ಗರಿಗರಿ ಬಟ್ಟೆಯ ಆಡಂಬರದ ನಡೆಯುವರು,
ತೊಳಗುವ ನುಡಿಗಳನೆಸೆವ ಸೊಗಸುಗಾರರು,
ದಡ್ಡಶಿಷ್ಯರಿಗೆ ಗಾರೆ ಅರೆಯುವ ಕೆಲಸ ಹಚ್ಚಿ
ಜಾಣರಿಗೆ ಕನ್ನಡ ಗುಡಿಕಟ್ಟುವ ಜವಾಬ್ದಾರಿಯ ನೀಡಿ,
ಖುದ್ದಾಗಿ ಕೋಲು ಮೇಸ್ತ್ರಿಯ ಕೆಲಸ
ಮಾಡುತ್ತಾ ನಿಂತವರು.
ಮುಂದೆ ಯಾರೇ ಅಂದರೆ-ದೇವರೂ,
ಅಥವಾ ದೇಶದ ಅಧ್ಯಕ್ಷ ಬಂದರೂ
ಎದುರು ಬೆಂಚಿನಲಿ ಕೂರಿಸಿ ಕನ್ನಡ ಕೊರೆವವರು!

ಮಾತಾಡಿದರೆ ಇವರು ಗರಿಗಟ್ಟಿ ಹಾರುತ್ತಾವೆ
ಹೆಸರು ಗೊತ್ತಿಲ್ಲದ ಎಷ್ಟೋ ವಲಸಿಗ ಹಕ್ಕಿ.
ಇವರು ಯಾರು ಹೇಳಿ?
ಉಡುಪಿಯ ಉಪಾಧ್ಯಾಯ-
ಆಚಾರ್ಯ ಯು.ಆರ್. ಅನಂತಮೂರ್ತಿ.

ಅವರಿಗೆ ಗೌರವಪೂರ್ವಕ ಅರ್ಪಣೆ