‘ಅಕ್ಕಕ್ಕು ಹಾಡುಗಳೇ’ ಬಂದ ಸುಮಾರು ಹದಿನೈದು ವರ್ಷಗಳ ತರುವಾಯ ಈ ಸಂಕಲನ ಬರುತ್ತಿದೆ. ಈ ಮಧ್ಯೆ ಕವಿತೆಯಲ್ಲಿಯೇ ಆತ್ಮಚರಿತ್ರೆ ಬರೆಯಬೇಕೆಂದು ಕೆಲವು ಪದ್ಯಗಳನ್ನು ಬರೆದೆ, ಆದರೆ ಬರೆಯುವ ಪ್ರತಿಯೊಂದು ಪದ್ಯವೂ ಆತ್ಮಚರಿತ್ರೆಯೇ ಆಗಿರುವುದರಿಂದ ಪ್ರತ್ಯೇಕವಾಗಿ ಆತ್ಮಚರಿತ್ರೆಯೊಂದನ್ನು ಬರೆಯುವ ಅಗತ್ಯ ಕಾಣಲಿಲ್ಲ.

ಕವಿತೆಗಳನ್ನು ಕಾಲಾನುಕ್ರಮದಲ್ಲಿ ಅನುಕ್ರಮಿಸಬೇಕೆಂಬ ಆಲೋಚನೆಯೂ ಸರಿ ಕಾಣಲಿಲ್ಲ. ಪಶ್ಚಿಮದ ಇತಿಹಾಸದ ಕಲ್ಪನೆಯನ್ನೇ ಒಪ್ಪದವರಿಗೆ ಕಾಲಾನುಕ್ರಮ ಎನ್ನುವುದು ಕೃತಕವೆನ್ನಿಸಿ ಅದನ್ನೂ ಬಿಟ್ಟೆ. ಇಲ್ಲಿನ ಕವನಗಳನ್ನು ಘೋಡಗೇರಿ, ಹಂಪಿ, ಅಮೆರಿಕ ಹಾಗೂ ಆಕಾಶ-ಬಯಲು ಎಂದು ವಿಂಗಡಿಸಿ ಕೊಟ್ಟಿದ್ದೇನೆ.

*

ನಾನು ಹುಟ್ಟಿ ಬೆಳೆದ ಊರು ಘೋಡಗೇರಿ. ನಮ್ಮೂರ ಬಳಿಯ ಪಾಶ್ಚಾಪುರದಲ್ಲಿದ್ದ ಒಬ್ಬ ಮುಸ್ಲಿಂ ದೊರೆ ತನ್ನ ಕುದುರೆ ಕಟ್ಟುವುದಕ್ಕಾಗಿ ಕಟ್ಟಿಸಿದ ಕೇರಿ ಘೋಡಗೇರಿ.

ಈಗಿನ ಘೋಡಗೇರಿಯ ಪಶ್ಚಿಮದಲ್ಲಿ ಸುಮರು ಒಂದು ಮೈಲು ದೂರದಲ್ಲಿ ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿಗಳು ಕೂಡುವ ಕೂಡಲ ಸಂಗಮ ಇದೆ. ಅಲ್ಲಿ ಒಂದು ಊರಿತ್ತು. ಅದೇ ಶಿವಾಪುರ. ನಮ್ಮ ಪೂರ್ವಜರಿದ್ದದ್ದು  ಈ ಊರಿನಲ್ಲಿ. ಆದರೆ ಮೇಲಿಂದ ಮೇಲೆ ಬರುವ ಪ್ರವಾಹದಿಂದಾಗಿ ಆ ಶಿವಾಪುರವನ್ನು ಬಿಟ್ಟು ಈಗಿನ ಘೋಡಗೇರಿಗೆ ಬಂದು ನೆಲೆ ನಿಂತರು. ಕುರುಬರ ಹಾಡಿನಲ್ಲಿ ಈ ಸಂಗತಿ ಇದೆ.

ಆದರೆ ನಾನು ಕಾವ್ಯದಲ್ಲಿ ಉಪಯೋಗಿಸುವುದು ಸಾಂಕೇತಿಕ ಶಿವಾಪುರವನ್ನು. ಅಂದಿನ ಕೂಡಲ ಸಂಗಮದ ಶಿವಾಪುರ  ಈಗಿನ ಘೋಡಗೇರಿ , ಹಾಗೂ ನಾವು ಕಟ್ಟಬೇಕೆಂದ ಕನಸಿನ ಶಿವಾಪುರ-ಈ ಮೂರೂ ಸೇರಿದ ಸಾಂಕೇತಿಕ ಶಿವಾಪುರದ ಶೋಧನೆ ನನ್ನ ಕವಿತೆ.

ಮಿತ್ರರಾದ ಮಾಧವ ಕುಲಕರ್ಣಿ ಅವರ ಒತ್ತಾಸೆ ಇಲ್ಲದಿದ್ದರೆ ಈ ಸಂಕಲನವೂ ಇಷ್ಟು ಬೇಗ ಬರುತ್ತಿರಲಿಲ್ಲ. ಅವರಿಗೂ ಸಕಾಲಕ್ಕೆ ಉತ್ಸಾಹದಿಂದ ಪ್ರಕಟಿಸಲು ಮುಂದೆ ಬಂದ ಮಿತ್ರ ರವಿಕುಮಾರ್ ಅವರಿಗೂ ವಂದನೆಗಳು. ಮುನ್ನುಡಿ ಬರೆದ ಅನಂತಮೂರ್ತಿ ಅವರಿಗೆ,  ಈ ಪದ್ಯಗಳನ್ನು ಆಗಾಗ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ ಸಂಪಾದಕರಿಗೆ, ಮುಖ್ಯವಾಗಿ ಸೃಜನಶೀಲ ಲೇಖಕರೂ ಆದ ಲಕ್ಷ್ಮಣ ಕೊಡಸೆ, ಪದ್ಮರಾಜ ದಂಡಾವತಿ, ವಿವೇಕ ಶಾನುಭಾಗ ಹಾಗೂ ಶ್ರೀಮತಿ ಪೂರ್ಣಿಮಾ ಅವರಿಗೆ ವಂದನೆಗಳು.

ಚಂದ್ರಶೇಖರ ಕಂಬಾರ
ಬೆಂಗಳೂರು
ಡಿಸೆಂಬರ್ ೨೦೦೯