ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ | ಸೊಲ್ಲಿಗೆ ಶರಣರ ಕಥೆಗಳ ಪೇಳುತ ಅಲ್ಲದ ನುಡಿಯನ್ನು ನುಡಿಯುವಿರಲ್ಲ || ಅ || ಕಾವಿಯನುಟ್ಟು ತಿರಗುವಿರಲ್ಲ ಕಾಮವ ಬಿಡಲಿಲ್ಲ | ನೇಮ ನಿಷ್ಠೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ | ತಾವೊಂದರಿಯದೆ ಪರರನು ತಿಳಿಯದೆ ಶ್ವಾನನ ಕುಳಿಯಲಿ ಬೀಳುವಿರಲ್ಲ || ೧ || ಗುರುಗಳ ಸೇವೆ ಮಾಡಿದಿರಲ್ಲ ಗುರುತಾಗಲಿಲ್ಲ | ಅರಿವೊಂದರಿಯದೆ ಆಗಮ ತಿಳಿಯದೆ ನರಕ ಕೂಪದಲಿ ಬೀಳುವಿರಲ್ಲ || ೨ || ಬ್ರಹ್ಮಜ್ಞಾನಿಗಳು ಎನಿಸುವಿರಲ್ಲ ಹಮ್ಮು ಬಿಡಲಿಲ್ಲ | ಸುಮ್ಮನೆ ಯಾಗವ ಮಾಡುವಿರಲ್ಲ ಸುಳ್ಳನು ಬಿಡಲಿಲ್ಲ | ಗಮ್ಮನೆ ಪುರಂದರ ವಿಠಲನ ಪಾದಕೆ ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ || ೩ ||