ಶಕ್ತಿಯ ಆರಾಧನೆ ಭರತಖಂಡದಲ್ಲಿ ಪುರಾತನವಾದುದು. ಈ ಆರಾಧನೆ ವಿವಿಧ ಕಡೆಯಲ್ಲಿ ನಾನಾ ರೀತಿಯಾಗಿ ನಡೆಯುತ್ತಲಿದೆ. ರೋಗರುಜಿನಗಳ ಪರಿಹಾರಕ್ಕಾಗಿ ಈ ಶಕ್ತಿಯನ್ನು ಕಾಳಿ, ದುರ್ಗವ್ವ, ದ್ಯಾಮವ್ವ, ಕರೆವ್ವ, ಮಾರೆವ್ವ, ಚಂಡಿ, ಮಾರಿಕಾಂಬೆ, ಎಲ್ಲವ್ವ, ಹುಲಿಗೆಮ್ಮ, ಹುಚ್ಚೆಂಗಮ್ಮ ಮೊದಲಾದ ಹೆಸರುಗಳಿಂದ ಆರಾಧಿಸಿ ಅನುಕೂಲವಿದ್ದಾಗ ಹರಕೆ ಸಲ್ಲಿಸುವ ಸಾಂಪ್ರದಾಯ ಜಾನಪದರಲ್ಲಿದೆ.

ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಳುಕೊಳ್ಳದಲ್ಲಿ ನೆಲೆಸಿರುವ ಶಕ್ತಿದೇವತೆ ಏಳು-ಕೊಳ್ಳದ ಎಲ್ಲಮ್ಮ. ಇಲ್ಲಿ ಬೋರೆಸಾಬಕೊಳ್ಳ, ತಮ್ಮಣ್ಣನ ಕೊಳ್ಳ, ಸಿದ್ಧರಕೊಳ್ಳ, ಸಂಗ್ಯಾನಕೊಳ್ಳ, ಪರಸಗಡಕೊಳ್ಳ, ಮಾವಿನಕೊಳ್ಳ, ಎಂಬುದಾಗಿ ಏಳುಕೊಳ್ಳಗಳಿರುವುದರಿಂದ ಈಕೆಗೆ ಏಳುಕೊಳ್ಳದ ಎಲ್ಲಮ್ಮ ಎಂದು ಹೆಸರು. ಈ ದೇವಸ್ಥಾನದಲ್ಲಿ ಚಿಕ್ಕ ದೊಡ್ಡ ಸೇರಿ ಒಟ್ಟು ೧೬೩ ದೇವತೆಗಳಿವೆ.

ಎಲ್ಲಮ್ಮ ಸ್ತ್ರೀ ಮತ್ತು ಪುರುಷ ಶಕ್ತಿಗಳ ಸಮ್ಮಿಲನವಾದುದರಿಂದಲೇ ಆಕೆಯ ಭಕ್ತರಾದ ಜೋಗವ್ವ ಮತ್ತು ಜೋಗಪ್ಪರು ಆ ಶಕ್ತಿಯೊಡನೆ ಮದುವೆಯಾಗುತ್ತಾರೆ. ಅಂದರೆ ದೇವಿಯ ಭಕ್ತರಾಗುತ್ತಾರೆ. ಸಾಂಪ್ರದಾಯಿಕವಾಗಿ ಈ ಮದುವೆ ಆಕೆಯ ದೇವಸ್ಥಾನದಲ್ಲಿಯೇ ನಡೆಯುತ್ತಿತ್ತು. ಈಗ ಎಲ್ಲಮ್ಮನ ಗುಡ್ಡದಲ್ಲಿಯ ಪೂಜರಿಗಳ ಮನೆಯಲ್ಲಿಯಾಗಲಿ, ತಮ್ಮ ತಮ್ಮ ಊರುಗಳಲ್ಲಿಯ ಎಲ್ಲಮ್ಮನ ದೇವಸ್ಥಾನದಲ್ಲಿಯಾಗಲಿ ಜೋಗಮ್ಮ ಅಥವಾ ಜೋಗಪ್ಪನ ಮನೆಯಲ್ಲಿಯಾಗಲಿ ನಡೆಯುತ್ತದೆ. ಇದರಿಂದಲೂ ಈ ದೇವತೆಯ ಪ್ರಸಾರ ವ್ಯಾಪಕಗೊಳ್ಳುತ್ತಲಿದೆ.

ಪ್ರಾದೇಶಿಕ ವ್ಯಾಪ್ತಿ:

ನಾನು ೧೯೮೦ರಲ್ಲಿ ಧಾರವಾಡ ಜಿಲ್ಲೆಯಲ್ಲಿ ನಡೆಸಿದ ಪರಿವೀಕ್ಷಣೆಯ ಪ್ರಕಾರ ಈ ಜಿಲ್ಲೆಯ ಸುಮಾರು ೧೭೦೦ ಹಳ್ಳಿಗಳಲ್ಲಿ ೫೮೧ ಎಲ್ಲಮ್ಮನ ಗುಡಿಗಳಿವೆ (ಇದರಲ್ಲಿ ದೊಡ್ಡ ಗುಡಿ. ಸಣ್ಣ ಗುಡಿ, ಗಿಡದ ಕೆಳಗೆ ಕಲ್ಲು ಇಟ್ಟ ಪೂಜೆಯ ಸ್ಥಾನ ಇತ್ಯಾದಿಗಳು ಸೇರಿವೆ). ಅಲ್ಲದೆ ೬೩೧ ಜನರು ಜೋಗಪ್ಪಗಳಾಗಿ ದೇವಿಯ ಸೇವೆಯಲ್ಲಿರುತ್ತಾರೆ. ೨೧೦೮ ಜೋಗಮ್ಮಗಳಾಗಿ ೨೮೩೧ ಹೆಣ್ಣು ಮಕ್ಕಳು ವ್ಯಭಿಚಾರ ವೃತ್ತಿಗೆ ೧೦೮ ಜನರು ದೇವರು ಹೇಳುವ ವೃತ್ತಿಗೆ ಸೇರಿದವರಾಗುತ್ತಾರೆ.

ಬೇರೆ ಬೇರೆ ಪ್ರದೇಶಗಳಲ್ಲಿ ಎಲ್ಲಮ್ಮ ಇರುವಲ್ಲಿ ವಿಧಿ ವಿಧಾನಗಳು ಭಿನ್ನವಾಗಿವೆ. ಕಾರಣ ಎಲ್ಲಮ್ಮನು ಶಾಖಾಹಾರಿಯೂ ಹೌದು ಮಾಂಸಾಹಾರಿಯೂ ಹೌದು. ಈಕೆ ಮೂಲತಃ ಜನರನ್ನು ದನಕರುಗಳನ್ನು ಬೆಳೆಗಳನ್ನು ರಕ್ಷಿಸುವ ದೇವತೆ. ಕೆಲವರು ಈ ದೇವಿ ಬ್ರಾಹ್ಮಣರ ದೇವತೆ ಎಂದು ವಾದಿಸುತ್ತಾರೆ. ಯಾಕೆಂದರೆ ಗುಲಬರ್ಗಾ ಜಿಲ್ಲೆಯ ಬೆಳದಡಿ ಎಲ್ಲಮ್ಮನ ಪೂಜಾರಿಗಳು ಬ್ರಾಹ್ಮಣರಾಗಿದ್ದರು. ಅಲ್ಲದೆ ವಾಯು ಪುರಾಣ, ಭಾಗವತ, ಮೊದಲಾದ ಗ್ರಂಥಗಳಲ್ಲಿ ಎಲ್ಲಮ್ಮನನ್ನು ಕುರಿತು ಪ್ರಸ್ತಾಪ ಬಂದಿದೆ. ಜೈನರು ಬತ್ತಲೆಯಾಗಿರುವ ರೀತಿಯಲ್ಲಿ ಎಲ್ಲಮ್ಮನಿಗೂ ಬತ್ತಲೆ ಸೇವೆ ನಡೆಯುವದರಿಂದ ಜೈನರದೇವಿ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಉದಾಹರಣೆಗಾಗಿ ಗುಲಬರ್ಗಾ ಜಿಲ್ಲೆಯ ಆಳಂದ ಚುಂಚೂರಿನ ಮಾಪುರಿನ ತಾಯಿ, ಆರೋಲಿಗ್ರಾಮದ ಹುಲಿಗೆಮ್ಮ ಎಂಬ ಹೆಸರಿನಲ್ಲಿ ಆಕೆಯನ್ನು ಜೈನರ ದೇವಿ ಎಂದು ಭಾವಿಸುತ್ತಾರೆ.

ಎಲ್ಲಮ್ಮ ಹೊಸಪೇಟೆಯ ಮುನಿರಾಬಾದ ಹತ್ತಿರದ ಗ್ರಾಮಗಳಲ್ಲಿ ಹುಲಿಗೆಮ್ಮ ಎಂಬ ಹೆಸರಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಈಕೆಯ ವಾಹನ ಹುಲಿಯಾಗಿರುವುದರಿಂದ ಆ ಹೆಸರು ಆಕೆಗೆ ಬಂದಿರಬೇಕು. ಆಂಧ್ರದಿಂದ ವಲಸೆ ಬಂದ ರಾಯಚೂರು ಜಿಲ್ಲೆಯ ಉತ್ತರ ಭಾಗದ ಬಹುಮಂದಿ ಜನರು ಈ ಶಕ್ತಿ ದೇವತೆಯನ್ನು ಸವಾರೆಮ್ಮ ಎಂದು ಕರೆಯುತ್ತಾರೆ. ಇದೇ ರೀತಿ ಗುಲಬರ್ಗಾ ಜಿಲ್ಲೆಯ ಚುಂಚೂರ ಎಲ್ಲಮ್ಮನನ್ನು ಮಾಪೂರತಾಯಿ ಎಂದು ಕರೆಯುವರು. ಎರಡು ಊರುಗಳ ಗಡಿಯಲ್ಲಿರುವ ಎಲ್ಲಮ್ಮನನ್ನು ‘ಸೀಮೆ ಎಲ್ಲಮ್ಮ’ ಎಂದು ಕರೆಯುವ ವಾಡಿಕೆ ಇದೆ. ಚುಂಚೂರ ಮಾಪುರ ತಾಯಿ, ಬಗದುರಿ ಎಲ್ಲಮ್ಮ-ಇವರು ಈ ವರ್ಗಕ್ಕೆ ಸೇರಿದವರು. ಆಕೆಯೇ ಮೈ ಹುತ್ತಿನಂತೆ ಆದುದಕ್ಕೆ ಹುತ್ತನ್ನೇ ಎಲ್ಲಮ್ಮನೆಂದು ಭಾವಿಸಿ ಪೂಜಿಸುವದೂ ಉಂಟು. ಮಡ್ಡಿಯ ಹತ್ತಿರ ಇರುವ ಎಲ್ಲಮ್ಮನಿಗೆ ಮಡ್ಡಿ ಎಲ್ಲಮ್ಮನೆಂದು ಕರೆಯುವರು. ಇದೇ ಪ್ರಕಾರ ಗಿಡದ ಕೆಳಗೆ ಎಲ್ಲಮ್ಮನ ಮೂರ್ತಿ ಇಟ್ಟು ಪೂಜಿಸುವ ಆಕೆಯನ್ನು ಗಿಡದ ಎಲ್ಲಮ್ಮನೆಂದು ಕರೆಯುವರು. ಧಾರವಾಡ ಪಟ್ಟಣದಲ್ಲಿಯೇ ೪ ಎಲ್ಲಮ್ಮನ ಗುಡಿಗಳಿವೆ. ಇಲ್ಲಿಯ ಕುರುಬರ ಓಣಿಯಲ್ಲಿ ಸುಮಾರು ೪೦’ ಉದ್ದ ೪೦’ ಅಗಲದ ಗುಡಿಯಿದೆ. ಇದರಲ್ಲಿ ಎಲ್ಲಮ್ಮ ಬೀರಪ್ಪ ಮತ್ತು ಪರಶುರಾಮನ ಕಲ್ಲಿನ ಮೂರ್ತಿಳಿವೆ. ಅವು ಪೂರ್ವಕ್ಕೆ ಮುಖಮಾಡಿವೆ. ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈ ಓಣಿಯಲ್ಲಿ ಸುಮಾರು ೪೦೯ ಜೋಗಮ್ಮಗಳಿದ್ದಾರೆ. ಧಾರವಾಡದ ಲಕ್ಷ್ಮೀ ಕೆರೆಯ ದಂಡೆಯ ಮೇಲೆ ಎಲ್ಲಮ್ಮನ ಸಣ್ಣ ಗುಡಿಯಿದೆ. ಈ ದೇವಿ ಮೊದಲು ಕೊಪ್ಪದ ಕೆರೆಯಲ್ಲಿ ಇತ್ತು. ಅಲ್ಲಿಂದ ಒಡ್ಡರು ಲಕ್ಷ್ಮೀ ಕೆರೆಗೆ ವಲಸೆ ಬಂದಾಗ ಅದನ್ನು ತಮ್ಮ ಜೊತೆಗೆ ತೆಗೆದುಕೊಂಡು ಬಂದರು. ಗುಡಿ ಪೂರ್ವಕ್ಕೆ ಮುಖ ಮಾಡಿದೆ. ಇಲ್ಲಿ ಒಡ್ಡರೇ ಪೂಜಾರಿಗಳು. ಈ ಗುಡಿಯಲ್ಲಿ ಎಲ್ಲಮ್ಮ ಹಾಗೂ ದುರ್ಗಮ್ಮ ಇಬ್ಬರೂ ಇರುವರು. ಎಲ್ಲಮ್ಮನದು ಕಟ್ಟಿಗೆಯ ಮೂರ್ತಿ ಇದ್ದು ಅದಕ್ಕೆ ಕೆಂಪು ಬಣ್ಣವನ್ನು ಕೊಟ್ಟಿರುತ್ತಾರೆ. ಭಕ್ತರು ಕೊಟ್ಟ ಬೆಳ್ಳಿಯ ಮುಖವಾಡವಿದೆ. ಗುಡಿಯ ಮುಂದೆ ಬೇವಿನ ಗಿಡವಿದೆ. ಅದರ ಕೆಳಗೆ ಎಲ್ಲಮ್ಮನ ಪಾದಗಟ್ಟಿ ಇದೆ. ಈ ಓಣಿಯಲ್ಲಿ ಸುಮಾರು ೧೫ ಜೋಗಮ್ಮಗಳಿದ್ದಾರೆ. ಇದೇ ರೀತಿ ಗೌಳಿಗರ ಓಣಿಯಲ್ಲಿ ಒಂದು ಮನೆಯಲ್ಲಿಯೇ ಎಲ್ಲಮ್ಮನ ಪೂಜೆ ಮಾಡುತ್ತಿದ್ದು ಈಗ ಗುಡಿ ನಿರ್ಮಾಣದ ಹಂತದಲ್ಲಿದೆ. ಕುರಡಗಿ, ವೆಂಕಟಾಪುರ, ಕುಂದಗೋಳೀ, ಜೇಕಿನಕಟ್ಟಿ, ಬಿಂಕದಕಟ್ಟಿ, ಹುಬ್ಬಳ್ಳಿ, ತೊರಗಲ್ಲು, ಮುಧೋಳ, ಜಮಖಂಡಿ, ಗೋಕಾಕ, ಮುನವಳ್ಳಿ,  ಮಣ್ಣೂರು, ಚಂದ್ರಗುತ್ತಿ, ಬಾಗಲಕೋಟೆ, ಕೆರೂರು, ಐಹೊಳೆ, ದೇವಗಿರಿ, ಹೊಮ್ಮರಡಿ, ಚಾಕಲಬ್ಬಿ, ಉಪ್ಪಿನ ಬೆಟಗೇರಿ, ಉಣಕಲ್ಲ, ಮುಮ್ಮಿಗಟ್ಟಿ ಗುಡ್ಡ, ಟಾಕಂಪೂರ, ಕತನಕನಹಳ್ಳಿ, ಹುಲ್ಲೂರು, ಬಂಕಾಪೂರ, ಮಾಗಾವಿ, ಬೂದಿಹಾಳ, ಕೊಕಟನೂರು, ನಾಗಾವಿ, ಹಳಕಟ್ಟಿ, ಬೆಳಗಾಂವಿ, ಚಾಕಲಬ್ಬಿ, ದೇವಗಿರಿ, ಗದಗ, ರಾಣೇಬೆನ್ನೂರ, ಹಾವೇರಿ, ಹಿರೇಕೆರೂರ ಮುಂತಾದ ಊರುಗಳಲ್ಲಿ ಎಲ್ಲಮ್ಮನ ಗುಡಿಗಳು ಕಂಡು ಬರುತ್ತವೆ.

ಪ್ರಾದೇಶಿಕ ಪ್ರಭಾವ:

ಎಲ್ಲಮ್ಮನ ಪ್ರಭಾವ ಅನೇಕ ಪ್ರದೇಶಗಳಲ್ಲಿ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಹಬ್ಬಿದೆಯೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವುಗಳಲ್ಲಿ ಕೆಲವನ್ನು ನೋಡಬಹುದು. ಎಲ್ಲಮ್ಮ ಗುಡ್ಡದ ಪೂಜಾರಿಯಾದ ಶ್ರೀ ರೇಣಕಿಗೌಡರು ಈ ಬಗೆಗೆ ಹೇಳಿದುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಬೆಳಗಾಂವಿ ಜಿಲ್ಲೆಯ ರಾಯಬಾಗ ಊರಿನವರಾದ ಪರಮಾನಂದವಾಡಿಯವರ ಧರ್ಮಪತ್ನಿ ಕೃಷ್ಣವ್ವ ದಾಳಿಯವರು ಕುಷ್ಟರೋಗದಿಂದ ಬಳಲುತ್ತಿದ್ದರು. ೫-೬ ವರ್ಷಗಳವರೆಗೂ ಎಲ್ಲಿ ತೋರಿಸಿದರೂ ನಿವಾರಣೆಯಾಗಲಿಲ್ಲ. ಕೊನೆಗೆ ಎಲ್ಲಮ್ಮನಿಗೆ ನಡೆದುಕೊಂಡರೆ ನಿವಾರಣೆಯಾಗುವುದು ಎಂಬ ನಂಬಿಕೆಯಿಂದ ಗುಡ್ಡಕ್ಕೆ ಬಂದು ಪೂಜಾರಿಯನ್ನು ಕಂಡು ಅವರ ಹೇಳಿಕೆಯಂತೆ ನಡೆದುಕೊಂಡದ್ದರಿಂದ ಎರಡು ವರ್ಷದೊಳಗಾಗಿ ಕುಷ್ಠರೋಗ ನಿವಾರಣೆಯಾಯಿತು. ಅಂದಿನಿಂದ ಇವತ್ತಿನ ವರೆಗೆ ಆ ಮನೆತನದ ಎಲ್ಲ ಜನರೂ ಈ ದೇವಿಯ ಪರಮ ಭಕ್ತರು.

ರೇಣಕಿಗೌಡರ ಮಗ ಬಿ.ಎ. ಪಾಸಾಗಿ ಎಂ.ಎ. ಪ್ರವೇಶಕ್ಕೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದ್ದರು. ಅವನಿಗೆ ಪ್ರವೇಶ ದೊರಕುತ್ತದೆ ಎಂದು ದೃಢವಾದ ನಂಬಿಕೆ. ಆದರೆ ಎರಡು ವಾರ ಹೋದ ಮೇಲೆ ‘ಗುಲಬರ್ಗಾ ಕೇಂದ್ರದಲ್ಲಿ ನಿಮಗೆ ಪ್ರವೇಶ ದೊರಕಿದೆ’ ಎಂದು ವಿಶ್ವವಿದ್ಯಾಲಯದಿಂದ ಪತ್ರ ಬಂತು. ರೇಣಕಿ ಗೌಡರು ಎಷ್ಟು ಪ್ರಯತ್ನ ಮಾಡಿದರೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಗಲಿಲ್ಲ. ತಮ್ಮ ಜೀವನದಲ್ಲಿಯ ಸುಖ ದುಃಖಗಳನ್ನು ದೇವಿಯ ಮುಂದೆ ಇಡುತ್ತಿದ್ದ ರೇಣಕಿಗೌಡರು ಈ ವಿಷಯವನ್ನು ಮಾತ್ರ ದೇವಿಯ ಮುಂದೆ ಇಟ್ಟಿರಲಿಲ್ಲ. ಗುಲಬರ್ಗಾಕ್ಕೆ ಹೋಗುವ ಹಿಂದಿನ ದಿವಸ ದೇವಿಯ ಪೂಜೆಯನ್ನು ಮಾಡುವಾಗ ಪಶ್ಚಾತ್ತಾಪ ಪಟ್ಟು “ನಾನು ಸೊಕ್ಕಿನಿಂದ ನಿನ್ನ ಮುಂದೆ ಈ ವಿಷಯವನ್ನು ಇಡಲಿಲ್ಲ” ಎಂದು ಕ್ಷಮೆ ಕೇಳಿದಾಗ ಕಣ್ಣೀರು ಉಕ್ಕಿ ಬಂತು. ಅದೇ ದಿನ ರಾತ್ರಿ ‘ಇದೇ ವಿಶ್ವವಿದ್ಯಾಲಯದಲ್ಲಿ ನಿನಗೆ ಪ್ರವೇಶ ದೊರಕಿದೆ. ನಾಳೆ ಬಂದು ಫೀಯನ್ನು ತುಂಬಬೇಕು’ ಎಂದು ಧಾರವಾಡದಲ್ಲಿದ್ದ ಗೌಡರ ಮಗನಿಗೆ ವಿಶ್ವವಿದ್ಯಾಲಯದವರು ತಿಳಿಸಿದರಂತೆ. ಕೂಡಲೇ ಫೀ ತುಂಬಿ ಮರುದಿವಸ ಊರಿಗೆ ಹೋಗಿ ನಡೆದ ಸಂಗತಿಯನ್ನು ತಮ್ಮ ತಂದೆ-ತಾಯಿಗಳಿಗೆ ಆತ ತಿಳಿಸಿದ. ಎಲ್ಲಮ್ಮನ ಶಕ್ತಿಯನ್ನು ಮನಗಂಡು ಅವರು ಪುಳಕಿತರಾದರು.

‘ಹಲವಾರು ವರ್ಷಗಳಿಂದ ಮಳೆ ಬೆಳೆ ಇದ್ದಿಲ್ಲ. ಈ ವರ್ಷ ಮಳೆ ಬೆಳೆ ಬರುವಂತೆ ಮಾಡಿದರೆ ಒಂದು ಪಡಿ ಜೋಳ ಎಲ್ಲಮ್ಮನಿಗೆ ಕೊಡುವೆ’ ಎಂದು ಒಕ್ಕಲಿಗನೊಬ್ಬ ಬೇಡಿಕೊಂಡಿದ್ದ. ಎಲ್ಲಮ್ಮನ ಕೃಪೆಯಿಂದಾಗಿ ಆ ವರ್ಷ ಮಳೆ ಬೆಳೆ ಚೆನ್ನಾಗಿ ಆಯಿತು. ಆದರೆ ಆ ರೈತ ತನ್ನ ಹರಕೆಯನ್ನು ಮರೆತು ಬಿಟ್ಟ. ಈತನನ್ನು ಪರೀಕ್ಷಿಸಲು ಎಲ್ಲಮ್ಮ ಸಾಮಾನ್ಯ ವೇಷವನ್ನು ಧರಿಸಿಕೊಂಡು ಕಣಕ್ಕೆ ಹೋಗಿ ಭಿಕ್ಷೆಯನ್ನು ಬೇಡಿದಳು.  ಆಕೆಯನ್ನು ಈತ ಹೀಯಾಳಿಸಿ ಹೊಡೆದೋಡಿಸಿದ. ಆಕೆ ಅವನ ಹೊಲಕ್ಕೆ ಹೋಗಿ ಬದನೆಕಾಯಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹರಿದುಕೊಂಡಳು. ಇದನ್ನು ನೋಡಿದ ರೈತ ಈಕೆಯನ್ನು ಬೆನ್ನಟ್ಟಿದ. ಎಲ್ಲಮ್ಮ ಓಡುತ್ತ ಓಡುತ್ತ ಸಮೀಪದಲ್ಲಿದ್ದ ಮಾದರ ಮಾತಂಗಿಯ ಮನೆಯನ್ನು ಹೊಕ್ಕಳು. ತಾನಲ್ಲಿರುವದನ್ನು ಯಾರಿಗೂ ತಿಳಿಸಬಾರದು ಎಂದು ಕೇಳಿಕೊಂಡಳು. ಆ ರೈತ ಬಂದು “ಆ ಕಳ್ಳಿಯನ್ನು ಎಲ್ಲಿ ಮುಚ್ಚಿಕೊಂಡಿರುವಿ>” ಎಂದು ಮಾತಂಗಿಯನ್ನು ಹೊಡೆದ. ಆಗ ಎಲ್ಲಮ್ಮ ಹೊರಗೆ ಬಂದು “ನಿರಪರಾಧಿಗೆ ಹೊಡೆದವರಿಗೆ ರೋಗ ಬರಲಿ; ನನಗೆ ಆಶ್ರಯ ಕೊಟ್ಟರವರಿಗೆ ನನ್ನ ಪೂಜೆಗಿಂತ ಮೊದಲು ಪೂಜೆ ನಡೆಯಲಿ” ಎಂದು ಆಶೀರ್ವಾದ ಮಾಡಿದಳು. ಇದು ಒಂದು ಹೇಳಿಕೆ. ಇಂಥ ಹೇಳಿಕೆ ಮತ್ತು ಭಾವನೆ ಕಾರಣವಾಗಿ ಮನೆ, ಹೊಲ, ಅಂಗಡಿ, ವಾಹನಗಳಿಗೆ ಎಲ್ಲಮ್ಮನ ಹೆಸರನ್ನು ಇಡುವುದು, ಇವಳನ್ನು ಅನೇಕ ಸಂಧರ್ಭಗಳಲ್ಲಿ ಪೂಜಿಸುವುದು ಕಂಡು ಬರುತ್ತದೆ. ಈ ದೇವಿಯ ಹೆಸರು ಜನಪದ ಹಾಡುಗಳಲ್ಲಿ, ಗೀಗೀ ಪದಗಳಲ್ಲಿ, ಮಂಗಳಾರತಿಗಳಲ್ಲಿ ಒಗಟು ಮುಂತಾದವುಗಳಲ್ಲಿಯೂ ವಿಶೇಷ ಕಂಡು ಬರುತ್ತದೆ.

ಎಲ್ಲಮ್ಮನ ಪ್ರಭಾವವನ್ನು ವಿವರಿಸುವಾಗ ಯಾವ ಯಾವ ಕಾರಣ ಮತ್ತು ರೀತಿಗಳಿಂದ ಈ ದೇವಿಗೆ ಜನರು ಭಕ್ತರಾಗುತ್ತಾರೆಂಬುದು ವಿಚಾರ ಮಾಡುವುದು ಅವಶ್ಯಕವಾಗಿದೆ. ಅವುಗಳನ್ನು ಪಟ್ಟಿ ರೂಪದಲ್ಲಿ ಈ ಕೆಳಗೆ ಕೊಡಲಾಗಿದೆ.

೧) ಮಕ್ಕಳು ಆಗದೇ ಇದ್ದವರು ಬೇಡಿಕೊಂಡ ಮೇಲೆ ಮಕ್ಕಳಾದರೆ ಕೂಸನ್ನು ಎಲ್ಲಮ್ಮನಿಗೆ ಬಿಡುವುದು (ವಿಶೇಷವಾಗಿ ಹೆಣ್ಣು ಕೂಸನ್ನು).

೨) ಕೂಸಿಗೆ ಆ ದೇವಿಯ ಹೆಸರನ್ನು ಇಡುವದು.

೩) ಆ ಕೂಸಿನ ಹೆಸರಿನ ಮೇಲೆ ಪ್ರಾಣಿಗಳನ್ನು ಬಿಡುವದು. ಅಂದರೆ ಎಮ್ಮೆಯನ್ನಾಗಲಿ ಆಕಳನ್ನಾಗಲಿ ಅಥವಾ ಕೋಣವನ್ನಾಗಲಿ ಪೂಜಾರಿಗೆ ಕೊಡುವುದು.

೪) ಎಲ್ಲಮ್ಮನನ್ನು ಮನೆಯ ದೇವರನ್ನಾಗಿ ಇಟ್ಟುಕೊಳ್ಳುವುದು.

೫) ಒಂದು ವೇಳೆ ಗಂಡು ಕೂಸಿಗಾಗಲಿ ಹೆಣ್ಣು ಕೂಸಿಗಾಗಲಿ ಜಡೆ ಬಂದಿದ್ದರೆ (ಕೂದಲು ಒಂದಕ್ಕೊಂದು ಅಂಟಿಕೊಂಡು ಗಟ್ಟಿಯಾಗಿದ್ದರೆ) ಎಲ್ಲಮ್ಮನ ಸೇವೆಗಾಗಿ ಕರೆ ಬಂದಿದೆ ಎಂದು ತಿಳಿದು ಆ ದೇವಿಯ ಭಕ್ತರಾಗುವುದು.

೬) ಕುಟುಂಬದಲ್ಲಿ ಗಂಡು ಸಂತತಿ ಇಲ್ಲದಿದ್ದರೆ ಆ ಮಹಿಳೆಯನ್ನು ಎಲ್ಲಮ್ಮನಿಗೆ ಅರ್ಪಿಸುವುದು.

೭) ಪುರುಷತ್ವ ಇಲ್ಲದಿದ್ದರೆ ಈ ದೇವಿಯ ಭಕ್ತರಾಗುವುದು.

೮) ಕೆಲವೊಮ್ಮೆ ದುಡಿಯಲಿಕ್ಕೆ ಅನರ್ಹರು, ಸಮಾಜದಿಂದ ಬಹಿಷ್ಕಾರ ಹೊಂದಿದವರೂ ಈ ದೇವಿಯ ಭಕ್ತರಾಗುತ್ತಾರೆ.

ಎಲ್ಲಮ್ಮನ ವ್ಯಾಪ್ತಿ ಮತ್ತು ಪ್ರಭಾವ ಪ್ರಾದೇಶಿಕವಾಗಿ ಭಿನ್ನತೆಯನ್ನು ಪಡೆಯುವದು ಸಹಜ. ಮುಖ್ಯವಾಗಿ ಆಕೆಯನ್ನು ಆರಾಧಿಸುವಲ್ಲಿ ಪ್ರತಿಷ್ಠಾಪಿಸುವಲ್ಲಿ ಬಲಿ ಕೊಡುವ ಪದ್ಧತಿಯಲ್ಲಿ ಪ್ರಾದೇಶಿಕ ಭಿನ್ನತೆ ಕಂಡು ಬರುತ್ತದೆ. ಹೆಚ್ಚಿನ ಕ್ಷೇತ್ರ ಕಾರ್ಯದಿಂದ ಇನ್ನೂ ಅನೇಕ ಸಂಗತಿಗಳು ಹೊರಬೀಳುವಲ್ಲಿ ಸಂದೇಹವಿಲ್ಲ.

ಗ್ರಂಥ ಋಣ:

೧ ಎನ್‌.ಕೆ. ಕಡೇತೋಟದ: ಎಲ್ಲಮ್ಮನ ಜೋಗತಿಯರು ಹಾಗೂ ದೇವದಾಸಿ ಪದ್ಧತಿ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೮೩.

೨ ವಾಲೀಕಾರ ಚನ್ನಣ್ಣ: ಹೈದರಾಬಾದ ಕರ್ನಾಟಕದ ಗ್ರಾಮದೇವತೆಗಳು: ಅಪ್ರಕಟಿತ ಪಿಎಚ್‌.ಡಿ. ಪ್ರಬಂಧ, :ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

* * *