ತವರು ಈ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ದೇವಿಯ ಪಾದಗಟ್ಟಿಗೆ ಬಂದು ಅಲ್ಲಿ ಪೂಜಾರಿಗೆ (ಜೋಗಮ್ಮ-ಜೋಗಪ್ಪ) ಅವುಗಳನ್ನು ಕೊಡುತ್ತಾರೆ. ಆಗ ಪೂಜಾರಿ ಆ ಚಂಬಳಿಕೆಗಳಿಂದ ಅವರ ಬೆನ್ನ ಮೇಲೆ (ಎಡಬಲ) ಪ್ರಹಾರ ಮಾಡಿ ದೇವಿಯ ಪಾದಗಟ್ಟಿಗೆ ಆ ಚಂಬಳಿಕೆಗಳನ್ನು ಅರ್ಪಿಸುತ್ತಾನೆ.

ಚಂಬಳಿಕೆ ಎಂದರೆ ಬೆಂಕಿ ಇದ್ದಂತೆ. ಅವುಗಳನ್ನು ಯಾರೂ ಮನೆಗೆ ಕೊಂಡೊಯ್ಯ ಬಾರದೆಂಬ ಪ್ರತೀತಿ ಇದೆ. ಆದ್ದರಿಂದ ಇವೆಲ್ಲವನ್ನು ಹೊಳೆಗೆಸೆಯುತ್ತಾರೆ. ಚರ್ಮದ ಉಡುಗೊರೆ ಕೇವಲ ಎಲ್ಲಮ್ಮಗಲ್ಲದೆ ಇನ್ನುಳಿದ ದೇವತೆಗಳಿಗೂ ಸಲ್ಲುತ್ತದೆ. ಎಲ್ಲಮ್ಮನ ಜೋಗತಿ ಸಂಪ್ರದಾಯದಲ್ಲಿರುವ ‘ಅರಸ ಪಾದಗಳು’ ಚರ್ಮದಿಂದಲೇ ಮಾಡಿದವು. ಜೋಗತಿ ದೀಕ್ಷೆಯಲ್ಲಿ ಇದರ ಪಾತ್ರವಿದೆ. ಇಲ್ಲಿ ಚರ್ಮಕ್ಕೆ ಮಹತ್ವ ಬಂದುದಕ್ಕೆ ಹೀಗೆ ಕಾರಣ ಹೇಳುತ್ತಾರೆ.

ಪರಶುರಾಮ ತನ್ನ ತಂದೆಯರು ಬೆನ್ನಟ್ಟಿದಾಗ, ಎಲ್ಲಮ್ಮ, ಮಾತಂಗಿ ಹತ್ತಿರ ಬಂದು ಆಶ್ರಯ ಕೇಳಿದಳು. (ಇನ್ನು ಕೆಲವೆಡೆ ಎಲ್ಲಮ್ಮ ಮುದುಕಿಯ ವೇಷ ಧರಿಸಿ ತೋಟಿಗನ ಹತ್ತಿರ ಹೋಗಿದ್ದಳು. ಮುದುಕಿ ಕಳ್ಳಿ ಎಂದು ಭಾವಿಸಿ ತೋಟಿಗ ಬೆನ್ನಟ್ಟಿದಾಗ, ಎಲ್ಲಮ್ಮ ಮಾತಂಗಿ ಹತ್ತಿರ ಬಂದು ಆಶ್ರಯ ಕೇಳಿದಳು) ಆಗ ಮಾತಂಗಿ ದೋಣಿಯಲ್ಲಿ ಎಲ್ಲಮ್ಮನಿಗೆ ಚರ್ಮ ಹೊದಿಸಿ ಕುಳ್ಳಿರಿಸಿದಳು. ಆದ್ದರಿಂದ ಚರ್ಮದ ಬಳಕೆ ದೇವಿಗೆ ಸಲ್ಲುವುದೆಂದು ಹೇಳಲಾಗುತ್ತಿದೆ. ಚರ್ಮ ನೆನೆಯಿಡುವ ದೋಣಿಯಲ್ಲಿರುವ ನೀರನ್ನು ತೀರ್ಥವೆಂದು ಭಾವಿಸಲಾಗುತ್ತದೆ. ಹುರುಕು, ಕಜ್ಜಿ, ಕುಷ್ಟ ಮುಂತಾದ ರೋಗ ಬಂದಾಗಲೂ ಈ ನೀರನ್ನು ಬಳಸಲಾಗುತ್ತದೆ. ಚಂಬಳಿಕೆಯನ್ನು ತಲೆ ಮೇಲೆ ಹೊತ್ತು ಒಯ್ಯುವುದು ಶರಣ ಸಮಗಾರ ಹರಳಯ್ಯ ಬಸವಣ್ಣನಿಗೆ ಪಾದುಕೆ ಮಾಡಿಕೊಟ್ಟ ಸಂದರ್ಭವನ್ನು ನೆನಪಿಸುತ್ತದೆ. ಈ ಬಗೆಯ ಕಥೆಗಳು ಮಾದರ ಚನ್ನಯ್ಯನ ಸುತ್ತಲೂ ಇವೆ.[8][1]     ಸಹಗಮನ ಎನ್ನುವುದು ಹರಕೆ ಎನಿಸದು. ಇದೊಂದು ಧಾರ್ಮಿಕ ಸಂಪ್ರದಾಯ. ತನ್ನ ಪತಿ ತೀರಿ ಹೋದಮೇಲೆ ತಾನು ಸಹಗಮನ ಮಾಡುವುದಾಗಿ ಶಪಥ ಮಾಡಿ ಅಥವಾ ದೇವರಲ್ಲಿ ಬೇಡಿಕೊಂಡು, ಅದನ್ನು ನಡೆಸಿದ್ದೇ ಆದರೆ ಆಗ ಅದು ಹರಕೆಯಾಗಬಲ್ಲುದು.

[2]      ಬೆಳ್ಳಿಯ ಪಲ್ಲಕ್ಕಿಯನ್ನು ಹರಕೆ ಹೊತ್ತಂತೆ ಮಾಡಿಸಿ ಮೆರವಣಿಗೆಯೊಂದಿಗೆ ತರುತ್ತಿದ್ದಾಗ ದಾರಿಯಲ್ಲಿ ಕೇಳಿದವರಿಗೆಲ್ಲ ಹುಮ್ಮಸದಿಂದ ‘ನಾನು ಮಾಡಿಸಿದ್ದೇನೆ, ನಾನಲು ಮಾಡಿಸಿದ್ದೇನೆ’ ಎಂದು ಹೇಳುತ್ತ ಹರಕೆ ಹೊತ್ತ ಭಕ್ತೆ ಬರುತ್ತಿದ್ದಳಂತೆ. ಆಗ ದೇವಿ ಆ ಪಲ್ಲಕ್ಕಿಯನ್ನು ನಿರಾಕರಿಸಿ ‘ಅದನ್ನು ಒಳಗೆ ತರಬೇಡ ಅದನ್ನು ಒಯ್ದು ನನ್ನ ಬಚ್ಚಲ ಮೋರೆಯಲ್ಲಿಡು’ ಎಂದು ನುಡಿದಳಂತೆ. ಆದ್ದರಿಂದ ಆ ಬೆಳ್ಳಿಯ ಪಲ್ಲಕ್ಕಿ ಅಂದಿನಿಂದ ಗುಡಿಯ ಒಳಗಡೆ ಒಯ್ಯದೆ ಹೊರಗಿಡಲಾಗಿದೆ. [ಪಲ್ಲಕ್ಕಿ ದೊಡ್ಡದಿದ್ದು ಗುಡಿಯ ಬಾಗಿಲು ಕಿರಿದಾಗಿದೆ, ಹೀಗಿದ್ದಾಗ ಪಲ್ಲಕ್ಕಿ ಒಳಗಿಡಲು ಸಾಧ್ಯವೆ? ಎಂದು ಹೇಳಲಾಗುತ್ತದೆ.] ಆ ಪಲ್ಲಕ್ಕಿಯಲ್ಲಿ ದೇವಿ ಕುಳಿತಿಲ್ಲ ಎಂದು ಹೇಳುವರಾದರೂ ರಂಡಿ ಹುಣ್ಣಿಮೆಯಂದು ದೇವಿ ಆ ಪಲ್ಲಕ್ಕಿಯಲ್ಲಿ ಕುಳಿತು ಹೊಳೆಸ್ನಾನಕ್ಕೆ ಹೋಗುವ ವಾಡಿಕೆ ಇದೆ. ಈಗಲೂ ಈ ಪಲ್ಲಕ್ಕಿಯನ್ನು ಸೌದತ್ತಿಯಲ್ಲಿ ನೋಡಬಹುದು.

[3]      ಕನ್ನಡ ವಿಶ್ವಕೋಶ: ಮೈಸೂರು ಪು. ೧೫೬೭. ಇಲ್ಲಿ ಹೊನ್ನೆಸ್ಳು – ಮುಡಿಪಿನ ಬಗ್ಗೆ ಹೇಳುತ್ತ ಹಿಂದಿನವರು ನಾಣ್ಯವನ್ನು ಅರಿಷಿಣದಿಂದ ಬಟ್ಟೆಯನ್ನು ಹೊನ್ನಿನ ಬಣ್ಣಮಾಡಿ ಹರಕೆ ಕಟ್ಟಿಕೊಳ್ಳುತ್ತಿದ್ದರಿಂದ ‘ಹೊನ್ನೆಸ್ಳು’ ಎಂದು ಕರೆದಿರಬಹುದು ಎಂದು ಹೇಳಲಾಗುತ್ತಿದೆ. ವಡ್ವಾರಾದನೆಯ ಗುರುದತ್ತ ಭಟ್ಟಾರನ ಕಥೆಯಲ್ಲಿ ಶಿವೋದಯ ನಾಯಕ ಮಡಿಲು ಮಲೆಯ ಕಿತ್ತಿಹೊನ್ನಿ ನೆಡಿದತಲೆಗೂಡುತ್ತಾಳೆ ಎಂದು ಬರುವುದನ್ನು ಗಮನಿಸಿದರೆ ‘ಕಿತ್ತಿಹೊನ್ನ’, ‘ಹೊನ್ನೆಸ್ಳು’, ಮೈಸುಲಿಗೆ ಹರಕೆ ಇವೆಲ್ಲ ಒಂದೇ ಆಗಿರಬೇಕು.

[4]      EC. VIII Nv 59 1066 A.D.

[5]      ಎಚ್.ಎಲ್‌. ನಾಗೇಗೌಡ. ಪ್ರವಾಸಿ ಕಂಡ ಇಂಡಿಯಾ ಸಂ. ೬/ಪು. ೩೧೪

[6]      ಎಚ್‌.ಎಲ್‌. ನಾಗೇಗೌಡ-ಪ್ರವಾಸಿ ಕಂಡ ಇಂಡಿಯಾ ಸಂ. ೫/ಪು ೪೮೩.

[7]      ಸಿಡಿ-ಕಾಂತ (ಗೆಳತಿ ಪತ್ರಿಕೆಯ ಚಿತ್ರಲೇಖನ ೯-೮೩)

[8]      ಡಾ. ಅ. ವ. ಪಾಟೀಲ – ಕರ್ನಾಟಕ ಭಾರತಿ ಪು. ೧೪೯. ಜನಪದ ಸಾಹಿತ್ಯದಲ್ಲಿ ಎಲ್ಲಮ್ಮನ ಸಂಪ್ರದಾಯದ ಸುಳುಹುಗಳು.