ಶಿಷ್ಟಸಾಹಿತ್ಯ ಹಾಗೂ ಶಿಷ್ಟ ಸಂಗೀತಗಳು ಪ್ರತ್ಯೇಕ ಪ್ರತ್ಯೇಕವಾಗಿ ಪ್ರಯೋಗವಾಗುವಂತಹವು. ಜನಪದ ಕಾವ್ಯದಂತೆ ಒಂದು ವಿಶಿಷ್ಟ ಸಾಂಸ್ಕೃತಿಕ ಪರಿಸರದಲ್ಲೇ ಬಳಕೆಯಾಗುವ ಅನಿವಾರ್ಯತೆ ಅವುಗಳಿಗಿಲ್ಲ. ಹೀಗಾಗಿ ಅವು ಜನಪದ ಸಂಗೀತ ಮತ್ತು ಕಾವ್ಯಕ್ಕಿಂತ ತೀರ ಶಾಸ್ತ್ರೀಯವಾಗಿ ಬೆಳೆದುಕೊಂಡು ಬರಲು ಸಾಧ್ಯವಾಗಿದೆ. ಆದರೆ ಜನಪದ ಕಾವ್ಯ ಒಂದೇಕಾಲಕ್ಕೆ ಹಲವಾರು ಅಂಶಗಳನ್ನು ಹೊರಹಾಕುವ ಒಂದು ಸಮ್ಮಿಶ್ರಕಲೆಯಾಗಿ ಬಳಕೆಯಲ್ಲಿದೆ. ಅದಕ್ಕಾಗಿ ಶಿಷ್ಟ ಸಾಹಿತ್ಯ ಹಾಗೂ ಶಿಷ್ಟ ಸಂಗೀತಗಳೊಂದಿಗೆ ಜನಪದ ಸಾಹಿತ್ಯ ಮತ್ತು ಜನಪದ ಸಂಗೀತಗಳನ್ನು ಹೋಲಿಸಿ ಮಾರ್ಗ ಕಲೆಗಳನ್ನು ಉನ್ನತವೆಂದು ನಿರ್ಣಯಿಸುವ ಹುಚ್ಚುಹವ್ಯಾಸಕ್ಕೆ ಕೈಹಾಕುವುದು ಉಚಿತವೆಂಧು ತೋರುವುದಿಲ್ಲ.

ಜೋಗತಿಯರ ಕಾವ್ಯದ ಅಭ್ಯಾಸದಿಂಧ ಏನಾದರೂ ಪ್ರಯೋಜನವಿದೆಯೇ? ಎಂದು ಮೂಗು ಮುರಿಯುವ ಜನ ಇರುವುದು ತೀರ ಸ್ವಾಭಾವಿಕ.

“ಇದ್ದೂರಾನ ಬೀಗ್ರು ಬಿದ್ದ ಗ್ವಾಡಿ ಸಮಾನ” ಎನ್ನುವಂತೆ, ಜನಪದ ಕಾವ್ಯದ ಮಹತ್ವವನ್ನು ಗ್ರಹಿಸುವಲ್ಲಿ ನಮ್ಮ ಜನ ಸಹಜವಾಗಿಯೇ ನಿರ್ಲಕ್ಷ್ಯದಿಂದಿರುವುದನ್ನು ಕಾಣುತ್ತೇವೆ. ಇದು ನಿತ್ಯೋಪಯೋಗಿ ಕಾವ್ಯ; ಈ ಕಾವ್ಯವಿಲ್ಲದೆ ನಮ್ಮ ಜೀವನದ ಎಷ್ಟೋ ಮಹತ್ವದ ಘಟನೆಗಳು ಜರುಗಲು ಸಾಧ್ಯವೇ ಇಲ್ಲ. ಈ ಹಾಡಿಲ್ಲದೆ ಹೆಣ್ಣು-ಗಂಡುಗಳು ಗಂಡ-ಹೆಂಡಿರಾಗಲು ಸಾಧ್ಯವಿಲ್ಲ. ಹುಟ್ಟಿದ ಮಗುವಿಗೊಂದು ಹೆಸರಿಡಲು; ಸೋಬಾನ, ಕುಪ್ಪಸ ಯಾವುದೇ ಸಾಂಪ್ರದಾಯಿಕ ಮಹತ್ವದ ಕ್ರಿಯೆಗಳು ಜರುಗಲು ಈ ಕಾವ್ಯ ಅವಶ್ಯಕ. ಹೀಗೆಲ್ಲ ಜನಪದ ಕಾವ್ಯವು ನಮ್ಮ ಬದುಕಿನೊಂದಿಗೆ ಅನೋನ್ಯವಾಗಿ ಬೆರೆತುಕೊಂಡಿದೆ.

ನಮಗೆ-ಅಂದರೆ ಎಲ್ಲಮ್ಮನ ಭಕ್ತರಲ್ಲದವರಿಗೆ ಈ ಕಾವ್ಯದ ಅವಶ್ಯಕತೆಯೇನೂ ಇರಲಿಕ್ಕಿಲ್ಲ. ಆದರೆ, ಈ ದೇವತೆಯನ್ನು ನಂಬಿದ ಭಕ್ತರು ಆಕೆಯ ಹೆಸರಿನ ಮೇಲೆ ಜಗಹೊತ್ತ ಹೆಂಗಸರು, ಸೀರೆಉಟ್ಟ ಗಂಡಸರು-ಇವರಿಗೆ ಈ ಕಾವ್ಯ ನಿತ್ಯವೂ ಅವಶ್ಯಕ. ಹಾಡು ಬಿಟ್ಟರೆ ಅವರ ಜೀವನವೇ ಇಲ್ಲ. ಎಲ್ಲಮ್ಮನನ್ನು ಹಾಡಿ ಹೊಗಳಲು. ಸ್ತುತಿ ಮಾಡಲು, ಅವಳ ಮಹಿಮೆ ಸಾರಲು ಈ ಹಾಡು ಬೇಕೇ ಬೇಕು. ಈ ಹಾಡಿಲ್ಲದೆ ಬದುಕು ಸಾಗುವಂತಿಲ್ಲ. ಈ ಎಲ್ಲ ಕಾರ್ಯಗಳು ಜರುಗದಿದ್ದರೆ-ತಮಗೆ ಮೋಕ್ಷವಿಲ್ಲ, ಸುಖ-ಸಂತೋಷಗಳಿಲ್ಲ ಎಂಬುದು ಅವರ ನಂಬುಗೆ. ಹೀಗೆಂದ ಮಾತ್ರಕ್ಕೆ ಈ ರೂಢಿ ಹೀಗೆಯೇ ಮುಂದುವರೆಯಬೇಕೆಂಬ ಅಭಿಪ್ರಾಯ ನನ್ನದಲ್ಲ. ಪರಿಸ್ಥಿತಿ ಹೀಗಿದೆ ಎಂಬ ಕಾರಣಕ್ಕಾಗಿ ಈ ಮಾತುಗಳನ್ನು ಹೇಳಬೇಕಾಯಿತು; ಅಷ್ಟೆ.

ಚೌಡಿಕೆ ಮೇಳ, ಗೀಗೀ ಹಾಗೂ ಗೊಂದಲಿಗರ ಮೇಳವನ್ನು ಬಹುತೇಕ ಎಲ್ಲ ಅಂಶಗಳಲ್ಲಿ ಹೋಲುತ್ತಿರುತ್ತದೆ.  ಈ ಮೂರು ಮೇಳಗಳಲ್ಲಿ ಶ್ರುತಿಚೌಡಿಕೆ ಸಾಮಾನ್ಯವಾಗಿ ಕಾಣಿಸುತ್ತದೆ. ಗೀಗೀ ಮೇಳದಲ್ಲಿ ಕಾಣಿಸುವ ಡಪ್ಪು, ಗೊಂದಲಿಗರ ಮೇಳದಲ್ಲಿಯ ಸಂಬಾಳಗಳ ಬದಲಾಗಿ ಇಲ್ಲಿ ಬಾರ್ಕಿಚೌಡಿಕೆ ಬಳಕೆಯಾಗುತ್ತದೆ. ಅಂದರೆ ಡಪ್ಪು ಹಾಗೂ ಸಂಬಾಳ ಮಾಡುವ ಕೆಲಸವನ್ನೇ ಇಲ್ಲಿ ಬಾರ್ಕಿಚೌಡಿಕೆ ಮಾಡುತ್ತದೆಂಬುದು ಗಮನಾರ್ಹ ಅಂಶ.

ಈ ಮೂರು ಮೇಳದಲ್ಲಿ ಮುಖ್ಯವಾಗಿ ಹಾಡುಗಾರ ಒಬ್ಬನೇ ಆಗಿದ್ದು, ಆತನೇ ಒಂದು ಮುಖ್ಯವಾದ್ಯವನ್ನು ಬಾರಿಸುತ್ತಿರುತ್ತಾನೆ.  ಒಂದು ಮೇಳದಲ್ಲಿ ವಾದ್ಯದ ಉಪಯೋಗವಿದ್ದು, ಅದೂ ಮುಖ್ಯ ಹಾಡುಗಾರನೇ ಆ ವಾದ್ಯವನ್ನು ಬಾರಿಸುತ್ತಿದ್ದರೆ-ಅಲ್ಲಿಯ ಮುಮ್ಮೇಳದಲ್ಲಿ ಕೇವಲ ಒಬ್ಬನೇ ಹಾಡುಗಾರ ಕಾಣಿಸಿಕೊಳ್ಳುತ್ತಾನೆ-ಎಂಬ ಸಾಮಾನ್ಯ ನಿಯಮವೊಂದು ಇಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವಾದ್ಯವಿಲ್ಲದ ಮೇಳದಲ್ಲಿ ಒಬ್ಬರಿಗಿಂತ ಹೆಚ್ಚಿಗೆ, ಅಂದರೆ ಇಬ್ಬರು ಮುಮ್ಮೇಳದಲ್ಲಿ ಕಾಣಿಸಿಕೊಳ್ಳುತ್ತಾರೆ. ಉದಾಹರಣೆ: ಹಂತಿ, ಮೋಹರಂ, ಹಾಗೂ ಯಾವದೇ ತರಹದ ಹೆಂಗಸರ ಹಾಡುಗಳನ್ನು ಗಮನಸಿಬಹುದು.

ಒಟ್ಟಿನಲ್ಲಿ ವಾದ್ಯವಿರುವ ಮೇಳದಲ್ಲಿ ಒಬ್ಬನೇ ಹಾಡುಗಾರನಾಗಿದ್ದು, ಇನ್ನು ಉಳಿದ ವಾದ್ಯಗಳೊಂದಿಗೆ ಇಬ್ಬರು ಮೂವರು ಅಥವಾ ಹೆಚ್ಚಿನ ಜನ ಹಿಮ್ಮೆಳದಲ್ಲಿ ಭಾಗವಹಿಸುತ್ತಾರೆ. ಚೌಡಿಕೆ ಮೇಳದಲ್ಲಿ ಶ್ರುತಿಚೌಡಿಕೆಯೊಂದಿಗೆ ಹಿಮ್ಮೆಳ ಕಾಣಿಸುತ್ತದೆ.

ಚೌಡಿಕೆ ಸಂಪ್ರದಾಯದಲ್ಲಿ ಎಲ್ಲಮ್ಮನ ಚರಿತ್ರೆ ಹಾಗೂ ಅನೇಕ ಬಗೆಯ ಕಥನಕವನಗಳನ್ನು ಹಾಡುವ ಧಾಟಿಗಳು ಮೇಲು ನೋಟಕ್ಕೆ ರಂಜನೀಯವೆನಿಸಿದರೂ, ಅವು ಮನಸ್ಸಿನ ಆಳದಲ್ಲಿ ತೀರ ಗಂಭೀರವಾದ ಭಯ-ಭಕ್ತಿಯ ಭಾವವನ್ನು ಉದ್ದೀಪನಗೊಳಿಸುವ ಧಾಟಿಗಳಾಗಿವೆ. ಎಲ್ಲಮ್ಮನ ಬಗೆಗೆ ಜನಪದರ ಮನಸ್ಸಿನಲ್ಲಿರುವ ಭಯ,  ಸಮರ್ಪಣಭಾವ, ಆಕೆಯ ರೌದ್ರಾವತಾರದ ಕಲ್ಪನೆ ಮುಂತಾದವುಗಳನ್ನು ಬಹು ಸ್ಪಷ್ಟವಾಗಿ ಕೇಳುಗರ ಮನಸ್ಸಿನ ಮೇಲೆ ಮುದ್ರೆಯೊತ್ತುತ್ತವೆ. ಒಂದು ರೀತಿಯ ಗೋಳೋ ಎಂದು ರೋಧಿಸುವ, ಹಂಬಲಿಸುವ ಈ ಧಾಟಿಗಳ ಆರ್ತನಾದ – ಅನಾಥಭಾವನೆಯನ್ನು ಬಡಿದೆಬ್ಬಿಸುತ್ತದೆ)

ಹೆಚ್ಚಾಗಿ ಹೆಂಗಸರು ಹಾಡುವ ಸ್ತುತಿಪರವಾದ ಬಿಡಿಹಾಡುಗಳ ಧಾಟಿಗಳು ಗೀಗೀ ಹಾಡುಗಳಲ್ಲಿಯ ಖ್ಯಾಲಗಳ ಧಾಟಿಗಳನ್ನು ಬಹುವಾಗಿ ಹೋಲುತ್ತವೆ. ಖ್ಯಾಲಗಳಂತೆ ತೀವ್ರಲಯದೊಂದಿಗೆ ಪ್ರಾರಂಭವಾಗುವ ಈ ಹಾಡುಗಳ ಪ್ರತಿ ನುಡಿಯ ಕೊನೆಯು, ಧೃತಲಯದಲ್ಲಿ ಕೊನೆಗೊಳ್ಳುತ್ತಿರುತ್ತವೆ. ಗೀಗೀ ಹಾಡುಗಳ ಗತ್ತುಗಳನ್ನು ಡಪ್ಪಿನ ಮೇಲೆ ಮುರಿಯುವ ರೀತಿಯಲ್ಲೇ ಇಲ್ಲಿಯ ಗತ್ತುಗಳನ್ನು ಬಾರ್ಕಿಚೌಡಿಕೆಯ ಮೇಲೆ ಮುರಿಯಲಾಗುತ್ತದೆ. ಪ್ರಾರಂಭದ ಗತ್ತುಗಳು ಕೂಡ ಗೀಗೀ ಅಥವಾ ಗೊಂದಲಿಗರ ಸಂಬಾಳದ ಗತ್ತಿನಂತೆಯೇ ಅಂಕುರಿಸುತ್ತವೆ.

ಚೌಡಿಕೆ ಸಂಪ್ರದಾಯದ ಹಾಡುಗಳನ್ನು ೧) ಎಲ್ಲಮ್ಮನ ಚರಿತ್ರೆಗೆ ಸಂಬಂಧಿಸಿದ ಹಾಡುಗಳು, ೨) ಸ್ತುತಿಯ ಹಾಡುಗಳು, ೩) ಚೌಡಿಕೆ ವಾದ್ಯದೊಂದಿಗೆ ಹಾಡುವ ಇತರ ಕಥನಕವನಗಳು ಎಂದು ಮೂರು ಭಾಗಗಳಲ್ಲಿ ವಿಂಗಡಿಸಬಹುದು. ಒಂದನೆಯ ಪ್ರಕಾರದ ಹಾಡುಗಳಲ್ಲಿ. ಪುರಾಣದಲ್ಲಿ ಕಾಣಿಸುವ ರೇಣುಕೆ ಹಾಗೂ ಎಲ್ಲಮ್ಮ ಒಂದೇ ಎಂದು ಭಾವಿಸಿ, ಜಾನಪದೀಯ ಅಂಶಗಳ ಹಿನ್ನೆಲೆಯಲ್ಲಿ ಅವಳ ವೃತ್ತಾಂತಗಳನ್ನು ಹಾಡಿಕೊಳ್ಳಲಾಗುತ್ತದೆ. ಎಲ್ಲಮ್ಮ ಶಿವನಿಂದ ಪರಶುರಾಮನನ್ನು ಪಡೆಯುವುದು, ಪರಶುರಾಮನು ತಂದೆಯನ್ನು ತೋರೆಂದು ಹಟಮಾಡಿ, ತಾಯಿಯನ್ನು ಪೀಡಿಸುವುದು, ಕೊನೆಗೆ ಅವಳನ್ನು ಕೊಲ್ಲುವ ಮತ್ತು ಎಲ್ಲಮ್ಮ ಜೀವ ಹೊಂದುವ ಪ್ರಸಂಗಗಳನ್ನಲ್ಲದೆ, ಜೋಗುಳಬಾವಿ ಸತ್ತೆವ್ವ, ನಗರಗಾಣಿಗ ಮುಂತಾದವರಿಗೆ ಸಂಬಂಧ ಪಟ್ಟಂತೆ ಎಲ್ಲಮ್ಮನ ಮಹಿಮೆ ಸಾರುವ ಹಾಡುಗಳೂ ಇಲ್ಲಿ ಸೇರುತ್ತವೆ.

ಸ್ತುತಿಯ ಹಾಡುಗಳು ಹೆಚ್ಚಾಗಿ ಜೋಗಾಡುವಾಗ ಹಾಗೂ ಪೂಜೆಯ ಸಮಯದಲ್ಲಿ ಬಳಕೆಯಾಗುವವುಗಳಾಗಿವೆ. ಇವನ್ನು ಗಂಡಸರು ಪ್ರಾಸಂಗಿಕವಾಗಿ ಹಾಡಿಕೊಂಡರೆ, ಹೆಂಗಸರು ಈ ಹಾಡುಗಳನ್ನೇ ಹಾಡುವುದು ಜಾಸ್ತಿಯಾಗಿ ತೋರುತ್ತದೆ. ಮೂರನೆಯ ಪ್ರಕಾರದ ಹಾಡುಗಳು ಎಲ್ಲಮ್ಮನ ಜಗಹೊತ್ತ ಗಂಡಸರು ಹಾಡುವ ಹಾಡುಗಳಾಗಿವೆ. ಇಲ್ಲಿ ಅನೇಕ ಬಗೆಯ ಕಥನಕವನಗಳನ್ನು ಅವರು ಬೆಳ್ಳಬೆಳತನಕ ಹಾಡುವುದನ್ನು ಕಾಣಬಹುದಾಗಿದೆ. ಸರ್ಜಪ್ಪನಾಯ್ಕ, ಬಳ್ಳಾರಿತತ್ವ, ಅಣ್ಣತಂಗಿ, ಆನಂದೃತಿ , ವಿಶ್ವಬ್ರಹ್ಮ ಮುಂತಾದ ಕಥನಕವನಗಳನ್ನು ಅವರು ಹಾಡುವುದುಂಟು. ಎಲ್ಲಮ್ಮನ ಚರಿತ್ರೆಗೆ ಸಂಬಂಧಪಟ್ಟ ಹಾಡುಗಳನ್ನು ಕೂಡ ಹೆಚ್ಚಾಗಿ ಗಂಡು ಜೋಗತಿಯರೇ ಹಾಡುವುದುಂಟು.

ವಾದ್ಯ: ಚೌಡಿಕೆ ಸಂಪ್ರದಾಯ ಸಾಹಿತ್ಯ, ಸಂಗೀತ ಮತ್ತು ಕುಣಿತ ಈ ಮೂರರ ಸಮ್ಮಿಶ್ರ ಕಲೆಯಾಗಿದೆ. ಇಲ್ಲಿಯ ಧಾಟಿಗಳು ಎಷ್ಟು ವಿಶಿಷ್ಟವಾಗಿವೆಯೋ ಇಲ್ಲಿ ಬಳಕೆಯಾಗುವ ವಾದ್ಯಗಳು ಕೂಡ ಅಷ್ಟೇ ವಿಶಿಷ್ಟವಾದವುಗಳಾಗಿವೆ. ಚೌಂಡಿಕಿ, ಚೌಡಿಕೆ, ಚೌಟಗಿ ಹಾಗೂ ಚವುಡ್ಡಿ – ಎಂಬ ಹೆಸರಿನ ವಾದ್ಯ ಈ ಹಾಡುಗಾರಿಕೆಯಲ್ಲಿ ಬಳಕೆಯಾಗುತ್ತದೆ. ಜೊತೆಗೆ ತಾಳಗಳನ್ನು ಕೂಡ ಉಪಯೋಗಿಸಲಾಗುತ್ತದೆ.

ಈ ಚೌಡಿಕೆ ವಾದ್ಯದ ಹುಟ್ಟಿನ ಮೂಲವನ್ನು ಹೇಳುವ ಒಂದು ಕಾಲ್ಪನಿಕ ಐತಿಹ್ಯ ದೊರೆಯುತ್ತದೆ. ಎಲ್ಲಮ್ಮನ ಅಣ್ಣನಾದ ಕಾರ್ತ್ಯವೀರ್ಯಾರ್ಜುನನು, ಜಮದಗ್ನಿಯನ್ನು ಕೊಂದು, ಅವನಲ್ಲಿರುವ ಕಾಮಧೇನುವನ್ನು ಅಪಹರಿಸುತ್ತಾನೆ. ತನ್ನ ಗಂಡ ಸತ್ತುದಕ್ಕೆ ಎಲ್ಲಮ್ಮ ಗೋಳಾಡುತ್ತಿರಲು, ತಾಯಿಯ ದುಃಖವನ್ನು ಸಹಿಸದ ಪರಶುರಾಮನು ಕಾರ್ತ್ಯವೀರ್ಯಾರ್ಜುನನ್ನು ಕೊಂದು ಅವನ ಶಿರವನ್ನೇ ಕೊಳಗ ಮಾಡಿ, ಚರ್ಮವನ್ನೇ ಕೊಳಗಕ್ಕೆ ಮೆತ್ತುವ ತೊಗಲು ಮಾಡಿ, ಕರುಳನ್ನು ದಾರ ಮಾಡಿ, ತೋಳನ್ನು ದಂಡಿಗೆ ಮಾಡಿ, ಕಿರುಬೆರಳನ್ನು ನುಡಿಸುವ ಕಡ್ಡಿ ಮಾಡಿ- ಹೀಗೆಲ್ಲ ಚೌಡಿಕೆ ತಯಾರಿಸಿ ನುಡಿಸುತ್ತ ಬಂದು ತಾಯಿಯನ್ನು ಸಂತೈಸಿದನು. ಇನ್ನೊಂದು ಕಥೆಯ ಪ್ರಕಾರ – ಭೇಟಾಸುರನೆಂಬ ರಾಕ್ಷಸನ ಶಿರ ಕಡಿದು ಅದರಿಂದ ಚೌಡಿಕೆ ಮಾಡಿದನು.

ಈ ಕಾಲ್ಪನಿಕ ಐತಿಹ್ಯಗಳನ್ನು ಗಮನಿಸಿ – ಶ್ರೀ ನಂ. ನಾರಾಯಣಗೌಡ ಅವರು ಚೌಡಿಕೆ ಎಂಬ ಪದದ ನಿಷ್ಪತ್ತಿಯನ್ನು ಹೀಗೆ ಊಹಿಸುತ್ತಾರೆ: “ಚೌಡಿಕೆಯಲ್ಲಿ ಅಂತರ್ಗತವಾಗಿರುವ ‘ಉಡಕೆ’ ಶಬ್ದ ಶೇಲಂ ಜಿಲ್ಲೆಯ ಮಾದೇಶ್ವರ ಭಕ್ತರು ಬಳಸುವ ‘ಉಡಕೈ’ ಎಂಬ ವಾದ್ಯವನ್ನು ನೆನಪಿಗೆ ತರುತ್ತದೆ ….. ಚೌಡಿಕೆಯಲ್ಲಿ ‘ಉಡಕೈ’ ಜೊತೆಗೆ ‘ಚೂಡ’ ಎಂಬ ಶಬ್ದವು ಮೇಳಗೊಂಡಿದೆ. ಚೂಡ ಎಂದರೆ ಶಿರಸ್ಸು ಎಂಬ ಅರ್ಥವಿರುವುದರಿಂದ, ಶಿರಸ್ಸಿನಿಂದಲೇ ಚೌಡಿಕೆಯನ್ನು ಮಾಡಿಕೊಂಡಿದ್ದು ಸರಿಯಿದ್ದರೆ ಚೂಡ ಉಡಕೈ< ಚೂಡುಡುಕೈ < ಚೂವುಡಕೆ ಆಗಿ ಇದರಿಂದ ಚೌಡಿಕೆ ಸಿದ್ಧಿಸುತ್ತದೆ. ಇದಲ್ಲದೆ ಚರ್ಮದ ಉಡುಕೈ ಎಂಬುದೇ ಇದರ ಮೂಲ ಎನ್ನುವುದಾದರೆ; ಚರ್ಮದ ಉಡುಕೈ < ಚಿಮ್ಮುಡುಕೈ < ಚವುಂಡಿಕೆಯಾಗಿ ಚೌಡಿಕೆ ಇದರ ಅಂತ್ಯರೂಪವೆಂದು ಊಹಿಸಬಹುದು. ಈ ಎರಡು ನಿಷ್ಪತ್ತಿಗಳಲ್ಲಿ ಇದೇ ಸರಿ ಎಂದು ಹೇಳುವುದು ಕಷ್ಟವಾದ ಕೆಲಸ” (ಚೌಡಿಕೆ ಕಾವ್ಯಗಳು, ಪು-XII) ಎಂದು ಅಭಿಪ್ರಾಯ ಪಡುತ್ತಾರೆ.

ನಮಗೆ ಪ್ರಾಚೀನ ಕರ್ನಾಟಕದಲ್ಲಿ “ಚಂಡಾಲ (ಳ) ವಲ್ಲಕಿ” ಎಂಬ ಒಂದು ವಾದ್ಯವಿರುವ ಬಗ್ಗೆ ಸುಳುಹು ದೊರೆಯುತ್ತದೆ. “ಚಂಡಾಲವಲ್ಲಕಿ” ಎಂದರೆ, ಒಂದು ಬಗೆಯ ಸಾಮಾನ್ಯವಾದ ತಂತಿವಾದ್ಯ ಅಥವಾ ಕಿನ್ನರಿಯಂತಹ ಕೀಳುದರ್ಜೆಯ ವಾದ್ಯ ಎಂಬ ಅರ್ಥವನ್ನು ಕಾಣುತ್ತೇವೆ. ಎರಡನೆಯ ನಾಗವರ್ಮನು (೧೧೪೫), ತನ್ನ “ಅಭಿದಾನ ವಸ್ತುಕೋಶಂ” (೧೯೩೩) ಎಂಬ ಗ್ರಂಥದಲ್ಲಿ, “ಚಂಡಾಳಿಕೆ ಚಂಡಾಳವಲ್ಲಕೀ ಪರ್ಯಾಯಂ” (೫೧-೩೮) ಎಂದು ಬರೆಯುತ್ತಾನೆ. ಹೀಗಾಗಿ ಚಂಡಾಳವಲ್ಲಕಿ ಮತ್ತು ಚಂಡಾಳಿಕೆ ಎಂಬ ಹೆಸರುಗಳು ಒಂದೇ ವಾದ್ಯದ ಎರಡು ಭಿನ್ನರೂಪಗಳು ಎಂಬುದು ಸ್ಪಷ್ಟವಾಗುತ್ತದೆ. ಕಿಟ್ಟೆಲರು ಚಂಡಾಳಿಕೆ ಅಥವಾ ಚಾಂಡಾಲಿಕೆ- ಈ ಪದಗಳು ‘ಚೌಡಿಕೆ’ ಪದದ ಹಳೆಯ ರೂಪಗಳು ಎಂಬಂತೆ ಉಲ್ಲೇಖಿಸುತ್ತಾರೆ. ಹೀಗಾಗಿ ಚಾಂಡಾಲ (ಳ) ವಲ್ಲಕಿ< ಚಾಂಡಾಲಿ (ಳಿ) ಕೆ < (ಚಂಡಾಲಿ – ಳಿ – ಕೆ ) ಯಾಗಿ, ಇವುಗಳಿಂದ ಚೌಂಡಿಕೆ “ಚೌಡಿಕೆ” ಎಂಬ ಪದ ರೂಪು ಪಡೆದಂತೆ ನನಗೆ ತೋರುತ್ತದೆ.

ಚೌಡಿಕೆ ಪದದ ತೀರ ಹಳೆಯ ರೂಪವಾದ “ಚಂಡಾಲ ( ಳ ) ವಲ್ಲಕಿ” ಎಂಬ ಪದ ಒಂದು ಕೂಡುಪದವಾಗಿದ್ದು, ಚಂಡಾಲ (ಳ) ಮತ್ತು ವಲ್ಲಕಿ ಎಂಬ ಎರಡು ಭಿನ್ನ ಪದಗಳು ಅಲ್ಲಿ ಕಾಣಿಸುತ್ತವೆ. ‘ಚಂಡಾಲ (ಳ)’ ವೆಂದರೆ – ಕೆಳವರ್ಗದ, ಕೀಳುಜಾತಿಯ ಅಥವಾ ಅನೈತಿಕ ಸಂಬಂಧದಲ್ಲಿ ಜನಿಸಿದವನೆಂಬ ಅರ್ಥ ಬರುತ್ತದೆ. ‘ವಲ್ಲಕಿ’ ಎಂದರೆ – ಒಂದು ‘ಸಾಮಾನ್ಯ ತಂತಿವಾದ್ಯ’ ಎಂಬ ಅರ್ಥವಿದೆ. ಹೀಗಾಗಿ ‘ಚಂಡಾಲ (ಳ) ವಲ್ಲಕಿ’ ಎಂದರೆ ಕೆಳವರ್ಗದವರು ಬಾರಿಸುವ ತಂತಿವಾದ್ಯ, ಅರ್ಥಾತ್‌ ಸಾಮಾನ್ಯರ ತಂತಿವಾದ್ಯ < ಸಾಮಾನ್ಯ ತಂತಿವಾದ್ಯ ಎಂಬ ಅರ್ಥ ಉಳಿದುಕೊಳ್ಳುತ್ತದೆ. ಹೀಗಾಗಿ ‘ಚೌಡಿಕೆ’ ಎಂದರೆ – ಸಾಮಾನ್ಯರು ಬಾರಿಸುವ ತಂತಿವಾದ್ಯ ಅಥವಾ ಸಾಮಾನ್ಯ ತಂತಿವಾದ್ಯ – ಎಂದು ಅರ್ಥ ಉಳಿದುಕೊಳ್ಳುತ್ತದೆಂದು ಹೇಳಬಹುದಾಗಿದೆ.

ಚೌಡಿಕೆಯಲ್ಲಿ ಎರಡು ಬಗೆಗಳಿದ್ದು, ಒಂದು ದನಿಗೆ ಆಧಾರವಾಗಿ ಬಾರಿಸುವ ಪಕ್ಕವಾದ್ಯವಾಗಿರುವ ಸುತಿ ಅಥವಾ ಶ್ರುತಿಚೌಡಿಕೆಯಾದರೆ, ಇನ್ನೊಂದು ಪ್ರಧಾನ ತಾಳವಾದ್ಯವಾದ ಬಾರ್ಕಿಚೌಡಿಕೆ ಅಥವಾ ಡಪ್ಪಚೌಡಿಕೆ ಎನಿಸಿಕೊಳ್ಳುತ್ತದೆ.

ಬುಡವಿಲ್ಲದ ಕೊಳಗದ ಆಕಾರದ ಕಂಚಿನ ಅಥವಾ ಕಟ್ಟಿಗೆಯ ಸಾಧನಕ್ಕೆ ಒಂದು ಕಡೆ ಬಾತುಕೋಳಿ, ಆಡು ಅಥವಾ ಆಕಳಿನ ಒಳಚರ್ಮವನ್ನು ಅಂಟಿಸಲಾಗುತ್ತದೆ. ಅದರ ಇನ್ನೊಂದು ಮಗ್ಗುಲಿನ ಒಂದು ಕಡೆ ಎರಡು ಮೊಳದಷ್ಟು ಉದ್ದದ ಬಿದಿರಿನ ಕೋಲಲನ್ನು ಜೋಡಿಸಿದ್ದು, ಅದರ ತುದಿಗೆ ಸ್ವಲ್ಪ ಹಿಂದೆ ತೂತು ಕೊರೆದು, ಅದರಲ್ಲಿ ಒಂದು ಕಟ್ಟಿಗೆಯ ಬೆಣೆಯನ್ನು ಹಾಕಿರುತ್ತಾರೆ. ಒಂದು ಮಗ್ಗುಲು ಮುಚ್ಚಿದ ಚರ್ಮದ ನಡುವೆ ತೂತುಹಾಕಿ, ಸಣ್ಣನೆಯ ತಂತಿಯನ್ನು ಇದರಲ್ಲಿ ಹಾಸಿ, ತಂತಿಯ ತುದಿಗೆ ಒಂದು ದುಡ್ಡು ಕಟ್ಟಿರುತ್ತಾರೆ.  ಈ ತಂತಿಯ ಇನ್ನೊಂದು ತುದಿಯನ್ನು ಕೋಲಿನ ತುದಿಯಲ್ಲಿರುವ ಜಿಣಿಗೆ ಸುತ್ತಿರುತ್ತಾರೆ. ಇದರಿಂದ ತಂತಿಯನ್ನು ಅವರವರ ದನಿಗೆ ತಕ್ಕಂತೆ ಬಿಗಿಯಾಗಿಸಲು, ಸಡಿಲುಗೊಳಿಸಲು ಬರುವಂತಿದ್ದು, ಈ ತಂತಿಯನ್ನು ಒಂದು ಕಡ್ಡಿಯಿಂಧ ಮೀಟುತ್ತ ಶ್ರುತಿ ಹಿಡಿಯಲಾಗುತ್ತದೆ. ಇದು ಶ್ರುತಿಚೌಡಿಕೆ ತಯಾರಿಕೆಯ ಕ್ರಮವಾಗಿದೆ.

ಬಾರ್ಕಿಚೌಡಿಕೆ ಅಥವಾ ದಪ್ಪಚೌಡಿಕೆ ಕೂಡ ಶೃತಿಚೌಡಿಕೆಯಂತೆಯೇ ಇದ್ದು, ಇಲ್ಲಿ ತಂತಿಯ ಬದಲಾಗಿ ಕುರಿಯ ಕರುಳಿನ ಹೊಸೆದಾರವನ್ನು ಬಳಸಿರುತ್ತಾರೆ. ಇದಕ್ಕೆ ಬಿದಿರಿನ ಕಟ್ಟಿಗೆಯ ಕೋಲನ್ನು ಬಳಸದೆ – ಹೊಸೆದಾರದ ಮುಂದಿನ ತುದಿಗೆ ಒಂದು ಕಟ್ಟಿಗೆಯ ಚಿಣಿಯನ್ನು ಕಟ್ಟಿದ್ದು, ಈ ಚಿಣಿಯ ಸಹಾಯದಿಂದ ಹುರಿಯನ್ನು ಎಡಗೈಯಿಂದ ಜಗ್ಗಿ ಹಿಡಿದು, ಬಲಗೈಯ ಬೆರಳುಗಳಿಂದ ಅಥವಾ ಬಿದಿರಿನ ಕಡ್ಡಿಯಿಂದ ಮೀಟುತ್ತಿರುತ್ತಾರೆ.

ತಂತಿವಾದ್ಯವಾದ ಶ್ರುತಿಚೌಡಿಕೆ ಹಿಮ್ಮೇಳದ ಪ್ರಮುಖ ಪಕ್ಕವಾದ್ಯವಾಗಿದ್ದು, ಹಾಡುಗಾರರ ದನಿಗೆ ಸಹಾಯವಾಗಿ, ಶೃತಿ ಹಿಡಿಯುವ ಕೆಲಸ ಮಾಡುತ್ತದೆ. ತಂಬೂಜರಿ, ಏಕತಾರಿ ಹಾಗೂ ಹಲಗೆಮೇಳದಲ್ಲಿ ಗಾಯಕನ ದನಿಗೆ ಆಸರೆಯಾಗಿರುವ ಸನಾದಿಗಳ ಕೆಲಸವನ್ನೇ ಈ ಶ್ರುತಿಚೌಡಿಕೆ ಮಾಡುತ್ತಿರುತ್ತದೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ – ಹಾರ್ಮೋನಿಯಂ ಹಾಗೂ ಅದರ ಮಾದರಿಯ ವಾದ್ಯಗಳ ಕೆಲಸವನ್ನೇ ಶೃತಿಚೌಡಿಕೆ ಮಾಡುತ್ತಿರುತ್ತದೆ.

ಕುರಿಯ ಕರುಳಿನ ಹೊಸೆದಾರವನ್ನು ಹೊಂದಿದ ಬಾರ್ಕಿ ಚೌಡಿಕೆಯು ಮೇಳದ ಪ್ರಧಾನ ತಾಳವಾದ್ಯವಾಗಿದ್ದು, ಇದು ಚರ್ಮವಾದ್ಯದ ಕೆಲಸ ಮಾಡಿ , ಸಂಗೀತದ ತಾಳಲಯವನ್ನು ಕಾಯ್ದುಕೊಂಡು ಹೋಗುತ್ತದೆ. ಗೊಂದಲಿಗರ ಮೇಳದಲ್ಲಿ ಸಂಬಾಳ, ಗೀಗೀಮೇಳದಲ್ಲಿ ಡಪ್ಪು, ಬಾಜಿ ಮೇಳದಲ್ಲಿ ಹಲಿಗೆ-ದಿಮ್ಮಿ, ಸಂಗೀತದಲ್ಲಿ ತಬಲಾ- ಮೃದಂಗಗಳು ಮಾಡುವ ಕೆಲಸನವನ್‌ಉ ಎಲ್ಲಮ್ಮನ ಹಾಡುಗಾರಿಕೆಯಲ್ಲಿ ಬಾರ್ಕಿಚೌಡಿಕೆ ಮಾಡುತ್ತದೆ.

ತಂತಿವಾದ್ಯಗಳಲ್ಲಿ ತತ ಮತ್ತು ವಿತತ ವಾದ್ಯಗಳೆಂದು ಎರಡು ಪ್ರಕಾರಗಳನ್ನು ಗುರುತಿಸಲಾಗುತ್ತದೆ. ತತವಾದ್ಯಗಳೆಂದರೆ ಕೈಬೆರಳಿನಿಂದ ತಂತಿಯನ್ನು ಮೀಟಲಾಗುವ ವಾದ್ಯಗಳು, ವಿತತವಾದ್ಯಗಳೆಂದರೆ ಬಿಲ್ಲಿನಿಂದ ತೀಡಿ, ಸ್ವರೋತ್ಪನ್ನ ಮಾಡುವ ವಾದ್ಯಗಳು. ಎಲ್ಲಮ್ಮನ ಹಾಡುಗಳಲ್ಲಿ ಬಳಕೆಯಾಗುವ ಚೌಡಿಕೆಗಳು ತತ ಮತ್ತು ವಿತತ ಎರಡೂ ಬಗೆಯ ವಾದ್ಯಗಳನ್ನು ಬರಿಸುವ ರೀತಿಯನ್ನು ಒಟ್ಟಿಗೆ ಅನುಕರಿಸುವಲ್ಲಿ ತನ್ನದೇ ಆದ ಕ್ರಮವನ್ನು ಪಡೆದಂತೆ ತೋರುತ್ತದೆ: ಚೌಡಿಕೆಗಳನ್ನು ಕಡ್ಡಿಯಿಂದ ಮೀಟಲಾಗುತ್ತದೆ; ತತವಾದ್ಯಗಳನ್ನು ಬಾರಿಸುವ ಬೆರಳಿನ ಬದಲಾಗಿ ಇಲ್ಲಿ ಕಡ್ಡಿ ಉಪಯೋಗವಾಗಿರಬೇಕು. ಹೀಗಾಗಿ ಇದು ತತವಾದ್ಯಗಳ ವಾದನ ಕ್ರಮಕ್ಕೆ ಸಮೀಪದ ಸಂಬಂಧಿಯಂತೆ ತೋರುತ್ತದೆ. ಜೊತೆಗೆ ವಿತತವಾದ್ಯಗಳಂತೆ, ಬೇರೊಂದು ಸಾಧನದ ಘರ್ಷಣೆಯಿಂದ ನಾದ ಹೊರಡಿಸುವ ಕ್ರಮವನ್ನು ಲಕ್ಷಿಸಿದರೆ ವಿತತವಾದ್ಯಗಳ  ವಾದನ ಕ್ರಮಕ್ಕೆ ಸಮೀಪವಾಗಿಯೂ ಕಾಣುತ್ತದೆ.

ವಿತತ ವಾದ್ಯಗಳಲ್ಲಿ ಒಂದಾದ ಸಾರಂಗಿಯಲ್ಲಿ ಕುರಿಯ ಕರುಳಿನ ದಾರವನ್ನೇ ಬಳಸುತ್ತಾರೆ; ಜೊತೆಗೆ ಸ್ವರಗಳ ಪ್ರತಿಧ್ವನಿಗಾಗಿ ಕೆಲವು ತಂತಿಗಳನ್ನೂ ಉಪಯೋಗಿಸುತ್ತಾರೆ. ಇಲ್ಲಿ ಕುರಿಯ ಕರುಳಿನ ಹೊಸೆದಾರ ಹಾಗೂ ತಂತಿ ಎರಡೂ ಒಂದೇ ವಾದ್ಯದಲ್ಲಿ ಉಪಯೋಗವಾಗಿದೆ ಮತ್ತು ಅದು ಹಾಡುಗಾರನ ದನಿಗೆ ಸಹಾಯಕವಾಗಿ ಬಾರಿಸುವ ಪಕ್ಕ ವಾದ್ಯವಾಗಿದೆ ಎಂಬುದನ್ನು ಲಕ್ಷಿಸಬೇಕು. ಚೌಡಿಕೆಯಲ್ಲಿ ಒಂದು ಕುರಿಯ ಕರುಳಿನ ದಾರ ಹೊಂದಿದ್ದರೆ ಇನ್ನೊಂದು ತಂತಿ ಹೊಂದಿದೆ. ಜೊತೆಗೆ ಎರಡೂ ಒಂದೇ ಬಗೆಯ ಹಾಡಿನ ಸಂಪ್ರದಾಯದಲ್ಲಿ, ಏಕಕಾಲಕ್ಕೆ ಬಳಕೆಯಾಗುತ್ತವೆ. ಅಲ್ಲಿ ಒಂದೇ ವಾದ್ಯದಲ್ಲಿ ಕಾಣಿಸುವ ಕ್ರಮ ಇಲ್ಲಿ ಎರಡಾಗಿ ಹೋಗಿದೆ. ಆದರೆ ಯಾವುದರಿಂದ ಯಾವುದು ಪ್ರೇರಿತವಾಯಿತೆಂದು ಹೇಳುವುದು ನನ್ನಮಟ್ಟಿಗೆ ಮಾತ್ರ ಆಗದ ಕೆಲಸ. ಆದರೆ ಇಷ್ಟು ಮಾತ್ರ ಹೇಳಬಹುದು. ಕುರಿಯ ಕರುಳಿನ ಹೊಸೆದಾರ ಹೊಂದಿದ ಚೌಡಿಕೆಯ ಉಪಯೋಗ ಮಾತ್ರ ಸುತಿಯ ಬದಲಾಗಿ ತಾಳವಾದ್ಯವಾದುದು ಗಮನಾರ್ಹ ಅಂಶ.

ಕುಣಿತ: ಎಲ್ಲಮ್ಮನ ಮುಂದೆ ಅಥವಾ ಅವಳ ಹೆಸರಿನಲ್ಲಿ ಕುಣಿಯುವುದುನ್ನು ಅವಳ ಭಕ್ತರು ‘ಕುಣಿತ’ ಎಂದು ಕರೆಯದೆ, ‘ಆಡುವುದು’ ಎಂದು ಕರೆಯುತ್ತಾರೆ. ಜೋಗಬೇಡುವುದನ್ನು ‘ಜೋಗಾಡುವುದು’ ಎಂದು ಕರೆಯುತ್ತಾರೆ. ಏಕೆಂದರೆ ಜೋಗಬೇಡುವುದು ಕೇವಲ ತಮ್ಮ ಹೊಟ್ಟ ಹೊರಕೊಳ್ಲುವ ಕೆಲಸ ಎಂದು ಭಾವಿಸದೆ, ಅದು ಎಲ್ಲಮ್ಮನ ಸೇವೆ ಎಂಬ ಭಾವನೆಯಿದೆ; ಹೀಗಾಗಿ ಕುಣಿಯುವಲ್ಲಿಯೂ ಕೂಡ ‘ಅವಳಿಗೆ ಸಲ್ಲಿಸುವ ಸೇವೆ’ ಎಂಬ ಭಾವನೆಯಿದ್ದು , ಕುಣಿಯುವಾಗ ಎಲ್ಲಮ್ಮ ತಮ್ಮ ದೇಹದಲ್‌ಇ ಸಂಚಾರ ಮಾಡುವಳೆಂದು ಬಗೆಯುವ ಜನ, ತಾವು ಕುಣಿಯುವುದು ಕೂಡ ಎಲ್ಲಮ್ಮನ ಒಂದು ಬಗೆಯ ‘ಲೀಲೆ’ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

ಬಾರ್ಕಿಚೌಡಿಕೆಯ ತಾಳಗತ್ತಿನೊಂದಿಗೆ ಹೆಜ್ಜೆಹಾಕುವುದೇ ಸುಮಾರಾಗಿ ಇಲ್ಲಿಯ ಕುಣಿತವಾಗಿದೆ. ವಿಶೇಷವಾದ ಕುಣಿತವೇನೂ ಇಲ್ಲಿ ಕಂಡು ಬರುವುದಿಲ್ಲ. ಗಂಡು ಜೋಗತಿಯರ ಕುಣಿತವನ್ನು ಗಮನಿಸಿದರೆ ಹೆಣ್ಣಿನ ಹಾವಭಾವಗಳನ್ನು ಅನುಕರಣೆ ಮಾಡುತ್ತ, ನಿಂತಲ್ಲಿಯೇ ಹೆಜ್ಜೆ ಹಾಕುತ್ತ, ಹುಬ್ಬೇರಿಸುತ್ತ, ಸೀರೆ ಸರಿಪಡಿಸುತ್ತ, ಕೈಬೀಸಿ ನಡೆಯುವ ನಟನೆ ಮಾಡುವುದನ್ನು ನೋಡಿದರೆ ತಮ್ಮ ಸವಾರಿ ಏಳುಕೊಳ್ಳದ ಕಡೆಗೆ ಎಂಬ ಭಾವವನ್ನೇ ವ್ಯಕ್ತಪಡಿಸುತ್ತಾರೇನೋ ಎನಿಸುತ್ತದೆ. ಹೆಣ್ಣುಮಕ್ಕಳು ಕೂಡ ಎಲ್ಲಮ್ಮನತ್ತ ಭಾವಿಸುವ ಭಾವವನ್ನೇ ವ್ಯಕ್ತಗೊಳಿಸುವ ಕುಣಿತವನ್ನೇ ಕುಣಿಯುತ್ತಿರುತ್ತಾರೆ.

ಏನಿದ್ದರೂ ಇದೊಂದು ‘ಕಲೆ’ ಎಂದು ಪರಿಗಣಿಸುವಲ್ಲಿ ನನ್ನ ಮನಸ್ಸಂತೂ ಒಪ್ಪುತ್ತಿಲ್ಲ. ಕಲೆಯ ಮುಖ್ಯ ಉದ್ದೇಶ ನೋಡುವವರ ಮನಸ್ಸಿನ ಮೇಲೆ ಆಹ್ಲಾದಕರವಾದ ಪರಿಣಾಮವನ್ನು ಬೀರುವುದು. ನಮ್ಮ ಜನಪದ ಪಂಡಿತರು ಪುರವಂತರ ಕುಣಿತ, ಎಲ್ಲಮ್ಮನ ಕುಣಿತಗಳು ಪ್ರೇಕ್ಷಕರ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮದ ಕಡೆ ಗಮನ ಹರಿಸುತ್ತಿಲ್ಲ. ಪುರವಂತರು ರೋಷಾವೇಶದಿಂದ ಕುಣಿಯುತ್ತ, ದೇಹದ ಅಂಗಾಂಗಳಲ್ಲಿ ಮೊಳೆಗಳನ್ನು ಚುಚ್ಚಿಕೊಳ್ಳುವ ದೃಶ್ಯವಂತೂ ನೋಡುವವರ ಮನಸ್ಸಿಗೆ ಹಿಂಸೆಯನ್ನು ಕೊಡುವ ಒಂದು ನೋಟವಾಗಿದೆ. ಎಲ್ಲಮ್ಮನ ಕುಣಿತ ಕೂಡ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಯೇ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಅದಕ್ಕಾಗಿ ಇವನ್ನು ಕಲೆಗಳೆಂದು ಪರಿಭಾವಿಸಿ ಪ್ರೋತ್ಸಾಹಿಸುವಲ್ಲಿ ಆರೋಗ್ಯಕರ ಲಕ್ಷಣ ಕಾಣಿಸುವುದಿಲ್ಲವೇನೋ ಎಂದೆನಿಸುತ್ತದೆ.