ಘಟನೆ ೧ – ಸೆಪ್ಟೆಂಬರ್ ತಿಂಗಳು ೨೦೦೦ನೇ ಇಸವಿ.  ಗಂಗಾನದಿಯಲ್ಲಿ ಪ್ರವಾಹ.  ೮-೧೦ ದಿನಗಳ ಪ್ರವಾಹ ಗಂಗಾತೀರದ ಜನಜೀವನವನ್ನೇ ಅಸ್ತವ್ಯಸ್ತವಾಗಿಸಿತ್ತು.  ೧೭ಜನರ ಸಾವು. ಲಕ್ಷಾಂತರ ರೂಪಾಯಿಗಳ ಆಸ್ತಿ-ಪಾಸ್ತಿ ನಾಶ.  ಚಂಡಮಾರುತ, ಮಳೆ ಇರದಿದ್ದರೂ ಪ್ರವಾಹ ಬಂದಿದ್ದು ಹಿಮ ಕರಗುವಿಕೆಯಿಂದ ಎಂದು ನವಭಾರತ್ ಟೈಮ್ಸ್ ಊಹಿಸಿತ್ತು.

ಘಟನೆ ೨ – ತೆಹ್ರಿ ಹಾಗೂ ಮನೇರಿಬಾಲಿ-೧ ಅಣೆಕಟ್ಟುಗಳು ಹೂಳು ತುಂಬಿವೆ.  ನೀರ್ಗಲ್ಲ ನದಿಗಳಿಂದ ಕಲ್ಲುಗಳು ಬಂದಿದ್ದು ಟರ್ಬೈನ್‌ಗಳ ಬ್ಲೇಡ್ ಪದೇ ಪದೇ ತುಂಡಾಗುತ್ತಿದೆ.  ನೀರು ಹೆಚ್ಚು ಹೆಚ್ಚು ಭೂಮಿಯನ್ನಾವರಿಸಿ ಜವಳು ಪ್ರದೇಶ ಹೆಚ್ಚಾಗಿ ಕೃಷಿ ಭೂಮಿ ಹಾಳಾಗುತ್ತಿದೆ.  ಗಂಗಾನದಿ ಜಲ ಮರುಭೂಮಿಯಾಗುತ್ತಿದೆ ಎಂದು ಕೋಲ್ಕತ್ತಾ ಪತ್ರಿಕೆಗಳ ವರದಿ.

ಏನಿದು ನೀರ್ಗಲ್ಲ ನದಿಗಳು?

ಹಿಮಾಲಯದ ಶ್ರೇಣಿಗಳಲ್ಲಿ ಮಂಜು ಶೀತಗೊಂಡು ಮಂಜುಗಡ್ಡೆಯಾಗುತ್ತಿರುತ್ತದೆ.  ನಿರಂತರ ಶೇಖರಣೆಯಿಂದ ನೀರ್ಗಲ್ಲುಗಳು ಉಂಟಾಗುತ್ತವೆ.   ಮೈಲುಗಟ್ಟಲೆ ಶೇಖರವಾಗಿ ನೀರ್ಗಲ್ಲ ನದಿಗಳಾಗುತ್ತವೆ.  ಇದು ಶತಮಾನಗಳಿಂದಲೂ ರೂಪುಗೊಳ್ಳುತ್ತಾ ಬಂದ ಕ್ರಿಯೆ.

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಈ ರೀತಿ ೬,೦೦೦ಕ್ಕೂ ಹೆಚ್ಚು ಚಿಕ್ಕ ದೊಡ್ಡ ನೀರ್ಗಲ್ಲ ನದಿಗಳಿವೆ.  ಗಂಗಾ, ಯಮುನಾ, ಬ್ರಹ್ಮಪುತ್ರಾ ನದಿಗಳು ಸದಾ ತುಂಬಿ ಹರಿಯಲು ಗಂಗೋತ್ರಿ, ಯಮುನೋತ್ರಿ ಮುಂತಾದ ನೀರ್ಗಲ್ಲ ನದಿಗಳೇ ಕಾರಣ.

ನೀರ್ಗಲ್ಲ ನದಿಗಳ ಅಧ್ಯಯನ ಮಾಡುತ್ತಿರುವ ಇಂಟರ್‌ನ್ಯಾಶನಲ್ ಕಮಿಷನ್ ಫಾರ್ ಸ್ನೋ ಅಂಡ್ ಐಸ್ ಸಂಸ್ಥೆ ಇಸವಿ ೧೯೯೯ರಲ್ಲಿ ಹಿಮಾಲಯದ ನೀರ್ಗಲ್ಲ ನದಿಗಳು ಅತ್ಯಂತ ವೇಗದಲ್ಲಿ ಕ್ಷೀಣಿಸುತ್ತಿದ್ದು ಇಸವಿ ೨೦೩೫ರಲ್ಲಿ ಕಣ್ಮರೆಯಾಗಬಹುದು ಎಂದಿದ್ದಾರೆ.  ಗಂಗೋತ್ರಿ ಕಳೆದ ೨೦೦ವರ್ಷಗಳಿಂದ ಕ್ಷೀಣಿಸಿದ ಪ್ರಮಾಣದಷ್ಟು ಕಳೆದ ೩೦ವರ್ಷಗಳಲ್ಲಿ ವೇಗವಾಗಿ ಕ್ಷೀಣಿಸಿದೆ ಎಂದಿದ್ದಾರೆ.  ಇಸವಿ ೧೯೭೧ರಿಂದ ಸಂಶೋಧಿಸುತ್ತಿರುವ ಇವರು ಈ ರೀತಿಯ ಕರಗುವಿಕೆಗೆ ಏರುತ್ತಿರುವ ಭೂಗ್ರಹದ ತಾಪಮಾನ ಕಾರಣ ಎನ್ನುತ್ತಾರೆ.

ನೀರ್ಗಲ್ಲುಗಳ ಶೇಖರಣೆಯಿಂದ ತೂಕ ಹೆಚ್ಚುತ್ತದೆ.  ಇವು ಚಲಿಸತೊಡಗುತ್ತವೆ. ಉಷ್ಣಾಂಶ ಬದಲಾವಣೆ ಆಗುತ್ತದೆ.  ಆಗ ನೀರ್ಗಲ್ಲ ನದಿ ಕರಗುತ್ತದೆ ಅಥವಾ ಸೀದಾ ಆವಿಯಾಗುತ್ತದೆ.  ಮತ್ತೆ ಮತ್ತೆ ಶೀತಗೊಂಡು ಮಂಜುಗಡ್ಡೆಯಾಗುತ್ತದೆ.  ಈ ರೀತಿ ಸಮಸ್ಥಿತಿ ಕಾಯ್ದುಕೊಳ್ಳುತ್ತವೆ.  ಈ ಸಮಸ್ಥಿತಿಯ ಹಾನಿಯಿಂದ ಹಿಮಪಾತ, ಹಿಮ ಕರಗುವಿಕೆ ಹೆಚ್ಚುತ್ತದೆ.  ಹೀಗೆ ಕ್ಷೀಣಿಸುವುದು ಹೆಚ್ಚುವುದು ಸಾಮಾನ್ಯ.  ಕ್ರಿ.ಶ.೧೫ನೇ ಶತಮಾನದಿಂದ ಕ್ರಿ.ಶ.೧೯ನೇ ಶತಮಾನದವರೆಗೆ ನೀರ್ಗಲ್ಲುಗಳು ಹೆಚ್ಚುತ್ತಲೇ ಇತ್ತೆಂದು ಊಹಿಸಲಾಗಿದೆ.

ಬೇಸಿಗೆಯಲ್ಲಿ ಕರಗುವಿಕೆ, ಚಳಿಗಾಲದಲ್ಲಿ ಶೇಖರಣೆ ನೀರ್ಗಲ್ಲ ನದಿಗಳಲ್ಲಿ ಸಾಮಾನ್ಯ.  ಇದು ಯುರೋಪ್ ಮತ್ತು ಪಶ್ಚಿಮ ಹಿಮಾಲಯಗಳಲ್ಲಿ ದಾಖಲಾಗಿದೆ.  ಆದರೆ ಭೂಮಿಯ ತಾಪಮಾನದ ಏರಿಕೆ ಇದರ ಮೇಲೆ ಗಾಢ ಪ್ರಭಾವ ಬೀರಿದೆ ಎನ್ನುತ್ತಾರೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪರಿಸರ ಶಾಖೆಯ ಇಕ್ಬಾಲ್ ಹಸನ್.

ನೀರ್ಗಲ್ಲ ನದಿಗಳು ತುಂಬಾ ಸೂಕ್ಷ್ಮ.  ೦.೦೦೧ ಡಿಗ್ರಿ ಸೆಂಟಿಗ್ರೇಡ್ ವ್ಯತ್ಯಾಸಕ್ಕೂ ಪ್ರತಿಕ್ರಿಯಿಸುತ್ತವೆ.  ಇದರ ದಪ್ಪ, ಉದ್ದ, ಸಾಂದ್ರತೆ ಹಾಗೂ ಮೇಲ್ಮೈ ಪ್ರದೇಶಗಳನ್ನು ಮಂಜು ಹಾಗೂ ಮಂಜುಗಡ್ಡೆಗಳ ಸೇರುವಿಕೆ ಮತ್ತು ಕರಗುವಿಕೆ ನಿಯಂತ್ರಿಸುತ್ತಿರುತ್ತದೆ.  ಆದರೆ ತಾಪಮಾನ, ತೇವಾಂಶ ಹೆಪ್ಪುಗಟ್ಟುವಿಕೆ, ಗಾಳಿಯ ಒತ್ತಡ, ಇಳಿಜಾರು ಮತ್ತು ಮೇಲ್ಮೈ ಪ್ರತಿಫಲನಗಳು ಏನೆಲ್ಲಾ ನಿಯಂತ್ರಣಗಳನ್ನು ಏರುಪೇರು ಮಾಡುತ್ತವೆ.  ಹೆಚ್ಚಿನ ನೀರ್ಗಲ್ಲ ನದಿಗಳು ಉಷ್ಣತೆಯನ್ನು ಆಧರಿಸಿವೆ.  ಮಧ್ಯ ಹಾಗೂ ಪೂರ್ವ ಹಿಮಾಲಯದ ನೀರ್ಗಲ್ಲ ನದಿಗಳು ಮುಂಗಾರು ಮಾರುತದ ಚಲನೆಯನ್ನು ಆಧರಿಸಿವೆ.  ಇದರಲ್ಲಿ ಗಂಗೋತ್ರಿಯೂ ಸೇರಿದೆ.

ಭೂಮಿಯ ತಾಪಮಾನ ಕಳೆದ ಶತಮಾನಕ್ಕಿಂತಲೂ ೦.೬ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಿದೆ.  ಇಂಗಾಲದ ಮಾನಾಕ್ಸೈಡ್, ಇಂಗಾಲದ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಮೀಥೇನ್, ಹೈಡ್ರೋಕಾರ್ಬನ್‌ಗಳು ವಾತಾವರಣಕ್ಕೆ ಮಿತಿಮೀರಿ ಸೇರುತ್ತಿವೆ.  ಭೂಗತ ಇಂಧನ ಉರಿಸುವಿಕೆ, ಖನಿಜಗಳ ಧೂಳು, ಓಝೋನ್ ನಾಶ, ಹಸಿರುಮನೆ, ಅನಿಲಗಳ ಹೆಚ್ಚುವಿಕೆ ಹಾಗೂ ಅಂತರ್ಜಲಕ್ಕೆ ಕನ್ನ ಹಾಕಿದ್ದು ಸಹ ತಾಪಮಾನ ಹೆಚ್ಚಲು ಮಾನವನಿಂದಾದ ಕುಕೃತ್ಯ.  ಸೂರ್ಯನ ಶಾಖ  ಹೆಚ್ಚುವಿಕೆ, ವಿಕಿರಣ ಹಾಗೂ ವಿಕಿರಣಶೀಲ ವಸ್ತುಗಳು ಭೂಮಿಯಲ್ಲಿ ಕೃತಕವಾಗಿ ಹೆಚ್ಚಿದ್ದೂ ಸಹ ಪಾರ್ಶ್ವ ಕಾರಣ.

ಮತ್ತೆ ಗಂಗೋತ್ರಿಗೆ ಬರುವ.  ಗಂಗೋತ್ರಿಯೇ ಏಕೆಂದರೆ ಇಡೀ ಪ್ರಪಂಚದಲ್ಲೇ ಅತ್ಯಂತ ಸನಿಹದಿಂದ ಅಧ್ಯಯನ ಮಾಡಬಹುದಾದ ಅತಿದೊಡ್ಡ ನೀರ್ಗಲ್ಲೆಂದರೆ ಇದೊಂದೇ.

ಭಾರತದ ಜಿಯಾಲಾಜಿಕಲ್ ಸರ್ವೆ ಪ್ರಕಾರ ಇಸವಿ ೧೮೪೨ರಿಂದ ೧೯೩೫ರವರೆಗೆ ಗಂಗೋತ್ರಿಯು ೭.೩ಮೀಟರ್ ಪ್ರತಿವರ್ಷಕ್ಕೆ ಕ್ಷೀಣಿಸಿತ್ತು. ಇಸವಿ ೧೯೩೫-೧೯೯೬ರ ಅವಧಿಯಲ್ಲಿ ೧,೧೪೭ ಮೀಟರ್ ಕ್ಷೀಣಿಸಿದೆ.  ಅಂದರೆ ವರ್ಷಕ್ಕೆ ೧೯ಮೀಟರ್ ಹಿನ್ನಡೆ.  ಗರವಾಲ್ ವಿಶ್ವವಿದ್ಯಾಲಯದವರು ಮೇ ೧೯೯೬-೧೯೯೯ರವರೆಗೆ ಅಧ್ಯಯನ ಮಾಡಿದ್ದಾರೆ.  ಈ ೩.೫ವರ್ಷಗಳಲ್ಲಿ ಗಂಗೋತ್ರಿಯ ಮೂತಿಭಾಗವು ೭೬ಮೀಟರ್ ಹಿಂದೆ ಸರಿದಿದೆ.  ಹಾಗೇ ಇಸವಿ ೧೯೭೧-೧೯೯೬ರವರೆಗೆ ಎಲ್.ಎ. ಓವೆನ್ ಹಾಗೂ ಎಂ.ಸಿ. ಶರ್ಮಾರು ಗಂಗೋತ್ರಿಯು ೮೫೦ಮೀಟರ್ ಕ್ಷೀಣಿಸಿದ್ದನ್ನು ದಾಖಲಿಸಿದರು.  ಜಿಪಿಎಸ್‌ನ ಪ್ರಕಾರ ವರ್ಷಕ್ಕೆ ೩೪ಮೀಟರ್ ಹಿನ್ನಡೆ.  ಇದು ಒಟ್ಟಾರೆ ಕಳೆದೆರಡು ಶತಮಾನಗಳಿಗಿಂತ ನಾಲ್ಕು ಪಟ್ಟು ಹಿನ್ನಡೆ ಎಂದು ಕೇವಲ ಮೂರು ದಶಕಗಳಲ್ಲಿ ದಾಖಲೆ ಸಹಿತ ದೃಢಪಟ್ಟಿತು.

ಅಷ್ಟೇ ಅಲ್ಲ, ಈಗ ಗಂಗೋತ್ರಿಯ ಮೂತಿ ಗೋಮುಖ ಪ್ರದೇಶದಲ್ಲಿದೆ.  ಆದರೆ ಅಲ್ಲಿಂದ ಮೂರು ಕಿಲೋಮೀಟರ್‌ವರೆಗೆ ಸಿಕ್ಕ ಹಿಮಕಸ, ವ್ಯರ್ಥಹಿಮ, ಗಡ್ಡೆಗಳು, ಸಣ್ಣ ಗುಂಡಿಗಳು, ಕೊಳೆಗಳು ಇವೆಲ್ಲಾ ಗಂಗೋತ್ರಿಯ ಮೂತಿಯ ಮೊದಲು ಭುಜ್‌ಬಾಸ್‌ನಲ್ಲಿತ್ತು ಎಂದು ದೃಢಪಡಿಸಿವೆ.  ಅಂದರೆ ಒಟ್ಟಾರೆ ಮೂರು ಕಿಲೋಮೀಟರ್ ಹಿನ್ನಡೆ!!

ವರ್ತಮಾನದ ಸ್ಥಿತಿ

ನೀರ್ಗಲ್ಲ ನದಿಗಳ ಪಕ್ಕ ದೊಡ್ಡ ಸರೋವರವಿರುತ್ತದೆ.  ಮಂಜುಗಡ್ಡೆ ಹೆಚ್ಚಾದಂತೆ ನೀರ್ಗಲ್ಲ ನದಿಯ ಮೂತಿಯಿಂದ ದೊಡ್ಡ ದೊಡ್ಡ ನೀರ್ಗಲ್ಲುಗಳು ಕಳಚಿ ಬೀಳುತ್ತಿರುತ್ತವೆ.  ಆದರೆ ಗಂಗೋತ್ರಿಯ ಪಕ್ಕದ ಸರೋವರ ವರ್ಷಾನುವರ್ಷ ದೊಡ್ಡದಾಗುತ್ತಿದೆ.  ಮಂಜುಗಡ್ಡೆಗಳ ಚಲನೆಯಿಂದ ನೀರ್ಗಲ್ಲುಗಳೇ ಸರೋವರಕ್ಕೆ ಕಳಚಿ ಬೀಳುತ್ತವೆ.  ಇಸವಿ ೧೯೯೯ ಮೇ-ಜೂನ್‌ನಲ್ಲಿ ಪ್ರತಿದಿನವೂ ಗಂಗೋತ್ರಿಯ ಮೂತಿಯು ವಿರೂಪ ಹೊಂದುತ್ತಿತ್ತು.  ನೀರ್ಗಲ್ಲುಗಳು ಕಳಚಿ ಬೀಳುತ್ತಿತ್ತು ಎಂದು ಕರೆಂಟ್ ಸೈನ್ಸ್ ಪತ್ರಿಕೆಯು ತಿಳಿಸಿತ್ತು.  ಹೀಗಾಗಿ ಗಂಗೋತ್ರಿಯ ಸಮೀಪ ಹಿಮಪಾತ, ಭೂಕುಸಿತಗಳು ಉಂಟಾಗಿತ್ತು.  ಪರಿಣಾಮ ನದಿಗಳಲ್ಲಿ ಪ್ರವಾಹ, ನದಿಗಳ ಪಾತ್ರ ಬದಲಿಸುವಿಕೆ ನಡೆಯಿತು.

ಗಂಗೋತ್ರಿಯ ನೀರ್ಗಲ್ಲುಗಳ ಕರಗುವಿಕೆಯಿಂದ ಗಂಗಾಪ್ರವಾಹ ಪ್ರತಿವರ್ಷ ಹೆಚ್ಚುತ್ತಿದೆ.  ಇದರೊಂದಿಗೆ ಮಣ್ಣು, ಕಲ್ಲು ಹಾಗೂ ಸಸ್ಯ ಜೀವಿವೈವಿಧ್ಯಗಳೆಲ್ಲಾ ಕೊಚ್ಚಿಹೋಗುತ್ತಿದೆ.  ಅಣೆಕಟ್ಟುಗಳಲ್ಲಿ ಹೂಳು ತುಂಬುತ್ತಿದೆ.  ೨೫೦ವರ್ಷ ಬಾಳಬೇಕಿದ್ದ ಮನೇರಿಬಾಲಿ-೧ ಅಣೆಕಟ್ಟಿನ ಆಯಸ್ಸು ೧೬೦ವರ್ಷಕ್ಕಿಳಿದಿದೆ.  ತೆಹ್ರಿ ಅಣೆಕಟ್ಟಿನದು ೨೦೦ವರ್ಷದಿಂದ ೯೬ವರ್ಷಕ್ಕಿಳಿದಿದೆ.  ಉತ್ತರ ಹಾಗೂ ಪೂರ್ವ ಭಾರತದವರ ಬದುಕು ಇದನ್ನೇ ಅವಲಂಬಿಸಿದೆ.  ಆದರೂ ನೀರ್ಗಲ್ಲ ನದಿಗಳ ಬಗ್ಗೆ, ಅದರ ಅವಲಂಬಿತ ನದಿಗಳ ಬಗ್ಗೆ, ಅಣೆಕಟ್ಟುಗಳ ಬಗ್ಗೆ ಭಾರತ ಸರ್ಕಾರ ಯಾವುದೇ ಪ್ರಾಥಮಿಕ ಅಧ್ಯಯನವನ್ನೂ ನಡೆಸಿಲ್ಲ.  ಸಂಶೋಧನೆ, ಸಂರಕ್ಷಣೆ ಕುರಿತಾಗಿ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ.  ಆದರೆ ಗಂಗೋತ್ರಿಯನ್ನು ತೀರ್ಥಕ್ಷೇತ್ರ-ಪುಣ್ಯಕ್ಷೇತ್ರವಾಗಿಸುವಲ್ಲಿ  ಶ್ರಮಿಸುತ್ತಿದೆ.

ಇದರಿಂದ ಪರಿಸರನಾಶ, ಪರಿಸರ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ.  ಗಂಗೋತ್ರಿ ಇನ್ನು ಕೆಲವೇ ದಿವಸಗಳಲ್ಲಿ ಕಸದ ತೊಟ್ಟಿಯಾಗುತ್ತದೆ.  ವಿಶ್ವದಲ್ಲೇ ಅತ್ಯಂತ ಹತ್ತಿರದಿಂದ ಸುಲಭದಲ್ಲಿ ವೀಕ್ಷಿಸಿ, ಅಧ್ಯಯನ ಮಾಡಬಲ್ಲ ಈ ಅಪೂರ್ವ ನೀರ್ಗಲ್ಲ ನದಿಯನ್ನು ಕೇವಲ ನಿರ್ಲಕ್ಷ್ಯದಿಂದಲೇ ಭಾರತೀಯರು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಇತ್ತೀಚೆಗೆ ಜರ್ಮನ್ ಅಧ್ಯಯನ ತಂಡ ಆತಂಕ ವ್ಯಕ್ತಪಡಿಸಿದೆ.

ಮಹಾನ್ ವಸ್ತುಗಳನ್ನೆಲ್ಲಾ ಕಳೆದುಕೊಳ್ಳುವ ಮಹಾನ್ ಭಾರತದ ಮಹಾನ್ ಪ್ರಜೆಗಳಿಗೆ ಇದೇನು ಹೊಸದಲ್ಲ, ಅದರಲ್ಲೂ ಒಂದು ಸಮಾಧಾನದ ಸುದ್ದಿ ಎಂದರೆ,

ಡಿಆರ್‌ಡಿಓದವರು ಗಂಗೋತ್ರಿಯಲ್ಲೊಂದು ಸ್ವಯಂಚಾಲಿತ ಹವಾಮಾನ ಕೇಂದ್ರ ಸ್ಥಾಪಿಸಿದ್ದಾರೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಭೂವಿಜ್ಞಾನ ವಿಭಾಗದ ಸಹಯೋಗದೊಂದಿಗೆ ಉತ್ತರಾಂಚಲದ ಗರ್‌ವಾಲ್ ವಿಶ್ವವಿದ್ಯಾಲಯದವರು ಸಣ್ಣ ನೀರ್ಗಲ್ಲ ನದಿಗಳ ಬಗ್ಗೆ ಮೊದಲ ಹಂತದ ಅಧ್ಯಯನವನ್ನು ಕೈಗೆತ್ತಿಕೊಂಡಿದ್ದಾರೆ.

ಮರೆತ ವಿಷಯ : ಗಂಗೋತ್ರಿಯ ಅಳಿವಿನಲ್ಲಿ ಕರ್ನಾಟಕದ ಪಾಲೂ ಇದೆ.  ಪ್ರತಿವರ್ಷ ಹಿಮಾಲಯ ಯಾತ್ರೆಗೆ ಕರ್ನಾಟಕದಿಂದ ಎರಡು ಲಕ್ಷ ಜನ ಹೋಗುವರೆಂಬ ಅಂದಾಜಿದೆ.  ಅವರು ಅಲ್ಲಿ ಬಿಟ್ಟು ಬರುವ ಕರಗದ ತ್ಯಾಜ್ಯ ತಲಾ ಅರ್ಧಕಿಲೋಗ್ರಾಂ ಎಂದುಕೊಂಡರೂ ಓದುಗರೇ ಅದರ ಅಗಾಧ ಪ್ರಮಾಣವನ್ನು ಊಹಿಸಬಹುದು.  ನಮ್ಮ ದೇಶದಲ್ಲೂ ಇದುವರೆಗೆ ಕರಗದ-ಕರಗುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಕಟ್ಟುನಿಟ್ಟಿನ ಕಾನೂನು ಇಲ್ಲ.  ಹೀಗಾಗಿ ಜಲಮೂಲಗಳೆಲ್ಲಾ ಕಸರಾಕ್ಷಸನ ಆವಾಸವಾಗಿದೆ.

ನೀರ್ಗಲ್ಲ ನದಿಯ ಕಣಿವೆಗಳು

. ಗಂಗೋತ್ರಿ : ಪ್ರಪಂಚದ ಎರಡನೆಯ ದೊಡ್ಡ ನೀರ್ಗಲ್ಲ ನದಿ. ೩೦ ಕಿಲೋಮೀಟರ್‌ನಷ್ಟು ವಿಶಾಲವಾಗಿದೆ.  ವಿಸ್ತೀರ್ಣ ೧೦೯.೦೩ ಚದರ ಕಿಲೋಮೀಟರ್ ವ್ಯಾಪಿಸಿದೆ. ಇದಕ್ಕೆ ಗೋಮುಖ ಹಾಗೂ ಸತೋಪನ್ ಎನ್ನುವ ಮೂತಿಗಳಿವೆ.  ಗೋಮುಖದಿಂದ ಭಾಗೀರಥಿ ನದಿಯೂ, ಸತೋಪನ್‌ನಿಂದ ಅಲಕನಂದೆ ನದಿಯೂ ಹುಟ್ಟುತ್ತವೆ.  ಮುಂದೆ ಎರಡೂ ಸೇರಿ ಗಂಗಾನದಿಯಾಗುತ್ತದೆ. ಗೋಮುಖ ಸಮುದ್ರಮಟ್ಟದಿಂದ ೪,೧೨೦ಮೀಟರ್‌ನಿಂದ ೭,೦೦೦ಮೀಟರ್ ಎತ್ತರದಲ್ಲಿದೆ.

. ರಕ್ತವರ್ಣ: ೧೫.೯ ಕಿಲೋಮೀಟರ್ ಉದ್ದವಾಗಿದೆ.  ೪೫.೩೪ ಚದರಕಿಲೋಮೀಟರ್ ವಿಸ್ತೀರ್ಣವಾಗಿದೆ.

. ಚತುರಂಗಿ : ೨೨.೪೫ ಕಿಲೋಮೀಟರ್ ಉದ್ದವಾಗಿದೆ. ೭೨.೯೧ ಚದರಕಿಲೋಮೀಟರ್ ವಿಸ್ತೀರ್ಣವಾಗಿದೆ.

. ಕೀರ್ತಿ: ೧೧.೦೫ ಕಿಲೋಮೀಟರ್ ಉದ್ದವಾಗಿದೆ.  ೩೧.೨೮ ಚದರಕಿಲೋಮೀಟರ್ ವಿಸ್ತೀರ್ಣವಾಗಿದೆ.ನೀರ್ಗಲ್ಲ ನದಿಯ ಕಣಿವೆ ಒಟ್ಟಾರೆ ೨೫೮.೫೬ ಚದರಕಿಲೋಮೀಟರ್ ವ್ಯಾಪಿಸಿದೆ ಮತ್ತು ೨೫ ಕ್ಯುಸೆಕ್ಸ್‌ಕಿಲೋಮೀಟರ್ ಮಂಜುಗಡ್ಡೆ ಇಲ್ಲಿರಬಹುದೆಂದು ಅಂದಾಜು.

ನೀರ್ಗಲ್ಲ ನದಿಗಳ ಕ್ಷೀಣಿಸುವಿಕೆಯನ್ನು ಅಳೆಯುವ ಸಾಧನ

ಹಿಮಕಸಗಳ ಅಧ್ಯಯನವೇ ನೀರ್ಗಲ್ಲ ನದಿಗಳ ಕ್ಷೀಣಿಸುವಿಕೆಯನ್ನು ಅಳೆಯುವ ವಿಧಾನ.  ನೀರ್ಗಲ್ಲ ನದಿ ಚಲಿಸುತ್ತಾ-ಕರಗುತ್ತಾ ಹಿಮಕಸಗಳನ್ನು, ಕಪ್ಪು ಕಲ್ಲಿನ ಚೂರುಗಳ ಗುಪ್ಪೆಗಳನ್ನು ಅಲ್ಲಿಯೇ ಬಿಡುತ್ತದೆ (ಗೋಮುಖದ ದಾರಿಯಲ್ಲಿ ಇವನ್ನು ನೋಡಬಹುದು).  ಇವುಗಳ ಆಕಾರದ ಮೂಲಕ ಹಿಂದೆ ನೀರ್ಗಲ್ಲುಗಳು ಹೇಗಿತ್ತೆಂದು ಹೇಳಬಹುದು.  ಮುಖ್ಯವಾಗಿ ನೀರ್ಗಲ್ಲ ನದಿಗಳ ಮೂತಿ, ಪ್ರಾರಂಭಿಕ ಹಂತ ಹಾಗೂ ಕ್ಷೀಣಿಸುವಿಕೆಯನ್ನು ಅಳೆಯುತ್ತಾರೆ.  ನೀರ್ಗಲ್ಲ ಮೂತಿಗಳೇ ಕರಗುವಿಕೆ ಹಾಗೂ ಆವಿಯಾಗುವಿಕೆಯ ಮೂಲ.  ಹಿಮಾಲಯದ ಹಿಮಗುಹೆಗಳ ರಚನೆಗೂ ಈ ಮೂತಿಯೇ ಕಾರಣ.  ಇಲ್ಲಿಂದಲೇ ನದಿಗಳ ಉಗಮ.